ಪಿ ಪಿ ಉಪಾಧ್ಯ ಸರಣಿ ಕಥೆ 44 – ಮೊದಲ ಪ್ರದರ್ಶನದ ಎರಡು ಪಾಲು ಜನ…

ಪಿ ಪಿ ಉಪಾಧ್ಯ

ಮಾರನೆಯ ದಿನ ನ್ಯೂಯಾರ್ಕ್ನಲ್ಲಿಯೇ ಷೋ. ಹೊರದೇಶದ ನೆಲದಲ್ಲಿ ಮೊದಲ ಪ್ರದರ್ಶನ. ಶಾಸ್ತ್ರೀಗಳ ತರಬೇತಿ ಕೌಶಲ್ಯಕ್ಕೊಂದು ಛಾಲೆಂಜ್. ಹುಡುಗರೂ ಅಷ್ಟೆ. ಭಾಷೆ ತಿಳಿಯದ ದೇಶವೆಂದು ಹೆದರಿದವರಿಗೆ ನಿನ್ನೆ ಅಲ್ಲಿ ಸೇರಿದ ಜನರೊಂದಿಗೆ ನಡೆದ ಸಂಭಾಷಣೆ ಧೈರ್ಯ ತಂದು ಕೊಟ್ಟಿತ್ತು. ಸುತ್ತ ಮುತ್ತ ಇರುವ ಕನ್ನಡದವರೇ ಕಾರ್ಯಕ್ರಮಕ್ಕೆ ಬರುವವರೆಂದೂ ಅವರಲ್ಲಿಯೂ ಹೆಚ್ಚಿನವರು ತಮ್ಮ ಊರು ಮತ್ತು ಸುತ್ತ ಮುತ್ತ ಊರಿಂದ ಬಂದವರೇ ಎಂದೂ ಹೇಳಿದ್ದನ್ನು ಕೇಳಿ ನಿರಾಳವಾಗಿತ್ತು. ಅಂತ್ಯನಿಗೆ ಮಾತ್ರ ಅಣ್ಣನದ್ದೇ ಧ್ಯಾನ.

ಬಂದವರಲ್ಲಿ ಕೆಲವರು ಅನಂತನಿದ್ದ ಊರಿನವರೂ ಇದ್ದರು. ಡ್ರೈವ್ ಮಾಡಿಕೊಂಡು ಬಂದರೆ ಒಂದು ಘಂಟೆಯ ಹಾದಿ ಎನ್ನುತ್ತಿದ್ದ ಅವರು ರಾತ್ರಿ ಊಟವಾದ ಮೇಲೂ ತುಂಬ ಹೊತ್ತು ಮೇಷ್ಟ್ರ ಹತ್ತಿರ ಮಾತಾಡುತ್ತಲೇ ಇದ್ದಿದ್ದರು. ಕೆಲವರು ಅಣ್ಣನ ಬಗ್ಗೆ ಪರಿಚಯದ ಮಾತೂ ಆಡಿದ್ದಲ್ಲದೆ ಇನ್ಸ್ಟಿಟ್ಯೂಟಿನಲ್ಲಿ ಈಗಲೇ ಒಳ್ಳೆಯ ಹೆಸರು ಮಾಡಿದ್ದರ ಬಗ್ಗೆಯೂ ಹೇಳಿದ್ದರು. ಒಬ್ಬನಂತೂ ಇದೇ ರೀತಿಯಲ್ಲಿ ಮುಂದುವರಿದರೆ ಅನಂತ ನೋಬೆಲ್ ಪ್ರಶಸ್ತಿ ಪಡೆಯುವಂತಾದರೂ ವಿಶೇಷವೇನಿಲ್ಲ ಎನ್ನುವ ಮಾತನ್ನೂ ಆಡಿದ್ದ. ಆಗೆಲ್ಲ ಸಂತೋಷವಾದರೂ ಅಂತ್ಯನಿಗೆ ಅಣ್ಣ ಬರದೇ ಇದ್ದುದು ಮಾತ್ರ ನುಂಗಾಲಾದ ತುತ್ತಾಗಿತ್ತು.

ಅಣ್ಣನ ಬಗ್ಗೆ ಹೊಗಳಿಕೆಯ ಮಾತೆಲ್ಲ ಅವನೂ ತಮ್ಮ ಊರಿನವನು ಅದೂ ಈ ಯಕ್ಷಗಾನ ತಂಡವೂ ಅವನೂರಿನದ್ದೇ ಎನ್ನುವುದರಿಂದ ಆಗಿತ್ತೇ ವಿನಃ ಒಬ್ಬರೂ ಅಂತ್ಯನ ಮತ್ತು ಅವನ ಸಂಬ೦ಧದ ಬಗ್ಗೆ ಮಾತಾಡಲಿಲ್ಲ. ಅಂತ್ಯನಿಗೆ ಗೊಂದಲ. ತಾನಾಗಿ ಅನಂತ ತನ್ನ ಅಣ್ಣ ಎಂದು ಹೇಳಿಕೊಳ್ಳಲೇ ಬೇಡವೇ ಎಂದು. ಅಲ್ಲಿಗೆ ಬಂದಿದ್ದ ಯಾರೊಡನೆಯೂ ತನ್ನ ಬಗ್ಗೆ ಅಣ್ಣ ಹೇಳಿಕೊಂಡ೦ತೆ ಕಾಣಿಸಲಿಲ್ಲ ಅಂತ್ಯನಿಗೆ. ಅಂದ ಮೇಲೆ ತಾನಾಗಿಯೇ ಯಾಕೆ ಹೇಳಲಿ ಎಂದೂ ಅಂದುಕೊ೦ಡ. ಆ ಬಗ್ಗೆ ತೀರಾ ನೋವಾದರೂ ತಮ್ಮ ಸಂಬ೦ಧದ ಬಗ್ಗೆ ಹೇಳಿಕೊಳ್ಳುವುದು ತನ್ನ ಮರ್ಯಾದೆಗೆ ಕಮ್ಮಿ ಎಂದು ಅಣ್ಣ ಹೇಳಿಕೊಳ್ಳದಿದ್ದುದಾದರೆ?  ಸುಮ್ಮನಿರುವುದೇ ಲೇಸು ಎಂದುಕೊ೦ಡ. ಶಾಸ್ತ್ರೀಗಳೂ ತಮ್ಮ ಶೋವನ್ನು ಯಶಸ್ವೀಗೊಳಿಸುವ ಗಡಿಬಿಡಿಯಲ್ಲಿದ್ದುದರಿಂದ ಆ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಅದೂ ಒಳ್ಳೆಯದೇ ಆಯ್ತು ಎಂದುಕೊ೦ಡ ಅಂತ್ಯ.

ನ್ಯೂಯಾರ್ಕ್ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು. ಅಲ್ಲಿನ ಭಾರತೀಯರು ಬಿಡಿ. ಅವರೇ ಒತ್ತಾಯದಿಂದ ಕರೆದುಕೊಂಡು ಬಂದಿದ್ದ ಅವರ ಸ್ಥಳೀಯ ಮಿತ್ರರೂ ಬಹಳ ಮೆಚ್ಚಿಕೊಂಡರು. ಶೋ ಮುಗಿದ ನಂತರ ಅವರ ಸ್ನೇಹಿತರೊಂದಿಗೆ ಗ್ರೀನ್ ರೂಮಿಗೆ ನುಗ್ಗಿದ ಅವರು ಅಂತ್ಯನನ್ನು ಹೊತ್ತುಕೊಳ್ಳುವುದೊಂದೇ ಬಾಕಿ. ಶಾಸ್ತ್ರೀಗಳಿಗೆ ತುಂಬಾ ತೃಪ್ತಿಯಾಗಿತ್ತು. ಮಾರನೆಯ ದಿನ ಸ್ಥಳೀಯ ಪೇಪರಿನಲ್ಲಿಯಂತೂ ಹೊಗಳಿಕೆಯ ಸುರಿಮಳೆ.  ಭಾರತೀಯ ಜಾನಪದ ಕಲೆಯೊಂದು ಜನರನ್ನು ಹೇಗೆ ಮೈಮರೆಯುವ ಮಟ್ಟಕ್ಕೆ ಕೊಂಡೊಯ್ಯಬಲ್ಲುದು ಎನ್ನುವುದನ್ನು ನೋಡಿಯೇ ತಿಳಿಯಬೇಕು ಎಂದು ಬರೆದಿದ್ದುವು.

ಒಂದು ಪತ್ರಿಕೆಯಂತೂ ತಂಡದವರಿಗೆ ಸಮಯಾವಕಾಶವಿದ್ದು ಅವರು ತಯಾರಿರುವುದಾದರೆ ನ್ಯೂಯಾರ್ಕಿನಲ್ಲಿಯೇ ಇನ್ನೂ ಎರಡು ಪ್ರದರ್ಶನಗಳನ್ನು ಏರ್ಪಡಿಸಬಹುದು ಎಂದೂ ಬರೆದಿತ್ತು. ಅಲ್ಲಿನ ಖಾಯಂ ನಿವಾಸಿಯೇ ಆಗಿದ್ದ ಇವರೂರಿನವನೊಬ್ಬ ಆ ಪತ್ರಿಕೆಯ ಪ್ರತಿಯನ್ನು ಹಿಡಿದುಕೊಂಡು ಮಾರನೆಯ ಬೆಳಿಗ್ಗೆಯೇ ಇವರಿದ್ದ ಜಾಗಕ್ಕೆ ಬಂದಿದ್ದ. ಪತ್ರಿಕೆಯಲ್ಲಿ ಬರೆದುದನ್ನು ತೋರಿಸುತ್ತ ‘ಸಾಮಾನ್ಯವಾಗಿ ಹೊರದೇಶದ ಕಲೆಗಳಿಗೆ ಅದೂ ಭಾರತೀಯ ಕಲೆಯ ಬಗ್ಗೆ ಎಂದೂ ಹಾಗೆ ಬರೆಯಲು ತಯಾರಿಲ್ಲದ ಆ ಮಂದಿ ಹೀಗೆ ಬರೆದಿದ್ದಾರೆಂದರೆ ಅದೊಂದು ತೀರಾ ವಿಶೇಷ ಮತ್ತು ನಮ್ಮ ಯಕ್ಷಗಾನ ಕಲೆಗೆ ದೊರೆತ ಗೌರವ… ಇನ್ನೊಂದೆರಡು ಶೋಗಳಿಗೆ ವ್ಯವಸ್ಥೆಯನ್ನು ಮಾಡಲೇ.. ಹೇಗೆ’ ಎಂದು ಕೇಳಿದ್ದ. ಶಾಸ್ತಿçಗಳಿಗೆ ಸಂದಿಗ್ಧ.

ಮುಂದಿನ ಸ್ಥಳಗಳಲ್ಲಿ ಆಗಲೇ ಕಾರ್ಯಕ್ರಮ ಕೊಡುವ ಬಗ್ಗೆ ವ್ಯವಸ್ಥೆ ಆಗಿದೆ. ಅವುಗಳಲ್ಲಿ ಯಾವುದನ್ನೂ ತಪ್ಪಿಸುವ ಹಾಗಿಲ್ಲ… ಅಷ್ಟೇ ಅಲ್ಲ ವೇಳೆಯನ್ನು ಬದಲಾಯಿಸುವ ಹಾಗೂ ಇಲ್ಲ. ಬಂದವನೊ೦ದಿಗೆ ತನ್ನ ಮಿತಿಯನ್ನು ಹೇಳಿಕೊಂಡರು. `ಸಾಧ್ಯವಾದರೆ ಅಲ್ಲಿನ ಪೂರ್ವನಿಗದಿತ ಕಾರ್ಯಕ್ರಮಗಳು ಮುಗಿದ ಮೇಲೆ ಭಾರತಕ್ಕೆ ಹಿಂತಿರುಗುವ ಮೊದಲು ಸಾದ್ಯವಾಗುತ್ತದೋ ನೋಡೋಣ. ಅದಕ್ಕೂ ನಮ್ಮನ್ನು ಇಲ್ಲಿಗೆ ಬರಮಾಡಿಕೊಂಡವರನ್ನು ಒಂದು ಮಾತು ಕೇಳಬೇಕು’ ಎಂದರು.

ಹಾಗೆ ಮಾತನಾಡುತ್ತಿರುವಾಗಲೇ ಇವರನ್ನು ಇಲ್ಲಿಗೆ ಕರೆಸಿಕೊಂಡ ಆ ಸ್ನೇಹಿತರ ಗುಂಪೇ ಬಂದಿತ್ತು. ಪೇಪರಿನಲ್ಲಿ ಬರೆದುದನ್ನು ಅವರೂ ಓದಿದವರೇ. ಇಲ್ಲೇ ಇನ್ನೊಂದೆರಡು ಪ್ರದರ್ಶನ ನೀಡುವಂತಾದರೆ ಅವರಿಗೂ  ಸಂತೋಷವೇ. ಕರೆಸುವ ಮೊದಲು ತುಸು ಅನುಮಾನದಿಂದಲೇ ಇದ್ದ ಅವರಿಗೆ ಇಲ್ಲಿ ಅವರಿಗೆ ಸಿಕ್ಕಿದ ಸನ್ಮಾನ, ಹೊಗಳುವಿಕೆ ಮತ್ತು ಪ್ರದರ್ಶನಗಳಿಗಾಗಿ ಬರುತ್ತಿದ್ದ ಹೊಸ ಹೊಸ ಬೇಡಿಕೆ ಇವೆಲ್ಲವನ್ನು ನೋಡಿ ಹಿಗ್ಗು. ಆದರೂ ಈ ತಂಡದ ಭೇಟಿ ಸಮಯ ನಿರ್ಬಂಧಿತವಾದದ್ದು. ಅಷ್ಟರೊಳಗೆ ಆಗಲೇ ನಿಗದಿಯಾಗಿದ್ದ ಬೇರೆ ಬೇರೆ ಊರುಗಳಲ್ಲಿನ ಕಾರ್ಯಕ್ರಮ ಮುಗಿಸಬೇಕು. ಅಲ್ಲದೇ ಮೊದಲೇ ಒಪ್ಪಿಕೊಂಡು ಬಂದ ಅವಧಿಯನ್ನು ಮುಂದುವರಿಸಬೇಕೆ೦ದರೆ ಸಂಬ೦ಧಪಟ್ಟವರ ಅನುಮತಿ ಪಡೆದುಕೊಳ್ಳಬೇಕು. ಬಹುಶಃ ಇಲ್ಲಿನ ಜನ ಈ ತೆರನ ಆಸಕ್ತಿ ತೋರಿಸುತ್ತಿದ್ದಾರೆ ಎನ್ನುವುದನ್ನು ಅವರ ಗಮನಕ್ಕೆ ತಂದರೆ ಅವರೂ ಒಪ್ಪಿಯಾರು ಎನ್ನುವ ಆಸೆ. ಹಾಗಾಗಿ ಅವರೂ ಶಾಸ್ತ್ರೀಗಳಿಗೆ ಹೇಳಿದರು. ‘ನಿಮ್ಮ ಅವಧಿ ವಿಸ್ತರಿಸುವ ಜವಾಬ್ದಾರಿ ನಮಗಿರಲಿ. ಹಾಗಾದರೆ ನಿಮ್ಮ ಪ್ರಯಾಣವನ್ನು ಅಷ್ಟು ದಿನ ಮುಂದೆ ಹಾಕುವಲ್ಲಿ ನಿಮ್ಮದೇನೂ ಆಭ್ಯಂತರವಿಲ್ಲ ತಾನೇ..’

ಆಗ ಶಾಸ್ತಿçಗಳಿಗೆ ಅನ್ನಿಸಿದ್ದು ತಂಡದ ಉಳಿದವರನ್ನೂ ಕೇಳಬೇಕು ಎನ್ನುವುದು. ‘ಅಂತಹ ತುರ್ತಿನ ಪರಿಸ್ಥಿತಿ ಯಾರಿಗೂ ಇಲ್ಲ ಆದರೂ ಅವರನ್ನೊಂದು ಮಾತು ಕೇಳಿ ನಾಳೆ ಬೆಳಿಗ್ಗೆಯಷ್ಟರಲ್ಲಿ ಹೇಳುತ್ತೇನೆ’ ಎಂದರು.

ಅದೇ ಮಾತನ್ನು ತಂಡದವರೊ೦ದಿಗೆ ಅಂದು ರಾತ್ರಿ ಊಟದ ಹೊತ್ತಿನಲ್ಲಿ ಎಲ್ಲ ಸೇರಿದಾಗ ಹೇಳಿದರೆ ಎಲ್ಲರೂ ಸಂತೋಷದಿ೦ದ ಒಪ್ಪಿದ್ದರು. ಮಾರನೆಯ ದಿನವೇ ಬೇರೆ ಊರಿಗೆ ಹೋಗುವ ಕಾರ್ಯಕ್ರಮ. ಮತ್ತು ಅವು ಮುಗಿದ ಕೂಡಲೇ ದೇಶಕ್ಕೆ ವಾಪಾಸು ಹೋಗುವುದು. `ಅಂತೂ ಅನಂತನನ್ನು ಕಾಣಲು ಆಗಲೇ ಇಲ್ಲ’ ಎಂದು ಅಲವತ್ತುಕೊಳ್ಳುತ್ತಿದ್ದ ಅಂತ್ಯನಿಗೆ ತುಸು ಸಮಾಧಾನ. ಮುಂದೆ ಇಲ್ಲಿ ಬಂದು ಇರುವ ಆ ಎರಡು ದಿನಗಳಲ್ಲಿಯಾದರೂ ಅನಂತ ಬಂದಾನು. ಇಲ್ಲವೆಂದರೆ ನಾನೇ ಒಮ್ಮೆ ನೋಡಿಕೊಂಡು ಬಂದರೂ ಆದೀತು.. ಅಂತೂ ಇನ್ನೊಂದು ಅವಕಾಶ ಸಿಕ್ಕಿತಲ್ಲ ಎಂದು ತುಸು ಸಮಧಾನಪಟ್ಟುಕೊಂಡ.

ಮಾರನೆಯದಿನ ಇನ್ನೊಂದೂರಿಗೆ. ಇವರ ಕಾರ್ಯಕ್ರಮದ ಹೊಣೆ ಹೊತ್ತ ಅಲ್ಲಿಯ ಜನ ಅದೆಷ್ಟೋ ಬಾರಿ ಆಗಲೇ ಫೋನ್ ಮಾಡಿದ್ದರು. ವಿಮಾನ ಪ್ರಯಾಣದ ಟಿಕೆಟ್ಟಿನ ವ್ಯವಸ್ಥೆಯನ್ನೂ ಮಾಡಿದ್ದ ಅವರು ಆ ಪ್ರಯಾಣದ ಸೂಕ್ಷ್ಮ ವಿವರಗಳನ್ನೂ ಹೇಳಿದ್ದರು ಮತ್ತು ಆ ಊರಿಗೆ ಬಂದಿಳಿದ ಕೂಡಲೇ ಆಗಲೇ ಅಲ್ಲಿಗೆ ಬಂದು ಕಾಯುತ್ತಿರುವ ತಮ್ಮ ಐದು ಜನರ ವಾಹನಗಳಲ್ಲಿ ಎಲ್ಲರೂ ಹೋಗುವುದೆಂತಲೂ ಹಾಗೆ ಹೋದವರು ಅವರು ಹತ್ತಿದ ವಾಹನಗಳವರ ಮನೆಯಲ್ಲಿ ಉಳಿಯುವುದು ಮತ್ತು ಮಧ್ಯಾಹ್ನದ ಊಟ ಮುಗಿಸಿ ಸಂಜೆಯ ಕಾರ್ಯಕ್ರಮದ ಜಾಗಕ್ಕೆ ಹೋಗುವುದು ಎಂದೂ ಹೇಳಿದ್ದರು. ಪ್ರಯಾಣದ ಅವಧಿ ಎರಡೂವರೆ ಘಂಟೆ.

ಎಲ್ಲ ಕರಾರುವಾಕ್ಕಾಗಿ ಅವರು ಹೇಳಿದಂತೆಯೇ ನಡೆಯಿತು. ಬಂದು ಕಾಯುತ್ತಿದ್ದವರಲ್ಲಿ ಕೆಲವರಿಗೆ ಶಾಸ್ತ್ರೀಗಳ ನೇರ ಪರಿಚಯವಿತ್ತು. ಇನ್ನುಳಿದ ಇಬ್ಬರಿಗೆ ಅಂತ್ಯನ ತಂದೆ ಶಾಮಣ್ಣನವರ ಪರಿಚಯವಿತ್ತು. ಹಾಗಾಗಿ ಯಾರಿಗೆ ಯಾರೂ ಹೊಸಬರೆಂಬ ಭಾವನೆ ಕಾಡಲೇಇಲ್ಲ.

ಕಾರ್ಯಕ್ರಮವೂ ಚನ್ನಾಗಿಯೇ ನಡೆಯಿತು. ಪೂರ್ವ ನಿರ್ಧರಿತ ಪ್ರಸಂಗಗಳು. ತಿಂಗಳುಗಟ್ಟಲೆ ತರಬೇತಿ ಪಡೆದ ತಂಡ. ಅದು ಬೇರೆ ನ್ಯೂಯಾರ್ಕಿನಲ್ಲಿನ ಪ್ರದರ್ಶನದ ಯಶಸ್ಸಿನಿಂದ ಉತ್ಸಾಹದ ಬುಗ್ಗೆಯೇ ಆಗಿದ್ದ ಪ್ರತಿಯೊಬ್ಬ ಸದಸ್ಯರು. ಕಾರ್ಯಕ್ರಮ ಶಾಸ್ತ್ರೀಗಳಿಗೇ ಆಶ್ಚರ್ಯವಾಗುವಷ್ಟು ಚನ್ನಾಗಿ ಬಂದಿತ್ತು. ಪ್ರೇಕ್ಷಕರಂತೂ ಹುಚ್ಚೆದ್ದು ಕುಣಿದಿದ್ದರು. ಅಂತ್ಯನ ಪಾತ್ರ ಸ್ಟೇಜಿನ ಮೇಲೆ ಬಂದಾಗಲ೦ತೂ ತಾವೆಲ್ಲ ಅಮೆರಿಕದಲ್ಲಿದ್ದೇವೆ ಎನ್ನುವುದನ್ನೂ ಮರೆತು ಶಿಳ್ಳೆ ಹೊಡೆದಿದ್ದರು. ಲೆಕ್ಕವಿಲ್ಲದಷ್ಟು ಸಲ ಒನ್ಸ್ ಮೋರ್ ಎಂದಿದ್ದರು.

ಇಲ್ಲಿಯೂ ಅಷ್ಟೆ. ನ್ಯೂಯಾರ್ಕ್ನಂತೆಯೇ. ಶೋ ಮುಗಿದಾಗ ಪ್ರೇಕ್ಷಕರಲ್ಲಿ ಹೆಚ್ಚಿನವರು ಒಳಗಿದ್ದ ಬಣ್ಣ ಹಚ್ಚಿಕೊಳ್ಳುವ ಕೋಣೆಗೆ ನುಗ್ಗಿದರು. ಅವರು ಬಂದ ರಭಸಕ್ಕೆ ಕಂಗಾಲಾದ ಅರ್ಧಂಬರ್ಧವೇಷ ಕಳಚಿ ಪೆಟ್ಟಿಗೆಯಲ್ಲಿ ಮಡಚಿಡಲು ನೋಡುತ್ತಿದ್ದ ಹುಡುಗರೆಲ್ಲ ಆ ಕ್ಷಣಕ್ಕೆ ತಟಸ್ಥರಾಗಿದ್ದರು. ತಮ್ಮ ಗಡಿಬಿಡಿಯಿಂದ ಹೊರಬರುವ ಮುನ್ನವೇ ಅವರನ್ನು ಎಳೆದು ಹೊಗಳುತ್ತ ಅವರ ಕೈಗೆ ಮತ್ತು ಜೋಬಿಗೆ ಹಣ ತುಂಬಲು ಮುನ್ನುಗ್ಗುತ್ತಿದ್ದ ಆಉತ್ಸಾಹಿಗಳನ್ನು ಶಾಸ್ತ್ರೀಗಳೇ ತಡೆಯಬೇಕಾಯ್ತು. ಆ ಉತ್ಸಾಹಿಗಳ ಗುಂಪಿನ ಹಿಂದೆಯೇ ಬಂದಿದ್ದ ಕಾರ್ಯಕ್ರಮದ ಆಯೋಜಕರೇ ಮುಂದೆ ಬಂದು ಎಲ್ಲರನ್ನೂ ಸಮಾಧಾನಿಸಿ `ನೀವು ಏನು ಕೊಡಬೇಕೆಂದಿದ್ದೀರೊ ಅದನ್ನೆಲ್ಲ ನಮ್ಮ ಕೈಗೇ ಕೊಡಿ ಅದೆಲ್ಲ ಆ ಹುಡುಗರಿಗೆ ತಲುಪುವಂತೆ ಮಾಡುವ ಜವಾಬ್ದಾರಿ ನಮ್ಮದು’ ಎಂದು ಅವೆಲ್ಲವನ್ನೂ ತೆಗೆದುಕೊಂಡು `ಇದೆಲ್ಲ ಬೇಡ…’  ಎಂದು ಹಿಂಜರಿಯುತ್ತಿದ್ದ ಶಾಸ್ತ್ರೀಗಳ ಕೈಗೆ ಕೊಟ್ಟರು.

ಅವರೆಲ್ಲ ಹೋದ ಮೇಲೆ ಹುಡುಗರೂ ತಮ್ಮ ತಮ್ಮ ವೇಷ ಕಳಚಿ ಕುಳಿತಾಗ ಶಾಸ್ತ್ರೀಗಳು ಅವರೆದುರಿಗೇ ಆ ಹಣವನ್ನ ಎಣಿಸಿ ಹೇಳಿದರು ಮತ್ತು ಭಾರತಕ್ಕೆ ಹೋದ ಮೇಲೆ ಅದೆಲ್ಲವನ್ನೂ ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿ ಅವರೆಲ್ಲರಿಗೆ ಕೊಡುವುದಾಗಿ ಹೇಳಿದರೆ ಹುಡುಗರ ಮುಖದ ಮೇಲೆ ತೀರ ಗೌರವದಿಂದ ಕೂಡಿದ ತೃಪ್ತಿಯ ಭಾವನೆ.

ಇನ್ನೆರಡು ದಿನ ಬಿಟ್ಟು ನಡೆದ ಇನ್ನೊಂದೂರಿನ ಕಾರ್ಯಕ್ರಮದಲ್ಲಿಯೂ ಅದರದ್ದೇ ಪುನರಾವರ್ತನೆ. ಬಹಳ ತೃಪ್ತಿಯಿಂದ ತಂಡ ಅಲ್ಲಿನ ಕಾರ್ಯಕ್ರಮವನ್ನೂ ಮುಗಿಸಿ ನ್ಯೂಯಾರ್ಕಿಗೆ ಮರಳಿತು. ಅಷ್ಟರಲ್ಲಿ ಅಲ್ಲಿನ ಮಂದಿ ಶಾಸ್ತ್ರೀಗಳ ತಂಡ ಇನ್ನೊಂದಿಷ್ಟು ದಿನ ಅಲ್ಲಿಯೇ ಮುಂದುವರಿಯುವ ಬಗ್ಗೆ ಪರವಾನಗಿಯನ್ನು ಪಡೆದುಕೊಂಡುದೂ ಆಗಿತ್ತು.

ಈಗಿನದ್ದು ಜನರ ಅಪೇಕ್ಷೆಯ ಮೇರೆಗೆ ಹಮ್ಮಿಕೊಂಡ ಕಾರ್ಯಕ್ರಮ. ಪ್ರೇಕ್ಷಕರನ್ನು ಕಲೆ ಹಾಕುವ ಜವಾಬ್ದಾರಿಯೂ ಅವರದ್ದೇ. ಆದರೆ ಅದು ಅಂತಹ ಕಷ್ಟದ ಕೆಲಸವಾಗಿರಲಿಲ್ಲ ಅವರಿಗೆ ಎನ್ನುವುದು ತಿಳಿದದ್ದು ಪ್ರದರ್ಶನಕ್ಕೆ ನೆರೆದ ಪ್ರೇಕ್ಷಕರ ಸಂಖ್ಯೆ ನೋಡಿಯೇ. ಮೊದಲ ಪ್ರದರ್ಶನದ ಎರಡು ಪಾಲು ಜನ ನೆರೆದಿದ್ದರು. ಎರಡನೇ ದಿನವೂ ಅಷ್ಟೆ. ವಾರಾಂತ್ಯದ ದಿನಗಳಲ್ಲಿಯೇ ಎರಡೂ ಶೋ ಇದ್ದುದರಿಂದ ಬರುವವರಿಗೂ ಅನುಕೂಲವಾಗಿತ್ತು.

‍ಲೇಖಕರು Admin

June 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: