ಪುರುಷೋತ್ತಮ ಬಿಳಿಮಲೆ ಕಂಡಂತೆ ʼಗೆಲುವಿನ ದು:ಖ ಮತ್ತು ಸೋಲಿನ ಸುಖʼ

ಪ್ರಾಮಾಣಿಕ ಪ್ರಿನ್ಸಿಪಾಲರ ಅನುಭವ ಕಥನ

ಪುರುಷೋತ್ತಮ ಬಿಳಿಮಲೆ

ಇದನ್ನು ಬರೆಯುವ ಹೊತ್ತಿಗೆ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಪತ್ರಿಕೆಗಳ ಮುಖ ಪುಟದಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಅಧ್ಯಾಪಕರ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ವಿಶ್ವವಿದ್ಯಾಲಯಗಳ ಸ್ವಾಯತ್ತೆಗೆ ಭಂಗ,  ಗುಣಮಟ್ಟದ ಪಠ್ಯ ಪುಸ್ತಕಗಳ ತಯಾರಿಕೆಯಲ್ಲಿ ವೈಫಲ್ಯ ಇತ್ಯಾದಿಗಳು ದೈನಂದಿನ ವ್ಯವಹಾರಗಳಾಗಿವೆ. ಇಂಥ ವಾತಾವರಣದಲ್ಲಿ ಪ್ರಾಮಾಣಿಕರೊಬ್ಬರು ಕೆಲಸ ಮಾಡುತ್ತಿದ್ದರೆ ಅವರು ಯಾವ ಬಗೆಯ ಬಿಕ್ಕಟ್ಟುಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಡಾ. ಉದಯಕುಮಾರ ಇರ್ವತ್ತೂರು ಅವರ ʼಗೆಲುವಿನ ದು:ಖ ಮತ್ತು ಸೋಲಿನ ಸುಖʼ ಪುಸ್ತಕ ಸೊಗಸಾಗಿ ವಿವರಿಸುತ್ತದೆ. 

ಈ ಬಗೆಯ ಪುಸ್ತಕ ನಮಗೀಗ ಬಹಳ ಅಗತ್ಯ ಏಕೆಂದರೆ ಇವು ನಮ್ಮ ಶಿಕ್ಷಣ ಕ್ಷೇತ್ರದ ಮೂಲ ಭೂತ ಅಗತ್ಯಗಳು, ಸೌಲಭ್ಯಗಳ ಪೂರೈಕೆ, ಶೈಕ್ಷಣಿಕ ಬೆಳವಣಿಗೆ, ಜನರ ಜೀವನ ಮಟ್ಟದ ಮೇಲೆ ಅವುಗಳ ಪರಿಣಾಮ ಇತ್ಯಾದಿಗಳ ಬಗ್ಗೆ ನೇರವಾಗಿ ಬೆಳಕು ಚೆಲ್ಲುತ್ತವೆ. ಪ್ರಜಾಸತ್ತಾತ್ಮಕ ಸರಕಾರಗಳು ವಿದ್ಯಾಕ್ಷೇತ್ರದಲ್ಲಿನ ಮಕ್ಕಳ ಕಲಿಕೆ ಮತ್ತು ಆರೋಗ್ಯದ ಉನ್ನತಿಗಾಗಿ ಯಾವ ಸೇವೆಗಳನ್ನು ಪೂರೈಸುತ್ತಿವೆ? ಒಂದು ಸಂಸ್ಥೆಯ ಅಭಿವೃದ್ಧಿಯಲ್ಲಿ ನಾಗರಿಕ ಸಮಾಜದ ಎಷ್ಟು ಜನರು ನಿಜವಾದ ಕಳಕಳಿಯಿಂದ ಭಾಗವಹಿಸುತ್ತಾರೆ? ಸರಕಾರದ ನ್ಯಾಯಪರತೆ ಮತ್ತು ಪೂರೈಕೆಗಳು ಎಷ್ಟು ಸ್ಥಿರವಾಗಿರುತ್ತವೆ? ಆಡಳಿತದ ಆದ್ಯತೆಗಳೇನು? ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ದುಡಿಯುತ್ತಿರುವವರಿಗೆ ಯಾವ ಬಗೆಯ ಮನ್ನಣೆ ಮತ್ತು ಗೌರವಗಳು ದೊರೆಯುತ್ತಿವೆ? ಮೊದಲಾದುವುಗಳ ಕುರಿತು ಬೆಳಕು ಚೆಲ್ಲುತ್ತವೆ.  ಇವು ಸರಕಾರ ನೀಡುವ ನಿರ್ಜೀವ ಅಂಕಿ ಅಂಶಗಳಿಗಿಂತ ಹೆಚ್ಚು ಉಪಯುಕ್ತ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. 

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಉದಯ ಕುಮಾರ್‌ ಇರ್ವತ್ತೂರ್‌ ಈಚೆಗೆ ಸೇವೆಯಿಂದ ನಿವೃತ್ತರಾದರು. ಆ ಸಂದರ್ಭದಲ್ಲಿ ಅವರು ತಮ್ಮ ಕೆಲವು ಅನುಭವಗಳನ್ನು ಪುಸ್ತಕದಲ್ಲಿ ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಆಡಳಿತಾಂಗ, ಮತ್ತು ಬೋಧನಾಂಗಗಳು ಒಟ್ಟಾಗಿ ಕೆಲಸ ಮಾಡಿದರೆ ಅವು ಹೇಗೆ ನಿರೀಕ್ಷಿತ ಪರಿಣಾಮಗಳನ್ನು ಬೀರುತ್ತವೆ ಮತ್ತು ಒಟ್ಟಾಗಿ ಕೆಲಸ ಮಾಡದಿದ್ದರೆ ಅವು ಹೇಗೆ ವಿಫಲವಾಗುತ್ತವೆ ಎಂಬುದನ್ನು ಅವರಿಲ್ಲಿ ತಮ್ಮ ಅನುಭವಗಳ ಮೂಲಕವೇ ವಿವರಿಸಿದ್ದಾರೆ.  ಅನೇಕ ಸಂಸ್ಥೆಗಳಲ್ಲಿ ದುಡಿದ ಅನುಭವವಿರುವ ನನಗೆ ಉದಯ್‌ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಂಡಿಲ್ಲ. 

ಒಬ್ಬ ಅಧ್ಯಾಪಕ ಪ್ರಿನ್ಸಿಪಾಲ್‌ ಹುದ್ದೆಯನ್ನು ಒಪ್ಪಿಕೊಂಡ ಮೇಲೆ ಕೆಲವು ಕೆಲಸಗಳನ್ನು ಮಾಡಲೇ ಬೇಕಾಗುತ್ತದೆ. ಅದನ್ನು ತನ್ನ ಸಾಧನೆಯೆಂದು ಆತ ಹೇಳಿಕೊಳ್ಳುವಂತಿಲ್ಲ. ಆದರೆ, ಒಂದು ಬಗೆಯ ಸಾಮಾಜಿಕ ಎಚ್ಚರದಿಂದ ಅನೇಕ ಕೆಲಸಗಳನ್ನು ಮೈ ಮೇಲೆ ಎಳದುಕೊಂಡು ದುಡಿಯುವುದಿದೆಯಲ್ಲಾ? ಅದು ಮಹತ್ವದ್ದು. ಉದಯರು ೨೦೧೫ರಿಂದ ಪ್ರಿನ್ಸಿಪಾಲ್‌ ಹುದ್ದೆಯನ್ನು ಸ್ವೀಕರಿಸಿದ ಆನಂತರ ಮಾಡಿದ ಮುಖ್ಯವಾದ  ಕೆಲವು ಕೆಲಸಗಳನ್ನು ಓದುಗರು ಗಮನಿಸಬೇಕು. 

ಮೊದಲನೆಯದಾಗಿ, ಉದಯರು ತಾವು ಕೆಲಸ ಮಾಡುತ್ತಿರುವ ಕಾಲೇಜಿನ ಸುದೀರ್ಘ ಇತಿಹಾಸದ ಬಗ್ಗೆ ಗೌರವಪೂರ್ವಕವಾದ ತಿಳಿವಳಿಕೆ ಹೊಂದಿರುವುದು ಮಹಳ ಮಹತ್ವದ್ದು. ಈ ಪುಸ್ತಕದುದ್ದಕ್ಕೂ ಅದು ಮತ್ತೆ ಮತ್ತೆ ಕಾಣಿಸಿಕೊಂಡಿದೆ. ಮಂಗಳೂರಿನ ಬಾಸೆಲ್‌ ಮಿಶನ್ನಿನ ಶೈಕ್ಷಣಿಕ ಕೆಲಸಗಳಿಂದ ಪ್ರೇರಣೆ ಪಡೆದು, ೧೮೬೮ರಷ್ಟು ಹಿಂದೆಯೇ  ಹುಟ್ಟಿಕೊಂಡ ಈ ಸಂಸ್ಥೆಯು ಅನೇಕ ಹಂತಗಳನ್ನು ದಾಟಿ ಬೆಳೆದು ಬಂದಿದೆ. ಇದನ್ನು ಲೇಖಕರು ಅರ್ಥಮಾಡಿಕೊಂಡಿದ್ದಾರೆ.

ಯಾರಿಗೆ ಇತಿಹಾಸದ ಹೆಜ್ಜೆ ಗುರುತುಗಳು ತಿಳಿದಿರುತ್ತವೆಯೋ ಅವರು ವರ್ತಮಾನದಲ್ಲಿ ನಿಂತು ಭವಿಷ್ಯದ ಕನಸು ಕಾಣಬಲ್ಲರು. ಈ ನಿಟ್ಟಿನಲ್ಲಿ ಉದಯರು ಪ್ರಿನ್ಸಿಪಾಲರಾಗಿ ಕಾಲೇಜಿನ ಹಳೆಯ ಕಟ್ಟಡದ, ವಿಶೇಷವಾಗಿ ಇತಿಹಾಸ ಪ್ರಸಿದ್ಧವಾದ ʼ ರವೀಂದ್ರ ಕಲಾಭವನದʼ  ಉಳಿವಿಗಾಗಿ  ನಡೆಸಿದ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳಬೇಕು.  ಕಟ್ಟಡದ ಪ್ರಾಚೀನ ಸೌಂದರ್ಯ ಹಾಳಾಗದಂತೆ ಪರಿಷ್ಕರಿಸಿ ಉಳಿಸಿಕೊಂಡದ್ದು ಅವರ ಮಹತ್ವದ ಸಾಧನೆಗಳಲ್ಲಿ ಒಂದು. ಇದು ಚರಿತ್ರೆಗೆ ನ್ಯಾಯ ಒದಗಿಸುವ ಕ್ರಮವೂ ಹೌದು. 

ಎರಡನೆಯದೆಂದರೆ, ಉದಯರು ಅಕ್ಷರದ ಜೊತೆಗೆ ಅನ್ನದ ಬಗ್ಗೆ ಯೋಚಿಸಿದ್ದು. ಪ್ರಸ್ತುತ ಕೃತಿಯಲ್ಲಿ ಬರುವ ʼಒಂದು ಹೊತ್ತು ಕೈ ತುತ್ತುʼ ಮತ್ತು ʼಕ್ಯಾಂಟೀನೊಂದರ ಆರಂಭʼದ ಕೆಲಸಗಳನ್ನು ನಾವು ಹೆಚ್ಚು ಮಾನವೀಯವಾಗಿ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಇಂಥ ಯೋಜನೆಗಳೇ ಇವತ್ತು ಭಾರತವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಮೇಲಕ್ಕೆ ಕೊಂಡೊಯ್ಯಬಹುದಾದ ಉಪಕರಣಗಳು ಎಂದು ನಂಬಿದವರಲ್ಲಿ ನಾನೂ ಒಬ್ಬ. ೨೦ನೇ ಶತಮಾನದ ಮೊದಲ ಭಾಗದಲ್ಲಿ ಕರ್ನಾಟಕದ ಮೈಸೂರು, ಬೆಂಗಳೂರು, ಧಾರವಾಡ, ಮತ್ತಿತರ ಕಡೆಗಳಲ್ಲಿ ಹಿಂದುಳಿದ ಸಮುದಾಯಗಳು ತಮ್ಮ ಜನಗಳಿಗಾಗಿ ಉಚಿತ ಹಾಸ್ಟೆಲ್‌ ಗಳನ್ನು ತೆರೆಯದೇ ಇದ್ದಿದ್ದರೆ ಆ ಸಮುದಾಯಗಳು ಈಗ ಹೇಗಿರುತ್ತಿದ್ದವೋ ಊಹಿಸುವುದೂ ಅಸಾಧ್ಯ. ಕುದ್ಮಲ್‌ ರಂಗರಾಯರು ೧೮೯೨ರಲ್ಲಿ ಮಂಗಳೂರಿನಲ್ಲಿ ದಲಿತರಿಗಾಗಿಯೇ ಒಂದು ಶಾಲೆಯನ್ನು ಆರಂಭಿಸಿ ಉಚಿತ ಶಿಕ್ಷಣ ಮತ್ತು ಅನ್ನ ನೀಡಿದರು.

ನಾನು ಕೆಲಸ ಮಾಡುತ್ತಿದ್ದ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯವನ್ನು ಹಿಂದುಳಿದವರು ದೆಹಲಿಗೆ ಬಂದು ವಿದ್ಯೆ ಕಲಿಯಲಿ ಎಂಬ ಉದ್ದೇಶದಿಂದಲೇ ಕಟ್ಟಲಾಯಿತು. ಹಾಗೆ ಬರುವ ಬಡ ಮಕ್ಕಳಿಗೆ  ರಿಯಾಯತಿ ದರದಲ್ಲಿ ಊಟ ವಸತಿ  ನೀಡಲಾಯಿತು. ಹೀಗೆ ಭಾರತದಲ್ಲಿ ಶಿಕ್ಷಣವೆಂದರೆ ಬರೇ ಕಟ್ಟಡ ಕಟ್ಟಿಕೊಂಡು ಕುಳಿತುಕೊಳ್ಳುವುದಲ್ಲ, ಬದಲು ವಿದ್ಯಾರ್ಥಿಗಳ, ಅದರಲ್ಲೂ ಬಡ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ ಮಾಡುವುದೂ ಹೌದು. ಉದಯರು ಈ ಕೆಲಸ ಮಾಡಿದ್ದಕ್ಕೆ ನಾವೆಲ್ಲ ಅವರಿಗೆ ಕೃತಜ್ಞರಾಗಿರಬೇಕು. ಅವರು ಸುರುಮಾಡಿದ ʼಒಂದು ಹೊತ್ತು ಕೈ ತುತ್ತುʼ ಯೋಜನೆಯು ನಿಜಕ್ಕೂ ಅವರ ಸಾಧನೆಗಳಲ್ಲಿಯೇ ಕಿರೀಟಪ್ರಾಯವಾದುದು. ಪುಸ್ತಕದ ಈ ಭಾಗವು ಮಹಾಕಾವ್ಯವೊಂದರ ಭಾಗದಂತೆ ಓದಿಸಿಕೊಂಡು ಹೋಗುತ್ತದೆ. 

ಪ್ರಸ್ತುತ ಪುಸ್ತಕದಲ್ಲಿ ನನಗೆ ಬಹಳ ಉಪಯುಕ್ತವಾಗಿ ಕಂಡ ಮೂರನೇ ವಿಷಯ ಎಂದರೆ, ʼಹಂಪಾಸುರʼ ಪ್ರಸಂಗ. ಈ ಕಾಲೇಜನ್ನು ಕಟ್ಟುವಾಗ ಅದರ ಭೌತಿಕ ಪರಿಸರಗಳು ಹೇಗಿತ್ತೋ ಎಂದು ಈಗ ಊಹಿಸಿಕೊಳ್ಳುವುದೇ ಕಷ್ಟ. ಆದರೆ ಈಗ ಅದು ಮಂಗಳೂರಿನ ಅತ್ಯಂತ ಜನಜನಿತ ಪ್ರದೇಶವಾದ ಹಂಪನಕಟ್ಟೆಗೆ ತಾಗಿಕೊಂಡಿದೆ. ಪಕ್ಕದಲ್ಲಿ ವೆನ್‌ಲಾಕ್‌ ಆಸ್ಪತ್ರೆ. ಇನ್ನೊಂದಷ್ಟು ದೂರದಲ್ಲಿ ನೆಹರೂ ಮೈದಾನ ಮತ್ತು ಖಾಸಗೀ ಬಸ್‌ ನಿಲ್ದಾಣ. ಜಿಲ್ಲಾಧಿಕಾರಿಗಳ ಕಚೇರಿಯೂ ದೂರವಿಲ್ಲ.

ಕಾಲೇಜಿನ ಇದಿರುಗಡೆಯ ರಸ್ತೆಯಲ್ಲಿ ವಾಹನಗಳಿಲ್ಲದ ಕ್ಷಣಗಳೇ ಇರಲಾರದು. ಇಂಥ ಕಡೆ ವಿದ್ಯಾರ್ಥಿಗಳು ರಸ್ತೆಯ ಒಂದು ಬದಿಯಿಂದ ಇನ್ನೊಂದು ಕಡೆಗೆ ದಾಟುವುದು ಹೇಗೆ?  ಬುದ್ದಿವಂತರ ಜಿಲ್ಲೆಯೆಂದು ಹೆಸರು ಪಡೆದ ಈ ಊರಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ದಾರಿ ಹೋಕರಿಗಾಗಿ ಕಾಲೇಜಿನ ಇದಿರಿಗೊಂದು ಮೇಲ್ಸೇತುವೆ ಕಟ್ಟಲಾಗಲೇ ಇಲ್ಲವೇ? ಯಾರಿಗೂ ಬೇಡವಾಗಿದ್ದ ಈ ಸಮಸ್ಯೆಯನ್ನು ಉದಯ ಕುಮಾರ್‌ ಕೈಗೆತ್ತಿಕೊಂಡರೂ ಅವರಿಗೆ ಮೇಲ್ಸೇತುವೆ ನಿರ್ಮಿಸಿಕೊಳ್ಳಲಾಗುವುದೇ ಇಲ್ಲ. ಈ ವೈಫಲ್ಯ ವಸ್ತುಶ: ಅವರದಲ್ಲ, ಸಮಾಜದ್ದು. 

ಉದಯ ಕುಮಾರರ ಕನಸುಗಳು ಮತ್ತು ಸಾಧನೆಯ ಮುಖ್ಯವಾದ ಮೂರು ಅಂಶಗಳನ್ನು ಮೇಲೆ ಗಮನಿಸಲಾಗಿದೆ. ಇದರ ಜೊತೆಗೆ ಅವರು ಇನ್ನೂ ಅನೇಕ ಕೆಲಸಗಳನ್ನು ಮಾಡಿರುವುದರ ಬಗ್ಗೆ ಈ ಪುಸ್ತಕದಲ್ಲಿ ಸಾಕಷ್ಟು ಮಾಹಿತಿಗಳಿವೆ. ಇದಕ್ಕೆಲ್ಲ ಅವರು ಕೈಯಿಂದ ಸಾಕಷ್ಟು ಹಣ ಖರ್ಚುಮಾಡಿಕೊಂಡಿದ್ದಾರೆ. ತಮ್ಮ ನಂಬುಗೆಯ ಸಹೋದ್ಯೋಗಿಗಳಿಂದಲೂ ಒಂದಷ್ಟು ಖರ್ಚು ಮಾಡಿಸಿದ್ದಾರೆ. 

ಎಷ್ಟೋ ಬಾರಿ ನಾಡು ಇಂಥವರನ್ನು ಗುರುತಿಸುವಲ್ಲಿ ವಿಫಲವಾಗುತ್ತದೆ. ಅದು ನಾಡಿನ ಅಧ:ಪತನದ ಸಂಕೇತ. ಪುಸ್ತಕದ ಕೊನೆಯ ಭಾಗದ ಕೆಲವು ವಿವರಗಳು ಪ್ರಾಮಾಣಿಕರನ್ನು ನಮ್ಮ ಸುತ್ತಲಿನ ಸಮಾಜ ಹೇಗೆ ನಿರ್ದಯವಾಗಿ ನಡೆಸಿಕೊಳ್ಳುತ್ತದೆ ಎಂಬುದನ್ನೂ ನಿರೂಪಿಸುತ್ತವೆ. ಲೇಖಕರು ವಿಷಾದದಿಂದ ಬರೆದ ಈ ಮುಂದಿನ ಸಾಲುಗಳನ್ನು ಗಮನಿಸಿ- ʼಆದರೆ ನನ್ನನ್ನು ರಾತ್ರಿ ಹಗಲು ದುಡಿಸಿಕೊಂಡ ವಿಶ್ವವಿದ್ಯಾನಿಲಯ, ಕುತಂತ್ರದಿಂದ ಪ್ರಾಂಶುಪಾಲ ಹುದ್ದೆಯಿಂದ ಬದಲಾಯಿಸಿದ ನಂತರವೂ ಯಾವುದೇ ಆಧಾರವಿಲ್ಲದೆ ನನ್ನ ಮೇಲೆ ಅನಗತ್ಯ ಆರೋಪ ಮಾಡಿ, ಮಾನಸಿಕ ಕಿರುಕುಳ ನೀಡುವಾಗ ಅಸಹಾಯಕರಾಗಿ, ಯಾವುದೇ ಮಾತುಗಳನ್ನು ಆಡದಿರುವುದು ನನಗೆ ನಿಜವಾಗಿಯೂ ಆಘಾತ ಉಂಟು ಮಾಡಿತು. ಯಾರು ಯಾವ ವಿಷಯಕ್ಕಾಗಿ ಯಾರ ಮುಲಾಜಿಗೆ ಒಳಗಾಗಿ ಇದೆಲ್ಲ ನಡೆಯುತ್ತಿದೆ ಎನ್ನುವುದೇ ನನಗೆ ತಿಳಿಯುತ್ತಿರಲಿಲ್ಲ.

ದಿನವಿಡೀ ದುಡಿದರೂ ಮುಗಿಯದಷ್ಟು ಕೆಲಸವಿರುವಾಗ ಎಲ್ಲಿ ಏನು ನಡೆಯುತ್ತದೆ, ಯಾರು ಎಡದಿಂದ ಬಲಕ್ಕೆ ವಾಲಿದರು, ಇನ್ನು ಯಾರು ಬಲವೇ ಇಲ್ಲದೆ ವಾಲಿದರು, ಯಾರು ಯಾರನ್ನು ಕರೆದು ಔತಣ ನೀಡಿದರು, ಯಾರು ಯಾರ ಮೇಲೆ ಹಿಡಿತ ಹೊಂದಿದ್ದಾರೆ, ಎಂದು ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತು ನಮಗೆಲ್ಲಿದೆ?ʼ. ಇಂಥ ಅನುಭವ ನನಗೂ ಆಗಿದೆಯಾದ್ದರಿಂದ ಮೇಲಿನ ಮಾತುಗಳ ಗಹನತೆ ನನಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.  ಇಂಥ ಸಂದರ್ಭಗಳಲ್ಲಿ ಮಾನಸಿಕ ಸಮತೋಲನವನ್ನು ಕಾಯ್ದುಕೊಂಡು, ಮಾಡಿದ ಕೆಲಸಗಳಿಗೆ ತೃಪ್ತಿಪಟ್ಟುಕೊಳ್ಳುವುದಷ್ಟೇ ಯಾರಾದರೂ  ಮಾಡಬಹುದಾದ ಅತ್ಯುತ್ತಮ ಕೆಲಸ. 

ಎಷ್ಟು ಕೆಲಸ ಮಾಡಿದರೂ ತೃಪ್ತರಾಗದ ಕೆಲವು ಅತೃಪ್ತ ಆತ್ಮಗಳು ಎಲ್ಲ ಕಾಲಕ್ಕೂ ಇರುತ್ತವೆ. ಈಚಿನ ದಿನಗಳಲ್ಲಿ ಅದಕ್ಕೆ ಒಂದಷ್ಟು ಕೆಟ್ಟ ರಾಜಕೀಯ ಸೇರಿಕೊಂಡು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಆದರೂ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸಮಾಜ ತಡವಾಗಿಯಾದರೂ ಗುರುತಿಸುತ್ತದೆ ಎಂದು ನಂಬುವವರಲ್ಲಿ ನಾನೂ ಒಬ್ಬ,

‍ಲೇಖಕರು Admin

September 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: