ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಅತಿಥಿ ಉಪನ್ಯಾಸಕರ ಸಂಘರ್ಷದ ಬದುಕಿನ ನೈಜ ಘಟನೆ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 15

ಕೃತಿ – ಅತಿಥಿ ದೇವೋಭವ
ಲೇಖಕರು – ಡಾ. ಮಣಿಶ್ರೀ

ಡಾ. ಮಣಿಶ್ರೀ ಅವರು ಬರೆದ ಈ ಕಾದಂಬರಿ ಪ್ರಸ್ತುತ ಉನ್ನತ ಶಿಕ್ಷಣ ವ್ಯವಸ್ಥೆಯ ಪ್ರತಿಬಿಂಬದಂತಿದೆ. ಸುಂದರವಾದ ಸಮಾಜ ನಿರ್ಮಾಣಕ್ಕೆ ಸುಸಂಸ್ಕೃತ ಯುವತಲೆಮಾರು ಬೇಕು, ಅವರನ್ನು ರೂಪಿಸಲು ಉತ್ತಮ ಗುರುವೃಂದವು ಬೇಕು. ಆದರೆ ಶಿಕ್ಷಣವನ್ನು ಪ್ರಾಮಾಣಿಕವಾಗಿ ಧಾರೆಯೆರೆಯುವ ಶಿಕ್ಷಕರಲ್ಲಿಯೆ ಎಷ್ಟೆಲ್ಲಾ ಗೊಂದಲ, ಆತಂಕ ಸಂಬಳವನ್ನೆ ಮಾನದಂಡ ಮಾಡಿಕೊಂಡು ತರತಮವಾಗಿ ಕಾಣುವ ಅತಂತ್ರ ಸ್ಥಿತಿ ಇಂದು ನಿರ್ಮಾಣವಾಗಿದೆ. ಓದಿನ ಅರ್ಹತೆ, ಪಾಠ ಮಾಡುವ ವಿಧಾನ, ಎಲ್ಲವೂ ಒಂದೇ ಆಗಿದ್ದು, ಅವಕಾಶ ದೊರೆತು ಖಾಯಂ ಆದವರು ಮತ್ತು ಅವಕಾಶ ವಂಚಿತರು ಅರೆಕಾಲಿಕವಾಗಿ ಸೇವೆ ಸಲ್ಲಿಸುವವರ ಮಧ್ಯೆ ದೊಡ್ಡ ಕಂದಕವೇ ಕಾಣಬಹುದು. ಇಂತಹ ಒಂದು ನೈಜ ಸಮಸ್ಯೆಯನ್ನು ಇಟ್ಟುಕೊಂಡು, ಆ ಸಮಸ್ಯೆಯ ಒಂದು ಭಾಗವಾಗಿ ಲೇಖಕಿ ಕೂಡ ಆ ನೋವು ಅರಿತಿದ್ದರಿಂದ, ಅತಿಥಿ ಉಪನ್ಯಾಸಕಿಯಾಗಿ ನೋವು ಸಂಕಟ ಅನುಭವಿಸಿ ತಮ್ಮದೇ ಆದ ಶೈಲಿಯಲ್ಲಿ ಸಿನಿಮಿಯ ಧಾಟಿಯಲ್ಲಿ ಕಥೆಯನ್ನು ಹೆಣೆಯುವ ಪ್ರಯತ್ನ ಮಣಿಶ್ರೀ ಅವರು ಮಾಡಿದ್ದಾರೆ.

ಕಾದಂಬರಿಯು ವನಜ ಎಂಬ ಪಾತ್ರದ ಮೂಲಕ ಮುನ್ನಡೆಯುತ್ತದೆ. ಅವಳು ತಂದೆ ತಾಯಿಯ ಏಕೈಕ ಸುಪುತ್ರಿ. ಪ್ರೀತಿ ಅಕ್ಕರೆಯಲ್ಲಿ ಬೆಳೆದು ಪದವಿ ಕಾಲೇಜಿನ ಉಪನ್ಯಾಸಕಿಯಾಗಿ ನೇಮಕಗೊಳ್ಳುತ್ತಾಳೆ. ಓದು ಬರಹದ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುತ್ತಾಳೆ. ಆದರೆ ಬದುಕಿನಲ್ಲಿ ಆಕಸ್ಮಿಕ ತಿರುವುಗಳಿಂದ ತಂದೆ ತಾಯಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಇರುತ್ತಾಳೆ. ಆ ಒಂಟಿತನದ ಸಂದರ್ಭದಲ್ಲಿ ಭೇಟಿಯಾಗುವವರು ಬಾಲ್ಯದ ಸ್ನೇಹಿತರು ವಿನಯ್ ಮತ್ತು ವಾಣಿ ಎಂಬ ಅತಿಥಿ ಉಪನ್ಯಾಸಕರು. ವನಜಳಿಗೆ ತನ್ನದೇ ಕಾಲೇಜಿನಲ್ಲಿ ಆತ್ಮೀಯ ಸ್ನೇಹಿತರು ಸಿಕ್ಕಾಗ ಸಂಭ್ರಮದಿಂದ ಅವರೊಂದಿಗೆ ಬೆರೆತುಕೊಳ್ಳುತ್ತಾಳೆ, ಹಾಗಾಗಿ ಮಿಕ್ಕ ಖಾಯಂ ಉಪನ್ಯಾಸಕರ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಅತಿಥಿ ಉಪನ್ಯಾಸಕರನ್ನು ಕನಿಷ್ಠವಾಗಿ ಕಾಣುವ ಸಂದರ್ಭದಲ್ಲಿ ಅವಳು ಅವರನ್ನು ಹತ್ತಿರಕ್ಕೆ ಕರೆದುಕೊಂಡದ್ದನ್ನು ಕಂಡು ಯಾರು ಸಹಿಸದಾಗುತ್ತಾರೆ.

ಆ ಮೂರು ಜನರ ಮಧ್ಯೆ ಯಾವ ವ್ಯತ್ಯಾಸವಿಲ್ಲದೆ ಶುದ್ಧ ಸ್ನೇಹವಿರುತ್ತದೆ. ವಾಣಿಯ ಕುಟುಂಬದ ಕಷ್ಟವನ್ನು ಅರಿತು ವನಜ ತನ್ನ ಮನೆಯಲ್ಲಿ ಅವಳಿಗೆ ಅವಕಾಶ ಮಾಡಿಕೊಡುತ್ತಾಳೆ. ವನಜ ಮತ್ತು ವಿನಯ್ ನಡುವೆ ಪ್ರೇಮಾಂಕರವಾಗುತ್ತದೆ. ಅದಕ್ಕೆ ವಾಣಿಯ ಸಹಕಾರ ಕೂಡ ಇರುತ್ತದೆ. ಆದರೆ ಕಾಲೇಜಿನ ವಾತಾವರಣ ಭಿನ್ನವಾಗಿದ್ದು ಅಲ್ಲಿ ಅತಿಥಿ ಉಪನ್ಯಾಸಕರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದು, ಅವರ ಪರಿಸ್ಥಿತಿಯನ್ನೇ ಅರಿತುಕೊಳ್ಳದ ವಿಕ್ಷಿಪ್ತ ಮನಸ್ಸುಗಳ ಖಾಯಂ ಉಪನ್ಯಾಸಕರ ಬಳಗವಿರುತ್ತದೆ. ಆದರೆ ಅತಿಥಿ ಉಪನ್ಯಾಸಕರು ಮಾತ್ರ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂದು ಜೊತೆಗೆ ತಮ್ಮನ್ನು ಗೌರವಯುತವಾಗಿ ಕಾಣಬೇಕೆಂದು ಮುಷ್ಕರ ಪ್ರತಿಭಟನೆ ಮಾಡುತ್ತಲೇ ಇರುತ್ತಾರೆ. ಒಮ್ಮೆ ಕಾಲೇಜಿನಲ್ಲಿ ವಾಣಿಗೆ ಅತಿಥಿ ಉಪನ್ಯಾಸಕಿ ಎಂಬ ಕಾರಣಕ್ಕೆ ಕನಿಷ್ಠವಾಗಿ ಕಂಡಾಗ, ಅವಳು ಪ್ರತಿಭಟನೆಗೆ ಮುಂದಾಗುತ್ತಾಳೆ . ಆ ಪ್ರಸಂಗ ಮೂವರ ಜನರ ಬದುಕಿನಲ್ಲಿ ಏನೆಲ್ಲಾ ಏರಿಳಿತಕ್ಕೆ ಕಾರಣವಾಗುತ್ತದೆ . ತಂದೆ ತಾಯಿಯನ್ನು ಕಳೆದುಕೊಂಡ ವನಜ ಮತ್ತು ತನ್ನ ಕುಟುಂಬದ ಹಿನ್ನೆಲೆಯನ್ನು ಹೇಳಬಯಸದ ವಿನಯ್ ಇಬ್ಬರು ಮದುವೆ ನಿಶ್ಚಯ ಮಾಡಿಕೊಂಡಿರುತ್ತಾರೆ. ಆದರೆ ಅತಿಥಿ ಉಪನ್ಯಾಸಕರ ಸಮಸ್ಯೆ ಮುನ್ನೆಲೆಗೆ ಬಂದಾಗ, ವೈಯಕ್ತಿಕ ವಿಷಯಕ್ಕಿಂತ ಸಾಮಾಜಿಕ ನ್ಯಾಯ ಮುಖ್ಯವಾಗುತ್ತದೆ. ಹಾಗಾಗಿ ಮೂವರು ಮೂರು ದಿಕ್ಕುಗಳಾಗುತ್ತಾರೆ.

ವಾಣಿ ಪ್ರತಿಭಟನೆ ಮಾಡುತ್ತಾ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಹೋದರೆ, ವಿನಯ್ ಈ ಸಮಸ್ಯೆಗೆ ಒಂದು ಇತಿಶ್ರೀ ಹಾಡಬೇಕೆಂದು ವನಜಳಿಗೆ ತಾನು ಬರೋವರೆಗೆ ಕಾದಿರಬೇಕೆಂದು ಹೇಳಿ ಹೊರಟು ಹೋಗುತ್ತಾನೆ. ವನಜಳಿಗೆ ದೂರದ ಊರಿಗೆ ವರ್ಗಾವಣೆಯಾಗುತ್ತದೆ. ವನಜ ಒಂಟಿಯಾಗಿ ದೂರದ ಊರಿನಲ್ಲಿ ಇರುವ ಸಂದರ್ಭ ಬಂದರೆ, ವಾಣಿಗೆ ಮತ್ತೆ ಅದೇ ಕಾಲೇಜಿನಲ್ಲಿ ನಡೆಯುವ ಶೋಷಣೆ ಖಾಯಂ ಉಪನ್ಯಾಸಕರ ಕಟು ನುಡಿಗಳಿಗೆ ಕಿವಿಯಾಗುತ್ತಾ ಒಬ್ಬಂಟಿ ಆಗುತ್ತಾಳೆ. ವಿನಯ್ ಮಾತ್ರ ಯಾರ ಕೈಗೂ ಸಿಕ್ಕದೆ ಭೂಗತನಾಗುತ್ತಾನೆ.

ವಿನಯ್ ಕೆಲವು ತಿಂಗಳ ನಂತರ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿಯಾಗಲು ಬರುತ್ತಾನೆ.ಅವರು ಅವನ ತಂದೆ ಆಗಿರುತ್ತಾರೆ. ತಂದೆಯಿಂದ ಚಿಕ್ಕಂದಿನಲ್ಲಿಯೇ ದೂರವಾದ ವಿನಯ್ ತನ್ನ ಹಳೆಯ ದ್ವೇಶವನ್ನೆಲ್ಲಾ ಮರೆತು ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡಿಸಬೇಕೆಂದು ಕೇಳಲು ಹೋಗತ್ತಾನೆ, ಅದರಲ್ಲಿ ಯಶ ಕೂಡ ಕಾಣುತ್ತಾನೆ ಮುಂದೆ ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯವಾಗಿರಲು ಒಪ್ಪಿಕೊಳ್ಳುತ್ತಾನೆ.

ನಂತರ ವನಜಳ ಜೊತೆ ಮದುವೆಯಾಗುವ ಮೂಲಕ ಕಥೆ ಅಂತ್ಯವಾಗುತ್ತದೆ. ವಿನಯ ಮರಳಿ ತಂದೆಯ ಆಶ್ರಯಕ್ಕೆ ಬಂದು ವನಜಳ ಕೈಹಿಡಿದು ಎಲ್ಲಾ ಅತಿಥಿ ಉಪನ್ಯಾಸಕರಿಗೂ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ, ವಾಣಿ ವನಜಾ, ವಿನಯ್ ಎಲ್ಲರೂ ಒಂದಾಗುವ ಹರ್ಷದಾಯಕ ಸನ್ನಿವೇಶದೊಂದಿಗೆ ಕಥೆ ಮುಕ್ತಾಯಗೊಳ್ಳುತ್ತದೆ .

‘ಅತಿಥಿ ದೇವೋಭವ’ ಇದು ಅತಿಥಿ ಉಪನ್ಯಾಸಕರ ಸಂಘರ್ಷದ ಬದುಕಿನ ನೈಜ ಘಟನೆಗಳನ್ನು ಆಧರಿಸಿದ್ದಾಗಿದ್ದು, ಕೃತಿಯ ಓಟಕ್ಕೆ ತಕ್ಕಂತೆ ಕೆಲವು ಪಾತ್ರಗಳನ್ನು ಪೋಣಿಸಿದ್ದು, ಹಲವು ಅನಿರೀಕ್ಷಿತ ತಿರುವುಗಳ ಮೂಲಕ ರೋಚಕ ಕಥೆಯನ್ನೇ ಹೆಣೆದಿದ್ದಾರೆ. ಕಾದಂಬರಿಯುದ್ದಕ್ಕೂ ಬರುವ ಖಾಯಂ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರ ನಡುವಿನ ತಾರತಮ್ಯ ಮತ್ತು ಅತಿಥಿ ಉಪನ್ಯಾಸಕರು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಮಾಡುವ ಹೋರಾಟ ಎಲ್ಲವನ್ನು ಸಾಧ್ಯಂತವಾಗಿ ಬಿಂಬಿಸಿದ್ದಾರೆ. ಅತಿಥಿ ಉಪನ್ಯಾಸಕರ ಸಮಸ್ಯೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತಾದ್ಯಂತ ಶಿಕ್ಷಣ ವ್ಯವಸ್ಥೆಯಲ್ಲಿ ಈ ಸಮಸ್ಯೆ ಜೀವಂತವಾಗಿದೆ. ಇದಕ್ಕೆ ಯಾವ ರಾಜ್ಯದ ಸರಕಾರವು ಶಾಶ್ವತ ಪರಿಹಾರ ನೀಡಿಲ್ಲ. ನೀಡುವುದು ಇಲ್ಲ. ರಾಜಕೀಯ ವ್ಯಕ್ತಿಗಳು ಸ್ವಹಿತಾಸಕ್ತಿ ಗಮನಿಸುವವರೆ ವಿನಃ ಶಿಕ್ಷಣದ ಅವ್ಯವಸ್ಥೆ ಬಗ್ಗೆ ಗಮನವಿಲ್ಲ. ಆದರೆ ಕಾದಂಬರಿಯಲ್ಲಿ ಮಾತ್ರ ಮುಖ್ಯಮಂತ್ರಿಯ ಮಗನೆ ಅತಿಥಿ ಉಪನ್ಯಾಸಕನಾಗಿರುವ ಕಾರಣಕ್ಕೆ ಸಮಸ್ಯೆಗೆ ಪರಿಹಾರ ದೊರೆತಿದೆ. ಜ್ವಲಂತ ಸಮಸ್ಯೆಗೆ ಸರಳವಾದ ಉತ್ತರ ನೀಡಿದ್ದಾರೆ ಆದರೆ ನೈಜ ಬದುಕಿನಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತದೆ.

ಅತಿಥಿ ಉಪನ್ಯಾಸಕರ ಸಂಕಟ ಕೊನೆಯಾಗದೆ, ಅವರ ಆತಂಕದ ಬದುಕಿಗೆ ಪೂರ್ಣವಿರಾಮ ಸಿಗವುದೆ ಎಂಬ ಪ್ರಶ್ನೆ ಕಾಡುವುದು. ಎಲ್ಲಾ ಅರ್ಹತೆ ಹೊಂದಿದ್ದರೂ ಕೂಡ ಅವಕಾಶ ವಂಚಿತರಾಗಿ, ಕಾರ್ಯಕ್ಷೇತ್ರದಲ್ಲಿ ಅವರನ್ನು ನೋಡುವ ದೃಷ್ಟಿಕೋನ, ವ್ಯವಹರಿಸುವ ವಿಧಾನ ಎಲ್ಲವೂ ಅಸಹನಿಯ. ಅವರಿಗಿರುವ ಅತಂತ್ರ ಬದುಕಿನ ಬಗ್ಗೆ ಸಹವರ್ತಿಗಳು ಕೂಡ ಅರ್ಥ ಮಾಡಿಕೊಳ್ಳುವುದಿಲ್ಲವೆಂದರೆ, ಇನ್ನು ರಾಜಕೀಯ ಮುಖಂಡರಿಗೆ ಹೇಗೆ ಅರ್ಥವಾಗಬೇಕು. ಅತಿಥಿ ಉಪನ್ಯಾಸಕರು, ಅರೆಕಾಲಿಕ ಉಪನ್ಯಾಸಕರು ಅಥವಾ ಬಾಡಿಗೆ ಉಪನ್ಯಾಸಕರು ಹೀಗೆ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡು ಕಳೆದ 25 ವರ್ಷದಿಂದ ಈ ಶೋಷಣೆ ಅನುಭವಿಸುತ್ತಲೆ ಬಂದಿದ್ದಾರೆ. ಇಂತಹ ಸಮಸ್ಯೆಯನ್ನು ಕಾದಂಬರಿ ರೂಪದಲ್ಲಿ ಮಣಿಶ್ರೀ ಅವರು ಸ್ವ ಅನುಭವದ ಆಧಾರದ ಮೇಲೆ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕಾದಂಬರಿ ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಕೊನೆಯಲ್ಲಿ ಅನೇಕ ಅತಿಥಿ ಉಪನ್ಯಾಸಕರ ಅಂತರಂಗದ ನುಡಿಗಳನ್ನು ದಾಖಲಿಸಿದ್ದಾರೆ. ಈ ಕಾದಂಬರಿಯ ತಂತ್ರ, ಶೈಲಿ, ನಿರುಪಣಾ ವಿನ್ಯಾಸದ ಬಗ್ಗೆ ಹೆಚ್ಚು ಚರ್ಚಿಸದೆ, ನೈಜ ಸಮಸ್ಯೆಯನ್ನು ಕಲಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ ಲೇಖಕಿಗೆ ಅಭಿನಂದನೆಗಳನ್ನು ಹೇಳ ಬಯಸುವೆ

‍ಲೇಖಕರು Admin

19 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading