ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಟ್ಟಿಸಿಕೊಂಡವರು..

-ಬಸವಣ್ಣೆಪ್ಪ ಕಂಬಾರ

ಚಿನ್ನವ್ವ ಅಡುಗೋಡೆ ಮೇಲೆ ಇಟ್ಟಿದ್ದ ಚಿಮಣಿಯ ಮಂದ ಬೆಳಕಿನಡಿ ಕನ್ನಡಿಯೊಳಗೆ ಮುಖ ನೋಡಿಕೊಂಡಳು. ಗಲ್ಲಕ್ಕೆ, ಹುಬ್ಬಿಗೆ, ಢಾಳವಾಗಿ ಹತ್ತಿದ್ದ ಪಾವಡರನ್ನು ತಿಕ್ಕಿಕೊಂಡು ಹಣೆ ಮೇಲೆ ಕುಂಕುಮದ ಬೊಟ್ಟು ಇಟ್ಟುಕೊಳ್ಳುಲು ತಡಕಾಡಿ ನಡುಮನೆ ಚೌಕಟ್ಟಿನ ತೋಳಿಗೆ ಯಾರೋ ಅಂಟಿಸಿದ ಒಂದು ಸನ್ನ ಟಿಕಳಿ ಇತ್ತುಅವಸರಕ್ಕೆ ಯಾವುದಾದರೇನು..?ಕಿತ್ತು ಹಣೆಗಿಟ್ಟುಕೊಂಡಳು. ರಾತ್ರಿ ಮಲಗುವಾಗ ಅಂದುಕೊ೦ಡ೦ತೆ ಅವಳು ಇವತ್ತು ಬೆಳಿಗ್ಗೆ ಊರಿಗೆ ಹೊರಡಲೇಬೇಕಿತ್ತು. ಇಲ್ಲದಿದ್ದರೆ ಮಗ ಕಿಟ್ಟಿ, ಹುಚ್ಚರ ಹಾಗೇ ಮಾತಾಡುವದನ್ನು, ಕೈ ಕೊಸರಿಓಡಿಹೋಗುವುದು, ಅಣಿಕಿಸುವುದು, ಬೇಡೆಂದಲ್ಲಿ ಕಿತ್ತು ಓಡಿಹೋಗುವುದು ವೈರತ್ವಕಟ್ಟಿಕೊಂಡು ಮೆರೆಯುವ ದುರುಳನಂತೆ ವರ್ತಿಸುವುದಕಂಡು ಬೆಚ್ಚಿ ಹೋಗಿದ್ದಳು. ಅದಕ್ಕಾಗಿ ಅವಳು ಮಾನಸಿಕವಾಗಿ ಕುಗ್ಗಿಹೋಗಿ ಹತಾಶಳಾಗಿ ಮದುವೆ ಮನೆಯೆನ್ನದೆ. ಬೀದಿಯೆನ್ನದೆ, ದೊಡ್ಡವರು ಚಿಕ್ಕವರೆನ್ನದೆ ಬಾಯಿಗೆ ಬಂದ೦ತೆಕೂಗುವುದು ಅದು ಇನ್ನೊ೦ದು ಅರ್ಥವನ್ನು ಪಡೆಯುವುದು ಕಂಡು ಇದೆಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂದು ಮನದಟ್ಟಾಯಿತು. ತನ್ನ ಕೈಚೀಲಗಳಿಗೆ ಬಟ್ಟೆಗಳನ್ನ ತುಂಬಿಕೊ೦ಡು ಹೊರಡಲು ಅಂಗಳಕೆ ಸಿದ್ದಳಾಗಿ ಬಂದಳು. ಅಡುಗೆ ಮನೇಲಿ ಸ್ನಾನಕ್ಕೆಂದು ನೀರು ಇಡುತ್ತಿದ್ದ ಅವಳ ತಾಯಿ ಹುಲಿಗೆವ್ವ ಮಗಳು ಹೀಗೆ ದಿಡೀರನೆ ಊರಿಗೆ ಹೊರಡಲು ಸಿದ್ದಳಾದುದ ಕಂಡು ದಿಗಿಲುಗೊಂಡು ಕೈಯಲ್ಲಿ ಹಿಡಿದಕೊಂಡಿದ್ದ ಪ್ಲಾಸ್ಟಿಕ ಬಿಂದಿಗೆಯೊ೦ದಿಗೆ ನಡುಮನೆಗೆ ಬಂದು ಸುತ್ತಲು ಕಣ್ಣಾಡಿಸಿದಳು. ಮದುವೆಗೆ ಬಂದಿದ್ದ ಕೆಲವು ಜನಎದ್ದು ಹಲ್ಲುಜ್ಜುತ್ತಿದ್ದರೆ ಇನ್ನು ಕೆಲವು ಜನ ಚೊಂಬು ಹಿಡಿದು ಊರ ಹೊರಗಡೆ ನಡೆದಿದ್ದರು, ಮತ್ತೊಂದಿಷ್ಟು ಜನ ಅವಸರವಿದ್ದವರು ಬೆಳಗಿನ ಬಸ್ಸಿಗೆ ಹೊರಡಲು ಕತ್ತಲಲ್ಲಿ ಸಣ್ಣ ಬೆಳಕನ್ನು ಹಿಡಿದುತಮ್ಮ ಬಟ್ಟೇ, ಸಾಮಾನುಗಳನ್ನು ತುಂಬಿಕೊಳ್ಳುತ್ತಿದ್ದರೆ, ಮನೆಯ ಎರಡು ಕೋಳಿಗಳು ಮಾಳಿಗೆಯ ಮೇಲೆ ನಿಂತುಕೂಗುತ್ತಿದ್ದವು. ಕೆಲವರು ಇನ್ನು ಮಲಗಿದ್ದಾರೆ. ಆದರೆ ಅವಳ ಮಗ ಕಿಟ್ಟಿ ಮಾತ್ರ ಶಿವಾಪೂರಿನ ರತ್ನವ್ವಳ ಮಗ ಜಾಕಿಯೊಂದಿಗೆ ಹಾಸಿಗೆಲಿ ಮಲಗಿಕೊಂಡು ಹಲ್ಲುಕಿಸಿಯುತ್ತಿದ್ದ. ಇಬ್ಬರು ಚಾದರ ಹೊದ್ದು ಕಿತ್ತಾಡುತ್ತಿದ್ದರು. ಹೊದಿಕೆ ನನಗೆ ಕಡಿಮೆ ಆಯ್ತು ನಿನಗೆ ಕಡಿಮೆ ಆಯ್ತು ಅಂತ ಇಬ್ಬರ ಮಧ್ಯೆ ಸಮ ಕಿತ್ತಾಟ. ಗೋಡೆಯತ್ತ ಮುಖಮಾಡಿ ಮಲಗಿದ ರತ್ನವ್ವಳಿಗೆ ಎಚ್ಚರವಿಲ್ಲ. ಜಾಕಿ ಅವಳಿಗು ಒಬ್ಬನೆ ಮಗ. ಕಿಟ್ಟಿ ವಯಸ್ಸಿನವನೇ ಆದರೆಎತ್ತರದಲ್ಲಿ ಒಂದಿ೦ಚು ಕುಳ್ಳ, ಗೋದಿ ಬಣ್ಣ, ತುಂಬಾ ಚುರುಕು. ಓದಿನಲ್ಲೂ ಅಷ್ಟೇ ಮುಂದಿದ್ದಾನ೦ತೆ. ಅವಳ ದೊಡ್ಡ ಮಗ ಇವರಿಬ್ಬರಿಗಿಂತಲೂ ಎರಡು ವರ್ಷದೊಡ್ಡವ ನೋಡಲು ಕಿಟ್ಟಿಯಂತೆ ಇದ್ದನ೦ತೆ ಟೈಪಾಯ್ಡ ಜ್ವರ ಬ೦ದು ಸತ್ತೋದನಂತೆ. ನಿನ್ನೆ ರತ್ನವ್ವ ಕಿಟ್ಟಿಯನ್ನು ನೋಡಿದ್ದೆ ತಡಾ ಅವಳಿಗೆ ನಂಬೋಕೆ ಆಗಲಿಲ್ಲ. ಅಕ್ಷತೆ ಸಮಯದಲ್ಲಿ ನೋಡಿದಾಕೆಗೆ ಅಕ್ಷತೆ ಎಲ್ಲಿಎಸೆಯಬೇಕೆಂಬುದೆ ತಿಳಿಯಲಿಲ್ಲ. ಜನರನ್ನು ತಳ್ಳಿಕೊಂಡು ಕಿಟ್ಟಿ ಇದ್ದಕಡೆಗೆ ಧಾವಿಸಿ ಬಂದಳು. ಕಿಟ್ಟಿಯನ್ನು ತದೇಕ ಚಿತ್ತದಿಂದ ನೋಡಿ ಅವನ ತಲೆಯ ಮೇಲೆ ನೇವರಿಸಿ, ಮುಖದ ತುಂಬ ಬೆರಳಾಡಿಸಿದಳು. ಚಿನ್ನವಳಿಗೆ ಇವಳ್ಯಾರು..? ಇದೇಕೆ ಹೀಗೆ ತನ್ನ ಮಗನನ್ನು ಮುದ್ದು ಮಾಡುತ್ತಿದ್ದಾಳೆ..? ಗೊತ್ತಾಗದೆ ಬೆರಗಾದಳು. ಅದೇ ಬಣ್ಣ, ಮುಖ, ಹಾವಭಾವ ಎತ್ತರಕ್ಕೆ ಸ್ವಲ್ಪ ಕುಳ್ಳ ಬಿಟ್ಟರೆ ಎಲ್ಲವು ತನ್ನ ಮೊದಲ ಮಗನನ್ನ ಹೋಲುತ್ತಿದ್ದ ಕಿಟ್ಟಿ. ಖುಷಿ ಕಿತ್ತು ಬಂತು ರತ್ನವಳಿಗೆ. ಎತ್ತಿ ಆಡಿಸಿದಳು, ಲಲ್ಲೆಗರೆದು ತೊಡೆ ಮೇಲೆ ಕೂಡ್ರಿಸಿಕೊಂಡು ಮುದ್ದಿಸಿದಳು. ಮದುವೆ ಮನೆ ತುಂಬ ಕೈ ಹಿಡಿದು ತಿರುಗಾಡಿದಳು. ಪ್ರೀತಿಯಿಂದ ಹತ್ತು ರೂಪಾಯಿಯ ನೋಟೊಂದನ್ನು ಅವನ ಅಂಗಿ ಕಿಸೆಯಲ್ಲಿ ತುರುಕಿದ್ದಳು. ಮಗನ ಬಗೆಗಿನ ನೆನಪುಗಳು, ನೋವುಗಳು ಮೆಲ್ಲಗೆ ಕಣ್ಣಮುಂದೆ ಬಂದು ಅವಳನ್ನು ಅಧೀರಳನ್ನಾಗಿಸಿದ್ದವು. ಕಣ್ಣುತೆರೆದರೆ ಸತ್ತ ಮಗನೆ ಮತ್ತೆ ಹುಟ್ಟಿಬಂದನೆನೊ೦ಬ೦ತಿತ್ತು ಅವಳಿಗೆ. ಆದರು ಮನಸ್ಸು ತಡಿಯದೆ ಚಿನ್ನವಳ ಮುಂದೆ ಹೇಳಿಯೇ ಬಿಟ್ಟಳು.

“ಚಿನ್ನವ್ವ ನಿನ್ನ ಮಗಾ ಥೇಟ ನನ್ನ ಹಿರಿ ಮಗನಾಂಗ ಅದಾನ ನೋಡ.. ಇಲ್ಲಿ ನೋಡ ಅಂತ ತನ್ನ ಪರ್ಸಿನಲ್ಲಿ ಇಟ್ಟುಕೊಂಡಿದ್ದ ಮಗನ ಭಾವಚಿತ್ರವನ್ನು ಚಿನ್ನವಳಿಗೆ ತೋರಿಸಿದಳು. ಚಿನ್ನವಳಿಗು ಅದೇ ಬೆರಗು ಹಾಗೂ ಆಘಾತಕಿಟ್ಟಿಯಂತೆ ಇರುವ ಹುಡುಗನ ಪೋಟೊ ನೋಡಿ ಕ್ಷಣ ದಂಗಾಗಿ ಹೋದಳು. ರತ್ನವ್ವ ಮುಖ ಒರೆಸಿಕೊಳ್ಳುತ ಸತ್ತು ಹೋದ ಮಗನ ನೆನಪು ಅವಳ ಕಣ್ಣಾಲೆಗಳಲ್ಲಿ ನೀರಾಡಿಸಿ ಬಿಟ್ಟಿತು. ಚಿನ್ನವ್ವಅದನ್ನು ಗಮನಿಸಿಯು ಗಮನಿಸದಂತೆ ಮುಖ ತಿರಿವಿದಳು. ಯಾಕೋ ಸದ್ಯದ ಸ್ಥಿತಿ ಇರುಸು ಮುರುಸು ಅನಿಸತೊಡಗಿತು. ರತ್ನವ್ವಕಿಟ್ಟಿಯಗದ್ದ ಹಿಡಿದು ದಿಟ್ಟಿಸುತ್ತ,

“ಇವನ ನಮಗ ಕೊಟ್ಟಬಿಡು ಸಾಕೊಂತಿನಿ..ತು೦ಬಾ ಆಸೇಯಿ೦ದ ಕೇಳಿದಳು. ಮೊದಮೊದಲು ಚಕಿತಳಾದ ಚಿನ್ನವ್ವ ಗರಬಡೆದವರಂತೆ ದ೦ಗಾಗಿ ಹೋದಳು. ಆಶ್ಚರ್ಯದಿಂದ “ಹೌದು..| ಇವನ್ನೇನ ಸಾಕತಿಯವ್ವಾ ..? ನಿನ್ನ ಮಗಾ ಎಟ್ಟ ಉತ್ತಮುಳ್ಳದಿತ್ತೊ ಎನೋ ಇದು ಬಾಳ ಕಾಸಡೆದ ಐತಿ. ಯಾರನು ಸೇರಾಂಗಿಲ್ಲ..ಅ೦ತಕಿಟ್ಟಿಯ ಬಗೆಗಿನ ಕಂಪ್ಲೇ೦ಟು ಹೇಳಿದಳು. ಒಬ್ಬರಂಗ ಇನ್ನೊಬ್ಬರು ಇರತಾರ ಅ೦ತ ಕೇಳಿದ್ದು ನೆನೆಪಾಗಿ ಕಿಟ್ಟಿ ಅವಳ ಮಗನಾಂಗ ಯಾಕಿರಬಾರದು..? ಮಗನನ್ನು ಕಳೆದುಕೊಂಡ ನೋವು ಇರತ್ತಲ್ಲಾ ಅದಕ್ಕಾಗಿ ಹೀಗೆನಾದರು ಮಾತಾಡಿರಬಹುದು ಅಂತ ತನ್ನನ್ನುತಾನೆ ಸಮಾಧಾನ ಮಾಡಿಕೊಂಡಿದ್ದರು ಮನಸ್ಸಿನ ಮೂಲೆಯಲ್ಲಿ ಬಲಗನ್ನು ಹಾರುತ್ತಿದ್ದು ನಿಜವಾಗಿತ್ತು. ಆ ಕ್ಷಣಕ್ಕೆ ಆ ವಿಷಯವನ್ನು ಮರೆತು ಮದುವೆ ಮನೇಲಿ ತಿರುಗಾಡಿಕೊಂಡಿದ್ದರೆ ಕಿಟ್ಟಿ ಮಾತ್ರ ಅವಳ ಜೊತೆನೆ ಆಟಾಡುತ ಅಲೆಯ ತೊಡಗಿದ. ಚಿನ್ನವ್ವ ಇದನ್ನು ಕಂಡು ಒಮ್ಮೇ ಕರೆದು ಬುದ್ದಿ ಹೇಳಿದಳು. ಮತ್ತೊಂದು ಸಲಕ್ಕೆ ಸಿಟ್ಟಿಗೆ ಬಂದು ತನ್ನ ಜೊತೆಗೆ ಮಗನ ಕೈ ಹಿಡಿದುಕೊಂಡು ಕೂಡ್ರಿಸಿಕೊಂಡಳು. ಸ್ವಲ್ಪ ಮೈ ಮರೆತರ ಸಾಕು ಕಿಟ್ಟಿ ಅವಳತ್ತ ಓಡಿ ಹೋಗಿ ಜಾಕಿ ಹಾಗು ಅವರಮ್ಮನನ್ನು ಸೇರುತ್ತಿದ್ದ. ಇದರಿಂದ ಚಿನ್ನವ್ವ ಗಾಬರಿಯಾದಳು. ಇದನ್ನು ಯಾರಿಗೆ ಹೇಳೋದು ..? ಹೇಗೆ ಹೇಳೋದು ತಿಳಿಯದೆ ಗಂಡನಿಗೆ ಪೊನ ಮಾಡಿ ನಾನು ನಾಳೆನೆ ಬರತಿದಿನಿ ಕರಕೊಂಡ ಹೋಗೊಕೆ ಬನ್ನಿ ಅಂತ೦ದ ಹೇಳಿ ಕಟ್ ಮಾಡಿದಳು. ಅಸಮಾಧಾನ ಅವಳ ಮನಸ್ಸು ಅಲುಗಾಡಿಸಿಬಿಟ್ಟಿತು. ಹಣೆ ಮೇಲೆ ಸಣ್ಣ ಬೆವರುಕಿತ್ತು ಬಂದಿತ್ತು. ಕಿಟ್ಟಿ ಮಾತ್ರ ಜಾಕಿ ಜೊತೆಗೆ ತಲ ಬಾಗಿಲಿಗೆ ಕಟ್ಟಿದ್ದ ತೋರಣವ ಇಬ್ಬರು ಜಿಗಿಜಿಗಿದು ಮುಟ್ಟಲು ಹವಣಿಸುತ್ತಿದ್ದರು. ಸ್ವಲ್ಪ ದಿನಗಳವರೆಗೆ ರತ್ನಾ ಆಂಟಿ ತಮ್ಮನೆಗೆ ಬಾ ಅಂತಿದಾರೆ ಹೋಗಿರ‍್ಲೇನು ಮಮ್ಮಿ..?ಅಂತ ಕಿಟ್ಟಿ ರಾತ್ರಿ ಊಟ ಮಾಡುವಾಗ ಚಿನ್ನವಳ ಕೇಳಿದ್ದೆ ತಡಾ ದಿನಪೂರ್ತಿ ಉಂಡುದ್ದೆಲ್ಲ ಗೊಬಕ್ಕನೆ ತಿರಿಗಿ ಬಾಯಿಗೆ ಬಂದ೦ತಾಗಿ ಚಿನ್ನವ್ವವಾ.. ಅನಕೊ೦ತ ಎದ್ದು ನಿಂತಳು. ಈ ಎಲ್ಲ ಘಟನೆಗಳನ್ನು ನೋಡಿ ಕುದ್ದು ಹೋಗಿದ್ದ ಚಿನ್ನವಳಿಗೆ ಸಿಟ್ಟು ನೆತ್ತಿಗೇರಿ ಬಂತು ಎಡಗೈಯಿ೦ದ ಅವನ ಮುಂದಿನ ತಟ್ಟೇಯನ್ನು ದೂಡಿದವಳೆ
“ಥೂ ಹಲ್ಕಟ್ಟ ನನ್ನ ಹಾಂಟ್ಯಾ..ಊರೂರ ತಿರಗಾಕ ನಿನಗೇನ ಮನಿ ಮಟಾ ಇಲ್ಲೇನು..? ಬೆಳಗನಿಂದ ನೋಡಾತೇನಿ.. ಆ ಜೋಗ್ಯಾನ ಜೋಡ ಫಂಗ್ ಫಂಗ್‌ ತಿರಗಾತಿ ಕಾಲ ಮುರದ ಕೈಯಾಗಕೊಟ್ಟೇನು ನಾಯಿ ಕುನ್ನಿಯಂಗ ಊರಿಗಿ ನಡಿ.. ಅಂತ ಕೂಗಿದಳು. ಆ ಮಾತಿಗೆ ಕಿಟ್ಟಿ ಎನೊಂದ ಹೇಳದೆ ಊಟ ಮುಗಿಸಿ ಮೇಲೆದ್ದಿದ್ದ.

ಆ ನಂತರ, ಅಡಿಗೆ ಮನೇಲಿ ಕುಳಿತು ಊಟ ಮಾಡುತ್ತಿದ್ದಕಿಟ್ಟಿ ಮತ್ತುಜಾಕಿ ಕೇಕೆ ಹಾಕಿ ನಗುತಗದ್ದಲ ಮಾಡುತ್ತಿದ್ದರು. ಚಿನ್ನವ್ವ ನೆಟ್ಟಗ ಅಲ್ಲಿಗ ಬಂದವಳ ಒಲಿಮುಂದ ಕುಕ್ಕರಗಾಲಲಿ ಕುಂತು ಕಿಟ್ಟಿಯನ್ನೊಮ್ಮಿ ಕೆಕ್ಕರಿಸಿ ನೋಡುತ “ಹೂಂ ಹೇಳ ಎನ ಬೇಕ ನೀಡತೇನ ಗಡಾನ ಉಣ್ಣು ನಡೀ ಊರಿಗಿ ಹೋಗೊಣ ಮತ್ತೇನರ ಸೋಗಾ ಹಾಕಿದಿ ಕಾಲಕಟ್ಟಿ ಎಳಕೊಂಡ ಹೊಗತೇನ ಹುಚನನ್ನ ಹಾಟ್ಯಾ.. ಹರಗ್ಯಾಡಕೊಂತ ಹೋಗಾಕ ಶೋಕಾಸಿದಾನ. ಏನೋಂದ ಸಾಲಿ ಅನ್ನಾವಲ್ಲಅಕ್ಷರ ಅಂದಾವವಲ್ಲ. ಹಲ್ಲಕಿಸಗೊಂತ ಪಿರಿ ಪಿರಿ ತಿರಗಿದರಎದಕ ಬಂತ ಅರವಗೇಡಿ ಬಾಡ್ಯಾ.. ಅತೀ ಕೋಪದಿಂದ ಉಗಿದಳು. ಕಿಟ್ಟಿಗೆ ಕೋಪ ಬಂತಾದರು ಸುಮ್ಮನಾದ ಆದರೆ ಜಾಕಿ ಮಾತ್ರ ಕಿಟ್ಟಿಯನ್ನೊಮ್ಮಿಅವರಮ್ಮನೊಮ್ಮಿ ನೋಡಿ ಮತ್ತೇ ನಗತೊಡಗಿದ. ಇದು ಚಿನ್ನವಳಿಗು ಮೀರಿತು, ಎದ್ದು ಹಂಡೆಯೊಳಗಿನಿ೦ದ ಒಂದ ಚರಗಿ ನೀರ ತುಂಬಿ ಕಿಟ್ಟಿಯ ಮುಂದಕುಕ್ಕರಿ ಜಾಕಿಯನ್ನುದ್ದೇಶಿಸಿ “ನೀ ಯಾಕ ಹಲ್ಲಕಿ ಸ್ಯಾತಿನೊ ಇಲ್ಲೇನ ಮಂಗ್ಯಾ ಕುಣ್ಯಾತೈತಿ..? ಮಸಡಿ ನೋಡ್ಕೋ ನಿಂದ..? ಜಂತಿಕು೦ಟಿಯ೦ಗ ಹಲ್ಲ ಮಾಡಕೊಂಡು ಕಿಸಕೊ೦ತ ಕು೦ತಾನಿಲ್ಲಿ.. ಅವನ ಜೊಡ ಈ ಅಕಲಗೇಡಿ ಬಾವಾಗ ಬುದ್ದಿ ಇದ್ದಿದ್ರನಲಾ..ಹುಚ್ಚ ನನ್ನಹಾಟ್ಯಾ.. ಮೂರ ತುತ್ತ ಆವಾಗಿನಿಂದ ಇಳಾಸತಿದಿ ತಿಂದು ನೀರ ಕುಡದೇಳ ನಿನ್ನ ಊರಿಗಿ ನಡಿ ಅಲ್ಲೇತಿ ನಿನಗ ಮದಿವಿ ಅಂತ ಚಿನ್ನವ್ವ ಮಗನ ಮೇಲಿನ ಕೋಪವನ್ನು ಹಾಗು ಮನೆಗೆ ಹೋಗಿ ಮಾಡುವ ಉಪಾಯವನ್ನು ಶಾರ್ಟ ಆಗಿ ವಿವರಿಸಿ ಹಲ್ಲಕಡಿದಳು. ಅವಳಿಗೆ ಮೈಯೆಲ್ಲ ಬೆಂಕಿ ಅಡರಿಕೊಂಡ೦ತೆ ಸಿಟ್ಟು ಕುದಿಯುತಿತ್ತು. ಊರಿಗೆ ಹೋದ ಮೇಲೆ ಆಗುವ ರೌದ್ರಾವತಾರದ ಒಂದು ಝಲಕ ಕಿಟ್ಟಿಗೆ ಕಣ್ಣ ಮು೦ದೆ ಒಮ್ಮೆ ಬಂದು ಹೋಯ್ತು. ಅವರಮ್ಮನದು ಒಂದುತರಾ ಶಿಕ್ಷೆಯಾದರೆ ಅವರಪ್ಪನದು ಇನ್ನೊಂದು ತರಾ ಶಿಕ್ಷೆ ಕೈ ಕಾಲ ಕಟ್ಟಿತಲಿ ಕೆಳಗ ಮಾಡಿ ಗೂಟಕ ತೂಗ ಹಾಕತಾನೆ. ಸದರಿ ಈ ಎಲ್ಲ ಪ್ರಯೋಗಗಳು ಈ ಹಿಂದೆ ಅನೇಕ ಬಾರಿ ಕಿಟ್ಟಿಯ ಮೇಲೆ ನಡೆದು ಹೋಗಿವೆ. ಆವಾಗೆಲ್ಲ ಚಿನ್ನವಳೆ ಮುಂದೆ ಹೋಗಿ ಬಿಡಿಸುತಿದ್ದಳು. ಗಂಡನ ಸಮಾದಾನ ಮಾಡುತಿದ್ದಳು. ಆಗದೆ ಹೊದರೆ ಸಮರವನ್ನೆ ಹೂಡತಿದ್ದಳು.

ಪಡಸಾಲಿಯೊಳಗ ಕೈಚೀಲ ಹಿಡಕೊಂಡು ಗೋಡೆಗೆ ಆಧಾರವಾಗಿ ಮುಖ ಸಪ್ಪಗಾಗಿಸಿಕೊಂಡು ಕಿಟ್ಟಿಯ ದಾರಿಯನ್ನೆ ಕಾಯುತ್ತ ಕುಳಿತಿದ್ದ ಚಿನ್ನವಳ ಮುಖದಲ್ಲಿ ನೋವು ಮಡುಗಟ್ಟಿ ನಿಂತಿತ್ತು. ಹುಲಿಗೆವ್ವ ಉಡಿಯಕ್ಕಿ ಒಂದಗ೦ಟು, ಹೋಳಿಗಿ, ಸೀರಿ, ಕುಬಸಾ, ಕಿಟ್ಟಿಗಿ ಒಂದು ಅಂಗಿ ಅರಿವಿ, ಚಿನ್ನವಳಿಗೆ ಒಂದು ಜ೦ಪರ ಪೀಸು ಮ್ಯಾಲ ೫೦ ರೂಪಾಯಿ ಎಲ್ಲಾನು ಗ್ವಾಳೆ ಮಾಡಿಕೊಂಡು ಇನ್ನೊ೦ದ ಕೈಚೀಲದಲ್ಲಿ ತುಂಬಿಕೊಳ್ಳುತ ಅವಳ ಹಂತ್ಯಾಕ ಬಂದು,
“ಶಿವಗೊಂಡ ಬಂದಮ್ಯಾಲ ಹೋಗ್ತೆನಂದಿದ್ದಿ..? ಇದೇನ ಹುಡುಡು ಮಾಡ್ಕೋತಎದ್ದ ನಿಂತದಿ..? ತಾಳ ಇಲ್ಲ ಮೇಳಿಲ್ಲ ಎನ ಜಲ್ಮ ಮಾಡತೀರೇ.. ಅಂತ ಅಸಮಾಧಾನ ಹೊರಹಾಕಿದಳು. ಕುಂತವಳ ಹಣೆಗೆ ಕುಂಕುಮ ಹಚ್ಚುತ್ತ ಬೆಕ್ಕೇರಿಯಿಂದ ನಿಮ್ಮಣ್ಣ ಬರ‍್ತೀನಿ ಗೋಕಾಂವಿಗೆ ಹೋಗೊಣ ಅಂದಿದ್ದ ಕಾಲಾಗಿನ ಚಾಳ ಕೊಡಸು ಅಂದಿದ್ದಿ ಬೆಳಕಾಗುಡದ ಮೈಯಾಗದೆವ್ವ ಹೊಕ್ಕಾರಂಗ ಆಡತಿ..? ನಿನ್ನ ಮನೀಗಿ ಹೋಗಾಕ ನಿನಗೇನ ಕಟ್ಟೊ ಕಾವಲು ನಿಮ್ಮ ನಿಮ್ಮಜನ್ಮ ನಿಮ್ಮ ಹಿಂಬಾಲ ಐತಿ ಎನಾರ ಮಾಡ್ಕೋ.. ಹಿಡಿ ಉಡೆಕ್ಕಿ ಹಾಕತಿನಿ ನೆಟ್ಟಗಕುಂದರ.. ಅ೦ತ ಗದರಿದಳು. ಚಿನ್ನವಳಿಗೆ ಅವರವ್ವನ ಅಸಹಾಯಕತೆ ಹಾಗು ಕಕ್ಕುಲಾತಿ ಅರಿವಾಗಿಲ್ಲಂತಲ್ಲ ಎಲ್ಲಿ ತನ್ನ ಮಗಾ ಆ ಹುಡಗನ ಜೋಡ ಕೂಡಿ ಮೈ ಮರಿತೈತೊ ಎನೋ ಅಂತ ಗಾಬರಿ. ಅದನ ಹೇಳಕ್ಕೊದರು ಯಾರು ಅಷ್ಟ ಸೀರಿಯಸ್ಸಾಗಿ ತಗೊಳಾತಿಲ್ಲ. ಹಾಗಂತ ಸುಮ್ನ ಬೇರೆಕುಂತಿಲ್ಲ ನಿನ್ನೆರಾತ್ರಿನೆ ಚಿನ್ನವ್ವ ಹುಲಿಗೆವ್ವಳ ಮುಂದ ನಡೆದಘಟನೆ ಬಗ್ಗೆ ಹೇಳಿ ಹಗುರಾಗಿದ್ದಳು. ಆದರೆ ಸಂಸಾರದ ಅನುಭವ ಇರುವ ಹಾಗು ಎಳೆಂಟ ಮಕ್ಕಳ ಹಡೆದಿರುವ ಹುಲಿಗೆವ್ವ ಅವಳ ಮಾತನ್ನು ತಳ್ಳಿ ಹಾಕಿದ್ದಳು
“ಅಕೀ ಜೊಡಯಾಕ ಹೋದೋತ..? ಅವ್ವ ಅಪ್ಪಯಾರಂತ ಅವಗ ಗೊತ್ತಿಲಂದಿ..? ವಾರಿಗಿ ಹುಡಗ ಅದಕ್ಕಾಗಿ ಆಟಾ ಆಡಕೋಂತ ಒ೦ದ ಕೊ೦ದು ಜೋಡಕು೦ತ ಆಡತಾವ, ಕುಣಿತಾವ, ತಿರಗತಾವ ಉಣತಾವ ಅದಕ್ಕೆಲ್ಲ ಹಿಂಗ ಮಾತಾಡತಾರೇನ..? ರಗಡ ಶ್ಯಾಣ್ಯಾಳದಿ ಬಿಡು ಯಾರರ ಮುಂದ ಹಿಂಗಬಾಯಿ ಬಿಟ್ಟಿ ನಕ್ಕಾರ.. ಅಂತ ಮಾತು ಹಾರಿಸಿ ಬಿಟ್ಟಿದ್ದಳು ಹುಲಿಗೆವ್ವ. ಆದರೆ ಚಿನ್ನವಳಿಗೆ ಇದರಿಂದ ಸಮಾಧಾನ ಆಗದೆ ಒದ್ದಾಡಿದಳು. ರಾತ್ರಿ ಎಷ್ಟೋತನಕಾ ನಿದ್ದೆಗೆಟ್ಟು ಕುಳಿತಿದ್ದಳು.

ಇದಾದ ಗಳಿಗೊತ್ತಿಗಿ, ಯಾರದೋ ಹುಡುಗೊಂದು ಚಿನ್ನವಳ ಬಳಿ ಓಡಿ ಬಂದು ನಿಮ್ಮ ಕಿಟ್ಟನ ಮ್ಯಾಲ ಯಾರೊ ಪಟಪಟಿ ಹಾಸ್ಕೊಂಡ ಹೋದರು.. ರಸ್ತಾದ೦ಡಿಗಿ ಸಂಡಾಸಕ ಕು೦ತಿದ್ದಅಲ್ಲಿ ಬಿದ್ದಾನ ರ‍್ರೀ. ಅಂತ ಉಸರು ತೆಳಗಾ ಮ್ಯಾಲ ಮಾಡ್ಕೋಂತ ಹೇಳಿದ. ಚಿನ್ನವ ಒಂದು ಕ್ಷಣ ಸ್ಟನ್ ಆದಳು. ಎಚ್ಚತ್ತಕೊಂಡವಳ. ಉಡಿಯೊಳಗಿನ ಉಡಿಯಕ್ಕಿ, ಸೀರಿ ಕುಬಸ, ರೊಕ್ಕ ಕೈಯಾಗ ಹಿಡಕೊಂಡಿದ್ದನ್ನೆಲ್ಲ ಮ್ಯಾಲಕ್ಕೆಸದವಳ ಅವ್ವನ ಬಾಜೂಕ ತಳ್ಳಿ ಕುಳಿತಲ್ಲಿಂದ ಕಿತ್ತೇದ್ದವಳೆ “ಯಪ್ಪಾ..ಕಿಟ್ಟನ..ಯಾವ್ವಾ ಎಲ್ಲಿ ಬಿತ್ತ ನನ್ನ ಮಗಾ.. ಲಬೊ ಲಬೋ ಅಂತ ಬಾಯಿ ಬಾಯಿ ಬಡಕೋಂತ ಊರ ಹೊರಗಿನ ರಸ್ತೇಯತ್ತ ಓಡತೊಡಗಿದಳು ಅವಳನ್ನ ನೋಡಿ ಮನೇಯಲ್ಲಿದ್ದ ಸಣ್ಣವರು ದೊಡ್ಡವರು ಹೆಂಗಸರು ಮಕ್ಕಳೆಲ್ಲ ಅಳುತ್ತ ಒಮ್ಮಿಗೆ ಓಡತೊಡಗಿದರು. ಆಜೂ ಬಾಜು ಮನೇಯವರು ಹಿಂದಿನ ಮನೆಯವರು, ಮುಂದಿನ ಮನೇಯವರು ಏನಾಯ್ತು..? ಕೇಳಿದರೆ ಯಾರು ಯಾರಿಗು ಹೇಳುವ ಪುರಸೊತ್ತಿಲ್ಲದೆ ಬರೀ ಓಡತೊಡಗಿದರು. ಹೆಂಗಸರ ಅಳುವಿನ ಸದ್ದಿಗೆ ಅವರ ಕೂಡಿ ಇವರು ಕೂಡಿ ಇಡೀ ಓಣಿಯ ತುಂಬ ಜನಕಕ್ಕೀರಿದು ಸೇರಿತು. ಈಗ ಗಂಡಸರು ಹೆಂಗಸರು ಅನದ ಓಡತೊಡಗಿದರು. ಸಹಜವಾಗಿದ್ದ ಆ ಕೇರಿಯ ಸ್ಥಿತಿ ಒಂದೇ ಕ್ಷಣಕ್ಕೆ ಆತ೦ಕದ ಕುದಿಯಾಯ್ತು. ಗಾಬರಿಯಿಂದ ಎಲ್ಲರೂ ಒಬ್ಬರ ಮುಖ ಒಬ್ಬರ ನೋಡುತ ಹೆಂಗಾತ..?ಯಾರ ಅವ..? ಯಾವೂರವ..? ಗಾಡಿ ನಂಬರರ ರ‍್ಕೋಂಡಿದ್ರ ಪೋಲಿಷ ಕಂಪ್ಲೇ೦ಟರ ಕೊಡಬಹುದು.. ಸಣ್ಣ ಮಕ್ಕಳ ಮ್ಯಾಲ ಹಾಸಕೊಂಡ ಹೋಗ್ತಾನಂದ್ರ ಆ ಮಗನ ಕೈ ಕಾಲ ಮುರಿಬೇಕು..? ಅವೇನ ಮನಿಷ್ಯಾನೋ ದನಾ ಗಿನಾ ಅದಾನೋ ಹುಚ್ಚ ಸುಳೇಮಗಾ..ಅಂತ ಮತ್ತೋಬ್ಬರು ಅಂದರೆ, “ಯಾರೋ ಬೇಕಂತ ಮಾಡಿದಾರ ಅಂತ ಇನ್ನೊಬ್ಬರ ಅ೦ದರು. ಹೀಗೆ ಸೇರಿದ ಜನ ತಲೆಗೊಂದು ಮಾತಾಡುತ ಯಾವ ನಿರ್ಧಾರಕ್ಕೂ ಬರದೆ ವ್ಯರ್ಥಚರ್ಚೆ ಮಾಡತೊಡಗಿದರು. ಅದಾಗಲೇ ಅರ್ಧಾಕೇರಿಯ ಜನವಲ್ಲ ಊರ ಹೊರಗಿನ ರಸ್ತಾದ ಕಡೀಗಿ ಓಡಿ ಹೋಗಿದ್ದರು. ಆ ಕಡೇಯಿಂದ ನಡೆದುಕೊಂಡು ಬರುತ್ತಿದ್ದ ಚಿನ್ನವಳ ಅಪ್ಪಗುರುಪಾದ ಎಲ್ಲರನ್ನು ಸಮಾಧಾನ ಮಾಡುತರ‍್ರೀ. .ದವಾಖಾನಿಗಿ ಒಯ್ದಾರ ರ‍್ರೀ.. ಅಂತ ತನ್ನತ್ತ ಬರುವ ಜನ ಸಮೂಹವನ್ನು ತಡೆದು ನಿಲ್ಲಿಸಿ ಸುದ್ದಿ ಮುಟ್ಟಿಸಿ ಸಮಾಧಾನ ಮಾಡಿದ. ನಂತರ ಎಲ್ಲರನ್ನು ಕರೆದುಕೊ೦ಡು ಮನೆಯತ್ತ ನಡೆದ. ಎಲ್ಲಕ್ಕಿಂತ ಮುಂದೆ ಇದ್ದ ಚಿನ್ನವ್ವ..

”ಯಪ್ಪಾ ನನ್ನ ಮಗಾ ಎಲ್ಲಿ ಏನಾಗೇತಿ ಅವಗ..? ಯಾರಂವಗಾಡಿ ಹಾಸಿದಾಂವ..? ಅ೦ತ ಬೋರಾಡಿಕೊಂಡು ಅಳುತ ಅಪ್ಪನ ಜೋತು ಬಿದ್ದು ಅಳತೊಡಗಿದಳು. ಹುಲಿಗೆವ್ವ ಗಗಂಡ ಇಷ್ಟ ಸಮಾಧಾನ ಆಗಿರೊದು ನೋಡಿ ಸಂಶೆ ಬಂತು ಆದರು ಕೇಳಿದಳು.

“ಯರ‍್ರೀ ಅವ ಲಡದು ನನ್ನ ಹಾಂಟ್ಯಾ ಹುಡುಗನ ಮ್ಯಾಲ ಕುಟುರ ಹಾಸಿಕೊಂಡ ಹೋಗತಾನಂದ್ರ ಮನಿಶೇರಿಗಿ ಹುಟ್ಟಿದಾನ ಎನ ದನೀಗಿ ಹುಟ್ಟಿದಾನೊ..? ಅವನ ಮನ್ಯಾಗ ಮಕ್ಕಳಾ ಮರೀ ಏನ ಇಲ್ಲಂತ ಏನ..? ಹುಚ್ಚ ನನ್ನ ಹಾಂಟ್ಯಾ… ಅ೦ತ ಗುಡುಗಿದಳು. ಗುರುಪಾದ ಹುಲಿಗೆವ್ವಗ ಸಮಾಧಾನ ಮಾಡುತ “ಎಯ್ ನೀ ಚಿನ್ನವಳ ಕರಕೊಂಡ ಮನೀಗಿ ನಡಿ ನಾ ಅದಕ್ಕೆಲ್ಲ ವೆವಸ್ಥಾ ಮಾಡಿದೇವ.. ನಡಿ ಮೊದಲ ಮನೀಗಿ ನಡೀರಿ..ಅಂತದ ಬಾಯಿಸ ತೊಡಗಿದ. ಸ್ವಲ್ಪ ಹಿಂದೆ ಹೋಗಿ ಓಣ್ಯಾಗಿನ ಕೆಲವ ಗಂಡಸರಕಿವ್ಯಾಗ ಗುರುಪಾದ ಏನೆನೊ ಉಸುರಿದ. ಅವರು ಅದನ ಕೇಳಿ ಹಿಂಗಾ..ಆತ ಬಿಡ ಅಂತ೦ದು ಸ್ವಲ್ಪ ನಿಟ್ಟುಸಿರ ಬಿಟ್ಟರು. ಆದರ ಎನ ನಡದದ, ಯಾಕ ಎಲ್ಲಾರು ಸುಮ್ನಾದರು ಒಂದು ತಿಳಿಯದ ಹೆತ್ತಕರುಳು ಚಿನ್ನವ ಮಾತ್ರ ಸುಮ್ಮನಿರದ
“ಏನ ನಡೀಸಿದಿರಿ ನೀವ..ಎಲ್ಲಿ ನನ್ನ ಮಗಾ..? ಅಂತ ಆವೇಶದಿ೦ದ ಕೂಗಿದಳು. ಚಿನ್ನವಳಿಗೆ ಶಿವಾಪೂರಿನ ರತ್ನವಳ ಗಂಡನೇ ಇದನ್ನೆಲ್ಲ ಯಾಕ ಮಾಡಿರಬಾರದು.,? ಅಥವಾ ಇವಳೇ ಯಾಕೇ ಹಾಗೇಲ್ಲ ಮಾಡಿಸಿರಬಾರದು ಅಂತ ನೆನಸಿಕೊಂಡು ಕ್ಷದ್ರಳಾಗುತ್ತ ಹೋದಳು. ಸತ್ತೋದ ಅವಳ ಹಿರಿ ಮಗಾ ಕಿಟ್ಟಿಯಂತೆ ಇತ್ತ೦ತ ಹೇಳಿದ್ದಳಲ್ಲ..ಅದಕ್ಕಾಗಿ ಹೀಗೆಲ್ಲ ಮಾಡಿರಬಹುದಾ..? ಅಯ್ಯೋ ಶಿವನ..ಅಂತ ಹಲ್ಲಕಡಿಯುತ ಮನದ ಸ್ಥಿಮಿತತೆ ಕಳೆದುಕೊಂಡಳು. ಅಷ್ಟೊತ್ತಿಗಾಗಲೇ ಹಿಂದೆ ಬರುತಿದ್ದ ಜನ ಗುಸುಸುಸು ಪಿಸು ಪಿಸಿ ಮಾತಾಡುತ್ತ ಬರುತ್ತಿದ್ದರು. ಮನೇಗೆ ಬರುವಷ್ಟರಲ್ಲಿ ಮನೆ ಮುಂದೆರತ್ನವ್ವ ಅಕೀ ಮಗ ಜಾಕಿ ಮತ್ತು ಕಿಟ್ಟಿ ಎಲ್ಲರ ದಾರಿ ಕಾಯುತ್ತ ನಿಂತಿದ್ದರು. ಚಿನ್ನವಳಿಗಿ ಈಗಲೂ ಎನೊಂದು ಅರ್ಥವಾಗಲಿಲ್ಲ. ಕೈ ಕೊಸರಿಕೊಂಡು ಮಗನತ್ತ ಓಡಿದಳು. ಒಂದು, ಮಗನನ್ನು ತಬ್ಬಿಕೊಂಡು ಒಮ್ಮೆ ಮನಸಾರೆ ಅತ್ತು ಬಿಟ್ಟಳು. ಹುಲಿಗೆವ್ವ ಗುರುಪಾದ ನಡೆದ ಘಟನೆಯನ್ನು ಸೇರಿದಜನರಿಗೆ ತಿಳಿಸಿ ಹೇಳುತ್ತಿದ್ದರೆ ಚಿನ್ನವಳಿಗೆ ಸಮಾಧಾನವೇ ಇಲ್ಲಯಾಕ ಹಿಂಗ ಮಾಡಿದ್ರಿ..? ಅಂತ ಎಲ್ಲರನ್ನು ತನ್ನ ಮನಸ್ಸು ಒಟ್ಟಿಗೆ ಸೇರಿಸಿಕೊಂಡು ಪ್ರಶ್ನಿಸುತ್ತ ಬಿಕ್ಕಿ ಬಿಕ್ಕಿ ಅತ್ತಳು. ಕಿಟ್ಟಿ ಅವಳ ಮಡಿಲಲ್ಲಿ ಸುಮ್ಮನೆ ಮುದುರಿಕೊಂಡು ಕುಳಿತಿದ್ದ.

ಊಟ ಮಾಡಿಕಿಟ್ಟಿ ಮತ್ತುಜಾಕಿ ಸಂಡಾಸಕ್ಕೆ೦ದು ಊರ ಹೊರಗೆ ಹೋದಾಗ ಕಿಟ್ಟಿಗೆ ಕಾಗೆ ಮುಟ್ಟಿತಂತ ಅದನ್ನುಜಾಕಿ ಬಂದು ರತ್ನವಳ ಬಳಿ ಹೇಳಿದ್ದ. ರತ್ನವ್ವ ಗುರುಪಾದನ ಮುಂದೆ ಹೇಳಿದಾಗ ಇದು ಅಪಶಕುನದ ಸುದ್ದಿ ಮನ್ಯಾಗಿನವರು ಒಂದಿಬ್ಬರಾದರು ಕಣ್ಣೀರ ಹಾಕಬೇಕ ಅದಕ್ಕೆ ಈ ಆಟ ಮಾಡದಿವಿ ಅಂತ೦ದಾಗ..ಯಾಕೋ ಈ ಊರೇ ಸಾಕೆನಿಸಿತು ಚಿನ್ನವಳಿಗೆ ತುಂಬಾ ಕಷ್ಟಪಟ್ಟು ಚಿನ್ನವ ರತ್ನವಳನ್ನು ನೋಡಿದಳು ಅವಳ ಮುಖದಲ್ಲಿಅದೇ ಆಸ್ತೇ ಎದ್ದುಕಾಣುತಿತ್ತು. ಮಗನನ್ನು ಶೆರಗಿನಿಂದ ಮುಚ್ಚಿಕೊಂಡು ಒಳ ಹೊದಳು ಕಿಟಕಿ ಪಕ್ಕ ಕಾಗೆಯೊಂದು ಕುಳಿತು ಕಾ.ಕಾ.ಕಾ ಅನ್ನುತಿತ್ತು. ಚಿನ್ನವ ಅದನ್ನು ನೋಡುವ ಸಾಹಸ ಕೂಡ ಮಾಡಲಿಲ್ಲ.

‍ಲೇಖಕರು Admin

24 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading