ಪ್ರಕಾಶಕಿಯಾಗುವುದೆಂದರೆ…

ಅಕ್ಷತಾ ಹುಂಚದಕಟ್ಟೆ

ಅಹರ್ನಿಶಿ ಪ್ರಕಾಶನ ಪ್ರಾರಂಭವಾಗಿ ಹನ್ನೆರಡು ವರುಷಗಳಾದವು. ಎಂಬತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಕೆಲವು ಪುಸ್ತಕಗಳು ಎರಡು, ಮೂರು ಮುದ್ರಣ ಕಂಡಿದೆ. ಹಲವು ಪುಸ್ತಕಗಳಿಗೆ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.. ನಲವತ್ತಕ್ಕೂ ಹೆಚ್ಚು ಹೊಸ ಲೇಖಕ, ಲೇಖಕಿಯರ ಮೊದಲ ಪುಸ್ತಕ ಅಹರ್ನಿಶಿಯಿಂದ ಪ್ರಕಟವಾಗಿದೆ.

ಇಷ್ಟೆಲ್ಲ ಇದ್ದರೂ ತುಂಬಾ ಜನ ಒಬ್ಬ ವೃತ್ತಿಪರಳಾಗಿ ನನ್ನನ್ನು ನೋಡುತ್ತಿಲ್ಲ ಎಂಬ ಕೊರಗಿದೆ…

ಯಾಕೆ ಪ್ರಕಾಶನ ಎಂಬುದನ್ನು ವೃತ್ತಿಯಾಗಿ ನೋಡುತ್ತಿಲ್ಲ? ಅದರಲ್ಲೂ ಹೆಣ್ಣುಮಕ್ಕಳು ಪ್ರಕಾಶನ ಮಾಡಿದರೆ ಅದನ್ನು ಟೈಂ ಪಾಸ್ ಹವ್ಯಾಸ ಎಂದೆ ಪರಿಗಣಿಸುತ್ತಾರಲ್ಲ ಯಾಕೆ?

ಎಷ್ಟೋ ಜನ ಕೇಳುತ್ತಾರೆ ನನಗೆ “ಏನು ಕೆಲಸ ಮಾಡ್ತಿದೀಯ ಹೇಳು” ನಾನು ಪ್ರಕಾಶನ ಅಂದ ಕೂಡಲೆ, ‘ ಅದು ಸರೀನಮ್ಮ ಕೆಲಸ ಏನು ಮಾಡತೀಯ ಹೇಳು ಅಂತ ಕೇಳ್ತಾರೆ’…. ನಾನು ತಲೆ ಕೆಟ್ಟು” ಇಲ್ಲ ಏನೂ ಕೆಲಸ ಮಾಡತಿಲ್ಲ” ಎಂದು ನಾನು ಹೇಳಿದಾಗಲೆ ಅಂತವರಿಗೆ ಸಮಾಧಾನ…

ಆಗ ನನ್ನ ಕಣ್ಣ ಮುಂದೆ… ಒಂದೊಂದು ಪುಸ್ತಕ‌ ಮಾಡುವಾಗಲೂ ಹಗಲಂತಿಲ್ಲ, ರಾತ್ರಿಯಂತಿಲ್ಲ ನಿದ್ದೆ, ಊಟ ಬದಿಗೊತ್ತರಿಸಿ ಪ್ರೂಫ್ ನೋಡಿದ್ದು, ವಾಕ್ಯಗಳನ್ನು ಸರಳವಾಗಿರಸಲು ಸಲಹೆ ನೀಡಿದ್ದು, ಮುಖಪುಟದ ಬಗ್ಗೆ, ಒಳಪುಟದ ಬಗ್ಗೆ , ಬೆನ್ನುಡಿ, ಮುನ್ನುಡಿಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು..,

…ಅಷ್ಟೆಲ್ಲ ಪುಸ್ತಕ ಬರುವುದರೊಳಗಿನ ತಲ್ಲಣಗಳಿದ್ದರೆ ಪುಸ್ತಕ ಬಂದಾದ ಮೇಲೆ ಇನ್ನು ಕೆಲಸ ಮುಗಿಯಿತು ಎಂದು ಕೂರುವಂತಿಲ್ಲ. ಎಲ್ಲೆಲ್ಲಿ ಬೇಡಿಕೆ ಇದೆ ಪೂರೈಸಬೇಕು… ಬೇಡಿಕೆ ಸೃಷ್ಟಿಸಲು ಈ ಪುಸ್ತಕದ ಮಹತ್ವ ತಿಳಿಸುವ ಬರೆಹವೋ, ಪ್ರಚಾರವೋ ಮಾಡಬೇಕು…

ಒಂದೆ ಪುಸ್ತಕಕ್ಕೆ ಆರ್ಡರ್ ಇದ್ದರೂ, ಹತ್ತು ಪುಸ್ತಕಕ್ಕೆ ಆರ್ಡರ್ ಇದ್ದರೂ, ನೂರು ಪುಸ್ತಕಕ್ಕೆ‌ ಇದ್ದರೂ ಆ ಕ್ಷಣಕ್ಕೆ ಮೂರನ್ನು ಸಮಾನವಾಗಿಯೇ ನೋಡಬೇಕಾಗುತ್ತದೆ. ಕೂಡಲೆ ಸ್ಪಂದಿಸಬೇಕಾಗುತ್ತದೆ. ನವಕರ್ನಾಟಕದಿಂದ ಹತ್ತಾರು ಪುಸ್ತಕಗಳಿಗೆ ಆರ್ಡರ್ ಬಂದಾಗಲೂ, ಗುಲ್ಬರ್ಗದ ಮೂಲೆಯಹಳ್ಳಿಯ ವಿದ್ಯಾರ್ಥಿನಿಯೊಬ್ಬಳು ಎಪ್ಪತ್ತೆಂಬೆತ್ತು ರೂಪಾಯಿಯ ಒಂದೆ‌ಒಂದು ಪುಸ್ತಕಕ್ಕೆ ಆರ್ಡರ್ ಮಾಡಿದಾಗಲೂ ಒಂದೆ ರೀತಿಯಲ್ಲಿ ತತಕ್ಷಣದಲ್ಲಿ ಸ್ಪಂದಿಸಿ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಒಂದು ಪುಸ್ತಕ ಅಷ್ಟೆ ಅಲ್ಲ ಎಂದು ಇಂದು ನಿರ್ಲಕ್ಷಿಸಿದರೆ ನಾಳೆ ಹತ್ತು ಪುಸ್ತಕಗಳ ಬೇಡಿಕೆ ಅದರಿಂದ ತಪ್ಪುತ್ತದೆ ಎಂಬ ಎಚ್ಚರಿಕೆ ಸದಾ ನಮ್ಮೊಳಗೆ ಇಟ್ಟುಕೊಳ್ಳಬೇಕು.

ಒಂದೊಂದು ಪುಸ್ತಕ ಪ್ರಿಂಟಿಂಗ್ ಗೆ ಹೋಗುವ ಸಂದರ್ಭದಲ್ಲೂ ಕೊನೆಯ ಕ್ಷಣದ ಕಾರ್ಯಭಾರ ಒತ್ತಡದಲ್ಲಿ  ಎಷ್ಟೋ ಬಾರಿ ಅಡಿಗೆ ಮಾಡುವುದಿರಲಿ ತಿನ್ನಲು ಕೂಡ ಪುರುಸೊತ್ತಾಗುವುದಿಲ್ಲ. ಅಷ್ಟೆಲ್ಲ ಮಾಡುತ್ತಿದ್ದರೂ ಪ್ರಕಾಶಕಿ ಎಂದ ಕೂಡಲೇ ಅದೊಂದು ವೃತ್ತಿಯಲ್ಲ ಹವ್ಯಾಸ ಎಂದೇ ನೋಡುತ್ತಾರಲ್ಲ… ಎಂದು ಬೇಸರ ಕಾಡುತ್ತದೆ. ಅದಕ್ಕೆ ಕಾರಣಗಳು ಹಲವಿರಬಹುದು. ಪ್ರಕಾಶನವನ್ನೆ ವೃತ್ತಿಯಾಗಿಸಿಕೊಂಡ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ ಇರುವುದೆ ಇದಕ್ಕೆ ಮುಖ್ಯ ಕಾರಣ ಎಂದು ನನಗೆ ಅನಿಸುತ್ತದೆ.

ಮತ್ತೊಂದು ನನ್ನ ಹಿರಿಯ ಗೆಳೆಯರಾದ ದಿನೇಶ್ ಅಮೀನ್ ಮಟ್ಟು ಸರ್ ನನಗೆ ತೋರಿಸಿಕೊಟ್ಟ ಕಾರಣ… ನಾನು ನನ್ನ ವೃತ್ತಿಯನ್ನು ವೃತ್ತಿಯಾಗಿ ಯಾರೂ ನೋಡುವುದಿಲ್ಲ ಎಂದು ಬೇಸರಿಸಿದಾಗ ಅವರು “ನಿನಗೆ ನಿಮ್ಮ ಮನೆಯ ಜವಾಬ್ದಾರಿಯನ್ನು ಅಂದರೆ ಮನೆಗೆ ದಿನಸಿ ತರುವುದು, ತರಕಾರಿ ತರುವುದು, ಕರೆಂಟ್ ಬಿಲ್, ಕೇಬಲ್ ಬಿಲ್, ಟೆಲಿಫೋನ್ ಬಿಲ್ ಪಾವತಿಸುವುದು, ಮನೆಬಾಡಿಗೆ ಕಟ್ಟುವುದು ಈ ಎಲ್ಲವನ್ನು ಬರಿಯ ನಿನ್ನ ಪ್ರಕಾಶನದ ಸಂಪಾದನೆಯಿಂದ ನಿರ್ವಹಿಸುವ ವಿಶ್ವಾಸವಿದೆಯೇ? ” ಎಂದು ಕೇಳಿದರು. “ಖಂಡಿತಾ ಇಲ್ಲ” ಎಂದೆ

“ಅಲ್ಲಿಗೆ ಮುಗಿಯಿತಲ್ಲ… ನಿನ್ನ ಮನೆಯ ನಿರ್ವಹಣೆ ಸಹ ಅದರಿಂದ ಸಾಧ್ಯವಿಲ್ಲ ಎಂದಮೇಲೆ ಅದನ್ನು ವೃತ್ತಿಯಲ್ಲ ಎಂದು ಯಾರಾದರೂ ಹೇಳಿದರೆ ಅದರಲ್ಲಿ ಸತ್ಯ ಇದ್ದೆ ಇದೆಯಲ್ಲ” ಎಂದರು. ನಾನು ಯೋಚಿಸಲಾರಂಭಿಸಿದೆ.

ಇದನ್ನು ವೃತ್ತಿಯನ್ನಾಗಿಸಿಕೊಳ್ಳಬೇಕು ಎಂದರೆ ಪುಸ್ತಕ ಸಂಸ್ಕೃತಿ ಬೆಳೆಯಬೇಕು. ಆದರೆ ದುರಂತವೆಂದರೆ‌ ಕನ್ನಡ ಪುಸ್ತಕ ಓದುತ್ತಿರುವವರ ಸಂಖ್ಯೆ‌ ಕುಸಿಯುತ್ತಿದೆ ವಿನಃ ಹೆಚ್ಚುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಬನ್ನಿ ಪ್ರಕಾಶನ ವೃತ್ತಿಯನ್ನು ಆಯ್ದುಕೊಳ್ಳಿ ಎಂದು ಹೇಳುವ ಸ್ಥಿತಿಯಲ್ಲಿ‌ ಪ್ರಕಾಶಕಿಯರು/ ಪ್ರಕಾಶಕರು ಯಾರೂ ಇಲ್ಲ…

ಕನ್ನಡ ಪ್ರಕಾಶನ ಕ್ಷೇತ್ರದ ಮೊದಲ‌ಗಿತ್ತಿಯರಲ್ಲಿ ಒಬ್ಬರಾದ ತಿರುಮಲಾಂಬ ಅವರನ್ನು ನೆನೆಯುತ್ತಾ ಹೇಳುವೆ… ಸಾಹಿತ್ಯ, ವಿಜ್ಞಾನ, ಕ್ರೀಡೆ, ಕೃಷಿ ಈ ಯಾವುದೇ ಕ್ಷೇತ್ರದ ಬರವಣಿಗೆ, ಓದಿನಲ್ಲಿ ಆಸಕ್ತಿ ಇರುವ ಯಾರಿಗೇ ಆದರೂ ಜೊತೆಗೆ ಸ್ವಲ್ಪ ಪ್ರಮಾಣ ಲೆಕ್ಕ ಪತ್ರ ತಿಳಿದಿದ್ದರೆ, ಜನರೊಡನಾಟದ ಆಸಕ್ತಿ ಇದ್ದರೆ ಅಂತವರು ಕೈಗೊಳ್ಳಬಹುದಾದ ವೃತ್ತಿ ಪ್ರಕಾಶನ ಕ್ಷೇತ್ರ…. ಆದರೆ ಇಲ್ಲಿ ಹತ್ತು ಹಲವು ಮಹಿಳೆಯರು ಪ್ರಕಾಶಕಿಯರಾಗಿ ವೃತ್ತಿಪರರಾಗುವ ಮೊದಲೇ ಪ್ರಕಾಶನ ಕ್ಷೇತ್ರವೆ ಕಣ್ಮರೆಯಾಗಿ ಬಿಡುವ ಅಪಾಯವು ಕಾಣಿಸುತ್ತಿದೆ.

ಹಾಗಾಗಬಾರದು ಕಾದು ನೋಡೋಣ ಎಂಬುದನ್ನು ಬಿಟ್ಟು ಪುಸ್ತಕ ಓದು ಪರಂಪರೆಯನ್ನು ನಮ್ಮೆಲ್ಲರೊಳಗೆ ಬಿತ್ತಿದಾಗ ಇಲ್ಲಿ ಹೊಸ ಹೊಸ ಪ್ರಕಾಶಕ- ಪ್ರಕಾಶಕಿಯರು ಹೊಮ್ಮಲು ಸಾಧ್ಯ. ಪ್ರಕಾಶನ ಕ್ಷೇತ್ರ ವೃತ್ತಿಪರವಾಗಲು ಸಾಧ್ಯ. ಪ್ರಕಾಶನವನ್ನು ವೃತ್ತಿಯನ್ನಾಗಿ ಪರಿಗಣಿಸುತ್ತಿಲ್ಲ ಎಂಬ ನೋವಿನ ಜೊತೆ ಇನ್ನಷ್ಟು ಸವಾಲುಗಳನ್ನು ನಾವು ಪ್ರಕಾಶಕಿಯರು ಎದುರಿಸುತ್ತೇವೆ…. ತುಂಬಾ ಜನ ತಿಳಿದಿರುತ್ತಾರೆ.

ಹೆಂಗಸರು ಪ್ರಕಾಶಕಿಯರು ಎಂದರೆ ಎಲ್ಲ ಜವಾಬ್ದಾರಿಗಳನ್ನು ಅವರ ಗಂಡನೋ, ತಂದೆಯೋ ನಿರ್ವಹಿಸಿಕೊಡತಾರೆ ಹೆಸರಷ್ಟೆ ಇವರದು ಎಂದು, ಇನ್ನು ಕೆಲವರು ತಿಳಿದಿರತಾರೆ ಗಂಡನೋ, ಬಂಧುಗಳೋ ವೃತ್ತಿಪರ ಲೇಖಕರಾಗಿರಬೇಕು ಅವರ ಪುಸ್ತಕ ಬೇರೆಯವರಿಗೆ ಕೊಡುವುದು ಏಕೆ ಎಂದು ಇವರೆ ಪ್ರಕಟಿಸಲೋಸುಗವೆ ಪ್ರಕಾಶನ ತೆರೆದಿರಬೇಕು… ಆದರೆ ಇವಕ್ಕೆಲ್ಲ ಕೆಲವು ಉದಾಹರಣೆ ಸಿಗಬಹುದು ವಿನಃ ಪ್ರಕಾಶನ ಎಂಬುದು ವೃತ್ತಿ ಎಂಬಂತಾದರೆ ಇಲ್ಲಿ ನೂರಾರು ಹೆಣ್ಣುಮಕ್ಕಳು ಸ್ವತಂತ್ರವಾಗಿ ಈ ವೃತ್ತಿಯನ್ನು ಅರಾಮಾಗಿ ನಿಭಾಯಿಸಬಹುದು.

ಇನ್ನೂ ಒಂದು ಸವಾಲಿದೆ… ಕನ್ನಡ ಸಾಹಿತ್ಯ ಸಮ್ಮೇಳನದಂತಹ ಲಕ್ಷಾಂತರ ಜನ ಸೇರುವ ಕನ್ನಡ ಜಾತ್ರೆಯಲ್ಲಿ ಕನ್ನಡ ಪುಸ್ತಕ ಮಳಿಗೆಗಳ ಸಾಲೆ ಎರಡ್ಮೂರು ಸಾವಿರ ಇರುತ್ತದೆ… ಆದರೆ ಅಲ್ಲಿಗೆ ಮಾರಾಟಮಾಡಲು ಪ್ರಕಾಶಕರು ಮತ್ತು ಮಾರಾಟಗಾರರು ಮಾತ್ರ ಬರುತ್ತಾರೆ ಎಂಬ ಕಲ್ಪನೆಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ.. ನೂರಾರು ಹೆಣ್ಣುಮಕ್ಕಳು ಪುಸ್ತಕ ಹೊತ್ತುಕೊಂಡು ಬಂದು ಕನ್ನಡಮ್ಮನ ಬೌದ್ದಿಕ ರಥ ಎಳೆಯುವಲ್ಲಿ ತೊಡಗುತ್ತಾರೆ.

ಆದರೆ ಅವರಿಗೆ ಉಳಿಯಲು ಒಂದು ಸುರಕ್ಷಿತವಾದ ಕೊಠಡಿ ವ್ಯವಸ್ಥೆ ಇರುವುದಿಲ್ಲ. ಶೌಚಾಲಯಗಳೋ ಮಾರಾಟ ಮಳಿಗೆಯಿಂದ ಹರದಾರಿ ದೂರ ಇರುತ್ತದೆ. ಅವುಗಳ ಸ್ಥಿತಿಯಂತೂ ಕೇಳುವುದೆ ಬೇಡ.ಆ ದುಸ್ಥಿತಿಯನ್ನು ಪ್ರತಿ ವರುಷ ಎದುರಿಸಿದರೂ ನಾನು ಸೇರಿದಂತೆ ಎಷ್ಠೋ ಹೆಣ್ಣುಮಕ್ಕಳು ಪ್ರತಿವರುಷ ಈ ಜಾತ್ರೆಗೆ ಹೋಗಿ ಪುಸ್ತಕ ಪರಿಷೆಯಲ್ಲಿ ಪಾಲ್ಗೊಳ್ಳಲು ಕಾತರಿಸುತ್ತೇವೆ.

ಕವಿಯೊಬ್ಬಳು ಅದೇ ಜಾತ್ರೆಯಲ್ಲಿ ಎಂಟು ಸಾಲಿನ ಪದ್ಯ ಓದಲು ಆಹ್ವಾನಿತಳಾದರೆ ಕೈ ತುಂಬಾ ಗೌರವಧನ, ಇರಲು‌ಅಚ್ಚುಕಟ್ಟಾದ ಕೋಣೆ, ಊಟ ತಿಂಡಿ ವ್ಯವಸ್ಥೆ ಮಾಡುವ ಅಡಳಿತ ವ್ಯವಸ್ಥೆ ಅದೇ ಕವಿ, ಲೇಖಕರ ಪುಸ್ತಕ ರೂಪಿಸಿ ಆವರನ್ನು ಜಗತ್ತಿಗೆ ಪರಿಚಯಿಸಿದ ಪ್ರಕಾಶಕ/ಕಿಯರ ಬಗ್ಗೆ ಗಾಢ ಅವಜ್ಞೆಯಲ್ಲಿ ತೊಡಗುವುದನ್ನುಕಂಡು ಕಡು ಬೇಸರವಾಗುತ್ತದೆ.

ಕವಿಯು ಪ್ರಕಾಶಕಿಯು ಆಗಿರುವ ನನಗೆ ಈ ಸಂದರ್ಭದಲ್ಲಿ ಮಾತ್ರ ಕವಿಯಾಗಿರುವ ಬಗ್ಗೆ ಬೇಸರ ಕಾಡುತ್ತದೆ. ನನ್ನ ಪುಸ್ತಕವನ್ನು ರೂಪಿಸಿದ, ನನ್ನನ್ನು ಜಗತ್ತಿಗೆ ಪರಿಚಯಿಸಿದ ಪ್ರಕಾಶಕಳೋ, ಪುಸ್ತಕ ಮಾರಾಟಗಾರ್ತಿಯೋ ಆಗಿರುವ ಹೆಣ್ಣುಮಗಳು ಕವಿಯಾಗಿರುವ ನನಗಿರುವ ಸೌಲಭ್ಯಗಳಿಂದ ಪೂರ್ತಿ ವಂಚಿತಳಾದರೂ ಕವಿಯಾಗಿರುವ ನನ್ನ ಕಣ್ಣಿಗೆ ಕಾಣುವುದೆ ಇಲ್ಲವಲ್ಲ ಎಂದು ವಿಷಾದ ಕವಿಯುತ್ತದೆ.

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Gubbachchi Sathish

    ಕನ್ನಡ ಪುಸ್ತಕ ಪ್ರಕಾಶನಕ್ಕೆ ಹಿಡಿದ ಕನ್ನಡಿ ನಿಮ್ಮ ಲೇಖನ.
    ಸಾಹಿತಿಗಳು ಬರೆಯುವುದು ಭಾವನೆ ಎನ್ನುತ್ತಾರೆ, ಒಪ್ಪೋಣ.
    ಆದರೆ, ಅವರು ಪ್ರಕಟಿಸುವುದೂ ಭಾವನೆ ಎಂದುಕೊಂಡಿರುವುದರಿಂದ
    ಪ್ರಕಾಶನ ವೃತ್ತಿಯಾಗಲು ಛಾನ್ಸೇ ಇಲ್ಲ. ಪ್ರಕಾಶಕರ ಕಷ್ಟಗಳು ಅವರಿಗೇ ಬೇಕೆ ಇಲ್ಲ.

    ಪ್ರತಿಕ್ರಿಯೆ
  2. Shyamala Madhav

    ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಕಾಶಕಿಯರಿಗಾಗುವ ಅನಾನುಕೂಲಗಳನ್ನು ಸಮ್ಮೇಳನಕ್ಕೆ ಮುನ್ನ ಸಂಬಂಧ ಪಟ್ಟವರ ಗಮನಕ್ಕೆ ತನ್ನಿ. ವ್ಯವಸ್ಥೆ ಆಗಲೇ ಬೇಕು. ವಿಷಾದ ಪರಿಸ್ಥಿತಿ ಸರಿಹೋಗಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: