ಹಿರಿಯ ಪತ್ರಕರ್ತರಾದ ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾ ಎಂ.ಎಚ್ ಅವರನ್ನು ಕರ್ನಾಟಕ ಪತ್ರಕರ್ತೆಯರ ಸಂಘ ತನ್ನ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕರ್ನಾಟಕ ಪತ್ರಕರ್ತೆಯರ ಸಂಘ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಈ ವರ್ಷದಿಂದ ದತ್ತಿನಿಧಿ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಮತ್ತು ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ ತಿಳಿಸಿದ್ದಾರೆ.
ಈ ಪ್ರಶಸ್ತಿಗೆ ಸದರನ್ ಎಕಾನಮಿಸ್ಟ್ ಪತ್ರಿಕೆಯ ಸಂಪಾದಕಿ, ನಾಲ್ಕು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಿಟ್ಟತನದಿಂದ ಪತ್ರಿಕೆ ನಡೆಸುತ್ತಿರುವ ಹಿರಿಯ ಪತ್ರಕರ್ತೆ ಸುಶೀಲಾ ಸುಬ್ರಹ್ಮಣ್ಯ ಹಾಗೂ ತಮ್ಮ ದಿಟ್ಟ ವರದಿಗಳಿಂದ, ಕೆಲಸಗಳಿಂದ ಹೆಸರಾಗಿರುವ ಪ್ರಜಾವಾಣಿ ದಿನಪತ್ರಿಕೆಯ ಭೂಮಿಕಾ, ಶಿಕ್ಷಣ ಪುರವಣಿಯ ಮುಖ್ಯಸ್ಥೆ ನೀಳಾ ಎಂ.ಎಚ್. ಅವರೂ ಈ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಪ್ರಶಸ್ತಿ – 2025, 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇದೇ ತಿಂಗಳ 28 ರಂದು ಬೆಳಗ್ಗೆ 11 ಗಂಟೆಗೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ.






0 Comments