ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಮತ್ತು ಓದು…

-ವನಜಾಕ್ಷಿ ಎಸ್ ಮರಳಕುಂಟೆ

ಓದುವುದೆಂದರೆ ನನಗೆ ನಿತ್ಯ ವಸಂತ. ಕೆಲವೊಮ್ಮೆ ಪುಸ್ತಕಗಳು, ಕೆಲವೊಮ್ಮೆ ಗೂಗಲ್ ನ ವಿಕಿಪೀಡಿಯ, ಫೇಸ್ಬುಕ್ ನಲ್ಲಿ ಪ್ರಕಟಗೊಂಡಿರುವ ಲೇಖನ-ಕವಿತೆಗಳು, ವಾಟ್ಸಪ್ ನಲ್ಲಿ ಬರುವ ಪ್ರಚಲಿತ, ಸಾಮಾನ್ಯಜ್ಞಾನದ ಪ್ರಶ್ನೋತ್ತರಗಳನ್ನೂ ಕೂಡ ನನ್ನ ಮಸ್ತಕ ಜೀರ್ಣಿಸಿಕೊಳ್ಳುತ್ತದೆ. 

ಪುಸ್ತಕವಿಲ್ಲದೇ ಇದ್ದಲ್ಲಿ ಮೊಬೈಲ್ ನಲ್ಲೇ ಓದಿದರೂ ಹೆಚ್ಚು ಪ್ರಿಯವಾಗುವುದು ಊರಿನೊರಗೆ ಮರಗಳ ನಡುವೆ, ಬಂಡೆಗಳ ಮೇಲೆ ಕುಳಿತು ಓದುವುದು. 

ಹೈಸ್ಕೂಲಲ್ಲಿ ಕೆಲವೊಮ್ಮೆ ಮತ್ತು ಹೈಸ್ಕೂಲಿನ‌ನಂತರದ  ರಜಾ ದಿನಗಳಲ್ಲಿ ಒಂದು ಪುಸ್ತಕ, ಟವೆಲ್, ನೀರು ಬಾಟಲಿ ತಗೊಂಡು ಬೆಳಗ್ಗೆ ತಿಂಡಿ ತಿಂದು ಹೊರಟರೆ ಮಧ್ಯಾನ್ಹ ಹೊಟ್ಟೆ ಚುರುಗುಟ್ಟಿದಾಗಲೇ ಮನೆಗೆ ಬರ್ತಿದ್ದ ನೆನಪು. ಆಗೆಲ್ಲಾ ಅಮ್ಮನಿಂದ ಸುಪ್ರಭಾತ ತಪ್ತಿರಲಿಲ್ಲ ಬಿಡಿ. ಹಳ್ಳಿಯಲ್ಲೇ ಬೆಳದಿದ್ದರಿಂದ ಹೊಲ, ಗುಡ್ಡ, ತೋಪು ಗಳಲ್ಲಿ ಭಯವೇನು ಆಗ್ತಿರಲಿಲ್ಲ. ಎಲ್ಲಿ ಇಷ್ಟ ಆಗುತ್ತೊ ಅಲ್ಲೆ ಟವಲ್ ಹಾಸಿ ಕುತ್ಕೊಂಡು ಓದೋಕೆ ಶುರು ಮಾಡ್ತಿದ್ದೆ. ಬೇಸಿಗೆಯಾದಲ್ಲಿ ಕೂಳೆ ಹೊದ್ದ ಹೊಲಗಳಲ್ಲೆ ಬಟಾಬಯಲಿನ ಮಧ್ಯೆ ಇರುತ್ತಿದ್ದ ಹಲಸಿನ ಮರವೋ, ಆಲದ ಮರವೋ, ಹೊಂಗೆಯ ಮರವೋ ಯಾವುದಾದರೊಂದು ತಣ್ಣನೆಯ ಮರದ ನೆರಳಿಗೆ ಟವಲ್ ಹಾಸಿದೆನೆಂದರೆ ಬೀಸಿ ಬರುತ್ತಿದ್ದ ಗಾಳಿ, ಆಗೊಮ್ಮೆ ಈಗೊಮ್ಮೆ ಉದುರುತ್ತಿದ್ದ ಹೊಂಗೆಯ ಹೂಗಳು, ಆ ಹೂಗಳ ಮಕರಂದಕ್ಕೆ ದಾಳಿಯಿಡುತ್ತಿದ್ದ ದುಂಬಿಗಳು, ತರಗುಟ್ಟುತ್ತಿದ್ದ ತರಗೆಲೆಯ ಸದ್ದಿನೊಂದಿಗೆ ನನ್ನ ಓದು ಶುರುವಾಗುತ್ತಿತ್ತು.‌

ಒಮ್ಮೊಮ್ಮೆ ಜೋರಾಗಿ ಒಮ್ಮೊಮ್ಮೆ ಮನಸ್ಸಿನಲ್ಲೆ ಓದುತ್ತಿದ್ದ ನಾನು ಆಗಾಗ ನನ್ನ ಸುತ್ತಲ ಪರಿಸರವನ್ನೂ ಗಮನಿಸುತ್ತಿದ್ದೆ. ಮೇಕೆ, ದನ ಹೊಡ್ಕೊಂಡು ಗುಡ್ಡದ ಕಡೆಗೋ ಅವರ ಹೊಲಗಳಿಗೋ ಮೇಯಿಸೋದಕ್ಕೆ ಅಂತ ಹೋಗ್ತಿದ್ದವರೆಲ್ಲ, ‘ಯಾಕಮ್ಮ ಇಲ್ಲಿದ್ದೀಯ? ಒಬ್ಳೆ ಬೇರೆ ಇದ್ದೀಯ? ಬೇಗ ಹೋಗು ಮನೆಗೆ.  ಅಂತ ಕಾಳಜಿ ಮಾಡ್ತಾ ಹೋಗೋರು.. ಕೂಲಿ ಕೆಲಸಕ್ಕೆ ಯಾವುದಾದರೂ ತೋಟಗಳಿಗೆ ಹೋಗೋವಂತರು ಅವರವರಲ್ಲೆ ‘ಯಾಕೆ ಅವರು ಮಗಳು ಇಲ್ಲಿ ಕುಂತೈತೆ, ಅದ್ಯಾವಾಗ್ಲು ಹಂಗೆ ಬುಕ್ ಹಿಡ್ಕೊಂಡು ಓಡಾಡ್ತಿರ್ತೈತೆ’ ಅಂದ್ಕೊಂಡು ತಮ್ಮ ಪಾಡಿಗೆ ತಾವು ಹೋಗ್ತಿದ್ರು. ಪುಸ್ತಕದಿಂದ ತಲೆ ಎತ್ತದೆ ಕೇಳಿಸಿದ್ರು ಕೇಳಿಸದ ಹಾಗೆ ನನ್ ಪಾಡಿಗೆ ನಾನು ಓದೋದನ್ನ ಮುಂದುವರೆಸ್ತಿದ್ದೆ. 

ಇನ್ನು ಉಳುಮೆಯ ಕಾಲದ ಅನುಭವ ಒಂದು ಚಿತ್ರದಂತೆ ನನ್ನ ಕಣ್ಣ ಮುಂದೆ ಹಾಯ್ದು ಹೋಗುತ್ತದೆ. ಆಗೆಲ್ಲ‌ ನಾನು ಕೂತ್ಕೊತ್ತಿದ್ದದ್ದು ದೊಡ್ಡ ಮರದ ಭೂಮಿಯಿಂದ ಹೊರಬಂದ ಬೇರಿನ ಮೇಲೋ, ಕೂತ್ಕೊಳೋಕೆ ಅಂತ ಹಾಕಿರುತ್ತಿದ್ದ ಕಲ್ಲಿನ ಮೇಲೊ. ಟವಲ್ ಆಗ ಹೊದೆಯಲು ಬಳಸುತ್ತಿದ್ದೆ. ರಾತ್ರಿಯೆಲ್ಲ ಹೊಯ್ದ ಮಳೆಗೆ ಮಣ್ಣು ಹದ ಮಾಡಲು ನೇಗಿಲನ್ನೊತ್ತ ದನಗಳು ಹೊಲಕ್ಕೆ ಇಳಿದಿರುತ್ತಿದ್ದವು. ನೇಗಿಲನಿಡಿದು ಉಳುತ್ತಿದ್ದ ರೈತನಿಂದ ಬಿಟ್ಟೂಬಿಡದೆ ದನಗಳಿಗೆ ಹೈ.. ಹ್ಹ.. ಬ್ಬ… ಬ್ಬ… ಎಂಬಂತಹ ಸೂಚನೆಗಳು ಸಿಗುತ್ತಿದ್ದವು. ಮಣ್ಣ ಸೀಳಿಕೊಂಡು ಹೋಗುತ್ತಿದ್ದ ಎತ್ತಿನ ಹಿಂದೆಲ್ಲ ಕೊಕ್ಕರೆ, ಮೈನಾ, ಕಾಗೆಗಳಂತಹ ಜನರಿಗೆ ಹೆದರದ ಪಕ್ಷಿಗಳು ಮಣ್ಣಿನೊಳಗಿದ್ದ ಎರೆಹುಳು, ಬಸವನಹುಳು, ಗೊಬ್ಬರದ ಹುಳು ಅಥವಾ ಇನ್ನು ವಿವಿಧ ರೀತಿಯ ಹುಳುಗಳನ್ನು ತಿನ್ನಲು ಪೈಪೋಟಿಗಿಳಿದಿದ್ದವು. 

ಇದನ್ನೆಲ್ಲ ಗಮನಿಸುತ್ತಿದ್ದ ನನಗೆ ನಾನೋದುತ್ತಿದ್ದ ಕಾದಂಬರಿಗಳಲ್ಲಿರುವ ಪ್ರಕೃತಿ ಸೌಂದರ್ಯವೆಲ್ಲಾ ನೆನಪಾಗಿ, ಓದುವುದನ್ನೇ ಮರೆತು ತದೇಕ ಚಿತ್ತದಿಂದ ಅಲ್ಲಿ ನಡೆಯುತ್ತಿದ್ದ ಮೂರ್ತ ರೂಪದ ಅಮೂರ್ತ ಕಲ್ಪನೆಯಲ್ಲಿ ಕಳೆದುಹೋಗುತ್ತಿದ್ದೆ. ಆಗೆಲ್ಲಾ ನಾನು ಗ್ರಂಥಾಲಯಗಳಿಂದ ಪುಸ್ತಕ ತಂದು ಓದುತ್ತಿದ್ದೆ.

ನಾನು ಕೆಲಸಕ್ಕೆ ಸೇರಿದ ನಂತರ ಎಲ್ಲೇ ಹೋದರೂ ಪುಸ್ತಕದ ಅಂಗಡಿ ಕಣ್ಣಿಗೆ ಬಿತ್ತೆಂದರೆ ಸೀದಾ ಹೋಗಿ ಕೆಲವು ಪುಸ್ತಕಗಳನ್ನು ಕೊಳ್ಳುತ್ತಿದ್ದೆ. ಆಗಿನ‌ ನನ್ನ ಕಡಿಮೆ ಸಂಬಳದಲ್ಲಿ ಅರ್ಧ ಪಗಾರ ಪುಸ್ತಕಗಳಿಗೇ ಹೋಗುತ್ತಿತ್ತು. ವೈದೇಹಿ, ಕುವೆಂಪು, ತೇಜಸ್ವಿ, ಎಸ್.ಎಲ್. ಭೈರಪ್ಪ, ತ.ರಾಸು, ಅನುಸೂಯ, ಯಂಡಮೂರಿ ವೀರೆಂದ್ರನಾತ್, ರವಿ ಬೆಳಗೆರೆ, ಕಾರಂತರು, ಗಿರೀಶ್ ಕಾರ್ನಾಡ್ ಹೀಗೆ ನನ್ನ ಜ್ಞಾನಕ್ಕೆ ನಿಲುಕಿದಷ್ಟು ಪುಸ್ತಕಗಳನ್ನು ತಂದು ಓದುತ್ತಿದ್ದೆ. 

ಮನೆಯಿಂದ ಹೊರಗೆ ಮಾತ್ರವಲ್ಲದೆ, ದಿನಪೂರ್ತಿ ಒಂದೇ ಕಾದಂಬರಿಯನ್ನಿಡು ಕೋಣೆಯಲ್ಲಿ ಬಂಧಿಯಾದದ್ದೂ ಇದೆ. ಬಸ್ಸು, ಟ್ರೈನು, ಕಾರು, ಆಟೋ ಎನ್ನದೆ ಅರ್ಧ ಗಂಟೆಯ ಪ್ರಯಾಣದಲ್ಲೂ ತಲೆ ಕೆಳಗಾಕಿ ಹೊತ್ತಿಗೆಯಲ್ಲಿ  ಲೀನವಾದದ್ದಿದೆ. ಯಾರಾದರೂ ಹುಟ್ಟುಹಬ್ಬಕ್ಕೆ ಏನ್ ಬೇಕು ಅಂತ ನನ್ನೇನಾದರೂ ಕೇಳಿದರೆ ನಿರ್ದಿಷ್ಟ ಬರಹಗಾರರ ಪುಸ್ತಕಗಳನ್ನೇ ಕೇಳ್ತಿದ್ದೆ. ಹಾಗೇ ನಾನೂ ಪುಸ್ತಕಗಳನ್ನೇ ಉಡುಗೊರೆಯಾಗಿ ಕೊಡ್ತಿದ್ದೆ ಸಹ. ನನ್ನ ಆಪ್ತ ವಲಯಕ್ಕೆ ಓದುವಂತವರಿಗೆ ಯಾವುದಾದರೊಂದು ಪುಸ್ತಕ ಕೊಟ್ಟು ಓದಲು, ಅದರ ಬಗ್ಗೆ ಬರೆಯಲು ಹುರಿದುಂಬಿಸುವುದು ಈಗಲೂ ಚಾಲ್ತಿಯಲ್ಲಿದೆ.

ಒಂದೊಮ್ಮೆ ಆರೋಗ್ಯ ಸರಿ ಇಲ್ಲದಿದ್ದಾಗ ಚಿಕಿತ್ಸೆಗಾಗಿ ಡಾಕ್ಟರ್ ಬಳಿಗೆ ಅಣ್ಣ ಕರೆದೊಯ್ದಿದ್ದ. ಡಾಕ್ಟರ್ ಏನಮ್ಮ ಊಟ ಮಾಡಲ್ವ ಅಂದಾಗ ಅಣ್ಣ ‘ಇವಳು ಊಟ ಮಾಡಲ್ಲ ಸರ್ ಬರೀ ಪುಸ್ತಕಗಳನ್ನ ತಿಂತಾಳೆ’ ಅಂದಿದ್ದ ಮಾತು ಈಗಲೂ ನನಗೆ ನಗು ಬರಿಸುತ್ತೆ. 

ಕನ್ನಡ ಓದೋದು, ಬರೆಯೋದು, ಪುಸ್ತಕಗಳನ್ನ ಸಂಗ್ರಹಿಸೋದು, ಹಂಚೋದು ಮಾಡೋದ್ರಿಂದ ಜನರಲ್ಲಿ ಪುಸ್ತಕ ಪ್ರೀತಿಯನ್ನೂ ಬೆಳಸಬಹುದು, ಕನ್ನಡವನ್ನೂ ಉಳಿಸಬಹುದು ಜೊತೆಗೆ ಲೇಖಕರು ಮತ್ತು ಪ್ರಕಾಶಕರನ್ನೂ…..

‍ಲೇಖಕರು Admin

23 April, 2026

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Ravishankar

    ಉತ್ತಮ ಓದು..
    ಓದು ಮತ್ತು ವಾಸ್ತವದ ಅನುಭವ ಅತ್ಯಂತ ವಿಶೇಷವಾಗಿ ಅಭಿವ್ಯಕ್ತಪಡಿಸಿದ್ದೀರಿ..
    ಶುಭವಾಗಲಿ…

  2. ಡಾ. ರವಿಶಂಕರ್ ಎ.ಕೆ

    ಓದಿನ ಇತಿಹಾಸದಲ್ಲಿ ನಾವು ದಾಖಲಾದ ಅನಂತ ನೆನಪುಗಳು ಸದಾ ಹಸಿಯಾಗಿರುತ್ತವೆ. ಇವು ಬರಿ ನಿಮ್ಮ ಕತೆಯಲ್ಲ ಕಳೆದ ಶತಮಾನದ ಎಲ್ಲರ ನೆನಪು.

    • ವನಜಾಕ್ಷಿ ಎಸ್ ಮರಳಕುಂಟೆ

      ನಿಮ್ಮ ಓದಿನ ಅಭಿರುಚಿಗೆ ಮತ್ತು ಪ್ರೋತ್ಸಾಹಕ ನುಡಿಗಳಿಗೆ ನಮನಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading