ಪಿ ಪಿ ಉಪಾಧ್ಯ ಸರಣಿ ಕಥೆ 69- ಹೊಸ ಬದುಕು ಪ್ರಾರಂಭವಾದದ್ದು…

ಪಿ ಪಿ ಉಪಾಧ್ಯ

ಹಾಗೆ ಒಮ್ಮೆ ಯಾವುದೋ ಹೆಳೆ ಮಾಡಿಕೊಂಡು ಬಂದವಳು ಆ ಕೆಲಸ ಮುಗಿದ ಮೇಲೂ ಕುಳಿತೇ ಇದ್ದಳು. ಚಿತ್ರ ವಿಚಿತ್ರ ಭಾವ ಭಂಗಿಗಳನ್ನು ತೋರಿಸುತ್ತ ಕುಳಿತ ಅವಳ ಉದ್ದೇಶ ನನಗೆ ಮೊದ ಮೊದಲು ಅರ್ಥವಾಗಲಿಲ್ಲ. ಮತ್ತೆ ಅವಳೇ ಬಾಯಿ ಬಿಟ್ಟಳು. ‘ನಿನ್ನ ಮೇಲೆ ಪ್ರೀತಿ ಹುಟ್ಟಿದೆ. ನಾನು ನಿನ್ನ ಪೀಯೇ ಆಗಿರುವಾಗಲೇ ನೀನು ಮೆಚ್ಚಿಗೆಯಾಗಿದ್ದೆ. ಈಗ ಅದು ಪ್ರೀತಿಯಾಗಿದೆ. ನಿನಗೆ ನನ್ನನ್ನು ನೋಡಿದರೆ ಏನನ್ನಿಸುತ್ತದೆ’ ಎಂದು ನೇರವಾಗಿಯೇ ಕೇಳಿದ್ದಳು. ಅವಳ ಆ ಪ್ರಶ್ನೆಗೆ ಉತ್ತರ ಕೊಡಲು ನಾನೇ ಹಿಂಜರಿದಿದ್ದೆ. ಇಲ್ಲ ಎನ್ನಲೂ ಮನಸ್ಸಾಗಲಿಲ್ಲ.

ಒಂದು ಹೆಣ್ಣು ನೇರವಾಗಿ ಪ್ರೀತಿಸುತ್ತೇನೆ ಎಂದಾಗ ಬೇಡ ಎನ್ನುವ ವಯಸ್ಸೂ ಅಲ್ಲ ನನ್ನದು. ಅದಕ್ಕಿಂತ ಹೆಚ್ಚಾಗಿ ಅವರ ದೇಶದಲ್ಲಿದ್ದೇನೆ ನಾನು. ಹೇಗೆ ಇಲ್ಲವೆಂದು ನೇರವಾಗಿ ಹೇಳುವುದು. ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಎನ್ನುತ್ತೇವಲ್ಲ ಹಾಗೆ ‘ಈಗ ನಾನೇನೂ ಹೇಳುವ ಹಾಗಿಲ್ಲ. ಎರಡು ದಿನಗಳ ಅವಕಾಶ ಬೇಕು’ ಎಂದಿದ್ದೆ.

ಆ ಉತ್ತರವನ್ನೇ ನೆವವಾಗಿಟ್ಟುಕೊಂಡು ಆಕೆ ನನ್ನ ಛೇಂಬರಿನೊಳಗೆ ಬರುವುದನ್ನು ಹೆಚ್ಚು ಮಾಡಿದಳು. ನನಗೂ ಏನೋ ಒಂದು ತೆರನ ಸೆಳೆತ. ಬಿಳಿ ಚರ್ಮದವಳು ಬೇರೆ. ಅವಳನ್ನು ಮೆಚ್ಚಲು ಸುರು ಮಾಡಿದೆ. ಅವಳು ಅದನ್ನು ಎಷ್ಟು ಬೇಗ ಕಂಡು ಹಿಡಿದಳೆಂದರೆ ಮತ್ತೆ ಪದೇ ಪದೇ ಬರ ಹತ್ತಿದ್ದಷ್ಟೇ ಅಲ್ಲ ಒಂದು ದಿನ ನೇರವಾಗಿಯೇ ‘ಇನ್ನು ಮೇಲಿಂದ ಒಟ್ಟಿಗೇ ಇರೋಣ ಆಗದೇ’ ಎಂದು ಕೇಳಿಯೇ ಬಿಟ್ಟಳು.  ನನಗೂ ಪರವಾಯಿಲ್ಲ ಅನಿಸಿದ್ದರಿಂದ ಒಪ್ಪಿಬಿಟ್ಟೆ. ಮಾರನೆಯ ದಿನದಿಂದಲೇ ನಾವು ಒಂದೇ ಮನೆಯಲ್ಲಿ ಇರತೊಡಗಿದೆವು. ಅಷ್ಟು ಹೊತ್ತಿಗೆ ಅಲ್ಲಿ ಸುಲಭದಲ್ಲಿ ಸಿಗುವ ಮನೆ ಸಾಲ ತೆಗೆದುಕೊಂಡು ನನ್ನದೇ ಸ್ವಂತ ಮನೆಯೊಂದನ್ನು ಮಾಡಿಕೊಂಡಿದ್ದೆ ನಾನು. ಅದೇ ಮನೆಯಲ್ಲಿಯೇ ನಮ್ಮ ಹೊಸ ಬದುಕು ಪ್ರಾರಂಭವಾದದ್ದು.

ಆದಿ ಮತ್ತು ಅಂತ್ಯ ಸುಮ್ಮನೇ ಅವನು ಹೇಳುವುದನ್ನೆಲ್ಲ ಕೇಳುತ್ತಿದ್ದಾರೆ ಅಷ್ಟೆ. ಆದರೆ `ಮದುವೆಯನ್ನೇ ಮಾಡಿಕೊಳ್ಳದೆ ಒಂದೇ ಮನೆಯಲ್ಲಿ ಇಬ್ಬರೂ ಇರತೊಡಗಿದೆವು’ ಎಂದು ಅವ ಹೇಳಿದ್ದನ್ನು ಮಾತ್ರ ಜೀರ್ಣ ಮಾಡಿಕೊಳ್ಳಲು ಆಗಲಿಲ್ಲ ಇಬ್ಬರಿಗೂ. ಅಂದೊ೦ದು ದಿನ ಶಂಕ್ರ ಈ ಬಗ್ಗೆ ಹೇಳಿದ್ದು ಅವರಿಬ್ಬರಿಗೂ ಸ್ವಲ್ಪ ಸ್ವಲ್ಪ ನೆನಪಿದೆ. ಆಗ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಇಬ್ಬರಿಗೂ ಈಗ ಅದನ್ನು ಅನಂತನೇ ಹೇಳಿದಾಗ ಕುತೂಹಲ ತಡೆದುಕೊಳ್ಳಲಾಗಲಿಲ್ಲ. ಹಾಗೆಂದು ಅಂತ್ಯ ಅಣ್ಣನನ್ನು ಕೇಳುವ ಧೈರ್ಯ ಮಾಡಲಿಲ್ಲ. ಆದಿ ಮಾತ್ರ ಕೇಳಿಯೇ ಬಿಟ್ಟ. ’ಅಲ್ಲ ಒಂದೇ ಮನೆಯಲ್ಲಿ ಒಬ್ಬ ಗಂಡಸು ಮತ್ತು ಹೆಂಗಸು ಒಟ್ಟಿಗೇ ಇರುವುದೇ.. ಅದೂ ಪ್ರಾಯಕ್ಕೆ ಬಂದವರು?

‘ಅಲ್ಲೆಲ್ಲ ಅದೂ ಒಂದು ಸಂಪ್ರದಾಯ. ‘ಒಟ್ಟಿಗೇ ಬದುಕುವುದು’ ಎಂದು. ಮದುವೆ ಆಗಬೇಕೆಂದಿಲ್ಲ. ಎಷ್ಟು ವರ್ಷದವರೆಗೂ ಹಾಗೆಯೇ ಬದುಕಬಹುದು. ಮಕ್ಕಳು ಮರಿಗಳು ಸಹ ಆಗಬಹುದು. ಯಾರೊಬ್ಬರಿಗೆ ಸಾಕು ಎನಿಸಿದರೂ ಬಿಟ್ಟು ಬೇರೆಯಾಗಿ ಬಿಡಬಹುದು’.

ನಾವೂ ಹಾಗೆಯೇ ಹತ್ತು ಹದಿನೈದು ವರ್ಷಗಳು ಜೊತೆಗೇ ಇದ್ದೆವು. ಎರಡು ಮಕ್ಕಳೂ ಆದುವು. ಆಗಲೇ ತಿಳಿದದ್ದು ನನಗೆ ಆಕೆ ತೋರಿಸಿದ ಪ್ರೀತಿಯೆಲ್ಲ ನನ್ನ ಸಂಬಳ ಮತ್ತು ಅಂತಸ್ತು ನೋಡಿ ಎಂದು. ಪ್ರೀತಿಯ ಸೋಗಿನಲ್ಲಿ ಆಕೆ ಆಡಿದ ಮಾತುಗಳೆಲ್ಲವನ್ನೂ ನಂಬಿ ನನ್ನ ಆದಾಯದಲ್ಲಿನ ಬಹಳಷ್ಟು ಭಾಗವನ್ನು ಆಕೆಗಾಗಿಯೇ ಖರ್ಚು ಮಾಡಿದೆ. ಆ ಮೂಲಕ ಬೇಕಾದಷ್ಟು ಆಸ್ತಿಯನ್ನೂ ಮಾಡಿಕೊಂಡಳು ಆಕೆ. ಹನ್ನೆರಡು ಹದಿಮೂರು ವರ್ಷಗಳು ಕಳೆಯುತ್ತ ಬಂದ೦ತೆ ಆಕೆ ನನ್ನಿಂದ ದೂರ ಸರಿಯಲು ತೊಡಗಿದಳು. ಬಹುಶಃ ಮಾಡಿಕೊಂಡ ಆಸ್ತಿ ಸಾಕೆನಿಸಿರಬೇಕು. ನಾನು ಹತ್ತಿರ ಹೋದಷ್ಟೂ  ದೂರ ಸರಿಯುವುದನ್ನು ಹೆಚ್ಚೆಚ್ಚು ಮಾಡಿದಳು. ಮಕ್ಕಳಿಗೂ ಅದು ಏನು ಹೇಳಿ ಕೊಟ್ಟಿದ್ದಳೋ. ಅವೂ ದೂರವಾಗ ತೊಡಗಿದುವು. ನಾನೆಂದರೆ ಹೆದರುತ್ತಿದ್ದುವೋ ಅಸಹ್ಯಪಟ್ಟುಕೊಳ್ಳುತ್ತಿದ್ದುವೋ ಅದೂ ತಿಳಿಯಲಿಲ್ಲ ನನಗೆ.

ಒಂದು ಕಡೆಯಿಂದ ಮದುವೆಯಾಗದಿದ್ದರೂ ಯಾರನ್ನು ನಾನು ಹೆಂಡತಿಯೆ೦ದೇ ತಿಳಿದು ಪ್ರೀತಿಸುತ್ತಿದ್ದೆನೋ ಅವಳು, ಇನ್ನೊಂದು ಕಡೆಯಿಂದ ನನ್ನ ಮುದ್ದಿನ ಮಕ್ಕಳೆಂದು ನಾನು ಪ್ರೀತಿಸುತ್ತಿದ್ದ ಆ ಮಕ್ಕಳೂ ದೂರವಾಗುತ್ತಿದ್ದಂತೆ ನನ್ನೊಳಗೇ ಏನೋ ಅನ್ನಿಸಲಿಕ್ಕೆ ತೊಡಗಿತು. ನಿಧಾನವಾಗಿ ನಾನು ಅಪ್ಪ ಅಮ್ಮನನ್ನು ಮತ್ತು ಒಡಹುಟ್ಟಿದವರನ್ನು ದೂರ ಮಾಡಿ ಬಂದದ್ದು ನೆನಪಾಗಲಿಕ್ಕೆ ತೊಡಗಿತು. ನಾನೆಂತಹ ತಪ್ಪು ಮಾಡಿದೆ ಎನ್ನುವುದರ ಅರಿವು ಮೂಡಲಿಕ್ಕೆ ತೊಡಗಿದ್ದೇ ಅದೆಲ್ಲ ನಾನು ಮಾಡಿದ ತಪ್ಪಿಗೆ ಶಿಕ್ಷೆಯೇ ಇರಬಹುದೇನೋ ಅನ್ನಿಸಲಿಕ್ಕೂ ಹತ್ತಿತು. ಹಾಗೆಂದು ಯಾರೊಡನೆ ಹೇಳಿ ಕೊಳ್ಳಲಿ? ನಿಮ್ಮ ಯಾರನ್ನೂ ಸಂಪರ್ಕಿಸುವ ಧೈರ್ಯವೂ ಬರಲಿಲ್ಲ. ಹಾಗೊಂದು ವೇಳೆ ಮಾತನಾಡುವ ಎನ್ನಿಸಿದ್ದರೂ ಮಾತಾಡುವ ದಾರಿ ಯಾವುದು. ನಿಮ್ಮ ಫೋನ್ ನಂಬ್ರವೂ ಇಲ್ಲವಲ್ಲ. ಇದ್ದೊಬ್ಬ ಶಂಕ್ರ ಅಮೆರಿಕ ಬಿಟ್ಟು ಇಂಡಿಯಾಕ್ಕೆ ಬಂದಿದ್ದ’ ಮಾತು ಪ್ರಾರಂಭಿಸುತ್ತಿದ್ದ೦ತೆ ಸ್ವರ ಗದ್ಗದವಾಗುತ್ತಿದ್ದುದು ಮುಗಿಯುತ್ತ ಬಂದ೦ತೆ  ಗೋಳೋ ಎಂದು ಅಳಲಿಕ್ಕೇ ಪ್ರಾರಂಭಿಸಿದ್ದ.

‘ಸುಧಾರಿಸಿಕೋ.. ಈಗ ಹೇಗೂ ಬಂದೆಯಲ್ಲ’ ಎನ್ನುತ್ತ ಆದಿ ಅವನ ಬೆನ್ನನ್ನು ಬಳಚಲಿಕ್ಕೆ ತೊಡಗಿದ.

ಅಣ್ಣನ ಪ್ರೀತಿಯ ಬಳಚುವಿಕೆಗೆ ತುಸು ಸುಧಾರಿಸಿಕೊಂಡವ ಮುಂದುವರಿಸಿದ.

`ನನ್ನ ವೈಯಕ್ತಿಕ ಕಷ್ಟಗಳು ನನ್ನ ಕೆಲಸದ ಮೇಲೂ ಪರಿಣಾಮ ಬೀರಲಿಕ್ಕೆ ಪ್ರಾಂಭಿಸಿದುವು. ಅಷ್ಟು ಹೊತ್ತಿಗೆ ಕಂಪೆನಿಯ ತೀರ ಮೇಲ್ಮಟ್ಟದ ಹುದ್ದೆಯಲ್ಲಿದ್ದೆ. ಕಂಪೆನಿಯ ಛೇರ್ಮನ್ನಿಗಿಂತ ಒಂದು ಮಟ್ಟ ಕೆಳಗೆ. ಅದು ನನ್ನ ಪೂರ್ಣ ಪ್ರಮಾಣದ ಗಮನವನ್ನು ಕೊಡಬೇಕಿದ್ದ ಸ್ಥಾನ. ಒಂದೆರಡು ತಿಂಗಳು ನೋಡಿದ ಅವರು ಒಮ್ಮೆ ಕರೆದು ಕೇಳಿದರು ಸಹ. ನಾನೇ ಅಂತಹುದು ಏನಿಲ್ಲ ಎಂದು ಜಾರಿಕೊಂಡೆ. ಆದರೆ ಪರಿಸ್ಥಿತಿ ಹಾಗೆಯೇ ಮುಂದುವರಿದಾಗ ಇನ್ನೊಮ್ಮೆ ಕರೆದು ಎರಡು ಗಂಟೆಗಳ ಹೊತ್ತು ಕೂರಿಸಿಕೊಂಡು ಕೌನ್ಸೆಲ್ಲಿಂಗ್ ಕೂಡಾ ಮಾಡಿದರು. ಎರಡು ದಿನಕ್ಕೆ ಸುಧಾರಿಸಿಕೊಂಡರೂ ಮೂರನೇ ದಿನ ಪುನಃ ಮೊದಲಿನ ಸ್ಥಿತಿಯೇ. ನನಗೇ ಅನ್ನಿಸಲಿಕ್ಕೆ ಹತ್ತಿತ್ತು.

‘ಇನ್ನು ಮುಂದೆಯೂ ನಿಭಾಯಿಸಲಿಕ್ಕೆ ನನ್ನಿಂದ ಸಾಧ್ಯವಾಗಲಿಕ್ಕಿಲ್ಲ’ ಎಂದು ಹಾಗೆಂದು ಮನಸ್ಸಿಗೆ ಬಂದ ಕೂಡಲೇ ನಾನೇ ಛೇರ್ಮನ್ನರಿಗೆ ನನ್ನ ರಾಜೀನಾಮೆಯನ್ನು ಕೊಟ್ಟು ಬಿಟ್ಟೆ. `ಇಲ್ಲ…. ನೀವು ಮುಂದುವರಿಯಿರಿ. ಇದೆಲ್ಲ ತಾತ್ಕಾಲಿಕ ಹಿನ್ನಡೆ. ನಿಮಗೊಳ್ಳೆ ಭವಿಷ್ಯವಿದೆ. ಇದಕ್ಕೆಲ್ಲ ಹೆದರಿದರೆ ಹೇಗೆ. ಬೇಕಾದರೆ ಒಂದೆರಡು ತಿಂಗಳು ರಜೆ ತೆಗೆದುಕೊಳ್ಳಿ. ಎಲ್ಲಿಗಾದರೂ ಟೂರ್ ಹೋಗುವುದಾದರೂ ಹೋಗಿ’ ಎಂದ ಅವರು ನನ್ನನ್ನು ‘ಖಂಡಿತಾ ಕಂಪೆನಿ ಬಿಡಬೇಡಿ’ ಎಂದೂ ಒತ್ತಾಯಿಸಿದರು. ಆದರೆ ನನ್ನ ಮನಸ್ಥಿತಿಯ ಪೂರ್ಣ ಅರಿವು ಇದ್ದದ್ದು ನನಗೆ ಮಾತ್ರ ಅಲ್ಲವೇ. ಹಾಗಾಗಿ ನಾನು ಒಪ್ಪಲಿಲ್ಲ. ನಮ್ಮ ದೇಶಕ್ಕೆ ಹಿಂತಿರುಗುವದಾಗಿ ಹೇಳಿದೆ. ಅದಕ್ಕೂ ಅವರು ಒಪ್ಪಲಿಲ್ಲ. ನನಗೆ ಬೇರೆ ದಾರಿಯೇ ಕಾಣಲಿಲ್ಲ.

। ಇನ್ನು ನಾಳೆಗೆ ।

‍ಲೇಖಕರು Admin

July 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: