ಪ್ರತಿಭಾ ನಂದಕುಮಾರ್ ಅಂಕಣ- ಧರ್ಮದ ಬಗ್ಗೆ ಹೈದರನಿಗಿದ್ದಿದ್ದು ತಟಸ್ಥ ಧೋರಣೆ !

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಹೈದರಾಲಿಯ ಸ್ವಭಾವ ಕುರಿತಂತೆ ವಿವರಿಸಲು ಡೇನಿಶ್ ಮಿಷನರಿ ರೆವರೆಂಡ್ ಕ್ರಿಶ್ಚಿಯನ್ ಫ್ರೆಡರಿಕ್ ಶ್ವಾರ್ಟ್ಸ್ ಜೊತೆಗಿನ ಭೇಟಿ ಬಹಳ ಸೂಕ್ತವಾಗಿದೆ. ಇದರ ಹಿನ್ನೆಲೆಯನ್ನು ಚಿಕ್ಕದಾಗಿ ಹೇಳಬೇಕೆಂದರೆ – 1779ರಲ್ಲಿ ಬ್ರಿಟಿಷರು ಮಲಬಾರ್ ಪ್ರಾಂತ್ಯದ ಮಾಹೆ (ಮಯ್ಯಾಳಿ) ಯಲ್ಲಿದ್ದ ಫ್ರೆಂಚರ ಕ್ಯಾಂಪಿನ ಮೇಲೆ ಧಾಳಿ ಮಾಡಿದರು. ಮಾಹೆ ಹೈದರನ ವಶದಲ್ಲಿತ್ತು. ಕೋಪಗೊಂಡ ಹೈದರ್ ಆರ್ಕಾಟನ್ನು ಲೂಟಿ ಮಾಡುವುದಾಗಿ ಬೆದರಿಕೆ ಹಾಕಿದ.

ಹೈದರನ ಸೈನ್ಯದ ಬಗ್ಗೆ ಈಸ್ಟ್ ಇಂಡಿಯಾ ಕಂಪನಿಗೆ ಭಯವಿತ್ತು. ಹಾಗಾಗಿ ಅದು ಹೈದರನ ಬಳಿಗೆ ಒಬ್ಬ ರಾಯಭಾರಿಯನ್ನು ಕಳಿಸಿ ಸಂಧಾನ ಮಾಡಿಸಲು ಮತ್ತು ಮದ್ರಾಸು ಸರ್ಕಾರ ಆತನ ಬಗ್ಗೆ ತಟಸ್ಥ ಧೋರಣೆ ತಾಳಿದೆ ಎನ್ನುವುದನ್ನು ತಿಳಿಸಲು ನಿರ್ಧರಿಸಿತು. ಆದರೆ ಹೈದರನ ಬಳಿಗೆ ಮಾತುಕತೆಗೆ ಹೋಗುವ ಧೈರ್ಯ ಮತ್ತು ಸಾಮರ್ಥ್ಯ ಇರುವವರು ಇರಲಿಲ್ಲ. 

ಇದೇ ಸಮಯಕ್ಕೆ ಡೇನಿಶ್ ಮಿಷನರಿ ಪಾದ್ರಿ ಸಿ ಎಫ್ ಶ್ವಾರ್ಟ್ಸ್ ಭಾರತದಲ್ಲಿ ಸಾಕಷ್ಟು ಕೆಲಸ ಮಾಡಿ ಹೆಸರಾಗಿದ್ದರು. ಇಂಗ್ಲಿಷ್, ಪರ್ಷಿಯನ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು. ಅಲ್ಲದೇ ಬ್ರಿಟಿಷರಿಗೆ ನೆರವಾದ ಇತರ ಮಹತ್ವದ ಕೆಲಸಗಳನ್ನು ಮಾಡಿದ್ದರು. ಅವರಿಗೆ ಪ್ರತಿಫಲವಾಗಿ ಏನಾದರೂ ಕಾಣಿಕೆ ಕೊಡಬೇಕೆಂದು ಕೋರಮಂಡಲ್ ಕರಾವಳಿಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿದ್ದ ಸರ್ ಹೆಕ್ಟರ್, ಮದ್ರಾಸಿನ ಗವರ್ನರ್ ಥಾಮಸ್ ರುಮ್ಬಾಲ್ಡ್ ಗೆ ಶಿಫಾರಸು ಮಾಡಿದರು.

ಆದರೆ ತನ್ನ ಸೇವೆಗೆ ಪ್ರತಿಯಾಗಿ ಏನನ್ನಾದರೂ ಕಾಣಿಕೆ ಸ್ವೀಕರಿಸಲು ಒಪ್ಪದ ಶ್ವಾರ್ಟ್ಸ್, ಕೊಡಲೇ ಬೇಕಾದರೆ ಇಟ್ಟಿಗೆ ಮತ್ತು ಸುಣ್ಣ ಕೊಡಿ, ತಂಜಾವೂರಿನಲ್ಲಿ ಒಂದು ಚರ್ಚು ಕಟ್ಟಿಸಬೇಕಾಗಿದೆ, ಅದಕ್ಕೆ ಹಣವಿಲ್ಲ ಎಂದು ಹೇಳಿದರು. ಇದನ್ನು ಕೇಳಿದ ಕೂಡಲೇ ರುಮ್ಬಾಲ್ಡ್ ಪಾದ್ರಿಯನ್ನು ಕೂಡಲೇ  ಮದ್ರಾಸಿಗೆ ಬರಹೇಳಿದರು. ಮದ್ರಾಸಿಗೆ ಹೋದ ಶ್ವಾರ್ಟ್ಸ್ ಗೆ ಒಂದು ಆಶ್ಚರ್ಯ ಕಾದಿತ್ತು – ತಕ್ಷಣವೇ ಶ್ರೀರಂಗಪಟ್ಟಣಕ್ಕೆ ತೆರಳಿ ಹೈದರನ ಜೊತೆ ಶಾಂತಿ ಸಂಧಾನ ಮಾಡಿಕೊಂಡು ಬಂದರೆ ಚರ್ಚು ಕಟ್ಟಲು ಎಲ್ಲಾ ಸೌಕರ್ಯಗಳನ್ನು ನೀಡುವುದಾಗಿ ಗವರ್ನರ್ ಆಶ್ವಾಸನೆ ನೀಡಿದರು! 

ಹೈದರಾಲಿ ಖಾನ್ ನಮ್ಮ ಮೇಲೆ ಯುದ್ಧ ಮಾಡಲು ಸಿದ್ಧನಾಗಿದ್ದಾನೆ. ನಮಗೆ ಬರೆದ ಕೆಲವು ಪತ್ರಗಳಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾನೆ ಮತ್ತು ಬೆದರಿಕೆಯ ದನಿಯಲ್ಲಿ ಮಾತಾಡಿದ್ದಾನೆ. ಇದರ ಬಗ್ಗೆ ನಮಗೆ ಖಚಿತವಾಗಿ ಆತನ ಚಿಂತನೆ ಏನು ಎನ್ನುವುದು ತಿಳಿಯಬೇಕಾಗಿದೆ. ಇದನ್ನು ತಿಳಿಯಲು ನೀವೇ ಅತ್ಯಂತ ಸೂಕ್ತ ವ್ಯಕ್ತಿ. ನೀವು ಶ್ರೀರಂಗಪಟ್ಟಣಕ್ಕೆ ಹೋಗಿ ಹೈದರನನ್ನು ಭೇಟಿ ಮಾಡಿ ನಮಗೆ ಶಾಂತಿ ಬೇಕಾಗಿದೆಯೇ ಹೊರತು ಯುದ್ಧವಲ್ಲ ಎನ್ನುವ ಸಂದೇಶವನ್ನುಆತನಿಗೆ ಮನದಟ್ಟಾಗುವಂತೆ ತಿಳಿಸಿ. ನಿಮಗೆ ಹಿಂದಿ ಮತ್ತು ಪರ್ಷಿಯನ್ ಭಾಷೆಗಳು ಗೊತ್ತಿದೆ.

ಹಾಗಾಗಿ ದುಬಾಷಿಯ ಅಗತ್ಯವಿಲ್ಲ, ನೀವೇ ನೇರವಾಗಿ ಮಾತನಾಡಬಹುದು. ಅಲ್ಲದೇ ನಿಮಗೆ ಯಾರೂ ಲಂಚದ ಆಮಿಷ ಒಡ್ಡುವುದಿಲ್ಲ. ಪಾದ್ರಿಯಾದುದರಿಂದ ನೀವು ಯಾವುದೇ ಆಡಂಬರವಿಲ್ಲದೇ ಗೋಪ್ಯವಾಗಿ ಪ್ರಯಾಣ ಮಾಡಬಹುದು, ನಮಗೆ ಸಧ್ಯಕ್ಕೆ ಗೋಪ್ಯತೆ ಮುಖ್ಯ. ನೀವು ಹೈದರಾಲಿಯ ಜೊತೆ ಹೆಚ್ಚಿಗೆ ಮಾತನಾಡಬೇಕಿಲ್ಲ, ಬರೇ ಆತನದೇ ಪತ್ರವನ್ನು ಪ್ರಸ್ತಾಪಿಸಿ, ಆತ ನಮ್ಮ ಶಾಂತಿ ಪ್ರಸ್ತಾಪವನ್ನು ಕೇಳುವ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದುಕೊಂಡರೆ ಸಾಕು ನಂತರ ನಮ್ಮ ಕೌನ್ಸಿಲರು ಬಂದು ವ್ಯವಹಾರವನ್ನು ಕುದುರಿಸಿ ಒಪ್ಪಂದ ಮಾಡಿಕೊಳ್ಳುತ್ತಾರೆ. ವ್ಯರ್ಥವಾಗಿ ರಕ್ತಪಾತವಾಗುವುದನ್ನು ತಡೆಯುವ ಪುಣ್ಯ ಕೆಲಸ ನೀವು ಮಾಡುತ್ತಿದ್ದೀರಿ’ ಎಂದು ಹೇಳಿ ಒಪ್ಪಿಸಿದರು.  

ಶ್ವಾರ್ಟ್ಸ್ ರಾತ್ರಿಯೆಲ್ಲ ತನ್ನ ಡೈರಿಯಲ್ಲಿ ‘ಇದೊಂದು ಪುಣ್ಯ ಕಾರ್ಯ, ದೇವರು ನನಗೆ ನೆರವಾಗುತ್ತಾನೆ’ ಇತ್ಯಾದಿಯಾಗಿ ದೀರ್ಘವಾಗಿ ತನ್ನ ಮನಸ್ಸನ್ನು ತೋಡಿಕೊಂಡು ತನಗೆ ತಾನೇ ಒಪ್ಪಿಸಿಕೊಳ್ಳುತ್ತಾ ಬರೆದ. ನಂತರ ತಿರುಚಿನಾಪಳ್ಳಿಗೆ ಹೋಗಿ ತನ್ನ ಶಾಲೆಯ ಬಗ್ಗೆ ಕೆಲವು ಬಂದೋಬಸ್ತುಗಳನ್ನು ಮಾಡಿ 5 ಜುಲೈ 1779ರಂದು ಕರೂರು, ಈರೋಡು, ಡೆಂಕಣಿಕೋಟೆ, ಗೆಜ್ಜಲಹಟ್ಟಿ, ತೆರಕಣಾಂಬಿ, ನಂಜನಗೂಡು ಮಾರ್ಗವಾಗಿ ಶ್ರೀರಂಗಪಟ್ಟಣ ತಲುಪಿದ. ದಾರಿಯುದ್ದಕ್ಕೂ ಮೈಸೂರು ಸಂಸ್ಥಾನದ ಆಡಳಿತ, ಸಾರ್ವಜನಿಕರು, ಅಧಿಕಾರಿಗಳ ಬಗ್ಗೆ ಅತ್ಯಂತ ಮೆಚ್ಚುಗೆಯಿಂದ ದಾಖಲಿಸಿದ. ರಾಜ್ಯವನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ಹೈದರಾಲಿ ತೋರಿದ ಆಸ್ಥೆ ಮತ್ತು ಕ್ರಮಗಳ ಬಗ್ಗೆ ಸುದೀರ್ಘವಾಗಿ ಬರೆದ. 

ಆಗಸ್ಟ್ 24 ರಂದು ಮೈಸೂರಿನ ಕೋಟೆಯನ್ನು ತಲುಪಿದ. ಚಾಮುಂಡಿ ಬೆಟ್ಟದಲ್ಲಿ ಹೈದರ್ ಜಾರಿಗೆ ತಂದ ಸಾರ್ವಜನಿಕ ಕಲ್ಯಾಣ ಕ್ರಮವನ್ನು ಕುರಿತು ಬರೆಯುತ್ತಾ ಹೇಳುತ್ತಾನೆ: ‘ಬೆಟ್ಟದ ಮೇಲೊಂದು ದೇವಸ್ಥಾನವಿದೆ. ಹಿಂದೆ ಅದು ಯಾತ್ರಿಕರಿಗೆ ದುರ್ಗಮವಾಗಿತ್ತು. ಬೆಟ್ಟದಲ್ಲಿದ್ದ ಆರಾಧಕರು (ಅವನು ಬಳಸುವ ಪದ ‘ ಪೇಗನ್ ‘) ತಮ್ಮ ದೇವಿಯನ್ನು ತೃಪ್ತಿಪಡಿಸಲು ಯಾತ್ರಿಕರ ಮೂಗುಗಳನ್ನು ಕತ್ತರಿಸಿ ದೇವಿಗೆ ಅರ್ಪಿಸುತ್ತಿದ್ದರು. ಜನರು ದೂರು ಹೇಳಿಕೊಂಡ ಮೇಲೆ ಹೈದರಾಲಿ ಅವರನ್ನೆಲ್ಲ ನಾಶ ಮಾಡಿ ಅದನ್ನು ನಿಲ್ಲಿಸಿದ’

ಶ್ವಾರ್ಟ್ಸ್ ಆಗಸ್ಟ್ 25 ರಂದು ಶ್ರೀರಂಗಪಟ್ಟಣ ತಲುಪಿದ. ಆಗ ಪಟ್ಟಣದಲ್ಲಿ ಜ್ವರದ ಹಾವಳಿ ಇದ್ದುದರಿಂದ ಆತನಿಗಾಗಿ ಪ್ರತ್ಯೇಕ ಡೇರೆ ಹಾಕಿ ಕೊಡಲಾಯಿತು. ಕೋಟೆ ಒಳಹೊರಗೆ ತನಗೆ ಇಷ್ಟಬಂದಂತೆ ಹೋಗಿಬರುವ ಸಂಪೂರ್ಣ ಸ್ವಾತಂತ್ರ್ಯ ಇತ್ತು ಎಂದು ದಾಖಲಿಸುತ್ತಾನೆ. ಹೈದರನ ಅರಮನೆ, ಅಧಿಕಾರಿಗಳು, ವ್ಯವಹಾರಗಳನ್ನು ತುಂಬಾ ಚೆನ್ನಾಗಿ ವರ್ಣಿಸುತ್ತಾನೆ.

ಹೈದರನ ಅರಮನೆ ಸುಂದರ ಕಟ್ಟಡವಾಗಿದ್ದು ಅದಕ್ಕೆ ಬಾಲ್ಕನಿ ಇತ್ತು. ಇದು ಬೆಂಗಳೂರಿನ ಟೀಪು ಬೇಸಿಗೆ ಅರಮನೆಯಂತೆ ಇದ್ದಿರಬಹುದು.  ಎದುರು ವಿಶಾಲವಾದ ಮುಕ್ತ ಸ್ಥಳವಿತ್ತು, ಅಕ್ಕಪಕ್ಕಗಳಲ್ಲಿ ಸರಕಾರೀ ಕಚೇರಿಗಳಿದ್ದವು. ಅಧಿಕಾರಿಗಳು ಕೆಲಸದಲ್ಲಿ ಮಗ್ನರಾಗಿರುವುದು ಹೈದರನಿಗೆ ಕಾಣಿಸುತ್ತಿತ್ತು. ಪತ್ರಗಳು ಕಡತಗಳು ಅತ್ಯಂತ ಶಿಸ್ತಿನಿಂದ ವಿಲೇವಾರಿ ಆಗುತ್ತಿದ್ದವು. ದಿವಾನಖಾನೆ ಬಹಳ ಸುಂದರವಾಗಿ ಸಜ್ಜುಗೊಂಡು ಹೈದರನ ರಸಿಕತೆಯನ್ನು ತೋರಿಸುತ್ತಿತ್ತು. 

‘ಹೈದರ್ ಆಗಾಗ ತನ್ನ ಸೇವಕರಿಗೆ ಮೆಚ್ಚುಗೆಯ ಬಹುಮಾನ ಕೊಟ್ಟರೂ ಕೂಡಾ ಪ್ರಧಾನವಾಗಿ ಅಲ್ಲಿ ನಡೆಯುತ್ತಿದ್ದುದು ಭಯ. ಇನ್ನೂರು ಭಟರು ಸದಾ ತಮ್ಮ ಕೊರಡೆಯನ್ನು ಸಿದ್ಧವಾಗಿಟ್ಟುಕೊಂಡು ಕಾಯುತ್ತಿದ್ದರು. ಪ್ರತಿ ದಿನ ಯಾರಿಗಾದರು ಕೊರಡೆ  ಏಟು ಬೀಳದೇ ಇರುತ್ತಿರಲಿಲ್ಲ. ಹೈದರ್ ತರತಮ ಭಾವವಿಲ್ಲದೇ ಎಲ್ಲರಿಗೂ ಒಂದೇ ರೀತಿಯ ಶಿಕ್ಷೆ ಕೊಡುತ್ತಾನೆ – ಉನ್ನತ ಅಧಿಕಾರಿಗಳು, ಕೆಳವರ್ಗದ ಕೆಲಸಗಾರರು, ಸಜ್ಜನರು, ಕುದುರೆ ಲಾಯದವರು, ತೆರಿಗೆ ವಸೂಲಿ ಅಧಿಕಾರಿಗಳು ಕೊನೆಗೆ ತನ್ನ ಮಕ್ಕಳಿಗೂ ಸಹ! ಹಾಗೆ ಶಿಕ್ಷೆಗೊಳಗಾದವರನ್ನು ಕಳಿಸಿಬಿಡುವುದಿಲ್ಲ, ಅವರು ಮತ್ತೆ ಸೇವೆಯಲ್ಲಿ ಮುಂದುವರಿಯಲೇ ಬೇಕು, ಅವರ ಮೈ ಮೇಲಿನ ಕೊರಡೆ  ಏಟಿನ ಗುರುತು ಇತರರಿಗೆ ಎಚ್ಚರಿಕೆಯ ಪಾಠ. ಹೈದರನ ಪ್ರಕಾರ ಯಾರಿಗೆ ಆಸೆ ಇದೆಯೋ ಅವರಿಗೆ ಮರ್ಯಾದೆ ಇರುವುದಿಲ್ಲ.

ಒಂದು ದಿನ ನಾನು ಅಲ್ಲಿಗೆ ತೆರಳಿದಾಗ ಒಂದು ಗುಂಪು ಅಲ್ಲಿ ಕೂತಿತ್ತು, ಎಲ್ಲರ ಮುಖಗಳಲ್ಲಿ ವಿಪರೀತ ಭಯ ಕುಣಿಯುತ್ತಿತ್ತು. ಅವರೆಲ್ಲ ಜಿಲ್ಲೆಗಳ ಕಲೆಕ್ಟರ್ ಗಳು ಎಂದು ಹೈದರನ ಪರ್ಷಿಯನ್ ಕಾರ್ಯದರ್ಶಿ ನನಗೆ ಹೇಳಿದ. ಅವರನ್ನೆಲ್ಲ ಯಾವುದೋ ಆಫೀಶಿಯಲ್ ಕೆಲಸಕ್ಕೆ ಕರೆಸಲಾಗಿತ್ತು. ನನ್ನ ಕಣ್ಣಿಗೆ ಅವರೆಲ್ಲ ಮರಣದಂಡನೆ ವಿಧಿಸಿದ ಅಪರಾಧಿಗಳಂತೆ ಕಾಣಿಸಿದರು. ಆದರೆ ಅವರಲ್ಲಿ ಸರಿಯಾಗಿ ಲೆಕ್ಕ ಕೊಡುವವರು ಬಹಳ ಇರಲಿಲ್ಲ. ಪ್ರತಿದಿನ ಅವರಿಗೆ ಶಿಕ್ಷೆ ಆಗುತ್ತಿತ್ತು. ಅವತ್ತು ಒಬ್ಬನಿಗೆ ಕೊಟ್ಟ ಶಿಕ್ಷೆಯನ್ನು ಬರೆಯಬೇಕೋ ಬೇಡವೋ ಗೊತ್ತಾಗುತ್ತಿಲ್ಲ.

ಓದಿದವರಲ್ಲಿ ಅನೇಕರು ನಾನು ಉತ್ಪ್ರೇಕ್ಷೆ ಮಾಡುತ್ತಿದ್ದೇನೆ ಎಂದು ತಿಳಿಯಬಹುದು. ಆ ಪಾಪದ ಮನುಷ್ಯನನ್ನು ಕಟ್ಟಿಹಾಕಿದರು. ಇಬ್ಬರು ಕೊರಡೆ ತೆಗೆದುಕೊಂಡು ಬಂದು ಅವನ ಮೈ ಸೀಳುವಂತೆ ಹೊಡೆದರು. ಕೊರಡೆಯ ತುದಿಯ ಚೂಪು ಮೊಳೆಗಳು ಅವನ ಮೈಯನ್ನು ಕಿತ್ತುಹಾಕಿದವು. ಅದರ ಮೇಲೇ ಮತ್ತೆ ಮತ್ತೆ ಬಾರಿಸಿದರು. ಅವನ ಕೂಗು ಆಕಾಶ ಮುಟ್ಟುತ್ತಿತ್ತು.

ಆದರೂ ಹೈದರನಿಗೆ ಕೆಲಸ ಮಾಡಲು ಜನರು ಹಾತೊರೆಯುತ್ತಿದ್ದರು. ಕೆಲವರು ಕದ್ದು ಮೆಲ್ಲನೆ ಹಣ ಮಾಡಿಕೊಂಡರೆ ಇನ್ನು ಕೆಲವರು ಪ್ರಾಮಾಣಿಕತೆಗೆ ಹೈದರ್ ಸನ್ಮಾನಿಸುತ್ತಾನೆ ಎಂದು ನಂಬಿದ್ದರು. ಆದರೆ ಅವರೆಲ್ಲ ತಮ್ಮ ಜಿಲ್ಲೆಗಳಲ್ಲಿ ಜನರನ್ನು ಸುಲಿದು ಚಿತ್ರಹಿಂಸೆ ಕೊಟ್ಟು ವಸೂಲಿ ಮಾಡಿ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು. ಹೈದರನ ಬಳಿಗೆ ಬಂದು ತಮ್ಮಲ್ಲಿ ಏನಿಲ್ಲ, ಬಡವರೆಂದು ನಾಟಕ ಮಾಡಿ ಶಿಕ್ಷೆ ತಿಂದು ಮರಳಿ ತಮ್ಮ ಜಿಲ್ಲೆಗೆ ಹೋಗುತ್ತಿದ್ದರು.

ಮೊದಲ ಸಲ ಹೈದರನನ್ನು ಶ್ವಾರ್ಟ್ಸ್ ಭೇಟಿ ಮಾಡಿದಾಗ ಹೈದರ್ ಆತನನ್ನು ಪಕ್ಕದಲ್ಲೇ ಕೂರಿಸಿಕೊಂಡು ಆತ್ಮೀಯತೆಯಿಂದ ಮಾತನಾಡಿಸಿದ. (ಚಿತ್ರ ನೋಡಿ) ‘ತಾನು ಹೇಳಿದ್ದನ್ನೆಲ್ಲ ಸಮಾಧಾನವಾಗಿ, ಸ್ನೇಹಪರವಾಗಿದ್ದು ಸಂತೋಷದಿಂದಲೇ ಕೇಳಿಸಿಕೊಂಡ. ನಂತರ ತಾನು ಮಾತನಾಡುವಾಗ ಯಾವುದೇ ಮುಚ್ಚುಮರೆ ಇಲ್ಲದೆ ಮುಕ್ತವಾಗಿ ಹೇಳಬೇಕಾದ್ದನ್ನು ಹೇಳಿದ – ಯುರೋಪಿಯನ್ನರು ವಚನ ಭ್ರಷ್ಠರು, ಆದರೂ ತಾನು ಅವರೊಡನೆ ಶಾಂತಿಯಿಂದಿರಲು ಬಯಸುತ್ತೇನೆ. (ಕೆಲವು ಷರತ್ತುಗಳು) ಕೊನೆಗೆ ಆತ ಒಂದು ಉತ್ತರವನ್ನು ಡಿಕ್ಟೇಟ್ ಮಾಡಿ ಬರೆಸಿದ, ಅದನ್ನು ನನಗೆ ಓದಿಸಿ ಕೇಳಿಸಿದ. ನಾನು ನಿಮ್ಮ ಜೊತೆ ಮಾತನಾಡಿದ್ದನ್ನು ಸಂಕ್ಷಿಪ್ತವಾಗಿ ಬರೆಸಿದ್ದೇನೆ, ಉಳಿದದ್ದನ್ನು ನೀವು ವಿವರವಾಗಿ ತಿಳಿಸಿ ಎಂದ.’

ಹೈದರ್ ತನ್ನ ಕೆಲಸಗಳನ್ನು ಎಷ್ಟು ಶಿಸ್ತಿನಿಂದ ಮಾಡುತ್ತಾನೆ ಎನ್ನುವುದನ್ನು ಶ್ವಾರ್ಟ್ಸ್ ವಿವರಿಸುತ್ತಾನೆ. ‘ನಾನು ಹೈದರ್ ನಾಯಕನ ಬಳಿ ಕೂತಿದ್ದಾಗ ಎಷ್ಟು ತ್ವರಿತವಾಗಿ ಮತ್ತು ಶಿಸ್ತಿನಿಂದ ಒಂದಾದ ಮೇಲೊಂದರಂತೆ ಕೆಲಸಗಳು ಪೂರ್ಣಗೊಳ್ಳುತ್ತಿದ್ದವು ಎನ್ನುವುದನ್ನು ನಿರ್ದಿಷ್ಟವಾಗಿ ಗಮನಿಸಿದೆ. ಆತ ಮಾತಿನಲ್ಲಿ ನಡುವೆ ನಿಲ್ಲಿಸಿದಾಗ ತಕ್ಷಣ ಒಂದು ಜಿಲ್ಲೆಯ ವರದಿಗಳನ್ನು ಓದಿ ತಿಳಿಸಲಾಗುತ್ತಿತ್ತು, ಅದನ್ನು ಕೇಳಿಸಿಕೊಂಡ ಹೈದರ್ ತಕ್ಷಣ ಉತ್ತರವನ್ನು ಹೇಳುತ್ತಿದ್ದ. ತಕ್ಷಣ ಬರಹಗಾರ ಓಡಿ ಅದನ್ನು ಬರೆದುಕೊಂಡು ಬಂದು ಓದಿ ಹೇಳುತ್ತಿದ್ದ, ಹೈದರ್ ಅದಕ್ಕೆ ತನ್ನ ಸಹಿ ಮತ್ತು ಮೊಹರು ಹಾಕುತ್ತಿದ್ದ. ಹಾಗಾಗಿ ಒಂದು ದಿನಕ್ಕೆ ಅಪಾರ ಸಂಖ್ಯೆಯ ಪತ್ರಗಳು ವಿಲೇವಾರಿ ಆಗುತ್ತಿದ್ದವು. ಹೈದರ್ ಗೆ ಓದಲು ಬರೆಯಲು ಬರುತ್ತಿರಲಿಲ್ಲ ಆದರೆ ಆತನಿಗೆ ಅದ್ಭುತ ಜ್ಞಾಪಕ ಶಕ್ತಿ ಇತ್ತು. ಒಬ್ಬ ಒಂದು ಪತ್ರವನ್ನು ಬರೆದು ಓದಿ ಹೇಳಿದರೆ ಮತ್ತೊಬ್ಬನನ್ನು ಕರೆದು ಅದನ್ನು ಓದಲು ಹೇಳುತ್ತಿದ್ದ. ತನ್ನ ಆಜ್ಞೆಯಲ್ಲಿ ಏನಾದರೂ ತಪ್ಪಿದ್ದಲ್ಲಿ ಬರೆದವನ ತಲೆ ಹೋಗುತ್ತಿತ್ತು.’

ಹೈದರನ ಧಾರ್ಮಿಕ ನಂಬಿಕೆಯ ಬಗ್ಗೆ ಇದ್ದ ತಟಸ್ಥ ಭಾವದ ಬಗ್ಗೆ ರೆವರೆಂಡ್ ಶ್ವಾರ್ಟ್ಸ್ ಸ್ಪಷ್ಟವಾಗಿ ದಾಖಲಿಸುತ್ತಾನೆ. ‘ಜನರು ಯಾವ ಧರ್ಮವನ್ನು ಪಾಲಿಸುತ್ತಾರೆ, ಪಾಲಿಸುತ್ತಾರಾ ಇಲ್ಲವಾ ಅನ್ನುವ ಬಗ್ಗೆ ಹೈದರನಿಗೆ ಕಿಂಚಿತ್ತೂ ಆಸಕ್ತಿ ಇಲ್ಲ. ಸ್ವತಃ ಆತನಿಗೆ ಅದರಲ್ಲಿ ಆಸಕ್ತಿ ಇಲ್ಲ ಮತ್ತು ಜನರಿಗೆ ಅವರವರ ಆಯ್ಕೆಗೆ ಬಿಟ್ಟುಬಿಡುತ್ತಾನೆ.’

ಅಲ್ಲದೇ ಶ್ವಾರ್ಟ್ಸ್ ಹೈದರನ ಅಧಿಕಾರಿಗಳ ಜೊತೆ  ಕಿಂಚಿತ್ತೂ ಅಡೆತಡೆ ಇಲ್ಲದೆ ಧಾರ್ಮಿಕ ಸಂಗತಿಗಳ ಬಗ್ಗೆ ಚರ್ಚೆ ಮಾಡುವ ಸ್ವಾತಂತ್ರ್ಯ ಇತ್ತು ಎನ್ನುತ್ತಾನೆ. ಕ್ರಿಶ್ಚಿಯನ್ನರ ಪ್ರಾರ್ಥನೆ ಆರಾಧನೆ ಬಗ್ಗೆ ಅವರು ಪ್ರಶ್ನೆಗಳನ್ನು ಕೇಳಿದಾಗ ಶ್ವಾರ್ಟ್ಸ್ ಪರ್ಷಿಯನ್, ಹಿಂದಿ, ತಮಿಳಿನಲ್ಲಿ ಉತ್ತರ ಕೊಡುತ್ತಿದ್ದ. ಅವರೆಲ್ಲ ಬ್ರಾಹ್ಮಣರು ಎಂದೂ ದಾಖಲಿಸುತ್ತಾನೆ. ಧಾರ್ಮಿಕ ಸಂಗತಿಗಳ ಬಗ್ಗೆ ಚರ್ಚೆ ಮಾಡಲು ಕೆಲವರು ಬಯಸುತ್ತಿರಲಿಲ್ಲ. ಕೋಟೆಯ ಹೊರಗೆ ಚರ್ಚಿನಲ್ಲಿ ಶ್ವಾರ್ಟ್ಸ್ ತಮಿಳು ಮಲಯಾಳಂಗಳಲ್ಲಿ ಸರ್ವಿಸ್ ನಡೆಸುತ್ತಾನೆ, ಅದಕ್ಕೆ ಯಾರೂ ಯಾವ ರೀತಿಯಲ್ಲೂ ಅಡ್ಡಿಪಡಿಸಲಿಲ್ಲ ಎಂದು ಸ್ಪಷ್ಟಪಡಿಸುತ್ತಾನೆ. ಹೈದರನ ಅರಮನೆಯಲ್ಲೂ ಸಹ ಮೇಲ್ದರ್ಜೆಯವರಿಂದ ಹಿಡಿದು ಕೆಳದರ್ಜೆಯವರವರೆಗೆ ಯಾರು ಬೇಕಾದರು ಬಂದು ಧರ್ಮದ ಬಗ್ಗೆ ಪ್ರಶ್ನೆ ಕೇಳಬಹುದಿತ್ತು ಎನ್ನುತ್ತಾನೆ. 

ಒಂದು ಸಲ ಹೈದರನ ಕಿರಿಮಗ ಕರೀಂ ಸಾಹಿಬ್ ಪಾದ್ರಿಗೆ ತನ್ನ ಮಹಲಿಗೆ ಬರಬೇಕೆಂದು ಆಹ್ವಾನ ಕಳಿಸಿದ. ಅದಕ್ಕೆ ಪಾದ್ರಿ ಖಂಡಿತಾ ಬರುತ್ತೇನೆ ಆದರೆ ಅದಕ್ಕೆ ತಂದೆಯವರ ಅನುಮತಿ ಪಡೆಯಬೇಕು ಎಂದಾಗ ಅದಕ್ಕೇನು ಪಡೆದುಕೊಂಡೇ ಬನ್ನಿ ಎಂದು ಉತ್ತರ ಬಂತು.  ಹೈದರನಿಗೆ ಅತ್ಯಂತ ಆತ್ಮೀಯರು ಕೂಡಾ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ, ಏಕೆಂದರೆ ಸುತ್ತಮುತ್ತ ಗೂಢಚಾರಿಗಳಿರುತ್ತಾರೆ. ಆದರೆ ತಾನು ಧರ್ಮದ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೇ ಹಗಲಿರುಳು ಮಾತನಾಡಬಹುದಿತ್ತು ಎನ್ನುತ್ತಾನೆ.

ಹೈದರ್ ಶ್ವಾರ್ಟ್ಸ್ ನನ್ನು ಕೊನೆಯ ದಿನ ಬೀಳ್ಕೊಡುವಾಗ ನಡೆದ ಸಂಗತಿಗಳ ವಿವರಗಳು ಕುತೂಹಲಕಾರಿಯಾಗಿವೆ.  

ಹೊರಡುವ ದಿನ ಸಂಜೆ ಹೈದರ್ ಶ್ವಾರ್ಟ್ಸ್ ಗೆ ತನ್ನ ಅಧಿಕಾರಿಗಳ ಜೊತೆ ಮಾತನಾಡಿದಂತೆ ತನ್ನೊಡನೆಯೂ ಪರ್ಷಿಯನ್ ನಲ್ಲಿ ಮಾತನಾಡಲು ಕೋರಿಕೊಂಡ. ಶ್ವಾರ್ಟ್ಸ್ ಅದನ್ನು ಮನ್ನಿಸಿ ಪರ್ಷಿಯನ್ ಭಾಷೆಯಲ್ಲಿ ತನ್ನ ಭೇಟಿಯ ಉದ್ದೇಶವನ್ನು ಮತ್ತೊಮ್ಮೆ ವಿವರಿಸಿದ. ಅದಕ್ಕೆ ಹೈದರ್ ಪರ್ಷಿಯನ್ ಭಾಷೆಯಲ್ಲೇ ನೀಡಿದ ಉತ್ತರವನನ್ನು ಶ್ವಾರ್ಟ್ಸ್ ಪದಶಃ ದಾಖಲಿಸಿದ್ದಾನೆ. ‘ನಾನಂದೆ, ರಾಜಕೀಯ ಕಾಳಜಿಗಳಿಲ್ಲದ ನನ್ನಂತಹ ಪಾದ್ರಿ ನಿಮ್ಮ ಬಳಿ ಬರಲು ಪ್ರೇರಿಸುವಂತಹ ಕಾರಣವೇನಿರಬಹುದು, ಅದೂ ನನ್ನ ಪವಿತ್ರ ಕೆಲಸಗಳಿಗೆ ಸಂಬಂಧವೇ ಇಲ್ಲದ ಒಂದು ಉದ್ದೇಶಕ್ಕಾಗಿ, ಎಂದು ತಾವು ಯೋಚಿಸಿರಬಹುದು.

ನಾನು ಸರಳವಾಗಿ ವಿವರಿಸಿದಂತೆ, ನನ್ನ ಈ ಪ್ರಯಾಣದ ಏಕೈಕ ಉದ್ದೇಶ ಅಂದರೆ ಶಾಂತಿಯನ್ನು ಕಾಪಾಡುವುದು ಮತ್ತು ಪೋಷಿಸುವುದು. ಅನೇಕ ಬಾರಿ ಯುದ್ಧದ ಪರಿಣಾಮವಾಗಿ ಉಂಟಾಗುವ ಭೀಕರತೆ ಮತ್ತು ಸಂಕಷ್ಟಗಳನ್ನು ಕಣ್ಣಾರೆ ಕಂಡಿರುವ ನನಗೆ, ಎರಡು ಸರ್ಕಾರಗಳ ನಡುವೆ ಸ್ನೇಹವನ್ನು ಉಂಟುಮಾಡುವ ಹಾಗೂ ಈ ಧಾರ್ಮಿಕ ದೇಶಕ್ಕೆ ಮತ್ತು ಪ್ರಜೆಗಳಿಗೆ  ಶಾಂತಿಯ ಆಶೀರ್ವಾದ ನೀಡುವ ಸಾಧನವಾಗುವ ಪರಮ ಸಂತೋಷ ನೀಡುತ್ತಿದೆ.

ಈ ಕೆಲಸ ಶಾಂತಿದೂತನಾದ ದೇವರ ಕಾರ್ಯಕ್ಕಿಂತ ಯಾವುದೇ ರೀತಿಯಲ್ಲಿ ಕೀಳೆಂದು ನಾನು ಭಾವಿಸುವುದಿಲ್ಲ. ಅದಕ್ಕೆ ಹೈದರ್ ತುಂಬಾ ಆಪ್ತತೆಯಿಂದ ನುಡಿದ ‘ಒಳ್ಳೇದು! ಒಳ್ಳೇದು! ಇದರಲ್ಲಿ ನಿಮ್ಮೊಂದಿಗೆ ನಾನು ಸಹಮತದಲ್ಲಿದ್ದೇನೆ. ಹಾಗೆಯೇ ಇಂಗ್ಲೀಷಿನವರು ಕೂಡಾ ನಿಮ್ಮಷ್ಟೇ ಶಾಂತಿಪಾಲನೆಯ ಬಗ್ಗೆ ನಿಷ್ಟೆಯಿಂದಿದ್ದಿದ್ದರೆ  ಎಂದು ಆಶಿಸುತ್ತೇನೆ. ಅವರು ಶಾಂತಿ ಮತ್ತು ಸಾಮರಸ್ಯದ ಕೈ ಚಾಚಿದರೆ ನಾನು ಖಂಡಿತಾ ನನ್ನ ಕೈಯನ್ನು ಹಿಂತೆಗೆದುಕೊಳ್ಳುವುದಿಲ್ಲ.’

ಹೊರಡುವಾಗ ಪಾದ್ರಿ ಮೇನೆ ಯಲ್ಲಿ ಕೂರುವಾಗ ಹೈದರ್ ಸೇವಕರ ಕೈಯಲ್ಲಿ ಪ್ರಯಾಣದ ಖರ್ಚಿಗೆ ಎಂದು ಒಂದು ಚೀಲದಲ್ಲಿ ಮುನ್ನೂರು ರೂಪಾಯಿಗಳ ಕಾಣಿಕೆ ಕಳಿಸಿದ. ಪಾದ್ರಿ ಅದನ್ನು ಸ್ವೀಕರಿಸಲು ಹಿಂಜರಿದು ಬೇಡವೇ ಬೇಡಾ ಎಂದ. ಅದನ್ನು ಹಿಂದಕ್ಕೆ ತೆಗೆದುಕೊಂಡರೆ ತಮ್ಮ ಪ್ರಾಣಕ್ಕೆ ಕುತ್ತು ಎಂದರು ಸೇವಕರು. ಹಾಗಾದರೆ ತಾನೇ ಸ್ವತಃ ಹಿಂದಿರುಗಿಸುತ್ತೇನೆ ಎಂದಾಗ ಅಧಿಕಾರಿಗಳು ಭೇಟಿ ಮುಕ್ತಾಯವಾದ ಮೇಲೆ ಮತ್ತೆ ಹಿಂದಿರುಗುವುದು ಅಸಾಧ್ಯ ಎಂದರು. ಅಲ್ಲದೇ ದೊಡ್ಡ ಮೊತ್ತದ ಕಾಣಿಕೆ ನೀಡಿದಲ್ಲಿ ಪಾದ್ರಿಗೆ ಮುಜುಗರವಾಗುತ್ತದೆಂದು ಕೇವಲ ಪ್ರಯಾಣದ ಖರ್ಚಿಗೆಂದು ಅಲ್ಪ ಕಾಣಿಕೆಯನ್ನು ಮಾತ್ರ ನೀಡಲು ಅಪ್ಪಣೆಯಾಗಿದೆ ಎಂದು ವಿವರಿಸಿದರು.

ಆ ಪ್ರಾಮಾಣಿಕ ಪಾದ್ರಿ ಮದರಾಸಿಗೆ ಹಿಂದಿರುಗಿ ತನ್ನ ಭೇಟಿಯ ವರದಿ ಒಪ್ಪಿಸಿ ಈ ಕಾಣಿಕೆಯ ಹಣವನ್ನೂ ಸರ್ಕಾರಕ್ಕೆ ಸಲ್ಲಿಸಿದ! ಅದಕ್ಕೆ ಗವರ್ನರ್ ಅವನು ಕೈಗೊಂಡ ಅಪಾಯಕರ ಪ್ರಯಾಣಕ್ಕೆ ಇದೊಂದು ಜುಜುಬಿ ಚಿಲ್ಲರೆ ಎಂದ. ಬದಲಿಗೆ ಮದ್ರಾಸು ಸರಕಾರ ಪಾದ್ರಿ ಕೋರಿದ ಇಟ್ಟಿಗೆ ಮತ್ತು ಸುಣ್ಣವನ್ನು ಮಂಜೂರು ಮಾಡಿದ್ದಲ್ಲದೇ ಪಾದ್ರಿಗೆ ಮತ್ತು ಆತನ ಸಹಾಯಕನಿಗೆ ನೂರು ಸ್ಟರ್ಲಿಂಗ್ ಪೌಂಡ್ ನೀಡುವ ಏರ್ಪಾಟು ಮಾಡಿತು. ಈ ನೂರು ಪೌಂಡ್ ನಲ್ಲಿ ಅರ್ಧವನ್ನು ಮತ್ತೊಬ್ಬ ಪಾದ್ರಿಗೆ ನೀಡಿ ಇನ್ನರ್ಧವನ್ನು ಶಾಲೆಯ ಭಾರತೀಯ ಶಿಕ್ಷಕರಿಗೆ ನೀಡಿದ ಶ್ವಾರ್ಟ್ಸ್! 

ಹೈದರ್ ನೀಡಿದ ಮುನ್ನೂರು ರೂಪಾಯಿಯನ್ನು ಪಾದ್ರಿ ಚರ್ಚ್ ಕಟ್ಟಲು ಬಳಸಿಕೊಂಡ. ಇಂದಿಗೂ ಆ ಚರ್ಚ್ ಟೂರಿಸ್ಟ್ ಆಕರ್ಷಣೆಯಾಗಿದೆ. (ಚಿತ್ರ ನೋಡಿ)

ರಾಜಕೀಯವಾಗಿ ಈ ಭೇಟಿ ವಿಫಲವಾಗಲು ಕಾರಣ ರೆವರೆಂಡ್ ಶ್ವಾರ್ಟ್ಸ್ ನ ಪ್ರಾಮಾಣಿಕ ಪ್ರಯತ್ನದಲ್ಲಾಗಲೀ,  ಆತನನ್ನು ಗೌರವದಿಂದ ಸ್ವಾಗತಿಸಿ ಮಾತನಾಡಿ ತನ್ನ ಶಾಂತಿಯ ಅಪೇಕ್ಷೆಯನ್ನು ವ್ಯಕ್ತಪಡಿಸಿದ ಹೈದರನ ಪ್ರಾಮಾಣಿಕತೆಯಲ್ಲಾಗಲೀ ಅಥವಾ ಈ ಗುಪ್ತ ಪ್ರಯತ್ನಪಟ್ಟ ಗವರ್ನರ್ ಸರ್ ಥಾಮಸ್ ರುಮ್ಬೋಲ್ಡ್ ನ ಉದ್ದೇಶದಲ್ಲಾಗಲೀ ಕೊರತೆ ಇತ್ತು ಎಂದಲ್ಲ. ಅದಕ್ಕೆ ಕಾರಣ ದಕ್ಷಿಣದಲ್ಲಿ ಪ್ರಭಾವಶಾಲಿಯಾಗಿದ್ದ ನವಾಬ್ ಮಹಮದ್ ಅಲಿ ವಲ್ಲಜಾ ಗೆ ಶಾಂತಿಗಿಂತ ಯುದ್ಧವೇ ಪ್ರಿಯವಾಗಿತ್ತು.

‍ಲೇಖಕರು Admin

July 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: