ಎಚ್ ಎಲ್ ಪುಷ್ಪ ಕಂಡಂತೆ ಗುಡಿಹಳ್ಳಿ ನಾಗರಾಜ್

ಎಲೆಗಳುದುರುವ ಕಾಲ

ಡಾ ಎಚ್ ಎಲ್ ಪುಷ್ಪ

ಇತ್ತೀಚೆಗೆ ಸಂಭವಿಸುತ್ತಿರುವ ಸಾವುಗಳು ದಿಕ್ಕುಗೆಡಿಸುವಂತವು, ದಿಗ್ಭ್ರಮೆ ಉಂಟುಮಾಡುವಂತವು. ‘ಜವರಾಯ ಬಂದರೆ ಬರಿಗೈಲಿ‌ ಬರುವನೇ, ಒಳ್ಳೊಳ್ಳೆ ಮರವ ಕಡಿಬಂದ’ ಎಂಬ ಸಾವನ್ನು ಕುರಿತಾದ ಮಾತುಗಳು ಕ್ಷಣಿಕ‌ ಶಮನವನ್ನು ಕೊಡುವಂತವಾಗಿವೆ. ಹಾಗೆಯೇ ಕೊರೋನಾ ಕಾಲಘಟ್ಟದ ಸಾವುಗಳಿಗೆ ಸಾಕ್ಷಿಗಳಂತೆ ಬದುಕುತ್ತಿರುವ ನಾವು ಮುಂದೆ ಇಂತಹ ಕಾಲಘಟ್ಟವನ್ನು ಕಾಣಲಾರೆವು. ಆದರೆ ಮುಂದಿನ‌ ಜನಾಂಗಕ್ಕೆ ಇಂತಹ‌ ಕಾಲವೊಂದನ್ನು‌ಕಂಡಿದ್ದೆವು ಎಂದು ಹೇಳಬಲ್ಲೆವು. ಎಲ್ಲ ಸಾವುಗಳನ್ನು ಕೊರೋನಾದ ಸಾವುಗಳೆಂದೇ ಪರಿಗಣಿಸುತ್ತಿರುವ ಸಂದರ್ಭದಲ್ಲಿ ಸಂಭವಿಸುವ ಕೆಲ ಆತ್ಮೀಯರ ಅನಾರೋಗ್ಯದ ಸಾವುಗಳು ನಮ್ಮನ್ನು ಕಾಡಿಸುತ್ತವೆ.

ಗುಡಿಹಳ್ಳಿ ನಾಗರಾಜ್ ನಮ್ಮಿಂದ ನೆನ್ನೆ ತಾನೇ ದೂರವಾಗಿದ್ದಾರೆ. ರೂಮಿ ಒಂದು ಕಡೆ ‘ನನ್ನ ಸಾವನ್ನು ಸಮಾಧಿಯಲ್ಲಿ ಹುಡುಕಬೇಡಿ, ಮನುಷ್ಯರ ಎದೆಗೂಡೊಳಗೆ ಹುಡುಕಿ’ ಎನ್ನುತ್ತಾನೆ. ಹಾಗೆಯೇ ರಂಗಭೂಮಿ ಕ್ಷೇತ್ರದಲ್ಲಿ‌ ತಮ್ಮನ್ನು ತೊಡಗಿಸಿಕೊಂಡ ಗುಡಿಹಳ್ಳಿ‌ ಅಕ್ಷರಶಃ ರಂಗಭೂಮಿಯ ಬಳಗವಾಗಿಯೇ ಕೊನೆಗಾಲದವರೆಗೂ ಜೀವಿಸಿದರು.ಮುಖ್ಯವಾಗಿ ವೃತ್ತಿರಂಗಭೂಮಿ ಒಳಗೊಂಡಂತೆ ಹವ್ಯಾಸಿ ರಂಗಭೂಮಿಯವರೆಗೆ ಅವರು ತಮ್ಮನ್ನು ತೊಡಗಿಸಿಕೊಂಡ ವ್ಯಾಪ್ತಿ ಬಹುದೊಡ್ಡದು.

‘ಪ್ರಜಾವಾಣಿ’ ಪತ್ರಿಕೆಯ ಸಮೂಹದಲ್ಲಿದ್ದು ‘ಸುಧಾ’ ವಾರಪತ್ರಿಕೆಯಲ್ಲಿ ತಮ್ಮನ್ನು‌ ಅವರು ತೊಡಗಿಸಿಕೊಂಡಿದ್ದರು. ಬಳ್ಳಾರಿ ಜಿಲ್ಲೆ, ಹರಪ್ಪನಹಳ್ಳಿಯ ಗುಡಿಹಳ್ಳಿಯವರಾದ ಅವರು ಗುಡಿಹಳ್ಳಿ ನಾಗರಾಜ್ ಎಂದೇ ಪತ್ರಿಕಾ ವಲಯದಲ್ಲಿ ಪರಿಚಿತರು. ಗುಡಿಹಳ್ಳಿ ನಾಗರಾಜ್ ಮತ್ತು‌ ನನ್ನ ಗಂಡ ಆರ್.ಜಿ.ಹಳ್ಳಿ ನಾಗರಾಜ್ ಅವರ ಹೆಸರುಗಳನ್ನು ಜನ ಗುರುತಿಸುವಲ್ಲಿ ಅದಲು ಬದಲು, ಕಂಚಿ ಕದಲು ಎನ್ನುವಂತೆ ಗೊಂದಲಕ್ಕೆ ಈಡಾಗುತ್ತಿದ್ದುದ್ದು ಉಂಟು. ಆಗ ಇಬ್ಬರೂ ಗೆಳೆಯರು ಪರಸ್ಪರ ಹುಸಿಮುನಿಸಿನಿಂದ ಜಗಳವಾಡುತ್ತಿದ್ದರು. ಸದಾ ಬ್ಯಾಗೊಂದನ್ನು ಹೆಗಲಿಗೇರಿಸಿ ಶಿಸ್ತಿನ ವಿದ್ಯಾರ್ಥಿಯ ಹಾಗೆ ಕಾಣುತ್ತಿದ್ದ ಅವರ ರಂಗಭೂಮಿಯ ವೃತ್ತಿಪರ ಗುಣ ಎಲ್ಲರೂ ಮೆಚ್ಚುವಂತದ್ದಾಗಿತ್ತು.

ರಂಗವಿಮರ್ಶೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಅವರ ಪ್ರಜಾವಾಣಿಯ ವಿಮರ್ಶೆಗಳು ಲೇಖನಗಳು ಇಂದಿಗೂ ಗಮನ ಸೆಳೆಯುವಂತವು. ಪತ್ರಿಕೆಗಳಲ್ಲಿ ರಂಗವಿಮರ್ಶೆಯನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲಿವೆ. ಒಂದು ವಿಮರ್ಶೆ ನಾಟಕವನ್ನು ಅಳಿಸಬಲ್ಲದು ಮತ್ತು ಉಳಿಸಬಲ್ಲದು ಎಂಬುದನ್ನು ಬಲ್ಲ ಅವರ ಲೇಖನಗಳು ಜವಾಬ್ದಾರಿಯುತವಾಗಿದ್ದವು. ಪತ್ರಿಕೆಗಳಲ್ಲಿ ಪ್ರಕಟವಾಗುವ ರಂಗವಿಮರ್ಶೆಗಳು ನಾಟಕವೆನ್ನುವ ಒಂದು ಸಮೂಹವ್ಯವಸ್ಥೆಯ ಸಾಧ್ಯತೆಗಳನ್ನು ಉಳಿಸುವಲ್ಲಿ ಅವರದೇ ಆಸಕ್ತಿಯಿತ್ತು.

ವೃತ್ತಿರಂಗಭೂಮಿಯ ಬಗ್ಗೆ ಆಸಕ್ತಿಯಿದ್ದ ಅವರು ರಂಗಕಲಾವಿದೆಯರ ಆತ್ಮಕತೆಗಳನ್ನು ನಿರೂಪಣಾ ರೀತಿಯಲ್ಲಿ ತಂದಿರುವುದು ಶ್ಲಾಘನೀಯ. ವಿಶೇಷವಾಗಿ ಈ ಕೃತಿಗಳು ವೃತ್ತಿರಂಗಭೂಮಿಯಲ್ಲಿ ಕಲಾವಿದೆಯರಾಗಿ, ಗಾಯಕಿಯರಾಗಿ, ತಮ್ಮದೇ ಕಂಪನಿಗಳನ್ನು ಕಟ್ಟಿ ಅವುಗಳನ್ನು ಮುನ್ನೆಡೆಸಿದವರ ಚರಿತ್ರೆಗಳಾಗಿ ಪ್ರಕಟಗೊಂಡಿವೆ. ಮಳವಳ್ಳಿ ಸುಂದರಮ್ಮ, ಸುಭದ್ರಮ್ಮ ಮನ್ಸೂರು, ಚಿಂದೋಡಿ ಲೀಲಾ, ಮಾಲತಿಶ್ರೀ ಮೈಸೂರು, ಮರಿಯಮ್ಮನಹಳ್ಳಿ ನಾಗರತ್ನಮ್ಮ ಮುಂತಾದವರ ಆತ್ಮಕತೆಗಳು ಮಹಿಳೆಯರ ಚರಿತ್ರೆಯನ್ನು ಕಟ್ಟುವಲ್ಲಿ ವಿಶೇಷ ಕೃತಿಗಳು.

ಈ ಕೃತಿಗಳ ಜೊತೆಯಲ್ಲಿ ಗುಬ್ಬಿವೀರಣ್ಣ, ಧುತ್ತರಗಿಯವರ ನಾಟಕಗಳು, ಡಾ. ಲಕ್ಷ್ಮಣದಾಸ್, ಶತಮಾನದ ಶಕಪುರುಷ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು( ರಾಮಕೃಷ್ಣ ಮರಾಠೆಯವರ ಜತೆ) ಹಾಗೂ ಇತರೆ ಹಲವು ಕೃತಿಗಳು ಈ ಹಿನ್ನೆಲೆಯಲ್ಲಿ ಮುಖ್ಯವಾದವಾಗಿವೆ.
ಕರ್ನಾಟಕ ನಾಟಕ‌ ಅಕಾಡೆಮಿಗಾಗಿ ‘ರಂಗಭೂಮಿ‌ ಮತ್ತು‌ ಮಹಿಳೆ’ ಕೃತಿಯನ್ನು ನಾನು ಸಂಪಾದಿಸುವ ಸಂದರ್ಭದಲ್ಲಿ ಅವರು ಅಕಾಡೆಮಿಯ ಸದಸ್ಯರಾಗಿದ್ದರು.

ಆಗ ಅಕಾಡೆಮಿಯ ಅಧ್ಯಕ್ಷರಾಗಿದ್ದವರು ಎಲ್.ಬಿ. ಶೇಖ ಮಾಸ್ತರ ಅವರು. ಬಿ.ವಿ. ರಾಜಾರಾಂ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಆರಂಭವಾದ ಈ ಕೆಲಸ ಅವರ ಅವಧಿ ಮುಗಿದ ನಂತರ ನೆನೆಗುದಿಗೆ ಬಿದ್ದಿತ್ತು. ಈಗ ಅದರ ಪ್ರತಿಗಳು ಮುಗಿದು ಎರಡನೆಯ ಮುದ್ರಣವನ್ನು ಕಾಣುತ್ತಿದೆ. ಇದರ ಪ್ರಕಟಣೆಯ ಸಂದರ್ಭದಲ್ಲಿ ಗುಡಿಹಳ್ಳಿಯವರು ತೋರಿಸಿದ ಆಸಕ್ತಿ, ತಮ್ಮದೇ ಕೆಲಸವೆಂಬಂತೆ ನನ್ನ ಜೊತೆಯಲ್ಲಿ ಮುದ್ರಣಾಲಯಕ್ಕೆ ಓಡಾಡಿದ್ದು ಈಗಲೂ‌ ನೆನಪಾಗುತ್ತಿದೆ. ರಂಗಭೂಮಿಯ ಕ್ಷೇತ್ರದ ಕೆಲಸವನ್ನು ಅವರು‌ ತನ್ನ ಸ್ವಂತ ಕೆಲಸ ಎನ್ನುವಂತೆ‌ ತೊಡಗಿಸಿಕೊಳ್ಳುತ್ತಿದ್ದುದು ಮೆಚ್ಚುಗೆ ತರಿಸುತಿತ್ತು.

ಎಲ್. ಕೃಷ್ಣಪ್ಪನವರ ಈ ಮಾಸ ಪತ್ರಿಕೆಗೆ ಹಲವು ಕಾಲ ಸಂಪಾದಕರಾಗಿದ್ದ ಅವರು ಆ‌ನಂತರ‌ ತಮ್ಮದೇ ‘ರಂಗ ನೇಪಥ್ಯ’ ಎಂಬ ಮಾಸಿಕ‌ ಪತ್ರಿಕೆಯನ್ನು ಆರಂಭಿಸಿದರು. ಕೊನೆಗಾಲದವರೆಗೂ‌ ಅದೇ ಆಸಕ್ತಿಯಿಂದ ಪ್ರಕಟಿಸಿದರು. ವಿದ್ಯಾರ್ಥಿ ದೆಸೆಯಲ್ಲಿ ಎಸ್.ಎಫ್.ಐನೊಂದಿಗೆ ತೊಡಗಿಸಿಕೊಂಡಿದ್ದು ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ತಮ್ಮನ್ನು ಹಲವು ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ವೃತ್ತಿರಂಗಭೂಮಿಯಲ್ಲಿ ನಿರಂತರ ಸೇವೆ ಸಲ್ಲಿಸಿ ಅಲಕ್ಷಿತರಾಗಿದ್ದವರ ಬಗ್ಗೆ ಅವರಿಗೆ ವಿಶೇಷ ಕಾಳಜಿಯಿತ್ತು.

‘ಎಲೆಮರೆಯ ಕಾಯಿಯೋ, ಹಣ್ಣಾದ ಬಾಳೆಯೋ ಒಟ್ಟಾರೆ ನಮ್ಮಂಥ ಕಲಾವಿದರನ್ನು ಮುಂಚೂಣಿಯಲ್ಲಿ ತರಲು ಕಾಲಕಾಲಕ್ಕೆ ಶ್ರಮಿಸಿದರು. ರಂಗಭೂಮಿಯಲ್ಲಿ ಪ್ರತಿಷ್ಠರು, ಕನಿಷ್ಠರು ಎಂಬ ಭೇದವೇ ಇಲ್ಲದಂತೆ ಪರಿಚಯಿಸಿದರು. ನಮ್ಮನ್ನು ಗುರ್ತಿಸುವಂತೆ ನೆಲೆ ಒದಗಿಸಿದವರು ಗುಡಿಹಳ್ಳಿ ನಾಗರಾಜ್’ ಎಂಬ ದುತ್ತರಗಿಯವರ ಮಾತು ಅಕ್ಷರಶಃ ಸತ್ಯ ಎನ್ನುವ ಹಾಗೆ ಬರಹದ ಬದುಕನ್ನು ಅವರು ಬದುಕಿದರು. ಈಗ ಅವರು ಬದುಕಿನ ತೆರೆ ಸರಿಸಿ ಹೊರಹೋದರೂ ತಾವೇ ತೆರೆದಿಟ್ಟ ರಂಗ ದಾಖಲೆಗಳಲ್ಲಿ ಸದಾಕಾಲ‌ ಉಳಿದೇ ಇದ್ದಾರೆ.

‍ಲೇಖಕರು Admin

August 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: