ಆಶ್ರಯದ ಗೂಡೇ ಇಲ್ಲವಾದಲ್ಲಿ, ಆಸರೆಯ ಹುಡುಕುವುದೆಲ್ಲಿ?

 

ರಾಘವೇಂದ್ರ ರಾವ್ .ಕೆ 

ಮನುಷ್ಯನು ತಾನು ಅಲೆಮಾರಿ ಜೀವನದಿಂದ ಒಂದೆಡೆ ನೆಲೆನಿಂತು ನಾಗರಿಕನೆನಿಸಿ, ಜೀವನ ಸಾಗಿಸುತ್ತಾ, ನಾಗರೀಕತೆಯ ಪರ್ವ ತಲುಪುತಿದ್ದಂತೆಯೇ, ತನಗೆ ಆಶ್ರಯ ನೀಡುವ ಪ್ರಕೃತಿಯ ಮಡಿಲನ್ನು ಬರಿದಾಗಿಸುತ್ತಾ ಬಂದ. ತನ್ನ ಋತುಚಕ್ರ ತಿರುಗಿದಂತೆ ಗ್ರೀಷ್ಮ, ವರ್ಷ, ಶಿಶಿರ, ಶರದ್ ಕಾಲಗಳನು ಮುಗಿಸಿ ಸೊಬಗನ್ನು ಬೀರುತ್ತಿದ್ದ ನಿಸರ್ಗವು, ಇಂದು ವ್ಯಾಧಿಗೊಳಪಟ್ಟಂತೆ ಸೊರಗುತ್ತಿದೆ. ನಾಗರಿಕ ಮನುಜನ ಲಾಲಸೆಗೆ ಒಳಗಾಗಿ ಮರುಗುತ್ತಿದೆ.  ಆಗಾಗ್ಗೆ ಪ್ರಕೃತಿಯು ಕೊಂಚ ಮುನಿಸಿಕೊಂಡು ಎಚ್ಚರವಾ ನೀಡಿದರೂ, ಪ್ರಕೃತಿಗೆ ಅಸಹನೀಯವಾಗುವ ಮನುಷ್ಯನ ಚಟುವಟಿಕೆಗಳಂತೂ ನಿರಂತರವಾಗಿ ಸಾಗುತ್ತಿದೆ.

ಹವಾಗುಣದಲ್ಲಿನ ಬದಲಾವಣೆಗಳು, ಅತಿಯಾದ ಉಷ್ಣಾಂಶ, ಅತಿವೃಷ್ಟಿ, ಜಾಗತಿಕ ತಾಪಮಾನದಲ್ಲಿನ ಏರಿಕೆ, ಜಲದ ಕ್ಷಾಮ ಇತ್ಯಾದಿಗಳಾದಿಯಾಗಿ ನಿಸರ್ಗದಲ್ಲಿನ ವ್ಯತ್ಯಯಗಳು, ಮಾನವನ ಪರಿಸರ ವಿರೋಧಿ ನಿಲುವಿನ ಚಟುವಟಿಕೆಗಳಿಂದುಂಟಾಗಿದೆ. ಅರಣ್ಯ ಸಂಪತ್ತಿನ ನಾಶ, ಮರಗಳನ್ನು ಕಡಿಯುವುದು, ನದಿ ಪಾತ್ರಗಳಿಗೆ ಕಲುಷಿತಗೊಂಡ ನೀರಿನ ಬೆರಕೆ, ಕೆರೆ-ಕಟ್ಟೆಗಳ ಮುಚ್ಚುವಿಕೆ, ಅಭಿವೃದ್ಧಿ ನೆವದಲ್ಲಿನ ಬರೀ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ, ಅತಿಯಾದ ವಾಹನ ಸಂಚಾರದಿಂದಾಗುವ ವಾಯುಮಲಿನತೆಗಳು ಪರಿಸರದ ಸುಸ್ಥಿತಿಗೆ ಕೊಡಲಿ ಪೆಟ್ಟಾಂತಾಗಿವೆ.

ಗಣಿಗಾರಿಕೆಯ ಹೆಸರಿನಲಿ ಬೆಟ್ಟ-ಬಂಡೆಗಳ ನೆಲೆಸಮಗೊಳಿಸಿ, ಸುಂದರ ಪರಿಸರವನ್ನು ವಿರೂಪಗೊಳಿಸುತ್ತಿದ್ದೇವೆ. ಜಲಮೂಲಗಳನ್ನು ಇಲ್ಲವಾಗಿಸಿ ಒಂದು ರೀತಿಯ ಕೃತಕ ಕ್ಷಾಮವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ವಾತಾವರಣದಲ್ಲಿ ಇಂಗಾಲದ ಪ್ರಮಾಣವ ಹೆಚ್ಚಿಸಿ, ಉಸಿರಿನ ಮೂಲವಾದ ಆಮ್ಲಜನಕದ ಪ್ರಮಾಣವನ್ನು ದಿನೇದಿನೇ ಇಳಿಸುತ್ತಿದ್ದೇವೆ.

ಒಮ್ಮೆ ಯೋಚಿಸಿ ನೋಡಿ, ಪ್ರಕೃತಿಯು ಮನುಜ ಸಂತತಿಯಿಲ್ಲದಿದ್ದರೂ ಇರುತ್ತಾಳೆ. ಪ್ರಕೃತಿಯು ತನ್ನಷ್ಟಕ್ಕೆ ತಾನು ಬಲು ಸುಂದರ. ಇಳೆಯನ್ನು ಸುಂದರಗೊಳಿಸುವ ಕಲೆ ಅವಳಿಗಿದೆ. ಎಲ್ಲವನ್ನು ನಿಭಾಯಿಸುವ ಶಕ್ತಿಯಿದೆ. ಆದರೆ ಪ್ರಕೃತಿಯೊಡಲಿನಲಿ ಆಶ್ರಯ ಪಡೆದ ಮನುಷ್ಯನ ಕಾರ್ಯಗಳು ಮಾತ್ರ ಕ್ರೌರ್ಯವಾಗಿ ಮಾರ್ಪಾಟಾಗಿದ್ದು, ಪರಿಸರದ ಸ್ವಾಸ್ಥ್ಯತೆಗೆ ಮಾರಕವಾಗಿ ಪರಿಣಮಿಸಿದೆ.

ಅನಾರೋಗ್ಯಗೊಂಡ ದೇಹಕ್ಕೆ, ಹೇಗೆ ಔಷಧೋಪಚಾರಗಳಿಂದ ಗಮನಿಸುತ್ತೇವೋ, ಅಂತೆಯೇ ಪ್ರಕೃತಿಯ ಈ ವ್ಯತ್ಯಯಗಳಿಗೆ ಕಾರಣರಾದ ನಾವುಗಳು, ಆಕೆಯ ಆರೋಗ್ಯವನ್ನು ಸುಧಾರಿಸಬೇಕಿದೆ. ಆಕೆಯನ್ನು ಸ್ವಾಸ್ಥ್ಯಗೊಳಿಸಬೇಕಿದೆ. ಆಶ್ರಯದ ಗೂಡೇ ಇಲ್ಲವಾದಲ್ಲಿ, ಆಸರೆಯ ಹುಡುಕುವುದೆಲ್ಲಿ?  ಇದಾ ಗಂಭೀರವಾಗಿ ಮನಗಂಡು, ಪ್ರಕೃತಿಯು ಮುನಿದು ಕೆರಳುವ ಮುನ್ನ ಎಚ್ಚೆತ್ತು, ಪರಿಸರದ ಕಾಳಜಿಯನ್ನು ವಹಿಸಬೇಕಾಗಿದೆ. ಪರಿಸರದ ಸಂರಕ್ಷಣೆಗೆ ಮುಂದಾಗುವುದು ಅತ್ಯಾವಶ್ಯಕವಾಗಿದೆ. ನಮ್ಮ ತಾಯಿಯನ್ನು ನಾವು ಮುತುವರ್ಜಿಯಿಂದ ನೋಡಿಕೊಳ್ಳುವಂತೆ, ಪ್ರಕೃತಿ ಮಾತೆಯನ್ನು ಕಾಳಜಿ-ಆರೈಕೆ ಮಾಡಬೇಕಾಗಿದೆ.

ತಲೆ-ತಲೆಮಾರುಗಳು ಕುಳಿತು ಉಣಬೇಕೆಂದು ಕೂಡಿಡುವ ಸಂಪತ್ತಿನಂತೆಯೇ, ನಮ್ಮ ಪ್ರಕೃತಿಯ ಸಂಪತ್ತನ್ನು ಮುಂದಿನ ತಲೆಮಾರುಗಳಿಗೆ ನೀಡಬೇಕಾದ ಕರ್ತವ್ಯ ನಮ್ಮೆಲ್ಲರದೂ. ಶ್ರೀಮಂತ ಸಂಸ್ಕೃತಿಯ ಜೊತೆಗೆ, ಸುಂದರ ಪರಿಸರವನ್ನೂ ನೀಡುವ ಮೂಲಕ ಉತ್ತಮವಾದ ಬದುಕನ್ನು ನೀಡುವ ಜವಾಬ್ದಾರಿಯುತ ಹೊಣೆಗಾರಿಕೆ ನಮ್ಮದು. ಪರಿಸರವನ್ನು ಕಲುಷಿತಗೊಳಿಸದೆ ಉತ್ತಮ ರೀತಿಯಲ್ಲಿ ಉಳಿಸಿ-ಬೆಳೆಸಿಕೊಂಡು ಹೋಗಬೇಕಾದ ಮನಸ್ಥಿತಿ ಎಲ್ಲರಲ್ಲಿಯೂ ಮೂಡಬೇಕು.

ಇಡೀ ಸಮಾಜವೂ ಪ್ರಕೃತಿಯ ಉಳಿವಿಗೆ ಏಕರೀತಿಯ ಭಾವ ತಳೆದಾಗ, ಪರಿಸರದ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯ. ಪ್ರಕೃತಿಯು ಸ್ವಚ್ಛಂದವಾಗಿ, ಸುಸ್ಥಿತಿಯಲ್ಲಿರೆ, ಅದರ ಆಶ್ರಯದಲ್ಲಿರುವ ನಾವೂ ಸಹ ಸುಭಿಕ್ಷವಾಗಿ, ಸುಖವಾಗಿರಲು ಸಾಧ್ಯವು. ಈ ನಿಟ್ಟಿನಲ್ಲಿ ನಾವೆಲ್ಲರೂ  ಪ್ರಕೃತಿಯ ಸ್ವಾಸ್ಥತೆಗೆ, ಸುಸ್ಥಿರತೆಗೆ  ಪೂರಕವಾದಂತಹ, ಪರಿಸರದೊಡಲ ಕಲುಷಿತಗೊಳಿಸದ, ಹಸುರ ರಾಶಿ ಹೆಚ್ಚಿಸುವ, ಜಲಮೂಲಗಳನ್ನು ಸಂರಕ್ಷಿಸುವ, ಪ್ರಕೃತಿಯ ಸಹಜತೆಯ-ಸುಂದರತೆಯ ಕಾಪಾಡುವ ಕಾರ್ಯಗಳನು ಮಾಡುವ ಸಂಕಲ್ಪವ ಕೈಗೊಳ್ಳೋಣ, ಪ್ರಕೃತಿಯ ನೆಳಲಿನಲಿ ನಮ್ಮಯ ಬದುಕಾ ಕಟ್ಟಿಕೊಳ್ಳೋಣ.

 

 

 

‍ಲೇಖಕರು avadhi

July 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: