ದಾರಾ ಶುಕೋಹ್‌ನ ಕನಸುಗಳು…

ಡಾ ಬಿ ಜನಾರ್ದನ ಭಟ್

ಸಾಹಿತ್ಯವನ್ನು ಜೀವನದ ಪ್ರಧಾನ ಚಟುವಟಿಕೆಯಾಗಿ ಸ್ವೀಕರಿಸಿರುವ ಬಹುಮುಖ ಆಸಕ್ತಿಯ ಸಾಹಿತಿ. ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವವರೆಗೆ ಸಾಹಿತ್ಯವನ್ನು ಹವ್ಯಾಸವಾಗಿ ಇಟ್ಟುಕೊಂಡಿದ್ದ ಹಬ್ಬು ಅವರು ನಿವೃತ್ತರಾದ ಮೇಲೆ ಹೊಸ ಉತ್ಸಾಹದಿಂದ ಪೂರ್ಣಾವಧಿ ಸಾಹಿತಿಯಾಗಿ ತಮ್ಮ ಎರಡನೆಯ ಇನ್ನಿಂಗ್ಸ್ ಆಡಲಿಳಿದಿದ್ದಾರೆ. ಹಬ್ಬು ಅವರು ಮತ ಪಂಥ ಧರ್ಮಗಳ ತೌಲನಿಕ ಅಧ್ಯಯನವನ್ನು ಮತ್ತು ಸಾಹಿತ್ಯದ ಶಿಸ್ತುಬದ್ಧ ಅಧ್ಯಯನವನ್ನೂ ಗಂಭೀರವಾಗಿ ಮಾಡಿ ಒಂದಷ್ಟು ಒಳ್ಳೆಯ ಕೃತಿಗಳನ್ನು ಕೊಟ್ಟರು. ಉದಾಹರಣೆಗೆ, ದೇವನೂರು ಅವರ ಕೃತಿಗಳ ಬಗೆಗಿನ ಪುಸ್ತಕ, ಈಗ ಕಾರ್ನಾಡರ ನಾಟಕಗಳ ಅಧ್ಯಯನ – ಹೀಗೆ.

ಈ ನಡುವೆ ಉತ್ತಮ ಕಾದಂಬರಿಗಳನ್ನು, ‘ಬೊಪ್ಪ ನನ್ನನ್ನು ಕ್ಷಮಿಸು’ ಎಂಬ ಹೃದಯಸ್ಪರ್ಶಿ ಆತ್ಮಕಥನವನ್ನು, ಸಣ್ಣಕತೆಗಳನ್ನು, ಕವಿತೆಗಳನ್ನು ಬರೆದು ಪ್ರಕಟಿಸಿದ್ದಾರೆ. ಅನುವಾದಗಳನ್ನು ಮಾಡಿದ್ದಾರೆ. ಅವರ ಹೊಸ ಕಾದಂಬರಿ, ‘ದಾರಾ ಶುಕೋಹ್‌ನ ಕನಸುಗಳು’ ಮೊಗಲ್ ರಾಜಮನೆತನದ ಒಬ್ಬ ವಿಶಿಷ್ಟ ಸಾಧಕ ದಾರಾ ಶುಕೋಹ್‌ನ ಮೂಲಕ ಆ ಕಾಲದ ಸಾಂಸ್ಕೃತಿಕ ಸಂಘರ್ಷವನ್ನು ಪರಿಶೀಲಿಸುವ ಕೃತಿ. ಇಂತಹ ಇತಿಹಾಸದ ವಿಷಯಗಳನ್ನು ಸೃಜನಶೀಲ ಕೃತಿಯಾಗಿ ಪರಿವರ್ತಿಸಲು ಎತ್ತಿಕೊಳ್ಳುವಾಗ ಕಾದಂಬರಿಕಾರ ಒಂದು ಸಂಕಥನವನ್ನು ನಿರ್ಮಿಸಲು ಹೊರಡುತ್ತಾನೆ. ಇತಿಹಾಸಕಾರನ ಆಸಕ್ತಿ ಬೇರೆ, ಸೃಜನಶೀಲ ಲೇಖಕನ ಆಸಕ್ತಿ ಬೇರೆ.

ಇತಿಹಾಸದ ಕಥೆಗಳನ್ನು ಆಯ್ದುಕೊಳ್ಳುವಾಗ ಕತೆಗಾರ ಕಥಾಸಂವಿಧಾನಕ್ಕಾಗಿ ಆದಿ-ಮಧ್ಯ-ಅಂತ್ಯಗಳನ್ನು ಯೋಜಿಸಿಕೊಳ್ಳುವುದು ಕಾವ್ಯರಚನಾಕ್ರಿಯೆಯ ಒಂದು ಭಾಗ. ಅವನಿಗಿರುವ ಇನ್ನೊಂದು ಸವಾಲು ತನ್ನ ಕಥಾವಸ್ತುವನ್ನು ರೂಪಕದ ರೀತಿಯಲ್ಲಿ ಬಳಸಿಕೊಳ್ಳುತ್ತೇನೋ, ಸಂಕಥನದ ರೀತಿಯಲ್ಲಿ ಬಳಸಿಕೊಳ್ಳುತ್ತೇನೋ ಎನ್ನುವುದನ್ನು ನಿರ್ಧರಿಸಿಕೊಳ್ಳುವುದು. ಹಬ್ಬು ಅವರು ಸಂಕಥನದ ಮಾರ್ಗವನ್ನು ಆರಿಸಿಕೊಂಡಿದ್ದಾರೆ. 

ಲೇಖಕರು ಆರಿಸಿಕೊಂಡ ಕಾಲಘಟ್ಟದ ರಾಜರೆದುರಿಗಿದ್ದ ಆಯ್ಕೆ – ಮತ ಧರ್ಮದ ಆಧಾರದಲ್ಲಿ ಸಮಾಜವನ್ನು ಗ್ರಹಿಸುವುದು ಮತ್ತು ಕಟ್ಟುವುದು ಒಂದು ಮಾರ್ಗವಾದರೆ, ಉಪನಿಷತ್ತು ಹೇಳುವ ಮತಾತೀತ ಆಧ್ಯಾತ್ಮಿಕ ಔನ್ನತ್ಯದ ಮೂಲಕ ಸಾಮಾಜಿಕ ಸಾಮರಸ್ಯವನ್ನು ಪಾಲಿಸುವ ಆದರ್ಶವಾದೀ ಮಾರ್ಗ ಇನ್ನೊಂದು. ಇದು ನಾಟಕೀಯವಾಗಿ ಖಚಿತ ಸ್ವರೂಪದಲ್ಲಿ‌ ಎದುರಾದದ್ದು ಸಹೋದರರಾಗಿದ್ದೂ ವೈರಿಗಳಂತಾಗಿದ್ದ ದಾರಾ ಶುಕೋಹ್ ಮತ್ತು ಔರಂಗಜೇಬರ ಮುಖಾಮುಖಿಯಲ್ಲಿ.

ಹುಮಾಯೂನ್, ಅಕ್ಬರ್, ಜಹಾಂಗೀರ್, ಷಾಹಜಹಾನ್, ಔರಂಗಜೇಬ – ಹೀಗೆ ಸುಮಾರು ಮುನ್ನೂರು ವರ್ಷ ದೆಹಲಿಯಲ್ಲಿ ಆಳುತ್ತಿದ್ದು ಬಹುತೇಕ ಭಾರತದ ಮೇಲೆ ಹತೋಟಿ ಸಾಧಿಸಿದ್ದ ಮೊಗಲರ ಇತಿಹಾಸದಲ್ಲಿ ಔರಂಗಜೇಬನ ಆಳ್ವಿಕೆ ಮತೀಯ ಪೂರ್ವಾಗ್ರಹ ಮತ್ತು ಹಿಂಸಾಚಾರಕ್ಕೆ ಹೆಸರಾಗಿದೆ. ಅವನು ಅಧಿಕಾರಕ್ಕಾಗಿ ತನ್ನ ಸ್ವಂತ ಸಹೋದರರನ್ನೇ ಕೊಲ್ಲಿಸಿದ್ದ. ಅದರಲ್ಲಿ ಒಬ್ಬ, ಈ ಕಾದಂಬರಿಯ ಕಥಾನಾಯಕ ದಾರಾ. ಅವನು ಬುದ್ಧಿಜೀವಿ, ಭಾರತೀಯ ದರ್ಶನಗಳಿಂದ ಪ್ರಭಾವಿತನಾಗಿ ಅವುಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದವನು. ಕಾದಂಬರಿಯ ಪ್ರಾರಂಭದಲ್ಲಿ ಆತನ ಅಧ್ಯಯನದ ಮೇಲೆ, ಅವನ ಚಿಂತನೆಗಳ ಮೇಲೆ ಕಾದಂಬರಿಕಾರರು ಹೆಚ್ಚಿನ ಗಮನ ಹರಿಸಿದ್ದಾರೆ.

ಭಾರತದ ವೇದಾಂತ, ಅಂದರೆ ಉಪನಿಷತ್ತುಗಳನ್ನು ದಾರಾ ಪರ್ಷಿಯ ಭಾಷೆಗೆ ಅನುವಾದ ಮಾಡುತ್ತಾನೆ. ಇಸ್ಲಾಮಿನಲ್ಲಿ ಆತ ಸೂಫಿ ಮಾರ್ಗದ ಅನುಯಾಯಿ. ಹಾಗಾಗಿ ಅವನಿಗೆ ಉಪನಿಷತ್ತುಗಳ ಚಿಂತನೆ ಆಪ್ತವಾಗುತ್ತದೆ. ಮೊಗಲ್ ಸಾಮ್ರಾಜ್ಯದ ಅಧಿಪತಿಯಾಗಬೇಕಾದವನು ಈ ರೀತಿಯ ಬುದ್ಧಿಜೀವಿಯಾದರೆ ಆಡಳಿತಕ್ಕೆ ಬೇಕಾದ ಕಾಠಿಣ್ಯ, ವ್ಯೂಹರಚನೆಗಳಲ್ಲಿ ಅವನಿಗೆ ಆಸಕ್ತಿಯಿರಬಹುದೆ ಎನ್ನುವ ಪ್ರಶ್ನೆಯಿದೆ. ಅವನು ಅದರಲ್ಲಿ ವಿಫಲನಾಗಿರುವುದಕ್ಕೆ ಅವನ ಸೋಲೇ ಸಾಕ್ಷಿ.

ಶೇಕ್‌ಸ್ಪಿಯರಿನ ‘ಟೆಂಪೆಸ್ಟ್’ ನಾಟಕದಲ್ಲಿ ಅಧ್ಯಯನಶೀಲನಾದ ರಾಜ ಪ್ರಾಸ್ಪೆರೋ ಇಷ್ಟು ದಾರುಣವಲ್ಲದದ್ದರೂ, ಇಂತಹದೇ ಫಲಿತಾಂಶವನ್ನು ಕಾಣುತ್ತಾನೆ. ಮುಸ್ಲಿಮ್ ಅರಸರ ಇತಿಹಾಸವನ್ನು ಓದಿದಾಗ ಸಿಂಹಾಸನಕ್ಕೆ ಉತ್ತರಾಧಿಕಾರಿಗಳಾಗಬಲ್ಲವರನ್ನು, ಸ್ವಂತ ಸಹೋದರರನ್ನು, ಅಪ್ಪ – ಮಗನನ್ನು ದಾರುಣವಾಗಿ ಕೊಲ್ಲಿಸುವುದು ಅಥವಾ ಕಣ್ಣು ಕೀಳಿಸುವುದು ಮುಂತಾಗಿ ಹಿಂಸೆ ಎಸಗುತ್ತಿದ್ದದ್ದು ಗೊತ್ತಾಗುತ್ತದೆ. ಮನು ಎಸ್. ಪಿಳ್ಳೆಯವರ ‘ದಖನ್ನಿನ ರೆಬೆಲ್ ಸುಲ್ತಾನರು’ ಕೃತಿಯಲ್ಲಿ ಇಂತಹ ಕೆಲವು ಘಟನೆಗಳಿವೆ.

ಮೊಗಲರಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿದರೆ ಸಿಂಹಾಸನಕ್ಕೆ ಅಪಾಯವಾದೀತು ಎಂದು ಮದುವೆಯನ್ನೇ ಮಾಡುತ್ತಿರಲಿಲ್ಲ. ಅವರೂ ಅರಮನೆಯಲ್ಲೇ ಬೀಡುಬಿಟ್ಟು ರಾಜಕೀಯ ದಾಳಗಳನ್ನು ಎಸೆಯುತ್ತಿದ್ದರು. ಷಾಹಜಹಾನನ ಮಗಳಂದಿರಲ್ಲಿ ಹಿರಿಯವಳಾದ ಜಹಾನಾರಾ ದಾರಾನ ಬೆಂಬಲಿಗಳಾದರೆ, ಕಿರಿಯವಳು ರೋಶನಾರಾ ಔರಂಗಜೇಬನ ಪರವಾಗಿರುತ್ತಾಳೆ. ಜತೆಗೆ ಮೊಗಲರಲ್ಲಿ ಕಾಮುಕತೆಯೂ ಹೆಚ್ಚಾಗಿತ್ತು; ಷಾಹಜಹಾನ್ ಮಗಳನ್ನೇ ಕಾಮಿಸಿದ್ದ ಎಂದೆಲ್ಲ ಇತಿಹಾಸ ಹೇಳುತ್ತದೆ. ಅವೆಲ್ಲವನ್ನೂ ಈ ಕಾದಂಬರಿಯಲ್ಲಿ ಓದಬಹುದು. 

ಈ ರೇಜಿಗೆಯ ನಡುವೆ ಒಂದು ಸ್ವರ್ಗವನ್ನು ನಿರ್ಮಿಸಬಲ್ಲವನಾಗಿದ್ದನೆಂದು ಇಂದು ನಾವು ಊಹಿಸುವ, ಕಾದಂಬರಿಕಾರ ಹಬ್ಬು ಅವರೂ ಹಾಗೆ ಒಂದು ಸ್ವರ್ಗಸದೃಶ ನಾಡನ್ನು ಕಟ್ಟುವುದೇ ‘ದಾರಾನ ಕನಸು’ ಎಂದು ಸೂಚಿಸುವ ಈ ದಾರಾ ಶುಕೋಹ್ ಸಹೋದರ ಔರಂಗಜೇಬನಿಂದಲೇ ಹತ್ಯೆಗೀಡಾಗುತ್ತಾನೆ.

ಹಾಗಾಗಿ ಮುಂದೆ ಮೊಗಲ್ ಸಾಮ್ರಾಜ್ಯದ ಆಡಳಿತ ಔರಂಗಜೇಬನ ಕನಸಿನಂತೆ ನಡೆಯುತ್ತದೆ ಹೊರತು ದಾರಾನ ಕನಸಿನಂತೆ ಅಲ್ಲ. ಇಸ್ಲಾಂ ಧರ್ಮವೊಂದೇ ಜಗತ್ತಿನಲ್ಲಿರಬೇಕೆಂಬಷ್ಟು ಕಟ್ಟಾ ಧರ್ಮಾಂಧನಾಗಿದ್ದ ಔರಂಗಜೇಬ ಹಿಂದೂ ದೇವಾಲಯಗಳನ್ನು ನಾಶಪಡಿಸಿದ, ಬಲಾತ್ಕಾರದ ಮತಾಂತರಗಳನ್ನು ಮಾಡಿದ. ಹಿಂದೂಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅವನತಿಗೆ ಕಾರಣನಾದ. ದಾರಾನ ಕನಸುಗಳು ನನಸಾಗಲಿಲ್ಲ.  

ಇದು ಕಾದಂಬರಿಕಾರರು ನಿರ್ಮಿಸಿದ ಕಥಾನಕ ಅಲ್ಲ, ಮೊಗಲ್ ಇತಿಹಾಸದ ಒಂದು ಸಂಕೀರ್ಣ ಕಾಲಘಟ್ಟ. ಇದರಲ್ಲಿರುವ ಚಿಂತನಾಂಶವುಳ್ಳ ರೋಚಕ ಕಥನ ಸಾಧ್ಯತೆಯನ್ನು ಗುರುತಿಸಿ ಆಯ್ದುಕೊಂಡದ್ದು ಹಬ್ಬು ಅವರ ಜಾಣ್ಮೆಯಾಗಿದೆ. ಈ ಕಾದಂಬರಿಯ ಶೀರ್ಷಿಕೆ ಗಿರೀಶ್ ಕಾರ್ನಾಡರ ‘ಟಿಪೂ ಸುಲ್ತಾನ ಕಂಡ ಕನಸು’ ನಾಟಕವನ್ನು ನೆನಪಿಸುತ್ತದೆ. ಕಾದಂಬರಿಗೆ ಒಂದು ದೃಷ್ಟಿಕೊನವನ್ನು ಕೊಡುವುದರಿಂದ ಇದು ಉತ್ತಮವಾದ ಶೀರ್ಷಿಕೆಯಾಗಿದೆ.

ಈ ಇತಿಹಾಸವನ್ನು ಉದಯಕುಮಾರ್ ಹಬ್ಬು ಇಂಗ್ಲಿಷಿನಲ್ಲಿ ಲಭ್ಯವಿರುವ ಇತಿಹಾಸ ಗ್ರಂಥಗಳ ಅಧ್ಯಯನದ ಮೂಲಕ ಮತ್ತು ತಮ್ಮ ಚಿಂತನೆ, ಅಧ್ಯಯನಗಳ ಆಧಾರದಲ್ಲಿ ನಿರೂಪಿಸಿದ್ದಾರೆ. ಇದರಲ್ಲಿ ಹಲವು ಭಾಗಗಳು ನೇರವಾಗಿ ಇತಿಹಾಸ ಗ್ರಂಥಗಳ ಪುಟಗಳನ್ನೇ ಓದುತ್ತಿದ್ದೇವೆ ಅನಿಸುವಂತಿವೆ. ಆದರೆ ಒಳ್ಳೆಯ ಕಥನಕಾರರಾದ ಹಬ್ಬು ನಾಟಕೀಯ ಸನ್ನಿವೇಶಗಳನ್ನು ನಿರ್ಮಿಸುತ್ತಾ ತಮ್ಮ ಆಶಯದಂತೆ ಈ ಕಾದಂಬರಿಯ ಕಥಾಸಂವಿಧಾನವನ್ನು ಯೋಜಿಸಿ ಒಂದು ಸ್ಮರಣೀಯ ಕಾದಂಬರಿಯನ್ನು ನೀಡಿದ್ದಾರೆ.

‍ಲೇಖಕರು Avadhi

June 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ತಮ್ಮಣ್ಣ ಬೀಗಾರ

    ಒಳ್ಳೆಯ ವಿಶ್ಲೇಷಣೆ. ತಮಗೆ ಹಾಗೂ ಲೇಖಕ ಹಬ್ಬು ಅವರಿಗರ ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: