ಎಂದಿಗೂ ಹುಟ್ಟದ ಮಗುವಿಗೆ ಪತ್ರ…

ಸುಧಾ ಆಡುಕಳ

ಒಮ್ಮೆ ಅನುವಾದದ ಗುಂಗಿಗೆ ಒಳಗಾದರೆ ಮತ್ತೆ ನಾವಾಗಿಯೇ ಏನನ್ನೂ ಬರೆಯಬಾರದು ಅನಿಸಿಬಿಡುತ್ತದೆ. ಚಂದದ ಪುಸ್ತಕಗಳನ್ನು ಅರಸುವ ಚಾಳಿ ಅಂಟಿಕೊಂಡುಬಿಡುತ್ತದೆ. ಇತ್ತೀಚೆಗೆ ನನಗೆ ಮತ್ತು ಗೆಳೆಯ DrShripad Bhat ರಿಗೆ ಅದೇ ರೋಗ ಅಂಟಿದಂತಿದೆ. ಯಾವುದೇ ಅನ್ಯಭಾಷೆಯ ಉತ್ತಮ ಕೃತಿಗಳು ಕಂಡರೂ ತಂದು ನನ್ನ ಕೈಗಿಡುವ ಅವರ ಚಾಳಿ ಇಂದು ನಿನ್ನೆಯದೇನೂ ಅಲ್ಲ.

ಮೂರು ತಿಂಗಳ ಹಿಂದೆ ಅವರ ಗೆಳೆಯ ಸುರೇದ್ರನಾಥರ ಕೈಯ್ಯಿಂದ ಕಡ ಪಡೆದ ಈ ಪುಸ್ತಕ ನಮ್ಮ ಮನೆಯ ಸೋಫಾದಲ್ಲಿ ಖಾಯಂ ಸ್ಥಾನ ಪಡೆದಿತ್ತು. ನಾನು ಹೋದಲ್ಲಿಗೆಲ್ಲ ನನ್ನೊಂದಿಗೇ ಬರುತ್ತಿತ್ತು. ಓದಿ, ಮತ್ತೆ ಓದಿ, ಇನ್ನೊಮ್ಮೆ ಓದಿ ಕನ್ನಡದಲ್ಲಿ ಬರೆಯುವ ಕೆಲಸ ಇಂದು ಮುಗಿಯಿತು.

ಎಂದಿಗೂ ಹುಟ್ಟದ ಮಗುವಿಗೆ ಅದು ತನ್ನ ಗರ್ಭದಲ್ಲಿರುವ ಮೂರು ತಿಂಗಳುಗಳ ಕಾಲ ತಾಯಿಯೊಬ್ಬಳು ಬರೆಯುವ ಪತ್ರರೂಪದ ಕಾದಂಬರಿಯಿದು. ಮಗುವು ಹುಟ್ಟಬೇಕೆ? ಎಂಬಲ್ಲಿಂದ ಪ್ರಾರಂಭವಾಗುವ ಜಿಜ್ಞಾಸೆ ಮಗುವನ್ನು ಹೆರುವುದು ತಾಯಿಯಾದವಳ ಕರ್ತವ್ಯವೇ ಎಂದೆಲ್ಲಾ ಕೇಳುತ್ತ, ಸುತ್ತಲಿನವರ ಅನುಭವಗಳಿಗೆ ತೆರೆದುಕೊಳ್ಳುತ್ತಾ ಮಗುವಿನ ಅಂತ್ಯದಲ್ಲಿ ಅರ್ಧ ದಾರಿಯನ್ನು ಮುಗಿಸುತ್ತದೆ.

ಮುಂದೆ ತಾಯಿಯ ವರ್ತನೆಯೇ ಮಗುವಿನ ಸಾವಿಗೆ ಕಾರಣವಾಯಿತೆಂಬ ಸಾಮಾಜಿಕ ಆಪಾದನೆಯ ಮೂಲಕ ವಿಚಾರಣೆಗೊಳಪಡುತ್ತದೆ. ಎಲ್ಲರೂ ಅವರವರ ವಿಚಾರಗಳನ್ನು ಮಂಡಿಸುತ್ತಾರೆ. ಆಶ್ಚರ್ಯವೆಂಬಂತೆ ಕೊನೆಯಲ್ಲಿ ಸಾವಿಗೀಡಾದ ಮಗುವೂ ಮಾತನಾಡತೊಡಗುತ್ತದೆ. ಅದರ ಅಭಿಪ್ರಾಯದೊಂದಿಗೆ ಕಾದಂಬರಿ ಮುಗಿಯುತ್ತದೆ. ಬದುಕು ಮುಗಿಯುವುದಿಲ್ಲ ಎಂಬುದೇ ಇಲ್ಲಿ ಕೊನೆಯ ವಾಕ್ಯ.

ಇಲ್ಲಿ ತಾಯಿ ತನ್ನ ಮಗುವಿಗೆ ಬದುಕಿನ ಬಗೆಗಿನ ಚಂದದ ಕಿನ್ನರ ಕಥೆಗಳನ್ನು ಹೇಳುತ್ತಾಳೆ. ಯಾರದೋ ಎಂಬಂತೆ ಪ್ರಾರಂಭವಾಗುವ ಕಥೆ ಮುಗಿಯುವಾಗ ಅವಳದ್ದೇ ಕಥೆಯಾಗುತ್ತದೆ. ಮಗುವು ಅವೆಲ್ಲದರ ಅರಿವನ್ನು ಹೀರಿಕೊಳ್ಳುವುದು ಕೊನೆಯಲ್ಲಿ ಆಡುವ ಮಾತುಗಳಿಂದ ತಿಳಿದುಬರುತ್ತದೆ. ಅಭಿಮನ್ಯುವಿಗೆ ಗರ್ಭದಲ್ಲಿರುವಾಗಲೇ ಚಕ್ರವ್ಯೂಹದ ಕಥೆ ಹೇಳಿದ ಕೃಷ್ಣನ ಕಥೆ ನಮ್ಮ ಪುರಾಣದಲ್ಲಿದೆ. ಇಲ್ಲಿ ಇದನ್ನು ವೈಚಾರಿಕವಾಗಿ ಹೆಣೆಯಲಾಗಿದೆ. ಕಾದಂಬರಿಯುದ್ದಕ್ಕೂ ವಿಜ್ಞಾನದ ಎಳೆಗಳು ಚಂದವಾಗಿ ನಿರೂಪಿತವಾಗಿವೆ. ಹೆಣ್ಮನದ ತಲ್ಲಣಗಳು ವಾಸ್ತವದ ನೆಲೆಯಲ್ಲಿ ಚರ್ಚಿತವಾಗಿವೆ.

ಬರೆದರೆ ಮುಗಿಯದಷ್ಟು ವಿಚಾರಗಳು ಒತ್ತರಿಸಿ ಬರುತ್ತಿವೆ. ಹೆಣ್ಣುಗಳ ಕಥೆಯೆಂದರೆ ಹಾಗೆಯೇ ಅಲ್ಲವೆ? ಇಂಥದೊಂದು ತಲ್ಲಣವನ್ನು ರಂಗಕ್ಕೆ ತರುವ ಕನಸು ಶ್ರೀಪಾದರದ್ದು. ಕಾಲ ಕೂಡಿ ಬರಬೇಕಿದೆ…

ಮೂರು ತಿಂಗಳ ಶೂನ್ಯವನ್ನೆಲ್ಲಾ ತುಂಬಿದ ಖುಶಿ. ಇಲ್ಲಿ ಲೇಖಕಿ ಹೇಳುತ್ತಾಳೆ, ಶೂನ್ಯಕ್ಕಿಂತ – ಕಷ್ಟವೇ ಆದರೂ ಸರಿಯೆ- ಏನಾದರೂ ಇರುವ ಬದುಕು ಬಹಳ ದೊಡ್ಡದು, ಹಾಗಾಗಿ ಹುಟ್ಟಬೇಕು…

‍ಲೇಖಕರು Admin

July 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: