ಅಬೂಬಕರ್ ನ ಅಮ್ಮನನ್ನು ಕಂಡೆ…‌

ಕಿರಣ್‌ ಭಟ್

ಕೇರಳ ವಾಸದ ದಿನಗಳವು. ಕೊಚ್ಚಿಯಲ್ಲಿ ಕೆಲ್ಸ ಮಾಡ್ತಿದ್ದೋನು ಕಣ್ಣೂರಿಗೆ ಟ್ರಾನ್ಸ್ಫರ್ ತಗೊಂಡಿದ್ದೆ. ಅಡುಗೆ ಮಾಡೋಕೆ ಬರದ ನನ್ಗೆ ಊಟ, ತಿಂಡಿ ಯಾವಾಗ್ಲೂ ಕಷ್ಟವೇ. ಅನ್ನ ಮಾಟ್ಕೊಳ್ಳೋಕೆ ರ‍್ತಿತ್ತು. ನಮ್ಮ ಬಿ.ಎ.ಸ್.ಎನ್.ಎಲ್ ನ ಕ್ಯಾಂಟೀನುಗಳಿಂದ ಸಾಂಬಾರ್, ಪಲ್ಯ ಸಿಗ್ತಿತ್ತು. ದಿನಾ ಈ ಅನ್ನ ಸಾರು ತಿನ್ನೋದನ್ನ ಕಂಡೇ ಬೇಸರವಾಗಿರ‍್ಬೇಕು.

ನನ್ನ ಪಕ್ಕ ಕೂತು ಊಟ ಮಾಡ್ತಿದ್ದ ಶ್ರೀನಿವಾಸನ್ ಒಂದಿನ.. ‘ಸರ್, ದಿನಾ ಒಂದೇ ಹಾಡಾಯ್ತು ನಿಮ್ದು. ಓಂದು ಕೆಲ್ಸ ಮಾಡಿ. ಪಕ್ದಲ್ಲೇ ಬಸ್ ಸ್ಟ್ಯಾಂಡ್ ಚೌಕದಲ್ಲಿ ಒಂದು ವ್ಯಾನ್ ನಿಂತರ‍್ತದೆ ಅದರಲ್ಲಿ ಜೈಲ್ ಚಪಾತಿ ಸಿಕ್ತದೆ. ಪಲ್ಯ ಕೂಡ. ಹೋಗಿ ಒಮ್ಮೆ ಟ್ರೈ ಮಾಡಿ’ ಅಂತ ಸಲಹೆ ಮಾಡಿದ್ರು. ಇದೇನಪ್ಪಾ ಜೈಲ್ ಚಪಾತಿ, ನೋಡೇಬಿಡೋಣ ಅಂದ್ಕೊಂಡು ಮರು ದಿನವೇ ಚೌಕಕ್ಕೆ ಹೋದೆ. ಯಸ್. ಅಲ್ಲಿ ವ್ಯಾನ್ ನಿಂತಿತ್ತು. ಎದುರಿಗೇ ದೊಡ್ಡ ಕ್ಯೂ ಕೂಡ. ಕುತೂಹಲದಿಂದ್ಲೇ ನಾನೂ ಕ್ಯೂ ಸೇರ‍್ಕೊಂಡೆ. ಸರದಿ ಬಂದಾಗ ನೋಡ್ತೇನೆ ಆರೆಂಟು ಐಟಮ್ ಗಳ ಒಂದು ಪಟ್ಟಿ, ಎದುರಿಗೆ ಅದರ ಬೆಲೆ. ತುಂಬ ಸುಲಭ ಬೆಲೆಯವು. ವೆಜ್ ನಾನ್ವೆಜ್ ಎರಡೂ ತರಹದ ತಿಂಡಿಗಳು. ಜನ ಕೈಚೀಲದ ತುಂಬ ತಿಂಡಿ ತುಂಬ್ಕೊಂಡು ಹೋಗ್ತಿದ್ರು.

ಏನು ಎಂತ ಅಂತ ವಿಚಾರಿಸಿದ್ರೆ ಈ ವ್ಯಾನ್ ಬರೋದು ‘ ಕಣ್ಣೂರು ಸೆಂಟ್ರಲ್ ಜೈಲ್’ ನಿಂದ. ಇವೆಲ್ಲ ಅಲ್ಲಿ ಸಿದ್ಧವಾಗೋ ಐಟಮ್ ಗಳು. ದಿನಾಲೂ ಈ ತಿಂಡಿಗಳನ್ನ ತುಂಬ್ಕೊಂಡು ಎರಡು ವ್ಯಾನ್ ಗಳು ಕಣ್ಣೂರ್ ನ ಎರಡು ಕಡೆ ನಿಂತು ವ್ಯಾಪಾರ ಮಾಡ್ತವೆ. ಜನ ‘ಕಣ್ಣೂರು ಜೈಲ್’ ನ ತಿಂಡಿಗಳ ರುಚಿ ನೋಡ್ತಾರೆ. ಸರಿ, ನಾನೂ ಚಪಾತಿ, ಪಲ್ಯ ಕಟ್ಟಿಸ್ಕೊಂಡೆ. ಆಫೀಸಿಗೆ ಬಂದು ಚಪಾತಿ ತಿಂತಿದ್ದ ಹಾಗೇ ಅನಿಸ್ತು…’ ಅಲ್ಲಾ, ಈ ‘ಕಣ್ಣೂರು ಸೆಂಟ್ರಲ್ ಜೈಲ್’ ಎಲ್ಲೋ ಕನೆಕ್ಟ್ ಆಗ್ತಿದೆಯಲ್ಲ… ಎಲ್ಲಿ …ಎಲ್ಲಿ? ಒಳ್ಳೇ ಚಪಾತಿ, ಪಲ್ಯ ಒಳಗೆ ಹೋಗ್ತಿದ್ ಹಾಗೇ ಮೆದುಳೂ ಕನೆಕ್ಟ್ ಆಯ್ತು ಅನಿಸ್ತದೆ. ನೆನಪಾಯ್ತು. ಅದೇ….ಅದೇ….ನಿರಂಜನ ರ ‘ಚಿರಸ್ಮರಣೆ’ಯಲ್ಲಿ ಬರ‍್ತದಲ್ಲಾ, ಅದೇ ಜೈಲು. ಆ ಹುಡುಗರನ್ನ ಇಟ್ಟ ಜೈಲು, ಆ ಹುಡುಗ್ರು ನೇಣುಗಂಬವೇರಿದ ಜೈಲು! ಅರೆ, ನಾನು ಚಿರಸ್ಮೆಣೆಯ ನಾಡಿಗೇ ಬಂದ್ಬಿಟ್ಟಿದೀನಲ್ಲ, ಹಾಗಾದ್ರೆ ಒಂದಿನ ತೇಜಸ್ವಿನಿ ನದೀನ ನೋಡೋದೇ. ಕಯ್ಯೂರಿಗೆ ಹೋಗೋದೇ. ಆ ದಿನವೂ ಬೇಗನೇ ಬಂದ್ಬಿಡ್ತು.

ನನ್ನ ಸಾಮ್ರಾಜ್ಯಕ್ಕೆ ಒಳಪಡ್ತಿದ್ದುದು ಎರಡು ಜಿಲ್ಲೆಗಳು. ಕಣ್ಣೂರು ಮತ್ತು ಕಾಸರಗೋಡು. ಹೊಸದಾಗಿ ಹೋದ ನಾನು ರಾಜ್ಯಾನ ಒಮ್ಮೆ ಸುತ್ತಿ ಬರಬೇಕಿತ್ತು. ಅತಿ ಹೆಚ್ಚು ಟೆಲಿಕಾಮ್ ಸಾಂದ್ರತೆಯಿರೋ ರಾಜ್ಯ ಕೇರಳ. ಅದಕ್ಕಾಗಿಯೇ ನರಗಳಂತೆ ಜಿಲ್ಲೆಗಳುದ್ದಕ್ಕೂ ಹರಡಿಕೊಂಡಿರೋ ಓ.ಎಫ್.ಸಿ ಕೇಬಲ್‌ಗಳು. ಅವುಗಳ ಸ್ಥಿತೀನೂ ಒಮ್ಮೆ ನೋಡ್ಬೇಕಿತ್ತು. ಸಾಲದ್ದಕ್ಕೆ ಉತ್ತರ ಕೇರಳದಲ್ಲಿ ಹೈವೇ ಕೆಲ್ಸವೂ ಶುರುವಾಗಿ ಕೇಬಲ್ ಗಳು ಆಗಾಗ ಹರಿಯೋದೂ ಶುರುವಾಗಿತ್ತು. ಸರಿ, ಹೀಗೇ ಒಂದು ಬೆಳಿಗ್ಗೆ ಕಾಸರಗೋಡಿನ ಕಡೆ ಹೊರಟೆ.

ಕೇರಳದಲ್ಲಿ ರಸ್ತೆ ಪ್ರವಾಸ ಸ್ವಲ್ಪ ನಿಧಾನವೇ. ಹೈವೇ ಕೆಲಸ ನೋಡ್ಕೊಂಡು, ಕಲೆಕ್ಟರ್ ಹತ್ರ ಸಮಯ ಹೊಂದಿಸ್ಕೊಂಡು ಮೀಟಿಂಗ್ ಮುಗಿಸೋದ್ರಲ್ಲಿ ಸಂಜೆಯಾಗಿ ಹೋಯ್ತು. ಕಾಸರಗೋಡಲ್ಲೇ ಉಳಿಯೋದು ಅಂತ ತರ‍್ಮಾನವಾಯ್ತು.

ಇನ್ನೇನು ಕತ್ತಲಾಗ್ಬೇಕು, ಅಷ್ಟರಲ್ಲಿ ಕಾಸರಗೋಡಿನ ನಾರಾಯಣನ್ ರ ಕಾಲ್. ‘ಸರ್, ನೀಲೇಶ್ವರ ಸಿಕ್ತಾ ಇಲ್ಲ. ಕೇಬಲ್ ಕಟ್ ಆಗರ‍್ಬೇಕು. ನಾವು ಹೊರಡ್ತಿದೀವಿ’ ಅಂತ. ನಾನಾದ್ರೂ ಒಬ್ನೇ ಇದ್ದು ಏನ್ಮಾಡೋದು ಅಂದ್ಕೊಂಡು ‘ನಡೀರಿ, ನಾನೂ ನಿಮ್ ಜೊತೆ ರ‍್ತೀನಿ’ ಅಂತ ಹೊರಟೆ. ನಾವಲ್ಲಿ ಮುಟ್ಟಿದಾಗ ಕತ್ತಲಾಗಿತ್ತು. ಕೇಬಲ್ ಹರಿದ ಕುರುಹುಗಳ್ಯಾವ್ದೂ ಕಾಣ್ತಿರಲಿಲ್ಲ. ನಮ್ಮ ಮೀಟರ್ ತೋರಿಸ್ತಿದ್ದ ಜಾಗ್ದಲ್ಲಿ ಒಂದು ದೊಡ್ಡ ಸೇತುವೆ. ನಮ್ಮ ಅನುಭವದ ಹಿನ್ನೆಲೆ ಇಲಿ ‘ಇದು ಇಲಿ ಕಟ್ ಮಾಡಿದ್ದೇ’ ಅಂತ ತರ‍್ಮನಕ್ಕೆ ಬಂದ್ವು.

ಈ ಇಲಿ ಕೇಸ್ ಸುಲಭವಾದದ್ದಲ್ಲ. ಕೇಬಲ್ ಹಾಕಿರೋ ಕಬ್ಬಿಣದ ಪೈಪ್ ಒಳಗೆ ಹೊಕ್ಕು ಎಲ್ಲೋ ಒಂದ್ಕಡೆ ಕಡಿದಿರ‍್ತದೆ. ಸಾಲದ್ದಕ್ಕೆ ಉದ್ದಾನೆ ಬ್ರಿಜ್ ಅದು. ಎಲ್ರಿಗೂ ಫುಲ್ ಟೆನ್ಷನ್. ಪೈಪ್ ಬಿಡಿಸ್ಕೊಂಡು ಕೇಬಲ್ ಹುಡುಕಿ ಮತ್ತೆ ಕೂಡಿಸೋ ಹೊತ್ತಿಗೆ ಬೆಳಗಾಗಿತ್ತು. ಜಾಯಿಂಟ್ ಮುಗಿಸಿ ಕೆಳಗಿಳಿದು ನೋಡ್ತೀನಿ, ವಿಶಾಲವಾಗಿ, ಪ್ರಶಾಂತವಾಗಿ ಹರಿಯೋ ನದಿ. ನಮ್ಮ ಶರಾವತಿ ಅಮ್ಮನ ಹಾಗೆ. ಸೇತುವೆಯುದ್ದಕ್ಕೂ ನಡ್ಕೊಂಡು ಹೋಗಿ ಬಂದೆ. ತಣ್ಣನೆಯ ಗಾಳಿಗೆ ರಾತ್ರಿಯ ಆಯಾಸ ಪರಿಹಾರ ಆದಂಗಿತ್ತು. ನಾರಾಯಣನ್ ದೊಡ್ಡ ಕಂಟಕ ತಪ್ಪಿದ ಖುಷೀಲಿದ್ರು.
ಕುತೂಹಲದಿಂದ ಕೇಳಿದೆ. ‘ಇದ್ಯಾವ ನದಿ?’

ನಾರಾಯಣನ್ ತಣ್ಣಗೆ ಉತ್ತರಿಸಿದ್ರು ‘ತೇಜಸ್ವಿನಿ’ ಸರ್. ಹೆಸರು ಕೇಳಿದಾಕ್ಷಣ ಒಂಥರಾ ಪುಳಕ! ಗಾಳಿಗೆ ಸಣ್ಣಗೆ ಮೈ ನಡುಗಿದಂತಾಯ್ತು.
ಈಗ ಕೇಬಲ್ ಜೊತೆಗೇ ಫುಲ್ ಕನೆಕ್ಟ್ ಆಗಿತ್ತು ‘ಚಿರಸ್ಮರಣೆ’. ನಾನು ಇಡೀ ರಾತ್ರಿಯನ್ನ ಕೇಬಲ್ ಜೋಡಿಸುತ್ತ ತೇಜಸ್ವಿನಿ ನದಿ ದಡದಲ್ಲಿ ಕಳೆದಿದ್ದೆ. ಹಾ, ಅದೇ ನದಿ, ಪೋಲೀಸ್ ಸುಬ್ರಾಯ ಹಾರಿದ ನದಿ. ಕೈಯೂರು ಹೋರಾಟಕ್ಕೆ ಸಾಕ್ಷಿಯಾದ ನದಿ. ಕೂಡಲೇ ಕೇಳಿದೆ ‘ನಾವು ಕಯ್ಯೂರಲ್ಲಿದೀವಾ?’ ‘ಇಲ್ಲ ಸರ್… ಸ್ವಲ್ಪ ದೂರ ಅಷ್ಟೇ.’

ನನ್ನಿಂದ ತಡೆದುಕೊಳ್ಳಲಾಗ್ಲಿಲ್ಲ. ‘ನಾನು ನೋಡ್ಬೇಕಿತ್ತಲ್ಲ’ ಅವರ ರಾತ್ರಿಯ ಆಯಾಸವನ್ನೂ ಲೆಕ್ಕಿಸದೇ ಕೇಳ್ದೆ. ಅವ್ರೂ ಯಾಕೋ ಕಷ್ಟದಿಂದ ಪಾರಾದ ಮೂಡ್ ನಲ್ಲಿದ್ರು. ‘ಸರಿ ಸರ್, ಹೋಗೋಣ’ ಫ್ರೆಷ್ ಅಪ್ ಆಗಿ ಹೊರಡ್ತು ಗಾಡಿ. ನಿದ್ದೆಗೆಟ್ಟ ಉರಿಗಣ್ಣಲ್ಲೇ. ಸ್ವಲ್ಪ ಹೊತ್ತನಲ್ಲೇ ಕಯ್ಯೂರಿನಲ್ಲಿದ್ದೆವು. ನಂಬಲಾಗ್ತಿರಲಿಲ್ಲ. ಕಾಲೇಜು ದಿನಗಳಲ್ಲಿ ಆರ್.ವಿ.ಭಂಡಾರಿ ಸರ್ ಕೊಟ್ಟು ಓದಿಸಿದ, ಅತ್ಯಂತ ಪ್ರಭಾವಿಸಿದ ಪುಸ್ತಕ ನಿರಂಜನರ ‘ಚಿರಸ್ಮರಣೆ’ಯ ನೆಲದಲ್ಲಿದ್ದೆ.

ಅಪ್ಪು, ಚಿರುಕಂಡ, ಕುಂಞ್ಞಬು, ಅಬೂಬಕ್ಕರ್, ಕುಟ್ಟಿಕೃಷ್ಣನ್ ರ ಜೊತೆ ಸಾವಿರಾರು ರೈತರು ಹೋರಾಡಿದ ಹಳ್ಳಿಯಲ್ಲಿ ನಡೆದಾಡುತ್ತಿದ್ದೆ. ರೈತ ಸಂಘ ಕ್ರಾಂತಿಯ ಬೆಳೆ ಬೆಳೆಸಿದ ಮಣ್ಣು. ಬ್ರಿಟಿಷರ ಶೋಷಣೆಯ ವಿರುದ್ಧ ಹೋರಾಡುತ್ತ, ಪೋಲೀಸನ ಕೊಲೆಯ ಆರೋಪ ಹೊತ್ತ ನಾಲ್ವರು ವೀರರು ಪ್ರಾಣ ತೆತ್ತ ಊರು. ಸಮಾನತೆಯ ಬದುಕನ್ನ ಕನಸುವ ಕನಸುಗಾರರಿಗೆಲ್ಲ ಆದರ್ಶದ ಜಾಗ ಇದು. ನಾನು ಕನಸಿನಲ್ಲಿಯೂ ಎಣಿಸದ ‘ಕಯ್ಯೂರ’ನ್ನು ತಲುಪಿದ್ದೆ.

ತುಂಬ ಪುಟ್ಟ ಊರು ಕಯ್ಯೂರು. ಹಸಿರಿನೂರು, ಕೆಂಪಿನೂರು. ನಾವು ಬಂದ ರಸ್ತೆಯ ಆಚೀಚೆ ಕೆಲವು ಸರಕಾರೀ ಕಟ್ಟಡಗಳು. ಉದ್ದಕ್ಕೂ ಕೆಂಬಾವುಟಗಳು. ಪಕ್ಕದಲ್ಲೇ ಹರಿಯೋ ನದಿ. ನದಿಯ ದಡದಲ್ಲಿ ಕಯ್ಯೂರು ವೀರರ ನೆನಪಿಸುವ ಹುತಾತ್ಮ ಸ್ತಂಭ. ಪಕ್ಕದಲಲ್ಲೇ ರೈತಸಂಘದ ಆಫೀಸು, ಮ್ಯೂಸಿಯಮ್.

ಬೆಳಗಿನ ಜಾವ. ಮ್ಯೂಸಿಯಂ ತೆರೆದಿರಲಿಲ್ಲ. ಸುತ್ತ ಮೌನ. ತಣ್ಣಗೆ ಹರಿಯುವ ತೇಜಸ್ವಿನಿ. ಒಂದಿಷ್ಟು ಹಕ್ಕಿಗಳ ಕಲರವ. ಎದುರಿಗೆ ಆಗಸ ನೋಡುತ್ತ ನಿಂತ ಸ್ತಂಭ. ಒಂದು ಸಾರೆ ಕಣ್ಮುಚ್ಚಿದೆ. ಏಲ್ಲ ಹುತಾತ್ಮರೂ ಸಾಲಾಹಿ ಹಾದುಹೋದರು. ಇಷ್ಟು ಸಾಕಲ್ಲವೇ? ಇಲ್ಲ. ಸಾಕೆನಿಸಲಿಲ್ಲ. ಇನ್ನೊಮ್ಮೆ ಹೋಗಬೇಕು ಅಲ್ಲಿಗೆ ಅಲ್ಲಿ ಒಂದಿಷ್ಟು ಸಮಯ ಕಳೆಯಬೇಕು. ಆನರ ಜೊತೆ ಮಾತಾಡ್ಬೇಕು. ಊರ ಕಥೆ ಅವರ ಬಾಯಿಂದ್ಲೇ ಕೇಳ್ಬೇಕು. ಆ ಆಸೆ ಹಾಗೇ ಉಳಿದಿತ್ತು. ಕೆಲಸಗಳಲ್ಲೇ ಮುಳುಗಿ ಹೋಗಿ ಅದು ಸಾಧ್ಯವಾಗಲೇ ಇಲ್ಲ. ಅದನ್ನ ಸಾಧ್ಯ ಮಾಡಿದವ್ರು ಗೆಳೆಯ ವಿಠ್ಠಲ ಭಂಡಾರಿ ಮತ್ತು ಯಮುನಾ ಗಾಂವ್ಕರ್.

ನಾನು ಆಫೀಸು ತಲೆಯ ಮೇಲೆ ಹೊತ್ಕೊಂಡು ಕಾಸರಗೋಡಿನಲ್ಲಿ ಓಡಾಡ್ತಿದ್ದಾಗ ಅಚಾನಕ್ಕಾಗಿ ಇವರು ಸಿಕ್ಕಿದ್ರು. ಕಯ್ಯೂರಿಗೆ ಹೊರಟ ಅವರ ಜೊತೇನೇ ನಾನೂ ಹೊರಟೆ. ಆದರೆ ಈ ಬಾರಿ ಆ ಹುತಾತ್ಮರ ವಾರಸುದಾರ ಹುಡುಗರ ಜೊತೆ. ಉದ್ದಕ್ಕೂ ಕ್ರಾಂತಿಯ ಕಥೆಗಳನ್ನ ಹೇಳ್ತಿದ್ದ ಅವರ ಉಮೇದು ನೋಡ್ಬೇಕು. ಅದೆಷ್ಟು ಸ್ಮಾರಕಗಳನ್ನ ತೋರಿಸಿದ್ರೋ, ಅದೆಷ್ಟು ಕ್ರಾಂತಿಯ ಕಥೆಗಳನ್ನು ಹೇಳಿದ್ರೋ ನಮಗಿಂತ್ಲೂ ಅವರೇ ಹೆಚ್ಚು ಥ್ರಿಲ್ ಅನುಭವಿಸ್ತಿದ್ದಂತಿತ್ತು.

ಇಲ್ಲ… ಇದು ಇಷ್ಟಕ್ಕೇ ಮುಗಿಯೋದು ಸಾಧ್ಯವೇ ಇರ‍್ಲಿಲ್ಲ. ನನ್ನ ಹುಚ್ಚು ತೀರಿಸ್ಕೊಳ್ಳೋದಕ್ಕೆ ಈ ಕಯ್ಯೂರು ಕ್ರಾಂತಿಯ ಕುರಿತ ನಾಟ್ಕವೊಂದನ್ನ ನೋಡ್ಲೇಬೇಕಿತ್ತು. ವಿಚಾರಣೆ ಶುರು ಮಾಡ್ದೆ. ದೂರ ಹೋಗಬೇಕಿರ‍್ಲಿಲ್ಲ ಆಫೀಸ್ನಲ್ಲೇ ಸಗಾವೆ ಬಾಲಕೃಷ್ಣನ್ ಇದ್ರು. ಓದು, ನಾಟ್ಕ, ಸಿನಿಮಾ ಅಂತ ಓಡಾಡ್ತಿದ್ದೋರು ಅವ್ರು. ‘ಅಬೂಬಕ್ಕರಿಂದೆ ಉಮ್ಮಾ ಪರಯುನ್ನು’ ಎನ್ನೋ ಸೋಲೋ ಸುತ್ತ ಮುತ್ತ ನಡೀತಿದೆ ಸಾರ್, ಹತ್ತಿರ ಶೋ ಇದ್ರೆ ತಿಳಿಸ್ತೀನಿ’ ಅಂದ್ರು. ಒಂದು ತಿಂಗಳು ಕಳೆದ ಮೇಲೆ ಕಣ್ಣೂರಲ್ಲೇ ನಾಟ್ಕ ನೋಡೋಕೆ ಸಿಕ್ತು.

ಈ ನಾಟ್ಕ ಒಂದು ಏಕವ್ಯಕ್ತಿ ಪ್ರದರ್ಶನ. ಕಯ್ಯೂರು ಹೋರಾಟದಲ್ಲಿ ಹುತಾತ್ಮನಾದ ವೀರ ಅಬೂಬಕರ್ ನ ತಾಯಿಯ ಕಣ್ಣಲ್ಲಿ ಕಯ್ಯೂರು ಹೋರಾಟ ಮತ್ತು ನಂತರದ ದಿನಗಳ ಕೇರಳವನ್ನ ನೋಡೋ ಪ್ರಯತ್ನ. ಸುಮಾರು ಒಂದೂವರೆ ಗಂಟೆ ಅವಧಿಯ ಈ ಪ್ರದರ್ಶನದಲ್ಲಿ ನಟಿ ರಂಜಿತಾ ಮಧು ಹುತಾತ್ಮ ಅಬೂಬಕರ್ ನ ತಾಯಿಯಾಗಿ ಕಾಣಿಸಿಕೊಳ್ತಾರೆ. ನಾಟಕದ ಮೊದಲ ಭಾಗದಲ್ಲಿ ಕಯ್ಯೂರು ಕ್ರಾಂತಿಗೆ ಸಾಕ್ಷಿಯಾಗೋ ಈ ತಾಯಿ, ಇನ್‌ ಅರ್ಧ ಭಾಗದಲ್ಲಿ ಕೇರಳದ ಸಾಮಾಜಿಕ, ರಾಜಕೀಯ ಚಳುವಳಿಗಳೊಳಗೆ ಕೊಂಡೊಯ್ತಾರೆ. ಭೂಸುಧಾರಣೆ, ಮೊದಲ ಕಮ್ಯೂನಿಷ್ಟ್ ಸರಕಾರದ ರಚನೆಗಳ ಕುರಿತು ಹೇಳ್ತಾ ಹೇಳ್ತಾ ಸದ್ಯದ ಕೇರಳದ ಕೋಮುವಾದೀ ಪರಿಸ್ಥಿತಿಯ ವಿಷಾದಿಸ್ತಾರೆ. ಹಿರಿಯ ನಟಿ ರಂಜಿತಾ ಮಧು ಅದ್ಭುತ ನಟಿ. ಸುಮಾರು ಒಂದೂವರೆ ಘಂಟೆ ಅದೇ ಕಸುವು ಇಟ್ಕೊಂಡು ಪಾತ್ರದ ಒಳತೋಟಿಯನ್ನ ಪ್ರೇಕ್ಷಕರಿಗೆ ದಾಟಿಸ್ತಾರೆ.

೨೦೦೨ ರಲ್ಲಿ ಮೊದಲು ಪೂರ್ಣಪ್ರಮಾಣದ ನಾಟ್ಕವಾಗಿದ್ದ ‘…ಪರೆಯುನ್ನು’ ನಂತರ ಮಾರ‍್ಪಾಡುಗೊಂಡು ‘ಸೋಲೋ’ ಆಯ್ತು. ಈ ನಾಟ್ಕ ಅದೆಷ್ಟು ಪ್ರಸಿದ್ಧ ಎಂದ್ರೆ ನಟಿ ರಂಜಿತಾ ರನ್ನ ಜನ ‘ಉಮ್ಮಾ’ ಅಂತ್ಲೇ ಕರೀತಾರಂತೆ. ನಾನು ನೋಡಿದಾಗ್ಲೇ ಒಂದೂವರೆ ಸಾವಿರಕ್ಕಿಂತ ಹೆಚ್ಚು ಪ್ರದರ್ಶನ ಕಂಡ ಈ ನಾಟ್ಕ ಈಗಾಗಲೇ ಅತಿ ಹೆಚ್ಚು ಪ್ರದರ್ಶನ ಕಂಡ ಸೋಲೋ ಅಂತ ಏಷಿಯನ್ ರೆಕಾರ‍್ಡ್ ಮಾಡಿದೆ. ಗಿನ್ನೀಸ್ ರೆಕಾರ‍್ಡ್ ಪ್ರದರ್ಶನಕ್ಕೆ ರೆಡಿಯಾಗ್ತಿದೆ.

ನಾಟ್ಕ ರಿಹರ‍್ಸಲ್ ಶುರುವಾಗೋಕೆ ಮುಂಚೆನೇ ‘ಚಿರಸ್ಮರಣೆ ಓದ್ಕೋ’ ಅಂತ ನಿರ್ದೇಶಕ ಕರಿವೆಲ್ಲೂರ್ ಮುರಳಿ ನನಗೆ ತಾಕೀತು ಮಾಡಿದ್ರು ಅಂತ ನಟಿ ರಂಜಿತಾ ಮಧು ಒಂದೆಡೆಗೆ ಹೇಳಿದ್ದನ್ನ ಬಾಲಕೃಷ್ಣನ್ ನೆನಪಿಸಿಕೊಳ್ತಿದ್ರು. ‘ಚಿರಸ್ಮರಣೆ’ಯ ಮಲಯಾಳೀ ಅನುವಾದ ಹಲವಾರು ಮುದ್ರಣಗಳನ್ನ ಕಂಡಿದೆ. ‘ಚಿರಸ್ಮರಣೆ’ ಅನ್ನಾಧರಿಸಿದ ರಾಜೇಂದ್ರನ್ ನಿರ್ದೇಶಿಸಿದ ಚಿತ್ರ ‘ಮೀನಮಾಸತ್ತಿಲೆ ಸೂರ‍್ಯನ್’ ಎಂಭತ್ತರ ದಶಕದಲ್ಲೇ ತೆರೆಕಂಡಿದೆ.

ನಿರಂಜನರು ಮಲಯಾಳಿ ಜನಮಾನಸದಲ್ಲಿ ನೆಲೆಸಿದಾರೆ.

‍ಲೇಖಕರು Avadhi

June 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shridhar Nayak

    ಚಿರಸ್ಮರಣೆಯ ನೆಲದಲ್ಲಿ ನಾವೂ ಒಮ್ಮೆ ಸುತ್ತಾಡಬೇಕು,ಅಬೂಬಕರನ ಅಮ್ಮನನ್ನು ನೋಡಬೇಕು ಎಂಬ ಆಸೆ ಹುಟ್ಟಿಸುವ ಲೇಖನ.ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: