ದೀಪಾ ಗೋನಾಳ ಹೊಸ ಕವಿತೆ- ಮೂರು ಸೀರೆಗಳು… ಮೂರು ಕವಿತೆಗಳು…

ದೀಪಾ ಗೋನಾಳ

1.

ವಾರ್ಡರೋಬಿನ ಎದೆಬೀಗ ತೆಗೆದು
ಒಂದೊಂದೇ ಸೀರೆ
ಬಿಚ್ಚಿ ತೋರಿಸುತ್ತಾಳೆ
ಇವಳು,
ಕವಿತೆ ಬರಿ ಸೀರೆಯ ಮೇಲೊಂದು
ಎಂದು ಒಂದೇ ಸಮನೆ
ಹೇಳುತ್ತಲೇ ಇದ್ದಾಳೆ

ಸ್ವತಃ ಕವಿತೆಯಂತೆ
ಸೀರೆಯುಟ್ಟ ಲಯವಾಗಿ
ನಡೆದರೆ
ಎಲ್ಲಿ ಬರೆಯುವುದು ಕವಿತೆ!?

ನೋಡಿದು ಇಳಕಲ್ ಸೀರೆ
ಇದು ಮೊಳಕಾಲ್ಮೂರು ಸೀರೆ
ಇದು ನೀನೆ ಮೊದಲ ರಾತ್ರಿಗೆಂದು ತಂದ
ಬಿಳಿ ಸೀರೆ ಕೆಂಪು ಬಾರ್ಡರು
ನಿನ್ನ ಉಸಿರಿಗೆ ಸಿಕ್ಕು ಎಲ್ಲ ಸಿಕ್ಕುಸಿಕ್ಕು
ಮತ್ತೆ ಉಡಲಾರದಂತೆ ಮಾಡಿಬಿಟ್ಟೆ

ಇದು ನೋಡಿಲ್ಲಿ ಹಸಿರು ಸೀರೆ
ಅಪ್ಪ ಪಂಚಮಿ ಹಬ್ಬಕ್ಕೆ ತಂದದ್ದು
ಇದು ನಾನು ನೀನು ಮೊದಲ ಸಲ ಮೈಸೂರಿಗೆ
ಹೋದಾಗ ತಂದ ಮೈಸೂರ ಸೀರೆ

ಇದೋ ಉಡುಪಿ ಸೀರೆ
ಸೀರೆ ತೋಯ್ದಿತೆಂದು
ಮೊಣಕಾಲ‌ತನಕ ಎತ್ತಿಡಿದು
ಸಮುದ್ರ ದಂಡೆಗುಂಟ
ಹಿಡಿದು ನಿನ್ನ ಕೈ
ಓಡಾಡಿದ್ದು ನೆನಪಿಲ್ಲವೇ!?
ಎನ್ನುತ್ತಾಳೆ..
ಮೆಲ್ಲನೆ ಸೊಂಟ ಗಿಲ್ಲಿದ್ದೆ
ಅದೇ ದಿನ‌ ಅದೇ ಸೀರೆ
ಮರೆಯಲ್ಲಡಗಿದ ಮಚ್ಚೆ ಹಿಡಿದು

ಇದು ನೀ‌‌ ನನ್ನ ಮೊದಲ ಸಲ
ನೋಡಲು ಬಂದಾಗ ಉಟ್ಟ ದಡಿ ಸೀರೆ
ಎಂದು ಮತ್ತೊಂದು ಸೀರೆ
ತೆಗೆಯುತ್ತಾಳೆ
ಹೇಗೆ ಮರೆಯಲಿ !?
ಉಬ್ಬಿದ ಸೀರೆಗೆ
ಮೊದಲ ಸಲ
ಎಡವಿ ಬಿದ್ದದ್ದು!

ಇವಳ ಎದೆಕಪಾಟಲಿ
ಪ್ರತಿ ಸೀರೆಯ ಹಿಂದೆಯೂ
ಒಂದೊಂದು ಕತೆ ಇದೆ
ಇವಳು ಪ್ರತಿ ಸಲ ಸೀರೆ
ಉಟ್ಟಾಗಲು ನಾನು
ಕವಿತೆ ಮರೆತ ನೆನಪಿದೆ

ಸೀರೆ ಮೇಲೊಂದು ಕವಿತೆ ಬರಿ
ಎನ್ನುವ ಕವಿ ಹೆಂಡತಿಗೆ,
ಸೀರೆ ಸೆಳೆಯುವುದರಲಿ
ಕವಿ ನಿಸ್ಸೀಮ ಎಂಬ ಸತ್ಯ
ಗೊತ್ತಿದ್ದರೂ
ಎಡಬಿಡದೆ ಕಾಡುತ್ತಾಳಲ್ಲಾ
ಇದು ವಿಧಿಯಾಟವೇ!?

ತಾ ಇಲ್ಲಿ ಸೀರೆ
ಎಂದು
ನೆರಿಗೆ ಹೆಣೆವ ನಾಟಕ
ಮಾಡಿ ಮೆಲ್ಲನೆ ಹೊಕ್ಕಳ
ಸಂಧಲ್ಲಿ ಬೆರಳಿಟ್ಟರೆ
ಪಕ್ಕನೆ ಕೈ ಹಿಡಿದು
ನಡಿ ನಡಿ ಪೆನ್ನು ಹಿಡಿ
ಎನ್ನುವ ಮಡದಿಗೆ
ಸೀರೆಗವಿತೆ ಕಟ್ಟುವುದಕಿಂತಲೂ
ಸೀರೆ ಉಡಿಸುವುದು, ಉಡಿಸಿದ
ಸೀರೆ ಬಿಚ್ಚಿ ಮಡಚುವುದು ಮೇಲು
ಎಂಬ ಸತ್ಯ ಹೇಗೆ ಮುಟ್ಟಿಸುವುದು!?

ಕವಿತೆಗಿಂತ ಸೀರೆಯೆ ಚೆಂದ
ಸೀರೆ ಉಟ್ಟ ನೀನೆ ಅಂದ
ಎಂದು ಮನತಟ್ಟುವಂತೆ
ಹೇಳುವುದು ಹೇಗೆ!?
ಇವಳು ಸೀರೆ ಉಟ್ಟಾಗಲೇ
ಮರೆತ ಕವಿತೆಗಳ
ಲೆಕ್ಕವಿಲ್ಲ ನನ್ನ ಬಳಿ;
ಇವಳಿಗೋ ಪ್ರತಿ ಸೀರೆಯ
ಹೂ ಬಳ್ಳಿಗಳ ಬಾಯಿಪಾಠವಿದೆ

ಅಗಲ‌ ರವಿಕೆಯ
ಉಟ್ಟು ನಿಂತರೆ
ಹರವು ಬೆನ್ನು ತೋರುತ್ತ
ನಿಂತರೆ!!
ಕವಿತೆ ಬರೆಯಬೇಕು
ಸಪಾಟ ಬೆನ್ನ ಮೇಲೆ!
ಹಾಳೆ ಮೇಲೆ
ಬರೆದ ಕವಿತೆಗಳೆಲ್ಲ
ಸವತಿ ಮತ್ಸರಕೆ
ಕುಸಿಯಬೇಕು ನೆಲಕೊರಗಿ

ಸೆರೆಗಿನ ಮೇಲೆ ಹೋಯ್ದಾಡುವ
ಹೂಗಳ ಕಂಡು‌
ದುಂಬಿಯಂತೆ ಕಣ್ಣ ಸನ್ನೆಯಲ್ಲಿ
ನೂರಾರು ಕವಿತೆ
ಗೀಚುತ್ತೇನೆ ನಿತ್ಯ

ಆದರೂ ಹಾಳೆ ಮೇಲಿನ
ಕವಿತೆಯನೇ ಬೇಡುತ್ತಾಳೆ
ಇಂತ ರಸಗವಿಗೆ
ರಸಭಂಗ ಮಾಡಿದರೆ
ಮುಂದಿನ ಜನುಮದಲ್ಲಿ
ಜೀನ್ಸಷ್ಟೆ ಉಟ್ಟು
ಬದುಕುವ ಶಾಪ
ತಟ್ಟುವುದಂತು ಖಂಡಿತ ಕವಿಹೆಂಡತಿಗೆ

2.

ಎತ್ತಿ ಸೀರೆ
ಮೊಣಕಾಲ ತನಕ
ಸಿಕ್ಕಿಸುವಳು ಭಾರದ ನೆರಿಗೆ
ಸಪೂರ ಸೊಂಟಕ್ಕೆ

ಗಿಡ್ಡ ಸೆರಗನೆ ಮತ್ತೆ
ಎಳೆದುಜಗ್ಗಿ
ಬಲಟೊಂಕಕ್ಕಿಟ್ಟು
ಬಾಗಿ ನೆಡುವ ಬತ್ತದ ಸಸಿಗೆ
ತಾಗುತಿದೆ
ಎದೆ ಬೆವರು‌

ನಕ್ಕು ಮುಂದಾಗುತ್ತಾಳೆ
ಹೊಸಪೈರಿನ ಕಚಗುಳಿಗೆ
ಚುಪ್! ಎಂದು ಗದರಿಸಿ

ಗದ್ದೆಯ ಬದುವಲಿ
ಓಡುವ ಗಾಳಿಗೆ
ಬಾಯಿಲ್ಲ ಗುಲ್ಲೆಬ್ಬಿಸಲು

ಇಲ್ಲದಿದ್ದರೆ
ಈ ಗದ್ದೆ ಬಯಲಲಿ
ಮೀನಖಂಡ ತೋರಿಸುತ್ತ
ಎದೆ ಸೆರಗಿನ ಹಂಗು ತೊರೆದು
ಓಡಾಡುತ್ತಿದ್ದರೆ !?
ಸೀರೆಯನು ಸೊಂಟದ ಬದಿಗೊತ್ತಿ
ನೀರೆಯರು ..!?

3.

ಒಂದೊಂದೇ ಸೀರೆ
ಹೊರ‌ ತೆಗೆಯುತ್ತೇನೆ
ವಾರ್ಡರೋಬಿನ ಎದೆಯಿಂದ

ಬಂಗಾರ ಬಣ್ಣದ ದೊಡ್ಡಂಚು
ಒಳಗೆಲ್ಲ ಹಸಿರುಬಳ್ಳಿ ಸೀರೆ
ಯಾವಾಗ ತಂದಿದ್ದು
ಹಾ ಆ ದಿನ ನಂಗೆ ನೆನಪಿದೆ
ಅಷ್ಟು ದೊಡ್ಡಂಚ ಸೀರೆಲಿ
ನಿನ್ನ ಕುಳ್ಳಹುಡುಗಿ ಮುಚ್ಚೆ
ಹೋಗುತ್ತಾಳೆ ಅಂದಿದ್ದೆ,

ನೀನಾ ಕುಳ್ಳಿ!?
ಪುಟು ಪುಟು
ಕಾರಂಜಿ ಚಿಲುಮೆ
ತರ ಜಿಗಿಯೊ ನೀನು
ಕುಳ್ಳಿನಾ !?
ಅವನ ದೊಡ್ಡ ನಗೆ

ಒಂದಿನ‌ ಮೈಸೂರಿಂದ
ಬಂದವನೆ ದೊಡ್ಡದೊಂದು
ಕವರ್ ಕೈಗಿಟ್ಟ,
ಬಿಚ್ಚಿ ನೋಡಿದ್ರೆ
ಮೈಸೂರ ಮಲ್ಲಿಗೆ ಪೊಟ್ಟಣ
ಮಲ್ಲಿಗೆ ಬಣ್ಣದ ರೇಶಿಮೆ‌
ಸೀರೆಗೆ ಅಲ್ಲಲ್ಲಿ ಮೊಗ್ಗಿನ ಚಿತ್ತಾರ
ನನಗೆ ಮಾತೆ ಹೊರಡಲಿಲ್ಲ
ಹೊಸ ಮದುಮಕ್ಕಳ‌
ಖುಷಿಗಳಿಗೆ ಕಾರಣ ಬೇಕಿಲ್ಲ

ತಿಂಗಳಿಗೊಂದೊ ಎರಡೊ
ಸೀರೆ,
ಕಂಡಕಂಡ ಓಲೆ
ತೊಟ್ಟ ಬಳೆಗಳು,
ಅವನ‌ತೆಕ್ಕೆಯಲ್ಲಿ
ಒಡೆದ ಬಳೆಗಳು,
ಲೆಕ್ಕ ಇಬ್ಬರು ಇಟ್ಟಿಲ್ಲ
ರಾತ್ರಿಗೆ ಒಂದು
ಬಳೆ ಫಳ್ಳೆಂದರೆ
ಬೆಳಗಿಗೆ ಡಜನ್ ಬಳೆಯೊಂದಿಗೆ
ಕೈಹಿಡಿವ ನಲ್ಲ

ಅಡುಗೆ ಮನೆಯಲ್ಲಿ
ಹೆಜ್ಜೆ ಸಪ್ಪಳವಿಲ್ಲದೆ
ಬಂದು ಬೆನ್ನು ಅಪ್ಪಿದರೆ
ಅಡುಗೆಗೆ ಎಂತದೊ
ರುಚಿ
ಊಟ ಮಾಡುವಾಗ
ಮಾತ್ರ ನಾಲಿಗೆ
ಕಬ್ಬುತಿಂದು ಸೀಳಿಕೊಂಡ
ಅನುಭವ

ಕೂತು ಬರೆದರೆ
ದೊಡ್ಡ ಕಾದಂಬರಿಯೇ
ಆದೀತು
ಈಗ ಅವನಿಲ್ಲ
ನೆನಪುಗಳ
ಮೆಲ್ಲುತ್ತ ಮತ್ತೆ ಮತ್ತೆ
ಬದುಕುವ ಸಾಹಸಕ್ಕೆ
ಬೀಳುತ್ತೇನೆ
ವಾರ್ಡರೋಬಿನ ಸೀರೆ
ಜರಿದು ದೊಪ್ಪನೆ ಬೀಳುತ್ತೆ

ಉಟ್ಟು ಆಡಂಬರ
ಮಾಡಲು
ಮನಸ್ಸಿಲ್ಲ
ನೋಡುವ ಕಣ್ಣಿಲ್ಲವೆಂದಮೇಲೆ
ಸೀರೆ ಉಡುವುದೆ ಅರ್ಥಹೀನ
ಸ್ವರ್ಗವಿದ್ದರೂ ವ್ಯರ್ಥ

‍ಲೇಖಕರು Admin

July 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: