ಭೀಮಸೇನ ನಳಮಹಾರಾಜ

ಮುರಳಿ ಹತ್ವಾರ್ 

ಇದೊಂದು ಓಟಿಟಿಯಲ್ಲಿ ಮನೆಯ ಬಾಗಿಲಿಗೆ ಬಂದ ಕನ್ನಡದ ಹೊಸ ಸಿನೆಮಾ. ಆಕರ್ಷಿಸುವಂತ ಶೀರ್ಷಿಕೆ, ಸಿನೆಮಾ ಕಟ್ಟಿದ ತಂಡ, ಲಾಕ್ಡೌನಿನ ಕಾಲ ಎಲ್ಲವೂ ನೋಡುವಂತೆ ಮಾಡಿದವು. 

ಭೀ.ನ. ಒಂದು ಮಂದ ಉರಿಯಲ್ಲಿ ಬೇಯಿಸಿದ ಅಡುಗೆಯ ಹಾಗೆ ನಿಧಾನವಾಗಿ ಅರಳುತ್ತದೆ. ಮನುಷ್ಯನ ಸಹಜ ಗುಣಗಳಾದ ಕೋಪ, ತಾಪ ಇತ್ಯಾದಿಗಳ ಮಸಾಲೆಯ ರುಚಿ ಅರಳಿಸುವ ಕಥೆಯಲ್ಲಿ, ಸ್ವಲ್ಪ ಕೋಪದ ಕಾರ ಹೆಚ್ಚಿದೆ. ಅದನ್ನ ತಣಿಸಲು ಮನಶಾಸ್ತ್ರದ ತುಪ್ಪ ಧಾರಾಳವಾಗಿ ಹರಿಯುತ್ತದೆ. 

ಮೊದಲು ಅಪ್ಪನ ಕೆಂಡದಂತ ಕೋಪ. ಅದರಿಂದ ಒಂದಿಷ್ಟು ಅವಗಢ. ಅಲ್ಲಿಂದ ಶುರುವಾಗುವ ಮಗಳ ಕೋಪ ತರುವ ಮತ್ತೊಂದು ಅವಗಢಗಳಲ್ಲಿ ಕಥೆ ಬೆಳೆಯುತ್ತದೆ. ಅಥವಾ ಬೇಯುತ್ತದೆ. ಮಗಳ ಕೋಪ ಒಂದು ರುಚಿಯಾದ ಬಿರಿಯಾನಿ ಮತ್ತದರ ಬಾಸಣಿಗನ ಪ್ರೀತಿಯಲ್ಲಿ ಹದವಾಗುತ್ತದೆ.

ಸಿಹಿ-ತಿಂಡಿಯಂತೆ ಬೆಳೆಯುವ ಸಂಸಾರದಲ್ಲಿ ಒಂದಿಷ್ಟು ಹುಳಿ ಹಿಂಡುವ ಘಟನೆಗಳು. ಹಾಗೆ ಒಡೆದ ಹಾಲನ್ನ ಕೊನೆಗೆ ಸಕ್ಕರೆ ಬೆರೆತ ಪೇಡಾ ಮಾಡುವದು ಕಥೆಯ ಒಟ್ಟಾರೆ ಸಾರಾಂಶ. ಇದರಲ್ಲಿ ಮರೆತುಹೋಗುವ ಮತ್ತು ಅದನ್ನು ನೆನಪಿಗೆ ವಾಪಸು ತರುವ – ಸುಮಾರು ಸಿನೆಮಾಗಳಲ್ಲಿ ಬಂದುಹೋಗಿರುವ – ವಿಸ್ಮಯವಿದೆ.

ನಮ್ಮನ್ನು ಕಾಡುವ ಸಮಸ್ಯೆಯನ್ನು ಹೊರಗಿನವರಂತೆ ವಿಮರ್ಶಿಸಿದಾಗ ಪರಿಹಾರ ದೊರಕಬಹುದು ಎನ್ನುವ ಮನಶಾಸ್ತ್ರವಿದೆ. ಇವೆಲ್ಲವನ್ನು ಹೇಳುವ, ಹೇಳಿಸುವ ಪಾತ್ರಗಳು ಕೂರ್ಮಾದೊಳಗೆ ಕರಗಿದ ರುಬ್ಬಿಟ್ಟ ಈರುಳ್ಳಿ-ಬೆಳ್ಳುಳ್ಳಿಯಹಾಗೆ ಕಥೆಯ ಒಟ್ಟಾರೆ ರುಚಿಯನ್ನು ಹೆಚ್ಚಿಸುತ್ತವೆ. 
ಆದರೆ, ಕೆಲವೊಮ್ಮೆ ಅವಶ್ಯಕ್ಕಿಂತ ಹೆಚ್ಚು ಪದಾರ್ಥಗಳನ್ನು ಹಾಕಿದಾಗ ಅಡುಗೆಯ ರುಚಿ ಕೆಡುತ್ತದೆ.

ಈ ಭೀ.ನ. ಸಹ ಅಲ್ಲಲ್ಲಿ ಹಾಗೆ ಸಪ್ಪೆಯಾಗಿದೆ; ಕಹಿಯಾಗಿದೆ. ಅಂತಹದರಲ್ಲಿ ಒಂದು ಕಥೆಯಲ್ಲಿ ಹರಡಿರುವ ಧರ್ಮದ ಎಳೆ. ಅದು ಇಲ್ಲದಿದ್ದರೆ ಕಥೆಯ ರುಚಿಗೇನೂ ಕಡಿಮೆಯಾಗುತ್ತಿರಲಿಲ್ಲ. ಆದರೆ ಅದನ್ನು ಉಪಯೋಗಿಸಿಕೊಂಡ ರೀತಿ, ಪಾತ್ರಗಳ ಹೆಸರು ಮತ್ತು ಮಾತುಗಳಲ್ಲಿ ವ್ಯಕ್ತವಾಗುವ ವಿಚಾರಗಳು.

ಭೀ.ನ ವನ್ನು ಒಂದು ಸಕ್ಕರೆಯ ಬದಲು ಉಪ್ಪು ಹಾಕಿದ ಸಿಹಿ ತಿಂಡಿ ಮಾಡುತ್ತವೆ. ಹಾಗೆಯೇ, ಕಥೆಗಾರರು ವೀಕ್ಷಕರಿಗೆ ತಲುಪಿಸಬೇಕೆಂದುಕೊಂಡ ವಿಚಾರ ಏನಿದ್ದಿರಬಹುದು ಎನ್ನುವ ಪ್ರಶ್ನೆ ಹುಟ್ಟುಹಾಕುತ್ತದೆ. ಕಥೆಯನ್ನು ತೆರೆಗೆ ಅಚ್ಚುಕಟ್ಟಾಗಿ ತರಲು ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಮತ್ತು ಇನ್ನುಳಿದವರು ಪಟ್ಟ ಶ್ರಮ ಭೀ.ನ ವನ್ನು ತಾಂತ್ರಿಕವಾಗಿ ಉತ್ತಮವಾದ ಸಿನೆಮಾ ಮಾಡಿವೆ. 

ಒಟ್ಟಾರೆ, ಭೀ.ನ ಒಂದಷ್ಟು ಹೊಸ ರುಚಿ, ಒಂದಷ್ಟು ಭಿನ್ನ ರುಚಿಯೊಂದಿಗೆ ಊಟ ಬಡಿಸಿದೆ.  ಅದನ್ನು ಸಾವಕಾಶವಾಗಿ ಸೇವಿಸಿದರೆ ಅದರಲ್ಲಿರುವ ಎಲ್ಲಾ ರುಚಿಗಳನ್ನು ಅರ್ಥಮಾಡಿಕೊಳ್ಳಬಹುದು, ಮತ್ತು ಹೆಚ್ಚು ‘ಕಾರ’ ಆರೋಗ್ಯಕ್ಕೆ ಹಾನಿಕರ ಎನ್ನುವ ಸಂದೇಶದ ರುಚಿಯನ್ನ, ಸಿನೆಮಾದಲ್ಲಿರುವ ಧರ್ಮದ ಎಳೆಗಳನ್ನು ತೆಗೆದಿಟ್ಟು ಉಂಡ ನಾಲಿಗೆಯಲ್ಲಿ ಉಳಿಸಿಟ್ಟುಕೊಳ್ಳಬಹುದು. 

ಕುಚೋದ್ಯ: ಈ ಸಿನೆಮಾದಲ್ಲಿ ಬೆಣ್ಣೆ ತಿಂದು-ತಿಂದು ದಪ್ಪಗಿದ್ದ ಪಾತ್ರವೊಂದನ್ನು  ಬೆಳಿತಾ-ಬೆಳಿತಾ ಚಿಕನ್ ತಿನ್ನಿಸಿ  ತೆಳ್ಳಗಾಗಿಸಿರುವ ನಿರ್ದೇಶಕರು, ಶಾಕಾಹಾರಿಗಳಿಗೆ ಶಾಕ್ ಕೊಟ್ಟಿದ್ದಾರೆ ಅನ್ನೋದು ಕುಚೋದ್ಯ. 

‍ಲೇಖಕರು Avadhi

November 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: