ಪ ಸ ಕುಮಾರ್ ಸರ್, ಕಂಗ್ರಾಟ್ಸ್..

ಎಲ್ಲರ ಗೆಳೆಯ ಪ ಸ ಕುಮಾರ್ ಅವರಿಗೆ ಪ್ರತಿಷ್ಠಿತ ಪಿ ಆರ್ ತಿಪ್ಪೇಸ್ವಾಮಿ ಸ್ಮಾರಕ ಪ್ರಶಸ್ತಿ ಘೋಷಿಸಲಾಗಿದೆ. ೫೦ ಸಾವಿರ ರೂ ನಗದು ಹಾಗೂ ಸ್ಮರಣ ಫಲಕವನ್ನು ಈ ಪ್ರಶಸ್ತಿ ಹೊಂದಿದೆ ಆಗಸ್ಟ್ ೧೩ ರಂದು ಕಲಬುರ್ಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ

ಅವಧಿಯ ಆತ್ಮೀಯ ಪ ಸ ಕುಮಾರ್ ಸರ್ ಗೆ ಅಭಿನಂದನೆಗಳು .

ಅವರ ಕಲಾ ಬದುಕಿನ ಒಂದು ಪುಟ್ಟ ಝಲಕ್ ಇಲ್ಲಿದೆ

ಅವರು ಏನೇನೋ..

ಜಿ ಎನ್ ಮೋಹನ್

ಮೊನ್ನೆ ಕಥೆಗಾರ ಕಾ ತ ಚಿಕ್ಕಣ್ಣ ಅವರ ಜೊತೆ ಕುಳಿತಿದ್ದೆ. ಕಾ ತ ಚಿಕ್ಕಣ್ಣನವರ ಬರವಣಿಗೆಯ ಬಗ್ಗೆ ನಮ್ಮ ಮಾತು ಸುತ್ತುತ್ತಿತ್ತು. ಆಗ ಇದ್ದಕ್ಕಿದ್ದಂತೆ ‘ನನ್ನ ಕಥೆಯೊಂದರ ಬಗ್ಗೆ ಪ ಸ ಕುಮಾರ್ ಹೊಸ ಕಣ್ಣೋಟದ ವಿಮರ್ಶೆ ಬರೆದಿದ್ದಾರೆ’ ಎಂದರು. ಅಷ್ಟೇ ಅಲ್ಲ, ಹಾಗೆ ಮಾತನಾಡುತ್ತಾ  ‘ನನ್ನ ಮೂರ್ನಾಲ್ಕು ಕಥೆಗೆ ದ್ರವ್ಯ ನೀಡಿದ್ದೇ ಪ ಸ ಕುಮಾರ್’ ಅಂದರು.

ಇದಾಗುವುದಕ್ಕೆ ಎಷ್ಟೋ  ಸಮಯ ಮುಂಚೆ ‘ಅಲೆಮಾರಿ’ ಎಂದೇ ಹೆಸರಾದ ಇನ್ನೊಬ್ಬ ಕುಮಾರ್, ಪ ಸ ಕುಮಾರ್  ಅವರ ಮನೆಗೆ ಹೋಗಿ ಕಾವ್ಯದ ಬಗ್ಗೆ ಮಾತನಾಡುತ್ತಾ ಕೂತಿದ್ದು ಬಂದೆ ಎಂದರು.

pa sa vishva kannaadaಕಲಾವಿದ ಗೆಳೆಯ ಮಂಜುನಾಥ ಸ್ವಾಮಿ ಹೇಳಿದ ಪ್ರಕರಣವೂ ಡಿಟೋ.. ಪತ್ರಕರ್ತೆ ಶಾರದಾ ನಾಯಕ್ ಪ ಸ ಕುಮಾರ್ ಹೇಗೆ ನಮ್ಮನ್ನೆಲ್ಲಾ ಹುರಿದುಂಬಿಸಿ ಒಂದು ಬ್ಯಾಂಡ್ ಕಟ್ಟಿದ್ದರು ಅಂತ ಹೇಳಿದ್ದರು. ಇದು ಹೌದು ಎನ್ನುವುದನ್ನು ಸಾಬೀತುಪಡಿಸಲೋ ಎಂಬಂತೆ ಒಂದು ದಿನ ಪ ಸ ಕೀ ಬೋರ್ಡ್ ಹಿಡಿದು ನಮ್ಮ ಕಚೇರಿಗೆ ಬಂದಿದ್ದರು. ಯಾವುದೋ ದಿನ ಅವರ ಮನೆಗೆ ಫೋನ್ ಮಾಡಿದಾಗ ಹಿನ್ನೆಲೆಯಲ್ಲಿ ಪ ಸ  ಕುಮಾರ್ ಹಾಡುಗಳು ಸುಳಿಯುತ್ತಿತ್ತು.

ಪ ಸ ಕುಮಾರ್ ಹಾಗಾದಾರೆ ಏನಲ್ಲ? ಎನ್ನುವ ಪ್ರಶ್ನೆ ನನ್ನ ಮುಂದೆ ಇದೆ.

ಪ ಸ ಕುಮಾರ್ ಅವರನ್ನು ನನ್ನ ಕಣ್ಣುಗಳು ಹಿಂಬಾಲಿಸಲು ಆರಂಭಿಸಿ ದಶಕಗಳು ಕಳೆದು ಹೋಗಿದೆ. ಪತ್ರಿಕೋದ್ಯಮದಲ್ಲಿ  ಇರುವ ಕಾರಣಕ್ಕೆ ಕಲಾವಿದರ ಸಂಪರ್ಕ ಬೇಗ ಸಿದ್ಧಿಸುತ್ತದೆ. ಹಾಗೆ ಚಂದ್ರನಾಥ್ ಆಚಾರ್ಯ,  ಗುಜ್ಜಾರ್, ರಾ ಸೂರಿ, ರಮೇಶ್, ಮೋನಪ್ಪ, ಸುಧಾಕರ ದರ್ಬೆ, ಮನೋಹರ್ ಆಚಾರ್ಯ ಹೀಗೆ…

ಆದರೆ ಪ ಸ ಕುಮಾರ್ ಬಗೆಗಿನ ಕುತೂಹಲ ಮಾತ್ರ ಹಾಗೇ ಉಳಿದುಬಿಟ್ಟಿದೆ. ಪ ಸ ಕುಮಾರ್ ಒಂದು ರೀತಿ ಆಲದ ಮರದ ಹಾಗೆ. ಅವರ ಸಂಗ ಎಲ್ಲರಿಗೂ ಬೇಕು. ಬರಹಗಾರ, ನಾಟಕಕಾರ, ಸಂಗೀತಗಾರ, ಕಲಾವಿದ, ಪತ್ರಕರ್ತ, ಸಾಹಿತಿ ಎಲ್ಲರೂ ಅವರ ಜೊತೆ. ಅಥವಾ ಈ ಎಲ್ಲರೊಂದಿಗೂ ಸಮಾನ ಸೇತುವೆ ನಿರ್ಮಿಸಿಕೊಳ್ಳಲು ಪ ಸ ಕುಮಾರ್ ಗೆ ಸಾಧ್ಯವಾಗುತ್ತದೆ.

ಇದೆಲ್ಲಾ ಯಾಕೆ ನೆನಪಾಯಿತೆಂದರೆ ಪ ಸ ಕುಮಾರ್ ಕಲೆ ಕೇವಲ ಕಲೆ ಅಲ್ಲ. ಅದನ್ನು ನೀವು ಓದಿಕೊಂಡರೆ ಸಾಹಿತ್ಯ, ಕೇಳಿಸಿಕೊಂಡರೆ ಸಂಗೀತ. ನುಡಿಸಿದರೆ ವಾದ್ಯ. ಪ ಸ ಕುಮಾರ್ ಅವರ  ಕಲಾಕೃತಿಗಳನ್ನು ನೋಡುವ, ಆ ಬಗ್ಗೆ ಸತತವಾಗಿ ಅವರೊಂದಿಗೆ ಮಾತನಾಡುವ, ಈ ಕಲಾಕೃತಿಗಳು ಹುಟ್ಟಲು ಕಾರಣ ಆಗಿದ್ದನ್ನು ಗೊತ್ತು ಮಾಡಿಕೊಳ್ಳುವ, ಬಣ್ಣಕ್ಕೆ ಇರುವ ಅರ್ಥವೇನು, ರೇಖೆಗೆ ಇರುವ ಶಕ್ತಿ ಏನು ಎನ್ನುವುದನ್ನು ತಿಳಿಯುವ ಅವಕಾಶ ನನಗೆ ಮೇಲಿಂದ ಮೇಲೆ ಧಕ್ಕಿದೆ.

‘ಪ್ರಜಾಮತ’ ದಲ್ಲಿ ಆರಂಭಿಸಿ, ‘ತುಷಾರ’ಕ್ಕೆ ಮಾಡುತ್ತಿದ್ದ ಇಲಸ್ರೇಶನ್ ಗಳನ್ನು ಹಾದು, ‘ಕನ್ನಡಪ್ರಭ’ದಲ್ಲಿ ಕವಿತೆಗೆ ಸವಾಲೆಸೆಯುವಂತೆ ಚಿತ್ರಿಸುತ್ತಿದ್ದ ಚಿತ್ರಗಳನ್ನು ನೋಡಿ, ನಂತರ ಅವರ ಖಾಸಗಿ ಸಂಗ್ರಹದಲ್ಲಿದ್ದ ಅನೇಕ ಕಲಾಕೃತಿಗಳನ್ನು ನೋಡಿ ನಾನು ಅವರ ಮೋಡಿಗೆ ಸಿಲುಕಿದ್ದೇನೆ.

ಪ ಸ ಕುಮಾರ್ ಅವರು ಯಾವುದೇ ಕವಿತೆ, ಕಥೆ, ಕಾದಂಬರಿಗೆ ಬೇಕಾದ ಇಲಸ್ರೇಶನ್ ಮಾಡುತ್ತಾರೆ ಎಂಬುದನ್ನು ನಾನು ಒಪ್ಪಲೇ ಸಿದ್ಧವಿಲ್ಲ. ಬದಲಿಗೆ ಅವರು ಅದಕ್ಕೆ ಸಂವಾದಿಯಾಗಿ ಜುಗಲ್  ಬಂದಿ ನಡೆಸುತ್ತಾರೆ.

ಒಂದು ಬರಹವಾದರೆ ಇನ್ನೊಂದು ಚಿತ್ರ. ಹಾಗೆ ಒಂದೇ ಏಟಿಗೆ ಎರಡು ಓದೂ ಧಕ್ಕುತ್ತದೆ. ನನ್ನ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕದಲ್ಲಿ ಅದು ನನ್ನ ಅರಿವಿಗೆ  ಬಂದಿದೆ. ನೀವು ಚಿತ್ರವನ್ನು ನೋಡಿಯೂ ಕುಮಾರ್ ಅವರ ಕ್ಯೂಬಾವನ್ನೂ ಓದಿಕೊಳ್ಳಬಹುದು. ಅವರ  ರೇಖೆಗೆ ಜಿ ಆರ್ ವಿಶ್ವನಾಥನ ಬ್ಯಾಟಿನ ಬೇಸಿಗೆ ಇರುವ ಮೋಹಕತೆ ಇದೆ. ಕೆಲವು ಸಲ ಅವರು ಕೃತಿ  ನೀಡುವ ಅರ್ಥವನ್ನೂ ವಿಸ್ತರಿಸಿಬಿಡುತ್ತಾರೆ. ಗಮಕದಲ್ಲಿ, ಯಕ್ಷಗಾನದಲ್ಲಿ ಅರ್ಥದಾರಿಗಳು ಸಡನ್ನಾಗಿ ಒಂದು ಹೊಸ ಅರ್ಥವನ್ನೇ ತೆರೆದಿಟ್ಟುಬಿಡುವಂತೆ. ಪೀರ್ ಬಾಷಾನ ಕವಿತಾ ಸಂಕಲನದ   ಮುಖಪುಟ, ಎಚ್ ಎಸ್ ವಿ ಅವರ ಅನಾತ್ಮ ಕಥನ, ಸುರೇಂದ್ರನಾಥ್ ಕಾದಂಬರಿ, ನನ್ನ ಡೋರ್ ನಂ ೧೪೨ ಇವೆಲ್ಲಾ ತಮ್ಮ ಅರ್ಥವನ್ನು ವಿಸ್ತರಿಸಿಕೊಂಡಿರುವುದು ಹೀಗೆ..

 

ನನ್ನ ಬಾಲ್ಯ ಲೋಕದ ಕಥನ ಅಥವಾ ಸಿಟಿ ಗೀತ ಎಂದು ಕರೆಯಬಹುದಾದ ನೆನಪುಗಳ ಸಂಕಲನ ‘ಡೋರ್ ನಂ ೧೪೨’ ಬರೆದಾಗ ನನಗೆ ಅಚ್ಚರಿಯಾಗುವಂತೆ ಅದನ್ನು ಮೀರಿದ ಚಿತ್ರಗಳನ್ನು ಕೊಟ್ಟರು. ನೆನಪಿನ  ಪಾತಾಳ ಗರಡಿಯಲ್ಲಿ ಅವರಿಗೆ ನನ್ನ ಅಂಗಿ, ಬನಿಯನ್ನು ಇನ್ನೂ ಏನೇನೋ.. ನನಗೆ ಹೊಸ ಗೋಚರಿಕೆಗಳನ್ನು ಕೊಟ್ಟ ಅವರ ಚಿತ್ರಗಳನ್ನು ನೋಡಿ ನಾನು ಈ ಪುಸ್ತಕವನ್ನು ಮತ್ತೆ  ತಿದ್ದಿ ಬರಿಯಲೇ ಎನಿಸಿತ್ತು. ಅಷ್ಟೇ ಅಲ್ಲ ಪ ಸ ಕುಮಾರ್ ಈ ಚಿತ್ರದ ಜೊತೆಗೆ ಒಂದು ಕವಿತೆಯ ಕಟ್ಟನ್ನೂ ನೀಡಿದ್ದರು. ನನ್ನ ಲಹರಿಯ ಬರಹಕ್ಕೆ ಅವರ ಚಿತ್ರ, ಆ ಚಿತ್ರ ಹುಟ್ಟಿಸಿದ ಕವಿತೆ ಎಲ್ಲವೂ ಇತ್ತು. ಪ ಸ ಕುಮಾರ್ ಯಾವುದೇ ಕೃತಿಯನ್ನು ಬರಿದೇ ಓದುವುದಿಲ್ಲ. ಅದರ ಒಳಗೆ ಇಳಿಯುತ್ತಾರೆ.

ಮಡಿಕೆ ಬೆಂದಿದೆಯೇ ಎಂದು ಕುಂಬಾರ ಒಂದು ‘ಠಣ್’ ಎನ್ನುವ ಟೆಸ್ಟ್ ನೀಡುತ್ತಾನಲ್ಲಾ ಹಾಗೆ.. ಆ ಕೃತಿ ಇವರ ಟೆಸ್ಟ್ ನಲ್ಲಿ ಗೆದ್ದು ಬರಬೇಕು.

pa sa kumar

ಪ ಸ ಕುಮಾರ್ ಅವರ ಬಲಗೈ ಮಾತ್ರ ಬರೆಯುತ್ತದೆ ಎಂದು ಎಷ್ಟೋ ಜನ ಅಂದುಕೊಂಡಿದ್ದರು. ಅವರಿಗೆ ಅಪಘಾತವಾದಾಗ ಎಡಗೈನಿಂದಲೇ ಚಿತ್ರ ಬರೆದರು. ಆಗ ಎಲ್ಲರೂ ಎಡಗೈ ಬರೆಯುತ್ತದೆ ಎಂದುಕೊಂಡರು. ಆದರೆ ಕುಮಾರ್ ಈ ಎರಡಲ್ಲದೆ ತಮ್ಮ ಬುದ್ದಿಯಿಂದಲೂ ಬರೆದ ಕಲಾವಿದ. ಪ ಸ ಕುಮಾರ್ ಅವರು ಕಾಡುವ, ಸಂಭ್ರಮಿಸುವಂತೆ ಮಾಡುವ, ಹಳಹಳಿಸುವ, ಕಾಮನೆಗಳನ್ನು ಕೆರಳಿಸುವಂತಹ ಹೊಸ ‘ಕಪಲ್’ ಸೀರೀಸ್ ಅನ್ನು ಬರೆದಿದ್ದಾರೆ. ಅದನ್ನು ಕೈನಲ್ಲಿ ಹಿಡಿದು ಕುಳಿತಿದ್ದೇನೆ. ನಾನು  ಅದಕ್ಕೆ ಕವಿತೆ ಬರೆಯಬೇಕು ಈ ಜುಗಲಬಂದಿ ಪ್ರಕಟವಾಗಬೇಕು ಎನ್ನುವುದು ನಮ್ಮಿಬ್ಬರ ಆಸೆ.

ಪ ಸ ಕುಮಾರ್ ಎಂಬ ಕವಿತೆಯನ್ನು ಮೀರಿ ಕವಿತೆ ಬರೆಯುವುದು ಹೇಗೆ?. ‘ಅವರು ಏನು ಮಾಡುತ್ತಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ, ಅವರನ್ನು ಕ್ಷಮಿಸು’ ಎಂದ ಜೀಸಸ್ ನ ಮುಂದೆ ನಾನೂ ಮಂಡಿಯೂರಿದ್ದೇನೆ. ‘ಕಪಲ್’ ಸರಣಿಯ ಕಟ್ಟು ಹಿಡಿದು ‘ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ಅರಿವಿಲ್ಲ..ನನ್ನನ್ನು ಕ್ಷಮಿಸಿಬಿಡು ತಂದೆ’ ಎಂದು ಮಂಡಿಯೂರಿಬಿಟ್ಟಿದ್ದೇನೆ. ಅಮೆನ್!

‍ಲೇಖಕರು Admin

July 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. jagadishkoppa

    ಪ್ರಿಯ ಮೋಹನ್ ಪ.ಸ. ಕುಮಾರ್ ಕೇವಲ ಚಿತ್ರ ಕಲಾವಿದ ಮಾತ್ರವಲ್ಲ, ಭಾವಪೂರ್ಣವಾಗಿ ಅಭಿನಯಿಸಬಲ್ಲ ಕಿರುತೆರೆಯ ಕಲಾವಿದ ಕೂಡ ಹೌದು. ನನ್ನ ಮೂರುದಶಕದ ಒಡನಾಟದಲ್ಲಿ ನಾನು ಕಂಡ ಕನ್ನಡ ಸಾಹಿತ್ಯದ ಪ್ರಭುದ್ದ ಓದುಗಕೂಡ ಹೌದು.. ತನ್ನ 14 ವಯಸ್ಸಿನ ಮಗನನ್ನು ಉಳಿಸಿಕೊಳ್ಳಲು ಐದು ವರ್ಷದ ಹಿಂದೆ ಅವರು ನಡೆಸಿದ ಹೋರಾಟ ನೆನದರೇ ಕಣ್ಣೀರು ಬರುತ್ತದೆ. ಇಡೀ ಬದುಕಿನ ಸಂಪಾದನೆ, ಆಸ್ತಿ ಕಳೆದುಕೊಂಡರು, ಜೊತೆಗೆ ಮಗನನ್ನು ಕಳೆದುಕೊಂಡರು. ಆದರೆ, ಬದುಕಿನ ಬಗ್ಗೆ ಭರವಸೆ ಕಳೆದುಕೊಳ್ಲಲಿಲ್ಲ. ನನ್ನ ಪಾಲಿಗೆ ಕುಮಾರ್ ಗೆಳೆಯರು ಮಾತ್ರವಲ್ಲ, ಅಪರೂಪದ ಒಬ್ಬ ಸಂತ. ಕಾಯಕದಲ್ಲಿ ಎಲ್ಲವನ್ನು ಮರೆಯುವ ಗುಣ ಅವರದು. ರಾಜ್ಯೋತ್ಸವ ಪ್ರಶಸ್ತಿ, ನೊಂದು ಗಾಯಗೊಂಡಿರುವ ಅವರ ಎದೆಗೆ ತಂಪನೆರೆಯಲಿ ಎಂದು ಹಾರೈಸುತ್ತೇನೆ.

    ಪ್ರತಿಕ್ರಿಯೆ
  2. ಮಲ್ಲಿಕಾರ್ಜುನಗೌಡ

    ಅಭಿನಂದನೆಗಳು ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: