ಪಿ ಪಿ ಉಪಾಧ್ಯ ಸರಣಿ ಕಥೆ 66- ಅಪ್ಪನಿಲ್ಲದ ಮನೆ.

ಪಿ ಪಿ ಉಪಾಧ್ಯ

ಅಪ್ಪನಿಲ್ಲದ ಮನೆ. ದಿನ ಹೇಗೋ ಕಳೆಯುತ್ತಿತ್ತು. ಅಂತ್ಯ ಹಗಲೆಲ್ಲ ಕೇಂದ್ರದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಯ ಕಳೆಯುತ್ತಿದ್ದವ ತಡ ರಾತ್ರಿಯವರೆಗೂ ಆಫೀಸಿನ ದಾಖಲೆಗಳನ್ನು ನೋಡುತ್ತಲೋ, ಯಕ್ಷಗಾನ ಕಲೆಯ ಬಗ್ಗೆ ಹಳೆಯ ಪುಸ್ತಕಗಳನ್ನು ಓದುತ್ತಲೋ ಕಾಲ ಕಳೆಯುತ್ತಿದ್ದರೂ ಮಲಗಿದೊಡನೆ ಮಾತ್ರ ಅಪ್ಪನದ್ದೇ ನೆನಪು ಕಾಡುತ್ತಿತ್ತು. ವಾರಾಂತ್ಯಕ್ಕೆ ಮನೆಗೆ ಹೋದಾಗಲೂ. ಅಮ್ಮನ ಮುಖ ನೋಡುತ್ತಿದ್ದಂತೆ ಆ ನೋವು ಹೆಚ್ಚುತ್ತಿತ್ತು. ಆದಿಯೂ ಅಷ್ಟೆ. ದಿನವೆಲ್ಲ ಎಂದಿಗಿ೦ತ ಹೆಚ್ಚಿನ ಸಮಾಜ ಸೇವೆಯ ಚಟುವಟಿಕೆಗಳಲ್ಲಿ ತೊಡಗುತ್ತಾನೆ.

ಒಂದು ಕಾಲದಲ್ಲಿ ಕಣ್ಣೆತ್ತಿಯೂ ನೋಡದಿದ್ದ ಕೆಲಸಗಳನ್ನು ಈಗ ತಾನೇ ಮೈ ಮೇಲೆಳೆದುಕೊಂಡು ಮಾಡುತ್ತಾನೆ. ಅದರಿಂದಲಾದರೂ ಮನಸ್ಸಿನ ಚಿಂತೆ ದೂರವಾಗಬಹುದೇನೋ ಎನ್ನುವ ಆಸೆ. ಏನು ಮಾಡಿದರೂ ಸಂಜೆ ಕತ್ತಲಾಗುತ್ತಿದ್ದಂತೆ ಮನೆಗೆ ಬರಲೇ ಬೇಕು. ಅದೇ ಸೊರಗಿದ ಅಮ್ಮನ ಮುಖವನ್ನು ನೋಡಲೇ ಬೇಕು. ಅಪ್ಪ ಕುಳಿತುಕೊಳ್ಳುವ, ಮಲಗುವ ಮತ್ತು ತಿರುಗಾಡುತ್ತಿದ್ದ ಜಾಗಗಳನ್ನೆಲ್ಲ ನೋಡಲೇಬೇಕು. ಆಗೆಲ್ಲ ಮರಳಿ ಮರಳಿ ಬರುತ್ತಿದ್ದ ನೆನಪು ಹೊತ್ತು ತರುತ್ತಿದ್ದ ನೋವನ್ನೂ ಅನುಭವಿಸಿಯೇ ತೀರಬೇಕು.

ಅದಕ್ಕಿಂತ ಹೆಚ್ಚಿನ ನೋವು ತಮ್ಮನ್ನ್ನು ಕಾಯುತ್ತಿದೆ ಎನ್ನುವುದರ ಅರಿವು ಅವರಿಬ್ಬರಿಗೂ ಇರಲಿಲ್ಲ. ಆದರೆ ಯಾವುದೇ ಮುನ್ಸೂಚನೆ ಕೊಡದೆ ಅದು ಅಡರಿತ್ತು. ಅದೇ ಅವರ ಅಮ್ಮನ ಸಾವು. ಅಪ್ಪನ ಸಾವಿನ ನೋವಿನಿಂದ ಹೊರ ಬರುವ ಪ್ರಯತ್ನದಲ್ಲಿದ್ದಾಗಲೇ ಅದು ಬರಸಿಡಿಲಿನಂತೆ ಬಂದೆರಗಿತ್ತು. ಅಪ್ಪ ಸತ್ತ ದಿನದಂದು ಅಮ್ಮನ ಪರಿಸ್ಥಿತಿ ನೋಡಿ ಅವರಿಬ್ಬರೂ ಹೆದರಿದ್ದಿತ್ತು ಅಮ್ಮನಿಗೂ ಏನಾದರೂ ಆಗುತ್ತೇನೋ ಎಂದು. ಆದರೆ ಅಪ್ಪನ ಹೆಣಕ್ಕೆ ಸ್ನಾನ ಮಾಡಿಸಿ ಹೊಸ ಬಟ್ಟೆ ಸುತ್ತುವ ಹೊತ್ತಿಗೆ ಅವಳ ಪರಿಸ್ಥಿತಿ ಸುಧಾರಿಸಿದೆ ಎನಿಸಿತ್ತು ಅವರಿಗೆ.

ಮುಂದಿನ ಕಾರ್ಯಗಳ ದಿನಗಳಲ್ಲಿ ಆಕೆ ಪಡಸಾಲೆಯಿಂದ ಹೊರ ಬರದಿದ್ದರೂ ಅವಳಲ್ಲಿ ತುಂಬ ಬದಲಾವಣೆಯನ್ನು ಕಂಡಿದ್ದರು. ಅದೆಲ್ಲ ಸಕಾರಾತ್ಮಕವಾಗಿಯೇ ಕಾಣಿಸಿದ್ದರಿಂದ ‘ಓಹ್.. ಅಮ್ಮ ಸುಧಾರಿಸಿಕೊಂಡಳು…ದುಃಖದ ಮಡುವಿನಿಂದ ಹೊರ ಬಂದಳು’ ಎಂದು ಸಮಾಧಾನಪಟ್ಟುಕೊಂಡವರು ತಮ್ಮ ನೋವನ್ನು ಮರೆಯುವ ಸಲುವಾಗಿ ಹೆಚ್ಚಿನ ಆಸಕ್ತಿಯಿಂದ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅವರು ಮಾಡಿದ ಒಂದೇ ತಪ್ಪೆಂದರೆ ತಮ್ಮ ದುಃಖವನ್ನು ಮರೆಯುವ ಭರದಲ್ಲಿ ಅಮ್ಮನ ದುಃಖವನ್ನು ಮರೆತದ್ದು. ಅವಳ ಪರಿಸ್ಥಿತಿಯನ್ನು ಗಮನಿಸದೇ ಇದ್ದದ್ದು. ಅದೇ ಮುಳುವಾಯಿತು.

ಆ ವಾರಾಂತ್ಯಕ್ಕೆ ಕೇಂದ್ರದಲ್ಲಿನ ಕೆಲಸವನ್ನೆಲ್ಲ ಗಡಿಬಿಡಿಯಿಂದ ಮುಗಿಸಿದ ಅಂತ್ಯ ಸಂಜೆಯ ಹೊತ್ತಿಗೆ ಮನೆಗೆ ಬಂದ. ಆದಿ ತನ್ನ ಮಾಮೂಲಿ ಚಟುವಟಿಕೆಗಳಲ್ಲಿ ತೊಡಗಿದ್ದವ ಇನ್ನೂ ಬಂದಿರಲಿಲ್ಲ. ಬಂದ ಅಂತ್ಯನಿಗೆ ಕೂಡಲೇ ಅಡಿಗೆಯವಳು ಕಾಫಿ ತಂದು ಕೊಟ್ಟಿದ್ದಳು. ಕುಡಿಯುತ್ತ ಹಾಗೆಯೇ ವಿಚಾರಿಸಿದ್ದ. ‘ಆದಿ ಬರಲಿಲ್ಲವೇ ಇನ್ನೂ..’ ಎಂದು ಕೇಳಿದವ ಹಾಗೇಯೇ ‘ಅಮ್ಮ ಎಲ್ಲಿ ಕಾಣಿಸುತ್ತಿಲ್ಲವಲ್ಲ’ ಎಂದೂ ಕೇಳಿದ.

ಅಷ್ಟರಲ್ಲಿ ಒಳ ಬಂದ ಆದಿಗೂ ಅವನು ಹೇಳಿದ್ದು ಕೇಳಿಸಿತು. ‘ಬೆಳಿಗ್ಗೆ ನಾನು ಹೊರ ಹೋಗುವಾಗಲೇ ಏನೋ ಸುಸ್ತು ಎನ್ನುತ್ತಿದ್ದಳು. ನಾನೇ ಕಳೆದ ಬಾರಿ ಅವಳ ಸುಸ್ತಿಗೆ ತಂದು ಕೊಟ್ಟಿದ್ದ ಔಷಧವನ್ನು ಕೊಟ್ಟು ರೆಸ್ಟ್ ತೆಗೆದುಕೋ ಎಂದು ಹೇಳಿದ್ದೆ. ಆ ಔಷಧಿ ತುಸು ಮಂಪರು ಬರುವಂತಹುದೂ ಹೌದು. ಹಾಗೆಯೇ ಮಲಗಿರಬೇಕು. ಬಾ ನೋಡೋಣ’ ಎಂದ.

ಇಬ್ಬರೂ ಆಕೆ ಮಲಗಿದ ಜಾಗಕ್ಕೆ ಹೋದರು. ಅಮ್ಮ ಬೆಳೆಗ್ಗಿನ ಹಾಗೆ ಮಲಗಿಯೇ ಇದ್ದಳು. ‘ಇನ್ನೂ ಮಂಪರು ಬಗೆಹರಿದ ಹಾಗೆ ಕಾಣುವುದಿಲ್ಲ. ಮಲಗಿರಲಿ ಬಿಡು’ ಎಂದ ಆದಿ ಹೊರಡಲು ರೆಡಿಯಾದರೂ ಅಂತ್ಯ ಅಮ್ಮನನ್ನು ಮಾತನಾಡಿಸಲು ನೋಡಿದ. `ಅಮ್ಮ …’ ಎನ್ನುತ್ತ ನಿಧಾನವಾಗಿ ಮೈ ಮುಟ್ಟಿದ. ಏನೋ ಅನುಮಾನ ಬಂದ೦ತೆನಿಸಿ ಹೊದೆದುಕೊಂಡಿದ್ದ ವಸ್ತçವನ್ನು ಸರಿಸಿ ಹಣೆಯನ್ನು ಮುಟ್ಟಿದ. ಮುಟ್ಟಿದವ ಥಟ್ಟನೆ ಕೈ ತೆಗೆದು ಕೊಂಡವ ‘ಅಣ್ಣ.. ಬಾ ಇಲ್ಲಿ’ ಎನ್ನುತ್ತ ಆಕೆಯ ಮೂಗಿನತ್ತ ಬೆರಳು ಹಿಡಿದಿದ್ದ. ‘ಅಯ್ಯೋ..’ ಎನ್ನುತ್ತ ಕೈ ಹಿಂತೆಗೆದ. ಅಷ್ಟರಲ್ಲಿ ಆದಿಯೂ ’ಏನಾಯ್ತು.. ಏನಾಯ್ತು’ ಎನ್ನುತ್ತ ಹತ್ತಿರಕ್ಕೆ ಬಂದು ಆಕೆಯ ಮುಖವನ್ನು ಗಮನಿಸಿದವನಿಗೆ ಅದು ನೀಲಿಗಟ್ಟಿದ್ದು ಕಾಣಿಸಿತು. ಗಾಬರಿಯಿಂದ ಅವನೂ ಅಮ್ಮನ ಮೂಗಿನತ್ತ ಬೆರಳು ಹಿಡಿದ. ಉಸಿರಾಟದ ಕುರುಹೇ ಇಲ್ಲ. ನೀಲಿಗಟ್ಟಿದ ಮುಖ ನೋಡಿದರೆ ಉಸಿರು ನಿಂತು ತುಂಬಾ ಹೊತ್ತಾಗಿರಬೇಕು ಅನ್ನಿಸಿತು. ‘ಅಂತ್ಯ.. ಅಮ್ಮ ಇನ್ನಿಲ್ಲ..’ ಎಂದು ಕಿರಿಚಿದ. ಕಿರಿಚಿದ ಧ್ವನಿಗೆ ಅದೆಲ್ಲಿಯೋ ಇದ್ದ ಅಡಿಗೆಯವಳೂ ಓಡಿ ಬಂದಳು.

ಆದಿ, ಅಂತ್ಯ, ಕೊನೆಗೆ ಅಡಿಗೆಯವಳು, ಎಲ್ಲರೂ ದಿಗ್ಬ್ರಮೆ ಹಿಡಿದವರಂತೆ ನಿಂತರು. ಏನು ಮಾಡುವುದೆಂದು ತಿಳಿಯದ ಅವರ ಮುಖದ ಮೇಲೆ ಕಾಣಿಸುತ್ತಿದ್ದುದು ಬರೀ ಅಪನಂಬಿಕೆಯೊ೦ದೇ. ಅಮ್ಮ ಸತ್ತಿದ್ದಾಳೆಂದು ಅವರಲ್ಲಿ ಯಾರಿಗೂ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ.

ಆದರೆ ಸತ್ತದ್ದಂತೂ ಹೌದು. ಅಲುಗಾಡದೆ ಮಲಗಿದ ದೇಹವಿದೆಯಲ್ಲ. ಉಸಿರಾಟ ನಿಂತಿದೆಯಲ್ಲ. ಒಂದಷ್ಟು ಹೊತ್ತು ಇವರೊಂದಿಗೇ ಮಾತಿಲ್ಲದೆ ನಿಂತ ಅಡಿಗೆಯ ಹೆಂಗಸು ಹೊರಗೋಡಿದವಳು ಅಲ್ಲಿ ಹೊರಕೆಲಸ ಮಾಡುತ್ತಿದ್ದ ಮಂದಿಯೊ೦ದಿಗೆ ವಿಷಯ ಹೇಳಿದಳು. ಆ ಜನರಲ್ಲಿ ಕೆಲವರು ಹೋ ಎನ್ನುತ್ತ ಬಾಗಿಲಿಗೆ ಬಂದು ನಿಂತರೆ ಉಳಿದ ಕೆಲವರು ಅಕ್ಕ ಪಕ್ಕದವರಿಗೆ ಸುದ್ದಿ ಮುಟ್ಟಿಸಲು ಓಡಿದ್ದರು.

ಸ್ವಲ್ಪವೇ ಹೊತ್ತಿನಲ್ಲಿ ಜನಸಂದಣಿ ಸೇರಿತ್ತು. ಮತ್ತೆ ಮಾಮೂಲಿ ಕಾರ್ಯಕ್ರಮ. ಪುರೋಹಿತರ ಆಗಮನ. ಹೆಣಕ್ಕೆ ಸ್ನಾನ ಮಾಡಿಸುವುದು ಇದೇ ಎಲ್ಲ. ಪುನಃ ಗುಂಪಿನೊಳಗಿ೦ದ ಯಾರೋ ತುಸು ಗಟ್ಟಿಯಾಗಿ ಆಡಿದ ಮಾತು ಕೇಳಿಸಿತು ‘ಅಲ್ಲ ಅಮೆರಿಕದಲ್ಲಿದ್ದ ಮಗ ಈಗಲೂ ಬರುವುದಿಲ್ಲವೋ’ ಕೇಳಿಸಿಕೊಂಡವರಾರೂ ಉತ್ತರಿಸಲಿಲ್ಲ. ಆದಿ ಮತ್ತು ಅಂತ್ಯನ ಕಿವಿಯ ಮೇಲೂ ಆ ಮಾತು ಬಿದ್ದಿತ್ತು. ಅವರೂ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಅಮ್ಮನ ಅಂತ್ಯಕ್ರಿಯೆಯೂ ಮುಗಿಯಿತು. ಏನೆಲ್ಲ ಕೆಲಸಗಳು ನಡೆಯಬೇಕೋ ಅವೆಲ್ಲವೂ ಯಥಾಪ್ರಕಾರ ನಡೆದವು. ಧಾರಾಳವಾಗಿಯೇ ದಾನ ಧರ್ಮಗಳೂ.

ಅಪ್ಪ ಮತ್ತು ಅಮ್ಮ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಬ್ಬರೂ ಒಂದು ತೆರನ ಅನಾಥ ಭಾವನೆಯಿಂದಲೇ ದಿನ ದೂಡತೊಡಗಿದರು.

। ಇನ್ನು ನಾಳೆಗೆ ।

‍ಲೇಖಕರು Admin

July 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: