ಮೊರೆಯುವ ಕಡಲು, ಕರೆಯುವ ಮೀನು

ದೀಪಾ ಹಿರೇಗುತ್ತಿ

ಕಡಲಿನ ಕಿನಾರೆಯ ಊರಲ್ಲ್ಲಿ ಹುಟ್ಟಿದ ಕಾರಣಕ್ಕೋ ಏನೋ ಕಡಲು ಎಂದರೆ ಮೊದಲಿನಿಂದಲೂ ಸೆಳೆತ ನನಗೆ. ಅಪ್ಪ ಅಮ್ಮನ ಉದ್ಯೋಗದ ಕಾರಣಕ್ಕಾಗಿ ಘಟ್ಟದ ಮೇಲಿನ ಊರಲ್ಲಿ ನೆಲೆಸಿದ್ದ ನಾವು ಕಡಲಿನ ಮಡಿಲಿನಲ್ಲಿರುವ ಮೂಲ ಊರಿಗೆ ಬರುವುದು ವರ್ಷಕ್ಕೆ ಎರಡು ಸಲ ಮಾತ್ರವೇ ಆಗಿತ್ತು. ಎಲ್ಲೇ ಇದ್ದರೂ ಸಮುದ್ರ ನನ್ನ ಜತೆ ಯಾವಾಗಲೂ ಇದ್ದೇ ಇರುತ್ತದೆ ಬಿಡಿ. ಕಾಕತಾಳೀಯವೆಂಬಂತೆ ನನ್ನ ಬಾಲ್ಯದ ಮೊದಲ ಸ್ಪಷ್ಟ ನೆನಪೂ ಕೂಡ ಕಡಲಿನದ್ದೇ.

ನನಗಾಗ ಮೂರು ಮೂರೂವರೆ ವರ್ಷವಿರಬಹುದು. ಕುಮಟಾ ತಾಲೂಕಿನ ಅಳ್ವೇಕೋಡಿ ಎಂಬ ಸಮುದ್ರತಟದ ಊರಲ್ಲಿ ನನ್ನ ದೊಡ್ಡಮ್ಮ ನರ್ಸ್ ಆಗಿದ್ದರು. ಅಮ್ಮ, ದೊಡ್ಡಮ್ಮನ ಜತೆ ಕಡಲ ತೀರದಲ್ಲಿ ಆಟವಾಡುವಾಗ ಕೊಂಚ ಮುಂದೆ ಹೋಗಿಬಿಟ್ಟೆ. ಹೆದ್ದೆರೆಯೊಂದು ಸುಮಾರು ದೂರ ತೆಗೆದುಕೊಂಡು ಹೋಗೇಬಿಟ್ಟಿತು. ದಡದಲ್ಲಿ ಗೊಬ್ಬೆಯೋ ಗೊಬ್ಬೆ. ಆದರೆ ಸಮುದ್ರ ಬಹಳಷ್ಟು ಮಂದಿಗೆ ಎರಡನೇ ಅವಕಾಶ ಕೊಡುತ್ತದೆ ಎಂಬ ನಂಬಿಕೆಯಿದೆ. ಅದೃಷ್ಟವಶಾತ್ ನನಗೂ ಕೊಟ್ಟಿತು. ಹೋದಷ್ಟೇ ವೇಗದಲ್ಲಿ ಮತ್ತೆ ವಾಪಾಸ್ ನನ್ನನ್ನು ದಡಕ್ಕೆ ತಂದಿತು! ಆದರೆ ಕೆಲವೇ ಸೆಕೆಂಡುಗಳ ಕಾಲ ಮಾತ್ರ! 

ಅಮ್ಮ ಮತ್ತು ದೊಡ್ಡಮ್ಮ ಇಬ್ಬರೂ ಕ್ಷಣಾರ್ಧದಲ್ಲಿ ನನ್ನ ಒಂದೊಂದು ಕೈಯ್ಯನ್ನು ಹಿಡಿದುಕೊಳ್ಳದಿದ್ದರೆ ಕಡಲಿನ ನಡುವೆ ಇದ್ದಿರಬಹುದಾದ ಮೋಬಿಡಿಕ್‍ನ ಮರಿಮಕ್ಕಳ ಸಂಬಂಧಿಕರ ಹೊಟ್ಟೆಗೆ ಸೇರಿಹೋಗಿರುತ್ತಿದ್ದೆ! ಅಷ್ಟು ಚಿಕ್ಕ ವಯಸ್ಸಿನ ಈ ಘಟನೆ ಅದು ಹೇಗೆ ನನ್ನ ಮನಃಪಟಲದಲ್ಲಿ ಅಚ್ಚೊತ್ತಿದೆಯೆಂದರೆ ವಿಚಿತ್ರವೆನ್ನಿಸುತ್ತದೆ. ಐದುವರ್ಷದೊಳಗಿನ ಮತ್ಯಾವ ಘಟನೆಯೂ ನನಗೆ ಇಷ್ಟು ಸ್ಪಷ್ಟವಾಗಿ ನೆನಪಿಲ್ಲದಿರುವುದು ಮತ್ತೊಂದು ಅಚ್ಚರಿ.

ಕಡಲು ಎಲ್ಲರಿಗೂ ಆಕರ್ಷಣೆಯ ಕೇಂದ್ರವೇ. ಆದರೆ ಕಡಲುನಾಡಿನವರ ಎದೆಯಲ್ಲಿ ಸಮುದ್ರ ಸದಾ ಮೊರೆಯುತ್ತಿರುತ್ತದೆ. ಮರಳ ತೀರದಲ್ಲಿ ಬರೆದ ಹೆಸರುಗಳು ಕಲ್ಲಿನಲಿ ಕೆತ್ತಿದ ಅಕ್ಷರಗಳಿಗಿಂತ ಸ್ಫುಟವಾಗಿಯೂ, ಕಟ್ಟಿದ ಗುಬ್ಬಿಗೂಡುಗಳು ಮಹಲಿಗಿಂತ ವಿಶಿಷ್ಟವಾಗಿಯೂ ತೆರೆಗಳ ನಿರಂತರ ಹಿನ್ನೆಲೆ ಸಂಗೀತದೊಂದಿಗೆ ಸದಾ ಕಾಡುತ್ತಲೇ ಇರುತ್ತವೆ.

ಕಡಲಿನ ಅಲೆಗಳ ಜತೆ ಕುಸ್ತಿಯಾಡಿ ಗೆದ್ದು ಬರುವ ಕಾಲ್ಪನಿಕ ಪಾತ್ರಗಳೆಂದರೆ ಜನರಿಗೆ ಬಲುಪ್ರೀತಿ. ಮನುಷ್ಯನನ್ನು ನಾಶ ಮಾಡಬಹುದು ಆದರೆ ಸೋಲಿಸಲಾಗದು ಎಂದ ಸ್ಯಾಂಟಿಯಾಗೋ  ನಮ್ಮನ್ನೂ ಮುನ್ನಡೆಯಲು ಪ್ರೋತ್ಸಾಹಿಸುತ್ತಾನೆ. ಸುತ್ತಲಿನವರೆಲ್ಲರೂ ಮಣಿಸಲು ಅಸಾಧ್ಯ ಎಂದರೂ ಹದಿನಾಲ್ಕು ವರ್ಷಗಳ ಕಾಲ ಸಮುದ್ರದ ಜತೆ ಗುದ್ದಾಡಿ ಕಂಬಳಿಹುಳುವಿನಿಂದ ಚಿಟ್ಟೆಯಾದ ಹೆನ್ರಿ ಶರಾರೇ ಹುರುಪು ತುಂಬುತ್ತಾನೆ. ಈ ಕಡಲಿನ ಹಾಡು ತನ್ನನ್ನು ತಾನು ಹಡಗಿನ ಕಂಬಕ್ಕೆ ಕಟ್ಟಿಕೊಂಡ ಯೂಲಿಸಸ್‍ನಂತೆ ತನ್ನ ಮೇಲೆ ವಿಜಯ ಸಾಧಿಸಲೂ ಅನುವು ಮಾಡಿಕೊಡುತ್ತದೆ, ಅವನದ್ದೇ ಸೈನಿಕರಂತೆ ಮನೆ ಮಠ ಬಿಟ್ಟು ತನ್ನ ತಡಿಯಲ್ಲೇ ಗುಡಾರ ಹಾಕಿಕೊಂಡು ಬದುಕು ಕಳೆಯುವಂತೆಯೂ ಮಾಡಿಬಿಡುತ್ತದೆ!

ಯುಲಿಸಸ್‍ನಂತೆ ಹೆಂಡತಿಯನ್ನು ಎದೆಯೊಳಗಿಟ್ಟುಕೊಂಡೇ ಇರುವವರನ್ನು ನೋಡಿರುವ ಸಮುದ್ರ ಪಯಣದುದ್ದಕ್ಕೂ ಅವಳ ನೆನಪೂ ಆಗದ ಗಲಿವರನ ಸಂತತಿಯನ್ನೂ ಮೌನವಾಗೇ ವೀಕ್ಷಿಸಿದೆ! ಅದಕ್ಕೇ ಪರ್ವತ ಕಾಡುಗಳಂತೆ ನಮಗೆ ನಮ್ಮ ಶಕ್ತಿಯನ್ನೂ, ಮಿತಿಯನ್ನೂ ಒಟ್ಟಿಗೆ ತೋರಿಸಿಕೊಡುವ ಮತ್ತೊಂದು ಗುರುವೆಂದರೆ ಕಡಲು. ಶತಮಾನಗಳಿಂದ ನಿರಂತರವಾಗಿ ಮೊರೆಯುತ್ತ ದಡದ ಬಂಡೆಗಲ್ಲುಗಳಿಗೆ ಬಡಿಯುತ್ತಲೇ ಇರುವ ಕಡಲು ಕಲಿಸುವ ಪಾಠಗಳು ಅಷ್ಟಕ್ಕೇ ಸೀಮಿತವಾಗಿಲ್ಲ. ನೀರು ಕಲ್ಲನ್ನು ಕರಗಿಸಬಹುದು ಎಂಬ ಅಸಾಧ್ಯ ಸಂಗತಿಯನ್ನೂ ಸುಳ್ಳಾಗಿಸಿದ ಸಮುದ್ರದ ಸತತ ಪ್ರಯತ್ನ ಫಲಕೊಟ್ಟುದ್ದಕ್ಕೆ ಸಾಕ್ಷಿಯ ತುಣುಕುಗಳು ಜಗತ್ತಿನ ಎಲ್ಲ ಕಡಲ ತೀರಗಳ ಸವೆದ ಬಂಡೆಯ ಮೇಲೆ ಚದುರಿಹೋಗಿವೆ.

ಹೆಸರಿಗೆ ಮಾತ್ರ ನೀನು ಕರಾವಳಿಯವಳು ಎಂದು ಪರಿಚಿತರು ತಮಾಷೆ ಮಾಡುವುದಿದೆ. ವರ್ಷದಲ್ಲಿ ಮೂರು ತಿಂಗಳು ಮಾತ್ರ ಕರಾವಳಿಯಲ್ಲಿರುತ್ತಿದ್ದ ನನ್ನನ್ನು ಸಹಿಸಲಸಾಧ್ಯವಾದ ಸೆಕೆ ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಿತ್ತು. ಈಗಲೂ ಒಂದು ದಿನ ಘಟ್ಟದ ಕೆಳಗೆ ಕಳೆಯುವುದನ್ನು ಯೋಚಿಸಿದರೇ ಬೆವೆತುಬಿಡುತ್ತೇನೆ. ಅಂತಹ ಅಸಾಧ್ಯ ಸೆಕೆ ಕರಾವಳಿಯಲ್ಲಿ. ದಿನಕ್ಕೆ ಮೂರು ಬಾರಿ ತಣ್ಣೀರ ಸ್ನಾನ, ಬರೀ ನೆಲದ ಮೇಲೆ ಮಲಗುವುದು, ಸಾಲದೆಂಬಂತೆ ಒದ್ದೆ ಟವಲ್ ಬೇರೆ ಮೈಮೇಲೆ!   

ಆದರೆ ನಾನು ಅಪ್ಪಟ ಕರಾವಳಿಯವಳೇ ಎಂಬುದಕ್ಕೆ ಬಲವಾದ ಸಾಕ್ಷಿಯೊಂದಿದೆ. ಅದು ನನ್ನ ಮೀನು ಪ್ರೀತಿ. ನಾನು ಧಾರವಾಡದಲ್ಲಿ ಎಂಎ ಪದವಿ ಓದುವಾಗ ಯಾವುದೋ ಸ್ಪರ್ಧೆಯಲ್ಲಿ ಗೆದ್ದಾಗ ಇರಬೇಕು, ಯೂನಿವರ್ಸಿಟಿಯ ಉದ್ಯೋಗಿಯೊಬ್ಬರು “ನೀವು ಬಿಡ್ರೀ ಕಾರವಾರದ ಮಂದಿ ಭಾಳ ಶಾಣ್ಯಾರು, ಮೀನಿನ ತಲಿ ತಿಂತೀರಲ್ಲ ಅದ್ಕೇ” ಎಂದಿದ್ದರು. ನನ್ನನ್ನು ಬುದ್ಧಿವಂತೆ ಎಂದಿದ್ದಕ್ಕೆ ಖುಶಿಪಡಬೇಕೋ, ಅದರ ಶ್ರೇಯವನ್ನೆಲ್ಲ ಮೀನಿನ ತಲೆಗೆ ಕೊಟ್ಟುಬಿಟ್ಟುದಕ್ಕೆ ದುಃಖಪಡಬೇಕೋ ಗೊತ್ತಾಗದೇ ನಕ್ಕು ಸುಮ್ಮನಾಗಿದ್ದೆ!

ಬುದ್ಧಿವಂತಿಕೆ (ಒಂದು ವೇಳೆ ಇದ್ದಿದ್ದೇ ಹೌದಾದರೆ) ಮೀನಿನ ತಲೆಯಿಂದಲೋ ಅಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವನಪ್ರೀತಿಯ ಕಾರಣಗಳಲ್ಲೊಂದು ಮೀನು ಎಂದರೆ ಕರಾವಳಿಯವರನ್ನು ಬಿಟ್ಟು ಬೇರೆಯವರು ಕಂಗಾಲಾದಾರು! ಹೌದು, ಕರಾವಳಿಯವರು(ಮೀನು ತಿನ್ನದವರನ್ನು ಬಿಟ್ಟು) ಕನಸಿನಲ್ಲೂ ಆಸೆ ಪಡುವ ಖಾದ್ಯವೆಂದರೆ ಅದು ಮೀನು ಮತ್ತು ಮೀನೇ! ನಾನು ತಮ್ಮ, ತಂಗಿ ಚಿಕ್ಕಂದಿನಲ್ಲಿ ಆಡುವ ಆಟಗಳಲ್ಲಿ ಒಂದೆಂದರೆ, ನಿನಗೆ ಒಂದು ಲಕ್ಷ ರೂಪಾಯಿ ಸಿಕ್ಕರೆ  ಮೀನು ತಿನ್ನುವುದು ಬಿಡ್ತೀಯಾ ಎಂದು ಒಬ್ಬರಿಗೊಬ್ಬರು ಕೇಳುವುದು! ಯಾರೂ ಹೂ ಎನ್ನುತ್ತಿರಲಿಲ್ಲ! ಆಮೇಲೆ  ಹತ್ತು ಲಕ್ಷ, ಕೋಟಿ, ದಶಕೋಟಿ, ಅಬ್ಜದವರೆಗೂ ಅಂಕಿಗಳು ಏರುತ್ತಿದ್ದವು.

ಮತ್ತೂ ಮೇಲೇರದ ಕಾರಣ ಅದಕ್ಕಿಂತ ಮೇಲಿನ ಸಂಖ್ಯೆಗಳಿಗೆ ಏನೆನ್ನುತ್ತಾರೆಂದು ನಮಗೆ ಗೊತ್ತಿರದಿದ್ದುದೇ ಆಗಿತ್ತೇ ಹೊರತು ಮೀನಿನ ಮೌಲ್ಯ ಅಷ್ಟರವರೆಗೆ ಮಾತ್ರ ಅಂತ ನಾವು ಅಂದುಕೊಂಡಿರಲೇ ಇಲ್ಲ! ದುಡ್ಡಿನ ಲೆಕ್ಕ ಮುಗಿದ ಮೇಲೆ  ಕಾರು, ಹಡಗು, ಮೈಸೂರು ಅರಮನೆ, ಸೂರ್ಯ, ಚಂದ್ರ ಎಲ್ಲವನ್ನೂ ಕೇಳುತ್ತಿದ್ದೆವು! ಯಾರಾದರೂ ಹಣ ಆಸ್ತಿಯ ಆಸೆಗೆ ಆಟದಲ್ಲಿ ಮೀನು ತಿನ್ನುವುದನ್ನು  ಬಿಡುತ್ತೇನೆಂದು ಹೇಳಿದರೋ ಎಂದು ನೀವು ಕೇಳಿದರೆ ಉತ್ತರ  ಖಡಾಖಂಡಿತವಾಗಿ ಇಲ್ಲವೇ ಇಲ್ಲ! ವರ್ಷ ವರ್ಷಗಳ ಕಾಲ ಆಡಿದ ಆ ಆಟದಲ್ಲಿ ಮೀನನ್ನು ಬಿಟ್ಟು ಬದುಕುತ್ತೇನೆಂದು ಆಟದ ಮಟ್ಟಿಗಾದರೂ ಹೇಳುವ ಮೂರ್ಖರು ಯಾರೂ ಇರಲಿಲ್ಲ.

ಇನ್ನೂ ಒಂದು ಗ್ಯಾರಂಟಿ ಕೊಡುತ್ತೇನೆ ಬೇಕಾದರೆ. ಕಡಲ ತೀರದಲ್ಲಿದ್ದುಕೊಂಡು ನೌಕರಿ ಮಾಡುತ್ತ, ಬರವಣಿಗೆಯನ್ನೂ ಮಾಡುತ್ತ, ಮನೆಯ ಕೆಲಸಗಳನ್ನೂ ನಿಭಾಯಿಸುವ ನನ್ನ ಗೆಳತಿಯರಾದ ರೇಣುಕಾ ರಮಾನಂದ ಮತ್ತು ಶ್ರೀದೇವಿ ಕೆರೆಮನೆ ಇಬ್ಬರೂ ಅಷ್ಟು ಕೆಲಸದ ಮಧ್ಯೆಯೂ ಮೀನು ಫ್ರೈ ಮಾಡಿ ಫೇಸ್‍ಬುಕ್ಕಿಗೆ ಫೋಟೋ ಹಾಕುವಾಗ ಕೆಲಸ ಒಂದಲ್ಲ ನೂರಿರಲಿ, ಮೀನು ಮಾತ್ರ ಬಿಡದ ಮೀನುಮಳ್ಳರ ಪಟ್ಟಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. ಅವರನ್ನೇ ಬೇಕಾದರೆ ಕೇಳಿ, ‘ಬೆಳಗ್ಗೆದ್ದು  ಅಲ್ಲಾವುದ್ದೀನನ ದೀಪದ ಜಿನ್ ಬಂದು ಎಲ್ಲ ಕೆಲಸ ಮಾಡುತ್ತದೆ, ವಾರದಲ್ಲಿ ಮೂರು ದಿನ ಬರೆಯಲೆಂದೇ ರಜೆ ಸಿಗುತ್ತೆ ಪೂರ್ತಿ ಸಂಬಳ ಸಹಿತ, ಆದರೆ ಮೀನು ತಿನ್ನುವುದು ಬಿಡಬೇಕು’ ಎಂದು! ಬಾಗಿಲಿನಿಂದಲೆ ನಿಮ್ಮನ್ನು ಅಟ್ಟಿಯಾರು, ಹುಶಾರು!

ಹಿರೇಗುತ್ತಿಯಲ್ಲಿ ರಜೆ ಕಳೆಯುತ್ತಿದ್ದಾಗ ನಾವು ಅಲ್ಲಿ ಎಲ್ಲರಂತೆ ಮೂರು ಸಲ ಊಟ ಮಾಡುತ್ತಿದ್ದೆವು. ಬಹುಶಃ ಆದಷ್ಟು ಹೆಚ್ಚು ಮೀನು ತಿನ್ನಲು ಸಾಧ್ಯವಾಗಲೆಂದು ಜಾಣರ್ಯಾರೋ ಈ ಪ್ಲಾನ್ ಮಾಡಿರಬಹುದೆಂದು ನನ್ನ ನಂಬಿಕೆ! ಬೆಳಿಗ್ಗೆ ಏಳು ಏಳೂವರೆಯೊಳಗೆ ತಿಂಡಿ ತಿಂದಾಗಿಬಿಡುತ್ತಿತ್ತು. ಅಷ್ಟುಹೊತ್ತಿಗೆ ಮಣಿಸರ ಹಾಕಿಕೊಂಡ ಹಾಲಕ್ಕಿ ಹೆಂಗಸರು ಬುಟ್ಟಿ ಹೊತ್ತುಕೊಂಡು ಮನೆಮನೆಗೆ ಬರುತ್ತಿದ್ದರು. ಇತರೆಡೆಗಳಲ್ಲಿ ಗಂಡಸರು ಸೈಕಲ್ ಮೇಲೆ ಮೀನು ಮಾರಿದರೆ, ಕರಾವಳಿಯಲ್ಲಿ ಹೆಂಗಸರು ತಲೆ ಮೇಲೆ ಬುಟ್ಟಿ ಹೊತ್ತು ಮಾರುವ ದೃಶ್ಯ ಸಮಾನ್ಯ. ಸೀಗಡಿ, ಬಂಗಡೆ, ಚಿಪ್ಪಿಕಲ್ಲು, ಕಲ್ಗ, ತಾರಲೆ, ಗುರುಕು, ಮಾಡ್ಲೆ, ಇಸವಾಣ, ನೊಗ್ಲಿ, ವಿವಿಧ ಮೀನುಗಳು ಸೇರಿರುವ ಪಂಚಬೆರಕೆ ಒಂದೇ ಎರಡೇ.

ಅವರ ಹತ್ತಿರ ಚೌಕಾಶಿ ಮಾಡದೇ ಯಾರೂ ಮೀನು ಖರೀದಿಸುತ್ತಲೇ ಇರಲಿಲ್ಲ ಎನ್ನಿಸುತ್ತದೆ! ಚೌಕಾಶಿ ಮಾಡುವಾಗ ಜಗಳವನ್ನೇ ಮಾಡಿದರೂ ತಕಾ ಅಂತ ಮಕ್ಕಳ ಪಾಲಿಗೊಂದು ಎಕ್ಟ್ರಾ ಮೀನು ಹಾಕುವ ಹೃದಯಶ್ರೀಮಂತಿಕೆಯವರು ಅವರು! ಹಣದ ಬೆಲೆಯೂ ಆಗ ಜಾಸ್ತಿಯೇ. ಒಂದು ಸಲ ಐವತ್ತು ಪೈಸೆಗೆ ಇಪ್ಪತ್ತು ದೊಡ್ಡ ದೊಡ್ಡ ಬಂಗಡೆ ಮೀನು ಖರೀದಿಸಿದ್ದು ನೆನಪಿದೆ ನನಗೆ. ಇನ್ನು ಫಾಂಪ್ಲೆಟ್ ತುಟ್ಟಿಯಾದುದರಿಂದ ಅದು ಬೇಕಾದರೆ ಮೀನು ಮಾರ್ಕೆಟ್ ಇರುವ ಹತ್ತಿರದ ಊರಾದ ಮಾದನಗೇರಿಗೇ ಹೋಗಬೇಕಿತ್ತು, ಅಥವಾ ಗೋಕರ್ಣ ಅಥವಾ ಕುಮಟಾ! ಮೀನು ಖರೀದಿಸಿದ ಮೇಲೆ ತಾಸುಗಟ್ಟಲೆ ಅದನ್ನು ಸರಿಮಾಡುವ ಕೆಲಸ. ಅರ್ಧ ಒಪ್ಪತ್ತು ಮೀನು ಸರಿ ಮಾಡಿ, ಅರೆಯುವ ಕಲ್ಲಿನಲ್ಲಿಯೇ ಮಸಾಲೆ ಅರೆದು ಅಡಿಗೆ ಮಾಡಿ ಹೆಂಗಸರು ಅಕ್ಷರಶಃ  ಬೆಂದುಹೋಗುತ್ತಿದ್ದರು.

ಆಗೆಲ್ಲ ಬೆಳಗ್ಗೆ ಹತ್ತು ಗಂಟೆಗೆ ಕುಚಲಕ್ಕಿ ಗಂಜಿ ಊಟ. ಅದಕ್ಕೆ ಬಸಲೆ ಸೊಪ್ಪಿನದೋ ಅಥವಾ  ಮೊಗೆಕಾಯಿಯದ್ದೋ ಹುಳಗ. ಹುಳಗ ಅಂದರೆ ಬಸಲೆಸೊಪ್ಪಿನ ಅಥವಾ ಮೊಗೆಕಾಯಿ ಜತೆ ಸೀಗಡಿಯನ್ನೋ ಅಥವಾ ಚಿಪ್ಪಿಕಲ್ಲನ್ನೋ ಹಾಕಿ ಮಾಡಿದ ಸಾರು! ಇಲ್ಲವೇ ಸೀಗಡಿ ಅಥವಾ ಕಲ್ಗ ಅಥವಾ ಸಣ್ಣ ಮೀನುಗಳ ಪಲ್ಯ. ಬಿಸಿಬಿಸಿ ಗಂಜಿಯನ್ನು ಮುದ್ದೆಕಟ್ಟಿ ಘಮ್ಮೆನ್ನುವ ಸಾರಿನಲ್ಲಿ ಮುಳುಗಿಸಿ ತಿನ್ನುತ್ತಿದ್ದರೆ ಜಗತ್ತಿನ ವೈಭೋಗಗಳೆಲ್ಲೂ ತೃಣ ಸಮಾನವೇ! ಬೆಳಗಿನ ತಿಂಡಿ ಸ್ಟಾರ್ಟರ್ ಆದರೆ ಗಂಜಿ ಊಟ ಮೇನ್ ಕೋರ್ಸಿನ ಸಣ್ಣ ಝಲಕ್! ಮಧ್ಯಾಹ್ನ ಮೂರು ಗಂಟೆಗೆ ಮೇನ್ ಕೋರ್ಸು.

ಬಿಸಿಬಿಸಿ ಬೆಣತಕ್ಕಿ ಅನ್ನದ ಜತೆಗೆ ದೊಡ್ಡ ಮೀನಿನ ಸಾರು ಮತ್ತು ರವಾ ಫ್ರೈ! ನಾನಂತೂ ಅನ್ನಕ್ಕಿಂತ ಹೆಚ್ಚು ಮೀನು ತಿಂದಿದ್ದೇ ಜಾಸ್ತಿ! ಬರೀ ಅನ್ನವನ್ನು ಬಿಸಿ ಬಂಗಡೆ ಫ್ರೈ ಜತೆ ನೆಂಚಿಕೊಂಡು ತಿಂದರೆ ಅದೊಂದು ಥರದ ರುಚಿ. ಇನ್ನು ಮುಷ್ಠಿ ಮುಷ್ಠಿ ಮೆಣಸು, ಹುಳಿ, ಹುರಿದ ಸಾಸಿವೆ ಮತ್ತು ಕೊತ್ತೊಂಬರಿ, ದೊಡ್ಡ ಗಡ್ಡೆ ಬೆಳ್ಳುಳ್ಳಿ,  ಕಾಳುಮೆಣಸು ಜತೆಗೆ ಸ್ವಲ್ಪ ಕಾಯಿ ಹಾಕಿ ಗಟ್ಟಿಯಾಗಿ ಮಸಾಲೆ ಮಾಡಿ ಉಪ್ಪು ಸೇರಿಸಿ ಮಡಿಕೆಯಲ್ಲಿ ಹಾಕಿ ಒಲೆಯಮೇಲಿಟ್ಟು, ಚೂರು ಕುದಿ ಬಂದ ಮೇಲೆ ಬಂಗಡೆ ಹಾಕಿ, ಸಣ್ಣ ಉರಿಯಲ್ಲಿ ತಾಸೆರಡು ತಾಸು ಕುದಿಸಿದ ‘ಹಚ್ಚಿದ ಮೀನು’ ವಾರಗಟ್ಟಲೆ ರುಚಿ!

ಅದರ ಒಂದು ಚಮಚೆ ಸಾರಿನಲ್ಲಿ ಒಂದು ಕೆಜಿ ಅನ್ನ ಉಣ್ಣಬಹುದೆಂದರೆ ಮೀನಿನಾಣೆ ಉತ್ಪ್ರೇಕ್ಷೆಯಲ್ಲ! ರಾತ್ರಿಯೂಟಕ್ಕೂ ಮತ್ತೆ ಮೀನೇ!! ಸದ್ಯ ಬೆಳಗ್ಗೆನೂ ತಿನ್ನಲ್ಲವಲ್ಲ ಎಂದು ನೀವು ಗುರಾಯಿಸೋದೇನೂ ಬೇಡ. ಸಾರಿ, ಬಿಸಿ ದೋಸೆಗೆ ರಾತ್ರಿಯ ಮೀನು ಸಾರಿದ್ದಾಗ ಚಟ್ನಿ ಯಾರಿಗೆ ಸೇರುತ್ತದೆ ಹೇಳಿ ನೋಡುವಾ! ಕರಾವಳಿಗರ ಮೀನು ಚಪಲಕ್ಕೆ ತಡೆ ಬೀಳುವುದು  ಅವರು ನಡದುಕೊಳ್ಳುವ ದೇವರ ದಿನ ಮಾತ್ರ!

ತರಕಾರಿ ತಿಂದು, ಚಿಕನ್ ಮಟನ್ ತಿಂದು, ಮೊಟ್ಟೆ ತಿಂದು, ಸಿಹಿ ತಿಂದು ಬೋರಾಯಿತು ಎಂಬುದನ್ನು ಕೇಳಿದ್ದೇನೆ, ಆದರೆ ಮೀನು ತಿಂದು ಬೋರಾಯಿತು ಎಂದದ್ದನ್ನು ಇದುವರೆಗೂ ಜೀವಮಾನದಲ್ಲಿ ನಾನು ಕೇಳಿಲ್ಲ. ಮೀನೆಂದರೆ ಅನ್ನದಂತೆಯೇ. ಅಲ್ಲಲ್ಲ ಅನ್ನವೇ! ಕರಾವಳಿಯಲ್ಲಂತೂ ಬಹಳ ಮಂದಿಗೆ ಒಂದು ದಿನವೂ ಮೀನು ಇರದಿದ್ದರೆ ಆಗುವುದಿಲ್ಲ!

ನಮ್ಮ ಮನೆಯಲ್ಲಂತೂ ಯಾವತ್ತೂ ಮೀನಿಗೆ ಬರಗಾಲ ಬಂದಿದ್ದಿಲ್ಲ.  ಶಿರಸಿಯಿಂದ ಹದಿನೈದು ಕಿಲೋಮೀಟರ್ ದೂರದ ಊರಿನಲ್ಲಿ ನಾವಿದ್ದೆವು. ಅಲ್ಲಿಂದ ಶಾಲೆ ಮುಗಿದ ಮೇಲೆ ವಾರದ ಮಧ್ಯೆ ಒಮ್ಮೆ, ಭಾನುವಾರ ಒಮ್ಮೆ ಅಪ್ಪ ಮೀನು ತರಲೆಂದೇ ಶಿರಸಿಗೆ ಹೋಗುತ್ತಿದ್ದರು. ಅಪ್ಪ ಅಮ್ಮನ ಸಂಬಳದ ಬಹುಭಾಗ ಮೀನಿಗೇ ಹೋಗುತ್ತಿತ್ತು! ಆದರೆ  ಶಿರಸಿಯ ಮೀನು ಹೋಟೇಲಿನಲ್ಲಿ ಅವರೆಂದೂ ಉಂಡಿದ್ದಿಲ್ಲ. ಅದೇ ದುಡ್ಡಲ್ಲಿ ಮನೆಯವರೆಲ್ಲ ಮೀನು ತಿನ್ನಬಹುದು ಎಂದು ಮನೆಗೇ ತರುತ್ತಿದ್ದರು.

ಹೀಗೆ ಮೀನು ತಿನ್ನುತ್ತ ಸಂತೃಪ್ತ ಬೆಕ್ಕಿನಂತೆ ಬದುಕಿದ್ದ ನನ್ನ ನನ್ನ ಜೀವನದ ಅತ್ಯಂತ ದುರ್ಭರ ದಿನಗಳು ಎಂದರೆ ಧಾರವಾಡದಲ್ಲಿ ಎಂಎ ಮಾಡಲು ಕಳೆದ ಎರಡು ವರ್ಷಗಳು! ಅಲ್ಲೆಲ್ಲ ದೊಡ್ಡ ದೊಡ್ಡ ಹೊಟೇಲಿಗೆ ಹೋಗಲು ಭಯ. ಪಾವಟೆನಗರದ ಸುತ್ತಮುತ್ತ ಒಂದೇ ಒಂದು ಸಮುದ್ರದ ಮೀನಿನ ಹೋಟೇಲ್ ಇರಲಿಲ್ಲ. ಆ ಹೋಟೇಲು ಹುಡುಕಿ ತಿರುಗಿದ್ದು, ಮರುಭೂಮಿಯ ಓಯಾಸಿಸ್‍ನಂತೆ ನನ್ನ ಹಾಸ್ಟೆಲ್‍ನಲ್ಲಿದ್ದ ಅಂಕೋಲೆಯ ಕೆಲವು ಹುಡುಗಿಯರು ಊರಿಂದ ತಂದ ಮೀನನ್ನು ತಿನ್ನಲು ಕರೆದದ್ದು ಇದೇ ದೊಡ್ಡ ಕಥೆಯಾಗುತ್ತದೆ, ಬಿಡಿ. ಆ ಎರಡು ವರ್ಷ ನನ್ನ ಪರಿಸ್ಥಿತಿ ನೀರಿಂದ ಹೊರಗೆ ಬಿದ್ದ ಮೀನಿನದ್ದೇ!  

ನನಗೆ ಎಲ್ಲ ಮೀನುಗಳೂ ಇಷ್ಟ. ಆದರೆ ನಮ್ಮ ಉತ್ತರ ಕನ್ನಡದಲ್ಲಿ ತಾರಲೆ ಎಂದು ಕರೆಯಲ್ಪಡುವ ಬಗೆಯ ಅಥವಾ ಭೂತಾಯಿ ಬಹಳ ಇಷ್ಟ. ಅದೋ ಬಲು ರುಚಿ ಮತ್ತು ಆರೋಗ್ಯಕರ ಮೀನು. ಆದರೆ ಅದಕ್ಕೆ ಬಹಳ ವಾಸನೆ! ಹಾಗಾಗಿ ನಾನು ಬಾಣಂತನಕ್ಕೆ ಹೋದಾಗ ಅದನ್ನು ತರುತ್ತಲೇ ಇರಲಿಲ್ಲ, ಮಗು ವಾಂತಿಮಾಡಬಹುದೆಂದು. ನಾನೋ ಕಾಡಿಬೇಡಿ ತರಿಸಿಕೊಳ್ಳುತ್ತಿದ್ದೆ ಆಗಾಗ. ಆಗ ನಮ್ಮ ತಂದೆ ಹೇಳುತ್ತಿದ್ದರು, ‘ರಾಜನ ಹೆಂಡತಿಗೆ ಧೂಳು ತಿನ್ನೋ ಬಯಕೆಯಾದ್ರೆ ಯಾರು ಏನು ಮಾಡೋಕೆ ಸಾಧ್ಯ’ ಅಂತ! ಅದರರ್ಥ ದೊಡ್ಡ ಮೀನು ತಿನ್ನುವ ಅವಕಾಶವಿದ್ದರೂ ಭೂತಾಯಿ ಮೀನಿಗೆ ಆಸೆ ಪಡುತ್ತೇನಲ್ಲ ಎಂದು! ಮೀನು ತಿಂದ ರಾತ್ರಿಯೇ ಮಗು ಕಡ್ಡಾಯವಾಗಿ ವಾಂತಿ ಮಾಡಿಕೊಳ್ಳುತ್ತಿತ್ತು! ಆಗ ಮತ್ತೆ ಬೈಗುಳ! 

ಅಂದಹಾಗೆ ಈ ಮೀನಿಗೆ ಅಷ್ಟು ಗೌರವ ಇರದ ಕಾರಣ ಅದು ಸ್ವಲ್ಪ ಸೋವಿ. ಜತೆಗೆ ಎರಡೆರಡು ಸಂಬಳ ತೆಗೆದುಕೊಂಡರೂ, ಮನೆಕಡೆ ಜಮೀನು ಗಿಮೀನು ಇದ್ದರೂ ದುಡ್ಡು ಉಳಿಸಲು ಅದನ್ನು ಮಾತ್ರ ತರುತ್ತಿದ್ದವರಿದ್ದರು! ಅಂಥವರನ್ನು “ಬರೀ ತಾರಲೆ ಬಿಟ್ಟರೆ ಏನೂ ತರುದಲಾ ಮನಿಗೆ, ದುಡ್ಡು ಉಳ್ಸೇ ಏನ್ ಮಾಡ್ತಿನಾ ಏನಾ, ಹೋಗ್ಬೇಕಾರೆ ತಕಂಡ ಹೋತಿನ ಮಡಿ, ಹಾಳಾಗೆಹೋಗುಕೆ ಕಂಜೂಸ್ ನನ್ಮಗಾ” ಅಂತ ನಾಕು ಮಂದಿ ಸೇರಿದಾಗ ಯಾರಾದರೊಬ್ಬರು ಹೇಳಿಯೇ ಹೇಳುತ್ತಿದ್ದರು! ನೋಡಿ ನಿಷ್ಪಾಪಿ ಮೀನಿನ ಗೌರವ ಕಡಿಮೆ ಮಾಡಿದ್ದು ನಾವೇ! ಆದರೆ ಮೀನು ಯಾವತ್ತೂ ನಮಗೆ ಒಳ್ಳೆಯದನ್ನೇ ಮಾಡಿದೆ. ಜಗತ್ತಿನ ಹತ್ತು ಶೇಕಡಾ ಪೌಷ್ಠಿಕಾಂಶವನ್ನು ಮೀನೇ ಒದಗಿಸುತ್ತದೆ!

ನಾನು ಮಲೆನಾಡಿನ ನಡುವಿನ ಊರಿಗೆ ಮದುವೆಯಾಗಿ ಬಂದಾಗ ಪಾಪ, ಅವಳಿಗಿನ್ನು ತಾಜಾ ಸಮುದ್ರದ ಮೀನು ಸಿಗುವುದಿಲ್ಲ ಎಂದು ಸಂತಾಪ ಸೂಚಿಸಿದವರೇ ಬಹಳ. ಆರಂಭದಲ್ಲಿ ನಾನೂ ಹಾಗೆಯೇ  ಅಂದುಕೊಂಡಿದ್ದೆ. ಆದರೆ ಉಡುಪಿಗೆ ನೂರು ಕಿಲೋಮೀಟರಿಗಿಂತ ಕಡಿಮೆ ದೂರವಿರುವ ನಮ್ಮೂರಲ್ಲೂ ಅಲ್ಲಿಂದ ತಾಜಾ ಸಮುದ್ರದ ಮೀನು ಬರುತ್ತದೆ ಮತ್ತು ನಮ್ಮೂರಿಗಿಂತ ಕಡಿಮೆ ರೇಟಲ್ಲೇ ಸಿಗುತ್ತದೆ ಎಂದು ಕೆಲವು ವರ್ಷಗಳ ನಂತರ ಗೊತ್ತಾಯಿತು! ಆದರೆ ಮದುವೆಯಾದಾಗ ನನಗಿದ್ದುದು ಈ ಸಮಸ್ಯೆಯಲ್ಲ! ಮೀನುತಿನ್ನುವ ಜಾತಿಯಲ್ಲಿ ಹುಟ್ಟಿದರೂ ಬಾಲ್ಯದಲ್ಲೇ ಮೀನು ತಿನ್ನುವುದನ್ನು ಬಿಟ್ಟುಬಿಟ್ಟಿದ್ದ ಹುಡುಗನನ್ನು ಮದುವೆಯಾಗಿಬಿಟ್ಟಿದ್ದೆ!

ಮೀನು ತಿನ್ನಲು ಒಬ್ಬ ಕಾಂಪಿಟಿಟರ್ ಕಡಿಮೆಯಾದಂತೆ ಎಂದು ಮೊದಲು ಒಳಗೊಳಗೇ ಖುಶಿಪಟ್ಟರೂ ನಮ್ಮತ್ತೆಯನ್ನು ಎರಡೆರಡು ಸಾರು ಮಾಡುವ ಸಂಕಷ್ಟದಿಂದ ಪಾರು ಮಾಡಲು ಗಂಡನಿಗೇ ಮೀನು ತಿನ್ನಿಸುವ ಪ್ರಯತ್ನ ಶುರು ಮಾಡಿದೆ! ದಿನವೂ ಮೀನಿನ ರುಚಿಯ ಬಗ್ಗೆ ಕೊರೆದು, ವೈದ್ಯರ ಹತ್ತಿರವೂ ಹೇಳಿಸಿ ಬ್ರೈನ್ ವಾಶ್ ಮಾಡಿ ಅಂತೂ ದಶಕದ ದೀರ್ಘ ಪ್ರಯತ್ನದ ನಂತರ ಬಂಗಡೆ, ಪಾಂಪ್ಲೆಟ್, ಸಿಲ್ವರ್ ಫಿಶ್ ಮತ್ತು ಸೀಗಡಿ  ಈ ನಾಲ್ಕು ಜಾತಿಯ ಮೀನು ತಿನ್ನಿಸಿ ಇಂಪಾಸಿಬಲ್ ಎಂದು ಅವರ ಮನೆಯವರೆಲ್ಲರೂ ಅಂದುಕೊಂಡಿದ್ದ ಮಿಶನ್‍ನಲ್ಲಿ ಯಶಸ್ವಿಯಾದೆ!

ಆಗತಾನೇ ಮಲಗಿದ ಮಗುವಿನಂತೆ ಪ್ರಶಾಂತವಾಗಿ ತೋರುವ ಕಡಲು ಮರುಕ್ಷಣ ಭಯಾನಕ ಕನಸು ಕಂಡು ಕಿರುಚುವವರಂತೆ ಪ್ರಕ್ಷುಬ್ಧವಾಗಿ ಬಿಡುತ್ತದೆ. ತಣ್ಣಗಿದ್ದ ಶರಧಿ ಯಾರೋ ಕಿವಿಯೊಳಗೆ ಗಾಳಿ ಊದಿದ ಕರುವಿನಂತೆ ಎದ್ದೆದ್ದು ಕುಣಿಯುತ್ತದೆ. ಕಳೆದ ವರ್ಷ ಉಡುಪಿಗೆ ಹೋದಾಗ ನಮಗೆಲ್ಲ ಮೀನು ಹೊತ್ತು ತರುವ ಬೋಟುಗಳು ಹೇಗಿರುತ್ತವೆ ನೋಡುವಾ ಎಂದು ಬಂದರಿಗೆ ಹೋದೆವು. ಆ ಬೋಟಿನೊಳಗೆ ಇರುವ ಮೀನು ಹಾಕುವ ನೆಲಮಾಳಿಗೆ, ಅವರ ಅಡುಗೆ ಮನೆ, ಹಗ್ಗಕ್ಕೆ ಜೋತು ಬಿದ್ದ ಬಟ್ಟೆಗಳು, ಹೊದಿಕೆ, ಪುಟ್ಟದೊಂದು ಕನ್ನಡಿ ಅಬ್ಬಾ ಅಷ್ಟು ಸಣ್ಣ ಬೋಟಿನಲ್ಲಿ ತಿಂಗಳುಗಟ್ಟಲೆ ಕುಟುಂಬವನ್ನೆಲ್ಲ ಬಿಟ್ಟು ಇರುತ್ತಾರಲ್ಲ ಎನಿಸಿ ಬೇಜಾರಾಯಿತು.

ಪ್ರತೀ ಮಳೆಗಾಲದಲ್ಲೂ ದೋಣಿ ಮಗುಚಿ ಸಾಯುವ ಎಳೆಯ ಮೀನುಗಾರ ತರುಣರು ನೆನಪಾದರು. ನಾವು ಚಿಕ್ಕವರಿರುವಾಗ ಸೈಕಲ್‍ನಲ್ಲಿ ಮೀನು ತರುತ್ತಿದ್ದ ಒಡಗೇರಿ ಸಾಹೇಬ್ರು ಈಗ ಎಷ್ಟು ಮುದುಕರಾಗಿರಬಹುದು? ಅವರ ಮೊಬೈಲ್‍ನಲ್ಲಿ ವಾಟ್ಸಾಪ್ ಇರಬಹುದೇ? ಮೀನು ಮಾರಲೂ ಇಂತಿಂಥ ಬಣ್ಣದ ಧ್ವಜ ಹಾಕಬೇಕು ಎಂದು ಹರಡಿರುವ ವಾಟ್ಸಾಪ್ ಯುನಿವರ್ಸಿಟಿಯ ವೈಸ್ ಛಾನ್ಸಲರುಗಳ ಸಂದೇಶಗಳ ಬಗ್ಗೆ ಅವರಿಗೆ ಗೊತ್ತಿರಬಹುದೇ ಎಂದು ಕ್ಷಣ ಯೋಚಿಸಿ ಹನಿಗಣ್ಣಾದೆ.

ಭಾರವಾದ ಮನಸ್ಸನ್ನು ಹಗುರಗೊಳಿಸಲು ‘ತಾಜಾ ತಾಜಾ ಮೀನನ್ನು ತಕ್ಷಣ ಫ್ರೈ ಮಾಡಿ ತಿನ್ನುತ್ತೀರಲ್ಲ, ಛಾನ್ಸ್ ನಿಮ್ಮದೇ’ ಎಂದೆ. ‘ಅದು ಹೌದು ಮೇಡಂ’ ಎಂದ ಒಬ್ಬ ಮುಗುಳ್ನಗುತ್ತ. “ಥ್ಯಾಂಕ್ಸ್ ಸರ್, ಮಳೆ ಗಾಳಿ ಬಿಸಿಲಿನಲ್ಲಿ ಸಮುದ್ರದ ಮಧ್ಯೆಯೇ ಇದ್ದು ನಮಗೆಲ್ಲ ಮೀನು ತಂದುಕೊಡುತ್ತೀರಲ್ಲ” ಎಂದೆ. ಅವರೆಲ್ಲ ಮತ್ತೊಮ್ಮೆ ನಕ್ಕರು. ಬಿರು ಬಿಸಿಲಿನಲ್ಲಿ ಅವರ ಕಣ್ಣುಗಳಲ್ಲಿ ಹೊಳೆದ ಕಡಲು ಎಂದಿಗಿಂತಲೂ ಚೆಂದವೆನಿಸಿತು.

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಎಷ್ಟು ಚಂದ ಬರಿತೀಯೆ ಮೀನಮ್ಮ
    ಶಿರಸಿಗೆ ಬಂದಾಗ ನೀನು ಮೀನಿಗೆ ಒದ್ದಾಡಿದ್ದನ್ನು ನೋಡಿದ್ದೇನೆ. ಎಂಥವರಿಗೂ ಮೀನು ತಿನಿಸಿಬಿಡ್ತೀಯ ನೀನು ಬಿಡು

    ಪ್ರತಿಕ್ರಿಯೆ
    • Deepa Hiregutti

      ಧನ್ಯವಾದಗಳು ಸುಧಾ. ಮೀನು ಇಲ್ಲದಿದ್ದರೆ ಚಡಪಡಿಸಿ ಬಿಡುತ್ತೇನೆ

      ಪ್ರತಿಕ್ರಿಯೆ
  2. DR Sagar Deshpande

    ಅದ್ಭುತ ಬರವಣಿಗೆ ನಿಜಕ್ಕೂ ಒಳ್ಳೆಯ ಅನುಭವ ಆಯ್ತು ಓದಿ ದೀಪಾ ಅಕ್ಕನ ಬರವಣಿಗೆ ಜೊತೆಗೆ ವಾಕ್ ಚಾತರ್ಯದಿಂದ ಆಡುತ್ತಾರೆ

    ಪ್ರತಿಕ್ರಿಯೆ
  3. Ramachandra Hegade

    ದೀಪಾ.. ಕಡಲು ಮತ್ತು ಮೀನಿನ ಕುರಿತು ಅಮೋಘ ಅನಿಸುವಷ್ಟು ಅಧ್ಬುತಗಳು ಈ ನಿನ್ನ ಲೇಖನದಲ್ಲಿವೆ..
    ಬಿಸಿ ಬಿಸಿ ಗಂಜಿಯನ್ನು ಮುದ್ದೆಕಟ್ಟಿ ಘಮ್ಮೇನ್ನುವ ಸಾರಿನಲ್ಲಿ ಮುಳಗಿಸಿ ತಿನ್ನುತ್ತಿದ್ದರೆ ಜಗತ್ತಿನ ವೈಭೋಗಗಳೆಲ್ಲೂ ತೃಣ ಸಮಾನ ಏಂಬ ಸಾಲುಗಳನ್ನು ಗೀರಿಶ್ ಓದಿದರೆ ಹೊಟ್ಟೇ ಉರಿಯಿಸಿ ಕೋಳ್ಳತ್ತಾರೆ..
    ನಿನ್ನ ಜೀವನದ ಅತ್ಯಂತ ದುರ್ಬರ ದಿನಗಳು ಎಂದರೆ ಧಾರವಾಡದಲ್ಲಿ ಎಂ ಎ ಮಾಡಲು ಕಳೆದ ಎರಡು ವರ್ಷಗಳು ಅಂತಾ ಓದಿದ ಮೇಲೆ ಸ್ವಲ್ಪ ಬೇಜಾರಾಯ್ತು.
    ನಮಗೆ ಓಮ್ಮೆಯಾದರು ತಾರಲೆ ಮೀನು ಸಾರ್ ತಿನ್ಸಬೇಕ ದೀಪಾ… really nice article.. sunday special..
    ಇಂದು ಪ್ರಜಾವಾಣಿಯಲ್ಲಿ ಪ್ರಕಟವಾದ ವಿನಯಾ ಒಕ್ಕುಂದ ಮತ್ತು ಡಾ ಎಚ್ ಎಸ್ ಅನುಪಮಾ ಅವರ ಲೇಖನಗಳು ವಿಸ್ಮಯ ಅನ್ನುವಷ್ಟರ ಮಟ್ಟಿಗೆ ಅದ್ಭುತ….!..!

    ಪ್ರತಿಕ್ರಿಯೆ
  4. Deepa Hiregutti

    Thank you sir. ದೂರದ ಊರುಗಳಲ್ಲಿ ಇರುವ ಕರಾವಳಿಗರ ಅಳಲು ಅದೇ

    ಪ್ರತಿಕ್ರಿಯೆ
  5. Deepa Hiregutti

    ಹೆಗಡೆ, ಮೀನಿನ ಮಟ್ಟಿಗೆ ಧಾರವಾಡದ ಎರಡು ವರ್ಷಗಳು ದುರ್ಭರ ಅಂದಿದ್ದು ಅಷ್ಟೇ. Thank you.

    ಪ್ರತಿಕ್ರಿಯೆ
  6. Shreedevi Keremane

    ನಿಮ್ಮೂರಲ್ಲಿ ಮೀನು ಸಿಗುವಾಗಲೂ ನಾನು ಮೀನು ತಿಂದರೆ ಶಾಪ ಹಾಕ್ತೀಯಲ್ಲೇ. ನಿನ್ನ ಕಾಟಕ್ಕೆ ಮೀನಿನ ಫೋಟೋ ಹಾಕೋದೇ ಬಿಟ್ಟಿದ್ದೆ. ಇನ್ನಿದೆ ಬಿಡು.

    ಪ್ರತಿಕ್ರಿಯೆ
  7. Deepa Hiregutti

    ಶ್ರೀದೇವಿ, ಲೇಖನದಲ್ಲಿ ನಿನ್ನನ್ನು ಹೊಗಳಿದರೂ ಬೈತೀಯಲ್ಲೆ

    ಪ್ರತಿಕ್ರಿಯೆ
  8. ಸುಚಿತ್ ಕೋಟ್ಯಾನ್

    ನಮಗೆ ಬೆಳಗಿನಿಂದ ಹೊತ್ತು ಕಂತುವವರೆಗೆ ಮೀನಿನದ್ದೇ ಚಿಂತೆ.. ಮೀನಿನ ರೇಟೆಷ್ಟು,ಎಲ್ಲಿ ಅಗ್ಗ, ಇವತ್ತು ಮಾರ್ಕೆಟ್ಟಿಗೆ ಹೆಚ್ಚು ಮೀನು ಯಾವುದು ಬಂದಿದೆ ಹೀಗೆ…

    ಮನೆಯ ಫ್ರಿಡ್ಜೇನಾದರೂ ಓಪನ್ ಮಾಡಿದರೆ ಇರುವ ಜಾಗದಲ್ಲೆಲ್ಲಾ ಮೀನು ಕಾಣದೆ ಇರದು…

    ಚಂದ ಬರ್ದಿದ್ದೀರಿ.. ಒಣಮೀನಿನ ಬಗ್ಗೆಯೂ ಸ್ವಲ್ಪ ಬರೆದಿದ್ದರೆ ಪರಮಾನಂದವಾಗುತ್ತಿತ್ತು..

    ಪ್ರತಿಕ್ರಿಯೆ
    • Deepa hiregutti

      Suchit, ಲೇಖನ ತುಂಬಾ ಉದ್ದ ಆಯ್ತು ಅಂತ ಒಣ ಮೀನು ಬದಿಗಿಟ್ಟು ಬಿಟ್ಟೆ

      ಪ್ರತಿಕ್ರಿಯೆ
  9. SHRIDHAR B.NAYAK

    ಮೀನು ಪುರಾಣ ಚೆಂದ ಇದೆ.ಬಸಲೆಸೊಪ್ಪು,ಮೊಗಿಕಾಯಿ ಹುಳಗಕ್ಕೆ ಚಿಪ್ಪಕಲ್ಲು ಅಥವಾ ಶಿಟ್ಲಿ ‘ಬೆರ್ಕಿ’ ಅಬ್ಬಾ ರುಚಿಯೋ ರುಚಿ!

    ಪ್ರತಿಕ್ರಿಯೆ
  10. Shyamala Madhav

    ದೀಪಾ, ಕಡಲ್ಮೀನಾಯಣ ತುಂಬಾ ರಂಜಿಸಿತು. ಒಳ್ಳೆಯ ಓಘದ ರೋಚಕ ಬರವಣಿಗೆ! ಬರೆಯುತ್ತಿರಿ, ಹೀಗೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: