ರವೀಂದ್ರ ಮುದ್ದಿ ಅವರ ‘ಪ್ರೇಮಕ್ಕೆ ಕಣಿ ಕೇಳಬೇಕೆ..?’
‘ಮುದ್ದಿ ಮೈಂಡ್ಸ್’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಬಸವರಾಜ ಮುದನೂರ್ ಅವರ ಬರಹ ಇಲ್ಲಿದೆ.
‘-ಬಸವರಾಜ ಮುದನೂರ್
ಪತ್ರಕರ್ತ ರವೀಂದ್ರ ಮುದ್ದಿ ಅವರ ‘ಪ್ರೇಮಕ್ಕೆ ಕಣಿ ಕೇಳಬೇಕೆ..?’ ಪುಸ್ತಕದ ಆಕಾರವೇ ಬಲು ಇಷ್ಟವಾಗುತ್ತದೆ. ಸಿದ್ಧ ಮಾದರಿಗಳನ್ನು ಮೀರಿದ ವಿಶಿಷ್ಟ ಶೈಲಿಯ ಪುಸ್ತಕ ಮತ್ತು ಮುಖಪುಟ ಆಕರ್ಷಕವಾಗಿದೆ. ಕೃತಿ ಕೈಗೆತ್ತಿಕೊಂಡರೆ ಸಾಕು ಈ ಪುಸ್ತಕವೇ ಇಷ್ಟು ಮುದ್ದಾಗಿದೆ. ಇನ್ನು ಕೃತಿಯೊಳಗಿನ ಕಾವ್ಯ ಲಹರಿ ಅದೆಷ್ಟು ಆಪ್ತವಾಗಿದ್ದೀತು ಎಂಬ ಸಹಜ ಕುತೂಹಲ ಮೂಡುತ್ತದೆ. ಈ ಪುಸ್ತಕ ಕೊಳ್ಳಬೇಕೆ ಎಂದು ಕ್ಷಣ ಕಾಲವೂ ಮನಸಿಗೆ ಕಣಿ ಕೇಳದೆ ಪುಸ್ತಕ ಕೊಂಡು ಓದುವ ಮನಸ್ಸಾಗುತ್ತದೆ.
ಕವನ ಸಂಕಲನದ ಕವಿತೆಗಳು ಯುವ ಮನಸುಗಳಿಗೆ ಮುದ ನೀಡುತ್ತವೆ. ಪ್ರೇಮಿಗಳಿಗೆ ಹಿತವೆನಿಸಿದರೆ, ವಿರಹಿಗಳ ವೇದನೆಗೆ ಅಕ್ಷರ ರೂಪದಿ ಮುಖಾಮುಖಿಯಾಗಿ ಸಮಾಧಾನಿಸುತ್ತವೆ. ಪ್ರತಿ ಕಾವ್ಯವು ಸರಳವಾಗಿ ಮೂಡಿದ್ದು ಹೃದಯದಿಂದಲೇ ಕವಿತೆಗಳು ಸೃಷ್ಟಿ ಆಗಿವೆ. ಎಲ್ಲೂ ವಿನಾಕಾರಣ ಪ್ರಾಸ ಜೋಡಣೆಯ ತ್ರಾಸದಾಯಕ ಪ್ರಯತ್ನ ಕಾಣಸಿಗಲ್ಲ. ಪದಗಳ ಆಡಂಬರವಿಲ್ಲ, ಅನಗತ್ಯ ಪದಪುಂಜಗಳನ್ನು ಜೋಡಿಸುವ ಹರಸಾಹಸವಿಲ್ಲ. ಯಾವುದೇ ನಾಟಕೀಯತೆ ಇಲ್ಲದೆ ನೇರ, ಪ್ರಾಮಾಣಿಕತೆಯಿಂದ ಕೂಡಿದ ಕವಿತೆಗಳು ಮನಮುಟ್ಟುತ್ತವೆ. ನಿಜವಾದ ಪ್ರೇಮಿ ನೇರವಾಗಿ ಹೇಳುವ ಎದೆಯ ನುಡಿಗೆ ಕವಿ ಕಾವ್ಯರೂಪ ಕಲ್ಪಿಸಿದ್ದಾರೆ.
ನಿನ್ನ ಕಣ್ಣಂಚಿನಲ್ಲಿದ್ದ ಪ್ರೀತಿ
ಹನಿಯನ್ನು ಬೊಗಸೆಯಲ್ಲಿ
ಹಿಡಿದು, ಜತನದಿಂದ ಹೃದಯದೊಳಗೆ
ಇಳಿಸಿಕೊಂಡಾಗಲೇ,
ಪ್ರೇಮ ಅಧ್ಯಾಯಕ್ಕೆ ಮೊದಲ ಅಕ್ಷರ
ಬರೆದಾಗಿತ್ತು. ಈಗ ಪ್ರೇಮ
ಕವಲೊಡೆದು ಕಾದಂಬರಿ
ಆಗಿದೆ
ಮೊದಲಕ್ಷರವಾಗಿ ಹೃದಯ ಹೊಕ್ಕು ಕಾದಂಬರಿಯಾಗಿ ಕವಲೊಡೆದ ಪ್ರೇಮ ಪಯಣದ ಕಲ್ಪನೆಯೇ ಮಧುರ. ಹೀಗೆ ರಮಣೀಯ ಕವಿತೆಗಳು ಮೊದಲ ಭೇಟಿ, ಮೊದಲ ಪ್ರೇಮ, ಮೊದಲ ಮಾತು, ಮೊದಲ ಮಿಲನದ ನೆನಪಿನ ದೋಣಿಯಲ್ಲಿ ತೇಲಿಸುತ್ತವೆ. ನವತಾರುಣ್ಯಕೆ ಮನಸು ಕೊಂಡೊಯ್ದು ಹೊಸ ಚೈತನ್ಯ ಮೂಡಿಸುವಲ್ಲಿ ಸಫಲತೆ ಸಾಧಿಸಿವೆ. ಓದುಗನಲ್ಲಿ ನಮ್ಮದೇ ಕವಿತೆಗಳೆಂಬ ಭಾವ ಸೃಷ್ಟಿಸುವಲ್ಲಿ ಕವಿ ಯಶಸ್ಸು ಕಂಡಿದ್ದಾರೆ. ಒಂದರಲ್ಲಿ ಪ್ರಿಯತಮೆಯ ಮುಖಭಾವ ಕಂಡರೆ ಮತ್ತೊಂದರಲ್ಲಿ ಆತ್ಮ ವಿಮರ್ಶೆಯ ಸುಖ;, ದುಖ; ಮೇಳೈಸಿವೆ. ಪ್ರೇಮ ಮತ್ತು ವಿರಹ ಪ್ರಸಂಗದ ಪ್ರತಿ ಕಾವ್ಯದಲ್ಲೂ ಪ್ರೇಮ ಬಂದಗಿ ಹಾಸು ಹೊಕ್ಕಿದೆ.
ಆಕಾಶಕ್ಕೆ ಹಾರುವ
ಹಕ್ಕಿಯಾಗಲೇ ಎನ್ನುವ ಆಸೆ
ಆದರೆ ಮಲ್ಲಿಗೆಯ ಸುಗಂಧ
ನನ್ನ ಮತ್ತೆ ಮತ್ತೆ ಬಂಧಿಸಿ
ಇಟ್ಟುಬಿಡುತ್ತದೆ
ಅಪ್ಪಟ ಪ್ರೇಮಿಯ ಹೃದಯವನ್ನು ಯಾವುದೇ ಹಿಂಜರಿಕೆಯಿಲ್ಲದೆ ಕವಿ ಮುದ್ದಿ ಅನಾಮತ್ತಾಗಿ ತೆರೆದಿಟ್ಟಿದ್ದಾರೆ. ‘ಹಕ್ಕಿಯಾಗುವ ಬಯಕೆಯಿದ್ದರೂ ಪ್ರಿಯತಮೆಯ ಮಲ್ಲಿಗೆ ಬಂಧಿಸಿಟ್ಟಿದೆ’ ಎಂಬ ಕವಿತೆ ‘ಓಪನ್ ಹಾರ್ಟ್ ಸರ್ಜರಿ’ಗೆ ಸಾಕ್ಷ್ಯ. ಪ್ರೇಮ ಕಾವ್ಯಕ್ಕೆ ಮಾತ್ರ ಸೀಮಿತಗೊಳ್ಳದೆ ಕೃತಿಯ ವಿರಹ ಕಾವ್ಯವೂ ಮನಸಿಗೆ ತಾಗುತ್ತವೆ. ನೊಂದ ಹೃದಯದ ಕಣ್ಣಂಚಲಿ ನೀರು ಜಿನುಗಿಸಿ ಮನಸು ಹಗುರಗೊಳಿಸುತ್ತವೆ. ಕೈಕೊಟ್ಟ ಪ್ರಿಯತಮೆಯ ಮೇಲೆ ಕೊಂಚವೂ ಮುನಿಯದೆ ಕೊನೆವರೆಗೂ ಪ್ರೀತಿಸುತ್ತಲೇ ಇರುವ ಸಾತ್ವಿಕ ಕಲ್ಪನೆ ಅಮೋಘ. ಬಿಟ್ಟು ಹೋದವಳಿಗಾಗಿ ಪರಿತಪಿಸುವ ಕವಿ ಎಲ್ಲೂ ಕೋಪ ತಾಪ ತೋರಲ್ಲ; ಶಾಪ ಹಾಕೋದಿಲ್ಲ, ಕೇಡು ಬಯಸಲ್ಲ; ಅಹಂಕಾರ ತೋರೋದಿಲ್ಲ. ಬದಲಾಗಿ ಬದುಕಿಗಾಗಿ ನೆನೆಯುವೆ ಎನ್ನುವ ಪ್ರೀತಿಯೇ ಪರಿಶುದ್ಧ.
ಹೃದಯಕ್ಕೆ ಆಸರೆಯಾಗಿ ನಿಂತಿದ್ದ
ನಿನ್ನ ಪ್ರೀತಿಯೇ ನನ್ನ ಉಸಿರಾಗಿ
ಇರುವುದರಿಂದ, ನೀನಿಲ್ಲದಾಗಲೂ
ನಿನ್ನ ನೆನೆಯುತ್ತಲೇ ಇದ್ದೇನೆ
ನಾನು ಬದುಕುವುದಕ್ಕಾಗಿ
ಪ್ರೇಮ ಮತ್ತು ಪ್ರಕೃತಿಯನ್ನು ಕಾವ್ಯ ರಚನೆಯಲ್ಲಿ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಪರಿಸರದ ಜೊತೆಗೆ ಕವಿಗಿರುವ ಅವಿನಾಭಾವ ನಂಟು ಕವಿತೆಗಳಿಗೆ ಹೊಸ ಶಕ್ತಿ ತುಂಬಿದೆ. ಹುಟ್ಟಿದ ನಿಜ ಪ್ರೀತಿಗೆ ಅಂತ್ಯ ಎಂಬುದಿಲ್ಲ. ಸಂಪ್ರದಾಯಬದ್ಧ ಮೂರು ಗಂಟಿಗಿಂತ ಪ್ರೇಮಗಂಟಿಗೆ ಬದ್ಧ ಎಂಬಂಶ ಮುಖ್ಯವಾಗಿ ಜೀವಿಸಿದೆ. ಪ್ರಕೃತಿಯಲ್ಲಿ ಲೀನವಾದ ಪ್ರೀತಿ ಮೋಡ ಕಟ್ಟಿ ಮಳೆ ಸುರಿಸಿ ಮತ್ತೆ ಇಬ್ಬರನ್ನು ಒಂದಾಗಿಸಲಿ ಎಂಬ ಆಶಯ ಸುಂದರ ಸಂಪ್ರೀತಿಯ ಸಂಕೇತವಾಗಿವೆ. ಕೆಟ್ಟ ಕಾಲದಲ್ಲಿ ದೂರಾದ ಮಾತ್ರಕ್ಕೆ ಪ್ರೀತಿ ಅಂತ್ಯಗೊಳ್ಳುವುದಿಲ್ಲ. ಒಂದಾಗಿಸಲು ಭೀಕರ ಬರಗಾಲದಲ್ಲೂ ಪ್ರೀತಿಯ ಮಳೆ ಸುರಿದೀತು ಎಂಬ ಆಶಯದ ಕವಿತೆ ಸತ್ಯ ಪ್ರೀತಿಗೆ ಹಿಡಿದ ಸವಿಗನ್ನಡಿಯಾಗಿದೆ. ಹೀಗೆ ಕೃಷಿ, ಮಳೆ, ಪ್ರಕೃತಿ, ಪರಿಸರ, ದಿಕ್ಕು-ದೆಸೆಯಿಂದ ಹಿಡಿದು ರೈಲ್ವೆ ಕಂಬಿ, ಬರಿಗಾಲ ನಡಿಗೆವರೆಗೆ ಬದುಕಿನ ಪ್ರತಿ ಕ್ಷಣಗಳನ್ನು ಕಾವ್ಯದ ಮೂಲಕ ಹಿಡಿದಿಡುವ ಪ್ರಯತ್ನ ಮಜಬೂತಾಗಿದೆ.

ಮುಂಗಾರು ಮಳೆಯೂ ಬಾರದ
ಈ ಗಳಿಗೆಯಲ್ಲಿ
ಆವಿಯಾದ ನಮ್ಮ ಪ್ರೀತಿಯ ಮೋಡವೇ
ಮಳೆಯಾಗಿ ಸುರಿದು
ಮತ್ತೆ ನಮ್ಮಿಬ್ಬರನ್ನು
ಒಂದು ಮಾಡಬಹುದೇನೋ!
ಪ್ರೇಮಕ್ಕೆ ಕಣಿ ಕೇಳಬೇಕೆ…? ಎಂಬ ಪ್ರಶ್ನೆಯ ಈ ಕೃತಿ ಪ್ರೇಮಿಗಳ ಅನೇಕ ಪ್ರಶ್ನೆಗಳಿಗೆ ಉತ್ತರ ಹೇಳಿದೆ. ಪ್ರೇಮಕ್ಕಿಂತ ಹೆಚ್ಚು ವಿರಹಕ್ಕೆ ಪ್ರಾಮುಖ್ಯತೆ ನೀಡಲಾಗಿದೆ ಎಂಬ ಭಾವನೆ ಮೂಡುತ್ತದೆ. ಆದರೆ, ವಿರಹದ ನೆಪದಲ್ಲಿ ಎಲ್ಲೂ ಭಾವೋದ್ವೇಗದಿ ಪ್ರೇಮವನ್ನು ತಿರಸ್ಕರಿಸದ ಪ್ರೇಮ ಪುರಸ್ಕಾರ ವಿಶಿಷ್ಟ ಶೈಲಿಯಾಗಿದೆ. ಪ್ರಿಯತಮೆಯ ಮೇಲೆ ಗೂಬೆ ಕೂರಿಸಿ ನಾನೇ ಶ್ರೇಷ್ಠ ಎಂದು ಬೊಬ್ಬೆ ಹಾಕುವ ಭ್ರಮೆಯ ಕವಿತೆಗಳೆಲ್ಲೂ ಇಲ್ಲ. ನಿಜ ಪ್ರೇಮಿಯಾಗಿ ವಿರಹ ವೇದನೆ ಮಾತ್ರ ಹೇಳುತ್ತ ಸದಾ ಪ್ರೀತಿ ಗೌರವಿಸುವ ಸೂಕ್ಷ್ಮತೆ ಮೆಚ್ಚುವಂಥದ್ದಾಗಿದೆ. ಬಿಟ್ಟು ಹೋದಳೆಂದು ದ್ವೇಷಿಸದೆ ತಾಜಾ ಪ್ರೀತಿಯನ್ನೇ ತೋರುವ ಪರಿಶುದ್ಧತೆ ಮಾದರಿ.
ನಿನ್ನ ಪ್ರೀತಿ
ನನ್ನ ಬದುಕು
ಉಳಿಸೋ ಔಷಧಿ






0 Comments