‘ಪ್ರಜಾಕಿಯ’: ಮಾಧ್ಯಮಗಳ 'ಡಿಸೈನರ್' ಉತ್ಪನ್ನ!


ಒಬ್ಬ ಕವಿಯನ್ನು ನಿರಾಕರಿಸುವುದು ಹೇಗೆ?!!
ಅವು ‘ಮುಂಗಾರು’ ಪತ್ರಿಕೆಯಲ್ಲಿ ನಾನು ಕಸುಬು ಕಲಿಯುತ್ತಿದ್ದ ದಿನಗಳು. ಆಗ ಪತ್ರಿಕೆಗೆ ಕವಿಯೊಬ್ಬರು ಪುಂಖಾನುಪುಂಖವಾಗಿ ಪ್ರತಿದಿನವೆಂಬಂತೆ ಕವನಗಳ ಅಟ್ಟಿಯನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು. ಮೇಲುನೋಟಕ್ಕೇ ಪ್ರಕಟಣೆಗೆ ಯೋಗ್ಯ ಅಲ್ಲ ಅನ್ನಿಸುವಂತಿದ್ದ ಅವುಗಳ ಭರಾಟೆ ತಡೆಯದೆ, ಹಿರಿಯರು ಸಂಪಾದಕೀಯ ವಿಭಾಗದಲ್ಲಿ ಚರ್ಚೆ ಮಾಡಿ,  ಇದ್ದುದರಲ್ಲಿ ಒಂದನ್ನು ಹುಡುಕಿ, ವಾರದ ಪುರವಣಿಯ “ಮಕ್ಕಳ ವಿಭಾಗ”ದಲ್ಲಿ ಪ್ರಕಟಿಸಲಾಯಿತು!
ಹೀಗೆ ಅದು ಮುಖ್ಯ ಪುಟದ ಕವನವಾಗಲು ಸೂಕ್ತವಲ್ಲವೆಂದು ನಿರಾಕರಿಸಿದಾಗಲಾದರೂ ಅವರ ಕವನ ಕಳಿಸುವ ಭರಾಟೆ ಕಡಿಮೆ ಆದೀತೇ ಎಂದು ಯೋಚಿಸಲಾಗಿತ್ತು. ಊಂಹೂಂ! ಒಂದು ಪ್ರಕಟವಾಯ್ತಲ್ಲ; ಬರುವ ಕವನಗಳ ಸಂಖ್ಯೆ ದುಪ್ಪಟ್ಟಾಯಿತು!!
ಕರ್ನಾಟಕದಲ್ಲಿ ಈಗ ನಡೆದಿರುವ ‘ಪ್ರಜಾಕಿಯ’ ಎಂಬ ಪ್ರಹಸನವನ್ನು ಕಂಡು ನನಗೆ ಈ ಸಂಗತಿ ನೆನಪಾಯಿತು.
ಮಾಧ್ಯಮಗಳು ಒಂದು ಸಾಂವಿಧಾನಿಕ ವ್ಯವಸ್ಥೆಯ ಬಗ್ಗೆ ಅಸಡ್ಡೆ ಇಟ್ಟುಕೊಂಡಾಗ ಮತ್ತು ಆಟ ಆಡಿಸಿ ತಮಾಷೆ ನೋಡುವ ಚಾಳಿ ಬೆಳೆಸಿಕೊಂಡಾಗ ಇಂತಹ ಪಿಟ್ಕಾಯಣಗಳು ತಾವೇ ರಾಮಾಯಣಗಳೆಂದುಕೊಂಡು ಬೀಗತೊಡಗುತ್ತವೆ. ಈ ಪಿಟ್ಕಾಯಣವನ್ನು ತನ್ನ ಮಾಧ್ಯಮದ ಪ್ರಸಾರ+ಪ್ರಚಾರ ಹೆಚ್ಚುಮಾಡಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕ ಚರ್ಚೆಗೆ ನೂಕಿದ ಪತ್ರಿಕೆಯಾಗಲೀ, ಅಥವಾ ಘನಗಂಭೀರವಾಗಿ ‘ಪ್ರಜಾಕಿಯ’ ಮಾಡುತ್ತಿರುವ ನಟವರರಾಗಲೀ ಮಾಡಬೇಕಾದ ಮೊತ್ತ ಮೊದಲ ಕೆಲಸವೆಂದರೆ ಈ ದೇಶದ ಸಂವಿಧಾನ ಪುಸ್ತಕವನ್ನೊಮ್ಮೆ ತೆರೆದು ಓದುವುದು.
2014ರ ಲೋಕಸಭಾ ಚುನಾವಣೆಯ ವೇಳೆ ಇಂತಹದೇ ಲೆಕ್ಕಾಚಾರಗಳು ಇಂಟರ್ನೆಟ್ ತುಂಬೆಲ್ಲ ಓಡಾಡುತ್ತಿದ್ದವು. ಹೊಸ ಸರಕಾರ ಬಂದರೆ ಪ್ರತೀ ಖಾತೆಗೆ 15 ಲಕ್ಷ, ಯಾರೊಬ್ಬರೂ ತೆರಿಗೆ ಕಟ್ಟುವ ಅಗತ್ಯವೇ ಇಲ್ಲದ ಪರಿಸ್ಥಿತಿ ಬರಲಿದೆ ಎಂಬ ಚಾಣಕ್ಯ ಲೆಕ್ಕಾಚಾರಗಳು… ಇತ್ಯಾದಿ. ಈವತ್ತು ಈ ಲೆಕ್ಕಾಚಾರಗಳ ಬಗ್ಗೆ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಈಗ ಮತ್ತೆ ರಾಜ್ಯವು ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿರುವಾಗ ಅಂತಹದೇ ಚಾಣಕ್ಯ ಲೆಕ್ಕಾಚಾರಗಳನ್ನು ಹರಿಬಿಡಲಾಗುತ್ತಿದೆ.
ಇವನ್ನು ನಿರ್ಲಕ್ಷಿಸೋಣವೆಂದರೆ, ಪರಿಸ್ಥಿತಿ ಹಾಗಿಲ್ಲ. ರಾಜ್ಯಮಟ್ಟದ ದಿನಪತ್ರಿಕೆಗಳ, ಚಾನೆಲ್ಲುಗಳ, ವೆಬ್ ಸೈಟುಗಳ ಸಂಪಾದಕರೇ ಈ ಗಾಳಿಪಟದ ಚುಕ್ಕಾಣಿ ಹಿಡಿದು ಕುಳಿತುಬಿಟ್ಟಿದ್ದಾರೆ. ಒಂದೆರಡು ದಿನಗಳಿಂದ, ರಾಜ್ಯದ ಜನರ ಆರೋಗ್ಯಕ್ಕಾಗಿ ಮೊಬೈಲ್ ಫೋನಿನಿಂದ ದಿನಕ್ಕೆ ತಲಾ ಒಂದು ರೂಪಾಯಿ ಕತ್ತರಿಸಿ, ಕಾಸು ಒಟ್ಟುಗೂಡಿಸುವ “ಭಯಂಕರ” ಲೆಕ್ಕಾಚಾರವೊಂದು ಇಂಟರ್ನೆಟ್ ಸಂಚಾರ ನಡೆಸುತ್ತಿದೆ!
ಮೂಲಭೂತವಾಗಿ ಒಬ್ಬ ಜನಪ್ರತಿನಿಧಿಯ ಜವಾಬ್ದಾರಿಗಳೇನು ಎಂಬುದನ್ನು ಸಂವಿಧಾನ ಖಚಿತವಾಗಿ ಹೇಳುತ್ತದೆ. ಶಾಸನಸಭೆಯಲ್ಲಿ ಜನರ ಪ್ರತಿನಿಧಿಯಾಗಿ ಶಾಸನಗಳನ್ನು ರೂಪಿಸಬೇಕಾದ ಒಬ್ಬ ಶಾಸಕ ಈಗ ನಮ್ಮ “ಅಶಿಕ್ಷಿತ” ಮಾಧ್ಯಮಗಳ ಕೈಯಲ್ಲಿ ಸಿಕ್ಕಿ, ರಸ್ತೆ-ತೋಡು ಮಾಡುವ, ಕಸ ಗುಡಿಸುವ, ಟ್ರಾನ್ಸ್ ಫರ್ ಮಾಡಿಕೊಡುವ ಏಜಂಟ್ ಆಗಿಬಿಟ್ಟಿದ್ದಾನೆ. ಈಗ ‘ಪ್ರಜಾಕಿಯ’ ಮಾದರಿಯ ಕೈಗೆ ಜನಪ್ರತಿನಿಧಿಗಳು ಸಿಕ್ಕಿದರೆ, ಅಲ್ಲಿಗೆ ಈ ದೇಶದ ಸಂವಿಧಾನಕ್ಕೆ ಬೇರೆ ಕೆಲಸ ಉಳಿದಿರುವುದಿಲ್ಲ.
ನಮ್ಮ ಮಾಧ್ಯಮಗಳು ಅಶಿಕ್ಷಿತ ಅಲ್ಲವಾದರೆ, ಈ ಆಟಗಳನ್ನೆಲ್ಲ ಬೇಕೆಂದೇ ಆಡುತ್ತಿವೆ ಎಂದೇ ಪರಿಗಣಿಸಬೇಕಾಗುತ್ತದೆ ಮತ್ತು ಪ್ರಜಾತಂತ್ರವನ್ನೂ, ಸಂವಿಧಾನವನ್ನೂ ದೇಶದ ಪ್ರಜೆಗಳ ದ್ರಷ್ಟಿಕೋನದಿಂದ ಸೋಲಿಸಲು ಹೊರಟಿರುವ ಈ ಮಾಧ್ಯಮಗಳ ಉದ್ದೇಶ, ಅದರ ಹಿಂದಿರುವ ಹುನ್ನಾರಗಳು ಏನೆಂದು ಪ್ರಶ್ನಿಸಬೇಕಾಗುತ್ತದೆ.
ಈವತ್ತು “ಸತ್ಯೋತ್ತರ ಸತ್ಯ”ಗಳದೇ ಜಮಾನಾ ಆಗಿರುವಾಗ, ಈ ಎಚ್ಚರ ಇಲ್ಲದಿರುವುದು ಪ್ರಜಾತಂತ್ರಕ್ಕೆ ಅಪಾಯದ ಕರೆಗಂಟೆ. ಬಹಳ ಶಿಸ್ತುಬದ್ಧವಾಗಿ, ಕಾಲೋಚಿತವಾಗಿ ಇವೆಲ್ಲ ನಡೆಯುತ್ತಿರುವುದನ್ನು ನೋಡಿದರೆ, ಇವು ದೊಡ್ಡ ಸಂಚೊಂದರ ಭಾಗ ಎಂದೇ ಅನ್ನಿಸುತ್ತದೆ.
ಏನೂ ಬದಲಾಗುವುದಿಲ್ಲ ಎಂಬ ಜನರ ಸಿನಿಕತನವನ್ನೇ ಬಂಡವಾಳ ಮಾಡಿಕೊಂಡು ಈ ರೀತಿಯ ದಿಕ್ಕುತಪ್ಪಿಸುವ ಪ್ರಯತ್ನಗಳು ಈ ಹಿಂದೆ ದಿಲ್ಲಿಯಲ್ಲೂ ನಡೆದಿದ್ದವು. ಅಂದು ಕುಂಭಕರ್ಣ ನಿದ್ದೆಯಿಂದೆದ್ದು ಕುಳಿತು ಆರ್ಭಟಿಸಿದ್ದ ರಾಳೆಗಣಸಿದ್ಧಿಯ ಅಭಿನವ ಗಾಂಧಿಗೆ ಈಗ ಮತ್ತೆ ಎಚ್ಚೆತ್ತುಕೊಳ್ಳುವ ಸಮಯ ಇನ್ನೂ ಬಂದಿಲ್ಲ. ಇವೆಲ್ಲವೂ ದೇಶದ ಸಂವಿಧಾನ ಮತ್ತು ಪ್ರಜಾತಂತ್ರದ ಮೇಲೆ ಜನರಿಗೆ ವಿಶ್ವಾಸವನ್ನು ತಗ್ಗಿಸುವ ಸಂಘಟಿತ ಪ್ರಯತ್ನದ ಭಾಗಗಳೇ ಅನ್ನಿಸುವುದಿಲ್ಲವೆ?
ದೇಶದಲ್ಲಿ ಭ್ರಷ್ಟಾಚಾರ, ಬಡತನ ಇತ್ಯಾದಿಗಳೆಲ್ಲ ಇವೆ. ಇವಕ್ಕೆ ಉತ್ತರ ಸಿನಿಕತೆ ಅಲ್ಲ; ಬದಲಾಗಿ ನಮ್ಮ ಮನೆಯೊಳಗೆ ನಾವು ಬದಲಾಗಬೇಕು. ಆ ಬಳಿಕ ಊರು, ಕೇರಿ, ದೇಶ ತಂತಾನೆ ಬದಲಾಗುತ್ತದೆ. ಬಡವರ-ಸಿರಿವಂತರ ನಡುವಿನ ಅಂತರವನ್ನು ತಗ್ಗಿಸುವ, ಹಾಸಿಗೆ ಇರುವಷ್ಟೇ ಕಾಲುಚಾಚುವ, ಸಂಪನ್ಮೂಲಗಳನ್ನು ಅಗತ್ಯಕ್ಕೆ ತಕ್ಕಷ್ಟೇ ಬಳಸಿಕೊಂಡು ಮುಂದಿನ ಪೀಳಿಗೆಗೆ ದಾಟಿಸುವ ಬಾಲಪಾಠಗಳನ್ನೂ   ನಮ್ಮ ನೀತಿಗಳ, ಶಾಸನಗಳ ನಿರೂಪಕರು ಮರೆತಿದ್ದಾರೆ. ಅವರಿಗೆ ಇವನ್ನೆಲ್ಲ ನೆನಪು ಮಾಡಿಕೊಡಬೇಕಾದ ಹೊಣೆ ಹೊತ್ತಿರುವ ಮಾಧ್ಯಮಗಳು ಈ ಬೆಂಕಿಯಲ್ಲಿ ತಮ್ಮ ಮೈಕಾಯಿಸಿಕೊಳ್ಳುತ್ತಾ ಕುಳಿತಿವೆ. “ನಾನು ಬದಲಾಗದೇ ದೇಶ ಬದಲಾಗಲಿ” ಎಂದು ಕಾಯುವ ಮೂರ್ಖತನವನ್ನು ನೀರು-ಗೊಬ್ಬರ ಹಾಕಿ ಪೋಷಿಸಲಾಗುತ್ತಿದೆ!
ಒಂದು ಕೇಂದ್ರ ಸರ್ಕಾರ-ಒಂದು ರಾಜ್ಯ ಸರ್ಕಾರದ ಜವಾಬ್ದಾರಿಗಳೇನು ಅವುಗಳ ನಡುವಿನ ಕೊಡುಕೊಳ್ಳುವಿಕೆಗಳೇನು ಎಂದೂ ಅರಿಯದ ಜನ ಮತ್ತವರ ಸಿನಿಮಾ ಡೈಲಾಗ್ ಗಳು ನಾಳೆ ಶಾಸನಸಭೆಯಿಂದ ಕೇಳಿಸುವುದು ಮತ್ತು ನಮ್ಮ ‘ಡಿಸೈನರ್’ ಸಂಪಾದಕರುಗಳು ತಮ್ಮ ಪತ್ರಿಕೆಗಳಲ್ಲಿ ಅವನ್ನು ಅದ್ಭುತ ಲೇಔಟುಗಳೊಂದಿಗೆ ಪ್ರಕಟಿಸಿ ಕ್ರತಾರ್ಥರಾಗುವುದನ್ನು ನೆನೆದರೇ ಮೈ ನಡುಗುತ್ತದೆ!

‍ಲೇಖಕರು avadhi

September 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. sadaask

    ನುಣ್ಣನೆ ಬೆಟ್ಟ ಅನ್ನುವ ಸರಿಯಾದ ಹೆಸರಿನಲ್ಲೇ ಬರೆಯುತ್ತಿದ್ದೀರ! ಯಾಕೆಂದರೆ ದೂರದ್ದು ನಿಮಗೆ ನುಣ್ಣಗೆ ಕಾಣಿಸಿದ್ದು ಅದು ನಿಮ್ಮ ತಪ್ಪಲ್ಲ. ಅಷ್ಟೇ ಅಲ್ಲ ನಿಮಗೆ ಯಾವಾಗಲೂ ಕೇವಲ ಒಂದೇ ಮುಖವನ್ನು ತೋರಿಸುವ ಪ್ರಯತ್ನ ಮಾಡುತ್ತಲ್ಲ ಅದು ನನಗೆ ಅಚ್ಚರಿ ಉಂಟು ಮಾಡುತ್ತದೆ. ಅದು ಬೆಟ್ಟದ ಕಡೆಯ ಆಗುವ ಪ್ರಮಾದವಾ ಅಥವಾ ನೋಡುವವರ ಕಣ್ಣಲ್ಲಿ ಕೂತ ಒಂದೇ ಬಣ್ಣವಾ ಗೊತ್ತಾಗುತ್ತಿಲ್ಲ.
    ಸದಾಶಿವ್ ಸೊರಟೂರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: