ಅರವಿಂದ ಚೊಕ್ಕಾಡಿ ಅವರ ‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’
ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ.
-ಉದಯಕುಮಾರ ಹಬ್ಬು
ಅರವಿಂದ ಚೊಕ್ಕಾಡಿ ಅವರ “ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ” ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಚಳುವಳಿಯಿಂದ ಇಡೀ ಜಿಲ್ಲೆಯ ಬಡವರ, ದೀನ ದಲಿತರ, ಕೃಷಿಕರ ಕೂಲಿಕಾರರ ಕಣ್ಣೀರು ವರಿಸಿದ ಸಹಕಾರ ಚಳುವಳಿಯ ಗಾರುಡಿಗ ಮಾಂತ್ರಿಕ ಶ್ರೀಮಾನ್ ಮೊಳಹಳ್ಳಿ ಶಿವರಾಯರ ಜೀವನ ಚರಿತ್ರೆ. ಗಾಂಧಿಜೀಯವರ ಗ್ರಾಮ ಸ್ವರಾಜ್ಯ ಸಿದ್ಧಾಂತದ ಮೇಲೆ ಆಧಾರಿತ ಸಹಕಾರ ಚಳವಳಿ ಜಿಲ್ಲೆಯಾದ್ಯಂತ ಸಂಚಲನವನ್ನು ಹುಟ್ಟು ಹಾಕಿದ ಯಶೋಗಾಥೆ ಈ ಮಹಾನ್ ವ್ಯಕ್ತಿಯ ಜೀವನ ಗಾಥೆ ಅರವಿಂದರು ಈ ಪುಸ್ತಕದ ಪ್ರಾಯೋಜಕರಾದ ಎಸ್ ಆರ್ ಹರೀಶಾಚಾರ್ಯ ಕೋರಿಕೊಂಡ ಮೇರೆಗೆ ಈ ಅಧ್ಯಯನವನ್ನು ಕೈಕೊಳ್ಳಲಾಗಿದೆ.

ಹರೀಶ್ ಆಚಾರ್ಯ ಅವರು ಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡವರಾಗಿದ್ದು ಶಿವರಾಯರ ದೃಶ್ಯರೂಪಕವನ್ನು ನಿರ್ಮಿಸಿ ಸಮಾಜಕ್ಕೆ ತಲುಪಿಸುವುದು ಅವರ ಚಿಂತನೆಯಾಗಿದೆ. ಈ ರೀತಿಯ ದೃಶ್ಯರೂಪಕವು ಇತಿಹಾಸ ನಿಷ್ಠವೇ ಆಗಬೇಕೇ ಹೊರತು ಕಥೆಯಾಗಬಾರದು ಎಂಬ ಉದ್ದೇಶ ಅವರದು.” ಪುಟ ಸಂಖ್ಯೆ 22
“ಈ ಸ್ವರೂಪದ ರಚನೆ ನನಗೆ ಹೊಸಬಗೆಯದಾಗಿದೆ. ಆದ್ದರಿಂದ ರಂಗಭೂಮಿ ಮತ್ತು ಸಿನೆಮಾ ರಂಗದ ಅರಿವು ಇರುವ ಪ್ರಸಾದ್ ರಕ್ಷಿದಿ, ವಿನು ಬಳಂಜ ಮತ್ತು ಟಿ. ಎನ್, ಸೀತಾರಾಮ್ ಅವರ ಬಳಿ ಮಾತಾಡಿಕೊಂಡು ಸಲಹೆ ಪಡೆದು ನಿರೂಪಣೆ ಮಾಡಿದ್ದೇನೆ. ಈ ಅಧ್ಯಯನವನ್ನು ದೃಶ್ಯಗಳ ಸಂಘಟನೆಯಾಗಿ ನಿರೂಪಿಸಲು ಆದ್ಯತೆ ನೀಡಿದ್ದೇನೆ. ದೃಶ್ಯ ರೂಪಕವನ್ನು ನಿರ್ಮಿಸುವ ಉದ್ದೇಶ ಇದ್ದಾಗ ರಂಗನಿರ್ದೇಶಕರಿಗೆ ದೃಶ್ಯಗಳನ್ನು ಸೃಷ್ಟಿಸಲು ಸುಲಭವಾಗುವ ಹಾಗೆ ಆಕರವನ್ನು ಕೊಡುವುದು ಇದರ ಉದ್ದೇಶವಾಗಿದೆ. ರಂಗನಿರ್ದೇಶಕರಿಗೆ ದೃಶ್ಯವನ್ನು ಪರಿಣಾಮಕಾರಿಯಾಗಿಸುವ ತಿಳಿವಳಿಕೆ ನನಗಿಂತ ರಂಗನಿರ್ದೇಶಕರಿಗೆ ಜಾಸ್ತಿ ಇರುತ್ತದೆ. ಆದ್ದರಿಂದ ಅವರೇ ಆ ಕೆಲಸವನ್ನು ಮಾಡಲಿ ಎಂದು ನನಗೆ ಲಭ್ಯವಿರುವ ಎಲ್ಲ ಘಟನೆಗಳನ್ನು ಸೇರಿಸಿ ಘಟನಾವಳಿಗಳ ಸರಪಳಿಯಾಗಿ ನಿರೂಪಿಸಿದ್ದೇನೆ. ಇತಿಹಾಸದ ವಿದ್ಯಾರ್ಥಿಯಾಗಿ ಪ್ರತೀ ಘಟನೆಯನ್ನೂ ಐತಿಹಾಸಿಕ ವಿಧಾನದಲ್ಲಿ ಅರ್ಥೈಸಿ ಅಧಿಕೃತವೆನಿಸಿದಷ್ಟನ್ನೇ ಉಳಿಸಿದ್ದೇನೆ.ಅಲ್ಲದೆ ಇದನ್ನು ದೃಶ್ಯವಾಗಿ ತರುವ ಉದ್ದೇಶ ಇರುವುದಕ್ಕಾಗಿಯೇ ಶಿವರಾಯರ ಒಡನಾಡಿಗಳು ಆಡಿದ ಹಲವು ಮಾತುಗಳನ್ನು ಅದೇ ರೀತಿಯಲ್ಲಿ ಉಳಿಸಿದ್ದೇನೆ.ಕೆಲವು ಕಡೆ ಕೊಂಚ. ದೀರ್ಘ ಇವೆ. ದೃಶ್ಯವನ್ನು ಸೃಷ್ಟಿಸುವ ಉದ್ದೇಶ ಈ ಅಧ್ಯಯನದಲ್ಲಿ ಇರುವುದರಿಂದ ಅಂತಹ ಲಭ್ಯ ವಿವರಗಳು ದೀರ್ಘವಾಗಿರಬೇಕಾದ ಅಗತ್ಯವಿದೆ ಎಂದು ಅವುಗಳನ್ನು ಹಾಗೆಯೇ ಉಳಿಸಿದ್ದೇನೆ.” ಅರವಿಂದರು ಕೃತಿಯ ಪ್ರಾರಂಭದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ಈ ಕೃತಿಯ ಹಿಂದೆ ಅರವಿಂದರ ಶ್ರಮ ಕ್ಷೇತ್ರ ಕಾರ್ಯ ಅಧ್ಯಯನ, ಮತ್ತು ದೃಶ್ಯರೂಪಕ್ಕೆ ಹೊಂದಿಕೊಳ್ಳುವ ನಿರೂಪಣೆ ಇದ್ದುದರಿಂದ ಮೊಳಹಳ್ಳಿ ಶಿವರಾಯರ ಸಮಗ್ರ ವ್ಯಕ್ತಿತ್ವ ಚಿತ್ರಣ ಮತ್ತು ಅವರ ಅಮೋಘ ಸಾಮಾಜಿಕ ಸೇವೆ ಬಹು ಆಕರ್ಷಕವಾದ ಶೈಲಿಯಿಂದ ಓದುಗರ ಮನ ಸೆರೆಹಿಡಿಯುತ್ತದೆ.
ಈ ಕೃತಿಯಲ್ಲಿ ಒಟ್ಟೂ ೧೮ ಅಧ್ಯಾಯಗಳಿವೆ.
ಶಿವರಾಯರ ಹಿನ್ನೆಲೆ, ಶಿವರಾಯರ ಶಿಕ್ಷಣ ಶಿವರಾಯರ ಮದುವೆ, ಶಿವರಾಯರ ವೃತ್ತಿ, ಶಿವರಾಯರ ಸಂಸಾರ, ಮಹಾಳಿ ರೋಗಪ್ರತಿಬಂಧಕ ಸಹಕಾರ ಸಂಘ,ಸಹಕಾರ ಚಳವಳಿ, ಜನಸೇವೆಯ ಜವಾಬ್ದಾರಿ, ಶಿಕ್ಷಣ, ಶೈಕ್ಷಣಿಕ ಉನ್ನತೀಕರಣ,ದುರ್ಬಲರ ಸಬಲೀಕರಣ,ಸಾಂಸ್ಕೃತಿಕ ಕಾರ್ಯಗಳು, ಜನರೊಂದಿಗೆ, ನಿರ್ಗಮನ,ಕಂಡವರ ಮನದಲ್ಲಿ, ನೆನಪುಗಳಲ್ಲಿ, ಶಿವರಾಯರ ಪತ್ರಸಂಗ್ರಹ, ಸಮಗ್ರ ಅಭ್ಯದಯದ ಪರಿಕಲ್ಪನೆ:ಸರ್ವವ್ಯಾಪಿ ಸಹಕಾರ, ಕೊನೆಯದಾಗಿ ಆಕರ ಇವಿಷ್ಟು ಪುಸ್ತಕದ ಪರಿವಿಡಿಯಾಗಿದೆ.
ಗಾಂಧಿಜೀ ಅಸಹಕಾರ ಚಳವಳಿಯಿಂದ ಬ್ರಿಟಿಷರ ವಿರುದ್ದ ಹೊರಾಡಿದರೆ ಮೊಳಹಳ್ಳಿ ಶಿವರಾಯರು ಸಹಕಾರ ಚಳವಳಿಯಿಂದ ಬಡತನ, ದಾರಿದ್ರ್ಯ, ಸ್ತ್ರೀ ಗುಲಾಮಿತನ, ಅಸ್ಪ್ರಶ್ಯತೆ, ಕುಡಿತ ಇವುಗಳ ವಿರುದ್ಧ ಹೋರಾಡಿದ್ದಾರೆ.
ಅವರ ವಿವಾಹದ ಕತೆ ರೋಚಕವಾಗಿದೆ. ಹುಡುಗಿ ಕುಂಟಿ ಅಂತ ಮದುವೆಗೆ ಮೊದಲು ಆಕ್ಷೇಪಿಸಿದ ಶಿವರಾಯರು ಅಪ್ಪ ಅಮ್ಮನ ಬಲವಂತಕ್ಕೆ ಮದುವೆಯಾದರೂ ನಂತರ ಸುಖಿ ದಾಂಪತ್ಯ ಜೀವನವನ್ನು ಅನುಭವಿಸುತ್ತಾರೆ. ಶಿವರಾಯರು ಸಾರ್ವಜನಿಕ ಸೇವೆಗಾಗಿ ಇಡೀ ದಿನ ಹೊರಗೆ ಜನರ ಉದ್ಧಾರಕ್ಕಾಗಿ ತಿರುಗಾಡುವಾಗ ಅವರ ಹೆಂಡತಿ ಉಮಾ ಮನೆಯ ದೇಖರೇಖಿಯನ್ನು ಬಲು ದಕ್ಷ ರೀತಿಯಲ್ಲಿ ನಿಬಾಯಿಸುತ್ತಾರೆ.
ಶಿವರಾಮ ಕಾರಂತರು ಪುತ್ತೂರಿನಲ್ಲಿ ನೆಲೆಸಲು ಮೊಳಹಳ್ಳಿ ಶಿವರಾಯರ ಒತ್ತಾಸೆಯೇ ಕಾರಣವಾಗಿರುತ್ತದೆ. ಶಿವರಾಯರು ಕಾರಂತರಿಂದ ಸಮಾಜೋದ್ಧಾರದ ನಾಟಕಗಳನ್ನು ಬರೆಸಿ ಆಡಿಸುತ್ತಾರೆ ಆ ನಾಟಕಗಳ ವಸ್ತುವಿಷಯ ಮದ್ಯನಿರೋಧ, ಅಸ್ಪ್ರಶ್ಯತಾ ನಿವಾರಣೆ, ಸ್ತ್ರೀ ಸಬಲೀಕರಣ ಮುಂತಾದವು. ಅಂದು ಹೆಣ್ಣು ಮಕ್ಕಳ ಜಾಗ ಅಡುಗೆ ಮನೆಯಾಗಿತ್ತು. ಅವರಿಗೆ ಶಿಕ್ಷಣ ಸೌಲಭ್ಯ ಒದಗಿಸಿ ಎಷ್ಟೋ ಜನ ಮಹಿಳೆಯರನ್ನು ತಾವು ಪ್ರಾರಂಭಿಸಿದ ಶಾಲೆಗಳಿಗೆ ನೇಮಿಸುತ್ತಾರೆ. ಅವರ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾರೆ.
ಶಿಕ್ಷಣ, ಸಂಸ್ಕೃತಿ, ಸಾಹಿತ್ಯ ಮುಂತಾದವುಗಳಿಗೆ ಇವರ ಕೊಡುಗೆ ಬಹು ದೊಡ್ಡದು ಪುತ್ತೂರಿನಲ್ಲಿ ಶಿವರಾಯರು ಮತ್ತು ಶಿವರಾಮ,ಕಾರಂತರು ಕೂಡಿ ಪ್ರಾರಂಭಿಸಿದ ಮಕ್ಕಳ ಕೂಟ ವಾರಗಟ್ಟಲೆ ಹಬ್ಬದಂತೆ ನಡೆದು ನೂರಾರು ಮಕ್ಕಳು ತುಂಬ ಸಂತಸಪಟ್ಟರಲ್ಲದೆ ಹೊಸ ಹೊಸ ವಿಷಯಗಳನ್ನು ಕಲಿತರು
ಪುತ್ತೂರಿನ “ಬಾಲವನ” ಕಾರಂತರು ಮತ್ತು ಶಿವರಾಯರು ಒಟ್ಟಾಗಿ ಕಂಡ ಕನಸು. ಅದು ಇಂದೂ ಪುತ್ತೂರಿನಲ್ಲಿದೆ.
ಈ ಪುಸ್ತಕದಲ್ಲಿ ಸಹಕಾರ ಚಳವಳಿ ಹುಟ್ಟಿ ಬೆಳೆದು ಬಂದ ಬಗೆಯನ್ನು ದಾಖಲಿಸಲಾಗಿದೆ. ಜೊತೆಯಲ್ಲಿ ಶಿವರಾಯರ ಮಹಾನ್ ಕೊಡುಗೆಗಳನ್ನೂ ವಸ್ತುನಿಷ್ಠವಾಗಿ ದಾಖಲಿಸುತ್ತದೆ.
ಇದು ಗಾಂಧಿಜಿಯವರ ಸರ್ವೋದಯ ಕಲ್ಪನೆಯ ಸಾಕಾರ ರೂಪ. ಅದರೆ ಗಾಂಧಿಗಿಂತ ಮೊದಲೇ ಶಿವರಾಯರು ಸಹಕಾರ ಚಳವಳಿಯನ್ನು ಉತ್ತುಂಗಕ್ಕೆ ಒಯ್ದಿದ್ದರು. ಮತ್ತು ದ ಕ ಜಿಲ್ಲೆಯ ಬಡವರ ದಿನ ದಲಿತರ ಸ್ತ್ರಿಯರ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು
ಅವರ ಹೆಂಡತಿ ಉಮಾ ತಮ್ಮ ೫೮ ನೆ ವಯಸ್ಸಿನಲ್ಲಿ ಮೃತಪಟ್ಟಾಗ ಶಿವರಾಯರು ಅನಾಥ ಭಾವನೆಯಿಂದ ಬಳಲಿ ತಮ್ಮ ಬದುಕಿನ ಕೊನೆಯ ದಿನಗಳನ್ನು ತಮ್ಮ ಚೆನ್ನೈನ ಮಗನ ಮನೆಯಲ್ಲಿ ಕಳೆದರು. ಅವರ ಮಗ ಸೊಸೆ ಬಂಧುಬಾಂಧವರು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು
ಶಿಕ್ಷಕರ ತರಬೇತಿ ಹಳ್ಳಿಯ ಮೂಲೆ ಮೂಲೆಗಳಲ್ಲಿ ಶಾಲೆಗಳ ಸ್ಥಾಪನೆ, ಆಸ್ಪತ್ರೆಗಳ ಸ್ಥಾಪನೆ ಇವೆಲ್ಲವನ್ನೂ ಸಹಕಾರ ಮಂತ್ರದ ಮೂಲಕ ಸಾಧಿಸಿದರು
ಶಿವರಾಯರ ಮನೆಯ ಬಗ್ಗೆ ಬರೆದಿರುವ ಕಲ್ಲಡ್ಕದ ಪಿ. ಜಿ.ಭಟ್ ಅವರು ಒಮ್ಮೆ ಶಿವರಾಯರ ಬಳಿ ಯಾರೋ “ನೀವು ಸಮಾಜಕ್ಕಾಗಿ ಇಷ್ಟೊಂದು ತೊಡಗಿಸಿಕೊಂಡರೆ ನಿಮ್ಮ ಮನೆಯ ಪರಿಸ್ಥಿತಿ ಏನು?” ಎಂದು ಕೇಳಿದರಂತೆ ಅದಕ್ಕೆ ಶಿವರಾಯರು,”ನನ್ನ ಮನೆಯಲ್ಲಿ ಪ್ರತಿನಿತ್ಯ ಅನ್ನದಾನ ನಡೆಯುತ್ತದೆ.ಅದಕ್ಕಿಂತ ದೊಡ್ಡ ಭಾಗ್ಯ ಇನ್ನೇನು?” “ಎಂದರಂತೆ.
ಬಹುಕಾಲದ ನಂತರ ಶಿವರಾಯರು ತಮ್ಮ ಮನೆಯನ್ನು ಮಾರಿದರು. ನಂತರ ಪುತ್ತೂರಿನ ಮುಖ್ಯ ರಸ್ತೆಯ ಪಕ್ಕ ಇರುವ “ದಿನೇಶ ಭವನ” ಹೋಟೇಲಾಯಿತು.ಈಗಲೂ ಅಲ್ಲಿ ಜನ ಊಟ ಮಾಡಿ ಹೋಗುತ್ತಾರೆ. ಆದರೆ ಆಗ ಅನ್ನದಾನ. ಈಗ ಅನ್ನ ಮಾರಾಟ; ಶಿವರಾಯರು ಕಟ್ಟಿದ ಸಹಕಾರ ಚಳವಳಿಯೂ ಹಾಗೇ ಆಗಿದೆ.”ಅವರ ಮಕ್ಕಳು ಹೇಳುತ್ತಾರೆ. ಪುಟ ಸಂಖ್ಯೆ ೪೪
ಅವರ ಮಗಳು ಯಶೋಧರಾ ಶಿವರಾಯರು ಮಕ್ಕಳೊಂದಿಗೆ ಇರುತ್ತಿದ್ದ ಬಗೆಯನ್ನು “ಸ್ಫೂರ್ತಿ” ಯಲ್ಲಿ ಹೇಳಿದ್ದಾರೆ. “ಎಲ್ಲರಿಗೂ ಬೇಕಾಗಿದ್ದ ಅವರು ಕುಟುಂದವರಾದ ನಮಗೆ ಅಪರೂಪವಾಗಿದ್ದರು. ಎಲ್ಲ ಕಾರ್ಯಗಳನ್ನು ಮುಗಿಸಿ ರಾತ್ರಿಯ ಊಟದ ಬಳಿಕ ಸ್ವಲ್ಪ ಹೊತ್ತು ಅವರು ನಮ್ಮ ನಡುವೆ ಕೂರುವುದಿತ್ತು. ಆಗ ನಮ್ಮ ಸಂತೋಷಕ್ಕೆ ಮಿತಿಯೇ ಇಲ್ಲ ಅವರ ಗಮನ ಸೆಳೆಯಲು ಎಲ್ಲರೂ ಒಟ್ಟಿಗೆ ಅವರೊಂದಿಗೆ ಮಾತಾಡಲು ಹೋಗಿ ಗಲಾಟೆಯಾಗುತ್ತಿತ್ತು. ಆಗ ರಸ್ತೆಯಲ್ಲಿ ವಾಹನಗಳ ಓಡಾಟ ನಿಯಂತ್ರಿಸುವ ಪೋಲಿಸನಂತೆ ಅವರೊಮ್ಮೆ ಕೈ ಎತ್ತಿದರೆ ಸಾಕು; ನಾವೆಲ್ಲ ಸ್ತಬ್ಧ ಅವರನ್ನು ನಾವು ಎಷ್ಟು ಪ್ರೀತಿಸುತ್ತಿದ್ದೇವೊ ಅಷ್ಟೆ ಭಯಭಕ್ತಿಯೂ ನಮಗಿತ್ತು.”. ಪುಟ ಸಂಖ್ಯೆ ೪೩
ಹಲವಾರು ಜನರು ಶಿವರಾಯರನ್ನು ನೋಡಿದವರು, ಅವರ ಸಂಪರ್ಕದಲ್ಲಿದ್ದವರು ಅವರ ಬಗ್ಗೆ ಅನೇಕ ಕಡೆಗಳಲ್ಲಿ ಬರೆದ ಲೇಖನಗಳನ್ನು ಅರವಿಂದರು ಸಂಗ್ರಹಿಸಿ ನೆನಪಿನ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದಾರೆ. ಶಿವರಾಯರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಹಕಾರ ಸ್ಟೋರ್ಸ್ ” ಮಾಡಿದರು.
“ಅವರು ಹೋದ ಹಳ್ಳಿಗಳೆಲ್ಲ ಜನಸಾಮಾನ್ಯರು ಹೇಗೆ ಬಾಳುತ್ತಾರೆ? ಅವರ ಕಷ್ಟ ಸುಖಗಳೇನು? ಅದಕ್ಕೇನು ಪರಿಹಾರ ಎಂಬ ಚಿಂತನೆಯಲ್ಲೇ ಇರುತ್ತಿದ್ದರು. ಪ್ರೀತಿಯಿಂದ ಅವರನ್ನು ಮಾತಾಡಿಸಿ, ಅವರ ಜೀವನದಲ್ಲಿ ಬೆಳಕು ತುಂಬುವಂತೆ ಜೀವನೋಪಾಯದ ಬಗ್ಗೆ ಅನೇಕ ಕಾರ್ಯಾತ್ಮಕ ಸಲಹೆಗಳನ್ನು ಕೊಡುತ್ತಿದ್ದರು.ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಮನೆ ಕೈಗಾರಿಕೆಗಳನ್ನು ಪ್ರಾರಂಭಿಸಿರಿ ಎಂದು ಹೇಳುತ್ತಲೇ ಇದ್ದರು ಜೇನು ಸಾಕುವಿಕೆ, ಬೆತ್ತದ ಕೆಲಸಗಳ ಚಟುವಟಿಕೆಗಳಲ್ಲಿ ಅವರಿಗೆ ಅಖಂಡ ವಿಶ್ವಾಸ” ಪುಟ ಸಂಖ್ಯೆ ೧೧೨
ಶಿವರಾಯರು ಸ್ಥಾಪಿಸಿದ ಶಾಲೆಗಳಲ್ಲಿ ಗಾಂಧಿಜೀಯವರ ಪರಿಕಲ್ಪನೆಯ ಬುನಾದಿ ಶಿಕ್ಷಣದ ಮೂಲ ಪರಿಕಲ್ಪನೆಗಳಾಗಿದ್ದವು”. ಶಿಕ್ಷಣದ ಈ ಪ್ರಕ್ರಿಯೆಗಳು ಸಾಮಾಜಿಕವಾಗಿ ಜಾತೀಯ ನಿರ್ಬಂಧಗಳನ್ನು ಸಡಿಲಿಸಲು ಸಹಾಯಕಾರಿಯಾದವು ಅಂದಿಗೆ, ಎಲ್ಲ ಜಾತಿಯವರೂ ಶಾಲೆಗೆ ಬರುತ್ತಾರೆ. ಆದ್ದರಿಂದ ಶಾಲೆಗೆ ಹೋದರೆ ಮೈಲಿಗೆ ಎಂಬ ಚಿಂತನೆ ಇರುತ್ತಿತ್ತು. ನನ್ನ ಅಜ್ಜಿ ನಾನು ಶಾಲೆಯಿಂದ ಬರುತ್ತಿದ್ದ ಹಾಗೆ ಅಂಗಿ ಚಡ್ಡಿ ತೆಗೆದು ಸ್ನಾನ ಮಾಡಿ ಮನೆಯೊಳಗೆ ಬರಲು ಹೇಳುತ್ತಿದ್ಸರು ಕ್ರಮೇಣ ಈ ಚಿಂತನೆ ಬದಲಾಗಲು ಶಿಕ್ಷಣ ಹೇಗೆ ಕಾರಣವೊ, ಎಲ್ಲರನ್ನೂ ಒಟ್ಟಿಗೆ ಸೇರಿಸಿದ್ದು ಕೂಡ ಕಾರಣವೆ.” ಪುಟ ಸಂಖ್ಯೆ ೧೩೨
“ಈ ಸಹಕಾರ ಪರಂಪರೆಯ ಪರಿಣಾಮ ಇಡೀ ದಕ್ಷಿಣ ಕನ್ನಡದ ಮೇಲೆ ಆಯಿತು. ಅಂದರೆ ಸಹಕಾರ ಚಳವಳಿಯಲ್ಲಿ ಜಾತಿ ಧರ್ಮದ ತೊಡಕುಗಳಿಲ್ಲ ಎಲ್ಲರೂ ಸಹಕಾರ ತತ್ವದೊಳಗೆ ಸೇರಿಕೊಳ್ಖುತ್ತಾ ಹೋಗುವುದು. ಮತ್ತು ಈ ರೀತಿ ಮಾಡದೆ ಸಹಕಾರ ಸಂಘಗಳು ಬೆಳೆಯುವುದಕ್ಕೂ ಸಾಧ್ಯವಿರಲಿಲ್ಲ.
ಶಿವರಾಯರು ಮಹಾತ್ಮಾ ಗಾಙಧಿಯವರನ್ನೂ ಭೇಟಿ ಮಾಡಿದ್ದರು. ಶಿವರಾಯರ ನಡೆಯುವ ಪದ್ಧತಿ ಗಾಂಧಿಯಿಂದ ಬಂತೋ ಏನೊ. ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಲ್ನಡಿಗೆಯಲ್ಲೇ ಸುತ್ತಿದವರು.” ಡಾ ಪುರುಷೋತ್ತಮ ಬಿಳಿಮಲೆ ಶಿವರಾಯರ ಪತ್ನಿ ಉಮಾ ಮೊಳಹಳ್ಳಿ ಹೇಳುವ ಪ್ರಕಾರ ಶಿವರಾಯರು ದುಡಿದ ಹಣವನ್ನೆ ಉಳಿಸಿಕೊಂಡಿದ್ದರೆ ಮನೆಗೆ ಚಿನ್ನದ ತಗಡು ಹಾಕಿಸಬಹುದಿತ್ತು”
ಶಿವರಾಯರು ಸಂಪತ್ತಿನ ಹಿಂದೆ ಹೋದವದರಲ್ಲ ಸಂಪತ್ತಿನ ದುರಾಸೆ ಇರಬಾರದು ಉದಾತ್ತ ಬದುಕಿನ ಚಿಂತನೆ ಇರಬೇಕು ಎನ್ನುವ ಪರಿಕಪ್ಪನೆಯಲ್ಲಿ ಶಿವರಾಯರ ಒಟ್ಟೂ ತಾತ್ವಿಕತೆಯನ್ನು ಗುರುತಿಸಬಹುದು. ಇದು ಬಹುಮಟ್ಟಿಗೆ ಮಹಾತ್ಮಾ ಗಾಂಧಿಯವರ ಚಿಂತನೆಯೇ ಆಗಿದೆ. ” ಪುಟ ಸಂಖ್ಯೆ ೧೫೫ ಪುರುಷೋತ್ತಮ ಬಿಳಿಮಲೆ “ಒಟ್ಟಂದದಲಿ ಗ್ರಾಮಗಳು ಸುಭಿಕ್ಷವಾಗಿರುವಂತೆ ಮಾಡುವುದು ಶಿವರಾಯರ ಕೆಲಸಗಳಲ್ಲಿ ಕಾಣಿಸುತ್ತವೆ. ಗ್ರಾಮಗಳಲ್ಲಿ ಕೃಷಿ ಪೂರಕವಾದ ಕೈಗಾರಿಕೆ ಮತ್ತು ಸೇವಾರಂಗ ಇದ್ದರೆ ಗ್ರಾಮದ ಸ್ವಾವಲಂಬನೆಯಾಗುತ್ತದೆ. ಈ ಎಲ್ಲ ಹಿನ್ನೆಲೆಗಳ ಒಟ್ಟೂ ರೂಪವಾಗಿ ಮೊಳಹಳ್ಳಿ ಶಿವರಾಯರನ್ನು ಜನರು ” ಸಹಕಾರದ ಪಿತಾಮಹ” ಎಂದು ಕರೆಯುತ್ತಾರೆ. ” ಪುಟ ಸಂಖ್ಯೆ ೧೮೩
ಈ ಪುಸ್ತಕ ಸಹಕಾರ ತರಬೇತಿ ಶಾಲೆಗಳಿಗೆ ಪಠ್ಯಪುಸ್ತಕವಾಗಬೇಕು. ಈ ಪುಸ್ತಕವನ್ನು ಕಳಿಸಿ ನನ್ನ ಜ್ಞಾನದ ಮೇರೆಯನ್ನು ವಿಸ್ತರಿಸಿದ ಅರವಿಂದರಿಗೆ ಹೃತ್ಪೂರ್ವಕ ಕೃತಜ್ಞತೆ






0 Comments