ಇನ್ನೊಂದು ‘ತಂಗ್ಜಾಮ್’ ಕವಿತೆ…

ಭಾಗ್ಯ ಅವರೇ, ನೀವು ತಂಗ್ಜಾಮ್ ಐಬೋಪಿಶಾಕ್ ಅವರ ಕವನ  ಅನುವಾದಿಸಿದ್ದು ನೋಡಿ ಸಂತೋಷವಾಯಿತು. ಮಣಿಪುರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ.  ಅವರ ಕವನಗಳನ್ನು ಅನುವಾದ ಮಾಡಿರುವ ಇಂಗ್ಲಿಷ್ ಕವಿ ರಾಬಿನ್ ಎಸ್ ನಾಂಗ್ನೋಮ್  ಕೂಡಾ ನನಗೆ ಇಷ್ಟದ ಆತ್ಮೀಯ ಕವಿ ಗೆಳೆಯ. ತಂಗ್ಜಾಮ್ ನ ಇನ್ನೊಂದು ಕವನ ನಾನು ಅನುವಾದಿಸಿದ್ದೇನೆ ನೋಡಿ.  

ಸಿ ಎಚ್ ಭಾಗ್ಯ ಅವರ ಅನುವಾದವನ್ನು ಇಲ್ಲಿ ಓದಿ..

ಮೂಲ : ತಂಗ್ಜಾಮ್ ಐಬೋಪಿಶಾಕ್

ಮಣಿಪುರಿಯಿಂದ ಇಂಗ್ಲಿಷಿಗೆ:  ರಾಬಿನ್ ಎಸ್ ನಾಂಗ್ನೋಮ್

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಅರೆ ಮನುಷ್ಯರ ನಾಡು

ಆರು ತಿಂಗಳು ದೇಹವಿಲ್ಲದ ಬರಿ ತಲೆ
ಇನ್ನಾರು ತಿಂಗಳು ಬರಿ ದೇಹ ತಲೆಯಿಲ್ಲ
ಇಂತಹ ಜನರ ನಾಡನ್ನು ಯಾರಾದರೂ ಕಂಡಿದ್ದಿರಾ?

ಇಲ್ಲ? ನಾನು ನೋಡಿದ್ದೇನೆ. ಇದೊಂದು ಅಜ್ಜಿಕಥೆಯಲ್ಲ
ನೋಡಿದ್ದು ಮಾತ್ರವಲ್ಲ ಅಲ್ಲಿಗೆ ಹೋಗಿದ್ದೇನೆ ಕೂಡಾ
ಆರು ತಿಂಗಳು ಮಾತಾಡುವುದು ತಿನ್ನುವುದು ಅವರ ಕೆಲಸ, ಬೀಸುಕಲ್ಲು ಬೀಸುವಂತೆ
ನಂತರದ ಆರು ತಿಂಗಳು ಭೀಮ ಮುಕ್ಕುತ್ತಾನೆ ಶಕುನಿ ನರಳುತ್ತಾನೆ
ತಲೆಯಿಲ್ಲದ ದೇಹದ ಕೆಲಸ ಮಲ ವಿಸರ್ಜಿಸುವುದು
ತಲೆ ಮಾತಾಡುತ್ತದೆ, ತಿನ್ನುತ್ತದೆ ಕುಡಿಯುತ್ತದೆ
ಬರೀ ಮಾತಾಡುವುದು, ತಿನ್ನುವುದು, ಕುಡಿಯುವುದು.
ದೇಹ ಕೆಲಸ ಮಾಡುತ್ತಲೇ ಇರುತ್ತದೆ; ಶ್ರಮ ಜೀವನ, ಮಲ ವಿಸರ್ಜನೆ; ಶ್ರಮ, ಮಲ.
ಬೆವರುವುದು. ಸಖತ್ ಸುಸ್ತಾಗುವುದು. ಈ ಅರೆ ದೇಹದ ನಾಡಿನಲ್ಲಿ.

ಅಲ್ಲಿ ಹೆಂಗಸರಿರುತ್ತಾರೆಯೇ? ಅಲ್ಲಿಯ ಹೆಂಗಸರು ಹೇಗಿದ್ದಾರೆ?
ಅಲ್ಲಿ ಹೆಂಗಸರೂ ಇದ್ದಾರೆ, ಮಕ್ಕಳೂ ಇದ್ದಾರೆ. ಹೆಂಗಸರೂ ಅಷ್ಟೇ – ಅರೆ ದೇಹದವರು.
ನಮ್ಮ ನಾಡಿನವರಂತೆ ಅವರಿಗೂ ನೀಳ ಕೂದಲು. ಎತ್ತರಕ್ಕೆ, ತುಂಬಿದ ಮೈ ಕೈ, ಅಚ್ಚುಕಟ್ಟಾದ ಅಂಗಸೌಷ್ಠವ. ಅವರ ಉಡುಪು ಸೊನಾಟಾದ ಕೆಳಗೆ ಸುಮ್ಮನೆ ಸುತ್ತಿರುತ್ತಾರೆ. ಆ ನೆಲದ ಕಾನೂನಿನಂತೆ ದೇಹ ಉಡುಪಿನಿಂದ ಮರೆಯಾಗಿರಬಾರದು. ದೇಹಕ್ಕೆ ಆರು ತಿಂಗಳು ವಸಂತ ಋತು. (ದೇಹಕ್ಕೆ ತಲೆ ಇಲ್ಲದಿರುವುದರಿಂದ ಗಂಡು ಹೆಣ್ಣು ಕೂಡಿದಾಗ ಅವರಿಗೇನೂ ಮುಚ್ಚಟೆಯಿಲ್ಲ) ತಲೆ ಮಾತ್ರದ ಭಾಗ ಆರು ತಿಂಗಳಲ್ಲಿ ಹೆರುತ್ತದೆ. ಹೆಂಗಸರು ಬಾಯಲ್ಲಿ ಮಾತಾಡುವುದು ತಿನ್ನುವುದರ ಜೊತೆಗೆ ಹೆರುತ್ತದೆ ಕೂಡಾ. ಗಂಡಸರಿಗಿಂತ ಹೆಂಗಸರ ಲಕ್ಷಣಗಳು ಹೆಚ್ಚು. ಅದಕ್ಕೇ ಹೆಂಗಸರಿಗೆ ಹಲ್ಲುಗಳಿಲ್ಲ. ದೇವರು ಅವರನ್ನು ನಾಜೂಕಾಗಿ ಸೃಷ್ಟಿಸಿದ್ದಾನೆ. ತಲೆ ನಡೆಯುವಾಗ ಅದರ ಎರಡೂ ಅಗಲ ಕಿವಿಗಳು ಹಕ್ಕಿಯಂತೆ ಪಟಪಟನೆ ಬಡಿಯುತ್ತಾ ಹಾರುತ್ತವೆ. ಅವರು ಮಾತಾಡುವ ಭಾಷೆ ನಮಗೆ ಅರ್ಥವಾಗುತ್ತದೆ. ಅವರು ಗಂಡಸರ ಭಾಷೆ ಮಾತಾಡುತ್ತಾರೆ. ಆದರೆ ತಲೆಯಿಲ್ಲದ ದೇಹ ಮಾತಾಡುವಾಗ ಅವರ ದೇಹದಾಳದಿಂದ ಯಾರಿಗೂ ಅರ್ಥವಾಗದ ಧ್ವನಿ ಹೊರಡುತ್ತದೆ. ಆ ಧ್ವನಿಗೆ ವಾಸನೆ ಕೂಡಾ ಇದೆ.

ಇಂತಹ ನಾಡು ಈಗ ಸುದ್ದಿಯಲ್ಲಿದೆ. ಅಷ್ಟು ಹೆಸರಾದ ನಾಡು. ರಾತ್ರಿ ಚಂದ್ರ ಪ್ರಕಾಶಮಾನ. ಮಧ್ಯಾಹ್ನ ಸೂರ್ಯ ಬೆಳಗುತ್ತಾನೆ. ಅಲ್ಲಿ ಬಡತನದ ಸುಳಿವಿಲ್ಲ. ಊಟ ಬಟ್ಟೆಯ ಕೊರತೆಯಿಲ್ಲ. ಕೆಲವರು ಕುಬೇರನಿಗಿಂತ ಶ್ರೀಮಂತರು. ದೇಹದ ಆರು ತಿಂಗಳ ಬೆವರಿನ ಗಳಿಗೆಯನ್ನು ಆರು ತಿಂಗಳ ತಲೆ ಹುರಿದು ಮುಕ್ಕಿಬಿಡುತ್ತದೆ. ಅಲ್ಲಿ ರಾಜಕೀಯ ಹಕ್ಕುಗಳಿವೆ. ಪ್ರಜಾಪ್ರಭುತ್ವ ಸಂಪೂರ್ಣ ಯಶಸ್ವಿ ಇಲ್ಲಿ. ಪ್ರತಿ ಐದು ವರ್ಷಕ್ಕೆ ಚುನಾವಣೆ ನಡೆಯುತ್ತದೆ.
ಆದರೆ ಈ ನಾಡಿನ ಮನುಷ್ಯರಿಗೆ ಹೆಸರಿಲ್ಲ. ಹೆಸರಿಲ್ಲದ ನಾಗರಿಕರ ಹೆಸರಿಲ್ಲದ ಪ್ರತಿನಿಧಿಗಳು ಅರೆ ಮನುಷ್ಯರ ನಾಡನ್ನು ಆಳುತ್ತಾರೆ. ಯಾಕೆಂದರೆ ಮನುಷ್ಯರ ಹೆಸರನ್ನು ತಲೆಗೆ ಕೊಡುವುದೋ ಇಲ್ಲಾ ದೇಹಕ್ಕೋ ಯಾರಿಗೂ ನಿರ್ಧರಿಸಲಾಗಿಲ್ಲ.

ಇಂತಹ ನಾಡು ಬಹಳ ಸುದ್ದಿಯಲ್ಲಿದೆ, ಬಹಳಷ್ಟು ಮಾತಾಡುತ್ತಾರೆ ಈ ನಾಡಿನ ಬಗ್ಗೆ.

‍ಲೇಖಕರು Admin

July 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: