ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್‍ ಕೊಡಗನೂರ್ ಕವಿತೆ- ತಪ್ಪಿದರೆ..!!

ಪ್ರಕಾಶ್‍ ಕೊಡಗನೂರ್

1. ತಪ್ಪಿದರೆ..!!

ತಪ್ಪಿನ
ಕಾರಣ ಹಿನ್ನೆಲೆ
ಏನೇ ಇರಲಿ
ತಪ್ಪಿತಸ್ಥ
ಯಾರೇ ಆಗಲಿ
ತಪ್ಪುಗಳು
ಬುಲೆಟ್ಟಿನಂತೆ ಸ್ಫೋಟಿಸುತ್ತವೆ;
ತಪ್ಪುಗಳು
ತಪ್ಪುಗಳಾಗೇ ಉಳಿದುಬಿಡುತ್ತವೆ!!

ಒಂದೆಡೆ ತಪ್ಪಿತಸ್ಥನ
ಕುಟುಂಬಸ್ಥರು ಸಂಬ೦ಧಿಕರ
ಮಾನ ಪ್ರಾಣಗಳೆಲ್ಲ
ಭೀಕರ ದಾಳಿಗೆ ತುತ್ತಾದರೆ
ಮತ್ತೊಂದೆಡೆ ಅವನ
ಸ್ನೇಹಿತರು ಪ್ರೀತಿಪಾತ್ರರು
ಸಹಾನುಭೂತಿಯುಳ್ಳವರ
ಹೃದಯ ಮೆದುಳುಗಳೆಲ್ಲ
ಬರಸಿಡಿಲಿಗೆರಗಿದ ಕುರಿಗಳಾಗುತ್ತವೆ!!

ಇದಲ್ಲದೆ
ಸಹಜ ಸರ್ವಾಂತರ್ಯಾಮಿ
ತಪ್ಪುಗಳು ಮೆರೆದಿರುವುದು
ಸಾರ್ವತ್ರಿಕ ಸತ್ಯ;
ಕೃತ್ರಿಮವಲ್ಲದ
ಅನರ್ಥವೆಸಗದ ತಪ್ಪುಗಳು
ಇಂದಿಗೂ ಪಥ್ಯ!!

ತಪ್ಪುಗಾರರೇ
ಎಚ್ಚರ ಕಟ್ಟೆಚ್ಚರ:
ತಪ್ಪಿದರೆ
ಒಪ್ಪುವ ಹಾಗಿರಲಿ ನರ;
ಇಲ್ಲದಿರೆ
ಸಂಬ೦ಧಗಳೆಲ್ಲ ಬರ್ಬರ!!

2. ಅಂದರ್-ಬಾಹರ್

ಕತ್ತಿಯಲಗಿನ ಮೇಲೆ
ಬದುಕು ಗಿರಗಟ್ಲೆ
ಧೇನಿಸುತಾ ಹಿಂಸೆ;
ಚಿತೆಯಾಗುವ
ಜೀವಕೂ ಚಿಂತೆ!!

ನ್ಯಾಯದ ದನಿಯೊಳಗೆ
ಅನ್ಯಾಯದ ಬೆಳವಣಿಗೆ
ಅಹಿಂಸೆಯ ಪಥದೊಳಗೆ
ಕಾರ್ಯದ ಮೆರವಣಿಗೆ

ಮಾಸ್ತರನ ಮುಖವಾಡದಲಿ
ಜಾರಿಣ ಯ ಕಾಯಕ
ಪ್ರೇಮದ ಅಮಲಿನಲಿ
ವಿರಹದ ನರಕ

ಸಾಲವೆಂಬ ಆಸ್ತಿಯೆನಗೆ
ಬಗೆಹರಿಯದ ಭಾರತ
ದಾರಿದ್ರ್ಯವೇ ಪ್ರಾರಬ್ಧವಾಗಿ
ನಲುಗುತಿರುವೆ ಅನವರತ

ಕಾಳ್ಗಿಚ್ಚಿನೊಳಗೆ ನಾನೊ
ನನ್ನೊಳಗೆ ಕಾಳ್ಗಿಚ್ಚೊ?

ಜಿಜ್ಞಾಸೆಯೊಂದಿಗೇ
ಮೈ ಮನದ ದಹನ;
ಬಯಕೆಗಳೊಂದಿಗೇ
ಜೀವಾತ್ಮದ ಕದನ!!

3. ಎಚ್ಚರ

ತತ್ವ
ಸಿದ್ಧಾಂತಗಳು
ಉದಯಿಸಿದವು
ಬೆಳೆದವು
ಬೆಳಗಿದವು
ಮನುಕುಲದ
ಇತಿಹಾಸ
ಬದಲಿಸಿದವು

ತಲೆಮಾರುಗಳ
ಸವೆಸುತಲೇ
ಹಸಿರುಳಿಸಿದ
ಸಮಸಮಾಜದ
ಕನಸುಗಾರರು
ಹೆಸರಾದರು;
ಲೋಕಕೂ
ಮಾನ್ಯರಾದರು

ಬರಬರುತ್ತಾ
ಕಾಲದ
ದನಿಗೆ
ಓಗೊಡದ
ತತ್ವ
ಸಿದ್ಧಾ೦ತಗಳು
ಸ೦ವೇದನಾ
ಶೂನ್ಯವಾದವು;
ದ೦ಧೆಕೋರರ
ದಾಳಗಳಾಗಿಯೂ
ಚಲಾವಣೆಗೊ೦ಡವು

ನೆನಪಿರಲಿ
ಹೆಜ್ಜೆಯೊ೦ದು
ಮು೦ದೆ
ಹೆಜ್ಜೆಯೆರಡು
ಹಿ೦ದೆ
ಸಾಗಿದ೦ತೆ
ಪ್ರಗತಿಪಥ
ಕ್ಲೀಷೆ
ಸಹಜ

ಎಲೆ
ಮನುಜ
ಎಚ್ಚರ
ಅರಿವು
ಗುರುವಾಗಲಿ
ನಿರ೦ತರ

‍ಲೇಖಕರು Admin

8 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading