ದಿಲ್ಲಿ ಎಂಬ ಮಹಾನಗರಿಯಲ್ಲೊಂದು ಗೂಡು ಹುಡುಕುತ್ತಾ..

”ನೀವು ಬ್ಯಾಚುಲರ್ರಾ… ಫ್ಯಾಮಿಲಿ ಇಲ್ವಾ… ಹಾಗಿದ್ರೆ ಮನೆ ಸಿಗಲ್ಲ ಬಿಡಿ,” ನನ್ನ ಪಕ್ಕದಲ್ಲಿ ನಿಂತಿದ್ದ ಮಧ್ಯವಯಸ್ಕನೊಬ್ಬ ಹಾಯಾಗಿ ಹೇಳಿದ್ದ. 

”ಅಯ್ಯೋ ಅಷ್ಟೇನಾ… ಅದಕ್ಕೇನಂತೆ… ಫ್ಯಾಮಿಲಿ ಮಾಡಿದ್ರಾಯ್ತಪ್ಪಾ…” ಅಂದೆ ನಾನು.

ನನ್ನ ಈ ಸಿನಿಕತನದ ಮಾತನ್ನು ಕೇಳುತ್ತಾ ಆ ಮಧ್ಯವಯಸ್ಕನನ್ನೂ ಸೇರಿದಂತೆ ಸುತ್ತಮುತ್ತ ಇದ್ದ ನಾಲ್ಕೈದು ಜನ ಗಂಡಸರು ಗೊಳ್ಳನೆ ನಕ್ಕರು. ನಾನೂ ಸೌಜನ್ಯಕ್ಕೆಂಬಂತೆ ಪಕಪಕ ನಕ್ಕೆ. ಮುಂದಿನ ನಡೆಯಾಗಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮುಂದಕ್ಕೆ ಹೆಜ್ಜೆ ಹಾಕಿದ್ದೆ.

ಮಾಡಲೂ ಬೇರೇನೂ ಕೆಲಸವಿಲ್ಲದೆ ಸುಮ್ಮನೆ ಕೂತು ನೊಣ ಹೊಡೆಯುತ್ತಿದ್ದ ಈ ಮಂದಿಯ ಜೊತೆ ಒಂದಷ್ಟು ತಮಾಷೆಯ ಮಾತುಗಳು ವಿನಿಮಯವಾದವು ಎಂಬುದನ್ನು ಬಿಟ್ಟು ಬೇರೇನೂ ಅಲ್ಲಿ ಬರಖತ್ತಾಗಲಿಲ್ಲ.

ಅದು ಬೆಂಗಳೂರಾಗಲಿ, ದೆಹಲಿಯಾಗಲಿ… ಅವಿವಾಹಿತರ ಮನೆ ಹುಡುಕುವ ಗೋಳು ಎಲ್ಲಾ ಕಡೆಯೂ ಬಹುತೇಕ ಒಂದೇ ಆಗಿರುತ್ತದೆಂದು ಕೇಳಿದ್ದೇನೆ.

ಶಿಖಾ ಮಕನ್ ನಿರ್ದೇಶನದ ‘ಬ್ಯಾಚುಲರ್ ಗರ್ಲ್ಸ್’ ಸಾಕ್ಷ್ಯಚಿತ್ರದಲ್ಲಿ ಮುಂಬೈ ಮಹಾನಗರಿಯಲ್ಲಿ ಅವಿವಾಹಿತ ಹೆಣ್ಣುಮಕ್ಕಳು ಸೂರಿಗಾಗಿ ಮಾಡುವ ಒದ್ದಾಟಗಳ ಮನಮುಟ್ಟುವ ಚಿತ್ರಣವಿದೆ.

ಹತ್ತಾರು ಸಾಮಾನ್ಯ ಹೆಣ್ಣುಮಕ್ಕಳು, ಸಿಂಗಲ್ ಯುವತಿಯರು ಇಲ್ಲಿ ತಮ್ಮ ಈ ಅನುಭವಗಳನ್ನು ಬಿಚ್ಚಿಟ್ಟಿರುವುದಲ್ಲದೆ, ಸ್ವತಃ ಬಾಲಿವುಡ್ ನಟಿ ಕಾಲ್ಕಿ ಕೋಯ್ಚಿನ್ ಮನೆಯ ವಿಚಾರದಲ್ಲಿ ಸ್ವತಃ ತಮಗಾದ ವಿಚಿತ್ರ ಅನುಭವಗಳನ್ನು ಚಿತ್ರಕ್ಕಾಗಿ ಹಂಚಿಕೊಂಡಿದ್ದಾರೆ.

‘ಡಿಯರ್ ಜಿಂದಗಿ’ ಚಿತ್ರದಲ್ಲೂ ಈ ಬಗೆಗಿನ ಸೂಕ್ಷ್ಮ ಉಲ್ಲೇಖವಿದೆ. ಹೀಗೆ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಮಹಾನಗರಿಗಳ ಅಗೋಚರ ಪದರಗಳಲ್ಲಿ ಇದೂ ಒಂದು.

ನಾನು ಗುರುಗ್ರಾಮಕ್ಕೆ ಬಂದಿದ್ದು ಅದು ಗುರ್ಗಾಂವ್ ಆಗಿದ್ದಾಗ. ಸ್ಥಳೀಯರ ಭಾರವೆನಿಸುವ ಹರಿಯಾಣವೀ ಭಾಷೆಯ ಉಚ್ಚಾರಣೆಯಲ್ಲಿ ಅದು ಗುಡ್ಗಾಂವಾ. ಬಂದ ಹೊಸತರಲ್ಲಿ ಜೊತೆಯಲ್ಲೇ ಕಲಿತ ಗೆಳೆಯನೊಬ್ಬ ನನ್ನನ್ನು ತನ್ನ ವಾಸ್ತವ್ಯಕ್ಕೆ ಕರೆದುಕೊಂಡು ಬಂದಿದ್ದರ ಪರಿಣಾಮವಾಗಿ ನನಗೆ ಕೊಂಚ ನಿರಾಳವೆನಿಸಿತ್ತು.

ಹಿಂದಿಯಲ್ಲಿ ಒಳ್ಳೆಯ ಹಿಡಿತವಿದ್ದರೂ ಪ್ರಯಾಣವೆಂದರೆ ಒಂದಿಷ್ಟೂ ಅನುಭವವಿಲ್ಲದ ದಿನಗಳಾಗಿದ್ದವು ಅವು. ಅಕ್ವೇರಿಯಮ್ಮಿನಲ್ಲಿದ್ದ ಮೀನನ್ನು ಒಮ್ಮಿಂದೊಮ್ಮೆಲೇ ನೇರವಾಗಿ ಸಮುದ್ರಕ್ಕೆ ಎಸೆದ ಅನುಭವ. 

ಸೆಕ್ಟರ್ ಹನ್ನೆರಡರಲ್ಲಿದ್ದ ಈ ಮೊದಲ ಮನೆಯ ಮಾಲೀಕ ಕುಟುಂಬಸ್ಥ. ಆದರೆ ಕೊಂಚ ಸಿಡುಕು ಮನುಷ್ಯ. ಆತನ ಸಿಡುಕುತನದಿಂದಾಗಿ ನನ್ನ ಜೊತೆಗಿದ್ದ ಗೆಳೆಯನ ಮತ್ತು ಈತನ ಮಧ್ಯೆ ಯಾವಾಗಲೂ ಕಿತ್ತಾಟಗಳಾಗುವುದು ಸಾಮಾನ್ಯವಾಗಿತ್ತು. ಇಂಥಾ ಸಂದರ್ಭಗಳಲ್ಲಿ ಸಂಧಾನದ ಜವಾಬ್ದಾರಿಗಳು ಬರುತ್ತಿದ್ದಿದ್ದು ನನ್ನ ಮೇಲೆ.

ನನ್ನ ರೂಂ-ಮೇಟ್ ಆಗಿದ್ದ ಅರುಣಾಚಲ ಮೂಲದ ಗೆಳೆಯ ನೋಡಲು ಕುಳ್ಳಗಿದ್ದ. ನಾನೋ ಅಡಿಕೆ ಮರದಂತೆ ಉದ್ದಕ್ಕಿದ್ದು ನರಪೇತಲ ನಾರಾಯಣನಾಗಿದ್ದೆ. ನಮ್ಮ ಬೆನ್ನ ಹಿಂದೆ ಈ ಮನೆಯವರು ನಮ್ಮನ್ನು ‘ಛೋಟೇ ಮಿಯಾಂ, ಬಡೇ ಮಿಯಾಂ’ ಎಂದು ಕಿಚಾಯಿಸುತ್ತಿದ್ದರು.

ಛೋಟೇ ಮಿಯಾಂ ಜಗಳಗಂಟನೆಂದೂ, ಬಡೇ ಮಿಯಾಂ ಬಹಳ ತಾಳ್ಮೆಯ ಮನುಷ್ಯನೆಂದೂ ಅವರದ್ದೇ ಒಂದು ಮಾಪನಗಳಾಗಿ, ಅಗತ್ಯಕ್ಕೆ ತಕ್ಕಂತೆ ಬೇಕಿದ್ದ ಬಾಡಿಗೆದಾರನೊಂದಿಗೆ ಮಾತನಾಡುವ ತಂತ್ರಗಾರಿಕೆ ಈ ಮನೆಮಾಲೀಕರ ಕುಟುಂಬದ್ದಾಗಿತ್ತು.

ಒಟ್ಟಿನಲ್ಲಿ ಛೋಟೇ ಮಿಯಾನೊಂದಿಗೆ ನಡೆಯುತ್ತಿದ್ದ ಚರ್ಚೆಗಳು ಯಾವಾಗಲೂ ವಾಗ್ವಾದಗಳಾಗಿ ಕೊನೆಯಾಗುತ್ತಿದ್ದರಿಂದ ಬಡೇ ಮಿಯಾಂನಿಗೆ ಕೊಂಚ ಹೆಚ್ಚೇ ಜವಾಬ್ದಾರಿಯಿತ್ತು ಎಂದರೆ ಅಚ್ಚರಿಯೇನಿಲ್ಲ. ಮುಂದೆ ಕಾರಣಾಂತರಗಳಿಂದ ಈ ಸೂರು ಹೆಚ್ಚು ಕಾಲವೇನೂ ನಮಗೆ ಜೊತೆಯಾಗಲಿಲ್ಲ. ಬರಖತ್ತಾಗಲಿಲ್ಲವೆಂದು ಮುನ್ನಡೆದೆವು.

”ಒಬ್ರು ಹೋದ್ರೆ ನಾಲ್ವರು ಬಂದು ಕ್ಯೂನಲ್ಲಿ ನಿಲ್ಲುತ್ತಾರಯ್ಯಾ… ಹೋಗ್ತಾ ಇರಿ,” ಎಂಬಂತೆ ನೀರಸವಾಗಿ ಪ್ರತಿಕ್ರಿಯಿಸಿಬಿಟ್ಟ ಮಾಲೀಕ. ಆ ಕುಟುಂಬದಲ್ಲಿ ಬಾಯ್ತುಂಬಾ ಮಾತಾಡುತ್ತಿದ್ದಿದ್ದೆಂದರೆ ಮನೆಯಾಕೆ ಮತ್ತು ಕುಟುಂಬದ ಸದಸ್ಯರಲ್ಲೊಬ್ಬರಾಗಿದ್ದ ಓರ್ವ ಅಜ್ಜಿ ಮಾತ್ರ. ಒಮ್ಮೆಯಾದರೂ ಆ ಕುಟುಂಬದ ಹಿರಿತಲೆಯು ಮನಬಿಚ್ಚಿ ಮಾತಾಡುವುದನ್ನು ನೋಡಬೇಕೆಂದು ಕಾಯುತ್ತಿದ್ದ ನನ್ನ ಕನಸು ಕನಸಾಗಿಯೇ ಉಳಿಯಿತು.

ಮಹಾನಗರಗಳಲ್ಲಿ ಮನೆಗಳನ್ನು ಬದಲಾಯಿಸುವುದೆಂದರೆ ಉದ್ಯೋಗಗಳನ್ನು ಬದಲಿಸುವಂತೆಯೇ ಸಾಮಾನ್ಯ ಎಂಬುದು ನನಗೆ ಅರಿವಾಗಿದ್ದು ಈ ಹಂತದಲ್ಲೇ. ಬಹಳಷ್ಟು ಮಂದಿ ಪೇಯಿಂಗ್ ಗೆಸ್ಟ್ ಗಳತ್ತ ಕೈತೋರಿಸಿದ್ದರೆ ನಾನು ಆ ಕಡೆ ತಲೆ ಹಾಕಿಯೂ ಮಲಗಿರಲಿಲ್ಲ.

ಕೊಂಚ ದುಬಾರಿಯಾದರೂ, ಹುಡುಕುವುದು ತ್ರಾಸವಾದರೂ, ಚಿಕ್ಕದಾದರೂ ಮನೆಯೇ ಸರಿ ಎಂಬ ಧಾವಂತದಲ್ಲಿ ನಾನಿದ್ದೆ. ಆದರೆ ಮನೆಗಳಿಗೆ ಡಿಮ್ಯಾಂಡೂ ಅಷ್ಟಿದೆಯಲ್ಲಾ! ಮುಂಜಾನೆ ಒಂದೊಳ್ಳೆಯ ಡೀಲ್ ಕುದುರಿತೆಂದರೆ ಅಡ್ವಾನ್ಸ್ ನೀಡಿ ಬುಕ್ಕಿಂಗ್ ಮಾಡಿದರೆ ಸರಿ. ಇಲ್ಲವಾದರೆ ಸಂಜೆಯಾಗುವಷ್ಟರಲ್ಲಿ ಮತ್ಯಾರೋ ಬಂದು ಮನೆಯನ್ನು ಇಷ್ಟಪಟ್ಟು, ಡೀಲ್ ಕುದುರಿಸಿಕೊಂಡು ಹೋಗುತ್ತಿದ್ದರು.

ಹೀಗಾಗಿ ನಮ್ಮಂಥಾ ನಿಧಾನಿಗಳು ಇಲ್ಲಿ ಕೊಂಚ ವೇಗವನ್ನು ಪಡೆದು ಕೊಳ್ಳಲೇಬೇಕಾಗಿರುವುದು ಅನಿವಾರ್ಯವಾಗಿತ್ತು. ಇತ್ತ ಪ್ರಾಪರ್ಟಿ ಡೀಲರುಗಳೂ ಕೂಡ ಮನೆಯ ಮಾಲೀಕರಷ್ಟೇ ಉತ್ಸಾಹದಲ್ಲಿ ಗ್ರಾಹಕರಿಗೆ ಗಾಳ ಹಾಕುತ್ತಿದ್ದ ಪರಿಣಾಮವಾಗಿ ಅಬ್ಬೇಪಾರಿಗಳಂತೆ ಮನೆ ಹುಡುಕುತ್ತಿದ್ದ ನನ್ನಂಥಾ ಅನನುಭವಿಗಳಿಗೆ ಇದು ಮತ್ತಷ್ಟು ಸಂಕೀರ್ಣವಾಗುತ್ತಿದ್ದಿದ್ದು ಸಹಜ.

ಮೊದಲೇ ಹೇಳಿರುವಂತೆ ದೆಹಲಿ-ಗುರುಗ್ರಾಮದಂಥಾ ಮಹಾನಗರಿಗಳಲ್ಲಿ ಮನೆ ಹುಡುಕುವುದಕ್ಕೂ, ಉದ್ಯೋಗ ಹುಡುಕುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಮನೆ ಹುಡುಕುವವನು ಅವಿವಾಹಿತನಾಗಿದ್ದರೆ ಎಲ್ಲಾ ಬಗೆಯ ಪ್ರಶ್ನೆಗಳಿಗೆ ಮಾನಸಿಕವಾಗಿ ತಯಾರಾಗಿಯೇ ‘To Let’ ಫಲಕಗಳನ್ನು ಹಾಕಿದ್ದ ಮನೆಯ ಬಾಗಿಲು ಬಡಿಯಬೇಕು. ಎಲ್ಲಿಯವನು? ಯಾವ ಸಂಸ್ಥೆಯಲ್ಲಿ ಉದ್ಯೋಗ? ಮಾಂಸಾಹಾರಿಯೋ ಸಸ್ಯಾಹಾರಿಯೋ? ಕುಡಿತ-ಪಾರ್ಟಿಗಳಂಥಾ ಅಭ್ಯಾಸಗಳಿವೆಯೇ? ಮನೆಗೆ ಯಾರೆಲ್ಲಾ ಬಂದು ಹೋಗುತ್ತಾರೆ? ಇನ್ನೂ ಏಕೆ ಮದುವೆಯಾಗಿಲ್ಲ? ಎಂಬಿತ್ಯಾದಿ ಪ್ರಶ್ನೆಗಳ ಜೊತೆ ಕೆಲ ನಿಯಮಗಳ ಪಟ್ಟಿಯೂ ಕೂಡ.

”ನೀವು ಒಂಭತ್ತು ಘಂಟೆಯೊಳಗೆ ಮನೆ ಸೇರುತ್ತೀರಾದರೆ ಸರಿ. ಎರಡು ನಿಮಿಷ ತಡವಾದರೂ ನಾನು ಮೈನ್ ಗೇಟ್ ಮುಚ್ಚಿಬಿಡುತ್ತೇನೆ. ಮತ್ತೆ ನೀವು ಮುಂಜಾನೆಯವರೆಗೂ ಒಳಬರೋಹಾಗಿಲ್ಲ,” ಎಂಬ ವಿಚಿತ್ರ ನಿಯಮವೊಂದನ್ನು ಮನೆ ಮಾಲೀಕರೊಬ್ಬರು ರೂಪಿಸಿದ್ದರು.

ಆತ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದ ವೃದ್ಧ. ಸಮಯದ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದ ಮನುಷ್ಯ. ಆದರೆ ಶಹರದ ಜೀವನಶೈಲಿ ಹಾಗಿಲ್ಲವೇ? ”ಈ ಬಗ್ಗೆ ಮೊದಲೇ ಹೇಳಿದ್ದಕ್ಕೆ ಥ್ಯಾಂಕ್ಸ್,” ಎಂದು ಮಾಜಿ ಕರ್ನಲ್ ಸಾಹೇಬರಿಗೆ ಹೇಳಿ ನಾನು ಮುನ್ನಡೆದಿದ್ದೆ. ಮಲಗುವುದನ್ನೇ ಮರೆತ ಮಹಾನಗರಿಗೆ ಮಹಾನುಭಾವರೊಬ್ಬರು ಒಂಭತ್ತು ಘಂಟೆಗೇ ಲಾಲಿ ಹಾಡುವ ಕನಸು ಕಾಣುತ್ತಿದ್ದರು.

ಹೀಗೆ ಒಂದೊಂದು ಶೋಧದಲ್ಲೂ ಒಂದೊಂದು ಅನುಭವಗಳ ಗೊಂಚಲು. ಸಾಮಾನ್ಯವಾಗಿ ಮನೆಮಾಲೀಕರು ನಗರದ ಹೊರಗೋ, ಹೊರರಾಜ್ಯಗಳಲ್ಲೋ ಉಳಿದುಕೊಂಡಿದ್ದರೆ ಅಂಥಾ ಸಂದರ್ಭಗಳಲ್ಲಿ ಕೇರ್ ಟೇಕರ್ ಒಬ್ಬ ಮನೆಯ ಮೇಲ್ವಿಚಾರಣೆ ನಡೆಸುತ್ತಿದ್ದ. ಹೀಗಾಗಿ ಮಾಲೀಕರ ಗತ್ತು ಈ ಕೇರ್ ಟೇಕರ್ ಗಳಲ್ಲಿ ಸ್ವಾಭಾವಿಕವಾಗಿಯೇ ಬರುತ್ತಿತ್ತು.

ಎಷ್ಟಿದ್ದರೂ ದೇವರಿಗಿಂತ ಪೂಜಾರಿಗೆ ಜಂಭ ಹೆಚ್ಚಲ್ಲವೇ? ಬಹಳಷ್ಟು ಮಂದಿ ಬಾಡಿಗೆದಾರರು ಕೇರ್ ಟೇಕರ್ ಗಳ ಕೈಬಿಸಿ ಮಾಡಿ ಮನೆಯ ನಿಯಮಗಳನ್ನು ತಕ್ಕಮಟ್ಟಿಗೆ ಗಾಳಿಗೆ ತೂರುತ್ತಿದ್ದರು. ಅತೀ ಬುದ್ಧಿವಂತರ ವರ್ಗವಿದು. ಇನ್ನು ಕೆಲ ಮನೆಮಾಲೀಕರು ಮನೆ ಕಟ್ಟುವುದನ್ನೇ ಒಂದು ವ್ಯಾಪಾರವಾಗಿ ಮಾಡಿಕೊಂಡು ಯಶಸ್ವಿಯಾಗಿದ್ದರು.

ಗುರುಗ್ರಾಮದ ಗ್ರಾಮೀಣ ಭಾಗಗಳಿಗೆ ಕೊಂಚ ಹತ್ತಿರವಿರುವ ಕೆಲ ಪ್ರದೇಶಗಳಲ್ಲಿ ದಿನವಿಡೀ ಕುಳಿತುಕೊಂಡು ಹುಕ್ಕಾ ಸೇದುತ್ತಿರುವ ಬಹಳಷ್ಟು ಹಿರಿಯರನ್ನು ನಾವು ಕಾಣಬಹುದು. ಕಾಂಕ್ರೀಟು ಕಟ್ಟಡಗಳಿಂದಲೇ ಜೇಬು ತುಂಬಿಸುತ್ತಿರುವವರ ಬೆರಳೆಣಿಕೆಯ ಮಂದಿಯ ದೈನಂದಿನ ಮೋಜಿದು.

ಇವರ ಪೇಯಿಂಗ್ ಗೆಸ್ಟ್ ಕಟ್ಟಡಗಳು ಎತ್ತರವಾಗುತ್ತಾ ಹೋದಂತೆ ಜೇಬೂ ದಪ್ಪಗಾಗುತ್ತಾ ಹೋಗುತ್ತದೆ. ಉದ್ಯೋಗಾವಕಾಶಗಳಿಗೆ ಮಹಾನಗರಿಗೆ ನಿರಂತರವಾಗಿ ಹರಿದು ಬರುತ್ತಿರುವ ಜನಸಮೂಹ ಹೇಗೂ ಇದೆಯಲ್ಲಾ… ಹೀಗಾಗಿ ರಿಯಲ್ ಎಸ್ಟೇಟ್ ಎಂಬುದು ಮಹಾನಗರಗಳಲ್ಲಿ ಚಿನ್ನದ ಮೊಟ್ಟೆಯಿಡುವ ಕೋಳಿಯೇ ಸರಿ.

ಒಂದೊಂದು ಮನೆಗಳಲ್ಲೂ ಒಂದೊಂದು ಸ್ವಾರಸ್ಯಕರ ಅನುಭಗಳಾಗುವುದು ಸಹಜವೇ ಅನ್ನಿ. ಉದಾಹರಣೆಗೆ ಗುರುಗ್ರಾಮದ ಹದಿನೇಳನೇ ಸೆಕ್ಟರಿನ ಸಂತೆಯ ಬಳಿಯಲ್ಲೊಂದು ಮನೆಯಿತ್ತು. ಆ ಏರಿಯಾವನ್ನು ಪುರಾನಾ ಕುವಾಂ (ಹಳೇ ಬಾವಿ) ಅನ್ನುತ್ತಾರೆ.

ಇಲ್ಲಿ ಈ ಕುವಾಂ ಅನ್ನುವುದು ಹೆಸರಿಗಷ್ಟೇ ಬಾವಿ. ಹುಡುಕಹೊರಟರೆ ಅಂಥಾ ಯಾವ ಮಹಾಬಾವಿಯೂ ಅಲ್ಲಿಲ್ಲ. ಮೇಲಾಗಿ ಅಲ್ಲಿರುವುದೆಲ್ಲಾ ಇಕ್ಕಟ್ಟಾದ ಓಣಿಗಳ ಸಂಕೀರ್ಣ ಜಾಲ. ನಾನು ಪಾಸ್ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾಗ ದುರಾದೃಷ್ಟವಶಾತ್ ಈ ಏರಿಯಾದಲ್ಲಿ ಮನೆ ಮಾಡಿಕೊಂಡಿದ್ದೆ.

ಪಾಸ್ಪೋರ್ಟ್ ಅಂಚೆಯ ಮೂಲಕ ಬರುತ್ತಿದ್ದರಿಂದ ಅಂಚೆಪೇದೆ ನನ್ನ ವಿಳಾಸವನ್ನು ಹುಡುಕಿ ಸುಸ್ತಾಗಿ ಹೋಗಿದ್ದನಂತೆ. ಹೀಗೆ ಪಾಸ್ಪೋರ್ಟು ನನ್ನ ತಲಾಶೆಯಲ್ಲಿ ನಾಲ್ಕೈದು ದಿನಗಳ ಕಾಲ ಅಲೆದು, ಅಂಚೆಪೇದೆಯಣ್ಣನ ಬೆವರಿಳಿಸಿ ವಾಪಾಸು ಹೋಗಿತ್ತು. ಅಂಚೆಯಣ್ಣ ನನಗೆ ಅದೆಷ್ಟು ಶಾಪ ಹಾಕಿದ್ದನೋ. ಕೊನೆಗೂ ಪಾಸ್ಪೋರ್ಟ್ ನನ್ನ ಕೈತಲುಪಿದ್ದು ಸೇವಾಕೇಂದ್ರಕ್ಕೆ ಹೋದ ನಂತರವೇ. 

ಈ ಏರಿಯಾದ ಮನೆಯಲ್ಲಿದ್ದ ಮತ್ತೊಂದು ತಮಾಷೆಯ ಸಂಗತಿಯೆಂದರೆ ಎದುರು ಮನೆಯ ರಸಿಕ ವೃದ್ಧ. ಪುರಾನಾ ಕುವಾಂ ಏರಿಯಾದಲ್ಲಿದ್ದ ನಮ್ಮ ಮನೆಯಿದ್ದಿದ್ದು ಮೊದಲನೇ ಮಹಡಿಯಲ್ಲಿ. ನಾವಿದ್ದ ಕಟ್ಟಡಕ್ಕೆ ಮುಖಾಮುಖಿಯಾಗಿಯೇ ಮತ್ತೊಂದು ಕೋಠಿಯಂಥಾ ಮನೆಯೊಂದಿತ್ತು. ನಮ್ಮ ಮೊದಲನೇ ಮಹಡಿಯ ಮನೆಗೆ ನೇರವಾಗಿ ಕಾಣುವಂತಿದ್ದಿದ್ದು ಈ ಎದುರು ಮನೆಯ ತಾರಸಿ.

ಈ ತಾರಸಿಯ ಒಂದು ಮೂಲೆಯಲ್ಲಿ ಪುಟ್ಟ ಸ್ಟೋರ್ ರೂಮಿನಂಥಾ ಒಂದು ಭಾಗ ಬೇರೆ. ಈ ಮನೆಯ ವೃದ್ಧ ಮಾಲೀಕ ಬಹುತೇಕ ನಿತ್ಯವೂ ತಾರಸಿಗೆ ಬಂದು ಮುಂಜಾನೆಯ ಎಳೆಬಿಸಿಲಿನಲ್ಲಿ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದ ಮಧ್ಯವಯಸ್ಕ ಕೆಲಸದಾಕೆಯ ಜೊತೆ ಚಕ್ಕಂದವಾಡುತ್ತಿದ್ದ.

ಮುಂಜಾನೆ ತಡವಾಗಿ ಎದ್ದು ಅಂಡಿಗೆ ಬೆಂಕಿ ತಾಗಿದವರಂತೆ ಆಫೀಸಿಗೆ ಲಗುಬಗೆಯಿಂದ ತಯಾರಾಗುತ್ತಿದ್ದ ನಮ್ಮಂಥವರಿಗೆ ಮೊದಲನೇ ಮಹಡಿಯಿಂದ ಬೆಳ್ಳಂಬೆಳಗ್ಗೆಯೇ ಪ್ರಣಯಪಕ್ಷಿಗಳ ಚಕ್ಕಂದವನ್ನು ನೋಡಿ ಕಣ್ತುಂಬಿಕೊಳ್ಳಬೇಕಾದ ಅನಿವಾರ್ಯತೆ.

ಮಾರ್ನಿಂಗ್ ರೋಮ್ಯಾನ್ಸಿಗೆಂದು ನೆಲಮಹಡಿಯಲ್ಲಿದ್ದ ಕುಟುಂಬಸ್ಥರ ಕಣ್ಣುತಪ್ಪಿಸಿ ಮಾಲೀಕ ತಾರಸಿಗೆ ಬರುತ್ತಿದ್ದರೆ ಎದುರಿನ ಕಟ್ಟಡದ ಮೊದಲನೇ ಮಹಡಿಯ ಕುಟುಂಬಗಳಿಗೆ ನಿತ್ಯವೂ ಇದು ನೇರಪ್ರಸಾರವಾಗುತ್ತಿತ್ತು. ಎಷ್ಟೆಂದರೆ ಕ್ರಮೇಣ ಇವೆಲ್ಲವೂ ನಿತ್ಯದ ದಿನಚರಿ ಎಂಬಷ್ಟಿನ ನೀರಸ ರೂಢಿಯಾಗುವಷ್ಟು.

ಪುರಾನಾ ಕುವಾಂದಿಂದ ಹೊರಬಿದ್ದ ನಾವುಗಳು ಮುಂದೆ ನಡೆದಿದ್ದು ಸೆಕ್ಟರ್ ಹದಿನೇಳರ ಹೃದಯ ಭಾಗದಲ್ಲಿದ್ದ ಕಟ್ಟಡವೊಂದಕ್ಕೆ. ದುರಾದೃಷ್ಟವಶಾತ್ ಇಲ್ಲಿಯ ಮನೆಕೆಲಸದಾಕೆಯೊಬ್ಬಳ ಮೇಲೆ ಕೋತಿಗಳು ಭೀಕರ ದಾಳಿ ನಡೆಸಿದ್ದ ಪರಿಣಾಮವಾಗಿ ಆಕೆ ಆಸ್ಪತ್ರೆ ಸೇರಬೇಕಾಯಿತು.

ಇದರಿಂದಾಗಿ ಹಲವು ದಿನಗಳ ಕಾಲ ನಮ್ಮ ಅಡುಗೆಮನೆಗಳಲ್ಲೂ, ಊಟದ ವಿಧಿಗಳಲ್ಲೂ ಏರುಪೇರುಗಳಾದವು. ಒಮ್ಮೆ ದೆಹಲಿ-ಗುರುಗ್ರಾಮ ಪ್ರದೇಶಗಳಲ್ಲಿ ಭೂಕಂಪದ ಸೂಚನೆಗಳು ಬಂದಾಗ ಉಟ್ಟಬಟ್ಟೆಯಲ್ಲೇ ಜೀವಕ್ಕಾಗಿ ಓಡಿದ್ದು ಕೂಡ ಇದೇ ಕಟ್ಟಡದಿಂದ.

ನಾಲ್ಕನೇ ಮಹಡಿಯಲ್ಲಿ ಹರಟೆ ಹೊಡೆಯುತ್ತಿದ್ದ ನಮಗೆ ಏಕಾಏಕಿ ಕಟ್ಟಡವು ನಾಲ್ಕು ಪೆಗ್ಗು ಏರಿಸಿದ ಕುಡುಕನಂತೆ ತೂರಾಡುತ್ತಿರುವ ಅನುಭವವಾದಾಗಲೇ ಭೂಕಂಪನವು ಹೀಗೂ ಇರುತ್ತದೆಂಬ ಜ್ಞಾನೋದಯವಾಗಿದ್ದು. ಇದಾದ ನಂತರದ ಮೂರ್ನಾಲ್ಕು ತಾಸುಗಳಲ್ಲಿ ಏನಿಲ್ಲವೆಂದರೂ ಎರಡು ಬಾರಿ ನಾವುಗಳು ಕಟ್ಟಡವನ್ನು ಬಿಟ್ಟು ಹೊರಬಂದು ದೂರ ನಿಂತಿದ್ದೆವು.

ಕೈಯಲ್ಲಿದ್ದಿದ್ದು ಕೆಲ ದಾಖಲಾತಿಗಳು ಮತ್ತು ಒಂದಷ್ಟು ಜೊತೆ ಬಟ್ಟೆಗಳನ್ನು ಹೊಂದಿದ್ದ ಬ್ಯಾಗು ಮಾತ್ರ. ಮನೆಗೆ ಮರಳೋಣವೆಂದರೆ ಭೂಕಂಪದ ಭಯ. ಹೊರಗಿರೋಣವೆಂದರೆ ಎಷ್ಟು ಹೊತ್ತೆಂದು ಕಾಯುವುದು? ಎಲ್ಲರಲ್ಲೂ ಗೊಂದಲ. ಭೂಕಂಪನಗಳ ಹೊತ್ತಲ್ಲಿ ಈ ರೀತಿಯ ಅನುಭವಗಳು ನಮಗೆ ದೆಹಲಿಯ ಬಹುಮಹಡಿ ಕಟ್ಟಡಗಳಲ್ಲಿ ಆಗಿದ್ದೂ ಇದೆ. 

ಗುರುಗ್ರಾಮದ ರಿಯಲ್ ಎಸ್ಟೇಟ್ ಉದ್ಯಮವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದು ಡಿ.ಎಲ್.ಎಫ್ ನಂಥಾ ದೈತ್ಯಶಕ್ತಿಗಳು ಭದ್ರವಾಗಿ ನೆಲೆಯೂರಿದ ನಂತರ. ಬಂಜರು ಭೂಮಿಯಂತಿದ್ದ ಹರಿಯಾಣಾದ ಈ ಭಾಗಗಳು ಕೇವಲ ಇಪ್ಪತ್ತು ಚಿಲ್ಲರೆ ವರ್ಷಗಳಲ್ಲಿ ‘ಭಾರತದ ಶಾಂಘೈ’ ‘ಮಿಲೇನಿಯಮ್ ಸಿಟಿ’ ಎಂದೆಲ್ಲಾ ಬದಲಾಗಿದ್ದು ಸ್ಥಳೀಯರಿಗೇ ಒಂದು ದೊಡ್ಡ ಅಚ್ಚರಿ.

ಹೇಗಿದ್ದ ಗುಡಗಾಂವಾ ಹೇಗಾಯ್ತು ನೋಡಿ ಎಂದು ಕಣ್ಣರಳಿಸುತ್ತಾ ಹೇಳುವವರು ಇಂದಿಗೂ ಇಲ್ಲಿ ಸಾಕಷ್ಟು ಸಿಗುತ್ತಾರೆ. ಎಲ್ಲಾ ಮಹಾನಗರಗಳಂತೆ ಗುರುಗ್ರಾಮವೂ ಕೂಡ ಬಡವರ ಸ್ವರ್ಗವಲ್ಲ. ಹಾಗೆಂದು ಅದು ಕೇವಲ ಸಿರಿವಂತರ ಸ್ವತ್ತೂ ಅಲ್ಲ. ಇಲ್ಲಿ ಕುಬೇರನಿಗೂ ಮನೆ ಸಿಗುತ್ತದೆ. ಕುಚೇಲನಿಗೂ ಸಿಗುತ್ತದೆ.

ಸ್ವಲ್ಪ ತಲೆ ಓಡಿಸಬೇಕಷ್ಟೇ!

August 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ರೇಣುಕಾ ರಮಾನಂದ

    ಪ್ರಸಾದ್ ಅಂಕಣ ಬಹಳ ಚಂದವಾಗಿದೆ.ವಿಷಯದ ಜೊತೆ ನಿಮ್ಮ ಶೈಲಿ ಕೂಡ ಬಹಳ ಆಪ್ತವಾಗುತ್ತದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: