ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ‘ದೇವದಾಸಿಯ ಮಗಳ ಬದುಕಿನ ಸಂಗ್ರಾಮ’

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.

೧೬ ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ -೧

ಕೃತಿ – ‘ಬದುಕೆಂಬ ಮಾಯೆ’
ಲೇಖಕಿ – ಪ್ರೊ. ಸುಕನ್ಯಾ ಮಾರುತಿ
ಪ್ರಕಾಶನ – ಸಪ್ನಾ ಬುಕ್ ಹೌಸ್
ಬೆಲೆ – ₹180

-ಡಾ ಶೈಲಜಾ ಎನ್ ಬಾಗೇವಾಡಿ

“ಭವದ ಜೂಜಿ ನಲ್ಲಿ ಗೆದ್ದು ಎದ್ದು ನಿಲ್ಲಬೇಕಿದೆ,
ನಿನ್ನ ಹಾಗೆ ನಾನು ಕೂಡ ಲೋಕ ದಾಟಬೇಕಿದೆ “
ಎಂದು ಅಕ್ಕ ಮಹಾದೇವಿಯನ್ನು ನೆನೆಯುತ್ತಾ, ಬಿ. ಸುಕನ್ಯಾ ರವರು ಬದುಕೆಂಬುದು ಮಾಯೆ, ನಾನೆಂಬುದು ಮಾಯೆ ಎಂಬ ನಿಲುವಿಗೆ ಬಂದು, ತಮ್ಮ ಬದುಕಿನ ಕೆಲವು ಚದುರಿದ ನೆನಪುಗಳನ್ನು ಆತ್ಮಕಥನದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ತಮ್ಮ ಸಂಘರ್ಷಮಯ ಬದುಕಿನ ಏಳು ಬೀಳುವಿನ ಸಂಗತಿಯನ್ನು ಇಲ್ಲಿ ಸೂಕ್ಷ್ಮವಾಗಿ ಅನಾವರಣಗೊಳಿಸಿದ್ದಾರೆ. ಬಂಡಾಯದ ಕವಯಿತ್ರಿಯಾದ ಬೋರನಹಳ್ಳಿ ಸುಕನ್ಯಾರವರು ಎಲ್ಲಾ ಸಂಬಂಧಗಳನ್ನು ಹೊಂದಿ, ಎಲ್ಲವನ್ನು ಶ್ರಮದಿಂದ ಧಕ್ಕಿಸಿಕೊಂಡು , ಏನೆಲ್ಲಾ ಸ್ಥಾನಮಾನ ಅವಕಾಶಗಳನ್ನು ಹೊಂದಿ ಆದರೆ ಇಂದು ಏಕಾಂಗಿಯಾಗಿ ಬದುಕಿನ ಕುರಿತಾಗಿ ನಿರ್ಲಿಪ್ತ ಭಾವ ತಾಳಿ,ತಮ್ಮ ಬದುಕಿನ ಘಟನೆಗಳನ್ನು ಬಿಚ್ಚಿಡುತ್ತಾ ಹೋಗಿದ್ದಾರೆ.

ಸುಕನ್ಯಾರವರು ಕಾವ್ಯ ಪ್ರಪಂಚದಲ್ಲಿ ದಿಟ್ಟವಾದ ತಮ್ಮ ನಿಲುವುಗಳಿಂದ ಬಂಡಾಯದ ಬರವಣಿಗೆ ಮೂಲಕ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ಇವರು ಮೂಲತಃ ಕೊಟ್ಟೂರು ಬಳಿಯ ಬೋರನಹಳ್ಳಿಯವರು. ವಾಲ್ಮೀಕಿ ಸಮುದಾಯದಲ್ಲಿ ಜನಿಸಿ ಅದರಲ್ಲಿನ ಮೌಢ್ಯತೆಯ ದೆಸೆಯಿಂದ, ತಾಯಿ ದೇವದಾಸಿಯಾಗಿದ್ದು, ತಂದೆ ಇದ್ದು ಅವರ ಕುರಿತು ಎಲ್ಲೂ ಉಲ್ಲೇಖಿಸಲಾರದೆ ಒದ್ದಾಡಿದ ಜೀವ ಅವರದ್ದು. ಅಪ್ಪನ ಹೆಸರನ್ನು ಎಲ್ಲೂ ನಮೂದಿಸುವಂತಿಲ್ಲ. ಅವರು ಕೂಡ ಇವರನ್ನು ಸಾಕು ಮಗಳು ಪಾಲಿತಪುತ್ರಿ ಎಂದು ಸಂಬೋಧಿಸುವವರೇ ಹೊರತು, ಹೆತ್ತ ಮಗಳು ಎನ್ನಲು ಸಮಾಜದ ಹಿಂಜರಿಕೆ ಅವರಿಗೆ. ಇಂತಹ ಪಾಲಕರ ಮಗಳಾಗಿ ಅಕ್ಷರಗಳನ್ನು ದಕ್ಕಿಸಿಕೊಂಡು, ಅದರ ಮೂಲಕ ಬದುಕು ಬದಲಿಸಿಕೊಂಡವರು. ತಾಯಿ,ಅಜ್ಜಿಯಂದಿರ ಆಶ್ರಯದಲ್ಲಿ ಬೆಳೆದು ಸಮಾಜದ ಕುಹಕಕ್ಕೆ ಒಳಗಾಗಿ ಶಾಲೆಯ ಮೇಷ್ಟ್ರು, ಸಹಪಾಠಿಗಳು ಎಲ್ಲರೂ ನೋಡುವ ಚುಚ್ಚು ನೋಟದಿಂದ ಅಂತರಂಗದಲ್ಲಿ ಒದ್ದಾಡಿದ್ದರೂ ಕೂಡ ಹೊರಗಡೆ ಈ ವ್ಯವಸ್ಥೆಯಿಂದ ಹೊರ ಬರಬೇಕೆಂದು ಶಾಲೆ ಕಾಲೇಜುಗಳನ್ನು ಪೂರೈಸಿದರು. ಅವರ ಕುಟುಂಬದಲ್ಲಿ ಮೊದಲ ಪದವಿ ಪಡೆದ ಮಹಿಳೆಯಾಗಿ ಗುರುತಿಸಿಕೊಂಡರು.

ಪದವಿ ಪೂರೈಸಿದ ನಂತರ ಬದುಕಿನ ಮತ್ತೊಂದು ಘಟ್ಟದಲ್ಲಿ ಮಾರುತಿ ಅವರು ಜೊತೆಯಾದರು. ಅವರನ್ನು ಇಷ್ಟಪಟ್ಟು ಮದುವೆಯಾಗಿ, ಆರ್ಥಿಕ ಸಂಕಟವನ್ನು ಜೊತೆಯಾಗಿಸಿಕೊಂಡಿದ್ದರು. ಬದುಕಿಗೆ ನಿಶ್ಚಿತವಾದ ಆದಾಯವಿಲ್ಲದೆ ಸಂಸಾರದ ಬಂಡಿ ಸಾಗಿಸಲು ಹೆಣಗಾಡಿದರು. ಮತ್ತೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಹೆಬ್ಬಯಕೆಯಿಂದ ಅಜ್ಜಿ ಕೊಟ್ಟ ಚಿನ್ನದ ಸರವನ್ನು ಮಾರಿ ಎಂ.ಎ.ಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿ, ಅನೇಕ ಬುದ್ಧಿಜೀವಿಗಳ ಸಂಪರ್ಕಕ್ಕೆ ಬಂದರು. ಎಂ. ಎಂ. ಕಲಬುರ್ಗಿ, ಚನ್ನವೀರ ಕಣವಿ, ಬಸವರಾಜ ಕಟ್ಟಿಮನಿ ಹೀಗೆ ಇವರೆಲ್ಲರ ಒಡನಾಟದಿಂದ ಕವಿಯತ್ರಿಯಲ್ಲಿ ಇನ್ನಷ್ಟು ಗಟ್ಟಿತನ ಮೂಡಿತು ಬರವಣಿಗೆಯಲ್ಲಿ ಕಸುವು ತುಂಬಿತು . ಎಂ. ಎ. ಪೂರೈಸಿದ ನಂತರ ಕರ್ನಾಟಕ ಕಾಲೇಜ ಧಾರವಾಡದಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ವೃತ್ತಿ ಬದುಕು ಆರಂಭಿಸಿ ನಂತರ ಜೆ.ಎಸ್.ಎಸ್ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರಾಗಿ ನೇಮಕಗೊಂಡರು. ಆರಂಭದಲ್ಲಿ ಸಹೋದ್ಯೋಗಿಗಳ ವಕ್ರದೃಷ್ಟಿ ಅನಾದರಕ್ಕೂ ಕಾರಣರಾದದ್ದು ನೆನಪಿಸಿಕೊಳ್ಳುತ್ತಾರೆ. “ಗಂಡಸರು ನನ್ನ ದೇಹವನ್ನು ಬಯಸಿದರೆ, ಹೆಂಗಸರು ನನ್ನ ಅವನತಿಯನ್ನು ಬಯಸಿದರು” ಎನ್ನುವರು. ಆದರೆ ಅಧ್ಯಯನ ಅಧ್ಯಾಪನ ಬರವಣಿಗೆ ಜೊತೆಯಲ್ಲಿ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಗೋಕಾಕ್ ಚಳುವಳಿಯಲ್ಲಿ ಕೂಡ ತೊಡಗಿಸಿಕೊಂಡು ಅನೇಕರ ದಿಗ್ಗಜರ ಸಂಪರ್ಕಕ್ಕೆ ಬಂದರು. ಚಿಕ್ಕ ವಯಸ್ಸಿನಲ್ಲಿಯೇ ಸೆನೆಟ್ ಸದಸ್ಯರಾದರು. ಈ ಎಲ್ಲವುಗಳಿಂದ ಹೆಸರು, ಮನ್ನಣೆ, ಜೊತೆಗೆ ಆರ್ಥಿಕ ಭದ್ರತೆಯನ್ನು ಪಡೆದರು ಹಾಗೆಂದು ಅವರ ವೈಯಕ್ತಿಕ ಬದುಕೇನು ಹಸನಾಗಿರಲಿಲ್ಲ. ಮಗ ಸಂಗ್ರಾಮನನ್ನು ಬೆಳೆಸುತ್ತಾ, ತವರು ಮನೆಯ ಜವಾಬ್ದಾರಿಗಳಿಗೆ ಹೆಗಲೆಣೆಯಾದರು. ಗಂಡನಿಗೂ ಕೂಡ ಆಸರೆಯಾದರು. ಮಗ ಅಪಘಾತದಿಂದ ಸಂಕಷ್ಟದಲ್ಲಿದ್ದಾಗ ಏನೆಲ್ಲ ಪ್ರಯತ್ನಪಟ್ಟು ಆತನ ಆರೈಕೆಗೆ ಕಂಕಣಬದ್ಧರಾದರು. ಆದರೆ ಮಗ ಬೆಳೆದ ನಂತರ ಆತ ಅದೇ ತಾಯಿಯಿಂದ ದೂರವಾದ ಜೊತೆಗೆ ಬಾಳ ಸಂಗಾತಿ ಮಾರುತಿ ಆತ್ಮ ಸಂಗಾತಿ ಆಗಲಿಲ್ಲ ಎಂದು ನೊಂದು ನುಡಿಯುತ್ತಾರೆ.

ಸುಕನ್ಯ ರವರು ಧಾರವಾಡದ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಸಕ್ರೀಯರಾಗಿದ್ದು ಹಾಗೆ ನೆರೆ ರಾಜ್ಯಗಳಲ್ಲೂ ಕೂಡ ತಮ್ಮನ್ನು ಗುರುತಿಸಿಕೊಂಡರು. ಮರಾಠಿ,ಮಲಯಾಳಿ ಭಾಷೆಗಳ ಸಂಪರ್ಕದಿಂದ ಅಲ್ಲಿನ ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡರು. ಸಿನಿಮಾ,ಸಂಗೀತ, ರಂಗಭೂಮಿ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಹಲವು ಸಾಧಕರ ಸಂಪರ್ಕಕ್ಕೆ ಬಂದರು. ಅವರನ್ನು ಕನಿಷ್ಠವಾಗಿ ಕಾಣುವವರ ಮುಂದೆ ಸಾಧಿಸಿ ತೋರಿಸುವ ಹಟಗಾರ್ತಿಯಾಗಿ ಬೆಳೆದು ನಿಂತರು. ತಂದೆಯ ಹೆಸರನ್ನು ಹೇಳಲು ಆಗದ ಅನಾಥ ಪ್ರಜ್ಞೆಯಿಂದ ಆರಂಭವಾದ ಬದುಕು ಎಪ್ಪತ್ತರ ಇಳಿ ವಯಸ್ಸಿನಲ್ಲಿ ಕೂಡ ಎಲ್ಲವನ್ನು ಎಲ್ಲರನ್ನೂ ತೊರೆದು ಮತ್ತೆ ಅದೇ ಅನಾಥ ಪ್ರಜ್ಞೆಯಲ್ಲಿ ತೊಳಲುತ್ತಾ ತಮ್ಮ ಬದುಕಿನ ಸಿಹಿ ಕಹಿ ನೆನಪುಗಳನ್ನು ಇಲ್ಲಿ ಮೆಲುಕು ಹಾಕುತ್ತಾರೆ.

ಬಾಲ್ಯ ಮಾತ್ರ ಅಮ್ಮ ಅಜ್ಜಿಯಂದಿರ ಆಶ್ರಯದಲ್ಲಿ ಸಮೃದ್ಧವಾಗಿ ಕಳೆದರು,ಗ್ರಾಮೀಣ ಬದುಕಿನ ಸೊಗಡನ್ನು ಅನುಭವಿಸಿದರು ಕೂಡ ಸಮಾಜದ ಅವಜ್ಞೆ ಇದ್ದೇ ಇತ್ತು . ಈ ಕೃತಿ ಯುದ್ದಕ್ಕೂ ಪದೇಪದೇ ತಂದೆಯ ಪ್ರಸ್ತಾಪ ಬರುತ್ತಲೇ ಹೋಗುತ್ತದೆ. ತಮ್ಮ ಹೆಸರಿನ ಮುಂದೆ ಅಪ್ಪನ ಹೆಸರನ್ನು ನಮೂದಿಸಲಾಗದೆ ಆ ಖಾಲಿತನ ಅವರಿಗೆ ಕಾಡುತ್ತಲೇ ಇರುತ್ತದೆ. ಇನ್ನು ಯೌವನದಲ್ಲಿ ಗಂಡನ ಪಾತ್ರ ಮಾರುತಿ ಅವರು ಸರಿಯಾಗಿ ನಿಭಾಯಿಸದೆ ಹೋದಾಗ, ಅಲ್ಲಿ ಕೂಡ ಒಂಟಿಯಾಗುತ್ತಾರೆ. ಇನ್ನು ಹೆತ್ತ ಮಗ ಅಮ್ಮನಿಗೆ ಆಶ್ರಯವಾಗದೆ, ತನ್ನದೇ ಗೂಡು ಕಟ್ಟಿಕೊಂಡು ಹೇಳದೆ ಹಾರಿ ಹೋಗುತ್ತಾನೆ. ಹೀಗೆ ಬದುಕಿನುದ್ದಕ್ಕೂ ತಾವು ಬಯಸಿದ ಪ್ರೀತಿ ಮಮಕಾರ ಸಿಕ್ಕದೆ, ಕೆಲವೊಮ್ಮೆ ಸಮಾಜದ ಟೀಕೆಗೂ ಗುರಿಯಾಗಿ, ಅದೆಲ್ಲವನ್ನು ಮೀರಲು ತಮ್ಮ ಸೃಜನಶೀಲ ಬರವಣಿಗೆ ಮೂಲಕ ಬಂಡಾಯ ಸ್ವರೂಪದಲ್ಲಿ ಹೊರಹೊಮ್ಮಿಸಿದ್ದಾರೆ. ಇಂದಿಗೂ ಕೂಡ ಇಳಿ ವಯಸ್ಸಿನಲ್ಲಿ ಏಕಾಂಗಿಯಾಗಿ ತಮ್ಮ ಅನೇಕ ಆರೋಗ್ಯ ಸಮಸ್ಯೆಗಳ ಮಧ್ಯೆ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

“ನೀ ಪಟ್ಟ ಬವಣೆ ಕಂಡ ಮೇಲು, ನೀ ಬಿಟ್ಟ ಸೀರೆ ಉಡಬಾರದಿತ್ತು ಸಖಿ”
ಎಂದು ಅಕ್ಕಮಹಾದೇವಿಯನ್ನು ನೆನೆದು ಪಶ್ಚಾತ್ತಾಪ ಪಡುತ್ತಾ,
“ಸೀರೆಯ ಹಂಗು ಹರಿದು
ನಿರ್ವಯಲಾಗ ಬೇಕೆಂದಿದ್ದೇನೆ”
ಎಂದು ತಮ್ಮ ಮನದಾಳದ ಮಾತನ್ನು, ಹಣವಂಡವನ್ನು ವ್ಯಕ್ತಪಡಿಸುತ್ತಾರೆ.

ಒಬ್ಬ ದೇವದಾಸಿಯ ಮಗಳಾಗಿ, ಮೌಡ್ಯತೆಗೆ ಬಲಿಯಾಗಿ, ಬಡತನವನ್ನು ಹಿಮ್ಮೆಟ್ಟಿ ಅಕ್ಷರಗಳ ಮೂಲಕ ಬದುಕು ಕಟ್ಟಿಕೊಂಡು, ಸಂಬಂಧಗಳಲ್ಲಿನ ಶ್ರುತಿ ತಪ್ಪಿ, ಜೊತೆಗೆ ಅನಾರೋಗ್ಯ ಮತ್ತು ಮಾನಸಿಕ ಒತ್ತಡಗಳ ಮಧ್ಯೆ “ಬದುಕೆಂಬುದು ಮಾಯೆ” ಎಂಬ ನಿಲುವಿಗೆ ಬಂದು ನಿಂತಿದ್ದಾರೆ ಸುಕನ್ಯಾ ರವರು . ಅವರ ಬದುಕಿನಲ್ಲಿ ಏನೆಲ್ಲಾ ಏರಿಳಿತಗಳಾಗಿರಬಹುದು, ಆದರೆ ಅನೇಕ ಸಮಾನ ಮಸ್ಕರ ಬೆಂಬಲ, ಸಾಹಿತ್ಯ ಚಟುವಟಿಕೆ ಬರವಣಿಗೆ, ಹೋರಾಟದ ಮೂಲಕ ಬದುಕು ಸಹ್ಯವಾಗಿಸಿಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕಾರ ಸ್ಥಾನಮಾನ ಎಲ್ಲವೂ ಪಡೆದಿದ್ದಾಗಿದೆ. ಆದರೆ ಸಂಬಂಧಗಳಲ್ಲಿನ ಸಡಿಲಿಕೆಯಿಂದಾಗಿ ಸೋತು ಹೋದಂತೆ ಕಾಣುತ್ತಾರೆ.

ಸುಕನ್ಯಾ ರವರು ಈ 164 ಪುಟಗಳ ಆತ್ಮಕಥನದಲ್ಲಿ ಇನ್ನೂ ಏನೆಲ್ಲಾ ಹೇಳಬಹುದಿತ್ತು. ಧಾರವಾಡದ ಸಾಂಸ್ಕೃತಿಕ ಪರಿಸರ, ಅವರ ವೃತ್ತಿ ಬದುಕಿನ ರಸವತ್ತಾದ ಘಳಿಗೆಗಳು, ಕಾವ್ಯ ಕಟ್ಟುವ ಕುರಿತು, ಸಾಹಿತ್ಯ ಕ್ಷೇತ್ರದ ಬಗ್ಗೆ ಇನ್ನೂ ಏನೆಲ್ಲಾ ಸಂಗತಿಗಳನ್ನು ದಾಖಲಿಸಬಹುದಾಗಿತ್ತು. ಆದರೆ ಕೆಲವೊಮ್ಮೆ ಅವರು ಹೇಳುವ ಸಂಗತಿಗಳನ್ನು ಮೊಟಕುಗೊಳಿಸಿದಂತೆ ಬರೆದಿದ್ದಾರೆ. ನಿರೂಪಣಾ ಶೈಲಿ ಸರಳವಾಗಿದ್ದು, ಓದಿಸಿಕೊಂಡು ಹೋಗುತ್ತದೆ. ಆದರೆ ಕಾವ್ಯದಲ್ಲಿನ ಗಟ್ಟಿತನ ಅಲ್ಲಿನ ಲಾಲಿತ್ಯ ಅವರ ಗದ್ಯ ಬರಹಕ್ಕೆ ಬಂದಿಲ್ಲವೆನ್ನಬಹುದು. ಕೃತಿಯುದ್ದಕ್ಕೂ ಮುದ್ರಣ ದೋಷಗಳು ಎದ್ದು ಕಾಣುತ್ತವೆ.

ಸಮಾಜದ ಅಂಚಿನಲ್ಲಿದ್ದ ಒಬ್ಬ ಮಹಿಳೆ, ಓದು ಬರಹದ ಮೂಲಕ ಮುಖ್ಯ ವಾಹಿನಿಗೆ ಬಂದು, ಅಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿ, ಏನೆಲ್ಲ ಅವಕಾಶಗಳನ್ನು ಪಡೆದು, ಕಹಿ ಸಿಹಿ ಅನುಭವಗಳನ್ನು ಸಮನಾಗಿ ಸ್ವೀಕರಿಸಿ, ಇಂದು ಬದುಕಿನ ಮುಸ್ಸಂಜೆ ಸಮಯದಲ್ಲಿ, ತಮ್ಮ ಬಂಡಾಯದ ಧ್ವನಿಯನ್ನು ತೊರೆದು, ಮೌನಕ್ಕೆ ಶರಣಾದ ಭಾವ ನೀಡುತ್ತದೆ ಈ ಕೃತಿ. ಬೋರನಹಳ್ಳಿ ಇಂದ ಬೆಂಗಳೂರು ವರೆಗಿನ ಅವರ ಬದುಕಿನ ಪಯಣ ಏನೆಲ್ಲಾ ಅನುಭವಗಳು ಅವರಿಗೆ ನೀಡಿದೆ. ಅವರ ಪಕ್ವಗೊಂಡ ಬದುಕಿನಿಂದ ಇನ್ನಷ್ಟು ಕಾವ್ಯದ ಬನಿ ಬತ್ತದೆ ಪ್ರವಹಿಸಲಿ, ನಿತ್ಯ ನಿರಂತರವಾಗಿರಲಿ ಎಂದು ಆಶಿಸುವೆ

‍ಲೇಖಕರು Admin

2 May, 2026

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. augustin james

    Good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading