ಕ್ರಿಯೇಟಿವ್ ಮೇಷ್ಟ್ರಿಗೆ ಇಂದು ಗುರು ಗೌರವ!…

ವಿಷ್ಣು‌ ಕೆ ಪಟಗಾರ

ಈ ಮೇಷ್ಟ್ರ‌ ಕ್ರಿಯೇಟಿವಿಟಿ ನೋಡಿದ್ದೇನೆ. ರಾತ್ರಿ ಹಗಲು ಎನ್ನದೇ ಮೂರು‌ದಶಕಗಳಿಂದ ಶೈಕ್ಷಣಿಕ ಚಿಂತನೆ ತೊಡಗಿಕೊಂಡ‌ ಈ ಗುರುವಿಗೆ ಸೆ.೫ರಂದು ರಾಜ್ಯ ಮಟ್ಟದ‌ ಪ್ರಶಸ್ತಿ ಪ್ರದಾನ ಆಗಲಿದೆ. ರಂಗಭೂಮಿಯ‌ ನಂಟಿ‌ನ ಮೂಲಕ ಪಾಠ‌ ನಾಟಕ ನಡೆಸುವ, ಬೋಧಿಸುವ ಕನ್ನಡ ಪಾಠವನ್ನೂ ರುಚಿಕಟ್ಟು ಮಾಡಿ‌ ಮಕ್ಕಳ ಓದಿಗೆ ಸಾಣೆ ಹಿಡಿಯುವ ಕಾಯಕ ಯೋಗಿಗೆ ಇಂದು ಬೆಂಗಳೂರಿನಲ್ಲಿ ಪ್ರಶಸ್ತಿ‌ ಪ್ರದಾನ ಆಗಲಿದೆ. ಖುಷಿಯ ಸಂಗತಿ ಎಂದರೆ ಸೃಜನಶೀಲತೆಗೆ‌ ಸಿಕ್ಕ ಪ್ರಶಸ್ತಿ‌ ಇದಾಗಿದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣದಲ್ಲಿ ಮೇ 16 ,1968 ರಲ್ಲಿ ಜನಿಸಿದ ಈ ಮೇಷ್ಟ್ರು ನಾರಾಯಣ ಭಾಗ್ವತ್ ಇಂದು‌ ಶಿರಸಿಯ‌ ಮಾರಿಕಾಂಬಾ ಸರಕಾರಿ‌ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕರು. ಈ ಶಾಲೆಗೆ ೧೫೦ ವರ್ಷದ ಇತಿಹಾಸ ಇದೆ. ಗೊತ್ತಿರಲಿ, ರಾಜ್ಯ ಮಟ್ಟದಲ್ಲಿ ಅತು ಹೆಚ್ಚು ಮಕ್ಕಳು ಇರುವ ಶಾಲೆ. ೧೫೦೦ ಮಕ್ಕಳು ೮ ರಿ೦ದ ೧೦ನೇ ತರಗತಿಯ ತನಕ ಇದಾರೆ!

ಎಂ.ಎ., ಎಂ.ಇಡಿ. ಪದವೀಧರರಾಗಿರುವ ಇವರು ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ್ದಾರೆ. 1990 ರಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ಅರಿವನ್ನು ಹಂಚುವ ಕಾಯಕಕ್ಕೆ ಕಂಕಣ‌ ಕಟ್ಟಿಕೊಂಡವರು. 1998 ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಆಯ್ಕೆಗೊಂಡು ಸುದೀರ್ಘ ಈವರೆಗೆ 31 ವರ್ಷಗಳಿಂದ ಕೆಲಸ‌ ಮಾಡುತ್ತಿದ್ದಾರೆ. ಅಕ್ಷರದ ಅಕ್ಕರೆಯ ಜೊತೆಗೆ‌ ಕೆಲಸ ಮಾಡುತ್ತಿದ್ದಾರೆ. ಕತೆ-ಕವನ-ನಾಟಕ ರಚನೆ, ಚಿತ್ರಕಲೆ, ಸಂಗೀತ, ನಾಟಕ ನಿರ್ದೇಶನ ಮತ್ತು ಅಭಿನಯ, ಉಪನ್ಯಾಸ, ರಜಾಶಿಬಿರಗಳ ಸಂಘಟನೆ, ಪೇಪರ್ ಕ್ರಾಫ್ಟ್, ಹಾರ್ಮೋನಿಯಂ ವಾದನ, ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ, ಯಕ್ಷಗಾನ, ಕರಕುಶಲ ಕಲೆ ಒಂದಲ್ಲ, ಎರಡಲ್ಲ, ವಾಸ್ತು ಜ್ಞಾನದ‌ ಮಾಹಿತಿ ಕೂಡ ಇವರಲ್ಲಿದೆ.

ರಜಾ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ನಡೆಸುವ ಇವರು ಇದುವರೆಗೆ 50 ಕ್ಕೂ ಹೆಚ್ಚು ನಾಟಕಗಳನ್ನು ಮಕ್ಕಳಿಗೂ , 15 ನಾಟಕಗಳನ್ನು ಶಿಕ್ಷಕರಿಗೂ ನಿರ್ದೇಶಿಸುವುದರ ಜೊತೆಯಲ್ಲಿ ಕರೋನಾ ಸಂದರ್ಭದಲ್ಲಿ ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ‘ ಪಾಠ ನಾಟಕ ‘ ಪರಿಕಲ್ಪನೆ ಹುಟ್ಟುಹಾಕಿದವರು.
ಸಂಗೀತ ನೀಡಿ ಹಲವಾರು ನಾಟಕಗಳನ್ನು ಸಂಯೋಜಿಸಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇವರ ನಿರ್ದೇಶನದ ರೆಕ್ಕೆ ಕಟ್ಟುವಿರಾ , ಬೆಳಕು ಹಂಚಿದ ಬಾಲಕ, ಘಟೋದ್ಘಜ, ಇದೇ ಸಕಾಲ ನಾಟಕಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದಿವೆ.

ಸೇವಾದಳ, ಸ್ಕೌಟ್, ಎನ್.ಸಿ.ಸಿ ತರಬೇತಿ ಪಡೆದ ಇವರು ಮಕ್ಕಳಲ್ಲಿ ಶಿಸ್ತು, ಸೇವಾಮನೋಭಾವ, ಭಾವೈಕ್ಯತೆ, ದೇಶಾಭಿಮಾನ ಮೂಡಿಸುವಲ್ಲಿ ವಿಶೇಷ ಕಾಳಜಿವಹಿಸುತ್ತ ಬಂದಿದ್ದೂ ವಿಶೇಷ.

ಬಹುತ್ವದ ನೆಲೆಯಲ್ಲಿ ತೆರೆದುಕೊಂಡ ಇವರಿಗೆ ಜನಗಣತಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ, ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ, ಅತ್ಯುತ್ತಮ ನಟ, ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಜ್ಞಾನ ಸಿಂಧು ಪ್ರಶಸ್ತಿ, ನೇಶನ್ ಬ್ಯುಲ್ಡರ್ ಪ್ರಶಸ್ತಿ, ಕ.ಸಾ.ಪ. ತಾಲೂಕು ಪ್ರಶಸ್ತಿ, ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ ಯೂ ಸೇರಿದಂತೆ ಹತ್ತಾರು ಪ್ರಶಸ್ತಿ – ಪುರಸ್ಕಾರಗಳನ್ನು ನೀಡಿ‌ ಪ್ರೋತ್ಸಾಹಿಸಲಾಗಿದೆ.

ಆದರ್ಶ ಶಿಕ್ಷಕಿ ಶ್ರೀಮತಿ ಮಹಾದೇವಿ, ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮಗಳು , ಇಂಜಿನಿಯರಿಂಗ್ ಓದುತ್ತಿರುವ ಪ್ರತಿಭಾವಂತ ಮಗ ಜೊತೆ ಸಮೃದ್ದ ಬದುಕು ನಡೆಸುತ್ತಿದ್ದಾರೆ.

ಇವರ ಕ್ರಿಯಾಶೀಲತೆಗೆ ರಾಜ್ಯ‌ಪ್ರಶಸ್ತಿಯ ಗೌರವ ಸಿಕ್ಕಿದ್ದು ಪ್ರಶಸ್ತಿಯ ಗೌರವವನ್ನೂ ಹೆಚ್ಚಿಸಿದೆ. ಪ್ರಶಸ್ತಿ ಬಂದ ಬಳಿಕ ಹಿಗ್ಗದೇ, ಬಾರದಿದ್ದರೆ‌ ಕುಗ್ಗದೇ ನಡೆಯುವ ಸಮ ಮನಸ್ಥಿತಿಯ ಮೇಷ್ಟ್ರೇ ನಿಮಗಿದೋ ಶುಭಾಶಯಗಳು.

‍ಲೇಖಕರು Admin

September 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: