ರಹಮತ್ ಸಾರ್.. ಕ್ಷಮಿಸಿ ಬಿಡಿ….!!!

ಲೋಕೇಶ್ ಮೊಸಳೆ

ಲೋಕೇಶ್ ಮೊಸಳೆ ಅವರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಘೋಷಣೆಯಾದ ಹಿನ್ನೆಲೆಯಲ್ಲಿ ‘ಫಟಾಫಟ್’ ಸಂದರ್ಶನ ನಡೆಸಿದ್ದೆವು.

ಆಗ ತೀವ್ರ ಸಂಕೋಚದಿಂದ ಮಾತನಾಡಿದ ಲೋಕೇಶ್ ತಾವು ಹೇಗೆ ರಹಮತ್ ತರೀಕೆರೆ ಅವರ ಮಾರ್ಗದರ್ಶನ ಹಾಗೂ ‘ಲಂಕೇಶ್ ಪತ್ರಿಕೆ’ ಕುರಿತು ಮಾಡಬಹುದಾಗಿದ್ದ ಸಂಶೋಧನೆಯನ್ನು ತಪ್ಪಿಸಿಕೊಂಡೆ ಎಂದು ತಿಳಿಸಿದ್ದರು.

ಈಗ ಆ ಕಥೆಯನ್ನು ನಿಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.

ಅದು ತೊಂಬತ್ತರ ದಶಕ. ‘ಲಂಕೇಶ್ ಪತ್ರಿಕೆ’ಗೆ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ತನಿಖಾ ವರದಿ –ರಾಜಕೀಯ ವಿಶ್ಲೇಷಣೆಗಾಗಿ ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಓಡಾಡುತ್ತಲೇ ಮೈಸೂರಿನ ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದಲ್ಲಿ ಎಂ.ಎ. ಕಲಿಯುತ್ತಿದ್ದೆ. ನಂತರ ಅಲ್ಲೇ ಉಪನ್ಯಾಸಕನಾಗಿ ಕೆಲಸ ಮಾಡುತ್ತ ಮಾನಸಿಕ ಕೊಳಕರನ್ನು ನೋಡಿದ್ದೆ.

ಆ ಹೊತ್ತಿಗೆ ಚಂದ್ರಶೇಖರ ಕಂಬಾರರು ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುತ್ತಿದ್ದರು. ಸಂಶೋಧನ ಪ್ರಕಟಣೆ, ನಿರ್ಲಕ್ಷ ಸಂಸ್ಕೃತಿಗಳ ಅಧ್ಯಯನ… ಹೀಗೆ ಭಿನ್ನ ಆಲೋಚನಾ ಕ್ರಮದಲ್ಲಿ ರೂಪುಗೊಳ್ಳುತ್ತಿದ್ದ ಕನ್ನಡ ವಿಶ್ವವಿದ್ಯಾಲಯಕ್ಕೆ ಓದು ಬರಹ ಗೊತ್ತಿಲ್ಲದ ಕಂಸಾಳೆ ಮಹದೇವಯ್ಯನಂಥವರು ವಿಸಿಟಿಂಗ್ ಪ್ರೊಫೆಸರ್ ಅನ್ನುವಂಥ ಸುದ್ದಿಗಳೇ ಪ್ರಿಯವಾಗಿ ಇದೊಂದು ವಿಶಿಷ್ಠ ವಿಶ್ವವಿದ್ಯಾಲಯವಾಗುತ್ತಿದೆ ಅನ್ನಲು ಸಾಕಿತ್ತು. ಇಂಥ ಕಡೆ ನಾನೂ ಕೂಡ ಡಾಕ್ಟರೇಟ್ ಮಾಡಬೇಕೆಂಬ ಆಸೆ ಚಿಗುರೊಡೆದಿತ್ತು.

ಪತ್ರಿಕೋದ್ಯಮ ವಿಭಾಗದ ಅಧ್ಯಾಪನದಿಂದ ದೂರವಾಗುತ್ತಿದ್ದೆ. ಲಂಕೇಶ್ ಕೂಡ ಇಲ್ಲವಾಗಿದ್ದರು. ವರದಿಗಾರಿಕೆಯಿಂದ ದೂರವಾಗುತ್ತಿದ್ದೆ. ಅಷ್ಟರಲ್ಲಿ ʼಜನಾಂದೋಲನʼ ವಾರಪತ್ರಿಕೆಯನ್ನು ನಾನೇ ಸಂಪಾದಿಸುತ್ತಿದ್ದೆ. ಪುಸ್ತಕ ಪ್ರಕಾಶನ ಕೂಡ ಪ್ರಾರಂಭಿಸಿದ್ದೆ. ಅಪ್ಪನ ನಿವೃತ್ತಿ ಹಣ ಕೂಡ ಕರಗುತ್ತಿತ್ತು. ಜೇಬು ತುಂಬುವಂಥ ನಿರ್ಧಿಷ್ಠ ಆದಾಯದ ವೃತ್ತಿ ಕೂಡ ಇರಲಿಲ್ಲ.

ಅಂಥ ದಿನಗಳಲ್ಲಿ ವನ್ಯಜೀವಿಗಳ ಫೋಟೋ ತೆಗೆಯುವ ಲೆನ್ಸ್ (ಮಸೂರ)ನ್ನು ಸಾಲಪಡೆದು ಕೊಂಡುಕೊಂಡಿದ್ದೆ! ಹೊಸ ಲೆನ್ಸ್ ಸಿಕ್ಕಿದ್ದೇ ತಡ ಮತ್ತೆ ಹೊಸ ಹುರುಪಿನಲ್ಲಿ ಕಾಡು – ಮೇಡು, ಕೆರೆ ಕಟ್ಟೆಗಳನ್ನು ಸುತ್ತುತ್ತ ಪಕ್ಷಿ ವೀಕ್ಷಣೆಯೊಂದಿಗೆ ಛಾಯಾಚಿತ್ರಗಳನ್ನು ಮಾಡುತ್ತ ಆ ಜೀವ ಸಂಕುಲಗಳ ಭಾಗವಾಗಿ ಮುಳುಗಿ ಹೋಗಿದ್ದೆ.

ನಿರ್ಧಿಷ್ಠ ಗೊತ್ತು ಗುರಿಗಳು ಇಲ್ಲದಂತೆ ಪಕ್ಷಿ ಸಂಕುಲಗಳ ಬದುಕು ಮೊದಲ ನೋಟಕ್ಕೆ ಕಂಡರೂ ಅವುಗಳ ಭಾಷೆ-ಬಣ್ಣ; ಕಾಲಕಾಲಕ್ಕೆ ಬದಲಾಗುವ ವಿಸ್ಮಯಗಳನ್ನು ಕಾಣುತ್ತ, ಅರಿಯುತ್ತ ನಿರ್ಧಿಷ್ಠವಾದ ಪ್ರೇಮ್ ನೊಳಗೆ ಬದುಕಲಾರದ; ಬದುಕಿದರೂ ನನಗೆ ಅರಿಯಲಾಗದೆ ಚಿತ್ರಿಸುತ್ತ ಹೋದೆ.

ಆ ದಿನಗಳಲ್ಲಿ ನನ್ನನ್ನು ವನ್ಯಜೀವಿಗಳ ಬದುಕು ಆಕ್ರಮಿಸಿಕೊಂಡಿತ್ತು. ನಾನು ನನ್ನ ಬದುಕನ್ನೇ ಮರೆತುಹೋಗಿದ್ದೆ. ಅಂತಹ ದಿನಗಳಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ ರಹಮತ್ ತರೀಕೆರೆ ಅವರು ಮೇಲಿಂದ ಮೇಲೆ ನನ್ನನ್ನು ಸಂಪರ್ಕಿಸಿದ್ದರು. ಯಾಕೆಂದರೆ ಅವರು ನನ್ನ ಸಂಶೋಧನೆಯ ಮಾರ್ಗದರ್ಶಕರಾಗಿದ್ದರು. ನಾನು ಪಿ ಎಚ್ ಡಿ ಮಾಡಬೇಕೆಂದು ಬರೀ ಕನಸು ಕಾಣುತ್ತಾ ಕೂತಿರಲಿಲ್ಲ. ಬದಲಿಗೆ ಹಂಪಿ ವಿವಿಯಲ್ಲಿ ನೋಂದಣಿ ಮಾಡಿಸಿದ್ದೆ. ರಹಮತ್ ತರೀಕೆರೆ ಅವರೇ ಮಾರ್ಗದರ್ಶಕರಾಗಿ ಸಿಕ್ಕಿದ್ದು ನನ್ನ ಅದೃಷ್ಟವಾಗಿತ್ತು.

ಆದರೆ ಆ ನಂತರ ನಾನು ಪಕ್ಷಿ ಲೋಕದಲ್ಲಿ ಕಳೆದುಹೋದೆ. ನನ್ನ ಸಂಶೋಧನಾ ಮಾರ್ಗದರ್ಶಕರಾಗಿದ್ದ ಡಾ. ರಹಮತ್ ತರೀಕೆರೆ ಅವರು ಹಲವು ಸಾರಿ ಸಂಶೋಧನಾ ಪ್ರಗತಿಗಳ ಬಗೆಗೆ ಪ್ರತಿಕ್ರಿಯಿಸಿದ್ದರು. ವಿಶ್ವವಿದ್ಯಾಲಯದ ಅಧಿಕಾರಿಗಳೂ ಸೂಚನೆ ನೀಡಿದ ಟಪಾಲುಗಳೂ ಬಂದಿದ್ದವು.

ನನ್ನೊಳಗಿದ್ದ ಪಕ್ಷಿ ಸಂಕುಲಗಳ ರಂಜಿತ ಬಣ್ಣಗಳ – ದ್ವನಿಯ ನಿನಾದದಿಂದಾಗಿ ನಾನು ಪಕ್ಷಿಲೋಕದೊಳಗಿನ ನನ್ನ ಸಂಶೋಧನಗೇ ೆ ಹೆಚ್ಚು ಒತ್ತುಕೊಟ್ಟುಬಿಟ್ಟೆ. ಕನ್ನಡ ವಿಶ್ವವಿದ್ಯಾಲಯದ “ಲಂಕೇಶ್ ಪತ್ರಿಕೆ ಮೂಲಕ ಕರ್ನಾಟಕ ಸಾಂಸ್ಕೃತಿಕ ರಾಜಕಾರಣದ ಹೊಳಹು’ ಸಂಶೋಧನೆ ಮುಂದುವರಿಯಲೇ ಇಲ್ಲ. ಕನ್ನಡ ನಾಡಿನ ಸಾಕ್ಷಿಪ್ರಜ್ಞೆಗೆ ಸಾಕ್ಷಿಯಾಗಿರುವ ಬರಹಗಾರ ಡಾ. ರಹಮತ್ ಅವರ ಮಾರ್ಗದರ್ಶನದಿಂದ ಮಾತ್ರವಲ್ಲದೆ; ಅವರ ಪ್ರೀತಿ – ವಿಶ್ವಾಸಗಳನ್ನು ಆ ದಿನಗಳಲ್ಲಿ ಕಳೆದು ಕೊಳ್ಳಬೇಕಾಯಿತು.

ಡಾ. ರಹಮತ್ ಅವರ ವಿದ್ವತ್ತು. ಅವರು ನನಗೆ ನೀಡುತ್ತಿದ್ದ ಬೌದ್ಧಿಕ ಜ್ಞಾನ ನನಗೆ ಸಿಗಬಹುದಾಗಿದ್ದ ಕನ್ನಡ ವಿ.ವಿ.ಯ ಡಾಕ್ಟರೇಟ್ ಪದವಿ ಇದಕ್ಕಿಂತಲೂ ಮುಖ್ಯವಾದ ರಹಮತ್ ಅವರ ಪ್ರೀತಿಯನ್ನು ಕಿತ್ತುಕೊಂಡು ಹಾರಿಹೋದ ಆ…. ಪಕ್ಷಿಗಳು ಇಂದು ನನ್ನೊಂದಿಗೆ ಕೇವಲ ನೆನಪುಗಳಾಗಿವೆ, ಚಿತ್ರಗಳಾಗಿವೆ. ಆದರೆ,!!!

ಅದೇ ಚಿತ್ರಗಳು ರಹಮತ್ ಅವರ ಮನದೊಳಗೆ ಗೂಡುಕಟ್ಟಿ “ಹಿತ್ತಿಲ ಚಿತ್ರಗಳಾಗಿ” ಮಾತನಾಡಿತ್ತಿವೆ. ನಾಡಿನ ಜನರೊಂದಿಗೆ ಮಾತನಾಡುತ್ತಲೇ….? ಇರುತ್ತವೆ.

ರಹಮತ್ ಸಾರ್ ಕ್ಷಮಿಸಿ ಬಿಡಿ.
ನೀವು ನನಗಿತ್ತ ಪ್ರೀತಿಯನ್ನು ಆ ಪಕ್ಷಿಗಳು
ಕಿತ್ತುಕೊಂಡಿದ್ದಕ್ಕೆ, ನಂತರ ನಿಮ್ಮೆದುರು
ತಲೆತಪ್ಪಿಸಿಕೊಂಡಿದ್ದಕ್ಕೆ,
ಈಗ ಹೀಗೆ ನಾನಾಗಿರುವುದಕ್ಕೆ….

‍ಲೇಖಕರು Avadhi

August 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vasudeva Sharma

    ಆತ್ಮೀಯವಾಗಿದೆ ಮೊಸಳೆ. ನೀನು ಹೀಗೆ ನೇರಾನೇರ ಹೇಳಿರುವುದು ಒಳ್ಳೆಯದೆ. ಆ ಡಾಕ್ಟರೇಟ್ ಬಿಡು, ನಮಗೆ ನೀನಿತ್ತಿರುವ ಸೊಗಸಾದ ವನ್ಯಜೀವಿಗಳ ಛಾಯಾಚಿತ್ರಗಳು ಹಲವಾರು ಪದವಿಗಳಿಗಿಂತಲೂ ಮಿಗಿಲಾಗಿವೆ.

    ಪ್ರತಿಕ್ರಿಯೆ
    • ಲೋಕೇಶ್ ಮೊಸಳೆ

      ಮಹಾರಾಜ ಕಾಲೇಜಿನಲ್ಲಿ ನೀವು ನಡೆದು ಹೋದ ದಾರಿಯಲ್ಲಿ ನಡೆದೆವು ,ನಾಟಕ ,ಹಾಡು ದಿಬೆಟ್,ಹೋರಾಟ, ಬರವಣಿಗೆ, ಛಾಯಾಗ್ರಹಣ, ಹೀಗೆ ನಾವೆಲ್ಲ ಎಲ್ಲೆಲ್ಲೋ ಚೆದುರಿದೆವು. “ಅವಧಿ”ಹಾಗೂ ನೆಬೆಯ ವಾಟ್ಟ್ಸಪ್ಪ್ ಗ್ರೂಪ್ ಮತ್ತೆ ಮತ್ತೆ ನಮ್ಮ ಕ್ರಿಯಾಶೀಲತೆ ಗಳೇ ಹತ್ತಿರವಾಗಿಸುತ್ತಿವೆ. ಒಂಥರ ಸಂತೋಷ. ನಿಮ್ಮ ಪ್ರತಿಕ್ರಿಯೆಗೆ ಧನ್ಯ.

      ಪ್ರತಿಕ್ರಿಯೆ
  2. Ranganath KR

    Mandaalada maathu Sir…
    E mathugalu koodi itta pakshigalanthe Haari aaakasha muttide…
    Manasu Haguraagide

    ಪ್ರತಿಕ್ರಿಯೆ
  3. Vasundhara KM

    ನಿಜ, ಒಂದು ದೃಷ್ಟಿಯಿಂದ ನೋಡಿದರೆ ನಿಮ್ಮ ವೇದನೆ ಅರ್ಥವಾಗುತ್ತದೆ. ರಹಮತ್ ಸರ್ ಅವರ ವ್ಯಕ್ತಿತ್ವದ ಸಾಮಿಪ್ಯವೇ ಒಂದು ಪಿಎಚ್ಡಿ ಮಾಡುವಷ್ಟು ಅಮೋಘ ಅನುಭವ ನೀಡುವಂತಹದ್ದು. ಆದರೆ ನೀವೂ ಸಹ ನಿಮ್ಮ ಮನದ ಮಾತು ತೋರಿದ ದಾರಿಯಲ್ಲಿ ನಡೆದು ನಾಡಿಗೆ ವಿಶೇಷತರವಾದ ಸಂಶೋಧನಾ ಪ್ರಬಂಧಗಳನ್ನು ಸೆರೆಹಿಡಿದು ಮಂಡಿಸಿರುವಿರಿ. ನಿಮ್ಮ ಬಗ್ಗೆಯೂ ಹೆಮ್ಮೆ ಎನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: