ಭುವನೇಶ್ವರಿ ಹೆಗಡೆ ಅಂಕಣ- ಗಡ ಗಡ ನಡುಗಿಸುವ ಕ್ಲಾಸ್ ರೂಂ

3

ಮಂಗಳೂರು ನಗರದಲ್ಲೇ ಅತ್ಯಂತ ಸಮೃದ್ಧ ಲೈಬ್ರರಿ ಎಂದು ಖ್ಯಾತವಾಗಿದ್ದ ನಮ್ಮೀ ಕಾಲೇಜಿನ ಲೈಬ್ರರಿಯಲ್ಲಿ ಸಿಗದ ಹಳೆಯ ಪುಸ್ತಕಗಳಿಲ್ಲ. ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟ ಪುಸ್ತಕಗಳನ್ನು ಶೇಖರಣ್ಣ, ಗುರಪ್ಪಣ್ಣ ಎಂಬಿಬ್ಬರು ಸಿಬ್ಬಂದಿಗಳು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಯಾವುದೇ ವಿಭಾಗದ ಯಾವುದೇ ಪುಸ್ತಕವನ್ನು ಕೇಳಿದರೂ ಸೀದಾ ಆ ಕಪಾಟಿಗೇ ಹೋಗಿ ಅದೇ ಪುಸ್ತಕಕ್ಕೆ ಕೈ ಹಾಕಿ ತೆಗೆದು ಕೊಡುತ್ತಿದ್ದ ಅವರ ವೃತ್ತಿ  ಪ್ರೀತಿ ಅಚ್ಚರಿ ಮೂಡಿಸುತ್ತಿತ್ತು.

ಪುತ್ತೂರಿನ ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ ಅನುಪಮಾ ನಿರಂಜನ ದಂಪತಿಗಳಿಗೆ ಅಗತ್ಯವಿದ್ದ ಒಂದು ಅಪರೂಪದ ಕೃತಿಯನ್ನು ನಾನಿಲ್ಲಿಂದ ಹುಡುಕಿ ಕಾಪಿ ಮಾಡಿಸಿ ಕೊಟ್ಟು ಕೃತಾರ್ಥಳಾಗಿದ್ದೆ.

ತರಗತಿಗಳ ನಡುವೆ ಟೈಂ ಗ್ಯಾಪ್ ಸಿಕ್ಕಾಗೆಲ್ಲ ಲೈಬ್ರರಿಯಲ್ಲೇ ಕೂರುವದು ನನ್ನ ಅಭ್ಯಾಸವಾಗಿತ್ತು. ಅಧ್ಯಾಪಕರಿಗೆಂದು ಪ್ರತ್ಯೇಕ ಓದುವ ವಿಶಾಲವಾದ ಹಾಲ್, ಗಂಡು ಹೆಣ್ಣು ಮಕ್ಕಳಿಗೆ ಬೇರೆ ರೀಡಿಂಗ್ ರೂಮ್ ಗಳು. ತುಂಬಾ ಸುಸಜ್ಜಿತವಾದ ಲೈಬ್ರರಿ. ಕ್ರಾಸ್ ವೆಂಟಿಲೇಶನ್ ಹೊಂದಿದತಂಪು ಗಾಳಿಯನ್ನು ಒಳಬಿಡುವ ಗವಾಕ್ಷಿಗಳು.

ಆಗಿನ್ನೂ ಸರ್ಕಾರೀ ಕಾಲೇಜೇ ಆಗಿದ್ದರಿಂದ ಪಿಯುಸಿ ತರಗತಿಗಳು ನೂರಕ್ಕೂ ಮಿಕ್ಕು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದವು. ಈಗಿನ ಶಿವರಾಮ ಕಾರಂತ ಭವನದಲ್ಲಿ ರಂಗಮಂದಿರದಲ್ಲಿರುವಂತೆ ಪಾವಟಿಗೆಯುಳ್ಳ ಆಸನ ವ್ಯವಸ್ಥೆ ಇತ್ತು. ಹೊಸದಾಗಿ ಸೇರುವ ಉಪನ್ಯಾಸಕರನ್ನು ಗಡ ಗಡ ನಡುಗಿಸುವ ಕ್ಲಾಸ್ ರೂಂ ಅದು. ವಿದ್ಯಾರ್ಥಿ ಲೋಕವನ್ನು ನಿರಾಯಾಸವಾಗಿ ನಿಭಾಯಿಸುವ ಶಕ್ತಿ ನನಗೆ ಬಂದಿದ್ದು ನನ್ನ ಹಾಸ್ಯದ ಕೃಷಿಯಿಂದಾಗಿ. 

ಅದಾಗಲೇ ಒಂದು ಹಾಸ್ಯ ಲೇಖನ ಸಂಗ್ರಹ ಪ್ರಕಟಿಸಿದ್ದ ನಾನು ಸ್ಥಳೀಯ ಪತ್ರಿಕೆಗಳಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದೆ. ಆಶ್ಚರ್ಯವೆಂಬಂತೆ ನಾನು ಪಾಠ ಮಾಡದ ವಿದ್ಯಾರ್ಥಿಗಳೂ ಅವುಗಳನ್ನು ಓದಿರುತ್ತಿದ್ದರು. ನೋಟೀಸ್ ಬೋರ್ಡಿನಲ್ಲಿ ಆ ಪೇಜುಗಳನ್ನು  ಪ್ರದರ್ಶಿಸಿ ಸಂಭ್ರಮಿಸುತ್ತಿದ್ದರು. 

ಕೇರಳದ ಮಂಜೇಶ್ವರ, ಉಪ್ಪಳದಿಂದ ಹಿಡಿದು ಕಾಸರಗೋಡಿನ ತನಕದ ಹಳ್ಳಿ ಹಳ್ಳಿಯಿಂದ ನಮ್ಮ ಕಾಲೇಜಿಗೆ ಮಕ್ಕಳು ಬರುತ್ತಿದ್ದರು. ಸರಳ ಸಂಪನ್ನ ಕೃಷಿ ಕುಟುಂಬದ ಮಕ್ಕಳು, ಯಕ್ಷಗಾನದ ದಟ್ಟ ಹಿನ್ನೆಲೆಯವರು, ಸಾಹಿತ್ಯಿಕ ಸಾಧನೆಯುಳ್ಳವರು…. ಹೀಗೆ ವಿವಿಧ ಅಭಿರುಚಿಯ ವಿದ್ಯಾರ್ಥಿಗಳು, ವಿಜ್ಞಾನದ ವಿದ್ಯಾರ್ಥಿಗಳೇ ಹೆಚ್ಚಿರುತ್ತಿದ್ದರು.

ನಮ್ಮ ವಿಭಾಗದಲ್ಲಿ ಕುಳಿತು ಕವಿಗೋಷ್ಠಿ, ವಿದ್ಯಾರ್ಥಿ ಯಕ್ಷಗಾನ ಪ್ರದರ್ಶನಗಳ ಕುರಿತು ಚರ್ಚಿಸುತ್ತಿದ್ದೆವು. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನವರು ಏರ್ಪಡಿಸುತ್ತಿದ್ದ ವಾರ್ಷಿಕ ವಿದ್ಯಾರ್ಥಿ ಯಕ್ಷಗಾನ ಸ್ಪರ್ಧೆಯಲ್ಲಿ ನಮ್ಮ ಕಾಲೇಜು ಎಲ್ಲ ವಿಭಾಗಗಳಲ್ಲಿಯೂ ಬಹುಮಾನ ಗಳಿಸಿ ಯಕ್ಷಗಾನಕ್ಕೆ ತುಂಬಾ ಒಳ್ಳೆಯ ಹೆಸರನ್ನು ಗಳಿಸಿತ್ತು. ಈಗಲೂ ಆ ಪರಂಪರೆ ಮುಂದುವರಿದಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಆ ನನ್ನ ಹಳೆಯ ವಿದ್ಯಾರ್ಥಿಗಳು ಈಗಲೂ ಈ ವಿಭಾಗ ಗೋಷ್ಠಿಗಳನ್ನು ನೆನಪಿಸಿಕೊಂಡು ಸಂದೇಶ ಕಳಿಸುತ್ತಿರುತ್ತಾರೆ. ಅನೇಕರು ಶಾಲಾ ಶಿಕ್ಷಕರು   ಹಾಗೂ ಕಾಲೇಜು ಉಪನ್ಯಾಸಕರಾಗಿದ್ದಾರೆ. 

ಬ್ಯಾಂಕು ಪೋಲೀಸರಂಥ ವಿವಿಧ ವೃತ್ತಿಯಲ್ಲಿದ್ದು ಅಂದಿನ ಚರ್ಚೆಯ ಉಪಯೋಗಗಳನ್ನು ನೆನಪಿಸಿಕೊಳ್ಳುವ ವಿದ್ಯಾರ್ಥಿಗಳ ಸಂಪರ್ಕವನ್ನು ಇಂದಿಗೂ ಉಳಿಸಿಕೊಂಡಿದ್ದು ನನ್ನ ಅದೃಷ್ಟ. ಅಮೆರಿಕೆಯ ಕ್ಯಾಲಿಫೋರ್ನಿಯಾ ಕನ್ನಡ ಕೂಟ ನನ್ನನ್ನು ಉಪನ್ಯಾಸಕ್ಕಾಗಿ ಕರೆಸಿಕೊಂಡಿದ್ದಾಗ ಅಲ್ಲಿದ್ದ ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ನನ್ನ ಓಡಾಟ ವಸತಿ ಯೋಗಕ್ಷೇಮದ ಭಾರವನ್ನೆಲ್ಲ ಹೊತ್ತು ಕೊಂಡು ಖುಷಿಪಟ್ಟಿದ್ದರು.

ಕಾಲೇಜ್ ಡೇ ಅಂದರೆ ಅದೊಂದು ವಾರಗಟ್ಟಲೆ ನಡೆಯುವ ಸಾಂಸ್ಕೃತಿಕ ಹಬ್ಬವಾಗಿತ್ತು. ಹಿಂಭಾಗದ ವಿಶಾಲ ಕ್ರೀಡಾಂಗಣದ ವೇದಿಕೆಯ ಮೇಲೆ ನಡೆಯುವ ಫ್ಯಾನ್ಸಿ ಡ್ರೆಸ್ ಕಾಂಪಿಟೆಶನ್ ನೋಡಲು ಊರವರೆಲ್ಲ ನೆರೆಯುತ್ತಿದ್ದರು. ವೇದಿಕೆಗೆ ಬೈಕುಗಳನ್ನು ನುಗ್ಗಿಸುವುದು, ರಿಕ್ಷಾ ತಂದುಬಿಡುವುದು, ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಗುಂಪೊಂದನ್ನು ತಲೆ ಬೋಳಿಸಿಕೊಂಡ ಗಂಡಸು, ಪಟ್ಟೆ ಪಟ್ಟೆ ಅಂಡರ್ ವೇರ್ ಲುಂಗಿಗಿಂತ ಕೆಳಗೆ ಕಾಣುವಂತೆ ಧರಿಸಿದ ಯಾತ್ರಾರ್ಥಿಗಳು ಮಗುವನ್ನು ಎತ್ತಿಕೊಂಡ ಮಹಿಳೆಯರು ಟ್ರಂಕು ಪೆಟ್ಟಿಗೆ ಹಿಡಿದು ಯಥಾವತ್ತಾಗಿ ವೇದಿಕೆಯ ಮೇಲೆ ಬಂದು ಜನರನ್ನು ಬಿದ್ದೂ ಬಿದ್ದೂ ನಗಿಸುವ ಕಲೆಯನ್ನು ಪ್ರದರ್ಶಿಸುತ್ತಿದ್ದರು. 

ವಿದ್ಯಾರ್ಥಿಗಳಿಗೆ ನಾನು ಹಾಸ್ಯ ನಾಟಕಗಳನ್ನು ಬರೆದು ಕೊಟ್ಟಿದ್ದು, ಅವರದನ್ನು ಅನುಭವಿಸಿ ಅಭಿನಯಿಸಿದ್ದು, ಶ್ರೇಷ್ಠ ಹಿನ್ನೆಲೆ ಗಾಯಕರಿಗೆ ಸಮನಾಗಿ ಹಾಡುತ್ತಿದ್ದ ವಿದ್ಯಾರ್ಥಿಗಳನ್ನೊಳಗೊಂಡ ಆರ್ಕೆಸ್ಟ್ರಾ ಟೀಮು, ಯಕ್ಷಗಾನದ ಟೀಮು, ತುಳು ನಾಟಕ ಪ್ರದರ್ಶನದ ಟೀಮು.. ಹೀಗೆ ಸಾಂಸ್ಕೃತಿಕವಾಗಿ ಸಮೃದ್ಧಿಯ ವಾತಾವರಣದಲ್ಲಿ ನಾನಂತೂ ಮನಃಪೂರ್ವಕವಾಗಿ ತೊಡಗಿಸಿಕೊಂಡಿದ್ದೆ.

ಈಗಿನ ಸಿನಿಮಾ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಅವನ ತಮ್ಮಂದಿರು ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಅವನ ತಾಯಿ ರತ್ನಕಾಂತಿ ಶೆಟ್ಟಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಉಪನಿರ್ದೇಶಕಿಯಾಗಿದ್ದರೆ ಅವರ ಅಕ್ಕ ಪ್ರೇಮಲತಾ ಶೆಟ್ಟಿ ನಮ್ಮ ಕಾಲೇಜಿನ ಪ್ರಾಂಶುಪಾಲೆ ಯಾಗಿದ್ದರು. ಪ್ರತಿನಿತ್ಯವೂ ರೇಷ್ಮೆ ಸೀರೆಯನ್ನೇ ಉಡುತ್ತಿದ್ದ ಎತ್ತರಕ್ಕೆ ಲಕ್ಷಣವಾಗಿದ್ದ ಈ ಮಹಿಳೆ ತಮ್ಮ ಅಂತರಂಗದ ಮೃದುತ್ವದಿಂದ ಎಲ್ಲರಲ್ಲೂ ಪ್ರೀತಿಪಾತ್ರರಾಗಿದ್ದರು. ಅದೊಂದು ಸಂಗೀತ ಸಾಹಿತ್ಯ ನಾಟಕಗಳ ಉಚ್ಛ್ರಾಯ ಕಾಲ. ಈಗಿನಂತೆ  ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡ  ಮೇಷ್ಟ್ರುಗಳಿಗೆ ಶಿಷ್ಟಾಚಾರಗಳ ಕ್ಲರಿಕಲ್ ಕೆಲಸಗಳು ಇಲ್ಲದ ಸುಭಿಕ್ಷದ ಕಾಲ. 

ವಿದ್ಯಾರ್ಥಿಗಳು ಅಧ್ಯಾಪಕರು ನಿರಾಳವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳ ಬಲ್ಲಷ್ಟು ಸಮಯ ಸಿಗುತ್ತಿದ್ದ ಸುಂದರ ಕಾಲ. ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವ ಅವಕಾಶಗಳನ್ನು ನಾನು ಬಿಡುತ್ತಿರಲಿಲ್ಲ. ತರಗತಿಗಳ ನಡುವೆ ನಡೆಯುತ್ತಿದ್ದ ಸ್ಪರ್ಧೆಗಳು, ಅಧ್ಯಾಪಕರಿಗೆ ಎಂದೇ ಪ್ರತ್ಯೇಕವಾಗಿ ನಡೆಯುತ್ತಿದ್ದ ಆಟೋಟ ಸ್ಪರ್ಧೆಗಳು, ಶಿಕ್ಷಕೇತರ ಬಂಧುಗಳ ಉತ್ಸಾಹದ ತೊಡಗಿಕೊಳ್ಳುವಿಕೆಯೂ ಇತ್ತು. ಕಾಲೇಜ್  ಡೇಗಾಗಿಯೇ ತಜ್ಞ ಭಾಗವತರನ್ನು ಕರೆಸಿ ಯಕ್ಷಗಾನ ತರಬೇತಿ ನೀಡಲಾಗುತ್ತಿತ್ತು (ಅದು ಇಂದಿಗೂ ಮುಂದುವರಿದು ಬಂದಿದೆ) ಹುಡುಗ ಹುಡುಗಿಯರು ಸಹ ಯಕ್ಷಗಾನ ದಲ್ಲಿ ಭಾಗವಹಿಸಿ ನುರಿತ ಕಲಾವಿದರಿಗೆ ಸಮಾನವಾಗಿ ಕುಣಿಯುತ್ತಿದ್ದರು. 

ಒಂದು ಸಲ ಸೈರಂಧ್ರಿಯ ಪಾತ್ರ ವಹಿಸಿದ್ದ ವಿದ್ಯಾರ್ಥಿನಿಗೆ ಪ್ರದರ್ಶನ ಶುರುವಾಗುವಷ್ಟರಲ್ಲಿ ಆರೋಗ್ಯ ಕೈಕೊಟ್ಟು ಮಲಗಿಬಿಟ್ಟಳು. ಇಡೀ ಯಕ್ಷಗಾನ ನಿಂತು ಹೋಗಿ ಆಭಾಸವಾದೀತೆಂದು ನಾವೆಲ್ಲ ಎಮರ್ಜೆನ್ಸಿ ಮೀಟಿಂಗ್ ಮಾಡಿದೆವು. ಹೊಸದಾಗಿ ಕನ್ನಡ ವಿಭಾಗಕ್ಕೆ ಸೇರಿದ ಓರ್ವ ಯುವ ಅಧ್ಯಾಪಕಿಗೆ ನೀನು ಯಕ್ಷಗಾನದವರಂತೆ ಸೀರೆಯುಟ್ಟು ರಂಗಸ್ಥಳಕ್ಕೆ ಹೋಗು. ಉಳಿದುದನ್ನು ಭಾಗವತರು ನೋಡಿಕೊಳ್ಳುತ್ತಾರೆ ಎಂದು ಧೈರ್ಯ ತುಂಬಿ ಕಳಿಸಿದೆವು.

ಪಾಪ ಆಕೆ ಪಾಠ ಮಾಡುವ ರೀತಿಯಲ್ಲಿ ನೆಟ್ಟಗೆ ನಿಂತು ‘ಅಮ್ಮಾ ಸುಧೇಷ್ಟ್ಣೇ ನಿಮ್ಮ ತಮ್ಮ ಕೀಚಕನ ಅನುಚಿತ ವರ್ತನೆಯನ್ನು ನಿಗ್ರಹಿಸಿ’ ಎಂದು ಕ್ಲಾಸ್ ರೂಮ್ ಭಾಷೆಯಲ್ಲಿ ಮಾತನಾಡುತ್ತಿದ್ದಳೇ ಹೊರತು ಯಕ್ಷಗಾನಕ್ಕೆ ಹೊಂದುವ ಯಾವ ಅಭಿನಯವಾಗಲೀ ಮೈಕೈಗಳನ್ನು ಅಲುಗಾಡಿಸುವುದಾ ಗಲಿ ಸಾಧ್ಯವಾಗಲೇ ಇಲ್ಲ. ಅಷ್ಟರಲ್ಲಾಗಲೇ ದ್ರೌಪತಿಯ ಅಂದರೆ ಸೈರಂಧ್ರಿಯ ಪಾತ್ರಧಾರಿಗೆ ಹುಷಾರಿಲ್ಲವೆಂಬ ಸುದ್ದಿ ಹಬ್ಬಿಯಾಗಿತ್ತು.

ಎಲ್ಲರೂ ಸದ್ಯ ಯಕ್ಷಗಾನವೇ ನಿಂತುಹೋಗುವಂತೆ ಆಗದೆ ಈ ಅಧ್ಯಾಪಕಿ ಸಮಯಕ್ಕೊದಗುವ ಆಪದ್ಬಾಂಧವರಂತೆ ಕಂಡು ಅವಳ ಅನನುಭವಿ  ಅಭಿನಯವನ್ನು ಕ್ಷಮಿಸಿ ಚಪ್ಪಾಳೆ ತಟ್ಟಿದರು. ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಆ ಅಧ್ಯಾಪಿಕೆ ಇಂದು ಉತ್ತಮ ಸ್ತ್ರೀವೇಷಧಾರಿಯಾಗಿ ಹೆಸರು ಮಾಡಿದ್ದಾಳೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: