ಸರೋಜಿನಿ ಪಡಸಲಗಿ ಅಂಕಣ- ಒಮ್ಮೊಮ್ಮೆ ಮೆತ್ತಗಾಗಿ ಬಿಡ್ತಿದ್ಲು ಏಕಾ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

9

ನಮ್ಮ ಏಕಾಂದು  ಭಾಳ ಖಟಿಪಿಟಿ  ಜೀವ. ಯಾವುದನ್ನೂ ಹೋಗಲಿ ಬಿಡು, ಆಧಾಂಗ  ಆತು ಅಂತ  ಹಗುರಾಗಿ  ತಗೊಂಡು ಕೈ ಬಿಡು  ಸಾಧ್ಯತಾನೇ  ಇದ್ದಿದ್ದಿಲ್ಲಾ; ಅದು  ಆಕಿ  ಜಾಯಮಾನನs  ಅಲ್ಲ. ಆಕಿ  ಉಮ್ಮೇದಿ,  ಹುರಪನೂ  ಆಕಿ  ವ್ಯಕ್ತಿತ್ವಧಂಗನs  ವಿಶಾಲ ವ್ಯಾಪ್ತಿಯುಳ್ಳದ್ದು. ಸುತ್ತಲೂ  ಹರಡಿ  ತಂಪು, ಕಂಪು  ಹರಡೂ  ಅಂಥಾದ್ದು. ತುಸಾ ಥೋಡೆದ್ದಕ್ಕ ಅಲ್ಲಾಡೋ  ಜೀವ  ಅಲ್ಲ ಅದು. ಆದರ ಅಂಥಾಕಿನ್ನೂ  ಅಲ್ಲಾಡಿಸಿ  ಬಿಡೂ  ಅಂಥಾ  ಪ್ರಸಂಗನೂ  ಬರತಿದ್ವು. ನಮ್ಮಜ್ಜ ರಾವಸಾಹೇಬ್ರ ಅಕಾಲಿಕ ಮರಣ, ಆ ಎರಡು  ತಿಂಗಳ ಎಳೇ ಕಳಲಿನ  ಸಾವಿನ  ಆಘಾತ  ಆಕೀನ್ನ  ಆಕಿಗೇ  ಗೊತ್ತಾಗಧಾಂಗ   ಎದೀ ಒಂದು ಮೂಲೀ ಒಳಗೆ  ಮೆತ್ತಗ  ಮಾಡಿತ್ತು.

ಆದರ  ಆ  ಕಷ್ಟಗಳನ  ತನ್ನ ತಾಬಾದಾಗ  ಇಟ್ಕೊಂಡು  ಅವುಗಳ  ಆಟಾನ  ಹತೋಟಿ ಒಳಗ ನಿಲ್ಲಿಸಿ  ಯಾವ ನೆಲಿ,  ಆಸರಾ  ಇಲ್ಲದ  ತನ್ನ,  ತನ್ನ ಮಗನ  ಜೀವನಕ್ಕ ಒಂದು  ರೂಪಾ  ಆಕಾರ  ತಂದಕೊಂಡಿದ್ಲು  ಇದ್ದ ಒಂದೇ ಒಂದು ಆಸರೆಯ ಮದತಿನಿಂದ (ಸಹಾಯದಿಂದ)- ಆ  ಆಸರೆ   ಅಂದ್ರ ಅವಳ  ಗಟ್ಟಿ ಧೈರ್ಯ, ಧೃಡ ಚಿತ್ತ. ಆದರೂ  ಅದನ್ನೂ ದಾಟಿ ಒಮ್ಮೊಮ್ಮೆ  ಮೆತ್ತಗಾಗಿ ಬಿಡ್ತಿದ್ಲು ಏಕಾ; ಅಸಹಾಯಕತಾ  ಇಣಕಿ  ಬಿಡ್ತಿತ್ತು. ಅಷ್ಟs  ಒಂದ ಸ್ವಲ್ಪ ಹೊತ್ತು. ಮತ್ತ  ಏಕಾ ಅದs ಮೊದಲಿನ  ಏಕಾನೇ  ಆಗಿ ಬಿಡ್ತಿದ್ಲು.

ನಾ  ಎಸ್.ಎಸ್. ಎಲ್. ಸಿ.ಯೊಳಗ  ಇದ್ದಾಗಿನ  ಮಾತಿದು. ನಮ್ಮ ಅಣ್ಣಾ ಎಂ. ಏ. ಮುಗಿಸಿ ಕೊಂಡು ಬಂದ್ರು. ಯಾಕೋ  ಸತತ ಎರಡ  ವರ್ಷದ  ಮಳೆಗಾಲ ‌‌ಒಂಚೂರು ಹಂಗಂಗೇ ಆತು. ಹಿಂಗಾಗಿ ತೋಟದ  ಬಾವಿಗೆ ನೀರು  ಕಡಮಿ ಆತು. ತೋಟದಾಗನs ಹರೀತಿದ್ದ ಹಳ್ಳಕ್ಕೂ ನೀರು ಕಡಮಿ ಆಗಿ ಹೊಲದಾಗಿನ ಬಿಡಿಗಾವಲಿ ಹೆಚ್ಚು ಕಡಿಮಿ ಬತ್ತಿ ಹೋದ ಹಾಂಗ ಆತು. ಅಷ್ಟ ದೊಡ್ಡ ಜಮೀನು; ನೀರು ಸಾಲಧಾಂಗ ಆಗಿ ಅಣ್ಣಾ ವಿಚಾರ  ಮಾಡ್ಲಿಕ್ಹತ್ರು  ಏನು ಹೆಂಗ  ಮಾಡೂದಂತ. ಕಡೀಕ ಏಕಾ ಹೇಳಿಧಾಂಗ ಇನ್ನೊಂದ ಭಾಂವಿ ತಗಸ್ಲಿಕ್ಕ  ಶುರು  ಮಾಡಿದ್ರು. 

ಆ ಬಾವಿ  ಕೆಲಸ  ಶುರು  ಆದ ಕೂಡಲೇ  ದಿನಾ  ಮುಂಜಾನೆ  ಆರು ಗಂಟೆಗೆ  ಬೆಳವಿಗೆ  ಹೊರಟು  ಬಿಡೋರು  ಅಣ್ಣಾ.  ಬಿಸಿಲ  ಏರೂದ್ರಾಗ  ಆಳು ಭಾಂವಿ  ಕಡಿಯೂ  ಕೆಲಸಾ ಶುರು  ಮಾಡಾವ್ರು. ಆಮ್ಯಾಲೆ  ಅಣ್ಣಾ ಹತ್ತ ಹೊಡಿಯೂ ತನಕಾ  ಅಲ್ಲಿದ್ದು , ಮನಿಗೆ ಬಂದು  ಗಡಾಬಡಾ  ಸ್ನಾನ , ಪೂಜಾ, ಊಟಾ ಮುಗಿಸಿ  ಸಾಲಿಗೆ  ಹೋಗೋರು. ಅದs ವ್ಯಾಳ್ಯಾದಾಗ  ಅಣ್ಣಾ  ಬಸವಣ್ಣನವರ  ಬಗ್ಗೆ  ಒಂದು ಸಂಶೋಧನಾ  ಕೆಲಸಾನೂ  ನಡಸಿದ್ರು. ನಮ್ಮೂರ  ಸಮೀಪದ  ಅರ್ಜುನವಾಡದಾಗ  ಬಸವಣ್ಣನವರ  ಹುಟ್ಟಿದ ಸ್ಥಳದ ಬಗ್ಗೆ ಕೆಲವು  ಶಾಸನಗಳು  ಸಿಕ್ಕಿದ್ವು. ಅವುಗಳ  ಅಭ್ಯಾಸದ  ಸಲುವಾಗಿ  ಸಾಲಿ  ಮುಗಿಸಿ ಕೊಂಡು  ಅಣ್ಣಾ  ಅರ್ಜುನವಾಡಗೆ  ಹೋಗ್ತಿದ್ರು. ಮನಿಗೆ ಬಂದು ಊಟಾ ಮುಗಿಸಿ ರಾತ್ರಿ ಬಹಳ ಹೊತ್ತಿನವರೆಗೂ ಅದರ  ಅಭ್ಯಾಸ  ಮಾಡ್ತಿದ್ರು. ಮತ್ತ  ಮುಂಜಾನೆ ಲಗೂನ ಏಳೂದು. ಈ ಎಲ್ಲಾ ಕೆಲಸಗಳ ಜೋಡಿ ತುಂಬಿದ ಸಂಸಾರದ ಜವಾಬ್ದಾರಿ, ತೋಟ ಪಟ್ಟಿಯ ದೇಖರೇಖಿ ಎಲ್ಲಾ ಸೇರಿ  ಆಯಾಸದಲೇ  ಅಣ್ಣಾಗ  ಜ್ವರ ಬಂದು  ಅದು ಟೈಫಾಯಿಡ್ ಗೆ  ತಿರಗ್ತು. ಆ ಮುದ್ದತ್ತಿನ  ಜ್ವರಾ  ಮೂರು ಸಲ ತಿರು ತಿರುಗಿ ಬಂತು.

ಅವ್ವಾನ  ಗಾಬರಿ, ಕಾಳಜಿಗಿಂತಾ  ಏಕಾನ  ಗಾಬರಿ  ಎಲ್ಲಾರನೂ  ಹೆದರಿಸಿ ಬಿಟ್ತು. ಅದಕ್ಕ ಕೊಂಬ  ಹಚ್ಚಿಧಾಂಗ  ಅವ್ವಾನೂ ಮಲಗಿದ್ಲು  ಜ್ವರಾ  ಬಂದು. ಹೀಂಗೇ  ಒಬ್ಬೊಬ್ರಾಗಿ  ಎಲ್ಲಾರೂ  ಮಲಕೊಂಡ  ಬಿಟ್ರು ಜ್ವರದಲೇ- ಅಣ್ಣಾ, ಅವ್ವಾ, ಮೂರು ಮಂದಿ  ತಮ್ಮಂದ್ರು, ತಂಗಿ; ಒಟ್ಟು  ಆರು  ಜನ. ನಾನು, ಏಕಾ  ಇಬ್ರೇ  ಆರಾಮ  ಇದ್ದದ್ದು.ನಮ್ಮಣ್ಣ  ಕಾಲೇಜಿಗೆ  ಧಾರವಾಡದಲ್ಲಿ  ಇದ್ದ. ಏಕಾ ಮನಿ ಒಳಗಿಂದೆಲ್ಲಾ ಮಾಡೂದು- ಆರಾಮ  ಇಲ್ಲದವರ ಆರೈಕಿ, ಉಪಚಾರ, ಬಿಸಿ ನೀರು, ಪಥ್ಯ ಅಂತ. ನಾ ಹೊರಗಿಂದೆಲ್ಲಾ  ನೋಡ್ಕೋತಿದ್ದೆ- ಡಾಕ್ಟರ್ ನ  ಕರಕೊಂಡು ಬರೋದು, ಅವರು ಬರಕೊಟ್ಟ ಔಷಧಿ, ಗುಳಿಗೆ ತರೋದು, ಎಲ್ಲಾರಿಗೂ ಟೈಂಶೀರ ಕೊಡೋದು, ಹಣ್ಣು -ಹಂಪಲು, ಬೇಕಾಗೋ ಸಾಮಾನು ತರೋದು; ಹೀಗೇ ನಡದಿತ್ತು.ಏಕಾನ  ನೆರಳಿನ್ಯಾಗ  ಬೆಳದ ನನಗೂ ಆಕೀದೇ  ಗಟ್ಟಿತನ ಬಹುಶಃ  ಬಂದಿತ್ತು ಅನಸ್ತದ.

ಇಂಥಾದ್ರಾಗ  ಹೋಳಿ ಹುಣ್ಣಿಮೆ ಬಂತು. ಆ  ದಿನ  ಹೋಳಿ ಪೌರ್ಣಿಮಾ. ಜಡ್ಡಿನವರದೆಲ್ಲಾ  ಮುಗಿಸಿ  ಏಕಾ  ಮಡಿ ಉಟ್ಕೊಂಡಾಗ  ಗಡಿಯಾರದ  ಮೂರು ಗಂಟಿ  ಹೊಡ್ದಿದ್ದು. ಆಕೀ ಅಂತೂ  ಬಾಯಾಗ  ಒಂದ  ಹನಿ ನೀರು ಸುದ್ಧಾ  ಹಾಕಿದ್ದಿಲ್ಲ. ನಾನೂ  ಬರೀ ಒಂದು ಕಪ್ಪು  ಹಾಲು  ಕುಡಿದಿದ್ದು; ಚಹಾ  ಕಾಫಿ  ಪ್ರಶ್ನೆನ  ಇದ್ದಿದ್ದಿಲ್ಲ. ನನಗೂ ಯಾಕೋ  ಹಸಿವು, ನೀರಡಿಕೆ  ಎಲ್ಲಾ ‌‌‌‌‌‌‌‌‌  ಇಂಗಿ ಹೋಗಿ  ಬಿಟ್ಟಿತ್ತು. ಆ  ದೊಡ್ಡ  ನಡುಮನಿ  ತುಂಬ  ಹಾಸಿಗೆ; ಈ ಕಡೆ  ಮೂರು,  ನಡುವ  ಹಾದಿ  ಬಿಟ್ಟು ಈ  ಕಡೆ ಮೂರು ‌‌  ಗಾದಿ  ಹಾಕಿದ್ವಿ. ಅವರೆಲ್ಲ  ರಗ್ಗು ‌ಕಂಬಳಿ, ಹೊದ್ದು ಕೊಂಡು ನರಳಕೋತ  ಮಲಗಿದ್ದ  ನೋಡಿ  ಒಂಥರಾ  ಅನಸೂದು. ಸಣ್ಣ ತಮ್ಮ, ತಂಗಿ  ಕಸಿವಿಸಿ  ತಾಳಲಾರದೆ  ಕೈ ಕಾಲು  ಎತ್ತೆತ್ತಿ  ಒಗಿಯೋವು  ಮಕ್ಕಳು. ಅದೆಲ್ಲಾ ಕಣ್ಣ ಮುಂದೆ ‌‌  ಹಾದ ಹೋಗಿ ಸಂಕಟ ಆಗ್ತದ  ಈಗ ಸುದ್ಧಾ.

ದೇವರ  ಪೂಜೆ  ಮಾಡೋರು  ಯಾರೂ  ದಿಕ್ಕಿದ್ದಿಲ್ಲ. ಆಚಾರ್ಯರನ್ನ  ಕರೆಸಿ  ಪೂಜಾ ಮಾಡಸಲಿಕ್ಕಾಗದಷ್ಟು  ಬೇಚೈನ  ಮನಸಿನ ತುಂಬ  ತುಂಬಿಕೊಂಡ  ಬಿಟ್ಟಿತ್ತು. ಏಕಾನೇ  ದೇವರ  ಮುಂದೆ  ತುಪ್ಪದ ದೀಪ ಹಚ್ಚಿಟ್ಟು  ದೇವರಿಗೂ ಎರಡು  ಮುಸಂಬಿ  ಹಣ್ಣೇ  ನೈವೇದ್ಯ ಮಾಡಿ ಕೈ  ಮುಗದ್ಲು. ನನಗೂ  ಊಟಕ್ಕ ಹಾಕಿ ತಾನೂ  ಕೂತ್ಲು  ಏಕಾ. ಇಬ್ರೂ ತುತ್ತು ಎತ್ತದೇ  ಸುಮ್ಮ ಕೂತಿದ್ವಿ. ಹಂಗ ಕೂತ  ಏಕಾನ  ಕಣ್ಣಾಗ ನೀರು  ತುಂಬಿ ‌‌ ಗಲ್ಲದ ಮ್ಯಾಲೆ  ಜಾರಿದು. ಮೌನವಾಗಿ  ಅಳ್ಳಿಕ್ಹತ್ತಿದ್ಲು  ಏಕಾ.

ಎಂದೂ  ಏಕಾನ  ಕಣ್ಣಾಗ  ಒಂದ  ಹನಿ  ನೀರ  ಕಂಡಿದ್ದಿಲ್ಲ  ನಾ. ಆಕಿ  ತನ್ನ  ಜೀವನದ  ದುಸ್ಸಹ  ಘಟನೆ  ಹೇಳು ‌‌ ಮುಂದ  ಸುದ್ಧಾ. ಅಂಥಾಕಿ  ಆ ಹೊತ್ತು  ತನ್ನ  ಗಟ್ಟಿತನದ  ಲಕ್ಷ್ಮಣ ರೇಖಾ  ದಾಟಿ  ಹೊರಗ  ಬಂದು ಬಿಟ್ಲು; ಕಣ್ಣೀರಾಗ  ಮುಳುಗಿ  ಹೋದ್ಲು. “ಯಾಕ ಏಕಾ , ಹಿಂಗ್ಯಾಕ? ನೀ ಅಂದ್ರ ಏನು, ಹೀಂಗ ಅಳೂದ  ಅಂದ್ರ ಏನು ಏಕಾ? ತಗೋ  ತುತ್ತು ತಗೋ, ಒಂಚೂರರೇ ತಿನ್ನು” ಅಂತ  ಹೇಳ್ದೆ  ನಾನೂ ಅಳಕೋತನs. ” ಅಕ್ಕವ್ವಾ  ಯಾಕೋ  ನನಗೆ  ನೀಗಲಾರಧಾಂಗ  ಅನಸ್ಲಿಕ್ಕ ಹತ್ತೇದ. ತಲಿಗೆ  ಒಂಥರಾ ದಮಣೂಕ (ದಣಿವು) ಆಗೇದ. ಈ  ಹೊತ್ತಿನ ಹೋಳಿ  ಹುಣ್ಣಿವಿ  ಯಾವಾಗ ಸರದೀತು  ಅಕ್ಕವ್ವಾ ಠಾಂವಿಕಿ ಆಗವಲ್ಲತು.(ಗೊತ್ತ ಆಗವಲ್ಲತು) ಅಂತ  ಮತ್ತ  ಅಳು ಅಕಿಗೆ.

ನನಗ  ಆ  ಮಾತು  ಎಲ್ಲಿಂದ , ಹೆಂಗ ಹೊಳೀತೋ ಗೊತ್ತಿಲ್ಲ.” ಏಕಾ  ಇನ್ನೇನ  ರಂಗಪಂಚಮಿ  ಬಂದೇ ಬಿಡ್ತಲಾ. ಹೋಳಿ ಹುಣ್ಣಿಮಿ  ತಾನs  ಹಿಂದ ಸರದ ಬಿಡ್ತದ ಏಕಾ. ನೀ ಒಂಚೂರ ತಿನ್ನ ಮೊದಲು. ಮತ್ತ ನಾಳಿನ  ತನಕಾ ಏನೂ  ತಿನ್ನಾಂಗಿಲ್ಲ ನೀ”   ಅಂದೆ. ” ಹೌದ  ಬಾಳಾ  ಖರೇ ನೀ ಹೇಳೂದು.ರಂಗಪಂಚಮಿ ಬರಲಿಕ್ಕೇ ಬೇಕಲಾ. ನೀನೂ  ತಿನ್ನ ಕೂಸ s ” ಅಂದ್ಲು. ಒಂದ ಅನ್ನಾ, ಮೆಂಥ್ಯಹಿಟ್ಟು, ತುಪ್ಪಾ, ಗೋಧಿಹಿಟ್ಟಿಂದು  ಥಾಲಿಪಿಟ್ಟು, ಅದೇನೋ ಸ್ವಲ್ಪ ಸಿಹಿ  ಥಾಲಿಪಿಟ್ಟು ಇದ್ಧಾಂಗ  ಇತ್ತು. 

ಆಕಿ  ಏನ  ತಿಂದ್ಲೋ  ನನಗ  ಕಾಣಿಸಲಿಲ್ಲ; ನಾ ತಿಂದಿದ್ದು  ಅಕಿಗೆ ಕಾಣಸಲಿಲ್ಲ. ಇಬ್ರೂ ಎಲಿ ಬಿಟ್ಟು ಎದ್ವಿ; ಕೈ ತೊಳಕೊಂಡ  ಬಂದ್ವಿ. ಅಷ್ಟ  ಮಾತ್ರ  ಖರೇ.

ರಂಗಪಂಚಮಿನೂ  ದಾಟ್ತು. ಒಬ್ಬೊಬ್ಬರೇ  ಆರಾಮ  ಆಗಲಿಕ್ಹತ್ತಿದ್ರು. ಯುಗಾದಿ ಹೊತ್ತಿಗೆ  ಅಣ್ಣಾನೂ  ಪೂರಾ ಆರಾಮ  ಆದ್ರು. ಹಬ್ಬಕ್ಕ  ಒಂದಿನದ  ಪೂರ್ತೆ  ಧಾರವಾಡದಿಂದ  ನಮ್ಮ ಅಣ್ಣನೂ  ಬಂದಿದ್ದ. ಎಲ್ಲಾರೂ ಕೂಡಿ  ಹಬ್ಬಾ ಮಾಡಿದ್ವಿ; ಸಣ್ಣ ಪ್ರಮಾಣದ  ಸತ್ಯನಾರಾಯಣ ಪೂಜೆಯೊಂದಿಗೆ. ಆ  ದಿವಸ  ಏಕಾ ನನಗ  ದೃಷ್ಟಿ ತಗದು,  ಮಾರಿ ಮ್ಯಾಲಿಂದ  ಏನೋ  ಇಳಿಸಿ  ನಿವಾಳಿಸಿ  ಛಲ್ಲಿದ್ಲು. ನನಗ  ಆಶ್ಚರ್ಯ ಆತು. ” ಯಾಕ  ಏಕಾ”  ಅಂತ ಕೇಳೇ ಬಿಟ್ಟೆ .” ಈ  ವಯಸ್ಸಿಗನೇ  ಅದೆಷ್ಟ ತಿಳುವಳಿಕೆ  ನಿಂಗ  ಅಕ್ಕವ್ವಾ. ಪ್ರತಿ ಒಂದ  ವಿಷಯದ  ಮಾಹಿತಿ ಅದ ನಿಂಗ. ಯಾವ ಪರಿ ಧಾವಪಳ  ಅದು! ನಾ ಗಾಬರಿ ಆಗಿ ಬಿಟ್ಟಿದ್ದೆ  ಎಲ್ಲಿ ನೀನೂ  ಮಲಕೋತಿಯೋ ಅಂತ. ಆದರ ನೀ ಗಟ್ಟಿ ನಿಂತಿ; ಮಲಗಲಿಲ್ಲಾ. ಅದ್ಕೇ  ನಿಂದು, ನಿನ್ನ ತಿಳವಳಕೀದು  ದೃಷ್ಟಿ ತಗದ ಛಲ್ಲಿದೆ  ಅಕ್ಕವ್ವಾ ” ಅಂದ್ಲು ಏಕಾ. ಗಂಟಲ  ನರಾ ಉಬ್ಬಿ ಬಂದು ಆಕಡೆ  ಹೊಳ್ಳಿದ್ಲು ಏಕಾ.

ಹೀಂಗ  ಏಕಾ  ಒಂದೊಂದ ಸಲಾ ಮೆತ್ತಗಾದಾಗ  ನೋಡಿ  ಒಂಥರಾ ಅನಸೂದು. ಆಕೀನ್ನ  ಹಂಗ ನೋಡಿ ರೂಢೀನೇ ಇರಲಿಲ್ಲ. ಇನ್ನೊಂದ  ಅಗದೀ ಜೀವಾನs ಝಲ್ಲೆನ್ನಿಸಿ  ಬಿಡೂ  ಅಂಥಾ ಪ್ರಸಂಗ.

ನಂದು  ಎರಡನೇ ಹೆರಿಗೆ  ಆಗಿತ್ತು  ಆಗ. ಬಾಣಂತನ  ಅಲ್ಲೇ ನನ್ನ  ತೌರು  ಹುಕ್ಕೇರಿಯಲ್ಲೇ ನಡದಿತ್ತು. ಎರಡನೇದಾಕಿ  ಮಗಳು  ನಂಗೆ. ಆ ಕೂಸಿಗೆ  ಒಂದೂವರೆ ತಿಂಗಳ  ಆಗಿತ್ತು. ನನ್ನ  ದೊಡ್ಡ  ಮಗನಿಗೆ  ಸವ್ವಾ ಎರಡ  ವರ್ಷ ಆಗಿತ್ತು.

(ಎರಡು ವರ್ಷ ಮೂರು ತಿಂಗಳು). ಮಗಳಿಗೆ  ಮೈಲಿ  ವ್ಯಾಕ್ಸಿನೇಷನ್  ಹಾಕಿಸಿಕೊಂಡು  ಬಂದು ಏಳು ದಿನ  ಆಗಿತ್ತು ಅಂದಿಗೆ; ಕೂಸಿಗೆ  ಕೆಂಡಾ ಮಂಡ  ಜ್ವರ. ಅದೇ  ಟೈಂ ಗೆ  ಸರಿಯಾಗಿ   ಮಗನಿಗೂ  ಜ್ವರ  ಸುರು ಆತು. ಅಲ್ಲಿನ  ನಮ್ಮ ಫ್ಯಾಮಿಲಿ ಡಾಕ್ಟ್ರು  antibiotics , ಮತ್ತೆ ಕೆಲ  ಗುಳಿಗೆ ಕೊಟ್ರು. ಜ್ವರ  ಕಡಿಮಿ ಆತು.

ಜ್ವರ ಕಡಿಮಿ ಆತು ಅಂತ  ನಿರಾಳ  ಆಗೂದ್ರಾಗ  ಭೇದಿ  ಶುರುವಾಗಿ  ಮಗು  ನಿರ್ವಿಣ್ಣಾತು. ಬೆಳ್ಳಂಬೆಳಗು ‌‌‌‌‌‌‌‌‌‌‌ ಭೇದಿ  ಜೊತೆ  ವಾಂತಿನೂ  ಶುರು ಆಗಿ  ಸುಸ್ತಾಗಿ  ಕಣ್ಮುಚ್ಚಿ ಮಲಗಿ ಬಿಟ್ಟ.ನನ್ನ  ತೊಡೆ  ಬಿಟ್ಟು  ಅಲ್ಲಾಡಲೇ  ಇಲ್ಲ. ಆ ಎಳೆ ಕೂಸು ಮಗಳು  ಜ್ವರದ  ತಾಪಕ್ಕ  ತಪಗೊಂಡು  ತೊಟ್ಟಿಲದಾಗ  ಮಲಗಿ ಬಿಟ್ಟಿತ್ತು. ತೊಡಿ ಮ್ಯಾಲೆ ಮಗ!  ನಮ್ಮವ್ವ ನನಗೆ  ಅಲ್ಲೆ ಮಂಚದ  ಮ್ಯಾಲೆನೇ  ಹಿಂದೆ  ಆನಿಕೆಗೆ ಒಂದು ‌‌ ಲೋಡು, ಒಂದು ತೆಕ್ಕೆ  ಕೊಟ್ಟಿದ್ಲು.   ಡಾಕ್ಟರ್ ಹೇಳಿದ  ಹಾಂಗ ಕುದಿಸಿ ಆರಿಸಿದ ನೀರಿಗೆ  ಸಕ್ಕರೆ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ  ಕಲಕಿ ಮ್ಯಾಲಿಂದ  ಮೇಲೆ ಕುಡಿಸಿಗೋತ ಕೂತಿದ್ವಿ.ಮುಚ್ಚಿದ ಕಣ್ಣ   ತಗೀಲಾರದೇ ನನ್ನ ತೊಡೆ ಮೇಲೆ ಮಗ  ಮಲಗಿದ್ದ.; ಅಲ್ಲಿ ತೊಟ್ಟಿಲದಾಗ  ಕೂಸು. ನಮ್ಮವ್ವ  “ಆ  ಕೂಸಿಗೆ ಹಾಲು ಕುಡಿಸು ಸ್ವಲ್ಪ” ಅಂತ. ಬೇಡ  ಆ‌ ದಿನದ  ‌‌‌‌‌‌‌‌‌‌‌‌‌‌‌‌‌‌‌‌ಪಡಿಪಾಟಲು.

ಈ  ಪಡಿಪಾಲದ  ನಡುವೆ  ಏಕಾನ  ಮಾರಿ  ನೋಡಿ   ನನ್ನ‌‌ ‍‍ಜೀವ ‌‌ ನಡುಗಿ  ‌‌‌‌‌ ಹೋತು.  ಆ ದಿನ ರಾಮನವಮಿ ಇತ್ತು. ಆಚಾರ್ಯರು ಮುಂಜಾನೆ ಲಗೂನ  ಬಂದು  ದೇವರ ಪೂಜೆ ಮಾಡಿ ಹೋಗಿದ್ರು. 

ಆದರ  ಏಕಾ ನಾ  ನನ್ನ ಮಗನ್ನ  ತೊಡಿ ಮ್ಯಾಲೆ ಮಲಗಿಸಿ ಕೊಂಡು  ಕೂತಿದ್ದ  ಮಂಚ  ಹಿಡಕೊಂಡ  ನನ್ನ ಮಗನ  ಮಾರಿ  ನೋಡಕೋತ ಕೂತಾಕಿ  ಜಾಗಾ  ಬಿಟ್ಟು ಹಲಾಸಿದ್ದಿಲ್ಲ. ಆಕಿ  ಮಾರಿ  ಅಂಬೂದು  ಹುಚ್ಚೆದ್ದ  ಹೋಗಿತ್ತು. ಒಮ್ಮೆ ನನ್ನ ಮಾರಿ  ನೋಡಾಕಿ; ಒಮ್ಮೆ ಮಗೂನ  ಮಾರಿ ನೋಡಾಕಿ; ಮಗದೊಂದು ಗಳಿಗೆಗೆ  ಆಕೀ  ಲಕ್ಷ್ಯ ಎಲ್ಲೋ  ಹಾರತಿತ್ತು. ಅದನ್ನೆಲ್ಲಾ  ನೋಡ್ತಿದ್ದ  ನಂಗ  ಅಂದಾಜು  ಸಿಕ್ಕಿತ್ತು , ಆಕೀ ಮನಸಿನ್ಯಾಗ  ಅಚ್ಚೊತ್ತಿದ  ಆ ಕಹಿ ನೆನಪು, ಆ ಆಘಾತಕಾರಿ  ಗಳಿಗೆ  ಹೊಡಮರಳಿ  ಬಂದು  ಆಕೀನ್ನ  ಕಾಡ್ಲೀಕ್ಹತ್ತೇದ  ಅಂತ.‌ ಆ  ಘಟನಾ, ನಮ್ಮಜ್ಜನ  ಸಾವಿನ ಘಟನೆ ಆಗಿ ಸುಮಾರು 47-48  ವರ್ಷ ಆಗಿದ್ರೂ  ಆಕೀ  ಜೀವನದ  ದಿಕ್ಕನ್ನೇ ಬದಲಿಸಿ ಬಿಟ್ಟ ಆ ಅನಿರೀಕ್ಷಿತ ತಿರುವು, ಆ ಶಾಕ್  ಆ  ಎಳೀ ವಯಸ್ಸಿನ್ಯಾಗ  ಆಕೀ ಮೃದು  ಮನಸಿನ್ಯಾಗ  ಹಸೀ  ಗೋಡೆಯೊಳಗ  ನಟ್ಟ ಹಳ್ಳಿನ್ಹಾಂಗ  ಆಳವಾಗಿ   ನೆಟ್ಟದ್ದರ  ಪುಟ್ಟ ಪೂರಾ ಕಲ್ಗನಾ ಏಕಾನ  ಆ  ಒಂದು  ನೋಟದಾಗ  ಸಿಕ್ಕಬಿಟ್ತು.

ಆ  ಕ್ಷಣಕ್ಕ  ನಮ್ಮ ಏಕಾನ ಮ್ಯಾಲಿನ  ನನ್ನ  ಗೌರವ ನೂರು ಪಟ್ಟು ಹೆಚ್ಚಾತು. ಇಂಥಾ  ಆಳವಾದ  ದು:ಖ, ಸಂಕಟಾನ  ಅದ ಹೆಂಗ  ಒಳಗs  ಅದುಮಿ ಇಟ್ಕೊಂಡು  ಒಂಚೂರೂ ಆಕಡೆ ಈಕಡೆ  ಆಗಧಾಂಗ  ಅದ ಹೆಂಗ ಇಲ್ಲಿ ತನಕಾ ನಡದು ಬಂದಿದ್ದಾಳು  ಅಂತ. ಹೇಳಲಾಗದ  ನೋವಿನ  ಸೆಳಕು ಒಂದು  ಸುಳಿದು ಹೋತು ನನ್ನ  ಮಗನ ಸ್ಥಿತಿನೂ  ಕ್ಷಣಕಾಲ ಮರಸೂ ಹಾಂಗ.

ನನ್ನ ಮೂರೂ  ಮಕ್ಕಳು  ದಿನಾ ತುಂಬೂಕಿಂತ  ಮೊದಲೇ ಹುಟ್ಟಿದ್ದು; ಡಾಕ್ಟರ್ ಮಾತಿನ್ಯಾಗ  ಹೇಳ ಬೇಕಂದ್ರ ನನ್ನ ಮಕ್ಕಳು Premature babies. ಹಿಂಗಾಗಿ  ಸ್ವಲ್ಪ ಕಡಿಮೆ ತೂಕದ್ದು, ಸಣ್ಣವು  ಇರೋವು. ನನ್ನ  ದೊಡ್ಡ  ಮಗ  ಹುಟ್ಟಿದಾಗ  ಡಾಕ್ಟರ್ ಆದ  ನನ್ನ ಗಂಡನೇ  ಮುಖ  ಸಪ್ಪಗೆ ಮಾಡಿ ಕೊಂಡು,” ಏಕಾ, ಕೂಸು  ಭಾಳ  ಸಣ್ಣದ  ಅದ  ಅಲ್ರೀ? ಹೆಂಗ  ಸಂಭಾಳಸೂದು  ತಿಳೀವಲ್ಲತು”  ಅಂದಾಗ  ಏಕಾ ” ಮತ್ತೇನು, ಅದೇ ಆಗ  ಹುಟ್ಟಿದ  ಕೂಸೇನು  ಎತ್ತಿ  ಬಗಲಾಗ  ಕೂಡಿಸಿ ಕೊಳ್ಳೂ  ಹಂಗ  ಇರತಾವೇನು? ಅದರಾಗ  ಒಂಚೂರ  ಸಣ್ಣಾಂವ  ಇದ್ದಾನ  ಇಂವಾ. ಇರಲೇಳ್ರಿ. ಎಣ್ಣಿ ನೀರು  ಬಿದ್ಧಾಂಗ  ಕೂಸು  ಚಿಗರಿ  ಜಿಗರಾಗಿ  ಬೆಳೀತಾನ. ಅವ್ವನ  ಹಾಲು  ಗುಟು ಗುಟು  ಕುಡಿದ ಅಂದ್ರ  ತಿಂಗಳ ತುಂಬೂದ್ರಾಗ  ತೊಟ್ಟಿಲ  ತುಂಬ ಮಲಗ್ತಾನ. ಅಜೀಬಾತ  ಕಾಳಜಿ ಮಾಡಬ್ಯಾಡ್ರಿ.ನನ್ನ  ಮರಿಮೊಮ್ಮಗನ್ನ  ಹೆಂಗ  ತಯಾರ ಮಾಡ್ತೀನಿ ನೋಡಾಕ್ರ್ಯಂತ.” ಅಂತ  ನಕ್ಕೋತ  ಧೈರ್ಯಾ  ಹೇಳೂ  ಏಕಾನs  ಹೀಂಗ  ಕೂತದ್ದ ನೋಡಿ  ನನ್ನ  ಕೈ ಕಾಲಾಗಿನ  ಶಕ್ತಿನs  ಸೋರಿ ಹೋದ  ಹಂಗಾತು. ತಡೀಲಾರದ‌  ಹೇಳ್ದೆ – ” ಏಕಾ  ನೀನೇ ಹೀಂಗ  ಕೂತ್ರ  ನಾ  ಏನ ಮಾಡ್ಲಿ  ಏಕಾ”  ಅಂದೆ. ತಿಂಗಳ  ಕೂಸಿನ್ನ  ತೊಡಿ ಮ್ಯಾಲ ಹಾಕೊಂಡ ಕೂತಿದ್ದ  ನಮ್ಮವ್ವ ” ಏಳ್ರಿ  ನೀವಿನ್ನ. ಮೂರೂವರಿ ನಾಕಾತು. ಮಡಿ ಉಟ್ಕೊಂಡ  ಒಂಚೂರ  ಏನ್ರೆ ಬಾಯಾಗ  ಹಾಕೋರಿ” ಅಂದ್ರೂ  ಯಾವದೂ ಆಕಿ  ಕಿವಿಗೇ ಬೀಳಲಿಲ್ಲ. ಅವ್ವಾ ಅನ್ನಾ- ತೊವ್ವೆ ಮಾಡಿ  ಇಟ್ಟಿದ್ರೂ  ಚಿಕ್ಕವರನ್ನ ಅಷ್ಟು ಬಿಟ್ಟು  ಯಾರೂ ಬಾಯಿ  ಮುಸರಿ  ಮಾಡಿರಲಿಲ್ಲ.

ಸಂಜೆ  ಸುಮಾರು  ಆರೂವರೆ ಏಳರ ಹೊತ್ತಿಗೆ ನನ್ನ ಮಗ  ಕಣ್ಣು ತಗದ  ನೋಡಿದ, ಮಾತಾಡಿದ. ಒಂಚೂರು ಶರಬತ್ತ  ಕುಡದು  ಎದ್ದ ಕೂತ. ಎಲ್ಲಾರ  ಕಣ್ಣಾಗ ಜೀವ  ಬಂತು, ತ್ರಾಣ  ಬಂತು. ಏಕಾ  ಆಗ  ಎದ್ದು, ಕೊಲ್ಲಾಪುರದ  ಅಂಬಾಬಾಯಿಗೆ  ಕೈಮುಗಿದು,ತುಪ್ಪದ ದೀಪ ಹಚ್ಚಿಟ್ಟು  ಉಸಿರು ಬಿಟ್ಲು.

ಇದಕ್ಕ  ಏನ  ಅನಬೇಕು  ಅನೂದು ನನಗಿನ್ನೂ ತಿಳಿದಿಲ್ಲ. ತನ್ನ ಸ್ವಂತದ ನೋವು, ಯಾತನಾದ್ದು  ಕಿಂಚಿತ್  ಖಬರು,  ದರಕಾರ  ಆಕೀಗಿರತಿರಲಿಲ್ಲ. ಆದ್ರ  ತನ್ನವರು  ಅಂಬೋರ ತ್ರಾಸ  ಸಹನ  ಆಗ್ತಿದ್ದಿಲ್ಲ  ಅದು ಒಂದು  ಮಿತಿ  ದಾಟಿತಂದ್ರ.ಆಕಿ ಉತಾವಿಳಪಣ  ಆಗ  ಸೀಮಾ  ದಾಟಿ  ಬಿಡ್ತಿತ್ತು ಅದೂ ಒಂದೊಂದು ಸಾರಿ. ಆ ಮ್ಯಾಲೆ ಮತ್ತ ಆಕಿ ಮೊದಲಿನ  ಆತ್ಮವಿಶ್ವಾಸದ  ಪುತ್ಥಳಿ ಏಕಾನೇ. ಆಕಿ  ಬಂದು ನನ್ನ ಬೆನ್ನು, ತಲಿ ಮ್ಯಾಲೆ ಕೈಯಾಡಿಸಿ,” ನಿನ್ನ ಹೊಟ್ಟಿ ಪುಣ್ಯಾ  ಜಾಡ  ಅದ  ಅಕ್ಕವ್ವಾ. ಹೀಂಗ s  ತಂಪಾಗಿರಲಿ  ನಿನ್ನ ಹೊಟ್ಟಿ. ಕೂಸೀನ್ನ ಅಲ್ಲಿಂದ ,  ಆ ತುದೀಂದ  ಎಳ್ಕೊಂಡ  ಬಂದದ  ನಿನ್ನ ಕರಳಿನ  ಆ ಸೆಲಿ ಅವನೊಳಗ ಜೀವ  ಸೆಲಿ ತುಂಬಿ.ತಿಳೀತಿಲ್ಲೋ ಬಾಳಾ? ಗಾಬರಿ ಆಗಬ್ಯಾಡ ” ಅಂತ ಕಣ್ತುಂಬ ನೀರ ತಂದು ನನ್ನ ಮಗನ ತಲಿ ಮ್ಯಾಲೆ ಕೈ ಇಟ್ಟು” ಉದ್ದಂಡ ಆಯುಷ್ಯವಂತಾಗು; ಅಖಂಡ  ಭಾಗ್ಯವಂತಾಗು ಕಂದಾ, ನನ್ನ ಬಂಗಾರಾ”  ಅಂತ ಮನಸ ತುಂಬಿ ಹರಸಿದ್ಲು  ಅಖಂಡ ರಕ್ಷಾಧಾಂಗ. ಆಕೀಗೆ ಏನನಿಸಿತ್ತೋ ಗೊತ್ತಿಲ್ಲ. ನನ್ನ ಕಣ್ಣೂ ಡಬಡಬಿಸಿದ್ವು; ಆನಂದಕ್ಕೋ, ಮಗಾ ಕಣ್ಣು ತಗದಾ  ಅಂತ ಒಂಥರಾ  ನಿವಾಂತಪಣಕ್ಕೋ  ಹೊಟ್ಟಿ ತಳಮಳಕ್ಕೋ ಗೊತ್ತಿಲ್ಲ. ಅಷ್ಪ್ರಾಗ  ಏಕಾ ಹವೂರಗ  ತೊಟ್ಲಾಗಿನ  ಕೂಸಿನ್ನ ತಂದು ನನ್ನ ಉಡಿಯೊಳಗ  ಮಲಗಿಸಿ ” ಹಾಲ ಕುಡಸ ಅಕ್ಕವ್ವಾ ಅದಕ; ಗಂಟ್ಲ ಆರೇದ.ಕಂಯಕುಂಯ ಅನದ  ಮಲಗೇದ ನೋಡ  ಅದು. ಅದೂ ಹೆಣ್ಣೇಲಾ” ಅಂತ ಹೇಳಿ  ಕಣ್ಣ ಒರಸಿಗೋತ ಒಳಗ ನಡದ್ಲು  ಆ ಮಮತಾಮಯಿ, ವಾತ್ಸಲ್ಯ ದ ಮೂರ್ತಿ ಏಕಾ , ಅವೇ ತನ್ನದೇ ಆದ ಧೃಡ ಹೆಜ್ಜೆಗಳೊಡನೆ !

ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: