ಜಯಲಕ್ಷ್ಮಿ ಪಾಟೀಲ್ ಅಂಕಣ – ಹೀಗೊಂದು ದಾಂಡಿಯಾ ಎನ್ನುವ ಹೊಸ ನವರಾತ್ರಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

47

ಆಗ ನಾವಿದ್ದ PMT (pravara Medical Trust) ಯ ಕ್ಯಾಂಪಸ್ ಲೋಣಿಯ ಅಂಚಿನಲ್ಲಿತ್ತು. ಸುಮಾರು ಒಂದು ಕಿಲೊ ಮಿಟರಿನಷ್ಟು ದೂರವಿತ್ತು ಮತ್ತು ಹಳ್ಳಿ ಎಂದು ಅನಿಸುತ್ತಲೇ ಇರಲಿಲ್ಲ. ಕಾರಣ ದೇಶದ ಅನೇಕ ರಾಜ್ಯಗಳಿಂದ ಅಲ್ಲಿ ಕಲಿಸಲು ಬಂದ ವೈದ್ಯರು, ದಾದಿಯರು, ವಿದ್ಯಾರ್ಥಿಗಳು, ಮತ್ತು ಅದಕ್ಕೆ ತಕ್ಕಂತಿರುವ ಅಲ್ಲಿನ ವ್ಯವಸ್ಥೆ. ಸುತ್ತ ಹಸಿರು ತುಂಬಿದ್ದ ಪ್ರಶಾಂತ ವಾತಾವರಣ. ಮಕ್ಕಳಿಬ್ಬರನ್ನೂ ಪ್ರಾಮ್‌ನಲ್ಲಿ ಕೂರಿಸಿಕೊಂಡು ನಿರಾತಂಕವಾಗಿ ಮೆಡಿಕಲ್ ಕಾಲೇಜಿನವರೆಗೆ ಕರೆದುಕೊಂಡು ವಾಕಿಂಗ್ ಹೋಗಿ ಬರುವಷ್ಟು ಪುರುಸೊತ್ತು ಸಿಗತೊಡಗಿತ್ತು.

ಅಲ್ಲಿ ಎಲ್ಲಾ ಹಬ್ಬಗಳು ಬಲು ಸಡಗರದಿಂದಲೇ ನಡೆಯುತ್ತಿದ್ದವು. ಅದರಲ್ಲಿ ದಸರಾ ಹಬ್ಬದಲ್ಲಿ ಕೆಲ ಮನೆಗಳಲ್ಲಿ, ಒಂಬತ್ತು ದಿನಗಳ ಕಾಲ ಹೆಣ್ಣುಮಕ್ಕಳು ಉಪವಾಸವಿದ್ದು ಗಟ್ಟ (ನವರಾತ್ರಿಯ ಮೊದಲ ದಿನ ಮನೆಯ ದೇವರ ಜಗುಲಿಯ ಮೇಲೆ ಮಣ್ಣಿನ ಮಡಿ ಮಾಡಿ, ಅದರಲ್ಲಿ ಧಾನ್ಯಗಳನ್ನು ಹಾಕಿದರೆ ಅವು ಮೊಳಕೆಯೊಡೆದು ವಿಜಯದಶಮಿಯವರೆಗೆ ಗೇಣೆತ್ತರಕ್ಕೆ ಹುಲುಸಾಗಿ ಬೆಳೆದು ನಿಲ್ಲುತ್ತವೆ!) ಹಾಕುವುದು, ಅಷ್ಟು ದಿನ ಅದರೆದುರು ಅಖಂಡ ದೀಪ ಉರಿಸುವುದು, ದಸರೆಯ ದಿನ ಉಪವಾಸ ನಿಲ್ಲಿಸಿ ವ್ರತ ಮುಗಿಸುವುದು ಮಾಡಿದರೆ, ನಮ್ಮಂಥಾ ಗಟ್ಟ ಹಾಕದವರಿಗೆ, ಕೇವಲ ದಸರಾ ದಿನ ಸಿಹಿ ಮಾಡಿ ಉಂಡು, ಬನ್ನಿ ಮುಡಿಯುವುದು ದೊಡ್ಡ ಸಡಗರ ಎಂಬಂತೆ ತೋರುತ್ತಿತ್ತು. ಮನೆ ಮನೆಗೂ ಹೋಗಿ ಹಿರಿಯರಿಗೆ ಬನ್ನಿ ಎಲೆ ಕೊಟ್ಟು ‘ನಾವೂ ನೀವೂ ಬಂಗಾರದಂಗ ಇರೋಣು’ ಎನ್ನುತ್ತಾ ಅವರಿಗೆ ನಮಸ್ಕರಿಸಿ, ಅವರಿಂದ ಆಶೀರ್ವಾದದ ರೂಪದಲ್ಲಿ ಮರಳಿ ಬನ್ನಿ ಎಲೆಗಳನ್ನು ಪಡೆಯುವುದಕ್ಕೆ ಬನ್ನಿ ಮುಡಿಯುವುದು ಎನ್ನುತ್ತಾರೆ.

ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಬನ್ನಿ ಗಿಡದಲ್ಲೇ ತಮ್ಮ ಶಸ್ತ್ರಾಸ್ತ್ರಗಳನ್ನು ಬಿಳಿಯ ಬಟ್ಟೆಯಲ್ಲಿ ಶವದ ಆಕಾರದಲ್ಲಿ ಕಟ್ಟಿಟ್ಟಿರುತ್ತಾರೆ, ಮುಂದೆ ಅಜ್ಞಾತವಾಸದ ಕೊನೆಯ ದಿನದಂದು ಆ ಬನ್ನಿ ಗಿಡಕ್ಕೆ ಪೂಜೆ ಮಾಡಿ, ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಕಥೆ. ಅದೇ ಮುಂದೆ ಸಂಪ್ರದಾಯವಾಗಿ ವಿಜಯದಶಮಿಯ ದಿನದಂದು ಊರ ಮುಖಂಡರೊಡನೆ ಜನರೆಲ್ಲ ಹೋಗಿ, ಬನ್ನಿ ಗಿಡಕ್ಕೆ ಪೂಜೆ ಮಾಡಿ ಅದರ ಗೆಲ್ಲುಗಳನ್ನು ಕತ್ತರಿಸಿ ತಂದು ಎಲೆಗಳನ್ನು ಸಂಗ್ರಹಿಸಿ, ಅದಕ್ಕೆ ಬಂಗಾರದ ಮಹತ್ವ ಕೊಟ್ಟು, ಬಂಧು ಬಾಂಧವರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಾ ತಮ್ಮ ಬಾಂಧ್ಯವವನ್ನು ಬಂಗಾರದಂತೆ ಇನ್ನೂ ಭದ್ರ ಮಾಡಿಕೊಳ್ಳುವ ಮಾತನಾಡುವುದು ಬಹಳಷ್ಟು ಕಡೆಯಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ರೂಢಿಗತವಾಗಿದೆ. ಅಲ್ಲಿ ಎಲ್ಲೆಡೆ ಈಗಲೂ ಇದೆಲ್ಲವೂ ನಡೆಯುತ್ತದೆ.

ಭಾರತದ ಬೇರೆ ಬೇರೆ ಭಾಗಗಳಲ್ಲಿ ಇದೇ ಮಹಾಭಾರತ, ರಾಮಾಯಣದ ಕಥೆಗಳನ್ನಾದರಿಸಿ ಬೇರೆ ಬೇರೆ ಥರದ ಆಚರಣೆಗಳಿವೆ.

ನವರಾತ್ರಿಯಲ್ಲಿ ರಾತ್ರಿ ಹೊತ್ತು ದಾಂಡಿಯಾ (ಕೋಲಾಟ) ಆಡುವ ಖುಷಿಯನ್ನು ನನಗೆ ಮೊದಲು ಉಣಬಡಿಸಿದ್ದು ಪುಣೆ. ನಾವು ಪುಣೆಯ ಬಾಲಾಜಿನಗರದಲ್ಲಿದ್ದಾಗ ಎದುರಿನ ಅಪಾರ್ಟ್ಮೆಂಟಿನವರು ನಮ್ಮ ಅಪಾರ್ಟ್ಮೆಂಟಿನವರನ್ನು ಜೊತೆ ಮಾಡಿಕೊಂಡು ತಮ್ಮ ಪಾರ್ಕಿಂಗ್ ಜಾಗದಲ್ಲಿ ದಾಂಡಿಯಾದ ವ್ಯವಸ್ಥೆ ಮಾಡಿದ್ದರು. ನಾನು ಸಂಕೋಚ ಪಡುತ್ತಲೇ ಅದರಲ್ಲಿ ಭಾಗವಹಿಸಿದ್ದೆ, ಅವರುಗಳನ್ನು ನೋಡಿ ಕಲಿತಿದ್ದೆ. ಅಲ್ಲಿನ ಒಂಬತ್ತು ದಿನಗಳ ಆ ಸಂಭ್ರಮ ನನಗೆ ಬೇರೆಯದೇ ಖುಷಿಯ ಪ್ರಪಂಚವನ್ನು ಪರಿಚಯಿಸಿತ್ತು.

ದಸರಾ ಮುಗಿದ ನಂತರ ಬರುವ ಹುಣ್ಣಿಮೆಯನ್ನು ಅಲ್ಲಿನವರು ಖೋಜಾಗಿರಿ ಎನ್ನುತ್ತಾರೆ. ಅಂದು ರಾತ್ರಿ ಅಂಗಳದಲ್ಲೋ ಇಲ್ಲವೇ ಮಾಳಿಗೆಯ ಮೇಲೋ, ಚಂದ್ರನ ಬೆಳಕಲ್ಲಿ ಮಿಂದೇಳುತ್ತದೇನೋ ಎಂಬಂತೆ ಹಾಲು ಕಾಯಿಸಿ ಅದನ್ನು ಹನ್ನೆರಡು ಗಂಟೆಗೆ ಸೇವಿಸುತ್ತಾರೆ. ಅಲ್ಲಿಯವರೆಗೆ ಮತ್ತೆ ಕೋಲಾಟ/ದಾಂಡಿಯಾ ಸಂಭ್ರಮ. ಅಂದಿನ ಹುಣ್ಣಿಮೆಯ ಚಂದ್ರನ ಕಿರಣ ಸೋಕಿಸಿಕೊಂಡ ಆ ಹಾಲನ್ನು ಕುಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದು ಗುಜರಾತಿನಲ್ಲಿ ಪ್ರತೀತಿ. ನವರಾತ್ರಿಯಲ್ಲಿನ ಈ ದಾಂಡಿಯಾ ಸಂಸ್ಕೃತಿ ಗುಜರಾತಿನದ್ದು. ಮುಂಬಯಿ ಮತ್ತು ಪುಣೆಯಲ್ಲಿ ಸಾಕಷ್ಟು ಗುಜರಾತಿ ಕುಟುಂಬಗಳು ನೆಲೆಯೂರಿದ್ದರಿಂದ, ಅವರಿಂದಾಗಿ ಆ ಎರಡೂ ನಗರಗಳಲ್ಲಿ ನವರಾತ್ರಿ ಎಂದರೆ ದಾಂಡಿಯಾ ಎನ್ನುವಷ್ಟು ಸಾಮಾನ್ಯವಾಗಿಹೋಗಿದೆ. ಅದೀಗ ದೇಶದುದ್ದಕ್ಕೂ ಹರಡಿಕೊಂಡ ಫ್ಯಾಶನ್ ಆಗಿ ಸಂಭ್ರವಾಗಿ ಬೆಳೆಯುತ್ತಿದೆ. ಹೀಗೊಂದು ದಾಂಡಿಯಾ ಎನ್ನುವ ಹೊಸ ನವರಾತ್ರಿಯ ಜಗತ್ತನ್ನು ಪರಿಚಯಿಸಿ, ಖುಷಿ ಉಣಿಸಿ ಕಳಿಸಿಕೊಟ್ಟಿತ್ತು ಪುಣೆ ನನ್ನನ್ನು.

ಲೋಣಿಯಲ್ಲಿದ್ದಾಗ ಅವಳಿ ಮಕ್ಕಳ ತಾಯಾದ ನನಗೆ ಒಂಚೂರು ಹೊರಜಗತ್ತಿನೆಡೆ ನೋಡುವಷ್ಟು ಪುರುಸೊತ್ತು ಸಿಕ್ಕ ಕೂಡಲೇ, ಅಂದರೆ ಮಕ್ಕಳು ಎರಡು ವರ್ಷದವರಾಗಿದ್ದರು, ಎದೆ ಹಾಲು ಬಿಟ್ಟು ಊಟ ಮಾಡುತ್ತಿದ್ದರು, ಮನೆಗೆಲಸಕ್ಕೆ ಸುಮನ್ ಇದ್ದಳು, ಹೀಗಾಗಿ ಮೊದಲಿದ್ದ ಯಾವುದೇ ದಿನನಿತ್ಯದ ಒತ್ತಡಗಳಿರಲಿಲ್ಲ. ನವರಾತ್ರಿ ಹತ್ತಿರವಿದೆ ಎಂದಾಗ ದಾಂಡಿಯಾದ ಹುಕಿ ಹುಟ್ಟಿಕೊಂಡಿತು ನನ್ನಲ್ಲಿ. ಆದರೆ ನಮ್ಮ ಮಿನಿ ಭಾರತದಲ್ಲಿ ಅದರ ಬಗ್ಗೆ ಮಾತು ಸಹ ಕೇಳಿ ಬರದಿದ್ದುದು ಅಚ್ಚರಿ ಅನಿಸಿತು. ದಾಂಡಿಯಾ ಆಡಲೇಬೇಕು ಅನ್ನುವ ಇಚ್ಛೆ ತೀವ್ರವಾಗಿ ಅಲ್ಲಿನ ಕೆಲವರನ್ನು ಕೇಳಿದೆ. ದಾಂಡಿಯಾ ಆಡಬೇಕೆಂದರೆ ಪಕ್ಕದ ಪಟ್ಟಣ ಸಂಗಮನೇರ್‌ಗೆ ಹೋಗಬೇಕಷ್ಟೆ ಅನ್ನುವ ಮಾತುಗಳು ಕೇಳಿ ಬಂದವು. ಮಕ್ಕಳಿಬ್ಬರನ್ನು ಕರೆದುಕೊಂಡು ಅಷ್ಟು ದೂರ ದಾಂಡಿಯಾಗೋಸ್ಕರ ಹೋಗುವುದು ಅಸಾಧ್ಯದ ಮಾತು. ಆದ್ದರಿಂದ ನಮ್ಮ ಮತ್ತು ಅಕ್ಕಪಕ್ಕದ, ಎದುರಿನ ಅಪಾರ್ಟ್ಮೆಂಟಿನವರಲ್ಲಿ ನಾವೇ ಇಲ್ಲೇ ಶುರು ಮಾಡೋಣ ಎಂದು ಮಾತಾಡಿದೆ. ಅನೇಕರು ಮೌನವಹಿಸಿದರೆ ಇನ್ನೂ ಕೆಲವರು ಜನ ಏನಂತಾರೋ ಏನೋ ಎಂದು ಹಿಂಜರಿದರು. ನಮ್ಮ ಮತ್ತು ಎದುರಿನ ಅಪಾರ್ಟ್ಮೆಂಟಿನ ಮನೆಯವರೆಲ್ಲ ಅಳುಕುತ್ತಲೇ ಒಪ್ಪಿಗೆ ಕೊಟ್ಟಿದ್ದೇ, ಖುಷಿಯಿಂದ ಕಡ್ಡಿ ಕಸಬರಗಿ ಮತ್ತು ಬುಟ್ಟಿಯೊಂದನ್ನು ತೆಗೆದುಕೊಂಡು ನಮ್ಮ ಅಪಾರ್ಟ್ಮೆಂಟಿನ ಎದುರಿನ ಅಂಗಳವನ್ನು ಕೋಲಾಟಕ್ಕೆ ಅಣಿ ಮಾಡಲು ತೊಡಗಿದೆ. ಅಲ್ಲೆಲ್ಲಾ ತುಂಬಾ ಸಣ್ಣಪುಟ್ಟ ಕಲ್ಲುಗಳು, ಮರದಿಂದುದುರುವ ಎಲೆ ಕಡ್ಡಿಗಳು ಕಸವಾಗಿ ಹರಡಿಕೊಂಡಿದ್ದವು. ಅವನ್ನೆಲ್ಲ ಸ್ವಚ್ಚ ಮಾಡುವುದು ಸುಲಭದ ಮಾತಾಗಿರಲಿಲ್ಲ. ಸಂಜೆ ಹೊತ್ತು ನಾನು ಹಾಗೆ ಬಂದು ಕಲ್ಲನ್ನೆಲ್ಲಾ ಆರಿಸತೊಡಗಿದಂತೆ ಉಳಿದವರು ತಮ್ಮ ಮನೆಗಳಿಂದ ಆಚೆ ಬಂದು ಕೈ ಜೋಡಿಸಿದ್ದಲ್ಲದೇ ಸಣ್ಣ ಮಕ್ಕಳ ತಾಯಿ, ಇನ್ಫ಼ೆಕ್ಷನ್ ಆದರೆ ಕಷ್ಟ ಎಂದು ನನ್ನ ಕೈಯಿಂದ ಪೊರಕೆ ಕಸಿದುಕೊಂಡು ತಾವು ಕೆಲಸ ಮುಂದುವರಿಸಿದರು. ಮೂರು ದಿನ ಅಂಗಳವನ್ನು ಸ್ವಚ್ಚ ಮಾಡಿದರೆ, ಮುಂದೆ ಮೂರು ದಿನ ಬೆಳಿಗ್ಗೆ ಸಂಜೆ ನೀರು ಹೊಡೆದು ಧೂಳು ಮೇಲೇಳದಂತೆ ನೆಲ ಗಟ್ಟಿ ಮಾಡಿದೆವು. ನವರಾತ್ರಿಯ ದಿನದಂದು ಅಲ್ಲಿ ಒಂದೆಡೆ ಕುರ್ಚಿಯ ಮೇಲೆ ದುರ್ಗೆಯ ಫೋಟೊ ಇಟ್ಟು ಪೂಜೆ ಮಾಡಿ, ಬಂದವರ ಕೈಲಿ ಕೋಲುಗಳನ್ನು ಕೊಟ್ಟು ನಾನು ಪುಣೆಯಲ್ಲಿ ಕಲಿತಿದ್ದ ಎರಡು ಮೂರು ಕೋಲಾಟದ ಪ್ರಕಾರಗಳನ್ನು ಹೇಳಿಕೊಡತೊಡಗಿದೆ. ಮೊದ ಮೊದಲು ಸಂಕೋಚ ಮಾಡಿಕೊಳ್ಳುತ್ತಿದ್ದವರು ನಾಲ್ಕನೇ ದಿನಕ್ಕೆ ಪೂರ್ತಿ ಹುರುಪಿನಿಂದ ಬೇಗ ಬಂದು, ಪೂಜೆ ಮಾಡಿ ಕೋಲಾಟ ಆರಂಭಿಸಿದರು.

ಮೊದಲು ಅದೇನೋ ಮಾಡೋಕೆ ಕೆಲಸವಿಲ್ಲ, ಕುಣಿತವೆ ಅಂತೆಲ್ಲ ಆಡಿಕೊಂಡವರು, ಇಲ್ಲಿನ ಉತ್ಸಾಹದ ಕೇಕೆ ನಗು ಎಲ್ಲಾ ಕೇಳಿ ಕುತೂಹಲದಿಂದ ಮನೆಯಿಂದೆದ್ದು ಬಂದು, ನಮ್ಮ ಸುತ್ತಲೂ ನಿಂತು ನೋಡತೊಡಗಿದಾಗ, ನಮ್ಮಗಳ ಹುರುಪು ದ್ವಿಗುಣಗೊಂಡಿತ್ತು. ನಿಧಾನಕ್ಕೆ ಅವರಲ್ಲಿ ಕೆಲವರು ನಾವೂ ಒಂದೆರಡು ಕೋಲು ಹಾಕ್ತೀವಿ ಕೊಡಿ ಅಂದಾಗ ಇಲ್ಲವೆನ್ನಲಾಗದೆ ಕೆಲವರು ತಮ್ಮ ಕೋಲುಗಳನ್ನು ಕೊಟ್ಟರೆ ಇನ್ನೂ ಕೆಲವರು, ‘’ನಾವು ಕರೆದಾಗ ಬರ್ಲಿಲ್ಲ, ನಾವೆಲ್ಲ ಹಣ ಹಾಕಿ ಎಲ್ಲಾ ತಯಾರು ಮಾಡಿದ ಮೇಲೆ ಬಂದು ಈಗ ನಮ್ಮದೇ ಕೋಲುಗಳನ್ನು ಕೊಡು ಅಂತಿದ್ದಾರೆ ಕಂಜೂಸುಗಳು’’ ಎಂದು ಸಿಡಿಮಿಡಿಗೊಂಡರು. ನಾವೆಲ್ಲಾ ದುರ್ಗೆಯ ಫೋಟೊ, ಸೌಂಡ್, ಸ್ಪೀಕರ್ಸ್, ಲೈಟ್ಸ್, ಕೋಲುಗಳು ಅಂತ ಒಂದಿಷ್ಟು ಲೆಕ್ಕ ಹಾಕಿಕೊಂಡು ಭಾಗವಹಿಸುವ ಕುಟುಂಬದವರೆಲ್ಲ ಸೇರಿ ಹಣ ಹಾಕಿದ್ದೆವು. ಸಂಗಮನೇರ್‌ನಿಂದ ಕೋಲುಗಳನ್ನು ತರಿಸಿದ್ದೆ. ಆ ಕಾರಣಕ್ಕೆ ಕೆಲವರಿಗೆ ಕರೆದಾಗ ಬರದೆ ಈಗ ನಾವೂ ದಾಂಡಿಯಾ ಆಡ್ತೀವಿ ಅಂದಾಗ ಸಹಜವಾಗಿಯೇ ಸಿಟ್ಟು ಬಂದಿತ್ತು. ಆದರೆ ಸಿಟ್ಟು ಮಾಡಿಕೊಂಡರೆ ಸರಿಯಲ್ಲ ಎಂದು ಅವರನ್ನು ಸಮಾಧಾನಿಸಿ, ಅವರುಗಳನ್ನು ಮರುದಿನ ಅವರದೇ ಕೋಲು ತರಲು ಹೇಳಿ ಒಂದು ಸುತ್ತು ಆಡಲು ಕೊಟ್ಟು ಅವರನ್ನೂ ಸಮಾಧಾನಿಸುತ್ತಿದ್ದೆ. ನಾವಿಲ್ಲಿ ದಾಂಡಿಯಾ ಶುರು ಮಾಡಿಕೊಂಡ ಮೇಲೆ, ಮೆಡಿಕಲ್ ಕಾಲೇಜಿನ ಹುಡುಗ ಹುಡುಗರೂ ಕ್ಯಾಂಪಸ್ಸಿನಾಚೆ ಸ್ವಲ್ಪ ದೂರದಲ್ಲೆಲ್ಲೊ ದಾಂಡಿಯಾ ಶುರು ಮಾಡಿಕೊಂಡರು. ನಮ್ಮ ಜೊತೆಯೇ ಬಂದು ಸೇರಬಹುದಿತ್ತಲ್ಲ ಎಂದೆ ದೀಪಕ್ ಭಯ್ಯಾ ಅವರೆದುರು. ಅದಕ್ಕವರು, ಇಲ್ಲ, ಇಲ್ಲಿ ಅವರಿಗೆ ಪಾಠ ಮಾಡುವ ಮೇಷ್ಟ್ರುಗಳೂ ಇರೋದ್ರಿಂದ ಅವರುಗಳಿಗೆ ಮುಜುಗರ. ಅದಕ್ಕೇ ಬೇರೆ ಕಡೆ ತಮ್ಮದೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವ್ರೆಲ್ಲಾ ಬರೋದೂ ಬೇಡ ಬಿಡಿ, ಅವುಗಳನ್ನು ಕಂಟ್ರೋಲ್ ಮಾಡೋದು ಕಷ್ಟವಾಗುತ್ತೆ ಅಂದ್ರು.

ನವರಾತ್ರಿಯ ದಿನದಂದು ಉಳಿದ ದಿನಗಳಿಗಿಂತ ತುಂಬಾ ಹೊತ್ತು ಕೋಲಾಟವಾಡಿ ಮಂಗಳ ಹಾಡಿದೆವು. ಎಲ್ಲರಲ್ಲೂ ಒಂದು ಹೊಸ ಚೈತನ್ಯ ಹುಟ್ಟಿಕೊಂಡಂತೆ ಫ಼್ರೆಶ್ ಫ಼ೀಲ್ ಆಗುತ್ತಿತ್ತು. ನಂತರದ ಕೆಲ ದಿನ ಸಂಜೆಗಳು ಬಿಕೋ ಎಂದೆನಿಸಿ ಅದರ ಬಗ್ಗೆಯೇ ಮಾತು ಎದುರಾದಾಗಲೆಲ್ಲ. ಒಂದು ಖುಷಿ, ಒಂದು ಸಾರ್ಥಕತೆ ನನ್ನಲ್ಲಿ. ನಂತರ ಮೂರು ವರ್ಷ ನವರಾತ್ರಿಯ ಹೊತ್ತಲ್ಲಿ ಸತತವಾಗಿ ದಾಂಡಿಯಾ ಇತ್ತು. ನಮ್ಮ ಕ್ಯಾಂಪಸ್ಸಿನಿಂದ ಒಂದರ್ಧ ಕಿಲೊ ಮಿಟರ್ ದೂರದಲ್ಲಿದ್ದ ಇಂಜಿನಿಯರಿಂಗ್ ಪ್ರಾಧ್ಯಾಪಕರುಗಳ ಅಪಾರ್ಟ್ಮೆಂಟುಗಳಿಂದ ಕೆಲವರು ಬಂದು ನಮ್ಮೊಡನೆ ಸೇರಿಕೊಂಡರು.

ಅದು ನನ್ನ ಮೊದಲ ಸಾರ್ವಜನಿಕ ಸಂಘಟನೆಯ ಕೆಲಸ. ಆಗ ಅದಕ್ಕೆಲ್ಲಾ ಇಷ್ಟು ದೊಡ್ಡ ಪದಗಳೆಲ್ಲ ಇರುತ್ತವೆ ಅಂತನ್ನೊ ಅಂದಾಜಿರಲಿಲ್ಲ ನನಗೆ. ಈಗ ಹತ್ತು ವರ್ಷಗಳ ಹಿಂದೆ ಗೆಳತಿ ಕುಮುದವಲ್ಲಿ ಅರುಣಮೂರ್ತಿ ನಿರ್ಭಯಾ ಪ್ರಕರಣದ ಸಮಯದಲ್ಲಿ ನನ್ನನ್ನು ಸಂಘಟಕಿ ಎಂದಾಗ ಅಚ್ಚರಿಗೊಂಡಿದ್ದೆ. ೨೦೧೧ರಲ್ಲಿ ಫೇಸ್ಬುಕ್ಕಿನ ಅಂತಃಪುರ ಗುಂಪು, ೨೦೧೩ರಲ್ಲಿ ಈ ಹೊತ್ತಿಗೆ ಮತ್ತು ಜನದನಿ ಹೀಗೆ ಒಂದರ ನಂತರ ಒಂದು ಗುಂಪುಗಳನ್ನು ಹುಟ್ಟುಹಾಕಿದ ಮೇಲೆ, ಅವುಗಳ ಚಟುವಟಿಕೆಗಳನ್ನು ಗಮನಿಸಿದ ಹಲವಾರು ಜನ ಹೀಗೂ ಅಂದರೆ; ಕಲಾವಿದೆಯಾಗಿ, ಲೇಖಕಿಯಾಗಿ ಮಾತ್ರವಲ್ಲ, ಸಂಘಟಕಿಯಾಗಿಯೂ ನನ್ನನ್ನು ಗುರುತಿಸಿದ್ದರಿಂದ ನನ್ನ ಆಗಿನ ದಾಂಡಿಯಾ ಪ್ರಸಂಗ ಅದರ ಮುನ್ನುಡಿ ಎಂಬಂತೆ ಈಗ ತೋರುತ್ತಿದೆ ನನಗೆ.

ಇಂದು ಈ ವರ್ಷದ ನವರಾತ್ರಿ ಆರಂಭಗೊಂಡಿದೆ. ಅದಕ್ಕೇ ಅಂದಿನ ದಾಂಡಿಯಾದ ಮಧುರ ನೆನಪು ಮರುಕಳಿಸಿತು. ಅವಧಿಯ ಬಳಗ ಮತ್ತು ಓದುಗರೆಲ್ಲರಿಗೂ ನವರಾತ್ರಿ ಮತ್ತು ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

September 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: