ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಹೆಣ್ಣು ಮತ್ತು ಬೆಂಕಿ…

ಮೂಲ: ಪೂನಂ ತುಷಾಮದ್, ಹಿಂದಿ ದಲಿತ ಸ್ತ್ರೀವಾದಿ ಕವಿ 

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಅವನೆಂದ,
ನಿನ್ನೊಳಗೆ ಅತೀ ಬೆಂಕಿ ಉರಿಯುತ್ತಿದೆ.
ನಾನಂದೆ: ಹೆಣ್ಣು ಮತ್ತು ಬೆಂಕಿ
ನಾಗರಿಕತೆಯಷ್ಟೇ ಪುರಾತನ.
ಮನುಷ್ಯತ್ವದ ಸಂಸ್ಕಾರದಷ್ಟು ಹಳತು.
ಆದರೂ ವ್ಯತ್ಯಾಸವಿಷ್ಟೇ,
ಮನುಷ್ಯರಾಗುವ ಭರದಲ್ಲಿ ನಾವು
ಹೆಣ್ಣು ಮತ್ತು ಗಂಡುಗಳಾಗುತ್ತೇವೆ.
ನಾವು ಎನ್ನುವುದು
ನಾನು ಮತ್ತು ನೀನು ಆಗಿಬಿಟ್ಟಿದೆ.

ಗಂಡು, ಬೆಂಕಿಯ ಸಿಂಹ ಪಾಲನ್ನು
ತನ್ನೊಳಗೆ ವಶಪಡಿಸಿಟ್ಟುಕೊಂಡ.
ಹೆಣ್ಣಿನ ಪಾಲಿನಲ್ಲಿ ಅಸಲಿ
ಬೆಂಕಿಯ ಆರಂಭದ ಪಾಲುಗಾರಿಕೆಯಲ್ಲೇ
ಅನ್ಯಾಯವಾಯಿತು.
ಅದಕ್ಕೇ, ಗಂಡು ತನ್ನಿಷ್ಟ ಬಂದಾಗ
ತನ್ನಿಷ್ಟ ಬಂದ ಕಡೆ, ತನ್ನಿಷ್ಟದ ರೀತಿಯಲ್ಲಿ
ತನ್ನೊಳಗಿನ ಬೆಂಕಿಯನ್ನು
ಬಿಡುಗಡೆಗೊಳಿಸುತ್ತಾನೆ.
ಆದರೆ ಹೆಣ್ಣು ತನ್ನ ಬೆಂಕಿಯನ್ನು
ಜತನದಿಂದ ಕಾಪಾಡಿಕೊಂಡು
ತಲೆಮಾರುಗಳವರೆಗೆ
ವಿಸ್ತರಿಸುತ್ತಾಳೆ.

ಹೆಣ್ಣಿಗೆ ಎಂದೋ ಗೊತ್ತಾಗಿದೆ
ಗಂಡಿನ ಈ ಸಹಜ ವಂಚಕತನ.
ಗರ್ಭಧಾರಣೆಯ ಕ್ಷಣದಿಂದ
ಸಂತಾನೋತ್ಪತ್ತಿಯ
ಅಸಹನೀಯ ನೋವು
ತನ್ನ ಸಂತತಿಗೆ ಜನ್ಮ ನೀಡುವ ಗಳಿಗೆಯವರೆಗೆ

ಗಂಡಿನ ವಶದಲ್ಲಿರುವ ಅಗಾಧ ಬೆಂಕಿ
ವಿನಾಶಕಾರಿಯಾಗಬಹುದು,
ಸಕಲ ಮಾನವಕುಲಕ್ಕೆ ದುರಂತವಾಗಬಹುದು.

ಅದಕ್ಕೇ …
ತನ್ನ ಬೆಂಕಿಯ ಸಂರಕ್ಷಣೆಯೇ
ಹೆಣ್ಣಿನ ಅತಿಮುಖ್ಯ ಧ್ಯೇಯ.
ಪ್ರಕೃತಿ ಮತ್ತು ಸಂತತಿಯನ್ನು ಸಂರಕ್ಷಿಸುವ
ನಿರಂತರ ಯತ್ನದಲ್ಲಿ ಅವಳು
ಸ್ವತಃ ಒಂದು
ಪ್ರಯೋಗದ ತೊಟ್ಟಿಲಾಗಿಬಿಟ್ಟಳು.
ಕಲಿಯಲಿಲ್ಲ ಗಂಡು
ತನ್ನೊಳಗೇ ಬೆಂಕಿಯನ್ನು
ಕಾಪಿಟ್ಟುಕೊಳ್ಳುವ ತಂತ್ರ.
ಅದಕ್ಕೇ ಪರಿತಪಿಸುತ್ತಾನೆ ಅವನು
ಮತ್ಸರ, ಕೋಪ, ಸೇಡಿನ ಜ್ವಾಲೆಯಲ್ಲಿ.

ಬದಲಿಗೆ ಹೆಣ್ಣು ಆ ಕಲೆಯನ್ನು
ಕೊನೆಯಿಲ್ಲದ ಯಾನದಲ್ಲಿ
ತಾನೇ ಕಂಡುಕೊಳ್ಳುತ್ತಾಳೆ.
ಕೆಲವೊಮ್ಮೆ ತನ್ನೊಳಗಿನ ಬೆಂಕಿಯನ್ನು ಬಳಸಿಕೊಳ್ಳುತ್ತಾ
ಕೆಲವೊಮ್ಮೆ ತನ್ನ ಹಸಿದ ಜಠರಾಗ್ನಿಯನ್ನು ನಿಯಂತ್ರಿಸುತ್ತಾ

ಕಲಿತಿದ್ದಾಳೆ ಅವಳು
ತನ್ನ ಪಾಲಿನ ಬೆಂಕಿಯನ್ನು
ಹಂಚುವ ಕ್ರಮವನ್ನು-
ಒಳಗೂ ಹೊರಗೂ.
ಸ್ವಲ್ಪ ಬೆಂಕಿಯನ್ನು ಅವಿತಿಟ್ಟಿದ್ದಾಳೆ
ತನ್ನ ಹೃದಯದ ಯಾವುದೋ
ಕತ್ತಲ ಮೂಲೆಯಲ್ಲಿ.
ಆರದಂತೆ ಅದು ಹಾಗೇ
ಮೆಲ್ಲನೆ ಕಾವಿರುತ್ತದೆ.
ಸಂಬಂಧಗಳ ಚೈತನ್ಯ ಮತ್ತು
ಬೆಚ್ಚನ್ನು ಉಳಿಸಿಕೊಳ್ಳುವಷ್ಟು.
ಸ್ವಲ್ಪ ಬೆಂಕಿಯನ್ನು ಅವಳು ತನ್ನ ಮನೆಯ
ಗರ್ಭದೊಳಗೆ ಅಡಗಿಸಿಟ್ಟಿದ್ದಾಳೆ,
ಶತಮಾನಗಳಿಂದ.
ತನ್ನ ಮನೆಯನ್ನು ಬೆಳಗಿಸಲೆಂದು.
ಸ್ವಲ್ಪ ಬೆಂಕಿಯನ್ನು ಅವಳು ತನ್ನ ಒಲೆಗೆ ನೀಡುತ್ತಾಳೆ
ಉರಿಯುತ್ತಿರಲೆಂದು ಅನ್ನ ಬೇಯುತ್ತಿರಲೆಂದು.
ತಮ್ಮ ಹೊಟ್ಟೆ ಕೊರೆಯುತ್ತಿರುವ ಹಸಿವು ತಣಿಯಲೆಂದು.

‍ಲೇಖಕರು Admin

July 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

2 ಪ್ರತಿಕ್ರಿಯೆಗಳು

  1. ನೂರುಲ್ಲಾ ತ್ಯಾಮಗೊಂಡ್ಲು

    ತುಂಬ ಚೆಂದದ ಅನುವಾದ ಪ್ರತಿಭಾಜೀ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: