ಪುನೀತ್ ಕುಮಾರ್ ವಿ ಓದಿದ ‘ಹೂಬಾಣ’

ಅರಿವಿನ ಅನುಸಂಧಾನ, ಸಾಹಿತ್ಯದಂಗಣ : ಹೂಬಾಣ

ಪುನೀತ್ ಕುಮಾರ್ ವಿ

ಕೃತಿಯೊಂದು ಓದುಗನ ತಲುಪಬೇಕಾದ ಎಲ್ಲ ಅರ್ಹತೆಯನ್ನು ಹೊಂದಿದ್ದರೂ, ಸಮೂಹವನ್ನು ತಲುಪುವಲ್ಲಿ ಸೋಲುವುದೇಕೆ? ಆ ಕೃತಿ ಮುನ್ನೆಲೆಗೆ ಬರದೆ ಎಷ್ಟು ಕಾಲ ಹಾಗೇ ಉಳಿಯಬೇಕು? ಯಾವುದೇ ಒಂದು ಬರಹಕ್ಕೆ( ಕೃತಿಗೆ) -ವಿಮರ್ಶೆಯ ಮಾತಂತಿರಲಿ ಒಂದು ಸಣ್ಣ ಪ್ರತಿಕ್ರಿಯೆಯೂ ಇರದೇ ಹೋದಾಗ ಬರಹಗಾರನ ಮನಸ್ಥಿತಿ ಏನಾದೀತು? ಓದುಗರಿಗೆಂದೇ ಬರೆದ ಬರಹ ಅವರಿಗೆ ತಲುಪದೇ ಇದ್ದರೆ ಆ ಬರಹ ಸಾರ್ಥಕವೆ? ಕೃತಿಯ ಕೈಹಿಡಿಯಬೇಕಾದವರೆ ಅದನ್ನು ಕಡೆಗಣಿಸಿದರೆ ಏನು ಗತಿ? ಬೇಕಂತಲೇ ಒಂದು ಕೃತಿಯನ್ನು ಓದದೇ ಉಪೇಕ್ಷಿಸುವುದು ಎಷ್ಟು ಸರಿ? 

ಇಂಥ ಅನೇಕ ಪ್ರಶ್ನೆಗಳು, ಜಿಜ್ಞಾಸೆ ಆಗಾಗ ನನ್ನನ್ನು ಕಾಡುತ್ತಿರುತ್ತವೆ. ಅಷ್ಟೇ ಅಲ್ಲದೇ : ಬದಲಾಗುತ್ತಿರುವ ಕಾಲಘಟ್ಟದಲ್ಲಿ ಓದು ಎಂಬುದೇ ಕ್ಷೀಣಿಸುತ್ತಿರುವಾಗ, ಸಾಹಿತ್ಯದ ಬೆರಗನ್ನು ಬಲ್ಲವರೇ ಇಲ್ಲದೆ, ಇದ್ದರೂ ಅಂಥ ಓದುಗನನ್ನು ಆಧುನಿಕತೆಯ ಮಾಯಾಜಾಲ ಸೆಳೆದುಕೊಳ್ಳುತ್ತಿರುವ ಹೊತ್ತಲ್ಲಿ ಬರಹಗಾರ ಯಾರಿಗಾಗಿ ಬರೆಯಬೇಕು? ಯಾವ ಧೈರ್ಯದ ಮೇಲೆ ಬರೆಯಬೇಕು? ಹೊಸದಾಗಿ ಬರಹ ಶುರುಮಾಡಿದ ಬರಹಗಾರರಿಗೆ ಬರೆಯಲು ಪ್ರೇರಣೆಯಾದರೂ ಎಲ್ಲಿದೆ? ಎಂಬೆಲ್ಲ ಆತಂಕಮಯ ವಿಚಾರಗಳು ಕಾಡತೊಡಗುತ್ತವೆ.

ಸಾಹಿತ್ಯದೆಡೆಗೆ ಆಸಕ್ತಿ ಇರುವ ಯಾರಿಗಾದರೂ ಒಂದಲ್ಲ ಒಂದು ಹಂತದಲ್ಲಿ ಈ ಪ್ರಶ್ನೆಗಳು ಮೂಡುವುದು ಸಹಜ ಅಲ್ಲವೆ? ಬರೆಯಬೇಕೆಂಬ ಹುಮ್ಮಸ್ಸು, ಬರವಣಿಗೆಯ ಕಷ್ಟಸುಖ, ಆ ಪ್ರಕ್ರಿಯೆಯಲ್ಲಿನ ತಲ್ಲಣ ಒಂದೆಡೆಯಾದರೆ.. ಬರೆದ ತರುವಾಯ ಓದುಗನಿಗೆ ತಲುಪಿಸುವ, ಓದುಗನ ಸ್ಪಂದನಕ್ಕಾಗಿ ಕಾಯುವ ತಲ್ಲಣ ಇನ್ನೊಂದೆಡೆ. ಇವೆರಡರ ನಡುವೆ ಕೃತಿಕಾರ ಸದಾ ಜೀಕುವುದು ಅನಿವಾರ್ಯ.

ಮೊದಲ ಹಂತ ಸಂಪೂರ್ಣ ಬರಹಗಾರನ ಮೇಲೆ ಅವಲಂಬಿತವಾದರೆ ಎರಡನೆ ಹಂತ ಓದುಗನ ಮೇಲೆ ನಿಂತಿರುತ್ತದೆ. ಬರೆಯುವಾಗಿನ ತುಮುಲುಗಳನ್ನು, ಕಷ್ಟಗಳನ್ನು ಕೃತಿಕಾರ ಹೇಗಾದರೂ ಸಹಿಸಿಕೊಂಡಾನು ಆದರೆ ಬರೆದ ಅನಂತರ ಜನರ ಸ್ವೀಕಾರಕ್ಕಾಗಿ ಕಾಯುವ, ಅವರ ಪ್ರತಿಕ್ರಿಯೆಗಾಗಿ ಹಾತೊರೆಯುವ ಆ ನೋವು ಮಾತ್ರ ಅಸಹನೀಯ. 

ಈ ಸಂದರ್ಭದಲ್ಲಿ, ಇಂಥ ಅನೇಕ ಅಸ್ಪಷ್ಟತೆಗಳಿಗೆ, ಅಸಮಾಧಾನಗಳಿಗೆ, ಗೊಂದಲಗಳಿಗೆ ಉತ್ತರ ರೂಪಿಯಾಗಿ, ಅರಿವಿನ ದೀವಿಗೆಯಾಗಿ ನನಗೆ ದೊರೆತ ಪುಸ್ತಕ ಜಗದೀಶ ಶರ್ಮಾ ಸಂಪರು ಬರೆದ “ಹೂಬಾಣ”. ‘ಬರಹದ ಬಗೆಗೆ ಬಲ್ಲವರ ಬರಹ’ ಎಂಬ ಉಪಶೀರ್ಷಿಕೆಯೇ ನನ್ನಲ್ಲಿ ಓದುವ ಆಸೆ, ಉತ್ಸಾಹ ಹೆಚ್ಚಿಸಿತು ಎನ್ನಬಹುದು. ಏಕೆಂದರೆ ಬರಹಗಳನ್ನು ಓದುವಷ್ಟೇ ಹಂಬಲ ನನಗೆ ಬರಹಗಳ ಬಗೆಗೆ ಓದಲು ತಿಳಿದುಕೊಳ್ಳಲೂ ಇದೆ. ಆ ನಿಟ್ಟಿನಲ್ಲಿ ಈ ಸಂಗ್ರಹ ನನಗೆ ಅತ್ಯಂತ ಸಹಾಯಕ. ಜ್ಞಾನಪ್ರೇರಕ, ಆನಂದದಾಯಕ. 

ಸಾಹಿತ್ಯ, ಸಾಹಿತ್ಯ ರಚನೆ, ಕೃತಿ, ಓದುಗ ಮತ್ತು ಕೃತಿಕಾರ.. ಒಟ್ಟಾರೆ ಬರಹ ಇದರ ಕೇಂದ್ರಬಿಂದು.ಬರಹದ ಬಗ್ಗೆ ಹಲವು ವಿಚಾರಗಳನ್ನು ಚರ್ಚಿಸುವ, ಬರಹದ ಹೊಳಹನ್ನು, ಒಳಹೊರಗುಗಳನ್ನು ತಿಳಿಯಪಡಿಸುವ ಅನನ್ಯ ಸಂಗ್ರಹ ಇದು. ಸಾಹಿತ್ಯದ ಬಗ್ಗೆ ಅನೇಕ ಸಂಸ್ಕೃತ ಕವಿಗಳು, ಲೇಖಕರು, ಶಾಸ್ತ್ರಜ್ಞರು, ಅನುಭವಿಗಳು ಆಡಿರುವ ಮಾತುಗಳು, ಅಭಿಪ್ರಾಯಗಳು, ಪ್ರಸ್ತಾವಿಸಿರುವ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಬರಹದ ಹರಹನ್ನು, ಬರಹದ ಬಗೆಯನ್ನು, ಸ್ಫುಟವಾಗಿ, ಅಚ್ಚುಕಟ್ಟಾಗಿ ತಮ್ಮ ಹೃದ್ಯ ನಿರೂಪಣೆಯ ಮೂಲಕ ಕಟ್ಟಿಕೊಟ್ಟಿದ್ದಾರೆ ಲೇಖಕರು. ಪುಸ್ತಕ ಹಿಡಿದು ಕೂತು..ಪುಟಗಳನ್ನು ತಿರುವುತ್ತ ಹೋದರೆ ಇದೊಂದು ಅರಿವಿನ ಜಗತ್ತು ಎಂಬುದು ದೃಗ್ಗೋಚರವಾಗುತ್ತದೆ.

ಒಂದು ಕೃತಿ ಹೇಗಿರಬೇಕು? ಬರಹಗಾರನ ಜವಾಬ್ದಾರಿ ಎಂಥದ್ದು? ಓದುಗನ ಕರ್ತವ್ಯವೇನು? ಬರಹಗಾರನಿಗೆ ಭಾಷೆ, ಶಬ್ದಸಂಪತ್ತು ಎಷ್ಟು ಮುಖ್ಯ? ಕಟ್ಟುವಿಕೆಯ ಕ್ರಮ, ಕೌಶಲ, ವಸ್ತುವಿನ ಆಯ್ಕೆ, ಕೃತಿಯ- ಕೃತಿಕಾರನ ಮಹತ್ತ್ವ, ಓದುಗನ ಪಾತ್ರ, ಕೃತಿಕಾರ ಮತ್ತು ಓದುಗನ ಸಂಬಂಧ, ಸಾಹಿತ್ಯದಿಂದಾಗುವ ಪ್ರಯೋಜನ…. ಹೀಗೆ ಪ್ರತಿಯೊಂದು ಅಧ್ಯಾಯವೂ ಸಾಹಿತ್ಯದ ಒಳನೋಟಗಳನ್ನು ನೀಡುತ್ತ ಹೋಗುತ್ತದೆ. ಬರಹದ ಮಹತ್ತ್ವವನ್ನು ಸಾರುತ್ತಲೇ ಬರಹ ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ. ಸಮಾಜದಲ್ಲಿ ಕೃತಿಕಾರನಿಗಿರುವ ಸ್ಥಾನವನ್ನು ಎತ್ತಿಹಿಡಿಯುತ್ತಲೇ ಕೃತಿಕಾರನಿಗಿರಬೇಕಾದ ಎಚ್ಚರಿಕೆಯನ್ನೂ, ಕಲಿಯಬೇಕಾದ ಪಾಠವನ್ನೂ ತಿಳಿಹೇಳುತ್ತದೆ.

ಎಲ್ಲಾ ಕೃತಿಗಳಿಗೂ ಓದುಗನ ಪ್ರೀತಿ ಸಿಗದು ಎಂಬ ವಾಸ್ತವ; ಸಾಹಿತ್ಯ ರಚನೆ ಸಾಮಾನ್ಯ ಪ್ರತಿಭೆಯಲ್ಲ ಎಂಬ ಸತ್ಯ; ಆ ಕಲೆ ಜನ್ಮಜಾತವಾಗಿ ಬರದಿದ್ದರೂ ಸತತ ಪರಿಶ್ರಮ ಮತ್ತು ಪ್ರಯತ್ನಗಳಿಂದ ಒಲಿಸಿಕೊಳ್ಳಬಹುದೆಂಬ ವಿಶ್ವಾಸ; ಕೆಟ್ಟ ಸಾಹಿತ್ಯ ರಚಿಸುವುದು ಸಮಾಜಕ್ಕೆ ಕಳಂಕ ಎಂಬ ಎಚ್ಚರ-ಈ ಕೃತಿ ನಮಗೆ ನೀಡುತ್ತದೆ. “ಕೃತಿಕಾರನಿಗೆ ವಿನಯ ಮತ್ತು ಆತ್ಮವಿಶ್ವಾಸ ಎರಡೂ ಇರಬೇಕು”; ” ಶಬ್ದ, ಕೃತಿಕಾರನ ಬದುಕು, ಅವನ ಬದುಕಿನ ಸಂಪತ್ತು”; “ಕೃತಿಯೊಂದು ಹೊಸತಾಗುವುದು- ಕಟ್ಟುವಿಕೆಯ ಕೌಶಲದಿಂದ”; ” ಕೃತಿಯೊಂದರ ನೈಜ ಪ್ರಚಾರಕ ಓದುಗನೇ”- ಇಂಥ ಅನೇಕ ಸಶಕ್ತ, ಸಾರ್ವಕಾಲಿಕ ಸಂಗತಿಗಳನ್ನು ನಮ್ಮ ಮುಂದಿಡುತ್ತದೆ. ತನ್ನ ಅಧ್ಯಾಯಗಳಲ್ಲಿನ ಅಂಶಗಳನ್ನು ಮನಗಾಣಿಸುತ, ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಅವಲೋಕನಕ್ಕೆ ಒಳಪಡಿಸುತ್ತದೆ.

ಪುಸ್ತಕ ಓದುತ್ತ ನನ್ನನ್ನು ಅಚ್ಚರಿಗೊಳಿಸಿದ ಮತ್ತೊಂದು ಸಂಗತಿ : ಕಾಲ ಎಷ್ಟೇ ಬದಲಾದರೂ..ಮಾನವ ಸಂವೇದನೆಗಳು ಅದ್ಹೇಗೆ ಹೊಂದುತ್ತವೆ ಎಂಬುದು! ತನ್ನ ಕೃತಿ ಯಾರೂ ಓದುತ್ತಿಲ್ಲ ಎಂಬ ನೋವು ಆಗಲೂ ಇತ್ತು ಈಗಲೂ ಇದೆ. ತನ್ನ ಬರಹ ಓದುಗನ ಮುಟ್ಟುತ್ತದೆ ಎಂಬ ವಿಶ್ವಾಸ ಆಗಲೂ ಇತ್ತು. ಈಗಲೂ ಇದೆ, ಇರಬೇಕು. ಸೃಷ್ಟಿಕಾರ್ಯ ಸಾಮಾನ್ಯವಲ್ಲ ಎಂಬ ಅರಿವು ಆಗಲೂ ಈಗಲೂ..ಅಷ್ಟೇ ಅಲ್ಲದೇ ಕೃತಿಚೌರ್ಯದಂಥ ಕೆಲಸಗಳು ಆಗಲೂ ನಡೆಯುತ್ತಿದ್ದವು ಎಂಬುದೇ ಅಚ್ಚರಿದಾಯಕ! 

“ಕೃತಿಯ ಸ್ವಾಗತದಲ್ಲೂ ರಾಜಕಾರಣವಿದೆ” ಎಂಬ ಅಧ್ಯಾಯದಲ್ಲಿ ಒಂದು ಕೃತಿ ಹೇಗೆ ಸಮಾಜದಲ್ಲಿ ಕಡೆಗಣಿಸಲ್ಪಡುತ್ತದೆಂಬುದನ್ನು ಭರ್ತೃಹರಿಯ ಮಾತುಗಳಲ್ಲಿ ಕೇಳಿ : “ತಿಳಿದವರಿಗೆ ಅಸೂಯೆ. ಆಳುವವರಿಗೆ ಸೊಕ್ಕು. ಉಳಿದವರಿಗೆ ಏನು ಅರ್ಥವಾಗದು. ಒಳಿತಿನ ಮಾತು ಒಳಗೆ ಜೀರ್ಣವಾಗಿ ಹೋಯಿತು”. ಒಬ್ಬ ಪ್ರಾಮಾಣಿಕ ಕೃತಿಕಾರನ ಸಂಕಟ ಹಾಗೂ ಸಂದಿಗ್ಧತೆಯನ್ನು ತೀವ್ರವಾಗಿ ಹಿಡಿದಿಡುತ್ತದೆ ಈ ಸಾಲುಗಳು. ಸಮಾಜದಲ್ಲಿ ಹೀಗೆ ಜೀರ್ಣವಾಗಿ ಹೋದ ಅದೆಷ್ಟು ಮಾತುಗಳಿವೆಯೋ? ಸಹೃದಯನನ್ನು ಮುಟ್ಟದೆ ತನ್ನದೆಯಲ್ಲೇ ಹೆಪ್ಪುಗಟ್ಟಿದ ಆ ಮಾತುಗಳಿಗೆ ತಕ್ಕ ನೆಲೆ ಸಿಕ್ಕಿದ್ದರೆ, ಆಸರೆ ದೊರೆತ್ತಿದ್ದರೆ….ಇನ್ನೂ ಅದೆಷ್ಟು ಮಾನವೀಯ ಸಂವೇದನೆಗೆ ನಾವು ಸಾಕ್ಷಿಯಾಗಬಹುದಿತ್ತೊ ಬಲ್ಲವರ‌್ಯಾರು?

ಹೀಗೆ ಕೃತಿ ನಿರ್ಮಿತಿಯ ಸಾವಲುಗಳನ್ನು, ನೋವು-ನಲಿವುಗಳನ್ನು, ಸೋಲು-ಗೆಲುವುಗಳನ್ನು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದ ಪೂರ್ವಸೂರಿಗಳು ಆಗಾಗ್ಗೆ ಅವಲೋಕನ ಮಾಡಿ, ಅಧ್ಯಯನ ನಡೆಸಿ, ಪರಾಮರ್ಶಿಸಿ ಈ ಎಲ್ಲಾ ಉತ್ತರಗಳನ್ನು ಕಂಡುಕೊಂಡು ದಾಖಲಿಸಿದೇ ಹೋಗಿದ್ದರೆ ಖಂಡಿತ ನಮಗೆ ಅತೀವ ನಷ್ಟವಾಗುತ್ತಿತ್ತು. ಹಾಗಾಗಿ ಅಂಥ ಮಹಾಮಹಿಮರಿಗೆ ನಾವು ಕೃತಜ್ಞರಾಗಿರಲೇಬೇಕು. ಮತ್ತು ಹಿನ್ನೆಲೆಯಲ್ಲಿ ಉಳಿದಿದ್ದ, ಬಿಡಿ ಬಿಡಿಯಾಗಿದ್ದ ಇವನ್ನು ಹೆಕ್ಕಿ ನಮಗೆ ಇಡಿಯಾಗಿ ದಕ್ಕುವಂತೆ ಮಾಡಿದ ಜಗದೀಶ ಶರ್ಮಾರಿಗೂ ನಾವು ಕೃತಜ್ಞತೆ ಅರ್ಪಿಸಲೇಬೇಕು.

ಬರಹ, ವಿಮರ್ಶೆ, ಓದುಗ ಮತ್ತು ನೀರಸ ಪ್ರತಿಕ್ರಿಯೆಗಳ ಬಗ್ಗೆ ನಾನೊಮ್ಮೆ ಕಥೆಗಾರ ಕೇಶವ ಮಳಗಿ ಅವರೊಂದಿಗೆ ಚರ್ಚಿಸಿದ್ದೆ. ಆಗವರು ನೀಡಿದ ಉತ್ತರ ಅತ್ಯಂತ ಸಮರ್ಪಕ. ಅವರ ಮಾತು : “ಲೇಖಕ ಹೊರಗಿನ ಸ್ವೀಕಾರ-ನಿರಾಕಾರಗಳಿಗೆ ಸಮಚಿತ್ತನಾಗಿರುವುದೇ ಆತ ಮಾಡಬಹುದಾದ ಅತ್ಯುತ್ತಮ ಕೆಲಸ. ಹೊಗಳಿಕೆ-ತೆಗಳಿಕೆ-ತಿರಸ್ಕಾರಗಳನ್ನು ಅತಿ ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಳ್ಳುವುದು ಆತನ ಕ್ರಿಯಾಶೀಲತೆಯನ್ನು, ಆತ್ಮವಿಶ್ವಾಸವನ್ನು ಕುಗ್ಗಿಸಬಲ್ಲವು. ಆತ ಅವಶ್ಯಕವಾಗಿ, ನಿರಂತರವಾಗಿ ಮಾಡಲೇ ಬೇಕಿರುವುದು ಸೃಷ್ಟಿ ಕಾರ್ಯ. ಉಳಿದದ್ದು ಸಮಾಜಕ್ಕೆ ಬಿಟ್ಟಿದ್ದು. ಎಷ್ಟೋ ಸಲ ಸಮಾಜ ಕೃತಘ್ನವೂ, ಅಸೂಕ್ಷ್ಮವೂ, ನಿರ್ದಯಿಯೂ ಆಗಿರಬಲ್ಲುದು. ಆದರೆ, ಕಲಾವಿದನಿಗೆ ಸೃಷ್ಟಿಸುವುದಲ್ಲದೆ ಅನ್ಯಮಾರ್ಗವಿಲ್ಲ.

ಇಂಥದೇ ಆಶಯವನ್ನು ಈ ಕೃತಿ ಹೊತ್ತಿದೆ, ಧ್ವನಿಸುತ್ತಿದೆ ಎಂಬುದು ಪುಸ್ತಕ ಓದಿ ಮುಗಿದ ಬಳಿಕ ಓದುಗರಿಗೆ ಸ್ಪಷ್ಟವಾಗುತ್ತದೆ. “ಕಲಾವಿದನಿಗೆ ಸೃಷ್ಟಿಸುವುದಲ್ಲದೆ ಅನ್ಯಮಾರ್ಗವಿಲ್ಲ”- ಕಲೆಯ ಸೃಷ್ಟಿಯಲ್ಲಿ ತೊಡಗಿಸಕೊಂಡವರಿಗೆ ಈ ಒಂದು ಅರಿವು ಜಾಗೃತವಾದರೆ ಸಾಕು, ಅವರ ಅಸಮಾಧಾನ, ನಿರಾಸೆ, ತಲ್ಲಣಗಳಿಗೆ ಉತ್ತರ ದೊರೆದಂತೆ. ಯಾರಿಗಾಗಿ ಬರೆಯಬೇಕು? ಏತಕೆ ಬರೆಯಬೇಕು? ಎಂಬೆಲ್ಲ ಪ್ರಶ್ನೆಗಳು ಆಗ ನಗಣ್ಯ.

ಸರಿ, ಸೃಷ್ಟಿಕಾರ್ಯವೇನೊ ಸಿದ್ಧಿಸಿದೆ. ಅದಕ್ಕೆ ಬೇಕಾದ ತಜ್ಞತೆ, ಪ್ರತಿಭೆಯೂ ಇದೆ. ಅದಾಗಿಯೂ ಕೃತಿಕಾರ ಗೆಲ್ಲುವುದು ಎಲ್ಲಿ ಅಂದರೆ- ವಸ್ತುವಿನ ಆಯ್ಕೆ ಮತ್ತು ಹೇಳುವ ಕ್ರಮದಿಂದ. ಏನು ಹೇಳುತ್ತಿದ್ದೇನೆ, ಹೇಗೆ ಹೇಳುತ್ತಿದ್ದೇನೆ ಮತ್ತು ಎಷ್ಟು ಹೇಳಬೇಕು ಎಂಬ ಅರಿವು ಯಾವುದೇ ಕೃತಿಕಾರನಿಗೂ ಅತ್ಯಗತ್ಯ. ಆ ಅರಿವಿನ ಬೆಳಗು ಸದಾ ಅವನಲ್ಲಿ ಜಾಗೃತವಾಗಬೇಕಾದರೆ ನಿತ್ಯ ಇಂಥ ಕೃತಿಗಳೊಂದಿಗಿನ ಅನುಸಂಧಾನದಿಂದ ಮಾತ್ರ ಸಾಧ್ಯ ಎಂಬುದು ನನ್ನ ಅಂಬೋಣ.

ಸಾಹಿತ್ಯದ ಮಗ್ಗುಲುಗಳನ್ನು ಪರಿಚಯಿಸುವ ಈ ಅತ್ಯದ್ಭುತ ಕೃತಿಯನ್ನು ಸಾಹಿತ್ಯಾಸಕ್ತರು, ಬರಹಪ್ರಿಯರಂತೂ ಖಂಡಿತವಾಗಿ ಓದಲೇಬೇಕು. ಇದೊಂದು ಅರ್ಥಪೂರ್ಣ ಹಾಗೂ ಅಧ್ಯಯನ ಯೋಗ್ಯ ಕೃತಿ. ಸಾಹಿತ್ಯದ ಬಗ್ಗೆ ತಿಳಿಹೇಳುವ ಮಹತ್ತ್ವದ ಸಂಗ್ರಹ.

‍ಲೇಖಕರು Admin

May 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: