ಮಿಷಿಗನ್ ಡೈರಿ: ಅಮೆರಿಕಾದಿಂದ ಮಂಗಳಾ ಪ್ರಿಯದರ್ಶಿನಿ

ಡಾ.ಡಿ. ಮಂಗಳಾ ಪ್ರಿಯದರ್ಶಿನಿ

ಮೊದಲಗಿತ್ತಿ , ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಮದರಾಸಿನ ಸಮುದ್ರ ದಂಡೆಯ ಮೇಲೆ ತಾತನ ಕೈಬೆರಳುಗಳನ್ನು ಹಿಡಿದು ಎಲ್ಲವನ್ನೂ ಅರಳಿದ ಕಣ್ಣುಗಳಿಂದ ನೋಡುತ್ತ , ನೂರು ಪ್ರಶ್ನೆಗಳನ್ನು ಕೇಳುತ್ತಾ , ಮದರಾಸು , ಅಲ್ಲಿಯ ಜನ , ಆಹಾರ , ದೇವಾಲಯಗಳು , ತಮಿಳು ಅಯ್ಯರ್ ಬ್ರಾಹ್ಮಣ ಮನೆಯಲ್ಲಿನ ಸಾಂಪ್ರದಾಯಿಕ ವಾತಾವರಣದಲ್ಲಿ ಕರಗಿ ಹೋಗಿದ್ದ ಐದು ವರ್ಷಗಳ ಮುಗ್ಧ ಬಾಲಕಿಯನ್ನು ಇಂದು ಜಗತ್ತೇ ಕಣ್ಣರಳಿಸಿ ನೋಡುತದೆ.

ಈವರೆಗೂ ಯಾವ ಅಮೆರಿಕ ಮಹಿಳೆಯೂ ಏರದ ಅತ್ಯುನ್ನತ ರಾಜಕೀಯ ಪದವಿ , ರಾಷ್ರದ ಉಪಾಧ್ಯಕ್ಷೆಯ ಪಟ್ಟಕ್ಕೆ ಚುನಾಯಿಸಲ್ಪಟ್ಟಿರುವ ಕಮಲಾ ಹ್ಯಾರಿಸ್. ಅವರ ತಾತನೇ ಪಿ . ವಿ . ಗೋಪಾಲನ್ ಅವರು. ಭಾರತ ಸ್ವಾತಂತ್ರ್ಯದ ಸಂಗ್ರಾಮದ ಹೋರಾಟದಲ್ಲಿ ಭಾಗಿಯಾಗಿ ಭಾರತೀಯ ನಾಗರೀಕ ಸೇವೆಯ ಉನ್ನತ ಹುದ್ದೆಯಲ್ಲಿದ್ದ ತಾತ , ಬಾಲ್ಯದಿಂದಲೂ ಕಮಲಾಗೆ ಸ್ಫೂರ್ತಿ ದೇವತೆಯೇ. ಸಾವಿರಾರು ಮೈಲು ದೂರದಿಂದಲೇ ಮೊಮ್ಮಗಳಿಗೆ ಪತ್ರಮುಖೇನ ಮಾರ್ಗದರ್ಶನ , ಜನಪರ ಕಾರ್ಯಗಳ ಪ್ರೋತ್ಸಾಹ , ಸಾಮಾಜಿಕ ಬದುಕಿನಲ್ಲಿ ಪ್ರವೇಶ ಪಡೆಯಲು ಗೋಪಾಲನ್ ಪ್ರಮುಖ ಕಾರಣ. ಅದನ್ನು ಕಮಲಾ ಸಾಕಷ್ಟು ಕಡೆಗಳಲ್ಲಿ ಹೇಳಿಕೊಂಡಿದ್ದಾರೆ .

ಕಮಲಾ ಅವರ ತಾಯಿ ಶ್ಯಾಮಲಾ 1958ರಲ್ಲೇ ಬರ್ಕ್ಲಿ ವಿಶ್ವವಿದ್ಯಾಲಯಕ್ಕೆ ಸ್ನಾತಕೋತ್ತರ ಪದವಿಗೆ ಪ್ರವೇಶ ಬಯಸಿದಾಗ ಆಕೆಗೆ ಕೇವಲ 19 ವರ್ಷಗಳು. ಭಾರತದಿಂದಾಚೆಗಿರಲಿ , ತಮಿಳು ನಾಡಿನಿಂದಾಚೆಗೇ ಹೆಣ್ಣು ಮಕ್ಕಳನ್ನು ಹೊರಗೆ ಕಳಿಸದಿದ್ದ ಸಂದರ್ಭದಲ್ಲಿ ಆಕೆಯ ಓದಿನ ವೆಚ್ಚಕ್ಕಾಗಿ ನಾಲ್ಕು ಮಕ್ಕಳ ತಂದೆ ಗೋಪಾಲನ್ ಮೀನಾಮೇಷವೆಣಿಸದೆ, ತಮ್ಮ ನಿವೃತ್ತಿಯ ಹಣದಿಂದ ಮಗಳನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕೆಗೆ ಕಳಿಸುತ್ತಾರೆ . ಇದು ಅವರು ಹೆಣ್ಣು, ಗಂಡೆಂಬ ತಾರತಮ್ಯ ತೋರದೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ ಪರಿಯಾಗಿತ್ತು. ಇದು ಆ ಕಾಲದಲ್ಲಿ ಗೋಪಾಲನ್ ಕೈಗೊಂಡ ಬಹಳ ದೊಡ್ಡ ನಿರ್ಧಾರವಾಗಿತ್ತು .

ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡ್ ನಲ್ಲಿ ಜನಿಸಿದ ಕಮಲಾ ಹ್ಯಾರಿಸ್ ಹೋವರ್ಡ್ ವಿಶ್ವ ವಿದ್ಯಾಲಯದಲ್ಲಿ ಕಲಾ ವಿದ್ಯಾರ್ಥಿನಿಯಾಗಿ ಪದವಿ ಪಡೆದು , ಕ್ಯಾಲಿಫೋರ್ನಿಯಾದ ಹೇಸ್ಟಿಂಗ್ಸ್ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದು ಸ್ಯಾನ್ ಫ್ರಾನ್ಸಿಸಿಸ್ಕೊ ಸಿಟಿ ಅಟಾರ್ನಿ ಕಛೇರಿಯಲ್ಲಿ ಕೆಲಸಕ್ಕೆ ಸೇರುವವರೆಗೆ ಅಲಮೇಡಾ ಕೌಂಟಿ ಡಿಸ್ಟ್ಟಿಕ್ಟ್ ಅಟಾರ್ನಿ ಕಛೇರಿಯಲ್ಲಿ ಕೆಲಕಾಲ ದುಡಿದರು . 2010ರಲ್ಲಿ ಅವರು ಸ್ಯಾನ್ ಫ್ರಾಂನ್ಸಿಸಿಸ್ಕೊ ಅಟಾರ್ನಿ ಜನರಲ್ ಆಗಿ ಮತ್ತೆ ಮರು ಆಯ್ಕೆಯಾದರು . ಅದಾದ ನಂತರ ಕಮಲಾ ಹ್ಯಾರಿಸ್ಎಂದೂ ಹಿಂತಿರುಗಿ ನೋಡಲೇ ಇಲ್ಲ.

2017ರಿಂದ ಆಕೆ ಜ್ಯೂನಿಯರ್ ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಆಗಿ ಕಾರ್ಯ ನಿರ್ವಹಿಸುತ್ತಲೇ ಬಂದಿದ್ದಾರೆ . ಆಕೆ ಮೊದಲನೆಯ ಕಪ್ಪು ಮಹಿಳಾ ಡಿಸ್ಟ್ರಿಕಟ್ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ , ಮೊದಲ ಇಂಡಿಯನ್ ಅಮೆರಿಕನ್ ಸೆನೆಟರ್ , ಮೊದಲ ಏಷಿಯನ್ ಮಹಿಳೆಯಾಗಿ ಉಪ ರಾಷ್ಟ್ರಾಧ್ಯಕ್ಷೆಯಾಗಿ ಚುನಾಯಿತರಾಗಿ ದಾಖಲೆ ಬರೆದಿದ್ದಾರೆ .

ಎರಡು ಕಾರಣಗಳಿಗೆ ಕಮಲಾ ಹ್ಯಾರಿಸನ್ ನಮಗೆ ಮುಖ್ಯ . ಮೊದಲಿಗೆ , ಮೊದಲ ಮಹಿಳಾ ಅಮೆರಿಕಾ ಉಪಾಧ್ಯಕ್ಷೆಯಾಗಿ , ಇನ್ನೊಂದು ಆಕೆಯ ತಾಯಿ ಶ್ಯಾಮಲಾ , ನಮ್ಮ ದೇಶದ ಮಹಿಳೆ ಎಂದು . ಶ್ಯಾಮಲಾ ಗೋಪಾಲನ್ ತಮಿಳು ನಾಡಿನ ಗೋಪಾಲನ್ ಅವರ ಪುತ್ರಿಯಾಗಿ ಅಮೇರಿಕಾದ ಕ್ಯಾಲಿಫೋರ್ನಿಯಾದ ಬರ್ಕ್ ಲಿ ವಿ ಶ್ವ ವಿದ್ಯಾಲಯದಲ್ಲಿ ನ್ಯೂಟ್ರಿಷನ್ ಹಾಗೂ ಎಂಡೋಕ್ರೈನಾಲಜಿಯಲ್ಲಿ ಪಿ ಎಚ್ ಡಿ ಪಡೆದವರು . ಆ ಕಾಲದಲ್ಲಿಯೇ ಪ್ರಗತಿಪರ ವಿದ್ಯಾವಂತ ಮಹಿಳೆಯಾಗಿ ಸವರ್ಣೀಯರ ಹೋರಾಟದಲ್ಲಿ ತೊಡಗಿಸಿಕೊಂಡು , ಹೋರಾಟದ ಮುಂಚೂಣಿಯಲ್ಲಿದ್ದ ಕಪ್ಪು ವರ್ಣೀಯ ಡೊನಾಲ್ಡ್ ಜೆ . ಹ್ಯಾರಿಸ್ ಅವರನ್ನು ಪ್ರೀತಿಸಿ ಮದುವೆಯಾಗಿ ಕಮಲಾ ಹಾಗೂ ಮಾಯಾ ಎಂಬ ಎರಡು ಹೆಣ್ಣು ಮಕ್ಕಳ ತಾಯಿಯಾದರು . ಜಮೈಕಾ ಮೂಲದ ಕಿನಿಷಿಯನ್ ಅರ್ಥಶಾಸ್ತ್ರ ಪಾರಂಗತ ಹ್ಯಾರಿಸ್ ಅವರು ಸ್ಟ್ಯಾನ್ ಫರ್ಡ್ ವಿಶ್ವ ವಿದ್ಯಾಲಯದ ಎಮಿರೆಟಿಸ್ ಪ್ರಾಧ್ಯಾಪಕರು .

ಶ್ಯಾಮಲಾ ಹಾಗೂ ಹ್ಯಾರಿಸ್ ಅವರ ವೈವಾಹಿಕ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅದು ಕಮಲಾ ಕೇವಲ ಏಳು ವರ್ಷದವಳಿದ್ದಾಗಲೇ ತಂದೆ, ತಾಯಿಗಳಿಗೆ ವಿವಾಹ ವಿಚ್ಛೇದನವಾಗಿತ್ತು. ಅಲ್ಲಿಂದ ಅವರು ಮುಂದೆ ತಾಯಿಯ ಸುಪರ್ದಿನಲ್ಲಿಯೇ ಬೆಳೆದರು. ಮುಂದೆ ಆಕೆ ಹನ್ನೆರಡು ವರ್ಷವಿದ್ದಾಗ ತಾಯಿಯೊಡನೆ ಕೆನಡಾದ ಮಾಂಟ್ರಿಯಲ್ ಕ್ಯುಬೆಕ್ಕಿಗೆ ಬಂದರು. ಆಗ ಶ್ಯಾಮಲಾ ಮ್ಯಾಕ್ಗಿಲ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ . ಕಮಲಾ ಅವರ ಪೌಢಶಾಲಾ ಶಿಕ್ಷಣ ಅಲ್ಲೇ ಆದರೂ , ನಂತರ ಪದವಿಗಾಗಿ ಅಮೆರಿಕಾಕ್ಕೆ ವಾಪಸ್ ಬರುತ್ತಾರೆ .

ಶ್ಯಾಮಲಾ ಮಕ್ಕಳಿಗೆ , ‘ನೀವು ಕಪ್ಪು ವರ್ಣೀಯರು . ನಿಮಗೆ ಬದುಕಿನಲ್ಲಿ ವರ್ಣದ ಬಲೆ ಬೀಸಿರುತ್ತದೆ , ಅದನ್ನು ಎದುರಿಸಲು ಸಿದ್ಧರಿರಬೇಕು ‘ ಎಂಬ ತಿಳಿವಳಿಕೆಯನ್ನು ಬಾಲ್ಯದಲ್ಲೇ ನೀಡಿರುತ್ತಾರೆ. ಅಮೆರಿಕೆಯಲ್ಲಿ ಆಫ್ರೋ ಅಮೆರಿಕರನ್ನು ನಡೆಸಿಕೊಳ್ಳುವ ದ್ವಂದ್ವ ನೀತಿಗೆ ತಾಯಿ ಕಮಲಾ , ಮಕ್ಕಳನ್ನು ಈಗಾಗಲೇ ಮಾನಸಿಕವಾಗಿ ಸಿದ್ಧಗೊಳಿಸಿದ್ದಳು . ಮಾಯಾ ಹಾಗೂ ಕಮಲಾ ಸೋದರಿಯರು ಕಪ್ಪು ವಿಶ್ವವಿದ್ಯಾಲಯ , ಕಪ್ಪು ವಿದ್ಯಾರ್ಥಿಗಳಿರುವ ಶಾಲಾ ಕಾಲೇಜುಗಳಲ್ಲಿಯೇ ಓದುತ್ತಾರೆ . ಕರಿಯರು ಇರುವ ಕಮ್ಯುನಿಟಿಯಲ್ಲೇ ಬೆಳೆಯುತ್ತಾರೆ , ಕರಿಯರೇ ಇರುವ ಚರ್ಚುಗಳಲ್ಲೇ ಪ್ರಾರ್ಥನೆ ಮಾಡುತ್ತಾರೆ , ಬಿಳಿ ಅಮೆರಿಕಾ ಜಗತ್ತಿನಲ್ಲಿ ವರ್ಣೀಯರ ಬದುಕು ಎಂತಹದು , ತಮ್ಮನ್ನು ಜಗತ್ತು ಹೇಗೆ ನೋಡುತ್ತದೆ , ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ .

ಅಮೆರಿಕಾ ದೇಶ ಎಷ್ಟೇ ಮುಂದುವರಿದ ದೇಶವಾದರೂ , ರಾಷ್ಟ್ರದ ಅತ್ಯುನ್ನತ ರಾಜಕೀಯ ಪದವಿಗಳಲ್ಲಿ ಇದುವರೆಗೂ ಹೆಣ್ಣೊಬ್ಬಳನ್ನು ಕೂಡಿಸಿ , ಅವಳ ಏಳ್ಗೆಯನ್ನು ಕಂಡು ಸಂಭ್ರಮಿಸಿಲ್ಲ . ವರ್ಣೀಯರನ್ನು ಆದರಿಸಿಲ್ಲ . ಬರಾಕ್ ಒಬಾಮ ಎಂಬ ಆಫ್ರೊ ಅಮೆರಿಕನ್ , ಅಮೆರಿಕಾ ರಾಷ್ಟ್ರಾಧ್ಯಕ್ಷರಾದ ಮೇಲೆ ಸ್ವಲ್ಪ ಮಟ್ಟಿಗಿನ ಪರಿಸ್ಥಿತಿ ತಿಳಿಯಾದರೂ , ಬಿಳಿ ಅಮೆರಿಕನ್ ಆದ ಹಿಲರಿ ಕ್ಲಿಂಟನ್ ಅವರು ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಟ್ರಂಪ್ ವಿರುದ್ಧ ಸ್ಪರ್ಧಿಸಿದ್ದರೂ , ಜನ ಯೋಗ್ಯ ಮಹಿಳೆಯೊಬ್ಬಳನ್ನು ಆಯ್ಕೆ ಮಾಡದೆ , ಟ್ರಂಪ್ ಅವರನ್ನು ಆಯ್ಕೆ ಮಾಡಿದ್ದು ಅಮೆರಿಕಾ ರಾಜಕೀಯ ಇತಿಹಾಸದಲ್ಲಿ ಆಗಿ ಹೋದ ಅಧ್ಯಾಯವೆ . ಇಂತಹ ಸಂದರ್ಭದಲ್ಲಿ ‘ ಲೇಡಿ ಒಬಾಮ ‘ ಎಂದು ಜನಪ್ರಿಯರಾದ ಕಮಲಾ ಹ್ಯಾರಿಸ್ , ಅಮೆರಿಕಾದ ಉಪಾಧ್ಯಕ್ಷೆಯಾಗಿರುವುದು ಸಣ್ಣ ಸಂಗತಿಯೇನಲ್ಲ . ಕಮಲಾ ಹ್ಯಾರಿಸ್ , ತನ್ನ ಸ್ವ ಸಾಮರ್ಥ್ಯದಿಂದಲೇ ರಾಜಕೀಯ ಬದುಕನ್ನು ರೂಪಿಸಿಕೊಂಡಿರುವ ಮಹಿಳೆ ಎಂಬುದು ಅಮೆರಿಕನ್ನರಷ್ಟೇ ಅಲ್ಲದೆ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದೆ .

ಕಮಲಾ ದೇಶದ ಇತಿಹಾಸದಲ್ಲಿ ಅನೇಕ ಪ್ರಮುಖ ಕಾನೂನು ಹೋರಾಟಗಳನ್ನು ಕೈಗೊಂಡ ಮಹಿಳೆ , ಅದ್ಭುತ ಭಾಷಣಕಾರ್ತಿ ಹಾಗೂ ಲೇಖಕಿ . ತಾಯಿ ಕಲಿಸಿ ಕೊಟ್ಟ ಪೊಂಗಲ್ ಹಾಗೂ ಮಸಾಲೆ ದೋಸೆಗಳನ್ನು ರುಚಿಕಟ್ಟಾಗಿ ಅಮೆರಿಕನ್ ಚಾನೆಲ್ ಒಂದರಲ್ಲಿ ಮಾಡಿ ತೋರಿಸಿದ್ದನ್ನು ಕಂಡಿದ್ದೆ . ಬಾಲ್ಯದ ನಾಲಿಗೆಗಿಳಿದ ರುಚಿ ಹೇಗೆ ತಾನೆ ಮರೆಯಲು ಸಾಧ್ಯ ? ಕಮಲಾ ಹ್ಯಾರಿಸ್ಎರಡು ವಿಚಾರ ಸಾಹಿತ್ಯ , ಹಾಗೂ ಒಂದು ಮಕ್ಕಳ ಕಥಾನಕವನ್ನೂ ಬರೆದು ಜನಪ್ರಿಯರಾಗಿದ್ದಾರೆ .

56 ವರ್ಷಗಳ ಕಮಲಾ ಹ್ಯಾರಿಸ್ 2014ರಲ್ಲಿ ವಿವಾಹ ವಿಚ್ಛೇದಿತ , ಎರಡು ಮಕ್ಕಳ ತಂದೆ ಅಟಾರ್ನಿ ಡೂಗಲ್ ವಿಮ್ಹಾಪ್ ಎಂಬ ಜ್ಯೂ ನನ್ನ ಮದುವೆಯಾದರು . ಆತನ ಬೆಳೆದ ಮಕ್ಕಳನ್ನು ಕಮಲಾ ಹ್ಯಾರಿಸ್ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು , ಆಕೆಯನ್ನು ಮಕ್ಕಳು ‘ಮೊಮಿಲಾ ‘ ಎಂದೇ ಕರೆಯುತ್ತಾರೆ . ಮೊಮಿಲಾ ಎಂದರೆ ಇಡ್ಡಿಷ್ ಭಾಷೆಯಲ್ಲಿ ಚಿಕ್ಕಮ್ಮ , ಎಂದರ್ಥ . ಜೊತೆಗೆ ‘ ಮೊಮ್ ಕಮಲಾ’ ಎಂದೂ ಅರ್ಥ ಎಂದು ಮಕ್ಕಳೇ ಹೇಳಿಕೊಂಡಿದ್ದಾರೆ . ಕಮಲಾಗೆ ಮಕ್ಕಳೆಂದರೆ ಪಂಚ ಪ್ರಾಣ . ತನಗೆ ಮಕ್ಕಳಿಲ್ಲದಿದ್ದರೂ , ತಂಗಿ ಮಾಯಾಳ ಮಕ್ಕಳನ್ನು ತನ್ನ ಮಕ್ಕಳಂತೇ ಸಲಹಿದ್ದಾರೆ . ನೊಂದು ದೌರ್ಜನ್ಯ , ಅನ್ಯಾಯಕ್ಕೊಳಗಾದ ಸಾವಿರಾರು ಮಕ್ಕಳ ಕಣ್ಣೀರನ್ನು ಕಠಿಣ ಕಾನೂನುಗಳ ಮೂಲಕ ಒರೆಸಿದ್ದಾರೆ .

ಕಮಲಾ ಹ್ಯಾರಿಸ್ ಕೈಗೊಂಡ ಕಾನೂನು ಸಮರಗಳು ಬಹಳ ಮುಖ್ಯವಾದವು . ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರಗಳು , ಕೊಲೆಗಳಿಗೆ ನಿರ್ದಾಕ್ಷಿಣ್ಯವಾಗಿ 25 ವರ್ಷಗಳ ಜೈಲು ಶಿಕ್ಷೆ , ಜೀವಾವಧಿ ಶಿಕ್ಷೆ , ಮರಣ ದಂಡನೆಗಿಂತ ಮೇಲಾದುದು ಎನ್ನುತ್ತಾ ಕಾನೂನಿನಲ್ಲಿ ಸುಧಾರಣೆ ತಂದಿದ್ದು , ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸುತ್ತ , ತಪ್ಪಿತಸ್ಥರಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಲಾಯಿತು . ಇಷ್ಟಲ್ಲದೆ ಕ್ಯಾಲಿಫೋರ್ನಿಯಾ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸಲಾಯಿತು . ( ಅಮೆರಿಕೆಯಲ್ಲಿ ರಾಜ್ಯಗಳಿಗೆ ತಮ್ಮದೇ ಆದ ಕಾನೂನಿನ ಅಧಿಕಾರವೂ ಇರುತ್ತದೆ .) ಆಕೆಯ ಬಹಳ ಮುಖ್ಯವಾದ ಕಾರ್ಯಗಳೆಂದರೆ , ಖಾಸಗೀ ಹಕ್ಕುಗಳನ್ನು ರಕ್ಷಣೆ ಮಾಡಿದ್ದು , ಆಪಲ್ , ಅಮೆಜಾನ್ , ಗೂಗಲ್ – ಮುಂತಾದ ಪ್ರಸಿದ್ಧ ಕಂಪನಿಗಳು ತಮ್ಮ ಗ್ರಾಹಕರಿಗೆ ತಮ್ಮ ಕಂಪನಿಯ ಖಾಸಗೀ ಮಾಹಿತಿಗಳನ್ನು ಒದಗಿಸುವಂತಹ ಒಪ್ಪಂದವನ್ನು ತಂದಿದ್ದು . ಜಿ ಬಿ ಟಿ ಹಕ್ಕುಗಳನ್ನು ರಕ್ಷಿಸಿ , ಸಲಿಂಗ ವಿವಾಹಗಳಿಗೆ ಕಾನೂನಾತ್ಮಕ ಮುದ್ರೆ ಒದಗಿಸಿದ್ದು , ಸಾರ್ವಜನಿಕ ಪರಿಸರ ರಕ್ಷಣೆ – ಇಂತಹ ಕಾನೂನಾತ್ಮಕ ಸುಧಾರಣೆಗಳನ್ನು ತಂದು ಅಮೆರಿಕಾ ದೇಶದ ಶಕ್ತಿಯುತ ಮಹಿಳೆ , ಎಂದು ಗುರುತಿಸಲ್ಪಟ್ಟರು .

ಭಾರತೀಯರು , ಆಕೆ ಭಾರತದ ಬಗ್ಗೆ ಏನೂ ಮಾತಾಡಿಲ್ಲ , ತನ್ನನ್ನು ಭಾರತೀಯಳು ಎಂದು ಹೇಳಿಕೊಳ್ಳದೆ ‘ ಕಪ್ಪು ಮಹಿಳೆ’ ಎಂದೇ ಹೇಳಿ ಕೊಳ್ಳುತ್ತಿದ್ದಾರೆ , ಎಂದು ಆಪಾದಿಸುತ್ತಿರುವುದೂ ಉಂಟು . ಆಕೆ ಮೂಲತಃ ಹುಟ್ಟಿನಿಂದ ಅಮೆರಿಕಾ ಪ್ರಜೆ . ಆಕೆಯ ತಾಯಿ ಹುಟ್ಟಿನಿಂದ ಭಾರತೀಯಳಾದರೂ , ಅಮೆರಿಕಾ ಪ್ರಜೆಯಾಗಿ , ಆಫ್ರಿಕಾ ದೇಶದ ಸಂಜಾತ ಹ್ಯಾರಿಸ್ ನನ್ನು ಮದುವೆಯಾಗಿದ್ದು , ಶಾಲಾ ದಾಖಲಾತಿಯಲ್ಲೂ ಅವರು ಅಮೆರಿಕನ್ನರೇ ಆಗಿದ್ದಾರೆ . ಹೀಗಾಗಿ ತನ್ನ ದೇಶ ಅಮೆರಿಕಾ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ ? ಇನ್ನೂ ಮುಖ್ಯವಾಗಿ ಆಕೆ ತಾನು ಆಫ್ರೋ ಅಮೆರಿಕನ್ ಎಂದು ಹೇಳಿ ಕೊಂಡಾಗಲೇ ಹೆಚ್ಚು ರಾಜಕೀಯ ಲಾಭ ಉಂಟು .ಆಕೆ ತನ್ನ ತಾಯಿ , ತಾತ , ಭಾರತೀಯ ಬಂಧು – ಬಾಂಧವರ ಬಗ್ಗೆಯೂ ಅಷ್ಟೇ ಹೆಮ್ಮೆಯಿಂದ ಹೇಳಿ ಕೊಂಡಿದ್ದಾರೆ . ಪುರುಷ ಪ್ರಾಧಾನ್ಯವಿರುವ ರಾಜಕೀಯ ಜಗತ್ತಿನಲ್ಲಿ ಮಹಿಳೆಯೊಬ್ಬಳು ಆ ರಾಷ್ಟ್ರದ ಅತ್ಯುನ್ನತ ಪದವಿಯಲ್ಲಿ ವಿರಾಜಿಸಿದ್ದಾಳೆ , ಎನ್ನುವುದು ಹೆಮ್ಮೆಪಡಬೇಕಾದ ವಿಷಯವೆ . ಆಕೆ ಉಪ ರಾಷ್ಟ್ರಾಧ್ಯಕ್ಷೆಯಾಗಿ ಮಾಡಿದ ಮೊದಲ ಅದ್ಭುತವಾದ ಭಾಷಣದಲ್ಲಿ ‘ಅಮೆರಿಕಾದ ಅತ್ಯುನ್ನತ ರಾಜಕೀಯ ಕಛೇರಿಯನ್ನು ಪ್ರವೇಶಿಸುತ್ತಿರುವ ಮೊದಲ ಮಹಿಳೆ ನಾನಾದರೂ , ಕೊನೆಯಲ್ಲ ‘, ಎಂಬ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಲೇ ಇದೆ .

ಕಪ್ಪು ಮಹಿಳೆಯರು , ಆಫ್ರೋ ಅಮೆರಿಕನ್ ಮಹಿಳೆಯರು ಇಂದಿಗೂ ತಮ್ಮ ಹಕ್ಕುಗಳಿಗಾಗಿ ಬಿಕ್ಕುತ್ತಿರುವ ಈ ಹೊತ್ತಿನಲ್ಲಿ ಅಂತಹ ಜನಾಂಗಕ್ಕೆ , ಇಡೀ ಮಹಿಳಾ ಜಗತ್ತಿಗೆ ಭರವಸೆಯ ಬೆಳಕಾಗಿರುವ ಕಮಲಾ ಹ್ಯಾರಿಸ್ ಗೆ ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು ಸಲ್ಲಲೇ ಬೇಕಾಗಿದೆ .

‍ಲೇಖಕರು avadhi

November 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: