ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕದ ಓದು ಮುದ ನೀಡಿದ ಘಳಿಗೆ-ಮನಸಿಗೆ

ಸವಿತಾ ಯಾಜಿ ಸಂಪಾದನೆಯ ‘ಜಯಪಥ’ ಜಯಲಕ್ಷ್ಮಿ ಕಾಕಲ್ ಅವರ ಜೀವನಗಾಥೆ

‘ಯಾಜಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ವನಜಾ ಕೊಳಗಿ ಅವರ ಬರಹ ಇಲ್ಲಿದೆ.

-ವನಜಾ ಕೊಳಗಿ

ಈ ಕೃತಿಯ ಸಂಪಾದಕಿ ಅವರ ಮಗಳು ಸವಿತಾ ಯಾಜಿ. ಉಮೇಶ ಕಾಕಲ್ ರವರ ಸಂಯೋಜನೆ. ‘ಯಾಜಿ ಪ್ರಕಾಶನ’ ಮೂಲಕ ಪ್ರಕಟಗೊಂಡ ಈ ಕೃತಿಯ ಒಂದು ಪ್ರತಿಯನ್ನು ಪ್ರೀತಿಯಿಂದ ಪ್ರಕಾಶ ಕಾಕಲ್ ನನ್ನ ಕೈಗಿತ್ತಾಗ ; ಕ್ಷಣಕಾಲ ಮೌನ ನನ್ನಾವರಿಸಿತು.

ತುಂಬಾ ವರುಷಗಳ ಹಿಂದೆ ನಾನು ಕಳೆದ ಭೌದ್ಧಿಕ ಹಾಗೂ ಭಾವನಾತ್ಮಕ ಕಲಿಕೆಯ ಜೊತೆ ಸ್ನೇಹ- ಸೌಹಾರ್ಧತೆಯ ಆತ್ಮೀಯ ಮನಸುಗಳು, ಬದುಕಿನ ವೈವಿಧ್ಯತೆಗಳ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವಂತ ಅನುಭವಗಳ ಸಿಂಚನಗಳು , ಮನದಲ್ಲಿ ಭದ್ರವಾಗಿ ತಳವೂರಿದ್ದಷ್ಟೇ ಅಲ್ಲದೇ ಇಂದಿಗೂ ಬದುಕಿನ ಮುಖ್ಯ ನಿರ್ಧಾರಗಳ ದ್ವಂದ್ವಗಳ ಕ್ಷಣಗಳಲ್ಲಿ ಸ್ಷಷ್ಟತೆಯನ್ನು ನೀಡುವಂಥ ಕೋಲ್ಮಿಂಚಿನ ಛಳಕು, ಆಗಿನ‌ ಆತ್ಮೀಯ ಬಂಧಗಳ ನಿನಾಸಮ್ ಹಾಗೂ ಆ ದಿನಗಳಲ್ಲಿ ಜಯಕ್ಕ ಹಾಗೂ ಗಣೇಶ ನೀಡಿದ್ದ ಹಾಸ್ಟೆಲ್ ಊಟ-ತಿಂಡಿ ಕಾಫಿ , ನೆನಪುಗಳ ಜೊತೆ ಪುಸ್ತಕವೂ ನನ್ನ ಜೊತೆ ಮನೆಗೆ ಬಂತು.

ಜಯಪಥ ಪುಸ್ತಕದ ಶೀರ್ಷಿಕೆಯೇ ತಿಳಿಸುವಂತೆ ‘ಜಯಲಕ್ಷ್ಮಿ ಕಾಕಲ್’ ಈ ಪುಸ್ತಕದ ಕೇಂದ್ರಬಿಂದು.
ತನ್ನ ಮನೆ, ಮಕ್ಕಳು, ಸಂಸಾರದಲ್ಲಿನ ಆಗು-ಹೋಗುಗಳ ದೈನಂದಿನ ಬದುಕಿನ ಸಹಜತೆಯಲ್ಲಿ ಬದುಕಿದ ಮಲೆನಾಡಿನ ಅವಿಭಕ್ತ ಕುಟುಂಬದ ಸಾಮಾನ್ಯ ಗೃಹಿಣಿ. ಅವರ ಜೊತೆ ಜೊತೆಯಲ್ಲಿಯೇ ಬೆಳೆದು; ಈಗ ಪ್ರವರ್ಧಮಾನಕ್ಕೆ ಬಂದ ಮಕ್ಕಳು, ಮಕ್ಕಳ ಜೊತೆ ಮನೆ ತುಂಬಿದ ಅವರವರ ಸಂಗಾತಿಗಳು, ಮಡಿಲಲ್ಲಿ ಬೆಳೆದ ಮೊಮ್ಮಕ್ಕಳು, ಕಂಡುಂಡ ಸುತ್ತಲಿನ ಆತ್ಮೀಯರು ಹಾಗೂ ಬಂಧುಗಳು-ಇವರೆಲ್ಲರಿಗೂ ಜಯಕ್ಕನೊಡನೆ ತಮಗೆ ದಕ್ಕಿದ ಅನುಭವಗಳ ಮೆಲುಕುಗಳು ಸರಳ ನಿರೂಪಣೆಯ ಸಹಜತೆ ಪ್ರತಿ ಪುಟಗಳಲ್ಲಡಗಿದೆ.

ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ‘ ಅಂರ್ತರ್ಗತವಾಗಿ ಅವ್ಯಕ್ತವಾಗಿರುವ ಸಹನೆ, ಅನುಸರಿಸಿಕೊಂಡು ಹೋಗುವ ಪ್ರಯತ್ನ, ಒಳಗಿನ ಬೇಗುದಿಯನ್ನು ತೋರಗೊಡದ ಮಂದಸ್ಮಿತ ನಗು, ಜನರೊಂದಿಗಿನ ಪ್ರೀತಿಯ ನಡುವಳಿಕೆ, ಇರುವುದನ್ನೇ ಜತನವಾಗಿಸುವ /ಬೆಳೆಸುವ ಇರಾದೆ ಹಾಗೂ ಸಂತೃಪ್ತಿಯ ಜೊತೆ ಎಂದಿಗೂ ಬತ್ತಿ ಹೋಗಲು ಬಿಡದ ಬದುಕಿನ ಜೀವನೋತ್ಹಾಹ ‘- ಇಂಥ ಹಲವಾರು ಗುಣಗಳಿರುವ ಹಾಗೂ ಅವುಗಳಿಂದಲೇ ಬದುಕನ್ನು ಸಹ್ಯವಾಗಿಸುವ ವ್ಯಕ್ತಿತ್ವ ವೊಂದು ತನ್ನ ಜೊತೆಯವರ ಬದುಕನ್ನು ಬೆಸೆದ ಬಗೆ ‘ಅಸಾಮಾನ್ಯ’ ಎನಿಸುವುದರ ಜೊತೆ ಮುಂದಿನ ತಲೆಮಾರಿಗೂ ಗೌರವಾನ್ವಿತಳಾಗುವ ಆದರಣೀಯ ಭಾವಗಳು ಪ್ರತಿಯೊಬ್ಬರ ಬರಹಗಳಲ್ಲಿಯೂ ನಿಚ್ಛಳವಾಗಿ ಕಾಣುತ್ತಿದೆ. ಇಂಥ ಕೃತಿಗಳು ಹಾಗೂ ಓದು ತಮ್ಮ ಹೆತ್ತವರ ಕುರಿತು ದಾಖಲಿಸುವ ಇಶ್ಛೆ ಇರುವ ಇನ್ನಿತರ ಮಕ್ಕಳಿಗೂ ಪ್ರೇರಣೆಯನ್ನೂ ನೀಡಬಲ್ಲದು.

ಸಂಕಷ್ಟದಲ್ಲಿ ತಮ್ಮ ಸಂಸಾರದ ನೊಗಕ್ಕೆ ಕೊರಳೊಡ್ಡಿ ಬದುಕನ್ನು ಹಸನಾಗಿಸಿದ ಅದೆಷ್ಟೋ ಗಟ್ಟಿಗಿತ್ತಿ ಅಮ್ಮಂದಿರು ಪುಸ್ತಕದುದ್ದಕ್ಕೂ ನೆನಪುಗಳಾಗಿ ಕಾಡುತ್ತ;ಅಕ್ಷರ ಕೆ.ವಿ.ಯವರು ಬರೆದ ನಿಜಾಂಶವನ್ನು ದೃಡಪಡಿಸುತ್ತಾರೆ. ಅಷ್ಟೇ ಅಲ್ಲ ; ಮುಂದುವರಿದು ಅವರು ಹೇಳುವ ಇಂದಿನ ವಿಭಕ್ತ ಕುಟುಂಬಗಳ ಕಾಲಘಟ್ಟದಲ್ಲಿ ಸ್ರ್ತೀಶೋಷಣೆಯ ವಸ್ತುವೆನಿಸುವ ಈ ಎಲ್ಲ ಸಂಗತಿಗಳು ಅಂದಿನ ಅವಿಭಕ್ತ ಕುಟುಂಬಗಳ ದೈನಂದಿನ ಬದುಕಿನಲ್ಲಿ ಸಹಜವಾಗಿ ನಡೆಯುತ್ತಿರುವುದರ ಜೊತೆ ಕುಟುಂಬದ ಒಟ್ಟೂ ಹಿತಾಸಕ್ತಿಯು ಮಾತ್ರ ಕೇಂದ್ರೀಕೃತವಾಗಿತ್ತೆಂಬುದೂ ಕೂಡಾ ಅಷ್ಟೇ ಸತ್ಯ. ಅಂಥ ಅನ್ಯೋನ್ಯತೆಯ ಬಂಧ ಹೊಸೆವ ಇಂಥ ವ್ಯಕ್ತಿತ್ವ ಕುಟುಂಬದ ಪ್ರತಿ ವ್ಯಕ್ತಿಯನ್ನೂ ತನ್ನದೇ ಸೂರಿನಡಿಯಲ್ಲಿರುವಂತೆ ಮಾಡುವ ಜಾಣತನದ ತಾಣವೂ ಆಗಿತ್ತು.

ಎಷ್ಟೆಲ್ಲ ನೆನಪುಗಳನ್ನು ಮರುಕಳಿಸಿ ; ಪುನಃ ಅವುಗಳಲ್ಲಿ ಜೀವಿಸಲು ಸಾಧ್ಯವಾಗಿಸಿದ ”ಜಯಪಥ’ ಕೃತಿ ಹಾಗೂ ಪ್ರಕಾಶ್ ಕಾಕಲ್, ಸುಶೀಲ, ಕಿಟ್ಟಣ್ಣ, ಮೇಧಿನಿ- ಎಲ್ಲರಿಗೂ….
ಪ್ರೀತಿಯ ಶರಣೋ ಶರಣು.

‍ಲೇಖಕರು Admin

17 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading