ಎಳೆಯರ ರಂಗ ಹುಡುಕಾಟ- ಕಲಾಟದ ‘ಯತ್ರ ನಾರ್ಯಸ್ತು ಪೂಜ್ಯಂತೇ’

ಅಭಿಲಾಷಾ ಎಸ್

ಮಹಿಳಾ ಏಕ ವ್ಯಕ್ತಿ  ಪ್ರದರ್ಶನಗಳು ಹೆಚ್ಚು ಚಾಲ್ತಿಯಲ್ಲಿರುವ ಕಾಲವಿದು. ಅಭಿನಯದ ಮೂಲಕ ಅಭಿವ್ಯಕ್ತಿಸಬೇಕೆಂಬ ತೀವ್ರವಾದ ತುಡಿತ ಇರುವ ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶ ಸಿಕ್ಕದೇ ಇರುವುದು ಇದಕ್ಕೆ ಒಂದು ಕಾರಣವಾದರೆ, ಪುರಾಣ ಮತ್ತು ವಾಸ್ತವ ಜಗತ್ತಿನ ಅನೇಕ ಹೆಣ್ಣು ಪಾತ್ರಗಳು ಇನ್ನೂ ಅನಾವರಣಗೊಳ್ಳದೇ ಇರುವುದೂ ಇನ್ನೊಂದು ಕಾರಣವಾಗಿ ಕಾಣುತ್ತದೆ. 

ಸಾಧಾರಣವಾಗಿ ಹೆಣ್ಣೊಬ್ಬಳ ದೀರ್ಘ ಸ್ವಗತವೇ (ಮೋನೋಲೋಗ್)  ಆಗಿರುವ ಈ ಏಕವ್ಯಕ್ತಿ ರಂಗ ಪ್ರಯೋಗ, ಕಥೆ ಹೇಳುವ ತಂತ್ರವನ್ನೇ ಹೆಚ್ಚಾಗಿ ಬಳಸಬೇಕಾದ ಅನಿವಾರ್ಯತೆಗೆ ಕಟ್ಟುಬಿದ್ದಿರುತ್ತದೆ. ಹಾಗಾಗಿ ನಾಟಕವಾಗಿ ರಂಗದ ಮೇಲೆ ಘಟಿಸುವ ಸಂಗತಿಗಳು ಇಲ್ಲಿ ವಿರಳ. ಹಾಗೆಯೇ, ಬಾಹ್ಯ ಸಂಘರ್ಷ ಗಳಿಗೆ “ತಾವು” ದೊರೆಯದೇ ಒಂದು ಬಗೆಯ ಏಕತಾನತೆಗೆ ಸುಲಭವಾಗಿ ಜಾರಿ ಬಿಡಬಲ್ಲ ಅಪಾಯವೂ ಈ ಮಾದರಿಯ ಪ್ರಸ್ತುತಿಗಿರುತ್ತದೆ. ಈ ಎಲ್ಲ ಸವಾಲುಗಳನ್ನು ಹೊಸ ಬಗೆಯಲ್ಲಿ ಎದುರಿಸುತ್ತಾ ಒಂದು ಪರಿಣಾಮಕಾರೀ ನಾಟಕ ಕಟ್ಟುವ ಪ್ರಯತ್ನವನ್ನು ಇತ್ತೀಚೆಗೆ “ ಕಲಾಟ ಉದ್ಯಾವರ” ಎಂಬ ಹೊಸ ತಂಡ ಮಾಡಿತು.

ಯುವ ಕಲಾವಿದೆ, ಕೀರ್ತನಾ ಉದ್ಯಾವರ  ಸಮಾನ ಮನಸ್ಕರೊಡನೆ ಕೂಡಿಕೊಂಡು ತಮ್ಮ ಕಲಾಭಿವ್ಯಕ್ತಿಯ ಆಡಂಬುಲಕ್ಕಾಗಿ ಕಟ್ಟಿಕೊಂಡ ಈ “ಕಲಾಟ” ಎಂಬ ಸಂಸ್ಥೆಯ ಮೊದಲ ಪ್ರಯೊಗವೇ ಕೀರ್ತನಾ ಅಭಿನಯಿಸಿ ಪ್ರಶಾಂತ್ ಶೆಟ್ಟಿ ಕೋಟ, ನಿರ್ದೇಶಿಸಿದ “ಯತ್ರ ನಾರ್ಯಸ್ತು ಪೂಜ್ಯಂತೇ” 

ಇದರ ಮೊದಲ ಪ್ರದರ್ಶನ ಮೇ ೨೨ ಭಾನುವಾರ ಎಮ್.ಜಿ.ಎಮ್. ಕಾಲೇಜಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಸುಧಾ ಆಡುಕಳ ಅವರು ಬರೆದ ನಂಗೇಲಿ ಕಥಾ ಪ್ರಸ್ತುತಿ ಇದರ ಮುಖ್ಯ ನೇಯ್ಗೆಯಾದರೆ ಸಮಕಾಲೀನ ತರುಣಿಯೊಬ್ಬಳ ಒಳಗುದಿ ಇದರ ಇನ್ನೊಂದು ಎಳೆ. ಪುಟ್ಟ ಮಗುವಿನೊಂದಿಗಿರುವ ತನ್ನನ್ನು ಒಂಟಿಯಾಗಿ ಬಿಟ್ಟು ಹೊರಗೆಲ್ಲೋ ದುಡಿಯುತ್ತಿರುವ ಗಂಡನ ನಿರ್ಲಕ್ಷ್ಯಕ್ಕೆ ಚಡಪಡಿಸುತ್ತಿರುವ ಆಕೆ ತನ್ನ ಬಿಡುಗಡೆಯ ಹಾದಿಯನ್ನು ಕಂಡುಕೊಳ್ಳುವುದು, ದಮನಿತ ಮಹಿಳೆಯರ ಕಥೆಗಳನ್ನು ಓದುತ್ತಾ ತನ್ನ ಮನೋರಂಗದಲ್ಲಿ ಅದೇ ಪಾತ್ರವಾಗುವ ಮೂಲಕ. ಹಾಗೆ ಅವಳು ದಕ್ಕಿಸಿ ಕೊಂಡ ಪಾತ್ರವೇ “ನಂಗೇಲಿ”. ೧೯ನೇ ಶತಮಾನದಲ್ಲಿ ಕೇರಳದಲ್ಲಿ ಪ್ರಚಲಿತವಿತ್ತೆನ್ನಲಾದ “ಮೊಲೆ ತೆರಿಗೆ”ಯ ವಿರುದ್ಧ ಬಂಡೆದ್ದು ತನ್ನ ಮೊಲೆಗಳನ್ನೇ ಕತ್ತರಿಸಿಕೊಂಡು ವ್ಯವಸ್ಥೆಗೆ ಸವಾಲೊಡ್ಡಿದ ದಿಟ್ಟ ಹೆಣ್ಣು, ಈ ನಂಗೇಲಿ. 

ಭೂತ ಮತ್ತು ವರ್ತಮಾನಗಳನ್ನು ಏಕ ಕಾಲದಲ್ಲಿ ಜೀವಿಸುತ್ತಿರುವ ಈ ತರುಣಿಯ ತುಮುಲಗಳನ್ನು ಅಭಿವ್ಯಕ್ತಿಸಲು ನಿರ್ದೇಶಕರು ಒಂದು ವಿಭಿನ್ನ ತಂತ್ರವನ್ನು ಬಳಸಿದ್ದರು. ನಟಿ ವಾಚಿಕವನ್ನು ಪ್ರೇಕ್ಷಕರ ಕಣ್ಣಲ್ಲಿ ಕಣ್ಣಿಟ್ಟು ಅಭಿನಯಿಸುವ ಬದಲು ಸತತವಾಗಿ ರಂಗ ಕ್ರಿಯೆ ಮಾಡುತ್ತಲೇ ಸ್ವಗತವಾಗಿಯೋ ಅಥವಾ ಕಾಲ್ಪನಿಕ ಪಾತ್ರಗಳ ಜತೆ ಸಂಭಾಷಿಸುತ್ತಲೋ ಪಾತ್ರ ನಿರ್ವಹಣೆ ಮಾಡುವುದು. ಇದು ಸನ್ನಿವೇಶ ಮತ್ತು ಪಾತ್ರಗಳಿಗೆ ಒಂದು ಬಗೆಯ ಸಹಜತೆಯನ್ನು ಕೊಡುತ್ತದೆ ಎಂಬುದು ಸತ್ಯವಾದರೂ ಮಾತುಗಳನ್ನು ಸ್ಪಷ್ಟವಾಗಿ ದಾಟಿಸುವುದು ಸಾಧ್ಯವಾಗದೇ ಅಲ್ಲಲ್ಲಿ ಪಠ್ಯದ ಸಂವಹನಕ್ಕೇ ಇದೊಂದು ತೊಡಕಾಗಿ ಕಂಡಿತು. 

ಅಪಾರ ನಾಟಕೀಯತೆಯನ್ನು ಒಡಲಲ್ಲಿಟ್ಟುಕೊಂಡ ನಂಗೇಲಿ ಕಥೆಯನ್ನು ಸುಧಾ ಅತ್ಯಂತ ಮನೋಜ್ಞವಾಗಿ ನಿರೂಪಿಸಿದ್ದರೆ, ಕೀರ್ತನಾ ಅಷ್ಟೇ ಸಶಕ್ತವಾಗಿ ಅದನ್ನು ನಿರ್ವಹಿಸಿದರು. ಎದೆ ವಸ್ತ್ರದ ಕನಸು ಕಾಣುತ್ತಾ ನಳನಳಿಸುತ್ತಲೇ ಬೆಳೆಯುವ ಹುಡುಗಿ, ಉದ್ದ ಲಂಗ ತೊಡುವ ಅವಳ ಬಯಕೆ, ಬಡತನ ಮತ್ತು ಜಾತಿಯ ಕಾರಣಕ್ಕೆ ಬಯಕೆ ಪೂರೈಸಲಾಗದ ಸಂಕಟ, ಸಿಟ್ಟು – ಈ ಎಲ್ಲ ಭಾವಗಳನ್ನು ಕೀರ್ತನಾ ಸಮರ್ಥ ವಾಗಿ ಪ್ರಕಟಿಸಿದ್ದು ಅದಕ್ಕೆ ಅವರೊಳಗಿನ ನೃತ್ಯಗಾತಿಯ ಬೆಂಬಲವೂ ಇತ್ತು! ನಂಗೇಲಿಯ ದಾರುಣ ಅಂತ್ಯವಂತೂ ನೋಡುಗರೊಳಗೊಂದು ಕೋಲಾಹಲದ ಅಲೆ ಎಬ್ಬಿಸಿ ಬಿಟ್ಟಿತ್ತು.

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ನಂಗೇಲಿಗಿಂತಲೂ ಹೆಚ್ಚು ಕಾಡಿದ ಪಾತ್ರ ಆಕೆಯ ಅಮ್ಮನದ್ದು. ಮಗಳು ಹುಟ್ಟಿದ  ಸಂಭ್ರಮದ ಕಾರಣಕ್ಕೆ ಅಪ್ಪ ಗಡಂಗಿಗೆ ಹೊರಟರೆ ಈ ಹಸಿ ಬಾಣಂತಿಗೆ ಆತಂಕದ ಕರಿ ಮೋಡ ಆವರಿಸಿಕೊಂಡಿತ್ತು. ಮಗಳು ದೊಡ್ಡವಳಾಗುವ ಮೊದಲು ಆಕೆಗೆ ಎದೆ ವಸ್ತ್ರ ತೊಡಿಸುವಂತಾಗಬೇಕು, ಅದಕ್ಜಾಗಿ “ ಮೊಲೆ ಕರ” ಕೊಡುವಷ್ಟು ಹಣ ಕೂಡಿಡಬೇಕು ಎಂದು ಹಠ ತೊಟ್ಟ ಆಕೆಯ ಅನುದಿನದ ಒದ್ದಾಟ, ಚಡಪಡಿಕೆ, ಕೂಡಿಟ್ಟ ಹಣ ಗಂಡು ಮಕ್ಕಳ ಮದುವೆಗೆ ಖರ್ಚಾಗಿ ಹೋದಾಗ ಆಕೆಗಾದ ಹತಾಶೆ – ಇವೆಲ್ಲವನ್ನೂ ನಟಿ ತಮ್ಮ ಸೂಕ್ಷ್ಮ‌ಅಭಿನಯದ ಮೂಲಕ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.

ಸರಳ ರಂಗ ಸಜ್ಜಿಕೆ ಮತ್ತು ರಂಗ ಪರಿಕರಗಳನ್ನಿಟ್ಟುಕೊಂಡು ಉತ್ಪ್ರೇಕ್ಷೆಯಿರದ  ಆಂಗಿಕದ ಮೂಲಕ ಪಾತ್ರದ ಒಡಲೊಳಗಿರಬಹುದಾದ ಪಿಸು ದನಿಯನ್ನೂ ಪ್ರೇಕ್ಷಕರು ಆಲಿಸಲು ಸಾಧ್ಯವಾಗುವಂತೆ ನಾಟಕದ ಕಟ್ಟೋಣ ನಿರ್ಮಿಸಿದವರು ಯುವ ನಿರ್ದೇಶಕ ಪ್ರಶಾಂತ ಶೆಟ್ಟಿ ಕೋಟ. ಇದಕ್ಕಾಗಿ ರಂಗ ಪಠ್ಯವನ್ನೂ ಅವರು ಹೆಣೆದುಕೊಂಡಿದ್ದರು. ಇವರಿಗೆ ಪೂರಕ  ಸಂಗೀತ ಸಾಂಗತ್ಯ ಒದಗಿಸಿದವರು ಶರಣ್ಯ ಮತ್ತು ಕಾರ್ತಿಕ್ ಎಂಬ ಇನ್ನಿಬ್ಬರು ಯುವ ಕಲಾವಿದರು.

ತಂಡ ಗಮನಹರಿಸ ಬೇಕಾದ ಕೆಲವೊಂದು  ಅಂಶಗಳು: ನಂಗೇಲಿ ಕತೆಗೆ ಪೋಣಿಸಿಕೊಂಡ ಸಮಾನಾಂತರ ಪಠ್ಯ ಊರ್ಮಿಳೆಯಂತ ಹೆಣ್ಣೊಬ್ಬಳ ತಳಮಳವನ್ನು ನಮಗೆ ದಾಟಿಸುತ್ತದಾದರೂ ಪಾತ್ರದ ಒಳಗನ್ನು ಅದು ಪೂರ್ತಿಯಾಗಿ ಬಿಚ್ಚಿಡಲಿಲ್ಲ ಮತ್ತು ಮುಖ್ಯವಾಗಿ ನಂಗೇಲಿ ಕತೆಯೊಡನೆ ಈ ವಾಸ್ತವವಾದೀ ಕತೆಯ ಸಂದರ್ಭ ಸಮಾಸಗೊಂಡಿರಲಿಲ್ಲ. 

ನಾಟಕದ ಮೊದಲೇ ಈ ತರುಣಿಯ ಇರುವಿಕೆಯ ಬಗೆಗೆ ಒಂದು ವಿವರಣೆ ಕೊಡಲಾಗಿತ್ತು. ಆದರೆ ಇಂತಹ ವಾಚ್ಯ ವಿವರಣೆಗಳು ಅನಗತ್ಯವಾಗಿದ್ದು, ಕತೆ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಾ ನೋಡುಗರನ್ನು ಒಳಗೊಳ್ಳಬಹುದಾದ ಸಾಧ್ಯತೆಯನ್ನು ಇದು ಮೊಟಕುಗೊಳಿಸಿತು. ನಾಟಕದುದ್ದಕ್ಕೂ ಪ್ರಧಾನವಾಗಿ ಕಾಣುತ್ತಿದ್ದ ಬಟ್ಟೆಯ ಜೋಲಿ ಅಷ್ಟೊಂದು ಪ್ರಸ್ತುತವಾಗಿರಲಿಲ್ಲ, ಏಕೆಂದರೆ ಅದು ಸೂಚಿಸುವ ತಾಯ್ತನ ಇಲ್ಲಿಯ ಮುಖ್ಯ ವಸ್ತುವಾಗಿರಲಿಲ್ಲ. ಹಾಗೆಯೇ ನಾಟಕಕ್ಕೊಂದು ತಾರ್ಕಿಕ ಅಂತ್ಯ ಕಾಣಲಿಲ್ಲ ಅಥವಾ ಅದು ಅಷ್ಟು ಸ್ಪಷ್ಟವಾಗಿರಲಿಲ್ಲ. ನಡು ನಡುವೆ ಅಗತ್ಯವಿಲ್ಲದ ಕೆಲವು ಭಾಗಗಳಿದ್ದು ಅವು ನಾಟಕದ ಬಿಗುವನ್ನು ಅಲ್ಲಲ್ಲಿ ಸಡಿಲಗೊಳಿಸುವಂತೆ ಕಾಣುತ್ತಿತ್ತು. 

ನಟಿ ಕೀರ್ತನಾ ಮತ್ತು ನಿರ್ದೇಶಕ ಪ್ರಶಾಂತ್ ಶೆಟ್ಟಿ ತಮ್ಮ ತಾಜಾತನ, ದಿಟ್ಟತನ, ಮತ್ತು ಹೊಸ ಹುಡುಕಾಟಕ್ಕೆ ತಮ್ಮನ್ನು ಒಡ್ಡಿಕೊಂಡ ಬಗೆಯಿಂದ ಇಷ್ಟವಾಗುತ್ತಾರೆ. ಇವರೊಳಗಿನ ಅಪಾರ ಶಕ್ತಿ ಮತ್ತು ಪ್ರತಿಭೆಗೆ ಅನುಭವಸ್ತರ ದಿಕ್ಸೂಚಿ ಲಭಿಸಲಿ ಮತ್ತು ಅವರೀರ್ವರೂ ಭವಿಷ್ಯದ ಭರವಸೆಗಳಾಗಲಿ‌ ಎಂಬ ಹಾರೈಕೆಗಳು.

‍ಲೇಖಕರು Admin

May 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: