ಪ್ರತಿಭಾ ನಂದಕುಮಾರ್ ಅಂಕಣ – ಹೈದರನಿಗೆ ಸವಾಲಾದ ಕೆಲವು ಸಂಗತಿಗಳು

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಹೈದರಾಲಿ ಪ್ರವರ್ಧಮಾನಕ್ಕೆ ಬಂದದ್ದನ್ನು ಅತ್ತ ಮರಾಠರು ಇತ್ತ ಹೈದರಾಬಾದ್ ನಿಜಾಮರು, ಫ್ರೆಂಚರು ಮತ್ತು ಈಸ್ಟ್ ಇಂಡಿಯಾ ಕಂಪನಿ ಗಮನಿಸುತ್ತಿದ್ದರು. ಹಿಂದೂ ರಾಜರನ್ನು ಪಕ್ಕಕ್ಕಿರಿಸಿ ಮುಸಲ್ಮಾನನೊಬ್ಬ ಅಧಿಕಾರದ ಸೂತ್ರ ಕೈಗೆತ್ತಿಕೊಂಡಿದ್ದು ಎಲ್ಲರಲ್ಲೂ ಕುತೂಹಲವನ್ನೂ ಆತನ ಸೈನ್ಯದ ಬಲಿಷ್ಠತೆಯಿಂದಾಗಿ ಆತಂಕವನ್ನೂ ಮೂಡಿಸಿತ್ತು. ಇಂಗ್ಲಿಷರು ಅವನ ಸೈನ್ಯವನ್ನು formidable force ಎಂದು ಕರೆದರೆ ಮರಾಠ ಪೇಶ್ವೆಯರಿಗೆ ತಲೆನೋವಾಗಿತ್ತು.  

ಹಲವಾರು ಬ್ರಿಟಿಷ್ ಸೇನಾಧಿಕಾರಿಗಳು ತಮ್ಮ ದಾಖಲೆಗಳಲ್ಲಿ ನಮೂದಿಸಿದಂತೆ, ಬ್ರಿಟಿಷರು ಬೆಂಗಾಲ್ ಮತ್ತು ಬಾಂಬೆಯಲ್ಲಿ ಸುಲಭವಾಗಿ ಸಾಧಿಸಿದ ‘ನಾನ್ ಇಂಟರ್ ವೆನ್ಷನ್ ಪಾಲಿಸಿ’ ದಕ್ಷಿಣದಲ್ಲಿ ಹೈದರಾಲಿಯ ಎದುರು ಅಸಾಧ್ಯವಾಯಿತು. ಇದರ ಬಗ್ಗೆ ಬ್ರಿಟಿಷ್ ಯುದ್ಧ ದಾಖಲೆಗಳಲ್ಲಿ ತುಂಬಾ ಕುತೂಹಲಕಾರೀ ವಿವರಗಳು, ವಿಶ್ಲೇಷಣೆಗಳು ಸಿಗುತ್ತವೆ. ಆದರೆ ಹೈದರಾಲಿಯಲ್ಲಿ ಡಿಪ್ಲೊಮೆಸಿಯ ಕೊರತೆಯಿದ್ದುದರಿಂದಾಗಿ ತನ್ನ ಶಕ್ತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲನಾದನೆಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ಅದನ್ನು ಅವರು ವಿವರಿಸುವುದು ಹೀಗೆ: ಸಂಧಾನಗಳನ್ನು ಪ್ರಸ್ತಾಪಿಸುವುದು ಆದರೆ ಅದನ್ನು ಪೂರ್ಣಗೊಳಿಸದೆ ಅಲ್ಲೇ ಬಿಟ್ಟುಬಿಡುವುದು, ಸಹಯೋಗವನ್ನು ಚರ್ಚಿಸುವುದು ಮತ್ತೆ ಮತ್ಸರದ ಕಾರಣ ಮಾತು ಹಿಂತೆಗೆದುಕೊಳ್ಳುವುದು, ಇಂದಿನ ಮಿತ್ರನನ್ನು ನಾಳೆ ತಾನೇ ದಾಳಿ ಮಾಡಿ ದೋಚುವುದು ಇತ್ಯಾದಿ ಗುಣಗಳಿಂದ ಹೈದರ್ ನಂಬಿಕೆಗೆ ಅರ್ಹನಲ್ಲದವನಾದ. ಇದೇ ಕಾರಣಕ್ಕೆ ಮರಾಠರು ಮತ್ತು ಹೈದರ್ ನಡುವೆ ಶಾಂತಿ ಸಂಧಾನ ಸಾಧ್ಯವೇ ಆಗಲಿಲ್ಲ. ಈ ಎರಡು ಸೇನೆಗಳು ಒಗ್ಗಟ್ಟಿನಿಂದ ಇದ್ದಿದ್ದರೆ ಬ್ರಿಟಿಷರಿಗೆ ಅಷ್ಟು ಭದ್ರವಾಗಿ ನೆಲೆಯೂರಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನೂ ಪದೇಪದೇ ಅವರ ದಾಖಲೆಗಳಲ್ಲಿ ವ್ಯಕ್ತವಾಗಿದೆ.

29 ಮಾರ್ಚ್ 1769 – ಹೈದರಾಲಿ ಸೈನ್ಯ ಮದ್ರಾಸಿನಿಂದ ಕೇವಲ ಐದು ಮೈಲಿಗಳ ದೂರದಲ್ಲಿ ಬೀಡುಬಿಟ್ಟಿತ್ತು ಅನ್ನುವುದು ಬ್ರಿಟಿಷ್ ಹಾಗು ಭಾರತೀಯ ರಾಜಕೀಯ ಚರಿತ್ರೆಯ ಬಹಳ ಮುಖ್ಯ ಅಂಶವಾಗಿದೆ. ಇದನ್ನು ಉಲ್ಲೇಖಿಸದ ಚರಿತ್ರೆಕಾರನೇ ಇಲ್ಲ. 

ಚಿಕ್ಕದಾಗಿ ಹೇಳಬೇಕೆಂದರೆ ಅಲ್ಲಿಯವರೆಗೆ ಈಸ್ಟ್ ಇಂಡಿಯಾ ಕಂಪನಿಯಾ ಜೊತೆ ಒಪ್ಪಂದ ಮಾಡಿಕೊಂಡಿದ್ದ ಹೈದರಾಬಾದಿನ ನಿಜಾಮರು ಅದನ್ನು ಮುರಿದು ಹೈದರಾಲಿ ಜೊತೆ ಸೇರಿ ಆರ್ಕಾಟ್ ನವಾಬರ ವಿರುದ್ಧ ದಂಡೆತ್ತಿ ಹೋಗಲು ಒಪ್ಪಂದ ಮಾಡಿಕೊಂಡರು. ಆದರೆ ಈಸ್ಟ್ ಇಂಡಿಯಾ ಕಂಪನಿ ಮತ್ತೆ ನಿಜಾಮರ ಮೇಲೆ ಒತ್ತಡ ಹೇರಿ ಹೈದರಾಲಿಯ ಜೊತೆಗಿನ ಒಪ್ಪಂದ ಮುರಿಯುವಂತೆ ಮಾಡಿದರು.

ಆಗ ಹೈದರಾಲಿ ಒಂಟಿಯಾಗಿಯೇ ದಾಳಿ ಮಾಡಿದ. ಅವನ ಸೈನ್ಯ  ಅನುಭವಿಸಿತು. ಆಗ ಹೈದರಾಲಿ ಮದರಾಸಿನ ಕರ್ನಲ್ ಸ್ಮಿತ್ ನ ಸಹಾಯ ಹಸ್ತಕ್ಕೆ ಕೈಚಾಚಿದ. ಆದರೆ ಹಿಂದೆ ತಮ್ಮ ಹಸ್ತವನ್ನು ನಿರಾಕರಿಸಿದ್ದ ಕಾರಣಕ್ಕೆ ಕಂಪನಿ ಹೈದರನನ್ನು ನಿರಾಕರಿಸಿತು. ಅಂದಿನಿಂದ ಹೈದರನಿಗೆ ಬ್ರಿಟಿಷರ ಮೇಲೆ ವಿಪರೀತ ಕೋಪ ಉಕ್ಕಿ ಮದರಾಸು ಪ್ರೆಸಿಡೆನ್ಸಿಯ ಮೇಲೇ ಆಕ್ರಮಣ ಮಾಡಿದ.

ಮದರಾಸಿಗೆ ಐದು ಮೈಲಿ ದೂರದಲ್ಲಿ ಬೀಡುಬಿಟ್ಟಿದ್ದ ಹೈದರಾಲಿಯ ಸೈನ್ಯವನ್ನು ನೋಡಿ ಕಂಪನಿ ನಡುಗಿ ಹೋಯಿತು. ಹೈದರನ ಸೈನ್ಯ ಅವರಲ್ಲಿ ಅಷ್ಟು ಭಯ ಹುಟ್ಟಿಸಿತ್ತು. ಕೇವಲ ಐದೇ ದಿನಗಳಲ್ಲಿ ಕಂಪನಿ ಹೈದರಾಲಿಯ ಜೊತೆ ಸಂಧಾನ ಒಪ್ಪಂದ ಮಾಡಿಕೊಂಡಿತು! ಅಷ್ಟೇ ಅಲ್ಲದೇ ಎರಡೂ ಸರ್ಕಾರಗಳು (ಮದ್ರಾಸು  ಪ್ರೆಸಿಡೆನ್ಸಿ ಮತ್ತು ಮೈಸೂರು) ಬೇರೆ ಯಾರಾದರೂ ಒಬ್ಬರ ಮೇಲೆ ದಾಳಿ ಮಾಡಿದರೂ ಮತ್ತೊಬ್ಬರು ಸಹಾಯಕ್ಕೆ ಬರಬೇಕೆಂದು ಕರಾರು ಮಾಡಿಕೊಂಡಿತು. ಇಲ್ಲಿಗೆ ಮೊದಲನೇ ಮೈಸೂರು ಯುದ್ಧ ಕೊನೆಗೊಂಡಿತು. ಮುಂದೆ ಮರಾಠರು ದಾಳಿ ಮಾಡಿದಾಗ ನೆರವಿಗೆ ಬರದೇ ಈ ಕರಾರನ್ನು ಮುರಿದು ಹೈದರನಿಗೆ ಮೋಸ ಮಾಡಿದ್ದು ಕಂಪನಿಯೇ! 

ಈ ಒಪ್ಪಂದ ಆಗದೇ ಹೋಗಿದ್ದ  ಭಾರತದಲ್ಲಿ ಬ್ರಿಟಿಷ್ ಸರ್ಕಾರದ ದಿಕ್ಕೇ ಬದಲಾಗುತ್ತಿತ್ತು. 

ಒಂದೇ ಒಂದು ಕೋಟ್ ಕೊಡಬೇಕೆಂದರೆ ಸಿಡ್ನಿ ಓವೆನ್ ಬರೆದ ‘India on the Eve of the British Conquest’ ಪುಸ್ತಕದಲ್ಲಿ ಹೇಳಿದ ಈ ಮಾತು ‘Thus subtle, vigorous, terrible to his life’s end, he leaves behind ‘A name at which the world grew pale,’ and a reputation second to that of none of the military adventurers, whom we have encountered in the East.’

ಇರಲಿ. ಹೈದರನ ದಿನಚರಿ ಬಗ್ಗೆ ಸ್ವಲ್ಪ ನೋಡೋಣಾ. 

ಹೈದರ್ ಬೆಳಗ್ಗೆ ಎಲ್ಲ ಸಾಮಾನ್ಯರನ್ನು, ಅಧಿಕಾರಿಗಳನ್ನು, ಸಂದರ್ಶನಕ್ಕೆ ಬಂದವರನ್ನು ಭೇಟಿ ಮಾಡುತ್ತಿದ್ದ. ಆಗೆಲ್ಲ ಸಾಧಾರಣ ಕುರ್ಚಿಯ ಮೇಲೆ ಕೂರುತ್ತಿದ್ದ. ಮೂವತ್ತರಿಂದ ನಲವತ್ತು ‘ಸೆಕ್ರೆಟರಿಗಳು’ ಆತನ ಎಡಗಡೆಗೆ ಗೋಡೆಯ ಪಕ್ಕ ಸಾಲಾಗಿ ಕೂರುತ್ತಿದ್ದರು. ಅವರವರ ವಿಭಾಗಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಹೈದರ್ ಹೇಳಿದಂತೆಲ್ಲ ಚಕಚಕನೆ ಸತತವಾಗಿ ಬರೆಯುತ್ತಿದ್ದರು. ಪ್ರತಿ ನಿಮಿಷಕ್ಕೂ ಟಪಾಲು ಬರುತ್ತಿತ್ತು. ಅದನ್ನು ಜೋರುದನಿಯಲ್ಲಿ ಘೋಷಿಸಿ ಹೈದರನ ಪಾದದ ಬಳಿಗೆ ಇಟ್ಟು ಮರಳುತ್ತಿದ್ದರು. ಅಲ್ಲಿ ಕೂತಿರುತ್ತಿದ್ದ ಒಬ್ಬ ಅವನ್ನು ತಕ್ಷಣ ತೆಗೆದು ಓದುತ್ತಿದ್ದ. ಅದಕ್ಕೆ ಹೈದರ್ ತಕ್ಷಣ ಉತ್ತರ ಹೇಳುತ್ತಿದ್ದ. ಅದನ್ನು ಒಬ್ಬ ಬರೆದುಕೊಳ್ಳುತ್ತಿದ್ದ.

ಆ ಪತ್ರ ಮತ್ತು ಉತ್ತರವನ್ನು ಸಂಬಂಧಪಟ್ಟ ಇಲಾಖೆಗೆ ಕಳಿಸಲಾಗುತ್ತಿತ್ತು. ಪತ್ರವು ಬಹಳ ಮುಖ್ಯದ್ದಾಗಿದ್ದರೆ ಅದರ ಉತ್ತರಕ್ಕೆ ಹೈದರ್ ತನ್ನ ಬೆರಳಲ್ಲಿ ತೊಡುತ್ತಿದ್ದ ಮುದ್ರೆಯನ್ನು ಒತ್ತುತ್ತಿದ್ದ. ಅದನ್ನು ರಾಜನ ಕವಚದಲ್ಲಿ ಇರಿಸಿ ಪ್ರತ್ಯೇಕ ರವಾನೆ ಮಾಡಲಾಗುತ್ತಿತ್ತು. ಸಾಮಾನ್ಯ ಪತ್ರವಾಗಿದ್ದರೆ ಅದನ್ನು ಮಂತ್ರಿಗಳು ಸಹಿ ಮಾಡಿ ಕಳಿಸುತ್ತಿದ್ದರು. ಪ್ರತಿಯೊಂದು ಪಾತ್ರ ಬಂದ ಸಮಯ ಮತ್ತು ಅದಕ್ಕೆ ಉತ್ತರ ಕಳಿಸಿದ ಸಮಯವನ್ನು ದಾಖಲು ಮಾಡಲಾಗುತ್ತಿತ್ತು. ತೋಪು, ಆನೆ ಮತ್ತು ಕುದುರೆಗಳನ್ನು ಖರೀದಿಸುವ ಸಂದರ್ಭದಲ್ಲಿ ಹೈದರ್ ಸ್ವತಃ ಪರಿಶೀಲಿಸಿ ಒಪ್ಪಿಗೆ ಅಥವಾ ನಿರಾಕರಣೆ ಸೂಚಿಸುತ್ತಿದ್ದ. ಶ್ರೀರಂಗಪಟ್ಟಣಕ್ಕೆ ಬರುವಾಗ ಕುದುರೆಗಳು ಪ್ರಯಾಣದಲ್ಲಿ ಮೃತಪಟ್ಟಿದ್ದರೆ ಅವಕ್ಕೆ ಅರ್ಧ ಬೆಲೆ ತಕ್ಷಣ ಕೊಡಲಾಗುತ್ತಿತ್ತು.

ಮಂತ್ರಿಗಳು, ಸೇನಾಧಿಕಾರಿಗಳು, ರಾಯಭಾರಿಗಳು ಇತರ ಪ್ರಮುಖ ವ್ಯಕ್ತಿಗಳು ಬೆಳಗಿನ ಈ ಸಭೆಯಲ್ಲಿ ಹಾಜರಿರುತ್ತಿರಲಿಲ್ಲ. ಅವರೆಲ್ಲ ಸಂಜೆಯ ಅಥವಾ ರಾತ್ರಿಯ ಸಭೆಯಲ್ಲೇ ಹಾಜರಾಗಬೇಕಿತ್ತು. 

ಬೆಳಗಿನ ಸಭೆ ಮೂರು ಗಂಟೆಯವರೆಗೆ ನಡೆಯುತ್ತಿತ್ತು. ನಂತರ ಹೈದರ್ ತನ್ನ ಕೊಠಡಿಗೆ ತೆರಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. 

ಮತ್ತೆ ಐದೂವರೆಗೆ ತನ್ನ ಅರಮನೆಯ ಬಾಲ್ಕನಿಯಲ್ಲಿ ನಿಂತು ಸೈನಿಕರು ಕವಾಯತು ಮಾಡುವುದನ್ನು ಕುದುರೆ ಸವಾರರು ಅಭ್ಯಾಸ ಮಾಡುವುದನ್ನು ಗಮನವಿಟ್ಟು ಪರಿಶೀಲಿಸುತ್ತಿದ್ದ. ಸೈನ್ಯಕ್ಕೆ ಸೇರುವ ಪ್ರತಿಯೊಬ್ಬ ಯುವಕನನ್ನು ಹೈದರ್ ತಾನೇ ಸ್ವತಃ ಪರೀಕ್ಷಿಸುತ್ತಿದ್ದ. ಅವನ ಅಗಾಧ ನೆನಪಿನ ಶಕ್ತಿಯಿಂದಾಗಿ ಅಷ್ಟೂ ಸಾವಿರ ಸೈನಿಕರ ಹೆಸರು ಅವನಿಗೆ ನೆನಪಿಸುತ್ತಿತ್ತು!

ಸಂಜೆ ಆರೂವರೆಯಾದಾಗ ದೀಪ ಹಚ್ಚುವವರು ಬಂದು ಎಲ್ಲಾ ದೀಪಗಳನ್ನು ಹಚ್ಚುತ್ತಿದ್ದರು. ಗಾಜಿನ ಅಲಂಕೃತ ತೂಗುದೀಪಗಳು ಸಂಜೆಗೆ ಬೇರೆಯೇ ಮೆರುಗು ನೀಡುತ್ತಿತ್ತು. ಈಗ ಹೈದರ್ ಹಾಸಿನ ಮೇಲೆ ದಿಂಬಿಗೊರಗಿ ಕೂರುತ್ತಿದ್ದ. ಅಕ್ಕಪಕ್ಕದಲ್ಲಿ ಅವನ ಗಂಡು ಮಕ್ಕಳು ಮುಖ್ಯ ನೆಂಟರು ಇರುತ್ತಿದ್ದರು. ಒಳಬರುವ ಪ್ರಮುಖ ವ್ಯಕ್ತಿಗಳಿಗೆ ಅತ್ಯುತ್ತಮ ಅತ್ತರನ್ನು ಸಿಂಪಡಿಸಲಾಗುತ್ತಿತ್ತು. ಒಳಬರುವವರು ತಮ್ಮ ಸೇವಕರ ಕೈಗೆ ತಮ್ಮ ಕತ್ತಿಗಳನ್ನು ಕೊಡುತ್ತಿದ್ದರು. ಅದನ್ನೂ ಒಂದು ಚೀಲದಲ್ಲಿ ಅವರ ಪಾದರಕ್ಷೆಗಳನ್ನು ಹಾಕಿ ಅದನ್ನೂ ಕೈಯಲ್ಲಿ ಎತ್ತಿಕೊಂಡು ಸೇವಕರು ಬಾಗಿಲಿನ ಹೊರಗೆ ಕಾಯುತ್ತಿದ್ದರು. 

ತಿಂಡಿ ತಿನಿಸುಗಳು ಪಾನೀಯಗಳನ್ನು ಧಾರಾಳವಾಗಿ ನೀಡಲಾಗುತ್ತಿತ್ತು. ನೃತ್ಯ ನಾಟಕಗಳು ಪ್ರಾರಂಭವಾಗುತ್ತಿದ್ದವು. ಚದುರಂಗ ಆಡುವವರು ಆಡುತ್ತಿದ್ದರು. ಹೈದರ್ ಅವುಗಳ ಕಡೆಗೆ ಹೆಚ್ಚು ಗಮನ ಕೊಡದೇ ಪ್ರಮುಖರ ಜೊತೆ ಮಾತನಾಡುತ್ತಿದ್ದ. ಅತಿ ಗಹನ ಮಾತುಕತೆ ಆಡಬೇಕಿದ್ದರೆ ಪಕ್ಕದಲ್ಲಿನ ಖಾಸಗಿ ಕೋಣೆಗೆ ತೆರಳುತ್ತಿದ್ದ. ಮತ್ತೆ ಮರಳಿ ಬಂದು ಇನ್ನೊಬ್ಬರೊಡನೆ ಮಾತುಕತೆ ಆಡುತ್ತಿದ್ದ. ಅಲ್ಲಿಯೂ ಅವನ ಮಾತುಗಳು ನಿರ್ಣಯಗಳನ್ನು ಬರೆದುಕೊಳ್ಳುವವರಿದ್ದರು. 

ಸಂಜೆಯ ಕಲಾಪಗಳೆಲ್ಲ ಮುಗಿದ ಮೇಲೆ ಕುಸುರಿ ಕೆಲಸ ಮಾಡಿದ ಸುಂದರ ಬುಟ್ಟಿಗಳಲ್ಲಿ ಹೂ ತರಲಾಗುತ್ತಿತ್ತು. ಪ್ರಮುಖರಿಗೆ ಹೈದರ್ ತಾನೇ ಅದನ್ನೆತ್ತಿ ಕೊಡುತ್ತಿದ್ದ. ಉಳಿದದ್ದನ್ನು ಕಲಾವಿದರಿಗೆ ಮತ್ತಿತರರಿಗೆ ಕೊಡಲಾಗುತ್ತಿತ್ತು.  

ಇಲ್ಲೊಂದು ವಿವರಣೆ ಬಹಳ ಮುಖ್ಯ ಅನ್ನಿಸುತ್ತದೆ. ಹೈದರ್ ಮಾತಾಡುತ್ತಲೇ ತನ್ನ ಕೈಗಳಿಂದ ಒಂದು ಹೂಮಾಲೆಯನ್ನು ಕಟ್ಟಿ ತನಗೆ ಬಹಳ ಬೇಕಾದವರಿಗೆ ತಾನೇ ಕೈಯಾರೆ ಕೊರಳಲ್ಲಿ ತೊಡಿಸುತ್ತಿದ್ದ. ಅದನ್ನು ತುಂಬಾ ಮಹತ್ವದ ಕಾಣಿಕೆ ಎಂದು ಅವರು ಪರಿಗಣಿಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ಫ್ರೆಂಚ್ ಅಧಿಕಾರಿಗಳು ಅದಕ್ಕೆ ಮಹತ್ವ ಕೊಡುತ್ತಿದ್ದರು. ಅಂತಹ ವ್ಯಕ್ತಿಗಳಿಗೆ ಮಾರನೆಯ ದಿನ ಬೆಳಿಗ್ಗೆ ಎಲ್ಲಾರೂ ಅಭಿನಂದಿಸುತ್ತಿದ್ದರು ಎಂದು MMDLT ದಾಖಲಿಸುತ್ತಾನೆ.

ರಾತ್ರಿ ಹನ್ನೊಂದರ ಹೊತ್ತಿಗೆ ಪ್ರಮುಖ ಅತಿಥಿಗಳೆಲ್ಲ ಹೊರಟು ಹೋದ ಮೇಲೆ ಹೈದರನ ಖಾಸಗಿ ಡಿನ್ನರ್ ಶುರುವಾಗುತ್ತಿತ್ತು. ಅಲ್ಲಿ ಆತನ ಖಾಸಾ ಗೆಳೆಯರು ಮತ್ತು ಇರುತ್ತಿದ್ದರು. ಅಲ್ಲಿ ಸಭೆಯ ಗಾಂಭೀರ್ಯ ಇಲ್ಲದೆ ಸದರದ ನಗೆಚಾಟಿಲು ಇರುತ್ತಿತ್ತು. 

ಈ ಪ್ರಕ್ರಿಯೆಯನ್ನು ಯುದ್ಧದ ಮತ್ತು ಭೇಟಿಯ ಸಂದರ್ಭದಲ್ಲಿ ಮಾತ್ರ ಕೈಬಿಡಲಾಗುತ್ತಿತ್ತು.

**

ದಳವಾಯಿ ದೇವರಾಜನ ಹೆಂಡತಿಗೂ ದೇವರಾಜನ ಸೋದರ ನಂಜರಾಜನಿಗೂ ಆಗಿಬರುತ್ತಿರಲಿಲ್ಲ. ಒಂದು ದಾಖಲೆಯ ಪ್ರಕಾರ ಅವಳಿಗೂ ಖಂಡೆ ರಾಯನಿಗೂ ಸಂಬಂಧವಿತ್ತು ಅವಳಿಂದಾಗಿಯೇ ಖಂಡೇರಾಯ ದಿವಾನನಾಗಿದ್ದ. ಅವಳಿಗೆ ಹೈದರನಲ್ಲಿ ಸ್ನೇಹವಿತ್ತು. ಅಥವಾ ನಂಜರಾಜನ ಮೇಲೆ ಹಾಗೆ ತೀರಿಸಿಕೊಳ್ಳಲು ಅವಳು ಹೈದರನನ್ನು ಬಳಸಿಕೊಂಡಳು. ಅದಕ್ಕಾಗಿ ಹೈದರನಿಗೆ ಭಾರಿ ಮೊತ್ತದ ಹಣವನ್ನೂ ಕೊಟ್ಟಳಂತೆ. ಏನಾದರಾಗಲಿ ನಂಜರಾಜ ದೊರೆ ಆಗಬಾರದು ಅನ್ನುವುದು ಅವಳ ಹಠ. ಹೈದರ್ ಈ ಸ್ನೇಹವನ್ನು ಚೆನ್ನಾಗಿ ತನ್ನ ಅನುಕೂಲಕ್ಕೆ ಬಳಸಿಕೊಂಡ. 

ಈ ನಡುವೆ ಇಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಲಕ್ಷ್ಮಮ್ಮಣ್ಣಿ ಅವರ ವಿವಾಹವಾಗಿ ಆರೇ ವರ್ಷಗಳಲ್ಲಿ ಅರಸರು ತೀರಿಕೊಂಡರು. ರಾಜಮಾತೆ ಚೆಲುವಾಜಮ್ಮಣ್ಣಿಯವರ ಆಸೆಯಂತೆ ಹೈದರ್ ನಾಲ್ಕು ವರ್ಷದ ರಾಜಕುಮಾರ ನಂಜರಾಜ ಒಡೆಯರಿಗೆ ಪಟ್ಟಾಭಿಷೇಕ ಮಾಡಿಸಿದ. ಆದರೆ ನಾಲ್ಕೇ ವರ್ಷಗಳಲ್ಲಿ ನಂಜರಾಜ ತೀರಿಕೊಂಡ. ಹತ್ತು ವರ್ಷದ ದೊಡ್ಡ ಚಾಮರಾಜ ಒಡೆಯರನ್ನು ದತ್ತು ತೆಗೆದುಕೊಂಡು ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು. ಆತನೂ ಆರು ವರ್ಷಗಳವರೆಗೆ ಇದ್ದು ತೀರಿಕೊಂಡ. ಹೀಗೆ ಸುದೀರ್ಘ ಕಾಲ ಹೈದರಾಲಿಯೇ ಆಡಳಿತವನ್ನು ನೋಡಿಕೊಂಡಿದ್ದರಿಂದ ಸಹಜವಾಗಿ ಆತನ ಪ್ರಾಬಲ್ಯ ಹೆಚ್ಚಾಯಿತು. 

ಈಗ ಲಕ್ಷ್ಮಮ್ಮಣ್ಣಿಯವರಿಗೆ ಚಿಂತೆ ಪ್ರಾರಂಭವಾಯಿತು. ಗದ್ದುಗೆ ರಾಜವಂಶದ ಕೈಬಿಟ್ಟು ಹೈದರನ ಕೈಗೆ ಹೋಗಿಬಿಡುತ್ತದೆ ಎನ್ನುವ ಆತಂಕ ಕಾಡತೊಡಗಿತು. ಅದಕ್ಕಾಗಿ ತಮ್ಮ ಬಂಧುಗಳಲ್ಲೇ ಒಬ್ಬ ಹುಡುಗನನ್ನು ದತ್ತು ತೆಗೆದುಕೊಂಡು ಪಟ್ಟಾಭಿಷೇಕ ಮಾಡಬೇಕು ಎಂದು ನಿರ್ಧರಿಸಿದರು. ಆಗ ಹೈದರ್ ಪರೀಕ್ಷೆ ಮಾಡಿ ದತ್ತು ತೆಗೆದುಕೊಳ್ಳಬಹುದು ಎಂದು ಹೇಳಿದ್ದು ರಾಣಿಗೆ ಇಷ್ಟವಾಗಲಿಲ್ಲ. ಆದರೂ ಒಪ್ಪಿದಳು. ಆಗಲೇ ಹೈದರ್ ರಾಜವಂಶಕ್ಕೆ ಹತ್ತಿರದ ಎಲ್ಲಾ ಗಂಡುಮಕ್ಕಳನ್ನೂ ಕರೆಸಿ ಒಂದು ಕೊಠಡಿಯಲ್ಲಿ ಬೇಕಾದಷ್ಟು ತಿನಿಸುಗಳು ಆಟದ ಸಾಮಾನುಗಳನ್ನು ಇಟ್ಟು ಮಕ್ಕಳನ್ನು ಬಿಟ್ಟ. ಬೇರೆ ಮಕ್ಕಳೆಲ್ಲಾ ತಿನಿಸುಗಳನ್ನು ಹಣ್ಣುಗಳನ್ನು ಎತ್ತಿಕೊಂಡರೆ ಅರಿಕುಠಾರ ವಂಶದ ದೇವರಾಜ ಮತ್ತು ಹೊನ್ನಮ್ಮಾಜಿಯವರ ಮೂರು ವರ್ಷದ ಮಗ ಎಲ್ಲವನ್ನೂ ಬಿಟ್ಟು ನೇರವಾಗಿ ಒಂದು ಕಠಾರಿಯನ್ನು ಮತ್ತು ನಿಂಬೆ ಹಣ್ಣನ್ನು ಎತ್ತಿಕೊಂಡಿತು. ಹೈದರ್ ಅವನನ್ನೇ ರಾಜನನ್ನಾಗಿ ಆರಿಸಿದ. ಖಾಸಾ ಚಾಮರಾಜ ಪ್ರಭುಗಳೆಂದು ಕರೆದು ಆ ಮಗುವಿಗೇ ಪಟ್ಟಾಭಿಷೇಕ ಮಾಡಲಾಯಿತು. 

ಆದರೂ ಲಕ್ಷ್ಮಮ್ಮಣ್ಣಿಯವರಿಗೆ ಸಮಾಧಾನ ಇರಲಿಲ್ಲ. ಇದನ್ನು ಅರಿತ ಹೈದರ್ ಮಹಾರಾಣಿ ಆ ಆಮಗುವಿಗೆ ಅಪಾಯ ಮಾಡಬಹುದು ಎಂದು ಯೋಚಿಸಿ ರಾಜಪುತ್ರನನ್ನು ಅವರ ಪೋಷಣೆಯಿಂದ ತಪ್ಪಿಸಿ ಆಕೆಯನ್ನು ಬೇರೆ ಅರಮನೆಯಲ್ಲಿ ವಾಸ ಮಾಡುವಂತೆ ಏರ್ಪಾಟು ಮಾಡಿದ. ಆ ಸಮಯದಲ್ಲಿ ಹೈದರ್ ರಾಜ್ಯ ವಿಸ್ತರಣೆಯಲ್ಲೂ ಆಡಳಿತದಲ್ಲೂ ಅಪಾರ ಯಶಸ್ಸು ಗಳಿಸಿ ಜನಾನುರಾಗವನ್ನು ಸಂಪಾದಿಸಿದ್ದ. ಉತ್ತರದಲ್ಲಿ ಕೃಷ್ಣಾನದಿ ತೀರ, ಗದ್ವಾಲ, ಪೂನಾದವರೆಗೂ ದಕ್ಷಿಣದಲ್ಲಿ ರಾಮೇಶ್ವರದವರೆಗೂ ರಾಜ್ಯವನ್ನು ವಿಸ್ತರಿಸಿದ್ದ. ರಾಜ್ಯದ  ಆದಾಯವು ವರ್ಷಕ್ಕೆ ಎರಡು ಕೋಟಿ ಮೂವತ್ತು ಲಕ್ಷ ವರಹಗಳಾಗಿತ್ತು. 

ಆದರೆ ಹೈದರ್ ಸ್ಥಾನಗಳಲ್ಲಿ ತನಗೆ ಬೇಕಾದ ನಂಬಿಕಸ್ಥರನ್ನು ಇರಿಸಿದ್ದ. ಲಕ್ಷ್ಮಮ್ಮಣ್ಣಿಯವರು ಹೇಗಾದರೂ ಮಾಡಿ ಹೈದರನನ್ನು ಸೋಲಿಸಬೇಕೆಂದು ಮದ್ರಾಸಿನ ಬ್ರಿಟಿಷ್ ಗೌರ್ನರ್ ಗೆ ಗೋಪ್ಯವಾಗಿ ಪತ್ರ ಬರೆದು ಸಹಾಯ ಕೇಳಿದರು. ಬ್ರಿಟಿಷ್ ಸೈನ್ಯ ದಂಡೆತ್ತಿ ಬಂದು ಹೈದರನನ್ನು ಸೋಲಿಸಿದಲ್ಲಿ ಅವರ ಖರ್ಚು ವೆಚ್ಚಗಳಿಗೆ ಒಂದು ಕೋಟಿ ವರಹಗಳು ಮತ್ತು ದರ್ಬಾರು ಖರ್ಚಿಗೆ ಮೂವತ್ತು ಲಕ್ಷ ವರಹಗಳನ್ನು ಕೊಡುವುದಾಗಿ ವಚನ ಕೊಟ್ಟರು. ಅದೇ ರೀತಿ ಬ್ರಿಟಿಷರ ಅಧಿಕಾರಿ ಸಲ್ಲಿವನ್ ಜೊತೆ ಸಂಧಾನವಾಯಿತು. ಮಹಾರಾಣಿಯವರು ಬ್ರಿಟಿಷರಿಗೆ ಸೈನ್ಯದೊಡನೆ ಗಜ್ಜಲಹಟ್ಟಿ ಕಾವೇರಿಪುರದ ಮಾರ್ಗವಾಗಿ ಬಂದು ಕೋಟೆಯನ್ನು ಮತ್ತು ಖಜಾನೆಯನ್ನು ವಶಪಡಿಸಿಕೊಳ್ಳಬಹುದು ಎಂದು ತಿಳಿಸಿದರು. 

ಎಲ್ಲವೂ ಯೋಚಿಸಿದ ರೀತಿಯಲ್ಲೇ ನಡೆದಿದ್ದರೆ ಅಂದಿಗೆ ಹೈದರ್ ಸೋತು ರಾಜ್ಯ ಬ್ರಿಟಿಷರ ಪಾಲಾಗಬೇಕಿತ್ತು. ಆದರೆ ಹೈದರನ ನಂಬಿಕಸ್ತ ಸೇವಕನೊಬ್ಬ ಎಲ್ಲವನ್ನೂ ಹೈದರಾಲಿಗೆ ತಿಳಿಸಿಬಿಟ್ಟ. ಉಪಕಾರ ಮಾಡಿದವರಿಗೆ ಹೈದರ್ ಯಥೇಚ್ಛ ಇನಾಮು ಕೊಡುತ್ತಿದ್ದನಲ್ಲವೇ? ಅದು ಇಲ್ಲಿ ಪ್ರಯೋಜನವಾಯಿತು. ಕ್ರೋಧಾವೇಶನಾದ ಹೈದರ್ ಮಹಾರಾಣಿಗೆ ಆಪ್ತರಾದವರನ್ನೆಲ್ಲ ಹಾಕಿದ. ಹೊರಗಿನವರಿರಲಿ ಮಹಾರಾಣಿಯೇ ತನ್ನ ವಿರುದ್ಧ ನಡೆಸಿದ ಈ ಕುತಂತ್ರ ಹೈದರನನ್ನು ಕಂಗೆಡಿಸಿತು.

** 

ಶ್ರೀರಂಗಪಟ್ಟಣದಲ್ಲಿ ಒಬ್ಬ ಮುಸಲ್ಮಾನ ಗುರು ಇದ್ದರು. ಅವರಿಗೆ ಆಶ್ರಮದಂತೆ ಗುರುಕುಲ ನಡೆಸಿಕೊಂಡು ಹೋಗಲು ಎಲ್ಲ ಅನುಕೂಲ ಮಾಡಿಕೊಡಲಾಗಿತ್ತು. ಒಂದು ಸಲ ರಂಗನಾಥನ ದೇವಾಲಯದ ಒಂದು ಉತ್ಸವ ಮೂರ್ತಿಯ ಮೆರವಣಿಗೆ ಮಾಡುವಾಗ ಅದು ಈ ಗುರುವಿನ ಸ್ಥಳದ ಮುಂದೆ ಹಾದು ಹೋಗಬೇಕಿತ್ತು. ಗುರು ತನ್ನ ಶಿಷ್ಯರಿಗೆ ‘ಹಿಂದೂ ದೇವರ ಮೆರವಣಿಗೆ ನಮ್ಮ ದರ್ಗಾದ ಮುಂದೆ ಯಾಕೆ ಹೋಗಬೇಕು ಅವರಿಗೆ ಬುದ್ದಿ ಕಲಿಸಿ’ ಎಂದರು. ಅದೇ ರೀತಿಯಾಗಿ ಅವರೆಲ್ಲ ಮೆರವಣಿಗೆ ಮಾಡುತ್ತಿದ್ದವರನ್ನು ಹಿಡಿದು ಹಿಗ್ಗಾಮುಗ್ಗಾ ಬಡಿದು ಹಿಂದಕ್ಕೆ ಕಳಿಸಿದರು. ಅವರೆಲ್ಲ ಹೋಗಿ ಹೈದರನ ಹತ್ತಿರ ಅಹವಾಲು ಹೇಳಿಕೊಂಡರು. 

ಹೈದರ್ ಮುಸ್ಲಿಂ ಗುರುವನ್ನು ಕರೆಸಿದ. ದೇವರ ಮೆರವಣಿಗೆಗೆ ಅಡ್ಡಿಪಡಿಸಿದ್ದು ಯಾಕೆ ಎಂದು ಕೇಳಿದ. ಗುರು ‘ನಮ್ಮ ಮುಸ್ಲಿಂ ರಾಜ್ಯದಲ್ಲಿ…’ ಎನ್ನುತ್ತಿದ್ದಂತೇ ಹೈದರ್ ತಡೆದು ‘ಇದು ಮುಸ್ಲಿಮ್ ರಾಜ್ಯ ಎಂದು ಎಲ್ಲಿ ಹೇಳಿದೆ? ಇದು ಎಲ್ಲರ ರಾಜ್ಯ. ನೀವು ಹೊಡೆದಿದ್ದು ತಪ್ಪಲ್ಲವೇ?’ ಎಂದ.  ಅದಕ್ಕೆ ಗುರು ‘ನೀನು ಮುಸಲ್ಮಾನನಾಗಿ ಹೀಗೆ ಹೇಳುತ್ತಿದ್ದರೆ ನಾನು ನಿನ್ನ ಊರನ್ನು ಬಿಟ್ಟು ಹೋಗುತ್ತೇನೆ’ ಎಂದು ಹೆದರಿಸಿದ. ಅದಕ್ಕೆ ಜಗ್ಗದ ಹೈದರ್ ‘ಹೋಗಬೇಕೆನಿಸಿದರೆ ಧಾರಾಳವಾಗಿ ಹೋಗಿ. ಇರಿ ಎಂದು ನಾನು ಹೇಳಿದೆನೆ?’ ಎಂದುಬಿಟ್ಟ. 

ಗುರು ಅಲ್ಲಿಂದ ಹೊರತು ಆರ್ಕಾಟ್ ನವಾಬನ ಬಳಿಗೆ ಹೋಗಿ ಆಶ್ರಯ ಕೇಳಿದ. ಅಲ್ಲಿ ಅಷ್ಟೇನೂ ಅನುಕೂಲ ಒದಗಲಿಲ್ಲ. ಹಾಗಾಗಿ ಮರಳಿ ಶ್ರೀರಂಗಪಟ್ಟಣಕ್ಕೆ ಬಂದು ಹೈದರನ ಹತ್ತಿರ ಹೋಗಿ ಮತ್ತೆ ಆಶ್ರಯ ಕೇಳಿದ. ಅದಕ್ಕೆ ಹೈದರ್ ‘ನಿಮಗೆ ಮೊದಲು ಕೊಟ್ಟಿದ್ದ ಅನುಕೂಲಗಳನ್ನೆಲ್ಲ ಬೇರೆಯವರಿಗೆ ಕೊಟ್ಟಾಗಿದೆ, ಸಣ್ಣದೊಂದು ಮನೆ ಕೊಡುತ್ತೇನೆ. ಬೇಕಾದರೆ ಅಲ್ಲಿ ಇರಿ’ ಎಂದ. ಗುರು ತೆಪ್ಪಗೆ ಅಲ್ಲಿ ನೆಲೆಸಿದ.

‍ಲೇಖಕರು Avadhi

June 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: