ಜಿ ಎನ್ ನಾಗರಾಜ್ ಅಂಕಣ- ಗುಂಪು ಮದುವೆಯಿಂದ ವಿವಾಹ ಪದ್ಧತಿಯ ಕಡೆಗೆ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

15

ರಕ್ತ ಸಂಬಂಧಿಗಳ ನಡುವೆ ಲೈಂಗಿಕ ಸಂಬಂಧಗಳಿಂದ ಹುಟ್ಟಿದ ಮಕ್ಕಳು ದುರ್ಬಲವಾಗಿರುತ್ತವೆ, ಚುರುಕಾಗಿರವುದಿಲ್ಲ, ಬೇಗ ಸಾಯುತ್ತವೆ ಎಂಬುದನ್ನು ಅಜ್ಜಿಯರು,ತಾಯಂದಿರು ಕಂಡುಕೊಂಡದ್ದು ಮಾನವ ಸಮುದಾಯದ ಪಾಲಿಗೆ ಒಂದು ಯುಗ ಪ್ರವರ್ತಕ ಶೋಧ. ಶೋಧ ಎಂದರೆ ಅವರಿಗೆ ಏಕೆ ಹೀಗೆ ಎಂಬ ಕಾರಣ ಪ್ರಜ್ಞಾಪೂರ್ವಕವಾಗಿ ತಿಳಿದಿತ್ತು ಎಂದಲ್ಲ. ತಡವುತ್ತಾ,ಎಡವುತ್ತಾ ಕೇವಲ ಪ್ರಾಯೋಗಿಕ ಅನುಭವದಿಂದ ಕಂಡುಕೊ ಹಾಗೆಂದ ಕೂಡಲೇ ಎಲ್ಲ ಬುಡಕಟ್ಟುಗಳ ಅಜ್ಜಿಯರೂ ಈ ಸತ್ಯವನ್ನು ಏಕಕಾಲಕ್ಕೆ ಕಂಡುಕೊಳ್ಳುವುದು ಸಾಧ್ಯವೇ ? ಯಾವ ಬುಡಕಟ್ಟುಗಳಿಗೆ ಈ ವಿಷಯ ಸ್ಪಷ್ಟವಾಯಿತು ಮತ್ತು ರಕ್ತ ಸಂಬಂಧಿಗಳ ನಡುವಣ ಲೈಂಗಿಕ ಸಂಬಂಧಗಳನ್ನು ಪರಿಣಾಮಕಾರಿಯಾಗಿ ನಿಷೇಧಿಸಿಕೊಂಡರೋ ಆ ಬುಡಕಟ್ಟುಗಳ ಮುಂದಿನ ತಲೆಮಾರುಗಳು ಬುದ್ಧಿವಂತಿಕೆ, ಆರೋಗ್ಯ , ದೈಹಿಕ ದೃಢತೆಯಲ್ಲಿ ಬೇರೆ ಬುಡಕಟ್ಟುಗಳಿಗಿಂತ ಉತ್ತಮವಾಗಿ ಬೆಳೆದವು. ಮತ್ತೊಂದು ಕಡೆ ಹಲವು ಬುಡಕಟ್ಟುಗಳು ಅಳಿದು ಹೋಗುವತ್ತ ಸಾಗಿದವು. ಒಂದು ಬುಡಕಟ್ಟಿನಿಂದ ಮತ್ತೊಂದು ಬುಡಕಟ್ಟಿಗೆ ಈ ತಿಳುವಳಿಕೆ ಹರಡುತ್ತಾ ಸರಿ ಸುಮಾರು ವಿಶ್ವದೆಲ್ಲ ಬುಡಕಟ್ಟುಗಳೂ ಅನುಸರಿಸಿದವು.

ಆ ಸಮಯದಲ್ಲಿ ಒಬ್ಬಳೇ ಮೂಲ ತಾಯಿಯ ಮಕ್ಕಳು,ಮೊಮ್ಮಕ್ಕಳು ಇತ್ಯಾದಿ ತಲೆಮಾರು ಒಂದು ಗುಂಪಾಗಿ ಆಹಾರಕ್ಕಾಗಿ ಅಲೆದಾಡುತ್ತಿದ್ದರು. ಎಲ್ಲೋ ಒಂದು ಕಡೆ ಒಂದೇ ಆವರಣದಲ್ಲಿ ಮಲಗುತ್ತಿದ್ದರು. ಅಂತಹ ಸನ್ನಿವೇಶದಲ್ಲಿ ರಕ್ತ ಸಂಬಂಧಿಗಳಲ್ಲದೆ ಬೇರೆಯವರ ಭೇಟಿಯೇನೂ ಪದೇ ಪದೇ ಆಗುತ್ತಿರಲಿಲ್ಲ. ಭೇಟಿಯಾದರೂ ಆಹಾರಕ್ಕಾಗಿ ಪರಸ್ಪರ ಸ್ಫರ್ಧೆ,ಈರ್ಷೆ ಉಂಟಾಗುವ ಸಂಭವವೇ ಹೆಚ್ಚು. ಹೀಗೆ ಒಬ್ಬ ತಾಯಿಯ ಮೂಲದವರು ಮಾತ್ರ ಒಂದು ಗುಂಪಾಗಿ ವಾಸಿಸುತ್ತಿದ್ದ ಸಮಯದಲ್ಲಿ ಹಿಂದೆಯೇ ಹೇಳಿದಂತೆ ಅವರಿಗೆ ಗಂಡು ಹೆಣ್ಣು ಕೂಡುವುದಕ್ಕೂ ಮಕ್ಕಳ ಜನನಕ್ಕೂ ಸಂಬಂಧವಿದೆ ಎಂಬುದೇ ಗೊತ್ತಿರಲಿಲ್ಲ.

ಆಗ ಅವರುಗಳಲ್ಲಿ ಕಾಮವಾಂಛೆ ಹೆಚ್ಚಾದಾಗ  ಸಂಬಂಧದ ಪರಿಗಣನೆಯಿಲ್ಲದೆ ಅಮ್ಮ-ಮಗ ಅಣ್ಣ-ತಂಗಿ, ಅಕ್ಕ- ತಮ್ಮ,ಚಿಕ್ಕಪ್ಪ,ದೊಡ್ಡಪ್ಪನ ಮಕ್ಕಳು ಇವರುಗಳು ಪರಸ್ಪರ ಕೂಡುತ್ತಿದ್ದರು. ವೇದಗಳೂ ಸೇರಿದಂತೆ ಕಾವ್ಯ, ಪುರಾಣಗಳಲ್ಲಿ ಇಂತಹ ಸಂಬಂಧಗಳ ಪಳೆಯುಳಿಕೆಗಳು ಹಲವಿವೆ. ಋಗ್ವೇದದ ಪ್ರಸಿದ್ಧ ಭಾಗವಾದ ಅಣ್ಣನನ್ನು ಕೂಡಲು ಬಯಸಿದ  ಯಮ- ಯಮಿ ಸಂವಾದ, ಬ್ರಹ್ಮ – ಸರಸ್ವತಿ, ಪ್ರಜಾಪತಿ ಮತ್ತು ಮಗಳು, ಬೌದ್ಧ ಜಾತಕ ಕತೆಗಳಲ್ಲಿ ರಾಮ ಸೀತೆ ಅಣ್ಣ ತಂಗಿಯರೆಂದು ಚಿತ್ರಿಸಿರುವುದು ಹೀಗೆ ಹಲವು ಉದಾಹರಣೆಗಳಿವೆ. ಅನೇಕ ಬುಡಕಟ್ಟು ಮೂಲದ ಕಥನಗಳಲ್ಲಿಯೂ ಇಂತಹ ಉದಾಹರಣೆಗಳಿವೆ. ಪಂಜುರ್ಲಿ ದೈವದ ಮೂಲದ ಕತೆಯೂ ಇದಕ್ಕೊಂದು ಉದಾಹರಣೆ. ಅಣ್ಣ ತಂಗಿ ಸಂಬಂಧವನ್ನು ಶಿವನೇ ಅನುಮೋದಿಸಿದನೆನ್ನುತ್ತದೆ ಪಂಜುರ್ಲಿಗೆ ಸಂಬಂಧಿಸಿದ ಕೆಲ ಪಾಡ್ದನಗಳು.

ಛಾಂದೋಗ್ಯ ಉಪನಿಷತ್ತಿನಲ್ಲಿ  ಸತ್ಯಕಾಮ ಋಷಿಯ ಪ್ರಸಂಗದಲ್ಲಿ ಆತನಿಗೆ ತಂದೆ ಯಾರೆಂದು ಗೊತ್ತಿರಲಿಲ್ಲವೆಂದೂ, ಆ ಬಗ್ಗೆ ತನ್ನ  ತಾಯಿ ಜಾಬಾಲಳನ್ನು ಕೇಳಿದಾಗ ನಾನು ಯೌವ್ವನದಲ್ಲಿ ಹಲವರೊಡನೆ ಸಂಬಂಧ ಇಟ್ಟುಕೊಂಡಿದ್ದರಿಂದ ನಿನ್ನ ತಂದೆ ಯಾರೆಂದು ತಿಳಿದಿಲ್ಲ ಎಂದು ತಿಳಿಸಿದಳಂತೆ. ಆಗ ಮಗ ಸತ್ಯಕಾಮ ಜಾಬಾಲ ಎಂದೇ ಹೆಸರಾದನಂತೆ.
ಮಹಾಭಾರತದ ಶಾಂತಿ ಪರ್ವದಲ್ಲಿ ಲೈಂಗಿಕ ಸಂಬಂಧಗಳ ಇತಿಹಾವನ್ನೇ ಯುಗಗಳ ಬೆಳವಣಿಗೆಯ ಆಧಾರದಲ್ಲಿ ವಿವರಿಸಲಾಗಿದೆ.

ಕೃತಯುಗೇ
ನ ಚೈಷಾಂ ಮೈಥುನೋ ಧರ್ಮೋ ಬಭೂವ ಭರತರ್ಷಭ
ಸಂಕಲ್ಪ ದೇ ವೈ ತೇಷಾಂ ಅಪತ್ಯಮುಪ ಪದ್ಯತೇ
ತತಸ್ತ್ರೇತಾಯುಗೇ ಕಾಲೇ ಸಂಸ್ಪರ್ಶಾಜ್ಞಾಯತೇ ಪ್ರಜಾ
ನ ಹಭ್ಯೂನ್ ಮೈಥುನೋ ಧರ್ಮಸ್ತೇಷಾಮಪಿ ಜನಾಧಿಪ
ದ್ವಾಪರೇ ಮೈಥುನೋ ಧರ್ಮಃ ಪ್ರಜಾನಾಮ ಭವನೃಪ
ತಥಾ ಕಲಿಯುಗೇ ರಾಜನ್ ದ್ವಂದ್ವ ಮಾಪೇದಿರೇ ಜನಾಃ
ಕೃತಯುಗದಲ್ಲಿ ಅವರ ಇಚ್ಚೆಯಂತೆ, ತ್ರೇತಾಯುಗದಲ್ಲಿ ಯಾವ ಗಂಡು ಹೆಣ್ಣಿನ‌ ನಡುವೆ ಸ್ಪರ್ಷವಾದರೂ ಅವರು, ದ್ವಾಪರದಲ್ಲಿ ಮೈಥುನ ಧರ್ಮದಂತೆ ಗಂಡು ಹೆಣ್ಣು ಒಟ್ಟಾಗಿ ಕಲಿಯುಗದಲ್ಲಿ ಜೋಡಿಯಾಗಿ ಮೈಥುನದಲ್ಲಿ ತೊಡಗುತ್ತಿದ್ದರು.

ಈ ಶ್ಲೋಕಗಳ ಮೂಲಕ ತಿಳಿಯುವ ಸಾರಾಂಶವೆಂದರೆ ಒಂದು ಕಾಲದಲ್ಲಿ ಮದುವೆಯ ಪದ್ಧತಿ ಇರಲಿಲ್ಲ. ತಂತಮ್ಮ ಇಚ್ಛೆಯಂತೆ ಕೂಡುತ್ತಿದ್ದರು. ಮುಂದಿನ ಕಾಲಘಟ್ಟಗಳಲ್ಲಿ ಹಂತ ಹಂತವಾಗಿ ಬೆಳವಣಿಗೆಯಾಗುತ್ತಾ ಒಂದು ಗಂಡು ಹೆಣ್ಣಿನ ಒಂದು ಜೋಡಿಯ ಮದುವೆ ಎಂಬ ಪದ್ಧತಿ ರೂಢಿಗೆ ಬಂತು .
ಆದಿಮ ಅಜ್ಜಿ,ತಾಯಂದಿರಿಗೆ‌ ಮಕ್ಕಳ ಜನನಕ್ಕೆ ಗಂಡು ಬೇಕು ಮತ್ತು ಗಂಡು ಹೆಣ್ಣು ಒಂದೇ ತಾಯಿಯ ಮೂಲದವರಾದರೆ ಅವರ ಮಕ್ಕಳು ದುರ್ಬಲ ಹಾಗೂ ಬೇಗ ಸಾವನ್ನಪ್ಪುವರು ಎಂದು ತಿಳಿಯುತ್ತಾ ಬಂದ ಮೇಲೂ  ರಕ್ತ ಸಂಬಂಧಿಗಳ ನಡುವೆ ಲೈಂಗಿಕ ಸಂಬಂಧಗಳನ್ನು ತಪ್ಪಿಸುವುದು ಬಹಳ ಕ್ಲಿಷ್ಟ ಕೆಲಸವೇ ಆಗಿತ್ತು.

ಎರಡು ಮೂರು ತಾಯಂದಿರ ಮೂಲದ ಗುಂಪುಗಳು ದೊಡ್ಡ ಪ್ರಾಣಿಗಳ ಬೇಟೆಯಲ್ಲಿ ಅನಿವಾರ್ಯವಾಗಿ ಪರಸ್ಪರ ಸಹಕಾರ ಸಂಬಂಧಗಳನ್ನು ರೂಪಿಸಿಕೊಂಡ ನಂತರ ರಕ್ತ ಸಂಬಂಧಿಗಳ ಹೊರತಾಗಿ ಬೇರೆಯವರ ಜೊತೆ ಲೈಂಗಿಕ ಸಂಬಂಧಗಳನ್ನು ಬೆಳೆಸುವ ಸಾಧ್ಯತೆ, ಈ ಎಲ್ಲ ಗುಂಪುಗಳೂ ಒಂದೇ ಬುಡಕಟ್ಟಾಗಿ ಜೀವಿಸುವ ಸಾಧ್ಯತೆ ಕಾಣಿಸಿತು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಸಾವಿರಾರು ವರ್ಷಗಳು ಗತಿಸಿದ ನಂತರ ಬಳಿ/ ಬೆಡಗು/ಗೋತ್ರಗಳೆಂಬ ಗುಂಪುಗಳು ರೂಪುಗೊಂಡವು.

ಗುಂಪು ಲೈಂಗಿಕ ಸಂಬಂಧಗಳು ಅರ್ಥಾತ್ ಮದುವೆಗಳು:
ಒಬ್ಬ ತಾಯಿಯ ವಂಶವೆಲ್ಲ ಒಂದು ಬೆಡಗಾಗಿ ಮತ್ತೊಬ್ಬ ತಾಯಿಯ ಗುಂಪು ಮತ್ತೊಂದು ಬೆಡಗಾಗಿ ರೂಪುಗೊಂಡ ಮೇಲೆ ಬೆಡಗಿನ ಒಳಗೆ ಎಲ್ಲ ಲೈಂಗಿಕ ಸಂಬಂಧಗಳ ನಿಷೇಧ. ಒಂದು ಇಡೀ ಬೆಡಗಿನ ಗುಂಪು ಮತ್ತೊಂದು ಇಡೀ ಬೆಡಗಿನ ಜೊತೆಗೆ ಲೈಂಗಿಕ ಸಂಬಂಧ ಉಳ್ಳವರಾದರು. ಅಂದರೆ ಒಂದು ಬೆಡಗಿನ ಎಲ್ಲ ಹೆಣ್ಣುಗಳೂ ಮತ್ತೊಂದು ಬೆಡಗಿನ ಎಲ್ಲ ಗಂಡಸರ ಜೊತೆ ಕೂಡುವ ಸಂಬಂಧ ಮತ್ತು ಹಕ್ಕು ಉಳ್ಳವರಾದರು. ಇದೊಂದು ಪರಸ್ಪರ ಸಂಬಂಧ. ಹೀಗೆ ಪರಸ್ಪರ ಲೈಂಗಿಕ ಹಕ್ಕಿನ‌ ಕಾರಣವಾಗಿ  ಗುಂಪು ಮದುವೆ ಎಂದು ಮಾನವ ಶಾಸ್ತ್ರಜ್ಞರು ಕರೆಯುವ ಸಂಬಂಧ ಆರಂಭವಾಯಿತು.

20 ನೆಯ ಶತಮಾನದಲ್ಲೂ ಅಸ್ತಿತ್ವದಲ್ಲಿದ್ದ ಹಲವು ಬುಡಕಟ್ಟುಗಳಲ್ಲಿ ಇಂತಹ ಲೈಂಗಿಕ ಸಂಬಂಧಗಳನ್ನು ಹಲವರು ದಾಖಲಿಸಿದ್ದಾರೆ,ಅಧ್ಯಯನ ಮಾಡಿದ್ದಾರೆ. ಉದಾಹರಣೆಗೆ  ಆಸ್ಟ್ರೇಲಿಯಾದ ಒಂದು ಬುಡಕಟ್ಟಿನ ಗಂಡ ಹೆಂಡತಿ ಒಂದು ಕಡೆ ವಾಸ ಇದ್ದಾಗ ಅವರ ಮನೆಗೆ ಒಬ್ಬ ಪ್ರವಾಸಿ ಆಗಂತುಕ ಬರುತ್ತಾನೆ. ಮಾತನಾಡುತ್ತಾ ಗೊತ್ತಾಗುತ್ತದೆ ಅವನು ಈ ಕುಟುಂಬದ ಹೆಂಡತಿಯ ಬೆಡಗಿನೊಡನೆ ಲೈಂಗಿಕ ಸಂಬಂಧವುಳ್ಳ ಬೆಡಗಿನವನು ಎಂದು. ನಂತರ ಗಂಡ ತನ್ನ ಹೆಂಡತಿಯನ್ನು ಆ ಆಗಂತುಕನೊಡನೆ ಕೂಡಲು ಅವಕಾಶ ಕೊಡುತ್ತಾನೆ. ಅವಳೂ ಯಾವ ವಿರೋಧವಿಲ್ಲದೆ ಅವನೊಡನೆ ರಾತ್ರಿ ಕಳೆಯುತ್ತಾಳೆ. ಏಕೆಂದರೆ ಅವರಿಬ್ಬರಿಗೂ ಪರಸ್ಪರ ಲೈಂಗಿಕ ಸಂಬಂಧದ ಹಕ್ಕಿದೆ.
ಇಂತಹ ಪರಸ್ಪರ ಲೈಂಗಿಕ ಸಂಬಂಧದ ಬೆಡಗುಗಳ ಗಂಡು ಹೆಣ್ಣುಗಳ ನಡುವೆ  ಲೈಂಗಿಕ ಜೋಕುಗಳು , ಹಂಗಿಸುವುದು, ಮುಟ್ಟುವುದು ಇಂತಹ ಸರಸ,ಲೈಂಗಿಕ ಚೇಷ್ಟೆಗಳನ್ನು ಮಾಡುವ ಪದ್ಧತಿ ಇದೆ. ಹೆಣ್ಣು ಮೈನೆರೆದಾಗ ಲೈಂಗಿಕ ಸಂಬಂಧದ ಬೆಡಗಿನ ಗಂಡಸರೇ ಬಂದು ಗುಡಿಸಲು ಹಾಕುವುದು,ಗುಡಿಸಲಿನಿಂದ ಹೊರಗೆ ಕರೆತರುವುದು ಇತ್ಯಾದಿ ಶಾಸ್ತ್ರಗಳನ್ನು ಮಾಡುವ ಹಕ್ಕಿದೆ. ನಮ್ಮಲ್ಲೂ ಸೋದರ ಮಾವನನ್ನು ಮದುವೆಯಾಗುವ ಹಕ್ಕು, ಅವನೇ ಮೈನೆರೆದಾಗಿನ ಶಾಸ್ತ್ರಗಳನ್ನು ಮಾಡುವುದು, ಮದುವೆಗೆ ಮೊದಲು ಪರಸ್ಪರ ಸರಸ ಮಾಡುವ ಜಾನಪದ ಹಾಡುಗಳು ಈ ರೀತಿಯ ಬೆಡಗಿನ ಲೈಂಗಿಕ ಸಂಬಂಧಗಳ  ಪದ್ಧತಿಯ ಸಾಮಾಜಿಕ ಪಳೆಯುಳಿಕೆಗಳಾಗಿವೆ. ಕೆಲವು ದೇಶಗಳಲ್ಲಿ ಇದೇ ರೀತಿಯ ಹಕ್ಕು ತಾಯಿಯ ಸೋದರರಿಗೆ ನಿರಾಕರಿಸಲ್ಪಟ್ಟಿದೆ. ಆದರೆ ತಂದೆಯ ಸೋದರರು, ಅವರ ಮಕ್ಕಳೊಂದಿಗೆ ಲೈಂಗಿಕ ಸಂಬಂಧಗಳು ಸಾಮಾನ್ಯವಾಗಿವೆ.

ಪುನಲುವನ್ ಮದುವೆಗಳು :
ಮೇಲೆ ವಿವರಿಸಿದ ಇಡೀ ಬೆಡಗುಗಳೊಂದಿಗೆ ಗುಂಪು ಮದುವೆಗಳಂತಹ ಲೈಂಗಿಕ ಸಂಬಂಧಗಳು ತಾಯಿ ಮಕ್ಕಳು, ಸೋದರ ಸೋದರಿಯರ ನಡುವಣ ಲೈಂಗಿಕ ಸಂಬಂಧಗಳನ್ನು ತಪ್ಪಿಸುತ್ತವೆ. ಆದರೆ ತಂದೆ ಮಗಳ , ದೊಡ್ಡಪ್ಪ,ಚಿಕ್ಕಪ್ಪಂದಿರ ಜೊತೆ ಲೈಂಗಿಕ ಸಂಬಂಧಗಳು ಮುಂದುವರೆಯಲು ಅವಕಾಶ ನೀಡಿದೆ.ಏಕೆಂದರೆ ಇಡೀ ಬೆಡಗಿನ ಎಲ್ಲ ವಯೋಮಾನದ ಹೆಣ್ಣುಗಳೊಂದಿಗೆ ಕೂಡುವ ಪದ್ಧತಿಯಲ್ಲಿ ತನ್ನ ಜೊತೆ ಲೈಂಗಿಕ ಸಂಬಂಧದಿಂದ ಹುಟ್ಟಿರಬಹುದಾದ ಮಗಳ ಜೊತೆಯೂ ಕೂಡುವ ಪರಸ್ಪರ ಹಕ್ಕಿದೆ. ಇದೂ ಕೂಡ ಹುಟ್ಟುವ ಮಕ್ಕಳ ಬೆಳವಣಿಗೆಯ ಮೇಲೆ ಹಾನಿಕರ ಪರಿಣಾಮ ಬೀರುತ್ತದೆಂದು ಕಂಡುಕೊಂಡರು. ಅದನ್ನೂ ತಪ್ಪಿಸಲು ಮಾರ್ಗಗಳನ್ನು ಹುಡುಕಿದರು.‌ ಬೆಡಗುಗಳಲ್ಲಿಯೇ ವಿವಿಧ ವಯೋಮಾನದವರನ್ನು ಬೇರೆ ಗುಂಪಾಗಿ, ಉಪ ಬೆಡಗಾಗಿ ವಿಂಗಡಿಸಿ ಅಪ್ಪ ಮಗಳ ಕೂಡುವಿಕೆ ತಪ್ಪಿಸಲು ಪ್ರಯತ್ನಿಸಿದ್ದು ಹಲವು ಬುಡಕಟ್ಟುಗಳಲ್ಲಿ ಕಂಡಿದೆ.

ಈ ಪ್ರಯತ್ನಗಳು ಬೆಡಗುಗಳ ನಡುವೆ ಒಂದೇ ತಲೆಮಾರಿನವರೊಡನೆ ಮಾತ್ರ ಲೈಂಗಿಕ ಸಂಬಂಧಗಳು, ಕೊನೆಗೆ ಒಬ್ಬ ತಾಯಿಯ ಹೆಣ್ಣು ಮಕ್ಕಳು ಬೇರೆ ಬೆಡಗಿನ ಮತ್ತೊಬ್ಬ ತಾಯಿಯ ಗಂಡು ಮಕ್ಕಳೊಡನೆ ಮದುವೆಯಾಗುವ ಪದ್ಧತಿಗೆ ದಾರಿ ಮಾಡಿತು. ಅಂದರೆ ಒಂದು ಬೆಡಗಿನ ಅಕ್ಕ ತಂಗಿಯರು ಬೇರೆ ಬೆಡಗಿನ ಅಣ್ಣ ತಮ್ಮಂದಿರೊಡನೆ ಕೂಡುವ ಪದ್ಧತಿ ಬೆಳೆಯಿತು. ಅಮೇರಿಕದ ಆದಿವಾಸಿಗಳು ಇದಕ್ಕೆ ಪುನಲುವನ್ ಸಂಬಂಧ ಎಂದು ಕರೆಯುತ್ತಾರೆ. ‌ಇದು ತಾಯಿ ಮಗ, ತಂದೆ ಮಗಳು,ಸೋದರ,ಸೋದರಿಯರ ನಡುವಣ ಅತ್ಯಂತ ಹತ್ತಿರದ ಸಂಬಂಧಗಳನ್ನು ನಿಷೇಧಿಸಿತು. ಆದರೆ ಸೋದರ ಮಾವಂದಿರ ಮಕ್ಕಳೊಡನೆ‌ ಕೂಡುವ ಸಂಬಂಧಗಳನ್ನು ಉಳಿಸಿತು. ಇಂತಹ ಸಂಬಂಧಿಗಳ ಪಳೆಯುಳಿಕೆಯಾಗಿ ನಮ್ಮಲ್ಲಿ ಭಾವ ನಾದಿನಿ, ಅತ್ತಿಗೆ ಮೈದುನರ ನಡುವೆ ಸರಸಗಳನ್ನು ಹಲವು ಜಾನಪದ ಕತೆ,ಹಾಡುಗಳಲ್ಲಿ ಕಾಣುತ್ತೇವೆ. ಅತ್ತಿಗೆಯ ತಂಗಿಯನ್ನೇ ಮದುವೆಯಾಗುವ ರೂಢಿಯೂ ಇದೆ.

ರಾಮಾಯಣದಲ್ಲಿ ವಾಲಿ ಮತ್ತು ಸುಗ್ರೀವನ ಹೆಂಡತಿಯ ಸಂಬಂಧ ಹಾಗೆಯೇ ಸುಗ್ರೀವ ಮತ್ತು ವಾಲಿಯ ನಡುವಣ ಸಂಬಂಧ, ಪಂಚ ಪಾಂಡವರೊಡನೆ ದ್ರೌಪದಿಯ ಮದುವೆ ಇದಕ್ಕೆ ಥಟ್ಟನೆ ನೆನಪಾಗುವ ಉದಾಹರಣೆಗಳಾಗಿವೆ. ಪುರಾಣಗಳಲ್ಲಿ ಋಷಿ ಮುನಿಗಳ ಕುಟುಂಬಗಳಲ್ಲಿಯೂ ಇಂತಹ ಸಂಬಂಧಗಳ ಉದಾಹರಣೆಗಳಿವೆ. ಅಶ್ವಿನಿ ದೇವತೆಗಳು ಸೂರ್ಯಾಳನ್ನು , ಮರುತರೆಂಬ ಗುಂಪಿನ ಸೋದರರೆಲ್ಲರೂ ರೋಢಸಿ ಎಂಬುವಳನ್ನು, ವಿಶ್ವೇದೇವರೆಂಬ ಅಣ್ಣ ತಮ್ಮಂದಿರು ಒಬ್ಬಳೇ ಹೆಣ್ಣನ್ನು ಮದುವೆಯಾದದ್ದನ್ನು ವಿವರಿಸಲಾಗಿದೆ.
ಈಗಲೂ ನಮ್ಮ ದೇಶದ ಲಡಾಕ್‌ನಲ್ಲಿ ಎರಡು ಕುಟುಂಬಗಳ ಎಲ್ಲ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ನಡುವೆ ಮದುವೆಯಾಗುವ ಸಂಬಂಧವನ್ನು ಕಾಣುತ್ತೇವೆ. 

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅಣ್ಣನ ಹೆಂಡತಿಯ ಮೇಲೆ ತಮ್ಮಂದಿರಿಗೂ ಲೈಂಗಿಕ ಹಕ್ಕಿದೆ. ಮೈದುನಂದಿರಿಗೂ ಅವಳು ಹೆಂಡತಿಯೇ ಎಂಬ ಭಾವನೆ ಇರುವುದು ಮೈದುನ ಅತ್ತಿಗೆಯ ಎರಡನೇ ಗಂಡ ಎಂಬ ಭಾವನೆ ಇರುವುದರ ಉದಾಹರಣೆ ವೈದಿಕ ಗ್ರಂಥಗಳಲ್ಲಿಯೇ ಇದೆ. ಅಂಧನಾಗಿ ಹುಟ್ಟಿದ ದೀರ್ಘ ತಮಸ್ ಎಂಬವನ ಕತೆಯಲ್ಲಿ ಬೃಹಸ್ಪತಿಯು ಗರ್ಭಿಣಿಯಾದ ತನ್ನ ಅಣ್ಣನ ಹೆಂಡತಿಯನ್ನು ಕೂಡಿದ ಪ್ರಸಂಗ ಇದೆ.  ಅಣ್ಣ ಸತ್ತರೆ ತಮ್ಮನಿಗೆ ಅತ್ತಿಗೆಯ ಮೇಲೆ ಹಕ್ಕು, ಅವಳನ್ನು ಅಣ್ಣ ಸತ್ತ ದಿನವೇ ಮದುವೆಯಾಗುವ ರೂಢಿ ಇದೆ. ಋಗ್ವೇದ, ಅಥರ್ವಣ ವೇದಗಳಲ್ಲಿಯೂ ಈ ಪದ್ಧತಿಯ ದಾಖಲೆ ಇದೆ.

ಗಮನಾರ್ಹ ವಿಷಯವೆಂದರೆ ಇಚ್ಛೆಯಂತೆ ಸಂಬಂಧ, ಗುಂಪು ಮದುವೆ, ಅಣ್ಣ ತಮ್ಮಂದಿರು ಅಕ್ಕ ತಂಗಿಯರನ್ನು ಮದುವೆಯಾಗುವ ಪುನಲುವನ್ ಮದುವೆ  ಈ ಎಲ್ಲ ರೀತಿಯ ಲೈಂಗಿಕ ಸಂಬಂಧಗಳಲ್ಲಿ ಮಕ್ಕಳ ಅಪ್ಪ ಯಾರು ಎಂದು ಗುರುತಾಗದ ವಿಷಯ. ಮಕ್ಕಳ ಜನನಕ್ಕೆ ಅಪ್ಪ ಬೇಕು ಎಂಬ ಅರಿವು ಮೂಡಲು ಮಿಲಿಯಾಂತರ ವರ್ಷಗಳು ಬೇಕಾಯಿತು. ಅಂತಹ ತಿಳಿವಳಿಕೆ ಬಂದ ಮೇಲೂ ಮಕ್ಕಳಿಗೆ ಅಪ್ಪನಾರು ಎಂದು ತಿಳಿಯಲಿಲ್ಲ. ಅದಕ್ಕೆ ಮತ್ತೆ ಹಲವಾರು ಸಾವಿರ ವರ್ಷಗಳೇ ಬೇಕಾದವು.

ಜೋಡಿ ಪ್ರೇಮಿಗಳ ಲೈಂಗಿಕ ಸಂಬಂಧಗಳು :
ಅಣ್ಣ ತಮ್ಮಂದಿರು ಅಕ್ಕ ತಂಗಿಯರೊಡನೆ ಒಟ್ಟಾಗಿ ಲೈಂಗಿಕ ಸಂಬಂಧ ಬೆಳೆಸುವ ಪುನಲುವನ್ ಪದ್ಧತಿಯಲ್ಲಿ , ಗುಂಪು ಸಂಬಂಧದ ಪದ್ಧತಿಯಲ್ಲಿಯೂ ಒಬ್ಬ ಹೆಣ್ಣಿಗೆ ಒಬ್ಬ ಗಂಡಿನ ಜೊತೆ ಅಥವಾ ಒಬ್ಬ ಗಂಡಿಗೆ ಒಬ್ಬ ಹೆಣ್ಣಿನ ಜೊತೆ ಹೆಚ್ಚಿನ ಸಂಬಂಧ ಬೆಳೆಯುವ ಸಾಧ್ಯತೆಗಳಿದ್ದವು. ದ್ರೌಪದಿಗೂ ಎಲ್ಲರೊಡನೆ ಕೂಡುತ್ತಾ ತನ್ನ ಲೈಂಗಿಕತೆಯನ್ನು ಹಂಚಿಕೊಂಡಿದ್ದರೂ ಕೂಡಾ ಭೀಮ ಜೊತೆ ಹೆಚ್ಚಿನ ಒಲವು ಇದ್ದುದು ಮಹಾಕಾವ್ಯದಲ್ಲಿಯೇ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ತಾನು ಮೆಚ್ಚಿದ ಹಾಗೂ ತನ್ನನ್ನು ಮೆಚ್ಚಿದ ಹೆಣ್ಣನ್ನು ಅಪಹರಿಸಿ ಮದುವೆಯಾಗುವ ರುಕ್ಮಿಣೀ , ಸುಭದ್ರಾ ಅಪಹರಣಗಳು ಆರಂಭವಾದವು.

ಗಂಡು ಹೆಣ್ಣಿನ ನಡುವೆ ಈ ರೀತಿಯ ಹೆಚ್ಚಿನ ಆಪ್ತತೆಯಿಂದ ಅವಳ ಮಕ್ಕಳ ಬೆಳವಣಿಗೆಯಲ್ಲಿ  ಗಂಡಿನ ಆಸಕ್ತಿ ಹೆಚ್ಚಾಗುವುದು ತನ್ನ ಮಕ್ಕಳ ಬೆಳವಣಿಗೆಗೆ ಪ್ರಯೋಜನಕಾರಿಯಾಗುವುದೆಂದು  ಹೆಣ್ಣು ಕಂಡುಕೊಂಡಳು. ಜೋಡಿ ಜೀವನ ಪದ್ಧತಿಯನ್ನು ಹೆಣ್ಣು ಹೆಚ್ಚು ಹೆಚ್ಚಾಗಿ ಇಷ್ಟಪಡತೊಡಗಿದಳು.

ಈ ವೇಳೆಗೆ ಸಮಾಜದ ಒಟ್ಟಾರೆ ಬೆಳವಣಿಗೆ ಬೇಟೆಯಿಂದ ಕೃಷಿ ಮತ್ತು ಪಶು ಸಂಗೋಪನೆಯ ಕಡೆಗೆ ಸಾಗಿತ್ತು. ಕೃಷಿ ಭೂಮಿಗಾಗಿ ಯುದ್ಧಗಳು, ಪಶುಗಳಿಗಾಗಿ ತುರುಗೊಳ್ ಯಾ ಗೋಗ್ರಹಣಗಳು ವ್ಯಾಪಕವಾಗ ತೊಡಗಿದ್ದವು.
ಈ ಎರಡೂ ಬೆಳವಣಿಗೆಗಳು ಸೇರಿ ಮುಂದೆ ವಿವಾಹ ಪದ್ಧತಿಯನ್ನು ಅಸ್ತಿತ್ವಕ್ಕೆ ತಂದವು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: