ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಒಡನಾಟದ ನೆನಪುಗಳು’

ಪುರುಷೋತ್ತಮ ಬಿಳಿಮಲೆ

ಪ್ರೊ. ಬಿ ಎ ವಿವೇಕ ರೈ ಅವರಿಗೆ ಕಳೆದ ೨೦೨೧ರ ದಶಂಬರ ಎಂಟಕ್ಕೆ 75 ವರ್ಷ ತುಂಬಿತ್ತು. ಆ ಹೊತ್ತಿಗೆ ಅವರಿಗೆ ಗೌರವ ತಂದುಕೊಡುವಂಥ ಅಭಿನಂದನ ಗ್ರಂಥವೊಂದನ್ನು ತಂದರೆ ಒಳ್ಳೆಯದಲ್ಲವೇ? ಅಂತ ಅವರ ವಿದ್ಯಾರ್ಥಿಗಳಾದ ನಾವು ಹಲವರು ಮಾತಾಡಿಕೊಂಡಿದ್ದೆವು. ಆದರೆ ರೈಯವರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಅವರನ್ನು ಬಹಳ ಹತ್ತಿರದಿಂದ ಕಂಡ ನನ್ನಂಥ ಹಲವರಿಗೆ ಇದರಿಂದ ಆಶ್ಚರ್ಯವೇನೂ ಆಗಿರಲಿಲ್ಲ. ಆದರೆ ʼಏನೂ ಮಾಡಲಿಲ್ಲವಲ್ಲಾʼ ಎಂಬ ದುಗುಡ ಮನಸಿನೊಳಗಡೆಗೇ ಉಳಿದು ಆಗಾಗ ಘಾಸಿಗೊಳಿಸುತ್ತಲೇ ಇತ್ತು.

ಕಳೆದ ಸುಮಾರು ಅರ್ಧ ಶತಮಾನಗಳಿಗೂ ಮಿಕ್ಕು ಕನ್ನಡ ಮತ್ತು ತುಳುವನ್ನು ತನ್ನೆರಡು ಕಣ್ಣುಗಳಂತೆ ಪೋಷಿಸಿಕೊಂಡ ಬಂದ ಪ್ರೊ. ವಿವೇಕ ರೈಯವರು ನಾನು ಕಂಡ ಅತ್ಯುತ್ತಮ ಪ್ರಾಧ್ಯಾಪಕರಲ್ಲಿ ಒಬ್ಬರು. ದೇಶ ವಿದೇಶಗಳಲ್ಲಿ ಅವರು ಕನ್ನಡವನ್ನು ಬೋಧಿಸಿದ್ದಾರೆ. ಅನುವಾದಗಳೂ ಸೇರಿದಂತೆ ಒಟ್ಟು ೨೪ ಕೃತಿಗಳನ್ನು ಬರೆದಿದ್ದಾರೆ. ೧೮ ಕೃತಿಗಳನ್ನು ಸಂಪಾದಿಸಿದ್ದಾರೆ. ಏಳು ಕೃತಿಗಳನ್ನು ಇಂಗ್ಲಿಷಲ್ಲಿ ಬರೆದಿದ್ದಾರೆ.

ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಜರ್ಮನ್‌ ಭಾಷೆಗೆ ಅನುವಾದಿಸಿದ್ದಾರೆ. ಅವರು ಒಳ್ಳೆಯ ಆಡಳಿತಗಾರರೂ ಹೌದು. ಕನ್ನಡ ವಿವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಯಾಗಿ, ತುಳು ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯತ್ವವೂ ಸೇರಿದಂತೆ ಉನ್ನತ ಮಟ್ಟದ ಅನೇಕ ಸಮಿತಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ʼಡಾ. ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರು ತನಗೆ ಪ್ರೇರಣೆ ನೀಡಿದ ಲೇಖಕರುʼ ಎಂದು ಅವರೇ ಹೇಳಿಕೊಂಡಿದ್ದಾರೆ. ಪಂಪ ನಿರ್ವಿವಾದವಾಗಿ ಅವರ ಇಷ್ಟದ ಕವಿ.

ಈ ನಡುವೆ ಅಭಿನಂದನ ಗ್ರಂಥದ ಸ್ವರೂಪದಲ್ಲಿ ಅಲ್ಲದಿದ್ದರೂ ರೈಯವರ ಕೆಲಸಗಳನ್ನು ಒಂದೆಡೆ ದಾಖಲಿಸುವ ಯೋಜನೆಯೊಂದನ್ನು ಪ್ರೊ. ಸಿ ಎನ್‌ ರಾಮಚಂದ್ರನ್‌ ರೂಪಿಸಿದರು. ರೈ ಮತ್ತು ಸಿ ಎನ್‌ ಆರ್‌ ಹಲವು ದಶಕಗಳ ಕಾಲ ಅವಳಿಗಳ ಹಾಗೆ ಕೆಲಸ ಮಾಡಿದವರಾದ್ದರಿಂದ ಈ ಯೋಜನೆಯಿಂದ ದೂರ ಸರಿಯುವುದು ರೈ ಅವರಿಗೆ ಕಷ್ಟವಾಗಿರಬೇಕು. ಇದರ ಪರಿಣಾಮವಾಗಿ ʼಒಡನಾಟದ ನೆನಪುಗಳುʼ ಕೃತಿ ಪ್ರಕಟವಾಯಿತು. ಇದರಲ್ಲಿ ಪ್ರೊ. ವಿವೇಕ ರೈಯವರ ಜೊತೆ ಕೆಲಸ ಮಾಡಿದ ಶ್ರೀಗಳಾದ ಸಿ ಎನ್‌ ರಾಮಚಂದ್ರನ್‌, ಕೆ ಚಿನ್ನಪ್ಪ ಗೌಡ, ಹಿಚಿ ಬೋರಲಿಂಗಯ್ಯ, ಜರ್ಮನಿಯ ಹೈಡ್ರುನ್‌ ಬೂಕ್ನರ್‌ ಮತ್ತು ರೈ ಅವರ ವಿದೇಶೀ ವಿದ್ಯಾರ್ಥಿಗಳು ಬರೆದ ಆಪ್ತ ಲೇಖನಗಳಿವೆ. ನಾನೂ ಒಂದು ಲೇಖನ ಬರೆದಿದ್ದೇನೆ. ಈ ಎಲ್ಲಾ ಲೇಖನಗಳು ಡಾ. ರೈಯವರ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತು ಅವರು ಮಂಗಳೂರು ವಿವಿಯ ಕನ್ನಡ ವಿಭಾಗವನ್ನು ಕಟ್ಟಿದ ಕ್ರಮಗಳನ್ನು ವಿವರಿಸುತ್ತವೆ.

ಮೇಲ್ನೋಟಕ್ಕೆ ಬಹಳ ಗಂಭೀರವಾಗಿ ಕಾಣುವ ವಿವೇಕ ರೈ ಅವರೊಳಗೆ ಒಂದು ಬಗೆಯ ತುಂಟತನ ಸದಾ ಜಾಗ್ರತವಾಗಿರುತ್ತದೆ. ಹಾಗಾಗಿಯೇ ಅವರ ಎಲ್ಲ ವಿದ್ಯಾರ್ಥಿಗಳಿಗೂ ಅವರೆಂದರೆ ಪಂಚ ಪ್ರಾಣ.

ನಲುವತ್ತು ವರ್ಷ ಪಂಪನನ್ನು ಪಾಠ ಮಾಡಿದ ಡಾ, ರೈ ಅವರಿಗೆ ʼಪಂಪ ಪ್ರಶಸ್ತಿʼ ಬಂದಿಲ್ಲ, ೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಬಂದಿಲ್ಲ.ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಅವರ ಹೆಸರು ಕೇಳಿಬರುವುದಿಲ್ಲ. ಸಂಬಂಧಿಸಿದವರು ಈ ಕಡೆ ಗಮನ ಹರಿಸುವುದು ಅಗತ್ಯ.

‍ಲೇಖಕರು Admin

September 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: