‘ಒಂದು ಕಾನೂನಾತ್ಮಕ ಕೊಲೆ’ ಈ ನಾಟಕ ನಾನೇಕೆ ಬರೆದೆ ?

‘ಅವಧಿ’ ಮಾಧ್ಯಮ ಸಹಯೋಗದಲ್ಲಿ ಶಿವಮೊಗ್ಗದ ‘ಹೊಂಗಿರಣ’ ತಂಡ ಬೆಂಗಳೂರಿನಲ್ಲಿ ಹೊಸ ನಾಟಕವನ್ನು ಅಭಿನಯಿಸುತ್ತಿದೆ.

ಖ್ಯಾತ ಕಥೆಗಾರ ಶಿವಕುಮಾರ ಮಾವಲಿ ಅವರು ಬರೆದ ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹೊಂಗಿರಣ ಚಂದ್ರು ನಿರ್ದೇಶಿಸಿದ್ದಾರೆ.

ಈ ತಿಂಗಳ 31 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ ಇದೆ.

ಟಿಕೆಟ್ ಕಾದಿರಿಸಲು-ಇಲ್ಲಿ ಒತ್ತಿ

ಶಿವಕುಮಾರ ಮಾವಲಿ

“ಮೊಸರು ಅಥವಾ ಲಸ್ಸಿಯನ್ನು ಪ್ಯಾಕೆಟ್ ನಲ್ಲಿ ಅಲ್ಲದೆ ಲೂಸ್ ಆಗಿ ಕೊಂಡರೆ 5% ಜಿಎಸ್ ಟಿ ಕೊಡಬೇಕಾಗಿಲ್ಲ”
ಜಿ.ಎಸ್.ಟಿ. ಕೌನ್ಸಿಲ್.‌

ಇಂಥ ಅನೇಕ ಸುದ್ದಿಗಳನ್ನು ಹಲವು ವರ್ಷಗಳ ಕಾಲ ಓದುತ್ತಾ ಬಂದಿದ್ದರ ಪರಿಣಾಮವೇ ಈ ನಾಟಕದ ಸೃಷ್ಟಿ ಎಂದು ಹೇಳಬಲ್ಲೆ.

ಎರಡು ವರ್ಷಗಳ ಹಿಂದೆ ಅವಧಿಗೆ ಮಾವಲಿ ರಿಟರ್ನ್ಸ್ ಎಂಬ ಹೆಸರಿನಲ್ಲಿ ವಾರಕ್ಕೊಂದು ಕತೆ ಬರೆಯುತ್ತಿದ್ದೆ. ಒಂದು ವಾರ ಯಾವ ಕತೆಯೂ ತಲೆಗೆ ಬರದ ಕಾರಣ ಹತ್ತು ನ್ಯಾನೋ ಕತೆಗಳನ್ನು ಬರೆದೆ. ಅದರಲ್ಲಿ ಮೂರು ಸಾಲಿನ ಕತೆಯೊಂದಿತ್ತು. ಒಬ್ಬ ಯುವಕನಿಗೆ ಸರ್ಕಾರದಿಂದ ಒಂದು ಪತ್ರ ಬಂತು. ಅದರಲ್ಲಿ ಹೀಗೆ ಬರೆಯಲಾಗಿತ್ತು.(ಅದೇನು ಬರೆದಿತ್ತು ಎಂಬುದು ಕತೆಯ ಜೀವಾಳವಾದ್ದರಿಂದ ಅದನ್ನಿಲ್ಲಿ ಹೇಳಲಾರೆ) ಈ ಮೂರು ಸಾಲಿನ ಕತೆಯೇ ಈಗ ಒಂದು ಕಾನೂನಾತ್ಮಕ ಕೊಲೆ ಎಂಬ ನಾಟಕವಾಗಿ ಹೊರ ಹೊಮ್ಮಿದೆ. ಆ ಮೂರು ಸಾಲಿನ ಕತೆಯ ವಸ್ತುವನ್ನಿಟ್ಟುಕೊಂಡು ಈ ನಾಟಕ ರಚಿಸಿದ್ದೇನೆ.

ಹಾಗೆ ನೋಡಿದರೆ ಈ ಪಾತ್ರಗಳ್ಯಾವೂ ಸೃಷ್ಟಿಸಿದವುಗಳಲ್ಲ. ನಮ್ಮ ನಿಮ್ಮ ಸುತ್ತ ಇರುವ ಜನರೇ. ಒಂದು ಅವಾಸ್ತವ ಸಂಗತಿಯನ್ನಿಟ್ಟುಕೊಂಡು ನೈಜ ಪಾತ್ರಗಳು ಮಾತಾಡುತ್ತವೆ.‌ ದೇಶವೊಂದರ ಆರ್ಥಿಕ ಅಭವೃದ್ದಿಯನ್ನು ಅಳೆಯುವ ಮಾನದಂಡಗಳು ಸಾಮಜಿಕ ಅಂಶಗಳನ್ನು ಪರಿಗಣಿಸಲು ಸೋತರೆ ಏನಾಗುತ್ತದೆ ? ದೇಶವನ್ನೋ, ರಾಜ್ಯವನ್ನೋ ನಂ.1 ಮಾಡಬೇಕು ಎಂಬ ಹಪಾಹಪಿ ಎಂಥಾ ಅನಾಹುತಗಳಿಗೆ ಕಾರಣವಾಗಬಲ್ಲದು ಎಂಬ ಅಂಶ ಈ ನಾಟಕದಲ್ಲಿದೆ.

ಆಧುನಿಕ‌ ಸರ್ಕಾರಗಳು ಕೇವಲ ‘ಪೋಲೀಸ್ ಸ್ಟೇಟ್ ‘ ಗಳಾಗಿರದೆ ‘ವೆಲ್ ಫೇರ್ ಸ್ಟೇಟ್'(ಕಲ್ಯಾಣ ರಾಷ್ಟ್ರ) ಗಳಾಗಿವೆ. ತನ್ನ ಪ್ರಜೆಗಳ ರಕ್ಷಣೆ ಮಾಡುವುದರ ಜೊತೆಗೆ ಅವರ ಸರ್ವತೋಮುಖ ಅಭಿವೃದ್ಧಿಯ ಹೊಣೆಯನ್ನು ತಾವೇ ಹೊತ್ತುಕೊಂಡು ಹಲವಾರು ಯೋಜನೆಗಳನ್ನು , ಕಾನೂನುಗಳನ್ನು ರೂಪಿಸುತ್ತವೆ. ಆದರೆ ಆ ಯೋಜನೆ, ಕಾನೂನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ,ಜಾರಿಗೆ ತರುವಲ್ಲಿ ಸರ್ಕಾರದ ಅತಾರ್ಕಿಕ ನಿಲುವುಗಳು , ರಾಜಕಾರಣಿಗಳ ಸ್ವಾರ್ಥ , ಅಧಿಕಾರಿಶಾಹಿಗಳ ಭ್ರಷ್ಟತೆ ಮುಂತಾದವು ಸದಾ ಮುಳ್ಳುಗಳಾಗಿರುತ್ತವೆ.‌ ಅಭಿವೃದ್ಧಿ ಎಂದರೆ ಏನು ಎಂಬ ವ್ಯಾಖ್ಯಾನವನ್ನು ಅರ್ಥಶಾಸ್ತ್ರೀಯ ನೆಲೆಯಲ್ಲಿ ನೋಡುವುದಕ್ಕೂ ,ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.‌ ಇಲ್ಲಿಯೇ ಜನ ಮತ್ತು ಸರ್ಕಾರದ ನಡುವೆ ವೈರುಧ್ಯವುಂಟಾಗುವುದು.‌ ದೇಶವೊಂದು ನಂ.ಒನ್ ಆಗುವುದು ಎಂಬುದರ ಅರ್ಥ ,ಅನರ್ಥಗಳು ಹಾಗೂ ಸರ್ಕಾರದ ನಿರ್ಧಾರಗಳು ಕೆಲವೊಮ್ಮೆ ಹೇಗೆ ನಿರರ್ಥಕವಾಗಿರುತ್ತವೆ ಎಂಬುದಕ್ಕೆ ಈ ನಾಟಕದ ವಸ್ತು ಉದಾಹರಣೆಯಾಗಿದೆ. ಇದೊಂದು ಅಸಂಗತದಂತೆ ಕಾಣುತ್ತಲೇ ನೈಜದ ಪರಿಸ್ಥಿತಿ ಮತ್ತು ಪ್ರಶ್ನೆಗಳನ್ನು ನಮ್ಮ ಮುಂದಿಡುವ ಕತೆ. ಏನೇನೋ ಕಾರಣಗಳಿಗೆ ಹಿಂಸೆಯತ್ತ ಹೆಜ್ಜೆಯಿಡುತ್ತಿರುವ ಸಮಾಜಕ್ಕೆ ‘ಕೊಂದವರುಳಿದರೆ ಕೂಡಲಸಂಗಮ ?’ ಎಂಬ ವಚನದ ಮೂಲಕ ಅಹಿಂಸೆಯ ಪ್ರಾಮುಖ್ಯತೆಯನ್ನು ಸಾರುವ ಪ್ರಯತ್ನ ನಾಟಕದಲ್ಲಿದ್ದು, ಇದೊಂದು ಸೋಷಿಯೋ -ಪೊಲಿಟಿಕಲ್ ಕಮ್ ಸೈಕಲಾಜಿಕಲ್ ಥ್ರಿಲ್ಲರ್.

ಇಲ್ಲಿನ ಯಾವ ಪಾತ್ರಗಳಿಗೂ ಹೆಸರಿಟ್ಟಿಲ್ಲ.‌ ಅವುಗಳ ಸಂಭಾಷಣೆಯಲ್ಲೇ ಆ ಪಾತ್ರಗಳ ಪರಿಚಯ ಪ್ರೇಕ್ಷಕರಿಗೆ ಮಾಡಿಸುವ ಉದ್ದೇಶ ಇದರ ಹಿಂದಿದೆ. ಈ ನಾಟಕ ನೋಡುವಾಗ ಪ್ರೇಕ್ಷಕರಿಗೆ ಕೆಲವು ನಿಜ ಜೀವನದ ತಮ್ಮ ಸುತ್ತಮುತ್ತಲಿನ ಕೆಲವರಾದರೂ ನೆನಪಾಗಿಯೇ ಆಗುತ್ತಾರೆ. ಹಾಗಾಗಿಯೇ ಯಾವ ಪಾತ್ರಕ್ಕೂ ಹೆಸರು ಬೇಡವೆನಿಸುತ್ತದೆ.

ಈ ನಾಟಕವನ್ನು ನನ್ನ ಎರಡು ದಶಕಗಳ ಗೆಳೆಯ ಚಂದ್ರು ಹಿರೆಗೋಣಿಗೆರೆ ಮನಮುಟ್ಟುವಂತೆ ವಿನ್ಯಾಸ ಮಾಡಿ ನಿರ್ದೇಶಿಸಿದ್ದಾನೆ. ನಮ್ಮನ್ನೆಲ್ಲ ರಂಗಭೂಮಿಗೆ ಕರೆತಂದ ಡಾ.ಸಾಸ್ವೆಹಳ್ಳಿ ಸತೀಶ್ ಮುಖ್ಯಮಂತ್ರಿಯ ಪಾತ್ರದಲ್ಲೂ , ಡಾ.ನಾಗಭೂಷಣ್ ದೇಶದ ಪ್ರಜೆಯೊಬ್ಬನ ಪಾತ್ರದಲ್ಲೂ ಅಭಿನಯಿಸಿ ನಾಟಕದ ತೂಕವನ್ನು ಹೆಚ್ಚಿಸಿದ್ದಾರೆ. ಉಳಿದ ಎಲ್ಲಾ ಕಲಾವಿದರೂ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಿವಮೊಗ್ಗದಲ್ಲಿ ನಾನು ಇದರ ಮೊದಲ ಪ್ರದರ್ಶನ ಖುದ್ದು ನೋಡಿದ್ದೇನೆ. ಹೊಂಗಿರಣ ತಂಡ ಅದ್ಭುತವಾಗಿ ಇದನ್ನು ಭಿನಯಿಸಿದೆ.

ಈಗ ಬೆಂಗಳೂರಿನ ಕಲಾಗ್ರಾಮದಲ್ಲಿ ಇದೇ ತಿಂಗಳ 31 ಭಾನುವಾರ ಸಂಜೆ 7 ಕ್ಕೆ ಈ ನಾಟಕ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಪ್ರೇಕ್ಷಕರು ಬಂದು ನಾಟಕ ನೋಡಿ ಅಭಿಪ್ರಾಯ ತಿಳಿಸಬೇಕಾಗಿ ಈ ಮೂಲಕ ಕೋರುತ್ತೇನೆ.

‍ಲೇಖಕರು Admin

July 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕಿರಣ ಭಟ್

    ನಾಟಕ ನೋಡಬೇಕಿದೆ.
    ಒಳ್ಳೇ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: