ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.
ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.
ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ –3
ಕೃತಿ –ನನ್ನ ಬದುಕು
ಲೇಖಕರು – ಪ್ರೊ.ಎ.ಎಸ್. ಹಿಪ್ಪರಗಿ
“ನನ್ನ ಬದುಕು”
“ಅರಿಯದ ಗುರು ಅರಿಯದ ಶಿಷ್ಯಂಗೆ
ಅಂಧಕನ ಕೈಯನಂದಕ ಹಿಡಿದಡೆ
ಮುಂದನಾರು ಕಾಬರು ಹೇಳಲ ಮರುಳೆ
ತೊರೆಯಲದ್ದವನ ನೀಸಲರಿಯದವ
ತೆರೆವ ತೆರನಂತೆಂದ ಅಂಬಿಗ ಚೌಡಯ್ಯ”
ಗುರುವಾದವನು ಶಿಷ್ಯನ ಉನ್ನತಿಯನ್ನು ಬಯಸಬೇಕು ಆ ನಿಟ್ಟಿನಲ್ಲಿ ಸದಾ ಪ್ರಯತ್ನಿಸಿ, ಪ್ರೇರೇಪಿಸಬೇಕು. ಹಾಗಾಗಿಯೇ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠವೂ ಹೌದು ಮೌಲಿಕವೂ ಹೌದು. ಇಂತಹ ಪವಿತ್ರ ವೃತ್ತಿಯನ್ನು ಅತ್ಯಂತ ಶ್ರದ್ಧೆ, ನಿಷ್ಠೆ, ಬದ್ಧತೆಯಿಂದ ಮಾಡಿ ಹೆಸರಾದವರು ಶ್ರೀಯುತ ಎ. ಎಸ್. ಹಿಪ್ಪರಗಿಯವರು. ಛಂದಸ್ಸು, ವ್ಯಾಕರಣ, ಶಾಸ್ತ್ರ ಗ್ರಂಥಗಳನ್ನು ಅತ್ಯಂತ ಸರಳವಾಗಿ ಬೋಧಿಸುವ ಕಲೆಯನ್ನು ಹೊಂದಿದ್ದು, ವಿಜಯಪುರ ಸೀಮೆಯಲ್ಲಿಯೇ ಹೆಸರಾದವರು.
ಕನ್ನಡದ ಅಧ್ಯಾಪಕರಾದ ಪ್ರೊ.ಎ.ಎಸ್. ಹಿಪ್ಪರಗಿ ಅವರು ತಮ್ಮ ಬದುಕಿನ ಕೆಲವು ತುಣುಕುಗಳು ಮಾತ್ರ ಈ ಕೃತಿಯಲ್ಲಿ ಕಟ್ಡಿಕೊಟ್ಟಿದ್ದಾರೆ.
ಮುನ್ನುಡಿಯಲ್ಲಿ ರಂಜಾನ್ ದರ್ಗಾ ಸರ್ ಹೇಳಿದ ಹಾಗೆ ಅವರ ಜೀವನದಲ್ಲಿ ಘಟಿಸಿದ,ಕಂಡುಂಡ ಅನುಭವಗಳು ಇಲ್ಲಿ ಹೆಚ್ಚಾಗಿ ದಾಖಲು ಮಾಡದೇ, ವೃತ್ತಿ ಬದುಕಿನ ಕೆಲವು ಸಂಗತಿಗಳನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಇನ್ನೂ ಏನೆಲ್ಲಾ ಸಂಗತಿ ಇಲ್ಲಿ ಹೇಳಹುದಿತ್ತು. ಅವರ ೬೭ ಪುಟದ ಈ ಚಿಕ್ಕ ಹೊತ್ತಿಗೆಯಲ್ಲಿ ಸ್ವಾತಂತ್ರ್ಯ ಪೂರ್ವದ ವಿಜಯಪುರ ಸೀಮೆಯ ಗ್ರಾಮೀಣ ಬದುಕು,ಅಲ್ಲಿನ ಬಡತನ,ಆ ಕಾಲದ ಶಿಕ್ಷಣ ಪದ್ದತಿ,ಜನಸಾಮಾನ್ಯರ ಜೀವನದ ಕುರಿತು ತಮ್ಮದೇ ಆದ ನಿರ್ಲಿಪ್ತ ಶೈಲಿಯಲ್ಲಿ ದಾಖಲಿಸಿದ್ದಾರೆ.
ಹಿಪ್ಪರಗಿ ಸರ್ ಅವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೃಷ್ಣಾ ನದಿತೀರದ ಸಣ್ಣ ಹಳ್ಳಿ ಕಪನೂರಿನಲ್ಲಿ ೧೯೨೭ ಎಪ್ರಿಲ್ ೨೦ ರಂದು ಜನಿಸಿದರು.ಆ ಊರಿನ ಇತಿಹಾಸ ತಾಳಿಕೋಟಿ ಕಾಳಗದ ಜೊತೆಗೆ ನಂಟು ಇದ್ದದ್ದನ್ನು ಹಲವು ದಾಖಲೆಗಳ ಮೂಲಕ ಬಣ್ಣಿಸಿದ್ದಾರೆ. ಆದರೆ ಇಂದು ಆ ಊರು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಿಹೋಗಿದೆ ಎನ್ನುವರು. ಅವರ ಬಾಲ್ಯವೇನು ಸುಖಮಯವಾಗಿರಲಿಲ್ಲ.ಕಾರಣ ತಂದೆಯ ಹುಂಬತನ ಅಥವಾ ಮೊಂಡುತನದಿಂದ ಹೊಲವನ್ನು ಕಳೆದುಕೊಳ್ಳುತ್ತಾರೆ.
ಹಾಗಾಗಿ ಕೃಷಿಕರಾದ ಅವರು ಕೂಲಿಕಾರನಾಗಬೇಕಾಗುತ್ತದೆ. ಬಲದಿನ್ನಿ ನಾಡಗೌಡರನ್ನು ಎದುರು ಹಾಕಿಕೊಂಡು ಕೋರ್ಟು ಕಚೇರಿ ಎಂದು ಅಲೆದಾಡಿ,
ಊರು ಬಿಡಬೇಕಾಯಿತು. ಕೆಲಸ ಅರಸಿ ವಡವಡಗಿ ಗ್ರಾಮಕ್ಕೆ ಬಂದು ಏನೆಲ್ಲಾ ಪಡಿಪಾಟಲು ಪಡುವಂತಾಗುವುದು. ಮತ್ತೆ ಅವರಿಗೆ ಹೊಲ ಸಿಕ್ಕು ಊರಿಗೆ ಬರುವಷ್ಟರಲ್ಲಿ ತಂದೆಯನ್ನು ಎಳವೆಯಲ್ಲಿಯೇ ಕಳೆದುಕೊಳ್ಳುತ್ತಾರೆ. ಊರಿನ ಗಾಂವಟಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ಸಂದರ್ಭ,ಅಂದಿನ ಶಿಕ್ಷಣ ಪದ್ದತಿ ಬಗ್ಗೆ ವಿವರವಾಗಿ ಬಣ್ಣಿಸಿದ್ದಾರೆ. ಮುಂದೆ ಓದಲು ಅವರಿಗೆ ಅವಕಾಶ ಇಲ್ಲದಾಗ ನಾಲತ್ವಾಡದ ಸೋಮಪ್ಪ ಎಂಬುವರು ಇವರ ಜಾಣತನ ಕಂಡು ತಮ್ಮೊಂದಿಗೆ ಕರೆದೊಯ್ದು ಮುಲ್ಕಿ ಪರೀಕ್ಷೆ ವರೆಗೆ ಓದಿಸುತ್ತಾರೆ. ಅವರು ಕೇಂದ್ರಕ್ಕೆ ಮೊದಲಿಗರಾಗಿ ಪಾಸಾದಾಗ ಹೆಚ್ಚು ಸಂಭ್ರಮ ಪಟ್ಟವರು ಸೋಮಪ್ಪನವರ ಕುಟುಂಬ ಎನ್ನುವರು. ಮುಲ್ಕಿ ಪರೀಕ್ಷೆಯಲ್ಲಿ ಪಾಸಾದಾಗ ಶಿಕ್ಷಕ ವೃತ್ತಿ ಸೀಗುತ್ತದೆ.ಆದರೆ ಅವರಿಗೆ ಮುಂದೆ ಓದಿಸಬೇಕೆಂಬ ಹಂಬಲ ಸೋಮಪ್ಪನವರದು ಅದು ಅವರಿಂದ ಆಗದೆ ತೀರಿಹೋಗುತ್ತಾರೆ.
ಓದಿನ ಸಂದರ್ಬದಲ್ಲಿ ನಡೆದ ಅನೇಕ ಘಟನೆಗಳು ಮೆಲುಕು ಹಾಕುತ್ತ ಜಾತಿ, ಮತ, ಪಂಥ ಏನನ್ನು ಎಣಿಸದೆ ಸೌಹಾರ್ದ ಬದುಕಿನ ಬಣ್ಣನೆ, ಗ್ರಾಮ ಜನರ ಮುಗ್ಧತೆ ನೆನೆಯುತ್ತಾರೆ. ಅವರಿಗಿದ್ದ ಓದಿನ ಗುಂಗು ವಿವರಿಸುತ್ತ ತಾವು ಶಿಕ್ಷಕರಾದ ನಂತರ ಎಷ್ಟೊಂದು ಜನರಿಗೆ ಓದಲು ಪ್ರೇರೇಪಿಸುತ್ತ, ಶಾಲೆ ಬಿಟ್ಟವರನ್ನು ಕೂಡ ಕರೆದು ಓದಲು ಹಚ್ಚಿ ಪಾಸಾಗಲು ಸಹಕರಿಸಿದ್ದು, ತಾವು ಎಸ.ಎಸ್.ಸಿ ಮುಗಿಸಿ ಮಿಕ್ಕವರಿಗು ಓದಲು ನೆರವಾದದ್ದು ಎಲ್ಲವನ್ನೂ ನೆನೆಯುತ್ತಾರೆ.
ಅವರ ವೃತ್ತಿ ಬದುಕು ಕೂಡ ಪ್ರಯೋಗ ಶೀಲತೆಯಿಂದ ಕೂಡಿತ್ತು. ಈಗಿನ ಮೇಷ್ಟ್ರ ಹಾಗೆ ಕೇವಲ ವೈಯಕ್ತಿಕ ಮಹತ್ವಾಕಾಂಕ್ಷೆ ಇಟ್ಟುಕೊಂಡು ಉದ್ಯೋಗಕ್ಕೆ ಅವರು ಸೇರಿರಲಿಲ್ಲ.ಹಳ್ಳಿಯ ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತ,ಅಲ್ಲಿನ ಸಮಸ್ಯೆಗೆ ಸ್ಪಂದಿಸಿದವರು.ಶಾಲೆ ನಿರ್ಮಾಣಕ್ಕೆ ಶ್ರಮಿಸಿದವರು.ಅದಕ್ಕಾಗಿ ವಂತಿಗೆ ಪಡೆಯುವ, ನಾಟಕ ರಚಿಸಿ ಪ್ರದರ್ಶನ ಮಾಡಿ ಅದರಿಂದ ಬಂದ ಹಣವನ್ನು ಶಾಲೆಗಾಗಿ ಬಳಸಿದ ಹಲವು ಪ್ರಸಂಗಗಳನ್ನು ಹೇಳುತ್ತಾರೆ. ಜೊತೆಗೆ ಭೋದನಾ ಕ್ರಮದಲ್ಲಿ ಹೊಸ ಪ್ರಯೋಗ ಮಾಡಿ ಮೇಲಾಧಿಕಾರಿಯಿಂದ ಸೈ ಅನ್ನಿಸಿಕೊಂಡವರು.
ಇವರು ತಿಳಗೂಳ,ಇಂಗಳಗೇರಿ ಮಡಿಕೇಶ್ವರ ಹೀಗೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಾ ಗಾಂಧಿಯವರ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡಲು ಯತ್ನಿಸಿದರು.
ಪಿಯುಸಿ ಮತ್ತು ಪದವಿಯನ್ನು ಪಡೆಯಲು ಬಾಗಲಕೋಟೆಗೆ ಬಂದರು. ಅಲ್ಲಿ ಅದ್ಯಯನ, ಅಧ್ಯಾಪನ ಎರಡನ್ನು ಜೊತೆಯಲ್ಲಿ ಪೂರೈಸಿದರು. ಎಂ.ಎ. ಓದಲು ಧಾರವಾಡಕ್ಕೆ ಬಂದರು.ಆಗ ಆರ್ಥಿಕ ಮುಗ್ಗಟ್ಟು ಮೇಲಾಗಿ ಐದು ಮಕ್ಕಳ ಸಂಸಾರ ಭಾರದ ಮಧ್ಯ ಓದಲು ತುಂಬಾ ಶ್ರಮಪಟ್ಟರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್. ಸಿ.ಹಿರೇಮಠ ಅವರ ಇಚ್ಛೆಯಂತೆ ಧಾರವಾಡದಲ್ಲಿ ಉಳಿಯಲು ಹೇಳಿದರು.ಆದರೆ ಅಲ್ಲಿನ ಪರಿಸರ ಅವರಿಗೆ ಹೊಂದಾಣಿಕೆ ಆಗಲಿಲ್ಲ. ಅವರೆ ಹೇಳುವಂತೆ ಅಲ್ಲಿನ ಜನರ ಗಾಂಭಿರ್ಯತೆಯ ಮುಖವಾಡ, ತೋರಿಕೆಯ ಬದುಕು ಇಷ್ಟವಾಗದೆ ಮತ್ತೆ ಗ್ರಾಮದ ಕಡೆ ಮುಖಮಾಡಿದರು.
ಗ್ರಾಮದ ಸಹಜ,ಸರಳ ಜೀವನ, ಮುಗ್ಧ ಮನಸ್ಸು ಅವರಿಗೆ ಹೆಚ್ಚು ಆಪ್ತ ಎನಿಸಿತು.
ಮರಳಿ ವಿಜಯಪುರಕ್ಕೆ ಬಂದ ನಂತರ ವಡವಡಗಿ ಎಂಬ ಪುಟ್ಟ ಹಳ್ಳಿಯಲ್ಲಿ ಮುಖ್ಯೋಪಾಧ್ಯಾಯ ರಾಗಿ ನೇಮಕಗೊಂಡರು. ಮತ್ತೆ ಹಳ್ಳಿಯಲ್ಲಿ ಹೊಸತನಕ್ಕೆ ನಾಂದಿ ಹಾಡಿದರು. ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಉಳ್ಳವರಿಂದ ದೇಣಿಗೆ ಪಡೆದರು, ಅವರ ಮನ ಓಲೈಸಿದರು. ಹೀಗೆ ಬೋಧನೆ ಜೊತೆಗೆ ಸಮಾಜದ ಬಗಗೆ ಬಹುವಾಗಿ ಚಿಂತಿಸಿದರು.
ಗ್ರಾಮೀಣ ಜೀವನದ ಹಲವು ರೋಚಕ ಪ್ರಸಂಗಗಳನ್ನು ಸ್ಮರಿಸುತ್ತಾರೆ . ಅದರಲ್ಲಿ ಜನಪದ ವೈದ್ಯರ ಕೌಶಲ್ಯ, ಅವರ ತಲೆಯ ಹುಣ್ಣಿಗೆ ಇಲಾಜು ನೀಡಿದ ಕ್ರಮದ ಬಗ್ಗೆ ವಿವರಸಿ,ಅಂಥವರ ಜ್ಞಾನ ಉಪಯೋಗ ಪಡೆಯಬೇಕು. ಇಲ್ಲವಾದಲ್ಲಿ ನಾಟಿ ವೈದ್ಯಕೀಯ ಚಿಕಿತ್ಸೆ ನಶಿಸುತ್ತದೆ ಎನ್ನುವರು.ಹೀಗೆ ಹಳ್ಳಿಯ ಜನರ ಜಾಣ್ಮೆ, ಸಹಬಾಳ್ವೆ ನೆನಪಿಸುತ್ತ,ಶಾಲೆಯ ಮಕ್ಕಳಿಗೆ ಮಾತ್ರವಲ್ಲ ಊರಿನ ಜನರಿಗೆ ಕೂಡ ಕತೆ ಕಾದಂಬರಿ ಓದಿ ಹೇಳಿದ್ದು,ನಾಟಕದ ಮೂಲಕ ಅವರಲ್ಲಿ ಅರಿವು ಮೂಡಿಸಿದ್ದು ದಾಖಲಿಸಿದ್ದಾರೆ.
ವಿಜಯಪುರದ ಬಿ. ಎಲ್. ಡಿ. ಈ. ಶಿಕ್ಷಣ ಸಂಸ್ಥೆಯಲ್ಲಿ ಕೂಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ನಂತರದಲ್ಲಿ ಬರಹದ ಕೆಲಸಕ್ಕೆ ಹೆಚ್ಚು ಹೊತ್ತು ನೀಡಿದರು. ಅವರು ಸದಾ ಸಾಹಿತ್ಯದ ವಿದ್ಯಾರ್ಥಿ ಯಾಗಿದ್ದು, ನಿವೃತ್ತಿಯ ನಂತರವೂ ಅಧ್ಯಯನ ಅಧ್ಯಾಪನ ಬಿಡಲಿಲ್ಲ. ವ್ಯಾಕರಣದ ಮೌಲಿಕ ಕೃತಿಯನ್ನು ಬರೆದರು. ಸಾಹಿತ್ಯ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಂಡಾಯ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಗೌರವ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ಕೆಲವು ಶಾಲೆಗಳಿಗೆ ಛೇರ್ಮನ್ ಆಗಿ ಕೂಡ ಕೆಲಸ ಮಾಡಿದ ಹಿಪ್ಪರಗಿ ಸರ್ ಅವರು ಡಿಸೆಂಬರ್ ೧೫ ೨೦೧೩ ರಂದು ಅಪಾರ ಶಿಷ್ಯ ಬಳಗವನ್ನು ಅಗಲಿದರು. ಅವರ ಅಂತ್ಯಸಂಸ್ಕಾರ ಢವಳಗಿ ಶಾಲೆಯ ಆವರಣದಲ್ಲಿ ಮಾಡಿದ್ದಾಗಿ ಮುನ್ನುಡಿಯಲ್ಲಿ ದರ್ಗಾ ಸರ್ ಹೇಳಿರುವರು. ಅವರು ಇಡೀ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟವರು.
ವೈಯಕ್ತಿಕ ವಿಷಯವನ್ನು ಕೃತಿಯಲ್ಲಿ ಏನನ್ನೂ ಹೇಳದೆ, ಕೇವಲ ವೃತ್ತಿ ಬದುಕು ಮಾತ್ರ ಹಂಚಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರೂ ಓದಲೇಬೇಕಾದದ್ದು “ನನ್ನ ಬದುಕು”. ಎಚ್ ನರಸಿಂಹಯ್ಯ ಅವರು ಬೆಂಗಳೂರು ನಲ್ಲಿ ನ್ಯಾಷನಲ್ ಕಾಲೇಜ್ ಗಾಗಿ ಶ್ರಮಿಸಿದರೆ, ಹಿಪ್ಪರಗಿ ಸರ್ ವಿಜಯಪುರ ಸೀಮೆಯ ಗ್ರಾಮೀಣ ಬಾಗದಲ್ಲಿ ಶಿಕ್ಷಣ ನೀಡುವಲ್ಲಿ ಬದುಕು ಸವೆಸಿದರು.ಹಾಗಾಗಿ ಇಂದು ಕೂಡ ವಿಜಯಪುರದಲ್ಲಿ ಓದಿದ ಶಿಕ್ಷಕರಿಗೆ ನಾಡಿನಾದ್ಯಂತ ಮನ್ನಣೆ ಇದೆ. ಕಾರಣ ಹಿಪ್ಪರಗಿ ಸರ್ ಹಾಗೂ ಅವರ ಸಮಕಾಲೀನರು ಹಾಕಿದ ಗಟ್ಟಿ ಅಡಿಪಾಯ.
ಎ.ಎಸ್. ಹಿಪ್ಪರಗಿ ಸರ್ ಅವರ ಬದುಕು ಕಣ್ಣಾಡಿಸಿದಾಗ ನನಗೆ ಧನ್ಯತಾ ಭಾವ ಮೂಡಿ ಭಾವಕಳಾದದ್ದು ಸಹಜ.ಕಾರಣ ೯೬ ರ ದಶಕದಲ್ಲಿ ಅವರ ಬಳಿ ನಾನು ಶಬ್ದಮಣಿದರ್ಪಣ ಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದೆ.
ನಿವೃತ್ತಿಯ ನಂತರ ದೈಹಿಕವಾಗಿ ಹಣ್ಣಾಗಿದ್ದರು, ಸರ್ ಅವರು ತಮ್ಮ ಕಂಚಿನ ಕಂಠದಲ್ಲಿ ಕಂದ ಪದ್ಯಗಳು ಹೇಳಿದ್ದು ಇಂದು ನನ್ನ ಕಿವಿಯಲ್ಲಿ ಅನುರಣಿಸುತ್ತದೆ. ವಡ್ಡಾರಾಧನೆ, ಶಾಸನ, ಮೀಮಾಂಸೆ ಮತ್ತು ಹಳೆಗನ್ನಡ ಪಠ್ಯಗಳು ಅವರಿಗೆ ಕಂಠಸ್ಥವಾಗಿದ್ದವು. ಇನ್ನೂ ಅವರಿಂದ ಏನೆಲ್ಲಾ ಸಂಗತಿ ಅರಿಯಬಹುದಿತ್ತು ಎಂಬ ನೋವು ಇಂದಿಗೂ ಇದೆ.ಆದರೆ ಅವರ ಶಿಷ್ಯೆಯಾಗಿ ಕೆಲವು ಕಾಲ ಅವರಿಂದ ಪಡೆದ ಜ್ಞಾನ ನನ್ನ ವೃತ್ತಿ ಬದುಕಿಗೆ ಇಂದಿಗೂ ಬುತ್ತಿಯಾಗಿದೆ.ಕನ್ನಡ ಶಾಸ್ತ್ರ ಸಾಹಿತ್ಯ ಅಭ್ಯಾಸಿಗರಿಗೆ ಅವರ ಪಾಠ ಮತ್ತು ಅವರು ರಚಿಸಿದ ಕೆಲವೇ ಮಹತ್ವದ ಕೃತಿಗಳ ಮೂಲಕ ಅವರು ಸದಾ ಜೀವಂತ. “ಗುರುವೇ ನಮಃ “






0 Comments