ಪ್ರತಿಭಾ ನಂದಕುಮಾರ್ ಕವಿತೆ- ರಾಮನವಮಿಯ ದಿನ ದಹಿ v/s ಮೊಸರು…

ಪ್ರತಿಭಾ ನಂದಕುಮಾರ್

ಮೊಸರು
ನಾವು ತಿನ್ನುವುದು
ಮಜ್ಜಿಗೆ
ನಾವು ಕುಡಿಯುವುದು

ಗಡಿಗೆಗಳಲ್ಲಿ
ಹೆಪ್ಪು ಹಾಕುವುದು
ಕಡಿಯುವುದು
ಬೆಣ್ಣೆ ತೆಗೆಯುವುದು
ಕಾಯಿಸಿ ತುಪ್ಪವಾಗಿಸುವುದು

ಸೌಟಲ್ಲಿ ಬಡಿಸುವುದು
ಬಳಿದು ತಿನ್ನುವುದು
ಉಪ್ಪು ಉಪ್ಪಿನಕಾಯಿ ಗೊಜ್ಜು
ಬೆರೆಸಿ ಸವಿಯುವುದು

ಮೊಸರೆಂದರೆ ಮೊಸರೇ
ರೋಸ್ ಈಸ್ ಎ ರೋಸ್ ಈಸ್ ಎ ರೋಸ್ ಥರ
ಅಚ್ಚ ಕನ್ನಡದ ಹೆಸರು

ಅಂತಿರುವಾಗ
ಅದನ್ನು ದಹಿ ಎನ್ನಲಾರೆವು
ಒಬ್ಬ ಹೆಪ್ಪಿಗೆ ಬಂದವನು
ಎಮ್ಮೆಯ ಕ್ರಯ ಕೇಳುವಂತೆ
ನಮ್ಮ ಮನೆಯ ಮೊಸರಿಗೆ
ತನ್ನ ಮನೆಯ ಹೆಸರು ಕೊಡುತ್ತೇನೆಂದು
ದಹಿ ಎನ್ನಿರೆಂದು ಹೇಳುತ್ತಿದ್ದಾನೆ.

ಸಗಣಿ ತಿನ್ನುವವನಿಗೆ ದನದ ಆಣೆ
ಗಂಜಲ ಕುಡಿಯುವವನಿಗೆ ಗಂಗೆಯ ಆಣೆ

ನಮ್ಮ ಊರು ನಮ್ಮ ದನ ನಮ್ಮ ಹಾಲು ನಮ್ಮ ಮೊಸರು
ನಮ್ಮ ಬಾಯಿ ನಮ್ಮ ಹೊಟ್ಟೆ ನಮ್ಮ ಮಾತು

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಹಕ್ಕಿ ಬಚ್ಚಿಟ್ಟುಕೊಳ್ಳೀ

ಇಲ್ಲದಿದ್ದರೇ …

‍ಲೇಖಕರು avadhi

March 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. RENUKARADHYA H S

    ನಾನು ಇಷ್ಟ ಪಟ್ಟು ಓದುವ ಕನ್ನಡದ ಗಟ್ಟಿ ಕವಿಗಳಲ್ಲಿ ಪ್ರತಿಭಾರು ಒಬ್ಬರು. ಆ ಕಾರಣಕ್ಕೆ ಅವರ ಕವಿತೆಗಳನ್ನು ನಾನು ಇಂದಿಗೂ ಚಾಕಲೇಟ್ ಕಂಡ ಚಿಕ್ಕ ಮಕ್ಕಳ ಹಾಗೆ, ತುಂಬು ಹರೆಯದ ಹುಡುಗ, ಹುಡುಗಿಯ ಬಗ್ಗೆ, ಹುಡುಗಿ – ಹುಡುಗನ ಬಗ್ಗೆ ಹೊಂದಿರುವ ಕುತೂಹಲದಂತೆ ಅವರ ಕವಿತೆಗಳನ್ನು ಓದುತ್ತೇನೆ.

    “ನಾವು ಹುಡುಗಿಯರೇ ಹೀಗೆ” ಕವಿತೆಯನ್ನು ಓದಿ, ಆ ಕವಿತೆಯಲ್ಲಿನ ಭಾಷೆ, ನುಡಿಗಟ್ಟು, ಶೈಲಿ, ಕವನದ ತಾತ್ವಿಕತೆ ಹಾಗೂ ವಸ್ತುವಿನ ಮತ್ತು ಮಂಡನೆಯಲ್ಲಿನ ಹೊಸತನ, ಇವತ್ತು ಓದಿದರೂ ಇರುವ ಅದೇ ಪ್ರೇಶ್ ನೆಸ್ ಗೆ ಮಾರು ಹೋಗುತ್ತೇನೆ.

    ಆದರೆ ಈ ಮೇಲಿನ ಪದ್ಯ ಪ್ರತಿಭಾರಲ್ಲಿ ಈ ಹಿಂದೆ ಇದ್ದ ಕಾವ್ಯ ಕಟ್ಟುವ “ಪ್ರತಿಭೆ” ತನ್ನ ಸಹಜ ಸೌಂದರ್ಯ ಹಾಗೂ ಸತ್ವತನ ಬರಿದಾಗುತ್ತಿರುವ ಖಾಲಿತನದ ದ್ಯೋತಕದಂತೆ ಅನ್ನಿಸಿದೆ. ಜೊತೆಗೆ ವರ್ತಮಾನದ ತಲ್ಲಣಗಳಿಗೆ, ಕೋಲಾಹಲಗಳಿಗೆ ತತ್ ಕ್ಷಣವೇ ಪ್ರತಿಕ್ರಿಯೆ ಕೊಡಲೇಬೇಕಾದ ಈ ಕಾಲದ ತುರ್ತಿನ ಒತ್ತಡವೂ ಇಂದಿನ ಕವಿಯ,ಕವಿತೆಗಳಲ್ಲಿ ಕಂಡುಬರುವ ಸೋಲಿಗೆ ಕಾರಣ ಇರಬಹುದು.

    ಕವಿತೆ ಎನ್ನುವುದು ಸರಿಕಾವು ಪಡೆದ ತತ್ತಿಯಿಂದ ಹೊರಬಂದ ಹೊಸಜೀವವಾಗಬೇಕು. ಆದರೆ ಆ ಕಾವಾಗಲಿ, ಹೊಸಜೀವದ ಕುರುಹಾಗಲಿ ಈ ಕವಿತೆಯಲ್ಲಿ ಇಲ್ಲ.

    ವರ್ತಮಾನದ ಭಾಷಾ ಹೇರಿಕೆಯ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು, ಪರಿಣಾಮಕಾರಿ ಪ್ರತಿರೋಧವನ್ನು ತೋರುವಂತೆ ಆರಂಭವಾಗುವ ಮೇಲಿನ ಪದ್ಯ ಕಡೆಯ ಭಾಗದಲ್ಲಿ ಅತಿ ವಾಚ್ಯವಾಗಿ ಕವಿತೆಯಾಗುವಲ್ಲಿ ವಿಫಲವಾಗಿದೆ.

    “ನಾವು ಹುಡುಗಿಯರೇ ಹೀಗೆ ” ಕವನ ಸಂಕಲನದಿಂದ ” ಕವಡೆಯಾಟ” ಸಂಕಲನದವರೆಗೂ ಅವರ ಕವಿತೆಗಳಲ್ಲಿ ಕಾಣುವ ವಸ್ತು,ರಚನಾ ವಿನ್ಯಾಸ, ಶೈಲಿ, ತಾತ್ವಿಕತೆಯಲ್ಲಿನ ಹೊಸತನ ಆನಂತರದ ಕವಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಾಣೆಯಾಗಿರುವುದು ನಿಚ್ಚಳವಾಗಿ ಕಾಣುತ್ತದೆ.

    ಪ್ರತಿಭಾ ಮೇಡಂರಂತಹ ಹಿರಿಯ ಕವಿಗಳು ಇಂತಹ ಕವಿತೆಗಳನ್ನು ಬರೆಯುವುದಕ್ಕಿಂತ ಸುಮ್ಮನಿರುವುದು ವಾಸಿ, ಇಲ್ಲವೆ ಸದ್ಯಕ್ಕೆ ಕವಿತೆ ಮುಖೇನ ಹೀಗೆ ಉತ್ತರ ಕೊಡುವುದಕ್ಕಿಂತ ನೇರವಾಗಿ ಮಾಧ್ಯಮಗಳಲ್ಲಿ ಇಲ್ಲವೆ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ಉತ್ತರ ಕೊಡುವುದೋ, ಇಲ್ಲವೆ ಕಮೆಂಟ್ ಕೊಡುವುದು ಶೇಕಡ ನೂರರಷ್ಟು ಒಳ್ಳೆಯದು. ಇಲ್ಲದಿದ್ದರೆ ಹೊಸ ತಲೆಮಾರಿನ ಕವಿಗಳು ಇದೇ ಕವಿತೆ ಅಂದುಕೊಂಡು , ಹಂಚಿಕೊಂಡು ಸಂಭ್ರಮ ಪಡುವ ದಡ್ಡತನಕ್ಕೆ ಒಳಗಾಗುತ್ತಾರೆ…..
    ( ಸದ್ಯದ ಕನ್ನಡದ ಉದಯೋನ್ಮುಖ ಯುವ ಲೇಖಕರೊಬ್ಬರು ಮೇಲಿನ ಕವಿತೆಯನ್ನು ಹಂಚಿಕೊಂಡಿದ್ದರು, ಅದನ್ನು ಕಂಡು ಈ ಮಾತುಗಳನ್ನು ಬರೆಯಲೇ ಬೇಕು ಅನ್ನಿಸಿತು.)

    ಅವಧಿ ಕೂಡ ಯಾವುದು ಕವಿತೆ, ಯಾವುದು ಕವಿತೆಯಲ್ಲ ಎನ್ನುವ ಒಂದು ಸಣ್ಣ ವಿವೇಚನೆ ಯಾ ಮಾನದಂಡವನ್ನು ತನ್ನೊಳಗೆ ಹಾಕಿಕೊಳ್ಳದೆ ಕವಿತೆಯಂತೆ ಕಾಣುವ ಅಕ್ಕರಗಳನ್ನು ಪ್ರಕಟಿಸುವುದೇ ತನ್ನ ಕಾಯಕ ಎಂದು ಮಗುಮ್ಮಾಗಿ ಇರುವುದೂ ಕೂಡ ಇಂತಹ ಎಡವಟ್ಟುಗಳಿಗೆ ಕಾರಣ.

    ರೇಣುಕಾರಾಧ್ಯ ಎಚ್ ಎಸ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: