‘ಪ್ಲೇಗ್’ ಎಂಬ ಭರವಸೆ…

ಫಣಿಕುಮಾರ್ ಟಿ ಎಸ್

ದುರಿತ ಕ್ಷಣಗಳಲ್ಲಿ ಸಭ್ಯ, ಸರಳ‌ ನಡವಳಿಕೆಗಳೇ ಪರಾಕ್ರಮಗಳೆನಿಸಿಕೊಳ್ಳುತ್ತವೆ..

ನಲವತ್ತರ ದಶಕದಲ್ಲೇ ಕಮೂ ಪ್ಲೇಗ್ ಬರೆದ. ಎಚ್.ಎಸ್.ಆರ್ ಅವರು ಈಗ ಅದನ್ನು ಮನೋಜ್ಞವಾಗಿ‌‌ ಕನ್ನಡಕ್ಕೆ ತಂದಿದ್ದಾರೆ. ಹಾಗಾಗಿ ಜ್ವರದ ರೀತಿ ಅದನ್ನು ಮತ್ತೊಮ್ಮೆ ಓದುವ ಅವಕಾಶ.

ಒಂದೆಡೆ ಬದುಕಿನ‌ ನಿರರ್ಥಕತೆ, ಇನ್ನೊಂದೆಡೆ ಅದೇ ಬದುಕಿನಲ್ಲಿ ಮನುಷ್ಯ ತನ್ನ ಜೀವನದ ಅರ್ಥವನ್ನು ಶೋಧಿಸುವಿಕೆ- ಇವುಗಳ ನಡುವಿನ ನಿರಂತರ ಸಂಘರ್ಷ ಕಮೂನ ಎಲ್ಲ ಕೃತಿಗಳಲ್ಲಿ ಇಣುಕಿದೆ. ಅದನ್ನು ಅವನ theory of absurdity ಅಂದರು. ಶಂಕರರು ಪುನರಪಿ ‌ಜನನೇ ಜಠರೇ ಶಯನಂ ಅಂದಾಗಲೂ ‌ಅದೇ ಅಸಹಾಯಕ ಭಾವ. ಅದಕ್ಕೆ ಅವರು ಕೃಪಯಾ ಪಾರೇ ಅಂದು ಮನುಷ್ಯನ ಮಿತಿಯನ್ನು ನೆನಪಿಸಿದ್ದು. ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿಯೆಂಬ ಪ್ರಾರ್ಥನೆಯಲ್ಲಿನ ವ್ಯಾಕುಲತೆಯೂ ಅದೇ.

ಒಂದು, ನಾವು ಎಂದೂ ಯುದ್ಧ ಸನ್ನದ್ಧರಲ್ಲ ಎನ್ನುವುದು. ಎರಡು, ಯುದ್ಧ ಕಡೆಗೆ ಸೋಲು ಗೆಲುವಿನದ್ದಷ್ಟೇ ಅಲ್ಲ ಎನ್ನುವುದು. ಆದರೆ, ಯಾವುದೇ ಆಕ್ರಮಣವನ್ನು ಸಂಯಮದಿಂದ ಎದುರುಗೊಳ್ಳುವಿಕೆಯಲ್ಲಿಯೇ ಆರಂಭಗೊಳ್ಳುವುದು ಅದೇ ಜೀವನ‌ಶೋಧ. ಪ್ಲೇಗ್ ಕೃತಿ ಆ ನಿಟ್ಟಿನಲ್ಲಿ ಉಲ್ಲೇಖಾರ್ಹ. 

ಈ ಕತೆ ಬರೆಯುವಾಗ ಕಮೂ ಹಲವು ಆಲೋಚನೆಗಳನ್ನು ಹೊಂದಿದ ಬಗ್ಗೆ ಸಾಕ್ಷಿಯಾಗಿ ಅವನು ಹೇಳಿದ ಒಂದು ಉಲ್ಲೇಖವಿದೆ. Plague is at the same time a tale about an epidemic, a symbol of Nazi occupation, and, the concrete illustration of a metaphysical problem, that of evil. ಹಾಗಾಗಿ, ಕತೆಗೆ ಹಲವು ಚಾರಿತ್ರಿಕ ಆಯಾಮಗಳು. ಆದರೆ, ಇಂದಿನ ಭಾವನೆಗಳಿಗೆ ಹೋಲಿಸಿಕೊಂಡೂ ಅದನ್ನು ಓದಬೇಕಿಲ್ಲ. ಈ ಕಾದಂಬರಿಯ ಕನ್ನಡಿಯಲ್ಲಿ ನಾವು ನಮ್ಮದೇ ದ್ವಂದ್ವಗಳನ್ನು, ತಲ್ಲಣಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ ಎಂದು ಎಚ್.ಎಸ್. ಆರ್ ಬರೆದರೆನ್ನುವುದು ಮುಖ್ಯ.

ಕತೆಯ ನಿರೂಪಕನಾಗಿ, ಕಮೂ ಒಂದು ಕಡೆ ಬರೆಯುವುದು ನೋಡಿ. ‘ನಾವು ನಡೆದ ಘಟನೆಗಳಿಗೆ ಅನ್ಯಾಯ ಮಾಡಬಾರದು. ಏಕೆಂದರೆ ಈ ನಿರೂಪಕನು ಇರುವುದನ್ನು, ಇಲ್ಲದ್ದನ್ನು ಬಣ್ಣ ಕಟ್ಟಿ ಸ್ವತಃ ತನ್ನ ಆತ್ಮಸಾಕ್ಷಿಗೆ ಅನ್ಯಾಯ‌ ಮಾಡಿಕೊಳ್ಳಲಾರ. ಆದ್ದರಿಂದಲೇ ಈ ಕಥಾನಕವು ವಸ್ತುನಿಷ್ಠವಾದ ನಿರೂಪಣೆಯನ್ನೇ ಏಕೈಕ ಗುರಿಯಾಗಿ ಇಟ್ಟುಕೊಂಡಿದೆ. ಅವನು ಕಲಾತ್ಮಕ ಉದ್ದೇಶಕ್ಕಾಗಿ ಅದನ್ನು ಯಾವುದೇ ಬದಲಾವಣೆ  ಮಾಡಲಾರ’. ಅವನ ಮಾತುಗಳಲ್ಲಿ ಎಲ್ಲಿಯೂ ರಸ ಚಮತ್ಕಾರಕ್ಕೆ ಅವಕಾಶವಿಲ್ಲ. ಹಾಗಾಗಿ, ಅಲ್ಲಿ ಎಲ್ಲವೂ ನೇರ‌ ಸರಳ ಮುಖಾಮುಖಿಗಳು.

ಮೌನಕ್ಕೆ ಪ್ರಾಧಾನ್ಯ ನೀಡುವ, ಮಾತಿನಿಂದ ಮಲಿನವಾಗದ ಸಂವಾದಗಳು.‌ ‘ವಸ್ತುನಿಷ್ಠವಾದ, ನಿಷ್ಪಕ್ಷಪಾತವಾದ ಸಾಕ್ಷಿಯ ನಿಲುವುಗಳು’.
ಒರಾನ್ ಎಂಬ ಬಂದರಿನ ಪಟ್ಟಣದಲ್ಲಿ ಅಪಶಕುನಗಳ ಸರಮಾಲೆ ಆರಂಭವಾಗುತ್ತಿದ್ದಂತೆ ಜನರು ಎಚ್ಚರ ತಪ್ಪುತ್ತಾ ಹೋಗುತ್ತಾರೆ. ಇಲಿಗಳ ಸರಣಿ‌‌ ಸಾವುಗಳ ಮೂಲಕ ಪ್ಲೇಗ್ ನಿಧಾನವಾಗಿ ಎಲ್ಲ‌ ಕಡೆ ಆವರಿಸಿಕೊಳ್ಳುತ್ತದೆ. ಆಗ ವಿಲಾಸಕ್ಕೆ ಹೆಸರಾದ ಊರಿನ ಜನ‌ ವಿಭ್ರಾಂತರಾಗುವ ಸರದಿ. ನಿಯಂತ್ರಣ ತಪ್ಪಿದ‌ ಮೇಲೆ ಊರಿನ‌ ಬಾಗಿಲುಗಳು ಬಂದಾಗುತ್ತವೆ. ಜನ ಬೆದರಿ ಮನೆಗಳನ್ನು ಸೇರಿಕೊಳ್ಳುತ್ತಾರೆ. ಕಡೆಗೆ ಸಾವೆನ್ನುವುದೂ ಜನರಲ್ಲಿನ ಸೂಕ್ಷ್ಮತೆಯನ್ನು ಕಸಿಯುತ್ತದೆ. 

ಒರಾನಿನಲ್ಲಿ ಪ್ಲೇಗ್ ಆವರಿಸುತ್ತಾ ಹೋದಂತೆ ಜನಸಮುದಾಯದ ಆತಂಕವನ್ನು ನಿವಾರಿಸುವ ಪ್ರಮುಖ ಪಾತ್ರಗಳು ಮುನ್ನೆಲೆಗೆ ಬರುತ್ತವೆ. ಕತೆಯ ನಾಯಕ ಹಾಗೂ ನಿರೂಪಕ ಡಾ.ಬರ್ನಾರ್ಡ್ ರಿಯೂ, ಆತನ ಆಪ್ತ ಮಿತ್ರ ಜೀನ್ ತಾಹು, ಲೇಖಕ ಜೋಸೆಫ್ ಗ್ರಾಂಡ್, ಪತ್ರಕರ್ತ ರೋಂಬೆ, ಅಪರಾಧಿಯೆನಿಸಿಕೊಂಡ ಕೊತಾ, ಸೇರಿದಂತೆ ಎಲ್ಲ ಪಾತ್ರಗಳೂ ಒಂದು ನಿಶ್ಚಯ ತನ್ಮಯತೆಯನ್ನು ‌‌ಪೋಷಿಸುತ್ತವೆ.

ಒಣ ವೈಚಾರಿಕತೆಯನ್ನು ಮೀರುತ್ತಾ, ಮಾನವೀಯ ಅವಕಾಶಗಳನ್ನು ಅವಲೋಕಿಸುತ್ತಾ, ಒಂದು ಅಗಾಧ ಸಂಕಟವನ್ನು ತಮ್ಮ ಅನಾಮಿಕತೆಯ ಮೂಲಕ, ತಮ್ಮ ಮಿತಭಾವದ ಮೂಲಕ, ಆತ್ಮ‌ಸಂಯಮದ‌ ಮೂಲಕ ಒಗ್ಗಟ್ಟಾಗಿ  ಎದುರಿಸುತ್ತಾ ಸಾಗುತ್ತವೆ. ಇಡೀ ಕತೆಯು ಸೃಷ್ಟಿಸುವ ನನ್ನ ಜೀವ ಮುಖ್ಯವಲ್ಲ, ನಿನ್ನದೂ ಕೂಡಾ ಎನ್ನುವ ಮಾದರಿಯ ಸಕಾರಾತ್ಮಕ ಸಾಧ್ಯತೆಯನ್ನು, ಮೈ ನವಿರೇಳಿಸುವಿಕೆಯನ್ನು ಓದಿಯೇ ಅನುಭವಿಸಬೇಕು.‌

ಅದರ ಸಾರವೆಂಬಂತೆ ರಿಯೂ, ಹಾಗೂ ಆತನ ಮಿತ್ರ ಜೀನ್ ತಾಹೂ‌ ನಡುವಿನ ಸಂಭಾಷಣೆ ಇದೆ. ಕತೆಯ ಉತ್ತರಾರ್ಧದಲ್ಲಿ ಬರುವ ಆ ಸಂಭಾಷಣೆ ಯುದ್ಧ, ಹತಾಶೆ, ಭರವಸೆ, ಸಂಯಮ, ಸೃಷ್ಟಿ ಹೀಗೆ ಎಲ್ಲದರ ಮೇಲೆ ಬೆಳಕು ಚೆಲ್ಲುತ್ತಾ ಸಾಗುತ್ತದೆ. ಅಷ್ಟಾದಶಾಧ್ಯಾಯದ ರೀತಿ!
ಒಂದು ಕಡೆ ತಾಹೂ ಹೇಳುವುದು ನೋಡಿ. ‘ಈ ಪ್ಲೇಗು ನಮ್ಮೆಲ್ಲರೊಳಗೂ ಇದೆ. ಈಗಾಗಲೇ‌ ಇದೆ. ಇರುತ್ತದೆ. ಈ ಲೋಕದಲ್ಲಿ ಯಾರೂ ಇದರಿಂದ ಸುರಕ್ಷಿತರಲ್ಲ. ಮತ್ತು ಅದೇ ಸಹಜವಾದದ್ದು. ಉಳಿದೆಲ್ಲವೂ ಆರೋಗ್ಯ, ಪ್ರಾಮಾಣಿಕತೆ, ಪರಿಪೂರ್ಣತೆ- ಎಲ್ಲವೂ ಮನುಷ್ಯ ತನ್ನ‌ ಇಚ್ಛಾಶಕ್ತಿಯಿಂದ ಪಡೆದುಕೊಳ್ಳುವ, ಎಚ್ಚರಿಕೆಯಿಂದ ಮಾತ್ರವೇ ಕಾಪಾಡಿಕೊಳ್ಳುವ ಸಂಗತಿಗಳು.’

ಮತ್ತೊಂದು ಸಂವಾದ ಹೀಗಿದೆ. ಪಾದ್ರಿ ಫೆನೆಲೋ ಹೇಳುವುದು: ‘ಮನುಷ್ಯನ ಕಣ್ಣಲ್ಲಿ ಕ್ರೂರವಾಗಿ ಕಾಣುವುದು ದೇವರ ಕಣ್ಣಲ್ಲಿ ನಿರ್ಣಾಯಕವಾಗಿ ಕಾಣುತ್ತದೆ.’ ಡಾ.ರಿಯೂ ಹೇಳುವುದು: ‘ನನ್ನ ಕಲ್ಪನೆಯ ಪ್ರೀತಿಯೇ ಬೇರೆ. ಚಿಕ್ಕ ಮಕ್ಕಳಿಗೂ ಚಿತ್ರಹಿಂಸೆ ಕೊಡುವ ಲೋಕನಿಯಮವನ್ನು, ಇಂತಹ ಸೃಷ್ಟಿಯನ್ನು ನಾನು ಪ್ರೀತಿಸುವುದಿಲ್ಲ. ಎರಡೂ ಪಾತ್ರಗಳ ಖಚಿತತೆ. ಆ ಪಾತ್ರಗಳ ನಡೆಗಳು ನಮ್ಮೊಳಗಿನ ತಳಮಳಗಳಿಗೆ ಕೂಡಾ ಉತ್ತರಗಳಾದವು!

ಕತೆಯ ಇನ್ನೂ ಕೆಲವು ಸಾಲುಗಳು. ಅವುಗಳ ಕಾಲಾತೀತ ಭಾವಗಳು: ಅವು ರೂಪಾಂತರಗೊಂಡಿರುವ ಸೊಗಸನ್ನು ಗಮನಿಸಬಹುದು.

‘ಯಾವುದಾದರೂ ಒಂದು ದುರದೃಷ್ಟದ ಬಗ್ಗೆ ಯೋಚಿಸುವಾಗ ಇಂದ್ರಿಯಗಳಿಗೆ ನಿಲುಕದ ಯಾವುದೋ ಒಂದು ಆಯಾಮ ಸೇರಿಕೊಳ್ಳುತ್ತದೆ. ಅದು ಅವಾಸ್ತವ, ಅಮೂರ್ತ ಎನಿಸತೊಡಗುತ್ತದೆ. ಆದರೆ ಅಮೂರ್ತವೆನ್ನುವುದು‌ ಕಣ್ಣೆದಿರಿನಲ್ಲೇ ಮನುಷ್ಯರನ್ನು ಕೊಲ್ಲತೊಡಗಿದಾಗ ಅದರ ಬಗ್ಗೆ ಏನಾದರೂ ಮಾಡುವುದು ಅನಿವಾರ್ಯವಾಗುತ್ತದೆ. ನಾವು‌ ಮಾಡುವ ಕೆಲಸದಲ್ಲೆಲ್ಲೂ ಅಮೂರ್ತತೆಯ ಸುಳಿವಿರುವುದಿಲ್ಲ’
‘ಕರುಣೆಯಿಂದ ಏನೂ ಪ್ರಯೋಜನವಿಲ್ಲವೆಂದು ಗೊತ್ತಾದಾಗ ಅದರಿಂದ ದಣಿವಾಗುತ್ತದೆ. ಅದು ಕಾಣೆಯಾಗುತ್ತದೆ.’
‘ಕೆಲವು ಸಲ ನಿರ್ಲಿಪ್ತತೆ ಸಂತೋಷಕ್ಕಿಂತ ಸಮರ್ಥವಾಗುತ್ತದೆ’

‘ಹತಾಶೆಯನ್ನು ಹೇಗೋ ನಿರ್ವಹಿಸಬಹುದು. ಅದನ್ನು ಮೀರಬಹುದು. ಆದರೆ ಅನೇಕರಿಗೆ ಹತಾಶೆಯೇ‌ ಒಂದು ಮನೋಧರ್ಮವಾಗಿಬಿಡುತ್ತದೆ. ಎಲ್ಲ ಸನ್ನಿವೇಶಗಳಲ್ಲಿಯೂ ಅವರದು ಅದೇ ಪ್ರತಿಕ್ರಿಯೆ ಆಗಿರುತ್ತದೆ. ಆದ್ದರಿಂದ ನಿಜವಾದ ಹತಾಶೆಗಿಂತಾ ಅದು ಅಭ್ಯಸ್ಥ ಸ್ಥಿತಿಯಾಗುವುದು ಹೆಚ್ಚು ಭೀಕರ’

‘ಆತ್ಮೀಯರೂ, ಪ್ರೀತಿಪಾತ್ರರೂ ಆದವರ ಸಾವು ನಮ್ಮ ಕಾಲದ ಬಹುದೊಡ್ಡ ಯಾತನೆ, ಅತ್ಯಂತ ಆಳ ವಿಷಾದ ಎನ್ನುವುದು ನಿಜವಾದರೂ, ಪ್ಲೇಗಿನ ಕಥಾನಕದ ಈ ಹಂತದಲ್ಲಿ ಆ ಯಾತನೆಗೆ ಸಂಬಂಧಿಸಿದ ಹೊಸ ವಿವರಗಳನ್ನು ಕೊಡುವುದು ಅವನ‌ ಕರ್ತವ್ಯವಾದರೂ ಅದು ತನ್ನ ಮೊನಚನ್ನು, ಉತ್ಕಟತೆಯನ್ನು ಕಳೆದುಕೊಂಡಿತೆನ್ನುವುದು ಅಷ್ಟೇ ನಿಜ.’

‘ಈ ಮಾತು ಮನುಷ್ಯನಿಗೆ ಬರುವ ಎಲ್ಲ ರೋಗಗಳ ವಿಷಯದಲ್ಲಿಯೂ ನಿಜ. ಈ ಲೋಕದ ಯಾವುದೇ ದುಷ್ಟ ಸಂಗತಿಯ ಬಗ್ಗೆ ಹೇಳುವುದನ್ನು ಪ್ಲೇಗ್ ಬಗ್ಗೆಯೂ ಹೇಳಬಹುದು. ಅವೆಲ್ಲವೂ ಮನುಷ್ಯನನ್ನು ಒಂದಷ್ಟು ಅಂತರ್ಮುಖಿಯಾಗಿ ಮಾಡುತ್ತವೆಯಷ್ಟೇ.’

ಪ್ಲೇಗ್ ಓದುವಾಗಲೆಲ್ಲಾ ಈ ಜಗದಲ್ಲಿ ಒಂದೇ‌ ಕತೆ ಹಲವು ರೂಪ ತಾಳುತ್ತದೆ ಮತ್ತು ಈ ಎಲ್ಲ ಕತೆಗಳ ಹಿಂದೆ ಇರುವ ಒಂದೇ ಕತೆಯದು‌ ಅನಂತ ರೂಪ ಎಂದ ಬೇಂದ್ರೆ ‌‌ನೆನಪಾಗುತ್ತಾರೆ. ಅಂದು ಒರಾನಿನಲ್ಲಿ ಆದದ್ದೇ ಮತ್ತೆಂದೋ ಬೆಂಗಳೂರಿನಲ್ಲಾಯಿತು. ಸೂರತ್ ನಮ್ಮ ಕಣ್ಣಮುಂದೆಯೇ ಇತ್ತು. ಎಲ್ಲ ಸಂದರ್ಭದಲ್ಲಿಯೂ ಡಾ.ರಿಯೂ ಅಂತಹ ಸೇನಾನಿಗಳೇ ಅದನ್ನು ನಿಯಂತ್ರಿಸಿದರು. ಅಲ್ಲಿ ಅಹಂಕಾರಕ್ಕೆ ಅವಕಾಶವಿರಲಿಲ್ಲ. 

ಇಂದನ್ನು ದೂರವಿರಿಸಿದರೂ, ಜೊತೆಗಿಟ್ಟುಕೊಂಡು ಆಲೋಚಿಸಿದರೂ ಪ್ಲೇಗ್ ತನ್ನನ್ನು ತಾನೇ ದಾಟಿ ಅನಂತವಾಗುತ್ತದೆ. ಇಂತಹ ಅನಿಶ್ಚಿತ ಸಂದರ್ಭದಲ್ಲಿ ಹೊಂದಾಣಿಕೆಯ ವಿಕಸನವನ್ನು, ಯಾತನೆಯ ಕ್ಷಣಗಳನ್ನು ಮೀರಲು ಬೇಕಾದ ಕ್ಷಮತೆಯನ್ನು ಅದು ನಮ್ಮ ಕಣ್ಮುಂದಿಡುತ್ತದೆ. ವಿಶೇಷವಾಗಿ, ಯಾತನೆಯೆನ್ನುವುದು ಕೊನೆಯಲ್ಲ, ಬದುಕೆನ್ನುವುದು ವಿಕಾಸವಷ್ಟೇ ಎನ್ನುವ ವಿಶ್ವಾಸವನ್ನು ಸಹ ಅದು ಮೂಡಿಸುತ್ತದೆ. 
ಇದು ನಿಸ್ಸಂಶಯವಾಗಿ ಅತ್ಯುತ್ತಮ ರೂಪಾಂತರ ಕೃತಿ.

ಮನಸ್ಸು ಮಾಗಿದಾಗ ರೂಪುಗೊಂಡ ಅಂತಃಕರಣ. ಕನ್ನಡದ ಪಾತ್ರಗಳೇ ಅನಿಸುವಷ್ಟು ಅದ್ಭುತವಾಗಿ ಅದನ್ನು ಎಚ್.ಎಸ್.ಆರ್ ಅನುವಾದಿಸಿದ್ದಾರೆ. ಆದ ಕಾರಣ, ಸಂಸ್ಕಾರದ ನಾರಣಪ್ಪನ ಪ್ಲೇಗ್ ನಿರೂಪಿತ ಸಾವು ಇನ್ನೆಲ್ಲೋ ಸೃಷ್ಟಿಸಿದ ತಲ್ಲಣಗಳು, ಕಡೆಗೆ ಅಪರಾಧದ ಮೂಲಕವೇ ಆಗುವ ಆತ್ಮ ಸಾಕ್ಷಾತ್ಕಾರದ ಹಾದಿಗಳು ಕೂಡಾ ಬೇಡವೆಂದರೂ ನೆನಪಾಗುತ್ತವೆ. ಹಾಗೆಂದಾಗ, ಕಲೆಯ ಮೂಲಕವೇ ವಿಕಾಸವು ಪೊರೆಯಬೇಕು! ಕಲೆಯೇ ಅನುಭವವನ್ನು ಉದ್ದೀಪಿಸಬೇಕು. ಉಳಿದೆಲ್ಲವೂ ಕ್ಷುಲ್ಲಕ.

‍ಲೇಖಕರು Admin

August 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: