‘ಫಾಲೋವಿಂಗ್ ಫಿಶ್’ ಕೃತಿಯನ್ನು ಫಾಲೋ ಮಾಡಿದಾಗ

ಸುಮಾವೀಣಾ

ವೃತ್ತಿ: ಉಪನ್ಯಾಸಕಿ, ಪ್ರವೃತ್ತಿ: ಲೇಖಕಿ

ಸುಧಾವಾರಪತ್ರಿಕೆ, ಉತ್ಥಾನ,ವಿಜಯವಾಣಿ,ವಿಶ್ವವಾಣಿ ಪತ್ರಿಕೆಗಳಲ್ಲಿ, ಹಾಗು ಹಾಸನ ಜಿಲ್ಲೆಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವಧಿ, ನಸುಕು, ಕನ್ನಡ ಪ್ರೆಸ್, ಸಂಗಾತಿ, ನ್ಯೂಸಿಕ್ಸ್ ಆನ್ಲೈನ್ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ, ‘ನಲಿವಿನ ನಾಲಗೆ’   2019ರಲ್ಲಿ  ಪ್ರಬಂಧ ಸಂಕಲನ ಬಿಡುಗಡೆಯಾಗಿದೆ. ISBN,ISSN  ನಂಬರ್ಗಳಲ್ಲಿ  ಹತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳು  ಪ್ರಕಟವಾಗಿವೆ. ರಾಜ್ಯ ಮಟ್ಟದಲ್ಲಿ ಆಕಾಶವಾಣಿ ಕಾರ್ಯಕ್ರಮಗಳು ಪ್ರಸಾರವಾಗಿವೆ. ನಸುಕು ಪತ್ರಿಕೆಯಲ್ಲಿ ಸುರಭಿ ಎಂಬ  ಅಂಕಣವನ್ನೂ ಬರೆಯುತ್ತಿದ್ದಾರೆ

ಸಮಂತ್ ಸುಬ್ರಮಣಿಯನ್ ರವರ ‘Following  Fish’ ಕೃತಿ ಸಹನಾ ಹೆಗಡೆಯವರಿಂದ ಕನ್ನಡಕ್ಕೆ ಅದೇ ಹೆಸರಿನಲ್ಲಿ ಭಾರತದ ಕರಾವಳಿಗುಂಟ ಮೀನಿನ ಸಂಸ್ಕೃತಿಯ ಹುಡುಕಾಟವಾಗಿ ಅನುವಾದಗೊಂಡಿದೆ. ಪತ್ರಕರ್ತನೊಬ್ಬನ ಅನುಭವ ಕಥನವನ್ನೊಳಗೊಂಡ ಪ್ರವಾಸ ಸಾಹಿತ್ಯದ ಈ ಕೃತಿ ಬಿ.ಆರ್. ಶಂಕರ್ ಅನುವಾದ ಸಾಹಿತ್ಯ ಮಾಲೆಯ ಬಿಡಿ ಕೃತಿಯಾಗಿದೆ.

ಸೌಮ್ಯ ಕಲ್ಯಾಣ್ಕರ್ ಅವರಿಂದ ವಿನ್ಯಾಸಗೊಂಡಿರುವ, ಕಿರಣ್ ಅಕ್ಕಿಯವರಿಂದ ರಚಿಸಲ್ಪಟ್ಟ ಆಕರ್ಷಕ  ಮುಖಪಟವನ್ನೊಳಗೊಂಡ ಈ ಕೃತಿಯನ್ನು ಪ್ರಕಟಿಸಿ ಓದಗರಿಗೆ ತಲುಪಿಸಿರುವವರು ‘ಛಂದ ಪುಸ್ತಕ’ದವರು. ಕೃತಿಯ ಬೆಲೆ 220 ರೂಗಳು. ಸದ್ಯ ನವಕರ್ನಾಟಕ ಟಾಪ್ ಟೆನ್ ಪಟ್ಟಿಯಲ್ಲಿರುವ ಪುಸ್ತಕ ಇದಾಗಿದೆ.

‘ಕರೆ’ ಎಂದರೆ ‘ಸಮುದ್ರದ ಕಿನಾರೆ’, ‘ಆವಳಿ ಎಂದರೆ  ‘ಸಮೂಹ’ ಬಂಗಾಳದಿಂದ ಗುಜರಾತ್ನವರೆಗೆ ಬಲದಿಂದ ಎಡಕ್ಕೆ ಇಂಗ್ಲಿಷಿನ ‘V’ ಚಿತ್ರ ಬರೆದಂತೆ ಭಾರತೀಯ ಕರಾವಳಿ ತೀರ ರಾಜ್ಯಗಳ ಪ್ರವಾಸದ ಅನುಭವ ಇಲ್ಲಿದೆ. ಭಾರತ ಪರಕೀಯರ ಸಂಪರ್ಕಕ್ಕೆ ಬಂದು ವ್ಯಾಪಾರ ವಹಿವಾಟಿಗೆ ತನ್ನನ್ನು ತೆರೆದುಕೊಂಡಿತು ಎಂದಾಗ ಅಲ್ಲಿ ಮೊದಲು ಪರಕೀಯರ ಸಂಪರ್ಕಕ್ಕೆ ಬಂದವರು ಮೀನುಗಾರರು.

ಪರಕೀಯರ ಪ್ರಭಾವ ಅವರುಗಳ ಮೇಲೆ ಆಗಿದ್ದು. ಮೀನುಗಾರರ ವೃತ್ತಿ, ಬದುಕಿನೊಂದಿಗೆ ಕರಾವಳಿ ತೀರದ ಆಹಾರ ವಿವಿಧ್ಯದಲ್ಲಿ  ಪ್ರಮುಖ ಸ್ಥಾನ ಹೊಂದಿರುವ ‘ಮೀನು’ ಈ ಕೃತಿಯ ವಸ್ತುವಾಗಿದೆ. ಕೃತಿಯಲ್ಲಿ ಉಪಸಂಹಾರವನ್ನೂ ಒಳಗೊಂಡಂತೆ ಒಂಬತ್ತು ಅಧ್ಯಾಯಗಳಿವೆ. ಪಶ್ಚಿಮ ಬಂಗಾಳ, ಆಂಧ್ರ, ತಮಿಳುನಾಡು, ಕೇರಳ, ಕರ್ನಾಟಕ, ಗೋವ , ಮಹಾರಾಷ್ಟ್ರ, ಗುಜರಾತ್ ಕಡಲ ತೀರಗಳ ಪರಿಚಯವಿಲ್ಲಿದೆ.

‘ಹಿಲ್ಸಾ ಮೀನಿನ ಬೇಟೆ’ ಎಂಬ ಅಧ್ಯಾಯ ಬಂಗಾಳವನ್ನು ಕುರಿತಾಗಿದ್ದು. “ಹಿಲ್ಸಾ ಏಕ  ಕಾಲಕ್ಕೆ ಒಂದು ಮೀನೂ ಹೌದು, ಕಾದವರಿಗಷ್ಟೆ ಒಳ್ಳೆಯದು ಸಿಗುತ್ತದೆ” ಎನ್ನುವ ನೀತಿಯೊಂದಿಗೆ ಇಡೀ ಕೃತಿಯನ್ನು ಅನಾವರಣಗೊಳಿಸುತ್ತದೆ.  ‘ಬಿಸಿಯಾದಷ್ಟೂ ಹಾಲು ರುಚಿ’ ಎಂಬ ಗಾದೆಯನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು. 

ಹಿಲ್ಸಾ ಬಂಗಾಳಿಗರ ಬದುಕಿನ ಅವಿಭಾಜ್ಯ ಅಂಗ ಎನ್ನುವುದನ್ನು ಕವಿಯೋರ್ವ ಬಂಗಾಳಿಯಲ್ಲಿ ಇಲ್ಲಿಶ್ ಎಂದರೆ ಹಿಲ್ಸಾವನ್ನು “ಮುದ್ದು ಜಲಚರ” ಎಂದು ವರ್ಣಿಸಿರುವುದು ಅದರ ಪ್ರಾಮುಖ್ಯತೆಯನ್ನು ಹೇಳುತ್ತದೆ.  ಯಾವುದೇ  ಶಿಕ್ಷಕರಾದರೂ ದಿನದಲ್ಲಿ ಒಮ್ಮೆಯಾದರೂ  ಕಿಟಿಕಿಟಿ ಸದ್ದು ಮಾಡುವ ಮಕ್ಕಳಿಗೆ ಇದೇನು ಶಾಲೆಯೋ ಫಿಶ್ ಮಾರ್ಕೇಟೋ ಎನ್ನುವುದಿದೆ.  

ಅಂದರೆ ಗೋಜಲು ವಾತಾವರಣಕ್ಕೆ ಹೇಳುವ ಮಾತು. (ದುರಾದೃಷ್ಟ ಕೊರೊನಾ ಆ ಮಾತನ್ನು ಈ ಬಾರಿ ಶಿಕಲ್ಷಕರಿಂದ ಕಸಿದಿದೆ) ಆ ಮಾರ್ಕೆಟಿನ ಜನರು ಅಸಹ್ಯ ವಾಸನೆಯೊಡನೆ ಹೋರಾಡುತ್ತಾ, ಪೊದೆ ಹುಬ್ಬಿನ  ಕ್ರೂರ ಮನಸ್ಸಿನ ಸಾವಿನ ವ್ಯಾಪಾರಿಗಳಿಂದ ಮೀನನ್ನು ಖರೀದಿಸುತ್ತಿರುವ ದೃಶ್ಯ ಕಣ್ಮುಂದೆ ಬರುತ್ತಿತ್ತು” ಎಂಬುದಾಗಿ ಬಂದಿರುವ  ಮಾತುಗಳು ಮೀನುಗಾರರ ನಿತ್ಯ ಬದುಕಿನ ನೈಜ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಬಂಗಾಳಿ ಮೀನು ವ್ಯಾಪಾರಿ ತನ್ನ ಅಂಗಡಿಯಲ್ಲಿ ಹಿಲ್ಸಾ ಜಾತಿಯ ಮೀನು ಇರಿಸಿಲ್ಲವೆಂದರೆ ಅದೂ ಮೀನಿನ ಅಂಗಡಿಯೆ ಅಲ್ಲವೆಂದೂ, ಬಾಯಿ ತುಂಬಾ ಹಿಲ್ಸಾವನ್ನು ತುಂಬಿಕೊಂಡು ಬಾಯಿಯಲ್ಲಿಯೇ ಮೂಳೆ ಮತ್ತು ಮಾಂಸವನ್ನು ಬೇರ್ಪಡಿಸಬಲ್ಲ, ಮಾಂಸವನ್ನು ಮಾತ್ರ ನುಂಗಿ, ಮೂಳೆಗಳನ್ನು  ಮಾತ್ರವೆ ಹೊರತೆಗೆಯಲು ಅಗುವಂತೆ ಬಾಯಿಯಲ್ಲಿಯೇ ಒಂದು ಬದಿಗೆ ಇಟ್ಟುಕೊಳ್ಳಬಲ್ಲ ಹಾಗೆ ಮಾಡಲು ಆಗದಿದ್ದವನು ಅಸಲಿಗೆ ಬಂಗಾಳಿಯೇ ಅಲ್ಲ” ಎಂದಿರುವಲ್ಲಿ ಬಂಗಾಳಿಗರ ಬದುಕಿನ ಆದ್ಯತೆಯ ವಸ್ತುಗಳಲ್ಲಿ ಪ್ರಮುಖವಾದದ್ದು ಹಿಲ್ಸಾ ಎಂದಾಗುತ್ತದೆ.

ಆದರೆ ಇಂಥ ಮೀನು ಬಾಂಗ್ಲದೇಶದಿಂದ ಆಮದಾಗುತ್ತಿತ್ತು ಅದರ ಮೇಲೆ ಬಾಂಗ್ಲಾ ದೇಶ ನಿಷೇಧ ಹೇರಿತ್ತು ಎಂಬುದನ್ನು ಹೇಳುತ್ತಾರೆ. ಬಾಂಗ್ಲದೇಶಿಯರಿಗೆ  ಪದ್ಮಾ ನದಿಯಲ್ಲಿ ಸಿಗುತ್ತಿದ್ದ ಮೀನುಗಳೇ  ಪ್ರಿಯ, ಗಂಗಾ ನದಿಯಲ್ಲಿ  ಸಿಗುವಂಥವು  ಕೇವಲ ಹೆಸರಿಗೆ ಮಾತ್ರ ಎನ್ನುತ್ತಾರೆ. 

ಪದ್ಮಾ ನದಿಯ ಮೀನುಗಳಿಗೆ ಜಿಡ್ಡು ಜಾಸ್ತಿ, ಗಂಗಾ ನದಿಯಲ್ಲಿ ಹೂಳು ಇರುವ ಕಾರಣ ಮೀನಿಗಳು ಹೂಳಿನ ಜೊತೆಯೆ ನದಿಯಲ್ಲಿ ಮತ್ತು ನದಿಯ ಹರಿವಿನಲ್ಲಿ ಮೇಲ್ ಮುಖವಾಗಿ ಒದ್ದಾಡಬೇಕಾಗುತ್ತದೆ. ಹಾಗಾಗಿ ಅವು ತೆಳ್ಳಗಿರುತ್ತವೆ ಎಂಬಲ್ಲಿ ಜಲ ವೈವಿಧ್ಯತೆಯು ಕೂಡ ಮೀನುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಸುವುದರ ಜೊತೆಗೆ ಗಂಗಾ ನದಿಯ ಹೂಳಿನ ಸಮಸ್ಯೆಯನ್ನು ಪರೋಕ್ಷವಾಗಿ ಹೇಳುತ್ತದೆ. ಅಲ್ಲದೆ ಹೂಗ್ಲಿ, ರೂಪ ನಾರಾಯಣ್, ಮಾಂಡೋವಿ ಎಂಬ ನದಿಗಳ ಹೆಸರುಗಳು ಈ ಕೃತಿಯಲ್ಲಿ ಉಲ್ಲೇಖವಾಗಿವೆ.

ವ್ಯಾಪಾರದ ಒಳಗುಟ್ಟನ್ನೂ ಈ  ಕೃತಿ ಹೇಳುತ್ತದೆ. ಉದಾಹರಣೆಗೆ ‘ಕಿಚನ್ ಕಾನ್ಫಿಡೆನ್ಶಿಯಲ್’ ಎನ್ನುವ ನಿಯತಕಾಲಿಕೆಯಲ್ಲಿ ನ್ಯೂಯಾರ್ಕ್ ಬಾನಸಿಗ ಆಂಟನಿ ಬೌರ್ಡೆನ್ ತನ್ನ ಓದುಗರಿಗೆ ಸೋಮವಾರದ ಬೆಳಿಗ್ಗೆ ಉಪಾಹಾರ ಗೃಹಗಳಲ್ಲಿ ಮೀನಿನ ಉಣಿಸನ್ನು ತಿನ್ನಬಾರದು,  ವಾರಾಂತ್ಯದಲ್ಲಿ ಉಳಿದುಹೋದ ಮೀನುಗಳನ್ನು ವಾರದ  ಆರಂಭದಲ್ಲಿ ಖಾಲಿ ಮಾಡಲು ಬಾಣಸಿಗ ಪ್ರಯತ್ನ ಪಡುತ್ತಿರುತ್ತಾನೆ,  ಮಾಲೀಕ ಅದನ್ನೆ  ಮಾರಿ ಹಣ ಗಳಿಸುತ್ತಾನೆ ಎನ್ನುತ್ತಾನೆ.  

ಆಂಧ್ರದಲ್ಲಿ ಆಸ್ತಮಾ ಖಾಯಿಲೆಗೆ ಕೊಡುವ ನಾಟಿ ಔಷಧದ ದಿಸೆಯಿಂದ ಆ ಪ್ರದೇಶದಲ್ಲಿ  ಆಗುವ ಉಪ ವ್ಯಾಪಾರದ ಕುರಿತ ಮಾಹಿತಿಯೂ ಇಲ್ಲಿದೆ.

ಟಾಡ್ಡಿ ಪಾರ್ಲರ್ ಗಳ ವಿಷಯವನ್ನು ಪ್ರಸ್ತಾಪ ಮಾಡುವಾಗ ‘ಕರಿಮ್ ಪಿನ್ ಕಾಲ’, ‘ಕರಿಮ್ ಪುಮ್ ಕಾಲ’ ಎಂಬ ಹೋಲಿಕೆಯ ಎರಡು ಉಪಾಹಾರ ಮಂದಿರಗಳನ್ನು ಹೇಳುತ್ತಾರೆ. ಕಾರಣ ಏನೇ ಆದರೂ ಇಲ್ಲಿ ವ್ಯಾಪಾರ ಪ್ರವೃತ್ತಿಯೇ ಎದ್ದು ಕಾಣುವಂಥದ್ದು ಸಾರ್ವಕಾಲಿವಾದ ಈ ವಿಚಾರವನ್ನು ಅನುವಾದಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ಮೀನುಗಾರರ ಬದುಕು

ಪುಟ ಸಂಖ್ಯೆ 15ರಲ್ಲಿ ಬೆಳಗ್ಗಿನ ಜಾವ ನಾಲ್ಕೂವರೆ ಗಂಟೆಗೆ ಮಾರುಕಟ್ಟೆ ಎಲ್ಲಡೆ ಆರಂಭವಾಗುತ್ತದೆ. ಮಲಗಿರುವಾಗಲೆ ಇಟ್ಟುಹೋದ ಖಾಯಂ ಬೇಡಿಕೆ ಪಟ್ಟಿ. ಮೀನಿಗಿಂತ ಜಾಸ್ತಿ ಮಂಜುಗಡ್ಡೆ, ನನಗೆ ಮೀನುಗಳು ಕಣ್ಣಿಗೂ ಕಾಣಿಸುವುದಿಲ್ಲ, ಎಷ್ಟು ಸಣ್ಣಕ್ಕಿವೆ ಎನ್ನುವ ಗೊಣಗಾಟ. ಹೆಚ್ಚುತ್ತಿದ್ದ ಜನದಟ್ಟಣೆಯಲ್ಲಿ ಭಾವಿ ಗಿರಾಕಿಗಳಿಗೆ ಹುಡುಕಾಟ ಆರಂಭಿಸುವುದು, ವ್ಯಾಪಾರಿಯು ಅಂದಿನ ದರವನ್ನು ಘೋಷಿಸಿ ಬಲೆಯಲ್ಲಿಯೇ ಕಾದು ಕುಳಿತ ಜೇಡನಂತೆ ಗ್ರಾಹಕನನ್ನು ನೋಡುವುದು.

(ಪುಟ ಸಂಖ್ಯೆ 177) MNS ನ ನಾಯಕ ಠಾಕ್ರಯೆ ನಿಮಿತ್ತ ಮುಂಬೈನಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡ ವಿಚಾರ, ಆಗ ಅವರಲ್ಲಿ ಆಗುವ ಬದುಕಿನ ಏರುಪೇರುಗಳು. ತಮ್ಮದಲ್ಲದ ತಪ್ಪಿಗೆ ಕೆಳವರ್ಗದ ಜನರು ಹೇಗೆ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಇಲ್ಲಿ ಹೇಳಿದೆ. ಆರ್ನೆಸ್ಟ್ ಹಮ್ಮಿಂಗ್ ವೇ ಅವರ Old Man and the Sea ಕೃತಿಯೂ ಮೀನುಗಾರನೊಬ್ಬನ ಮಹತ್ವಾಕಾಂಕ್ಷೆಯ ಭೇಟೆಯ ಬಗ್ಗೆ ಹೇಳುತ್ತದೆ.

ಈ ಕೃತಿಯನ್ನು ಕೆ.ಎಸ್. ಭಗವಾನ್ ಅವರು ‘ವೃದ್ಧ ಮತ್ತು ಸಮುದ್ರ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಯ ಉಲ್ಲೇಖ ʼಫಾಲೋಯಿಂಗ್ ಫಿಶ್ʼ ನಲ್ಲಿ ಸಕಾಲಿಕವಾಗಿ ಬಂದಿದೆ.

(ಪುಟ ಸಂಖ್ಯೆ 135) ಸಮುದ್ರದ ಆಳದಲ್ಲಿ ಅತಿ ಮೀನುಗಾರಿಕೆ ಎನ್ನುವುದು ಸಮಸ್ಯೆಯಾಗಿದೆ. ದೊಡ್ಡ ದೊಡ್ಡ ಟ್ರಾಲರ್ ಗಳು ಸಾಧ್ಯವಿರುವ ಎಲ್ಲಾ ಮೀನುಗಳನ್ನು ತಮ್ಮ ದಾಸ್ತಾನಿಗೆ ಸೇರಿಸಿಕೊಳ್ಳಲು ಕಡಲತಳವನ್ನು ಕೆರೆದು ತೆಗೆಯುತ್ತವೆ ಎಂಬುದು, ಮುಂಗಾರು ಮಳೆ ಬೆಸ್ತರು, ಪರಭಕ್ಷಕ ಮೀನುಗಳೆರಡರ ಪಾಲಿಗೂ ಭಾರೀ ಅದೃಷ್ಟವೇ ಎಂಬಲ್ಲಿ ಬೆಸ್ತರ ಬದುಕನ್ನು ಕುರಿತು ಹೇಳುತ್ತಾರೆ.   

ಭಾರತದಲ್ಲಿ ಮೀನುಗಾರರಿಗೆ ಜೀವನವಾದರೆ ಅಮೇರಿಕೆಯಲ್ಲಿ ಮೀನಗಾರಿಕೆ ಆಟದ ಒಂದು ಭಾಗ ಎಂಬುದನ್ನು (ಪುಟ ಸಂಖ್ಯೆ 140) ಹೇಳುತ್ತಾರೆ.  ಅಲ್ಲಿ ಬಹುಮಾನ ಪಡೆಯಲು ಇಡಿ ದಾಖಲೆ ಹಾಗು ಸುಳ್ಳು ಪತ್ತೆ ಯಂತ್ರದೆದುರು ಹಾಜರಾಗಬೇಕೆನ್ನುವುದು ವಿಶೇಷ ಮಾಹಿತಿಯೇ ಸರಿ. 

1959 ರಲ್ಲಿ ಯಶಿ ಎಂಬಾತ ಶಾಲೆಯನ್ನು ಸರಿಯಾಗಿ ಕಲಿಯದೆ ಇದ್ದರೂ ಮನಸ್ಸಿನ ಲೆಕ್ಕಾಚಾರದಲ್ಲಿಯೇ ಹೇಗೆ ಬದುಕು ಕಂಡು ಕೊಂಡಿದ್ದಾನೆ ಎಂಬುದು ಬದುಕಿಗೆ ಇರಬೇಕಾದ ಅಗತ್ಯ ಕೌಶಲ್ಯವನ್ನು ಕುರಿತು ಹೇಳುತ್ತದೆ.  ಮೀನು ಹಿಡಿಯುವುದು ಪ್ರಪಂಚ ಕ್ರೀಡೆಯೇ ಸರಿ ಎನ್ನುವ ಮಾತು ಮೀನು ಆಹಾರ ಜೀವನೋಪಾಯ ಮಾತ್ರವಲ್ಲ ಉಲ್ಲಾಸದ  ಪರಿಭಾಷೆಯೂ ಹೌದು ಎಂಬುದನ್ನು ಕೃತಿ ಹೇಳುತ್ತದೆ.

ಮೀನುಗಾರರು  ಸಮುದ್ರ ದೇವಿಯ ಆರಾಧಕರು ಎಂಬುದನ್ನು ಪುಟ ಸಂಖ್ಯೆ 133 ರಲ್ಲಿ ನೋಡಬಹುದು. ಬ್ಯಾಪಿಸ್ಟಾ ಅವರ ಅಕ್ಕನ ಮಕ್ಕಳು ಎಮಿಲ್ ಮತ್ತು ಯವನ್ಕರ್ವಾಲೋ ಹಾಗು ನಿರೂಪಕರು ಸಮುದ್ರಕ್ಕೆ ಹೋಗುವುದು ಕೊಲ್ಲಿಯ ಬಾಯಿಯ ಬಳಿ ದೇಗುಲವೊಂದರಲ್ಲಿ ಉತ್ತಮ, ಹಾಗು ಕಾಳಿದಾಸ ಎನ್ನುವವರು ಕಾಯುವುದು ಹದಿನೈದು ಕಿಲೋಮೀಟರ್ ನಷ್ಟು ಪ್ರಯಾಣ ಮಾಡಿ ಸಮುದ್ರಕ್ಕೆ ಹೋದ ನಂತರ ಊದಿನಕಡ್ಡಿ, ತೆಂಗಿನ ಕಾಯಿ ವೀಳ್ಯದೆಲೆ ಅಡಕೆಗಳನ್ನು ನೀರಿನೊಳಕ್ಕೆ ಬೀರಿ ನಿಂತಲ್ಲೆ ಪ್ರದಕ್ಷಿಣೆ ಹಾಕಿ ಸಮುದ್ರ ದೇವತೆಗೆ ನಮಸ್ಕರಿಸುವುದು, ಬಂಗಾಳದ ಮೀನುಗಾರರೂ ಕೂಡ ವ್ಯಾಪಾರಕ್ಕೆ ಮುನ್ನ ಊದಿನ ಕಡ್ಡಿ ಬೆಳಗಿಸುವುದು, ಮುಂಬೈನ ಕೋಲಿ ಜನಾಂಗದವರು ಮುಂಭಾ ದೇವಿಯನ್ನು ಪೂಜಿಸುವುದು, ಮೀನುಗಾರರ ದೈವಿಕ ನಂಬಿಕೆಯ ಕುರಿತು ಮಾಹಿತಿ ಹೇಳುತ್ತದೆ.

ನಾಟಿ ವೈದ್ಯದಲ್ಲಿ ಜೀವಂತ ಮೀನನ್ನು ನುಂಗುವಂತೆ ಮಾಡುವುದು, ಬಾವಿ ನೀರಿನ ಪ್ರಾಮುಖ್ಯತೆ,  ನಾಟಿ ವೈದ್ಯ ಬಥಿನಿಗೌಡರಿಗೆ ಆಳುವ ಸರಕಾರ ಹೇಗೆ ಸಹಾಯ ಮಾಡುತ್ತದೆ ಇನ್ನು ವಾದ ವಿವಾದಗಳು ಯಾವ ರೀತಿ ಆಗುತ್ತವೆ, ಆ ಔಷಧಿ ಕೊಡಬೇಕಾದರೆ ಆಗುವ ಪೂರ್ವತಯಾರಿ, ಅಲ್ಲಿ ಹೇಳುತ್ತಿದ್ದ ಪಥ್ಯ ಆಹಾರಗಳು (ಕಬ್ಬಿಣದ ಸಲಾಕೆಯನ್ನು ಬಿಸಿ ಮಾಡಿ ಮಜ್ಜಿಗೆಯಲ್ಲಿ ಅದ್ದಿ ಸೇವಿಸುವುದು) ಹೀಗೆ ಅಲ್ಲಿ ಅಸ್ತಮಾ ರೋಗಕ್ಕೆ ಔಷಧಿ ತೆಗದುಕೊಂಡವರು ವಾಂತಿ ಮಾಡಿಕೊಳ್ಳಲು ನಿಜವಾದ ಕಾರಣ ಇಂಗಿನ ಕಟುವಾದ ವಾಸನೆ.  ಇತ್ಯಾದಿಗಳು ಚೆನ್ನಾಗಿ ನಿರೂಪಣೆಯಾಗಿವೆ. ಈ ಭಾಗ ಲೇಖಕರ ಅಜ್ಜನ ನಾಟಿ ವೈದ್ಯದ ಪಾಂಡಿತ್ಯದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ಫಾಲೊಯಿಂಗ್  ಫಿಶ್ ನಲ್ಲಿ ರುಚಿ

‘ಶೋರ್ಷೆ ಇಲ್ಲಿಶ್’ ಬಂಗಾಳದ ಪ್ರಮುಖ ಖಾದ್ಯ. ಮಸಾಲೆಯ ದಟ್ಟ ಹಳದಿ ಕಲರ್, ‘ಪಾಂಚ್ ಫೋರನ್’ ಎಂದು ಕರೆಯಲಾಗುವ  ಐದು ಮಸಾಲೆಗಳ ಮಿಶ್ರಣ, ಸಾಸುವೆ ಎಣ್ಣೆ, ‘ಅಂಭೋಲ್ ಇಲ್ಲಿಶ್’ ಎಂಬ ಚಟ್ನಿ, ಫ್ರೆಂಚರು ತಮಿಳುನಾಡನ್ನು ಪ್ರವೇಶಿಸಿದಾಗ  ಧರ್ಮವನ್ನಷ್ಟೆ ಬದಲಾಯಿಸುತ್ತಾರೆ. ಆದರೆ ಗೋವಾದಲ್ಲಿ ದಾಲ್ಚಿನ್ನಿ, ಬೆಳ್ಳುಳ್ಳಿ ಮತ್ತು ವೈನ್ನ ಬಳಕೆಯಾಯಿತು ಎಂಬ ಮಾಹಿತಿಯಿದೆ.

ಕರಾವಳಿ ತೀರದವರು ಯಾವಾಗಲೂ ಹುಣಸೆಹಣ್ಣು ಮತ್ತು ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸುತ್ತಿದ್ದರು ಎಂಬ ಮಾಹಿತಿ ಇದೆ. ಕನ್ಯಾಕುಮಾರಿ  ಜಿಲ್ಲೆಯಲ್ಲಿ ‘ಮೀನಿನಪೋಡಿ’ ಎಂಬ ಖಾದ್ಯ. ಕೇರಳದಲ್ಲಿ “ಆನ ಮಯಿಕಿ” ಎಂದರೆ ಆನರಗೂ ಅಮಲು ಬರಿಸುವಮದ್ಯ ,  ಕಳ್ಳು ಅಂಗಡಿಗಳಲ್ಲೂ ಸಿಗುವ  ಕಪ್ಪಾ-ಮೀನಕರ್ರಿ ಖಾದ್ಯ.

ಅಲಪ್ಪುರ ಜಿಲ್ಲೆಯ ಕಳ್ಳು, ತೆಂಗಿನ  ಎಣ್ಣೆಯ ಹೇರಳ ಬಳಕೆ, ಮಂಧ್ರಿ (ದ್ರಾಕ್ಷಿ ಕಳ್ಳು), ಕಲ್ಲಿಕೋಟೆಯ ಇರ್ರಿ ಮೀನಿನ ಸಾರು , ಮಂಗಳೂರಿನ ಫೀಶ್ ಕರಿ, ಕೇರಳದ  ತದ್ವಿರುದ್ದ  ಖಾದ್ಯ ಇದು ಲೇಖಕರ  ನಾಲಿಗೆಯ ಪ್ರಕಾರ  ಉತ್ಕೃಷ್ಟ  ಖಾದ್ಯ. ಆಲೂಗೆಡ್ಡೆಯ ಜೊತೆಗೆ ಬಂಗುಡೆ ಕರ್ರಿ, ರವಾಫ್ರೈ ಜೊತೆಗೆ ಕೊಡುವ ಟೊಮೆಟೊ ಚಟ್ನಿ, ಕರಾವಳಿ ತೀರದಲ್ಲಿ ಬಳಸುವ ಕೋಕಮ್, ದಪ್ಪನೆಯ ಸೀಗಡಿಗಳಿರುವ ಕೆಂಬಣ್ಣದ ಖೀಮಾ, ಗೆದರೆ  ಮೀನಿನ ಟ್ಯೂನಕರ್ರಿ, ಕರಿದ ಕಪ್ಪು ಪಾಮ್ಫ್ರೆಟ್, ವಿಕ್ಟೋರಿಯನ್ ಭಕ್ಷ್ಯಗಳು ಇವುಗಳ ಬಗ್ಗೆ ಇಲ್ಲಿ ಹೇಳಿದೆ.  ಸೋಲ್ ಕುಡಿ ಎಂಬ ಪಾನೀಯ, ಆಯುರ್ವೇದ ತ್ರಿಫಲ ಚೂರ್ಣದ ಬಗ್ಗೆ ಮಾಹಿತಿಯೂ ಇದೆ.  

ಕೃತಿಯ ವಿಶೇಷವೆಂದರೆ ಬಂಗಾಳದ ವಾಸಂತಿ, ಮಂಗಳೂರಿನ ಶೈಲಜಾ ಎಂಬ ಮಹಿಳೆಯರು ರುಚಿಕಟ್ಟಾದ ಮೀನಿನ ಅಡುಗೆ ಮಾಡುವಲ್ಲಿ  ನಿಷ್ಣಾತರು ಎಂಬ ಅಭಿಪ್ರಾಯವನ್ನು ಲೇಖಕರು ಹೇಳುತ್ತಾರೆ. ವಾಸಂತಿ ಅರೆಯುವ ಮಸಾಲವನ್ನು ಬಹುಬೇಗ ಮೀನಿಗೆ ಸೇರಿಸಬೇಕೆಂಬುದು, ಇಲ್ಲವಾದರೆ ಕಹಿಯಾಗುತ್ತದೆ ಎಂದೂ, ಶೈಲಜಾ ಮಡಕೆಯಲ್ಲಿಯೇ ಸಂಗ್ರಹಿಸಿಡುವ ಫಿಶ್ ಮಸಾಲ ಮಿಕ್ಸ್ ಜೊತೆಗೆ ಹಿತಕರ ಅಡುಗೆಗೆ ಬೇಕಾದ ಕೆಲವು ಕಿವಿ ಮಾತುಗಳೂ ಇಲ್ಲಿ ಉಲ್ಲೇಖವಾಗಿದೆ. 

ಶೈಲಜಾ ಅಡುಗೆಯ ಜೊತೆಗೆ ಆಕೆಯ ಪ್ರೇಮಪಾಶದಲ್ಲಿ ಸಿಲುಕಿದ್ದೆ ಎನ್ನುವ ಲೇಖಕರ ಮಾತುಗಳು ನವಿರಾದ ಹಾಸ್ಯದಲ್ಲಿ ಮೂಡಿಬಂದಿವೆ. ಪುಟ ಸಂಖ್ಯೆ 148ರಲ್ಲಿ  ಹೆಂಗಸೊಬ್ಬಳು ಹಾರ್ಲಿಕ್ಸ್ ಬಾಟಲಿಯಿಂದ ಒಣ ಮೀನಿನ ತುಂಡನ್ನು ತೆಗೆದು ಮೀನನ್ನು ಹಿಡಿಯುವ ಪ್ರಸಂಗ ಸ್ವಾರಸ್ಯಕರವಾಗಿದೆ.

ಮೀನಿಗೂ ಕ್ರೀಡೆಗೂ ಇಲ್ಲಿ ಸಂಬಂಧವಿದೆ. ಪೂರ್ವ ಫುಟ್ಬಾಲ್ ತಂಡವು ಗೆದ್ದಾಗ ಹಿಲ್ಸಾ ಮೀನಿನ ಊಟ ಮಾಡುವ ಪದ್ಧತಿ, ಮೋಹನ್ ಬಗಾನ್ ಅಭಿಮಾನಿಗಳು ಸೀಗಡಿ ಮೀನಿನ ಭೋಜನ ಬಯಸುವುದು,  (ಪುಟ ಸಂಖ್ಯೆ 184)  ಬೇಸ್ ಬಾಲ್ ಟೊಪ್ಪಿಗೆ ಬಂಗುಡೆ ರುಚಿ.

(ಪುಟ ಸಂಖ್ಯೆ 123) GPS  ಅಳವಡಿಸುವುದು, ರಿಚಾರ್ಜ್ ಅಂಗಡಿಯಲ್ಲಿ ದೊರಕುವ ಇತಿಹಾಸದ ಟಿಪ್ಪಣಿಗಳು ಮಿಟುಕಿಸುವ ಆ್ಯಪಲ್ ಫೋನು, ಸಿ.ಡಿ. ದೊರಕುವುದು 1920ರಲ್ಲಿ ಹಾಯಿ ಮೀನಿನ ನಿಖರ ವೇಗಕ್ಕೆ ನಿಖರ ಪ್ರಮಾಣ ಕೊಡಲು ಸಾಲುಸಾಲಾಗಿ  ಕೈಗೊಂಡ  ಸೃಜನಶೀಲ ಪ್ರಯೋಗಗಳ ಮಾಹಿತಿಯೂ ಇಲ್ಲಿದೆ.

ದೋಣಿಯಲ್ಲಿ ಆಧುನಿಕತೆಯ ಕುರಿತು ಸಾಕಷ್ಟು ಮಾಹಿತಿಗಳು ಕಡೆಯ ಎರಡು ಅಧ್ಯಾಯದಲ್ಲಿದೆ. ಮರದ ದೋಣಿ ಹೊಸದರಲ್ಲಿ ನೀರ ಮೇಲೆ ಇರುತ್ತದೆ ಹಳತಾದರೆ ಅದನ್ನು ಸಂಭಾಳಿಸುವುದು ಕಷ್ಡ ಅದರ ಮರದ ಮರು ಉಪಯೋಗ ಹೇಗಾಗುತ್ತದೆ ಅಷ್ಟರಲ್ಲಿ ಮರ ಯಾವ ರೀತಿ ಕೆಟ್ಟ  ವಾಸನೆಗೆ ತಿರುಗಿತುತ್ತದೆ. 

ಹಳೆಯ ಕಾಲದ ದೋಣಿಯಲ್ಲಿ ಮುಳುಗಿದರೆ ಬಚಾವಾಗಬಹುದಿತ್ತು ಆದರೆ ಹೊಸ ದೋಣಿಯ ಫೈಬರ್ ಶೀಟ್ ಗಳು ಜೀವ ರಕ್ಷಣೆ ಮಾಡುವುದಿಲ್ಲ ಎಂಬ ಅನುಭವದ ಮಾತು ಸಹನಾ ಹೆಗಡೆಯವರಿಂದ ಅನುಭವಿಸಿದಂತೆ ಅನುವಾದವಾಗಿವೆ. 

ಕೆಲಸ ಮಾಡು ಕೈಗಳಿಗೆ ಕೆಲಸ ಬೇಕು ಎಂಬ ವಾಸಂತಿಯ ವಿಚಾರದಲ್ಲಿ ಬರುತ್ತದೆ. ಇದು ಕ್ರಿಯಾಶೀಲತೆಯ ಸಂದೇಶವನ್ನು ಕೊಡುತ್ತದೆ.  ಜಡತ್ವವನ್ನು ನಿಷ್ಕ್ರಿಯಗೊಳಿಸಬೇಕು ಎಂಬ ಕಿವಿಮಾತನ್ನು ಹೇಳುತ್ತದೆ. ‘ಹಿಲ್ಸಾ’ ಇದು ರೂಢಿಸಿಕೊಳ್ಳಲೇ ಬೇಕಾ ಸ್ವಾದ ಎಂಬಲ್ಲಿ ಯಾವುದು ಮನುಷ್ಯನಿಗೆ ತಕ್ಷಣಕ್ಕೆ ಒಗ್ಗುವುದಿಲ್ಲ. ನಿಧಾನವಾಗಿ ಎಂಥದನ್ನೂ ಒಗ್ಗಿಸಿಕೊಳ್ಳಬೇಕು ಎಂಬ ಕಿವಿ ಮಾತೂ ಇಲ್ಲಿದೆ.

ಮೀನುಗಾರ ಜನಾಂಗಗಳಾದ ಕಟ್ಟರ್, ಕೋಲಿ, ಇರವ, ತಿಯ್ಯರ್ ಮುಂತಾದವುಗಳ ಬಗ್ಗೆ ಮಾಹಿತಿಯಿದೆ. ನೈಸರ್ಗಿಕ ಬಂದರು ವಿರ್ರಿಂಜ್ಙಮ್ಯ ಮಾಹಿತಿಯ ಜೊತೆಗೆ ಇಂದಿಗೆ ಅತ್ಯಂತ  ಪ್ರಚಲಿತದಲ್ಲಿರುವ ಪದ  ‘ಪಾರ್ಲರ್’ ಎಂಬ ಪದವು Parler ಎಂಬ ಫ್ರೆಂಚ್ ಪದದಿಂದ ಬಂದಿದೆ. ಅದರ ಅರ್ಥ ‘ಮಾತನಾಡುವ ಕೋಣೆ; ಎಂಬ ಮಾತು.

ಹಳೆಯ ತಮಿಳಿನಲ್ಲಿ ಇರುವ  ‘ಇರ್ರಮ್’ ಎಂಬ ಪದವೆ ‘ಇರವ’ ಮೂಲವನ್ನು ತೋರಿಸಿವಂಥದ್ದು . ದಂತಕತೆಯ ಪ್ರಕಾರ ಇವರೇ ತೆಂಗನ್ನು ಶ್ರೀಲಂಖಾದಿಂದ ಭಾರತಕ್ಕೆ ತಂದರು ಇತ್ಯಾದಿ ಕುತೂಹಲ ಮಾಹಿತಿಗಳನ್ನು ಫಾಲೋಯಿಂಗ್ ಫಿಶ್ ಕೃತಿ ಫಾಲೋ ಮಾಡಿದರೆ ಪಡೆಯಬಹುದು.

ಸಹನಾ ಹೆಗಡೆಯವರು ಈ ಕೃತಿಯನ್ನು ಬರೆ ಅನುವಾದ ಮಾಡಿಲ್ಲ ಸಂಶೋಧನಾತ್ಮಕವಾಗಿಯೂ ನೋಡುವ ಕೆಲಸ ಮಾಡಿದ್ದಾರೆ ಎಂಬುದು ಅವರ ಮನದ ಮಾತಿನಲ್ಲಿ ಅವರು ಸಂಪರ್ಕಿಸಿದ ಎಂಟೂ ರಾಜ್ಯಗಳ ಸಂದರ್ಶಕರ ಪಟ್ಟಿ ನೋಡಿದರೆ ತಿಳಿಯುತ್ತದೆ. ‘ಫಾಲೋಯಿಂಗ್ ಫಿಶ್‘ ಕಡಲ ತೀರದಲ್ಲೊಂದು ಸುದೀರ್ಘ ಪ್ರವಾಸ ಮಾಡುವ ಹೊಸ ಅನುಭವವನ್ನು ಕೊಡುತ್ತದೆ ಎಂದರೆ ತಪ್ಪಿಲ್ಲ.

‍ಲೇಖಕರು Avadhi

November 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: