ಕ್ಯಾರೇ ಅನ್ನದ ಕ್ಯಾನೇ ಉತ್ಸವದಲ್ಲಿ ನಮ್ಮೂರ ಹೆಣ್ಣು ಮಗಳು

ಹೆಚ್ ಆರ್ ಸುಜಾತಾ

ನಮ್ಮೂರಿನ ಗಡ್ಡಪ್ಪನ ಬದುಕು ಬಯಲಿಂದ ರೆಡ್ ಕಾರ್ಪೆಟ್ ಏರಿಯಾಕೆ ಬಂದು ಕೇನ್ಸ್ ಫೆಸ್ಟಿವಲ್ ನೋಡುಗರ ಕಣ್ಣ ಗೊಂಬೆಯಾಗಿ ಕುಳಿತ ಒಂದು ಛೆಂದಕ್ಕೆ ನಾವು ಮೋಹಗೊಂಡು ಮೊಬೈಲ್ನಲ್ಲಿ ಅದನ್ನು ಸೆರೆ ಹಾಕಿದೆವು. 

ಅಲ್ಲಿಗೆ ಬಂದಿದ್ದ ೧೬೮ ದೇಶದ ಅಂಗಳದಲ್ಲಿ ಭಾರತ ದೇಶದ ಅಂಗಳವೊಂದನ್ನು ಹುಡುಕಿ ಹೋದೆವು. ಕಾಣದ ಹೊಸ ದೇಶ. ಹೊಸ ವೇಷ. ಹುಡುಕಿ ಹುಡುಕಿ ಎಲ್ಲವನ್ನೂ ಕಂಡುಕೊಳ್ಳಬೇಕಾದ ಪರಿಸ್ಥಿತಿ. ಮನೇಲಿ ಹುಲಿ, ಬೀದೀಲಿ ಇಲಿ ಅನ್ನೋ ಹಾಗೆ ನಮ್ಮ ಗುಂಪು. ಅವರಿಗೆ ತಿಳಿಯದ ನಮ್ಮ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತ ಕೇನ್ಸ್ ಜಾತ್ರೆಯಲ್ಲಿ ಕಂಡದ್ದನ್ನೆಲ್ಲಾ ಮೊಬೈಲ್ನಲ್ಲಿ  ಪಣಕ್ ಅನ್ನಿಸಿದ್ದೇ ಅದರ ಅಕರಾಳ ವಿಕರಾಳದ ಹೊಟ್ಟೆ ತುಂಬಿಸುತ್ತಾ ನಾವು ತೆಗೆದ ಚಿತ್ರವನ್ನು  ನೋಡಿ ನಾವೇ ಚಿತ್ರ ಬಿಡಿಸಿದಂತೆ ಬೀಗುತ್ತಾ ನಾವು ಮುಂದೆ ಮುಂದೆ ಸಾಗುತ್ತಿದ್ದೆವು. 

ನಮ್ಮಂಥ ಸತ್ಪ್ರಜೆಗಳನ್ನು ಯಾವುದೇ ಮುಲಾಜಿಲ್ಲದೆ ಕ್ಯೂ ನಿಲ್ಲಿಸುವುದೂ ಅಲ್ಲದೆ ನಮ್ಮನ್ನು  ಶರಣಾಗುವಂತೆ ನಿಲ್ಲಿಸಿ ಇಡೀ ದೇಹವನ್ನೇ ಸ್ಕ್ಯಾನ್ ಮಾಡಿದ್ದೂ ಅಲ್ಲದೆ… ನಮ್ಮ ಸಕಲೆಂಟು ಆಭರಣಗಳನ್ನು ಮೂಲೆಗುಂಪು ಮಾಡಿದ್ದೂ ಅಲ್ಲದೆ… ನಮ್ಮ ತಿಜೋರಿಯ ಬಾಯಿ ಕಳೆದು ಅದರೊಳಗಿದ್ದ ನಮ್ಮ ಹೂರಣವನ್ನು ಬಗೆದು ನೋಡುವ ಬಗೆಗೆ ನಾವು ವಿಮಾನ ನಿಲ್ದಾಣದಿಂದಲೇ ಪರಿಣಿತಿ ಹೊಂದಿದ್ದೆವಾದರೂ ಕೇವಲ ನಮ್ಮ ಕತ್ತಲ್ಲಿ ತೂಗುಬಿದ್ದಿದ್ದ ಅವರು ದಯಪಾಲಿಸಿದ್ದ  ಒಂದು ಪ್ಲಾಸ್ಟಿಕ್ ಕಾರ್ಡ್ನ ಮೂಲಕ ಅವರ ದೇಶದ ಅಗಾಧವಾದ ವಿಭಿನ್ನ ಲೋಕಕ್ಕೆ ನಮ್ಮನ್ನು ಹರಿಬಿಡುತ್ತಿದ್ದರು. 

ನಮ್ಮ ದೇಶದಲ್ಲಿ ಹೆಸರಿನಿಂದಲೇ ತಲೆಯೆತ್ತಿ ಓಡಾಡುವ ಪ್ರಜೆಗಳಾದಂಥವರ ಮುಖದಲ್ಲಿಯೂ  ತಮ್ಮ ಗುರುತಿನವರು ಯಾರಾದರೂ ಸಿಕ್ಕಿದ್ದೇ ತಮ್ಮನ್ನು ಗುರುತಿಸಿ ಕಂಡುಹಿಡಿದಾರೇನೋ ಎಂಬ ಒಳಾಸೆಗಳು ಇದ್ದರೂ ಆ ಅಪರಿಚಿತತೆಯ ಒಳಗೆ ಎಲ್ಲರೂ ಕಳೆದುಹೋಗುತ್ತಲೇ ಹೊಸಲೋಕದ ವಿಸ್ಮಯಗಳನ್ನು ಕಣ್ಣಲ್ಲಿ ದಾಖಲಿಸುತ್ತಾ ಆಗುತ್ತ ನಡೆದಂತೆ ಆ ಹಾಸಿದ ರೆಡ್ ಕಾರ್ಪೆಟ್ ಹಾಸುಗಳು ಒಂದು ನಿರ್ಭಿಡೆಯನ್ನು ನಮ್ಮೊಳಗೆ ಹುಟ್ಟು ಹಾಕುತ್ತಿದ್ದುದಂತೂ ಸುಳ್ಳಲ್ಲ. 

ನಡೆಯುತ್ತ ನಡೆಯುತ್ತಾ ಅಲ್ಲಿನ ಚಂದೊಳ್ಳಿ ಚೆಲುವೆಯರಲ್ಲದೆ ಅಲ್ಲಿನ ಕಾವಲುಗಾರರಾದಿಯಾಗಿ  ಎಲ್ಲರೂ ಹೊಳೆಯುವ ತಮ್ಮ ಬಣ್ಣಕ್ಕೆ ಕಪ್ಪು ಸೂಟಿನ ಉಡುಗೆ ಧರಿಸಿ ನಿಂತು ಬಾಗುವ ಚೆಂದಕ್ಕೆ ಮರುಳಾಗಿ ಛಟಪಟನೆ ಅವರು ಓಡಾಡುವ ಭರಸಿನ ನಡುವೆ ನಮ್ಮ ಭಾರತದವರನ್ನು ಅಲ್ಲೇನಾದರೂ ಕಂಡರೆ ಬೀಗಿಬಿದ್ದು ನಮ್ಮೂರಿನ ಯಾವುದೇ ಭಾಷೆಯಲ್ಲಿ ಅವರು ಮಾತನ್ನಾ ಡಿದರೂ ಸಹ ಜೈ ಭಾರತ್ ಮಹಾನ್ ಎಂದು ಕೊಳ್ಳುತ್ತಿರುವಾಗಲೇ ಅವರ ಕಾರ್ಯಭಾರದಲ್ಲವರು ಅವಸರವಸರವಾಗಿ ಕಳಚಿಕೊಂಡು ಬಿಡುತ್ತಿದ್ದರು. ಅವರಿಗೆ ಬೇಕಾದ್ದನ್ನು ತಡಕುವ ಉದ್ದೇಶದಿಂದ ಅವರು ಮುಂದೆ ಸಾಗಿ ಹೋದಾಗ ನಾವು ಬಂದ ಉದ್ದೇಶಕ್ಕಾಗಿ ಎಚ್ಛೆತ್ತುಕೊಳ್ಳುತ್ತಿದ್ದೆವು.  

ಭಾರತ ದೇಶದ ಸಿನಿ ಮಾರುಕಟ್ಟೆಯ ಮಳಿಗೆಗಳ ನಡುವೆ ನಮ್ಮೂರಿನ ಹೆಸರಾಂತ ಸಿನಿಮಾ ಪೋಸ್ಟರ್ ನಡುವೆ ನಮ್ಮ ‘ತಿಥಿ”ಯ ಗಡ್ಡಪ್ಪನೂ ಆ ಪೋಸ್ಟರ್ನ ತಿರುಗಣೆಯಲ್ಲಿ ತಿರುಗುವದನ್ನ ಕಂಡು ನಮ್ಮೂರಿನ ಕುರಿ ಕಾಯುವ ಬಯಲು ನೆನಪಾಗಿ ಒಮ್ಮೆ ಮನಸ್ಸು ಯೋಚನೆಗೊಳಗಾಯಿತು. ನಮ್ಮೂರಿನ ಗಡ್ಡಪ್ಪನ ಬದುಕು ಬಯಲಿಂದ ರೆಡ್ ಕಾರ್ಪೆಟ್ ಏರಿಯಾಕೆ ಬಂದು ಕೇನ್ಸ್ ಫೆಸ್ಟಿವಲ್ ನೋಡುಗರ ಕಣ್ಣ ಗೊಂಬೆಯಾಗಿ ಕುಳಿತ ಒಂದು ಛೆಂದಕ್ಕೆ ನಾವು ಮೋಹಗೊಂಡು ಮೊಬೈಲ್ನಲ್ಲಿ ಅದನ್ನು ಸೆರೆ ಹಾಕಿದೆವು.

ಗಡ್ಡಪ್ಪನೂ ಹೆಂಡತಿ ಕೈಲಿ ಮೂತಿ ತಿವಿಸಿಕೊಂಡು “ಹೋಗ್ ಮೂದೇವಿ” ಅಂತ ಬಾರೆ ಮ್ಯಾಕೆ ಕುರಿ ಕರ ಮರಿ ಬಿಟ್ಕಂಡು ಹೋಗೋದು ಬಿಟ್ಟು ಈಗ ಸೊಸೇರ ಕೈಲಿ ಬಟ್ಟೆ ಮಡಿ ಮಾಡಿಸ್ಕಂಡು ಚಿನಿಮಾ ತೆಗ್ಯೋರ ಹಿಂದೆ ಶೂಟಿಂಗ್ಗೆ ಹೋಗೋ ಚೆಂದವ ಅವರ ಊರೋರು ನೋಡತಾ ನಿಂತ್ಕಂತರಂತೆ ಅನ್ನೋ ಸುದ್ದೀನ ಮಂಡ್ಯದವರು ಮಾತಾಡ್ಕಂತರೆ ಅಂತ ಗಡ್ಡಪ್ಪನ ನೆಂಟರ ಹುಡುಗ ಹೇಳಿದ್ದು ನೆನಪಾಯಿತು. ಗಡ್ಡಪ್ಪನ ನಾಷ್ಟಾ ಸುದ್ಧಿ ನೆನೆದು ಹಂಗೆ ಒಂದು ಕಿರುನಗೆಯೂ ತೇಲಿಬಂತು. 

“ಬೆಳ್ಬೆಳ್ಗೆ ಹಿಟ್ಟ ತಟ್ಟೆ ಒಳಿಗೆ ಉಳ್ಳಿಸಿದ್ತೀರಲ್ಲಮ್ಮಿ….ಇನ್ನೂ ಮುದ್ದೆ ಮುರಿಯನೆ ನಾನು. ಶೂಟಿಂಗ್ನೋರು ಬಿಸ್ಬಿಸಿ ಇಡ್ಲಿ, ದೋಸೆ, ಪೂರಿಯ ಹೆಂಗ್ ಕೊಡ್ತರೆ ಗೊತ್ತೆ ನಂಗೆ. ಹೊತ್ನಂತೆ ಎದ್ದು ಮಾಡಕ್ಕೆ ಕಷ್ಟವೇ…ನಿಮ್ಗೆ. ನಾನು, ನಾಕು ಕಾಸು ಸಂಪಾದ್ನೆ ಮಾಡುದ್ ಯಾಕೆ? ಅಂದೀರಿ…” ಅಂತ ಸೊಸೇರಿಗೆ ರೇಗುದ್ದ ಕಂಡು ಅವರು ಮುಸಿಮುಸಿ ನಕ್ಕು ಮೂಗು ಮುರಿತರಂತೆ.  

ನಮ್ಮೂರಿನ ಇಂಥ ಹುಡಿಪುಡಿ ನೆನಪಲ್ಲೇ ಮುಂದೆ ಹೋಗಿ ಡೈನಿಂಗ್ ಏರಿಯಾ ತಲುಪಿ ಅಲ್ಲಿ ಒಟ್ಟಿದ್ದ ಬ್ರೆಡ್ ತುಂಡು, ಊರಗಲದ ಗಾಜು ಕಪಾಟಲ್ಲಿ ಜೋಡಿಸಿಟ್ಟಿದ್ದ ಅರೆಬೆಂದ ಮಾಂಸದ ತುಂಡುಗಳ ಹಸಿ ತರಕಾರಿಗಳ ಮೆರವಣಿಗೆ ಕಂಡದ್ದೇ ಹಸಿವೆಗಿಂತ ವಾಕರಿಕೆ ಹೆಚ್ಚಾಗಿ, ಖಾರವಿಲ್ಲದೆ, ಉಪ್ಪಿಲ್ಲದೆ ಈ ಜನ ಹೆಂಗೆ ಬದುಕ್ತಾರಪ್ಪಾ! ಅಂತ ಯೋಚನೆ ಬರುವುದರ ಜೊತೆಗೆ ನಮ್ಮ ಊಟ ಇವ್ರಿಗೆ ಖಂಡಿತ ಇಷ್ಟ ಆಗಬಹುದು ಆಂತ ಬಲವಾಗಿ ಅನ್ನಿಸಿತು.  

ಮನಸ್ಸು ಒಲ್ಲೆ ಅಂದರೂ ಕಾಫಿ ಬಿಸ್ಕತ್ತು ತಗೊಂಡು ಅವರತ್ರ ಹಾಲು ಬೇಡಿ ತಣ್ಣಗಿರೋ ಪೊಟ್ಟಣದ ಹಾಲು ಬಿಡಿಸಿಕೊಂಡು ಇತ್ತಲಾಗೇ ಬಿಸಿನೂ ಅಲ್ಲದ ಅತ್ತಲಾಗೆ ತಣ್ಣಗೂ ಅಲ್ಲದ ಅರೆಬೆಚ್ಚನೆ ಕಾಫಿಯ ಘಾಟು ಹೀರಿ ನಮ್ಮವರೊಬ್ಬರನ್ನು ಮೀಟ್ ಮಾಡಿ, ಅವರಿಂದ ಸಿನಿಮಾ ಜಗತ್ತಿನಲ್ಲಿ ಅಡ್ಡಾಡುವ ಜಾಗಗಳ ತಿಳುವಳಿಕೆಯ ಜೊತೆಗೆ ಅವರ ಹಿತವಾದ ಕಿವಿ ಮಾತೊಂದನ್ನು ಕೇಳಿಸಿಕೊಂಡೆವು… 

ಇಂಡಿಯನ್ ಪೆವಿಲಿಯನ್ 

ಅಲ್ಲಿ ಇಂಡಿಯನ್ ಪೆವಿಲಿಯನ್ ಕಡೆ ಹೋದ್ರೆ ನಮಗೆ ನೀರು ಕಾಫಿ ಟೀ ವ್ಯವಸ್ಥೆ ಇರುವುದಾಗಿಯೂ ಹಾಗೇ  

ಎದುರಿಗಿನ ಹೋಟೆಲ್ಲಿನ ಲಾಂಜನಲ್ಲಿ ನಮ್ಮ ಇಂಡಿಯಾ ಸಿನಿಮಾ ಜಗತ್ತಿನ ಚರ್ಚೆಗಳು ನಡೆವುದಾಗಿಯೂ ಹೇಳಿದರು. ಅಲ್ಲಿ ಅವರಿವರು ಕೆಲವು ಗುರುತಿನವರು ಸಿಕ್ಕರೂ ಎಲ್ಲರೂ ಅವರವರ ಜಗತ್ತಿನಲ್ಲಿ ಗಮನ ಸೆಳೆಯಲು ಓಡಾಡುತ್ತಿರುವ ಬೆಡಗು ಹಾಗೂ ತಮ್ಮ ಕಾರ್ಯಾಚರಣೆಯಲ್ಲಿ ಬಿಸಿಯಾಗಿರುತಿದ್ದ ಜಗತ್ತನ್ನು ಕಟ್ಟಿಕೊಂಡವರಂತೆ ಕಂಡರು. ನಾವು ಅದನ್ನು ಗಮನಿಸುತ್ತಲೇ ಅಲ್ಲಿ ಇರುವ ವ್ಯವಸ್ಥೆಯನ್ನು ತಕ್ಕಮಟ್ಟಿಗೆ ಉಪಯೋಗಿಸುವತ್ತ ಗಮನ ಹರಿಸಿದೆವು.

ಆ ದಿನದ ಮಧ್ಯಾಹ್ನದ ಊಟದ ವ್ಯವಸ್ಥೆಯಂತೂ ಸದ್ಯಕ್ಕೆ ಪರಿಹಾರವಾಗಿದ್ದೂ ಅಲ್ಲದೆ ಅಲ್ಲಿನ ನಡೆಯುವ ಸಿನಿಮಾ ಚರ್ಚೆಗಳು ಉತ್ತೇಜನಕಾರಿಯಾಗಿದ್ದವು. ಆದರೆ ಅಲ್ಲಲ್ಲೇ ಕೊಡುವ ಸಣ್ಣ ಉಪಹಾರದ ಸಿಹಿತಿಂಡಿಗಳು ಉತ್ತರ ಭಾರತದ ಸಿಹಿಯ ಮೋಹವನ್ನು ತೋರಿಸುತ್ತಿದವು. ಎದುರಿನ ಅದ್ದೂರಿ ಹೋಟೆಲ್ಲಿನಲ್ಲಿ ಸಿನಿಮಾ ಚರ್ಚೆಯ ಜೊತೆಗೇ ಇಟ್ಟ ಭಾರತೀಯರ  ಬಗೆಬಗೆಯ ಅಡುಗೆಗಳು ಹೋದ ನಾಕೈದು ದಿನದಲ್ಲಿ ಕೆಟ್ಟು ಕೆರ ಹಿಡಿದಿದ್ದ ನಾಲಗೆಗೆ ಹೊಸ ಚೈತನ್ಯ ನೀಡಿದ್ದೂ ಅಲ್ಲದೆ ಅಂದಿನ ಇಳಿ ಸಂಜೆಯಲ್ಲಿ ಕಾನ್ ಎಂಬ ಸಣ್ಣ ಭೂಭಾಗದಲ್ಲಿ ೭೦ ವರ್ಷಗಳ ಕಾನ್ ಸಿನಿಮಾ ಇತಿಹಾಸದಲ್ಲಿ ತಮ್ಮ ಬಾವುಟಗಳನ್ನು ಹಾರಿಸಿದ ಅಭಿವೃದ್ಧಿ ದೇಶದ ನಡುವೆ ಇಂಡಿಯಾದ ಬಾವುಟವೂ ಹಾರಿದ್ದಂತ ನಮ್ಮ ಇಂಡಿಯನ್ ಪೆವಿಲಿಯನ್ನಲ್ಲಿ ಒಬ್ಬ ಜರ್ಮನಿಯ ಡೈರೆಕ್ಟರ್ ನಡುವೆ ಮಾತುಕತೆಯಾಗುತಿತ್ತು. ಅದರಲ್ಲಿ ನಾವೂ ಕಿವಿ ತೆರೆದು ಕೂತೆವು. 

ನಡುನಡುವೆ  ಕಾಫಿ ನೀರು ಸೀ ತಿಂಡಿಗಳನ್ನು ಹಿಡಿದು ಓಡಾಡುತ್ತಿದ್ದ ಚೆಂದದ ಪರಿಚಾರಿಕೆಯರ ಟ್ರೇನಲ್ಲಿ

ಒಂದೇ ಒಂದು ಸಣ್ಣ ಜಾಮೂನು ಹಿಡಿಸುವಂಥ ಬಟ್ಟಲಿನಲ್ಲಿ ಕೊಟ್ಟ ಇನ್ನೊಂದು ಹೊಸ ತಿಂಡಿಯನ್ನು ನೋಡಿದ್ದೇ ಇನ್ನೊಮ್ಮೆ ಕಣ್ಣರಳಿಸಿದೆವು. ಹೊಟ್ಟೆ ಹುಣ್ಣಾಗುವಂತೆ ನಗು ತುಟಿ ಮೇಲಕ್ಕೆ ಬಂದಿಳಿಯಿತು. ಯಾಕೆಂದರೆ ಎರಡು ಚಮಚೆ ಅನ್ನಕ್ಕೆ ಒಂದು ಚಮಚೆ ಬಟಾಣಿ ಆಲೂಗೆಡ್ಡೆ ಗೊಜ್ಜು ಹಾಕಿತ್ತು. ಒಂದೇ ಒಂದು ತುತ್ತು ಅನ್ನಕ್ಕೆ ಸಣ್ಣ ಬಟ್ಟಲಿನ ಅಂದ ಹಾಗೂ ಮುಳ್ಳು ಚಮಚೆಯ ಅಲಂಕಾರ ಬೇರೆ…..

ಬಾಯಿಗೆ ಹಾಕಿಕೊಂಡೆವು. ಅದರಲ್ಲಿದ್ದ ಒಂದೊಂದೇ ಅಗುಳುಗಳನ್ನೂ ಅಗಿದು ತಿಂದೆವು. ಅವರು ಕೊಟ್ಟಿದ್ದ ಚಿನ್ನಾರಿ ಫೋರ್ಕಲ್ಲಿ ಎರಡಕ್ಕಿಂತ ಹೆಚ್ಚು ಬಾಯಿಗೆ ಬರುತ್ತಿರಲಿಲ್ಲ. ಬಾಸುಮತಿ ಅನ್ನದ ರುಚಿಗೆ ಇನ್ನೊಂದು ಬಟ್ಟಲು ತೆಗೆದುಕೊಂಡು ತಿಂದೆವು. ರಾವಣನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆ ! ಎರಡು ಬಟ್ಟಲ ಅನ್ನ ಸೇರಿದರೆ ಆರು ತಿಂಗಳಿನ ಕೂಸಿಗೆ ಉಣ್ಣಿಸುವ ಒಂದು ಮಿದಿಕೆ ಅನ್ನ. 

ಸಿನಿಮಾ ಚರ್ಚೆಯಲ್ಲಿಳಿದ ತವರ ನೆನಪು 

ಸಿನಿಮಾ ಚರ್ಚೆಯನ್ನು  ಕೇಳಿಸಿಕೊಳ್ಳುತ್ತಿದ್ದ ಕಿವಿಯ ಆಲೆ ಹಾಗೂ ಮನಸ್ಸು ಹಿಂದಕ್ಕೆ ತಿರುಗಿ ನೋಡಿತು. ನಲವತ್ತು ವರುಷದ ಹಿಂದೆ ಇದೇ ಒಂದು ಹಿಡಿ ಅನ್ನಕ್ಕಾಗಿ ಅಡಿಗೆ ಮನೆ ಕಿಟಕಿಯಲ್ಲಿ ತೂಗಿ ಬಿದ್ದ ಮಕ್ಕಳ ತಾಯಂದಿರ ಸ್ವರಗಳು….. ಕೈಗಳು, ಅನ್ನ ಬಸಿಯುವ ತಪ್ಪಲೆಯನ್ನೇ ಕಾಯುತ್ತಾ  ಹೊರಗಿನ ಗೋಡೆ ದಿಂಡಿಗೆ ಒದೆಕೊಟ್ಟು ನಿಲ್ಲುತ್ತಿದ್ದ ಕಾಲುಗಳು. ಆ ಸಣ್ಣ  ಕಿಡಕಿಯಲ್ಲಿ ನಾಕಾರು ತಲೆಗಳು. ಬಟ್ಟಲು ಹಿಡಿದ ಅವರ ಕೈಗಳು. 

“ಅನ್ನ ಬಸಿಯಕ್ಕೂ ಬಿಡಕ್ಕುಲ್ವಲ್ರೇ ನಿಮ್ಮನಿಕ್ಕಾಯೋಗ “ ಅನ್ನುವ ಅವ್ವನ ಮಾತಿಗೇ ತಿರುಮಂತ್ರವಿಡುತ್ತಿದ್ದ ಅವರ ಮಾತುಗಳು. 

“ಕಳೆ ಕೀಳ ನುಂಬ ಅರ್ಧಕ್ಕೆ ಬಿಟ್ಬಂದೀವಿ ಕಣಿ, ನಿಮ್ಮತ್ತೆಮ್ಮರ ಕೈಲಿ ತಡ ಮಾಡಕಂಡು ಹೋಗಿ ಕೊಟಕ ಕೊಟಕನೆ ಬೈಸ್ಕಳರು ಯಾರೀ….” ಅನ್ನುವ ಅವರ ಮಾತಿಗೆ ಅರಳಕ್ಕಿಟ್ಟ ಅನ್ನವನ್ನ ಕಿಟಕಿಯ ಸರಳಿನ ನಡುವೆ ದೊಡ್ಡ ಸೊಟಕದಲ್ಲಿ ತೂರಿಸಿ ಬಟ್ಟಲಿಗೆ ಹಾಕುತ್ತಿದ್ದ ಅವ್ವ.

“ಸರ್ರನೆ ಮಕ್ಕಳ ಹೊಟ್ಟೆಗುಣ್ಣಿಸಿ ಮೊದ್ಲು ಗದ್ದೆತಕ ಹೋಗಿ” ಅಂತ ನಿರ್ದೇಶಿಸುತಿತ್ತು. 

ಮನೇಲಿ ತಂಗಳು ಇದ್ದದ್ದನ್ನು ಉಂಡು ಕೆಲಸಕ್ಕೆ ಬರುತ್ತಿದ್ದ ನಮ್ಮೂರ ಆಳುಮಕ್ಕಳು ಮಕ್ಕಳಿಗಾಗಿ ಬಿಸಿಲೇರು ಹೊತ್ತಿನಲ್ಲಿ ಬಿಸಿ ಅನ್ನವನ್ನು ಹಾಕಿಸಿಕೊಂಡು ಹೋಗುತ್ತಿದ್ದರು. ನೆಲದಿಂದ ಎತ್ತರದಲ್ಲಿದ್ದ ಅಡಿಗೆ ಮನೆಯ ಆ ಕಿಟಕಿಯನ್ನೇರಿ ನಾಕಾರು ಬಟ್ಟಲು ಹಿಡಿದು ನಿಲ್ಲುತ್ತಿದ್ದ ಮುಖಗಳು ಇನ್ನು ಮನದಲ್ಲಿ ಹಾಗೇ ನೇತು ಹಾಕಿಕೊಂಡಿವೆ. 

ಮೂರರಿಂದ ಆರು ಸೇರು ಬೇಯುವ ಆ ತಪ್ಪಲೆಗಳಲ್ಲಿ ಕುದಿಯುತ್ತಿದ್ದ ಅನ್ನ ಗಂಜಿ ಬಸಿದು ನಿರಾಳವಾಗಿ ಕೆಂಡದ ಮೇಲೆ ಅರಳಿ ಹೂವಾಗುವ ವೇಳೆಗೆ ಈ ಅನ್ನದಾನದ ಪಟ್ಟಿಯೂ ಸೇರಿ ಅಲ್ಲೇ ಅರ್ಧ ಸೇರಕ್ಕಿ ಅನ್ನ ಖಾಲಿಯಾಗುತಿತ್ತು. ಉಳಿದದ್ದು ಮತ್ತೆ ಕೆಂಡದ ಕಾವಿಗೆ ಮುಚ್ಚಿದ ಮುಚ್ಚಳದ ಉಬ್ಬಸಕ್ಕೆ ದಮ್ಮುಕಟ್ಟಿ ಹಗುರಾಗುವ ಕಾಯಕದಲ್ಲಿರುತ್ತಿತ್ತು.

ಅಕ್ಕಿ ಮೂಟೆಯ ಅಪ್ಪ, ಅಳಿಮಯ್ಯರ ಸ್ವಾಭಿಮಾನ 

ಅಕ್ಕ ಹಾಸನದ ನನ್ನ ದೊಡ್ಡಮ್ಮನ ಮನೆಯಲ್ಲಿ ಓದಿದವಳಾಗಿದ್ದು ಅವರ ಮನೆಯ ಸಿರಿವಂತ ನಯನಾಜೂಕಿಗೆ ಒಗ್ಗಿದ್ದಳು. ಊರ ಆಡು ಮಾತಿನಂತೆ ಓದಿ ಬೂದಿ ಹಿರಿದು ಡಿಗ್ರಿ ತೆಗೆದುಕೊಂಡು ಬಂದವಳೇ ಬೇಸಾಯದ ನಮ್ಮ ಮನೆಯ ಪಡಿಪಾಟಲನ್ನು ಕಣ್ ಕಣ್ ಬಿಟ್ಟು ನೋಡುತ್ತಾ….  ಸ್ಪಂದಿಸುತ್ತಾ ಎಲ್ಲಾ ಕೆಲಸದ ಒರಟುತನವನ್ನು ಮೈಗೂಡಿಸಿಕೊಳ್ಳುತ್ತ ಮನೆಯ ಏಳಿಗೆಯನ್ನಷ್ಟೇ ಗುರಿಯಾಗಿಸಿಕೊಂಡು ಬೇಸಾಯದ ಕೆಲಸಕ್ಕೂ ಕೈ ಹಾಕಿ ಸೈ ಅನ್ನಿಸಿಕೊಂಡಿದ್ದಳು. ಆದರೆ ಮುದ್ದೆ ಮುರಿಯುವುದನ್ನು ಮಾತ್ರ ಕಲಿಯಲಿಲ್ಲ. ನಮ್ಮ ನಾಡಿನಲ್ಲೂ  ಮುದ್ದೆ  ಊಟಕ್ಕಿಂತ ಅನ್ನವೇ ಮುಖ್ಯವಾಗಿದ್ದರೂ ಕೆಲವು ಸಂಧಿಗ್ಧ ಹಾಗೂ ಮೈ ಬಲಕ್ಕಾಗಿ ಅಲ್ಪಸ್ವಲ್ಪ ರಾಗಿ ಬೆಳೆದು ಇಟ್ಟುಕೊಳ್ಳುತ್ತಿದ್ದರು.

ಹೀಗೆ ಇಟ್ಟುಕೊಂಡ ರಾಗಿ ವರ್ಷದ ಕೊನೆಯಲ್ಲಿ ಒಂದೆರಡು ತಿಂಗಳು ಮುನ್ನವೇ ಮುಗಿದು ಹೋಗುತ್ತಿದ್ದ ಭತ್ತದ ಪರ್ಯಾಯವಾಗಿ ಆಗ ಹೆಚ್ಚು ಬಳಕೆಯಲ್ಲಿರುತಿತ್ತು. ಮನೆ ತಾಪತ್ರಯ ಹೆಚ್ಚಾದಾಗ ವಾಡೆ ಭತ್ತವೇ ಆಧಾರ. ಹಾಗಾಗಿ ಮಾರಿಕೊಳ್ಳಲೇ ಬೇಕಾಗುತಿತ್ತು. ಆ ದಿನದಲ್ಲಿ ವರುಷದ ಕೊನೆಯಲ್ಲಿ ಹೊಸ ಭತ್ತ ಬರುವವರೆಗೂ ಮಿತ ಅನ್ನದ ಜೊತೆಗೆ ರಾಗಿಮುದ್ದೆ ರಾಗಿರೊಟ್ಟಿ ಬಳಕೆ ಹೆಚ್ಚಾಗುತಿತ್ತು. 

ಒಕ್ಕಲು ಮನೆಯಲ್ಲಿ ಆಳುಕಾಳಲ್ಲದೆ ಸಕಲೆಂಟು ಜೀವರಾಶಿಗಳನ್ನು ಕಾಪಾಡಬೇಕು. ಗಿಳಿ ಗೊರವಂಕಗಳಿಂದ…. ಗುಬ್ಬಿ ಕಾಗೆಗಳವರೆಗೂ, ಕೋಳಿಗಳಿಂದ….. ಇಲಿ ಹೆಗ್ಗಣದವರೆಗೂ…… ಬೆಕ್ಕು ನಾಯಿಗಳಿಂದ…..ದನಕರುಗಳುವರೆಗೂ ಉಣಬಡಿಸಿ ಉಳಿದ ಕಾಳು ರೈತನದು. 

ಇಂಥ ಪಡಿಪಾಟಲಲ್ಲಿ ಗದ್ದೆ ಭತ್ತ ಒಡೆಯಾಗುವ ಹೊತ್ತಿಗೆ ವಾಡೇ ತಳದಲ್ಲಿ ಕೂಡಿಟ್ಟ ಭತ್ತ  ತಳ ಸೇರಿರುತ್ತಿತ್ತು. ಅಪ್ಪನ ಕಣ್ತಪ್ಪಿಸಿ ವಾಡೇ ತಳದಲ್ಲಿ ಮತ್ತೊಂದು ಛಾಪೆಯನ್ನು ಹಾಸಿ ಕೆಳಗೆ ಕಾಣದಂತೆ ಅವ್ವ ಹಾಕಿಸಿದ ಗೌಪ್ಯ ಭತ್ತದ ಕಣಜವೂ ಖಾಲಿಯಾಗಿ ಅಲ್ಲಿ ಕೊನೆಗೆ ಕೇವಲ ಗಂಜಲ ಹಾಕಿ ಸಾರಿಸಿದ ನೆಲ ಕೈಗೆ ಸಿಗುತಿತ್ತು. 

ಆಗ ಒಲೆಮೇಲೆ ಅನ್ನದ ದೊಂಬರಾಟ ಶುರು. ವಾಡೆ ತಳದ ಮುಗ್ಗಿದ ಭತ್ತದ ಅನ್ನಕ್ಕೆ ಸಣ್ಣ ಕಿರುಗೈವಾಸನೆಯ ರುಚಿ. ಆಗ ತಾನೆ ಒಡೆಯಾಗಿರುವ ಗದ್ದೆ ಅಂಚಿನ ಭತ್ತ ತಂದು ಕುಟ್ಟಿ ಮಾಡುವ ತಿಳಿಹಸಿರು ಗಂಜಿ ಸುತ್ತಿಕೊಳ್ಳುವ ಅನ್ನ, ಹೀಗೆ…. ಅನ್ನದ ಪರಿಮಳ ಹಾಗೂ ರುಚಿ ಕೊಂಚ ಹದಗೆಟ್ಟಾಗ ಕೂಡ  ಮುದ್ದೆ ಮುರಿಯದ ಅಕ್ಕನನ್ನು ನೋಡಿ  

“ನಿನ್ನನ್ನು ಹೊಲಗಾಡಿನ ಗಂಡಿಗೆ ಕೊರಳು ಕಟ್ತೀನಿ.” ಅಂತ ಅಪ್ಪ ಅನ್ನೋದಂತೆ.

ಹಾಗೆ…..  ಭಾವನ ವಿದ್ಯೆಬುದ್ಧಿಗೆ ಬೆರಗಾಗಿ ವಿದ್ಯಾವಂತೆ ಮಗಳನ್ನ ಕೊಟ್ಟು ಅಪ್ಪ ಅಕ್ಕನನ್ನು ಮದುವೆ ಮಾಡಿದಾಗ ಅವರ ಮನೆಯ ಹೊಲಗಾಡನ್ನು ನೋಡಿ ಅಣ್ಣತಮ್ಮರ ಮನೆಯವರೆಲ್ಲ ಆ ಮಾತನ್ನು ನೆನೆನೆನೆದು ನಕ್ಕಿದ್ದರು. ಅಪ್ಪನ ಮಾತು ನಿಜ ಆಗಿತ್ತು. 

ಹೀಗೇ ಅಪ್ಪನ ಸರಕಾರೀ ಕೆಲಸದ ಅಳಿಯ ಮನೆ ಮಾಡಿದರು ಹಾಸನದಲ್ಲಿ. ಭಾವನೂರು ಹೊಲಗಾಡಾದರೂ ಕಾಳುಕಡ್ಡಿ ಸಂಬಾರದ ಸಮ್ರುದ್ಧಿ ಅವರ ಮನೆಯಲ್ಲಿ. ಆ ಕಾಳುಕಡ್ಡಿ ನಮ್ಮೂರಿಗೂ ಅವರೊಂದಿಗೆ ಬರುತ್ತಿತ್ತು. ಅವರೂರಲ್ಲಿ ಮಳೆ ಆದಾಗ ಮಾತ್ರ ಬೆಳೆಯುವ ಅಕ್ಕಿಗೆ ಸ್ವಲ್ಪ ಕೈ ಹಿಡಿತ.  ಅವರತ್ತೆ ನಿಧಾನವಾಗಿ ತಟ್ಟೆಗೆ ಮುದ್ದೆ ಮುರಿದು ಹಾಕುತ್ತಾ ಅಕ್ಕನಿಗೆ ಮುದ್ದೆ ಗುಕ್ಕು ನುಂಗುವುದನ್ನೂ ಕಲಿಸಿದರು. 

ಇಂತಿಪ್ಪ ಅಕ್ಕನ ಸಂಸಾರ ಕಂಡು ಬರಲು ಅಪ್ಪ ಅವರ ಮನೆಗೆ ಹೋದಾಗೊಮ್ಮೆ ಭಾವ ಅಂಗಡಿ ಅಕ್ಕಿ ತಂದಿದ್ದು ಇವರಿಗೆ ತಿಳಿದಿದೆ. ಊರ ತುಂಬ ಗದ್ದೆ ಇಟ್ಟುಕೊಂಡು ದಿನಕ್ಕೆ ಸೇರುಗಟ್ಟಲೇ ಅಕ್ಕಿ ಬೇಯುವ ತನ್ನ ಮನೇಮಗಳು ಕೊಂಡ ಅಕ್ಕಿ ಉಣ್ಣಬಹುದೇ… ಅಪ್ಪನ ಕಣ್ಣೆದುರಲ್ಲಿ. ಮಾರನೇ ದಿನವೇ ಅಪ್ಪನ ಅಕ್ಕಿ ಮೂಟೆ ಊರಿನ ಗಾಡಿಯಲ್ಲಿ ರಸ್ತೆ ಸಾಗಿಸಿ, ಬಸ್ಸನ್ನೇರಿ, ಅಕ್ಕನ ಮನೆಗೆ  ಅಪ್ಪನೊಂದಿಗೆ ಜಟಕಾ ಗಾಡಿಯಲ್ಲಿ ಸವಾರಿ ಮಾಡಿತು. ಆದರೆ…….  ಮುಂದಿನ ತಿಂಗಳಲ್ಲಿ ಅಪ್ಪನ  ಅಕ್ಕಿ ಮೂಟೆ ಸವಾರಿ ಅಪ್ಪನ ಕಣ್ಣೀರಿನೊಂದಿಗೆ ತಿರುಗಿ ಬಂದಿತ್ತು. ಯಾಕೇ ಅಂದ್ರೆ….

ಭಾವ ಮಹಾನ್ ಆದರ್ಶವಾದಿ. ನಯಾ ಪೈಸೆ ಒಡವೆ ಏನನ್ನೂ ಮುಟ್ಟದೆ ಅಕ್ಕನನ್ನು ಮದುವೆ ಮಾಡಿಕೊಂಡಿದ್ದ ಅವರು “ನಿಮ್ಮ ತಂದೆ ತಂದ ಅಕ್ಕಿಯಲ್ಲಿ ನಮ್ಮ ಮನೆಯಲ್ಲಿ ದಿನನಿತ್ಯದ ಅನ್ನ ಆಗುವುದು ಬೇಡ. ನನಗೆ ಸಂಪಾದನೆ ಇದೆ ಎಂದು ನಿಮ್ಮ ತಂದೆಗೆ ಹೇಳಿಬಿಡು” ಎಂದಿದ್ದಾರೆ.

ಆದರೆ “ನೀನೆ ಹೇಳೆ… ಮನೆಮಗಳು ಮನೆಲ್ಲಿ ಬೆಳೆದ ಕಾಳನ್ನ ಹಿಂದಿರುಗಿಸಿ ಅಂಗಡಿ ಅಕ್ಕಿ ಉಣ್ಣಬಹುದೇನೇ?”

ಅವ್ವನ ಬಳಿ ಅಪ್ಪನ ಅಹವಾಲು. ತಟ್ಟೆಯಲ್ಲಿ ಬಿಸಿ ಅನ್ನದ ಮೇಲೆ ಬೆಣ್ಣೆ ಅಪ್ಪನ ಮೆಚ್ಛಿನ ಬಿಸಿಬಿಸಿ ನೀರುಸಾರಿನ ಘಮ ಉಕ್ಕಿ ಹರಿಯುತ್ತಿದ್ದರೂ ಅಪ್ಪನ ಮನಸ್ಸು ಅಕ್ಕನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. 

ಅವ್ವ “ಅಳಿಮಯ್ಯರು ಒಳ್ಳೆದೆ  ಮಾಡಿದಾರೆ, ಬಿಡಿ, ಅವರವರ ಮನೆ ಬದುಕು ಅವರಿಗೇ ದೊಡ್ಡದು. ದುಡದು ತಿಂತೀವಿ ಅನ್ನೋರ ಕೈಯ್ಯ ನಾವೇ ಕಟ್ಟ ಹಾಕೋದ್ಯಾಕೆ?  ನೀವು ಸಾಯತಂಕ ಅನ್ನ ಹಾಕ್ತೀರಾ ಅವ್ರಿಗೆ……. “ ಅಂದಿದ್ದೆ ಅಪ್ಪ ಮೌನವಾಗಿ ಅನ್ನ ಕಲೆಸಿ ಬಾಯಿಗೆ ಹಾಕಿಕೊಳ್ಳುತಿತ್ತು. ಬೆಳಗಿಂದ ಬೆಂದ ಒಲೆ ಕೆಂಡಕ್ಕೆ ಬೂದಿ ಮುಚ್ಛುತಿತ್ತು. 

ಇತ್ತ ಕೇನ್ಸನ ನಮ್ಮ ಇಂಡಿಯನ್ ಪೆವಿಲಿಯನ್ನಿನಲ್ಲಿ ಅರೆಬಟ್ಟೆ ತೊಟ್ಟ ಬೆಡಗಿಯರು ಮುಚ್ಛಳದಂತಿದ್ದ ಅನ್ನ ಕೊಟ್ಟ ಬಟ್ಟಲನ್ನು ಎತ್ತಿ ಡಸ್ಟ್‌ ಬಿನ್ಗೆ ತುಂಬುತ್ತಿದ್ದರು. ಮಧ್ಯ ಮಧ್ಯ ಅವರ ಎಕ್ಸ್ ಕ್ಯೂಸ್ ಮಿ ಪದಗಳಿಗೆ ಜಾಗ ಬಿಡುತ್ತಾ ಹೊರಬಂದ ನಾವು ಮೆಟ್ರೊ ಸ್ಟೇಷನ್ನಿನ ಬಳಿಯಲ್ಲಿದ್ದ ಪಾಕಿಸ್ತಾನಿ ಹೋಟೆಲ್ಲೊಂದನ್ನು ಹುಡುಕಿ ಹೋಗಿ ಅವನ ಕಥೆ ಕೇಳುತ್ತಾ ಬಿರಿಯಾನಿ ತಿಂದೆವು. ಅವನು ಮಾತಾಡುತ್ತಿದ್ದ ಉರ್ದು ಮಿಶ್ರಿತ ಹಿಂದಿ ಭಾಷೆಯೀಗ ನಮ್ಮದೇ ಅನ್ನಿಸುತಿತ್ತು. 

ಬಿರಿಯಾನಿ ಹೋಟೆಲ್ಲಿಗನ ಮೊದಲನೇ ಹೆಂಡತಿ ಪಾಕಿಸ್ತಾನದಲ್ಲಿ ಹೋಟೆಲ್ ನೋಡಿಕೊಳ್ತಾಳಂತೆ. ಅಲ್ಲಿ ಆರು ತಿಂಗಳು, ಇಲ್ಲಿ ಆರು ತಿಂಗಳು ಇರ್ತೀನಿ ಅಂತಂದ ಹೋಟೆಲ್ಲಿಗನ ಎರಡನೇ ಹೆಂಡತಿಯ ಚುರುಕುತನವನ್ನು ನೋಡುತ್ತ ಇಂದು ನಮ್ಮ ಹೊಟ್ಟೆಯಲ್ಲಿ ಅನ್ನದೇವ ಪ್ರಸನ್ನನಾಗಿ ಒರಗಿದ್ದ.

ನಾವು ಮಲಗುವ ಹೊತ್ತಾಯ್ತೆಂದು ನಾವಿಳಿದುಕೊಂಡ ಹೋಟೆಲ್ಲಿಗೆ ಬಂದೆವು. ಇನ್ನೂ ಸಂಜೆಗತ್ತಲು ಕಪ್ಪುಗತ್ತಲೆಗೆ ತಿರುಗಿರಲಿಲ್ಲ. ಅಲ್ಲಿ ರಾತ್ರಿಯಾಗುವುದು ಹತ್ತು ಗಂಟೆಗೆ. ಇನ್ನೂ ಒಂದು ಗಂಟೆ ಸಮಯವಿತ್ತು. ಕಡಲಲೆಯ ಮೊರೆತ ನೋಡುತ್ತ ಕಡಲ ಕಿನಾರೆಯ ದೀಪಗಳು ಮಿನುಗುತ್ತಿದ್ದವು. ಮಬ್ಬುಗತ್ತಲು ಕತ್ತಲನ್ನು ನಿಧನಿಧಾನದಲ್ಲಿ ತಬ್ಬುತ್ತಿತ್ತು. 

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sudha ChidanandaGowda

    ಬೋ ಪಸಂದಾಗೈತೆ ಕಣ್ರಮ್ಮೀ ಈ ಜವಾರಿ ರೈಟಪ್ಪು. ಬಾಲ್ಯದಾಗ ನಮ್ಮಜ್ಜನ ಮನಿ
    ಹೆಣ್ಣಾಳುಗೋಳು ಚಿಳ್ಳಿಪಿಳ್ಳಿ ಕೂಸುಗೋಳ್ನ ಸೊಂಟಕ್ಕೆ ನೇತಾಕ್ಕಂಡು ನಮ್ಮವ್ವ ಅಪರೂಪಕ್ಕ ಮಾಡೋ ಇಡ್ಲಿಚಟ್ನಿಗೆ ಕಲೆಬೀಳ್ತಿದ್ದು ನೆನಪಾಗ್ತೈತಿ. ಮಸ್ತ್ ಬರೀದೀರಿ. ಥ್ಯಾಂಕ್ಸು ಕಣ್ರಮ್ಮೋ ನಿಮಗೂ ಅವಧಿಗೂ.
    ಎಲ್ಲಾನ ದೂರ ಹೋದಾಗ ಅಲ್ವರಾ ನಂ ದೇಸ ನಂ ಭಾಸೆ ಆಪ್ತ ಆಗೋದು..!!
    ಹೀಂಗ ಬರ್ಕೊತಾ ಓದ್ಕಂತಾ ಭೇಷಾಗಿ ಕರೋನಾ ಟೈಂಪಾಸ್ ಮಾಡೋಣ ಹೋಗ್ಲಿ ಅತ್ಲಾಗ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: