ಪ್ರಕಾಶ್ ಕಂಬತ್ತಳ್ಳಿ ಎಂಬ ಪ್ರಕಾಶದಲ್ಲಿ ಮಿಂಚಿದೆ..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಸ್ವ್ಯಾನ್ ಮತ್ತು ಅಂಕಿತ ಪ್ರಕಾಶ್ ಅವರ ಬಾಂಧವ್ಯ ಪ್ರಾರಂಭವಾಗಿದ್ದೇ ಸಣ್ಣ ಜಟಾಪಟಿಯಿಂದ..!!.

ಸದಾ ಪುಸ್ತಕಗಳ ಗುಣಮಟ್ಟಕ್ಕೆ ಆದ್ಯತೆ ಕೊಡುವ ‘ಅಂಕಿತ ಪುಸ್ತಕ’ದಿಂದ ಮುದ್ರಣಕ್ಕೆ ಕೊಟ್ಟಿದ್ದ ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ‘ದೀಪ ಸಾಲಿನ ನಡುವೆ’ ಪುಸ್ತಕದ ಮುಖಪುಟ ಮುದ್ರಣ ಸಮಯದಲ್ಲಿ ಬಣ್ಣದ ವ್ಯತ್ಯಾಸವಾಗಿಬಿಟ್ಟಿತು. ಸಮಯ ಪಾಲನೆಗೆ ಹೆಚ್ಚಿನ ಮಹತ್ವ ಕೊಡುವ ಪ್ರಕಾಶ್ ಅವರು, ಕೆಲಸ ಸಮರ್ಪಕವಾಗಿಲ್ಲ ಎನಿಸಿದರೆ ಕೆಂಡಾಮಂಡಲವಾಗಿ ಪ್ರಶ್ನಿಸುತ್ತಾರೆ. ಹಾಗಾಗಿ ಮುಖಪುಟದಲ್ಲಿ ಸ್ವಲ್ಪವಷ್ಟೇ ಬಣ್ಣ ವ್ಯತ್ಯಾಸವಾಗಿದೆ ಎಂದು ಪ್ರಕಾಶ್ ಅವರ ಮನ ಒಲಿಸಲು ಎಷ್ಟೇ ಪ್ರಯತ್ನಿಸಿದರೂ ಅವರು ಒಪ್ಪಲಿಲ್ಲ. ಆ ಪುಸ್ತಕವನ್ನು ಮತ್ತೆ ಹೊಸದಾಗಿ ಮುದ್ರಿಸಿಕೊಡಿ ಎಂದು ತಿರಸ್ಕರಿಸಿಬಿಟ್ಟರು. ಹಾಗೆ ಶುರುವಾದದ್ದು ನಮ್ಮ ಬಾಂಧವ್ಯ…

ಇಂದಿಗೂ ಅಂಕಿತ ಪುಸ್ತಕದ ಮುದ್ರಣ ಕಾರ್ಯ ವಿಳಂಬವಾಗಿಯೋ ಏನಾದರೂ ಸಣ್ಣಪುಟ್ಟ ಎಡವಟ್ಟುಗಳನ್ನು ಮಾಡಿಯೋ ದಿನಕ್ಕೆ ಒಂದು ಬಾರಿಯಾದರೂ ಪ್ರಕಾಶ್ ಕಂಬತ್ತಳ್ಳಿ ಅವರಿಂದ ಫೋನ್ ನಲ್ಲಿ ಬೈಸಿಕೊಳ್ಳಲಿಲ್ಲ ಅಂದ್ರೆ ಆ ದೈನಂದಿನ ಕಾರ್ಯದಲ್ಲಿ ಏನೋ ಕೊರತೆ ಇದೆಯಲ್ಲ ಎನ್ನಿಸಿಬಿಡುತ್ತದೆ.

ಒಮ್ಮೆ ಹೊಸಪೇಟೆಯಲ್ಲಿ ಐ.ಎ.ಎಸ್. ಅಧಿಕಾರಿ ಜಯರಾಜ್ ಅವರ ಪುಸ್ತಕ ಬಿಡುಗಡೆಗೆ ಹೋಗಿಬರಲು ನಾನೇ ಟ್ರೈನ್ ಟಿಕೆಟ್ ಬುಕಿಂಗ್ ಮಾಡಿಸಿದ್ದೆ. ಹೊರಡುವ ದಿನ ಮುಕ್ಕಾಲು ಗಂಟೆ ಮುಂಚೆಯೇ ನಾನು ಮತ್ತು ಪ್ರಕಾಶ್ ಅವರು ಸ್ಟೇಷನ್ ತಲುಪಿದ್ದೆವು. ಸೂಚನೆಗಳ ಬೋರ್ಡ್ ನಲ್ಲಿ ಪ್ಲಾಟ್ ಫಾರ್ಮ್ ನಂಬರ್ ನೋಡಿಕೊಂಡು ಮೆಟ್ಟಲು ಹತ್ತಿ ಪ್ಲಾಟ್ ಫಾರ್ಮ್ ಗೆ ಇಳಿಯುತ್ತಲೇ ಎದುರು ಬಂದ ಹಮಾಲಿಯನ್ನು ‘ಹೊಸಪೇಟೆ ಟ್ರೈನಾ..’ ಎಂದು ವಿಚಾರಿಸಿದಾಗ ಅವನು ಅಲ್ಲೇ ನಿಂತಿದ್ದ ಟ್ರೈನ್ ತೋರಿಸಿ ಅದು ಹೋದಮೇಲೆ ಅದೇ ಟ್ರ್ಯಾಕ್ ಗೆ ಬರುತ್ತದೆ ಎಂದು ಅರ್ಜೆಂಟ್ ನಲ್ಲಿ ಹೇಳಿ ಓಡಿ ಹೋದ.

ತಕ್ಷಣ ಅಲ್ಲೇ ಪಕ್ಕದಲ್ಲಿ ಖಾಲಿ ಇದ್ದ ಬೆಂಚಿನ ಮೇಲೆ ಲಗೇಜುಗಳನ್ನು ಇಟ್ಟುಕೊಂಡು ಕೂತು ಟೀ ಕುಡಿಯುತ್ತಾ ಹರಟುತ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಪ್ರಕಾಶ್ ಅವರು ಮಾತಿನ ನಡುವೆ ‘ನೋಡ್ರಿ ಇನ್ನೊಮ್ಮೆ ಟ್ರೈನ್ ವಿಚಾರಿಸಿ’ ಎಂದಾಗ ನಾನು, ‘ಸುಮ್ಮನೆ ಇರಿ ಸರ್, ಹಮಾಲಿಗಳಿಗೆ ಚೆನ್ನಾಗಿ ಗೊತ್ತಿರುತ್ತೆ, ಈ ಟ್ರೈನ್ ಹೋದ ಮೇಲೇನೆ ನಮ್ಮ ಟ್ರೈನ್ ಬರುವುದು’ ಎಂದು ಸಮಾಧಾನ ಹೇಳಿ ಸುಮ್ಮನೆ ಮಾತನಾಡುತ್ತಾ ಕುಳಿತೆ.

ಸ್ವಲ್ಪ ಸಮಯದ ನಂತರ ನಮ್ಮ ಕಣ್ಣೆದುರು ನಿಂತಿದ್ದ ಟ್ರೈನ್ ನಿಧಾನಕ್ಕೆ ಚಲಿಸತೊಡಗಿತು. ಒಂದೆರಡು ಬೋಗಿ ಮುಂದೆ ಹೋಗುತ್ತಲೇ ಇನ್ನೊಂದು ಬೋಗಿ ಮೇಲೆ ಇದ್ದ ಬೋರ್ಡ್ ಕಣ್ಣಿಗೆ ಬಿತ್ತು. ಅದರ ಮೇಲೆ ನಾವು ಹೋಗಬೇಕಿದ್ದ ರೈಲಿನ ಹೆಸರು ಮತ್ತು ಸಂಖ್ಯೆ ಕಣ್ಣಿಗೆ ಬಿತ್ತು. ಅಂದರೆ ನಾವು ಹತ್ತಬೇಕಿದ್ದ ಟ್ರೈನ್ ಮುಕ್ಕಾಲು ಗಂಟೆ ಮುಂಚೇನೆ ಬಂದು ನಿಂತಿದೆ, ನಾವು ಹಮಾಲಿ ಮಾತು ನಂಬಿಕೊಂಡು ಸುಮ್ನೆ ಕಾಯುತ್ತಾ ಕೂತಿದ್ದೇವೆ ಅಂತ ಗೊತ್ತಾಗಿ ತಕ್ಷಣ ಗಾಬರಿಯಿಂದ ಏಳುವಷ್ಟರಲ್ಲಿ ರೈಲು ವೇಗವಾಗಿ ಮುಂದಕ್ಕೆ ಚಲಿಸಿತು.

ನಮಗೆ ಆ ಸಮಯಕ್ಕೆ ಏನು ಮಾಡುವುದು ಎಂದು ತೋಚದಾಯ್ತು. ಪ್ರಕಾಶ್ ಸರ್ ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ, ಸ್ಟೇಷನ್ ನಲ್ಲಿ ಎಲ್ಲರ ಎದುರಿಗೆ ಬೈಯುವಂತಿಲ್ಲ…!! ಹಲ್ಲು ಕಚ್ಚಿಕೊಂಡು, ಮುಖ ಕೆಂಪಗೆ ಮಾಡಿಕೊಂಡು, ಬಂದೂಕಿನಿಂದ ಒಂದರ ಹಿಂದೆ ಒಂದರಂತೆ ಹೊರಹೊಮ್ಮುವ ಗುಂಡಿನಂತೆ ಕಣ್ಣಿನಿಂದ ಕೆಂಡದುಂಡೆಗಳನ್ನು ಹೊರಹಾಕುತ್ತಲೇ ಇದ್ದರು… ಬೆಳಗ್ಗೆ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಬೇಕಾದ ಪುಸ್ತಕ ಮತ್ತು ಇತರ ವಸ್ತುಗಳು ನಮ್ಮ ಬಳಿಯಲ್ಲೇ ಇವೆ.

ಆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೇರೆ ಆಯುಕ್ತರದ್ದು. ಜಯರಾಜ್ ಮತ್ತು ಅವರ ಸಹಾಯಕರು ಮುಂಚಿತವಾಗಿ ಹೊಸಪೇಟೆ ತಲುಪಿದ್ದಾರೆ. ಅಲ್ಲಿಂದ ಅವರ ಸಹಾಯಕರು ಮೇಲಿಂದ ಮೇಲೆ ಪ್ರಕಾಶ್ ಅವರಿಗೆ ಕರೆ ಮಾಡಿ….. ‘ಹೊರಟ್ರಾ? ಎಷ್ಟೊತ್ತಿಗೆ ಟ್ರೈನ್? ಬುಕ್ಸ್ ಎಷ್ಟು ತರುತ್ತಿದ್ದೀರಾ ? ಬಿಡುಗಡೆಗೆ ಪ್ಯಾಕ್ ಆಗಿದೆಯಾ? ಕಾರ್ಯಕ್ರಮ ಪಟ್ಟಿ, ಅತಿಥಿಗಳಿಗೆ ಹೂಗುಚ್ಛದ ಬದಲು ಕೊಡೋಕೆ ವಿಶೇಷವಾದ ಬುಕ್ಸ್,. ‘ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ನಾವು ಆಗಲೇ ಟ್ರೈನ್ ಮಿಸ್ ಮಾಡಿಕೊಂಡು ಒತ್ತಡದಲ್ಲಿ ಇದ್ದೇವೆ. ‘ಎಷ್ಟೊತ್ತಿಗೆ ರೀಚ್ ಆಗುತ್ತೆ, ಟ್ರೈನ್ ಲೇಟಾಗಿ ಬಂದುಬಿಟ್ಟರೆ ಏನು ಮಾಡುವುದು’ ಎಂದು ಪದೇ ಪದೇ ಪ್ರಕಾಶ್ ಅವರಿಗೆ ಕರೆ ಮಾಡಿದಾಗ ಇನ್ನಷ್ಟು ಒತ್ತಡ ಹೆಚ್ಚಾಗಿ ಮುಂದೇನು ಮಾಡುವುದೆಂಬ ಆತಂಕದಲ್ಲಿ ಚಡಪಡಿಸುತ್ತಿದ್ದರು ಪ್ರಕಾಶ್.

ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಪ್ರಯತ್ನಿಸೋಣ, ಅಲ್ಲಿ ರಷ್ ಇದ್ದರೆ ಒಂದು ಕಾರ್ ನಲ್ಲಿಯೇ ಹೊರಟುಬಿಡುವುದೆಂದು ನಿರ್ಧರಿಸಿ ಹೊರಬಂದೆವು. ಕಷ್ಟಪಟ್ಟು ಅಷ್ಟೂ ಲಗೇಜನ್ನು ಹೊತ್ತುಕೊಂಡು ರೈಲ್ವೆ ಸ್ಟೇಷನ್ ಎದುರಿನ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಗೆ ಬಂದೆವು. ನನ್ನ ಪುಣ್ಯಕ್ಕೆ ಒಂದು ಬಸ್ ನಲ್ಲಿ ಸೀಟ್ ಸಿಕ್ತು. ಬಸ್ ಹತ್ತಿ ಕೂತ ಮೇಲೆ ಪ್ರಕಾಶ್ ಅವರ ಕೋಪ ಕೊಂಚ ತಣಿಯಲು ಆರಂಭಿಸಿ ಮುಖದಲ್ಲಿ ಒಂದು ಕಿರುನಗೆ ಕಾಣಿಸಿತು.

ಅಂದಿನಿಂದ ಯಾವುದೇ ಕಾರ್ಯಕ್ರಮಗಳಿಗೆ ಹೊರಡಬೇಕಾದಾಗಲೆಲ್ಲ “ನಿಮ್ಮನ್ನು ನಂಬಿಕೊಂಡ್ರೆ ಅಷ್ಟೇ” ಎಂದು ಈ ಘಟನೆಯನ್ನು ನೆನಪಿಸುತ್ತಲೇ ಇರುತ್ತಾರೆ. ಒಂದು ವಿಶೇಷವೆಂದರೆ – ಪ್ರಕಾಶ್ ಅವರು ನಾನು ಎದುರಿಗಿದ್ದಾಗ ಬೈದೇ ಇಲ್ಲ, ಬರೀ ಫೋನ್ ನಲ್ಲಿ ಅಷ್ಟೇ ಬಯ್ಯೋದು..! ಅವರಿಗೆ ನನ್ನ ಮೇಲೆ ಎಷ್ಟೇ ಕೋಪ ಇದ್ದರೂ ಎದುರಿಗೆ ಬರುತ್ತಿದ್ದಂತೆ ಎಲ್ಲಾ ಮರೆತು, ಹಾಸ್ಯ ಮಿಶ್ರಿತ ಎಚ್ಚರಿಕೆಯ ಮಾತುಗಳೊಂದಿಗೆ ಬೈದು, ಹಳೆಯ ತಪ್ಪುಗಳನ್ನು ನೆನಪು ಮಾಡಿ ಛೇಡಿಸಿದ ನಂತರ ಒಂದು ಕಾಫಿ ಕುಡಿಸಿ ಕಳಿಸುತ್ತಾರೆ.

ನನಗೆ ಪ್ರಾರಂಭದಲ್ಲಿ ಸ್ವಂತ ಮುದ್ರಣಾಲಯ ಸ್ಥಾಪಿಸುವಂತೆ ಹಲವರು ಪ್ರೋತ್ಸಾಹದಾಯಕ ಮಾತುಗಳನ್ನು ಹಲವು ಬಾರಿ ಹೇಳಿದ್ದರೂ ಸ್ವಂತ ಮುದ್ರಣಾಲಯದ ಕನಸು ನನ್ನ ಮನಸ್ಸಿನಲ್ಲಿ ಮೂಡಿರಲಿಲ್ಲ. ಆದರೆ ಪ್ರಕಾಶ್ ಕಂಬತ್ತಳ್ಳಿ ಅವರು ಒಮ್ಮೆ,” ಕಿಟ್ಟಿ ನೀವೇ ಯಾಕೆ ಒಂದು ಮುದ್ರಣಾಲಯ ಪ್ರಾರಂಭಿಸಬಾರದು..?” ಎಂದು ಅಂದಾಗಲೇ ನನ್ನ ಮನಸ್ಸಿನಲ್ಲಿ ‘ಸ್ವ್ಯಾನ್’ ಕನಸು ಚಿಗುರೊಡೆದಿದ್ದು.

ಪ್ರಕಾಶ ಕಂಬತ್ತಳ್ಳಿ ಮತ್ತು ಪ್ರಭಾ ಅವರು ಮುದ್ರಣ ಕ್ಷೇತ್ರದಲ್ಲಿ ನಾನು ನೆಲೆಯೂರಬೇಕೆಂಬ ಬಯಕೆಯಿಂದ ‘ಅಂಕಿತ ಪುಸ್ತಕ’ದ ಎಲ್ಲಾ ಮುದ್ರಣ ಕಾರ್ಯವನ್ನು ಕೊಟ್ಟಿದ್ದಲ್ಲದೇ ಸ್ವ್ಯಾನ್ ನ ಪ್ರತಿ ಹಂತದ ಕಷ್ಟಗಳಿಗೆ ದೊಡ್ಡಮಟ್ಟದ ಆಸರೆಯಾಗಿ ನಿಂತರು. ಅದು ಎಷ್ಟರಮಟ್ಟಿಗೆ ಎಂದರೆ, ಸಾಹಿತ್ಯ ಕ್ಷೇತ್ರದ ಹಲವರಿಗೆ ಪ್ರಕಾಶ್ ಅವರು ಸ್ವ್ಯಾನ್ ಮುದ್ರಣಾಲಯದ ಪಾಲುದಾರರು ಇರಬೇಕು ಎನ್ನುವಷ್ಟು..!!.

ಒಂದು ಪ್ರಕಾಶನದವರಂತೂ ನನ್ನ ಬಳಿ ಬಂದಾಗಲೆಲ್ಲಾ ಈ ಅನುಮಾನ ಬಗೆಹರಿಸಿಕೊಳ್ಳಲು ಬಗೆ ಬಗೆಯ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಒಮ್ಮೆ ನಾನು ಅಪ್ಪ-ಮಗನ ನಡುವೆ ಪಾಲುದಾರಿಕೆ ಎಲ್ಲಿಂದ ಬರುತ್ತೆ ಹೇಳಿ ಎಂದೆ…! ಅವತ್ತಿನಿಂದ ಅವರು ಮತ್ತೆ ಆ ವಿಷಯನ್ನೇ ಎತ್ತಲಿಲ್ಲ. ಸ್ವಂತ ಮಗನಂತೆ ನಮಗೆ ಆಧಾರಸ್ತಂಭವಾಗಿ ನಿಲ್ಲುವುದರೊಂದಿಗೆ, ನಾವು ಮುದ್ರಣ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಹೊರಟಾಗ ಮೊದಲು ಅಂಕಿತ ಪುಸ್ತಕದ ಮೇಲೆ ಪ್ರಯೋಗಿಸಲು ದುಬಾರಿ ವೆಚ್ಚವನ್ನು ಭರಿಸಿ ಪ್ರೋತ್ಸಾಹಿಸಿದರು.

ಪುಸ್ತಕ ಮುದ್ರಣ ಗುಣಮಟ್ಟದಲ್ಲಿ ಎಂದಿಗೂ ಯಾವುದೇ ರಾಜಿ ಮಾಡಿಕೊಳ್ಳದೆ ಹೊಸ ಹೊಸ ಬದಲಾವಣೆಗಳನ್ನು ಮಾಡಲು ಅದಕ್ಕೆ ತಗಲುವ ದುಬಾರಿ ವೆಚ್ಚದ ಬಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಪುಸ್ತಕ ಮುದ್ರಣವಾಗಿ ಅವರ ಕೈ ಸೇರಿದ ಮೇಲೆ ಗುಣಮಟ್ಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿ ಪ್ರೋತ್ಸಾಹಿಸುವುದನ್ನು ಯಾವತ್ತೂ ಮರೆಯುವುದಿಲ್ಲ. ನಾವು ನಿರಂತರವಾಗಿ ಮುದ್ರಿಸುವ ಅಂಕಿತ ಪುಸ್ತಕಗಳಿಂದಲೇ ಸ್ವ್ಯಾನ್ ಹೆಸರು ರಾಜ್ಯಾದ್ಯಂತ ಬಹುಬೇಗ ಸಾಹಿತ್ಯಾಸಕ್ತರ ಮನ ಸೆಳೆದು ಜನಪ್ರಿಯವಾಗಿದ್ದು.

ಬರೀ ವ್ಯಾವಹಾರಿಕವಾಗಿ ಅಷ್ಟೇ ಅಲ್ಲದೆ ಪ್ರತಿ ಹೆಜ್ಜೆಯಲ್ಲೂ ತಂದೆಯು ಮಕ್ಕಳ ಪ್ರಗತಿಯನ್ನೇ ಬಯಸಿ ಅವರ ಮೇಲೆ ಗಮನವಿಡುವ ಹಾಗೆ ಸದಾ ಒಂದಲ್ಲ ಒಂದು ಸಲಹೆ-ಸೂಚನೆಗಳನ್ನು ಕೊಡುತ್ತಲೇ ಇರುತ್ತಾರೆ. ಪ್ರಕಾಶ್ ಅವರ ಹತ್ತಿರ ಬೈಸಿಕೊಳ್ಳುವಾಗಲೆಲ್ಲಾ ನನ್ನ ಪರ ನಿಲ್ಲುವ ಪ್ರಭಾ ಅವರ ಮಾತೃ ವಾತ್ಸಲ್ಯದಲ್ಲಿ ನಾನು ಮೀಯುತ್ತಲೇ ಇರುತ್ತೇನೆ. ಪ್ರಕಾಶ್ ಅವರೊಂದಿಗೆ ಬೆಂಗಳೂರಿನಿಂದ ಹೊರಗಿನ ಕಾರ್ಯಕ್ರಮಗಳ ನೆಪದಲ್ಲಿ ವರ್ಷಕ್ಕೆ ಒಂದೆರಡು ಪ್ರವಾಸ ಮಾಡಿಸುತ್ತಾರೆ. ಅಷ್ಟೇ ಅಲ್ಲದೆ ವರ್ಷವೂ ತಂದೆಯು ಸಣ್ಣ ಮಕ್ಕಳನ್ನು ಅಂಗಡಿಗೆ ಕರೆದೊಯ್ದು ಬಟ್ಟೆ ಇತರೆ ಅಗತ್ಯ ವಸ್ತುಗಳನ್ನು ಕೊಡಿಸುವ ಹಾಗೆ ಪ್ರೀತಿಯಿಂದ ಏನಾದರೊಂದು ಕೊಡಿಸುತ್ತಲೇ ಇರುತ್ತಾರೆ.

ಬಟ್ಟೆ ಅಂಗಡಿಯಲ್ಲಿ ನಾನು ಆಯ್ಕೆಮಾಡಿದ ಬಟ್ಟೆಯನ್ನು ನೋಡಿ “ಏನ್ರೀ ಅದು ಕಾಲೇಜು ಹುಡುಗರ ರೀತಿಯಲ್ಲಿ ಬಣ್ಣಗಳನ್ನು ಆಯ್ಕೆಮಾಡುತ್ತೀರಾ” ಎಂದು ಬೈದು, ಅವರೇ ಹೆಚ್ಚಿನ ಬೆಲೆಯ ಬಟ್ಟೆಗಳನ್ನು ಆಯ್ಕೆಮಾಡಿ ಕೊನೆಯಲ್ಲಿ ಅವರ ಆಯ್ಕೆ ಜೊತೆ ನನ್ನ ಆಯ್ಕೆಯ ಬಟ್ಟೆಗಳನ್ನು ಪ್ಯಾಕ್ ಮಾಡಿಸಿ ಅಚ್ಚರಿ ಮೂಡಿಸುತ್ತಾರೆ.

ಪುಸ್ತಕಲೋಕ ಬಿಟ್ಟು ಬೇರೆ ಲೋಕವಿಲ್ಲವೆಂಬಂತೆ ಪುಸ್ತಕ ಮಳಿಗೆಯಲ್ಲಿ ಸದಾ ಸಾಹಿತ್ಯ ಧ್ಯಾನದಲ್ಲಿದ್ದು, ತಲೆಮಾರುಗಳಿಗೆಂದು ಉಳಿಸುವ ಬದಲು ಸಂಪಾದಿಸಿದ್ದರಲ್ಲಿ ಸಂತೋಷವಾಗಿ ನೆಮ್ಮದಿಯಾಗಿ ಇರಬೇಕು, ಜೊತೆಗೆ ಬೇರೆಯವರನ್ನೂ ಸಂತೋಷವಾಗಿರಿಸಬೇಕು ಎನ್ನುವ ತತ್ವವನ್ನು ಅಳವಡಿಸಿಕೊಂಡಿದ್ದಾರೋ ಎನ್ನುವಂಥ, ಆಡಂಬರವಿಲ್ಲದ ಸರಳ ಸುಂದರ ಬದುಕಿನ ಒಂದು ಅಪರೂಪದ ಮಾದರಿಯಾಗಿದ್ದಾರೆ ಪ್ರಭಾ ಮತ್ತು ಪ್ರಕಾಶ್ ಕಂಬತ್ತಳ್ಳಿ ದಂಪತಿಗಳು.

‍ಲೇಖಕರು avadhi

August 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: