ಕೆ ಪಿ ಸುರೇಶ ಕಂಡಂತೆ ‘ಬಾಪೂ ಹೆಜ್ಜೆಗಳಲ್ಲಿ’

ಗಾಂಧಿ ಎಂಬ ಕಾಡುವ ನೆನಪು…ಕತೆಗಳಲ್ಲಿ ಮರುಹುಟ್ಟು ಪಡೆದಾಗ…

ಕೆ ಪಿ ಸುರೇಶ

ಗಾಂಧಿ ಎಂಬ ಕಾಡುವ ನೆನಪನ್ನೇ ಕೇಂದ್ರವಾಗಿರಿಸಿಕೊಂಡ ತಮಿಳಿನ ಹಲವಾರು ಕತೆಗಳಲ್ಲಿ ಹತ್ತು ಕತೆಗಳನ್ನು ಆಯ್ದು ಶ್ರೀ ನಲ್ಲತಂಬಿಯವರು ನಮ್ಮ ಕೈಯಲ್ಲಿ ಇಟ್ಟಿದ್ದಾರೆ.

ಗಾಂಧಿ ಕುರಿತ ನೆನಪು ಮತ್ತು ಗಾಂಧಿ ಪ್ರಜ್ಞೆ ಎರಡೂ ಹಾಸುಹೊಕ್ಕಾಗಿರುವ ಈ ಕತೆಗಳು ಇಂದು ನಾವು ಎದುರಿಸಬೇಕಾದ ಗಾಂಧಿಯನ್ನು ನಮ್ಮ ಮುಂದೆ ಕಡೆದು ನಿಲ್ಲಿಸುತ್ತವೆ. ಈ ಹಂದರವು ಇಲ್ಲಿನ ಕತೆಗಳ ವಸ್ತು ಮತ್ತು ಶೈಲಿಗಳೆರಡನ್ನೂ ರೂಪಿಸಿವೆ.

ತಮಿಳಿನ ಪ್ರಜ್ಞೆಯು  ʼಗಾಂಧಿʼ ಎಂಬ ಒಂದು ʼಕಾಲದ ಘಟನೆಗೆʼ ಸ್ಪಂದಿಸಿದ ರೀತಿಯನ್ನು ಈ ಕತೆಗಳಲ್ಲಿ ಕಾಣಬಹುದಾದರೂ, ಅದು ತಮಿಳಿಗೇ ಪ್ರತ್ಯೇಕವಾದದ್ದಲ್ಲ.  ಈ ದೇಶದ ಎಲ್ಲ ದೇಶ ಭಾಷೆಗಳನ್ನೂ ಗಾಂಧಿ ಕಾಲಕಾಲಕ್ಕೆ ಕಾಡಿದ್ದಾರೆ.  ಗಾಂಧಿ ಜೀವಂತ ಇದ್ದಾಗ ಅವರ ಪ್ರಭಾವಕ್ಕೆ ಒಳಗಾಗಿ ಆದ್ಯಂತ ಬದಲಾದ ಸಾವಿರಾರು ವ್ಯಕ್ತಿಗಳು  ದೇಶದ ಉದ್ದಗಲಕ್ಕೂ ಹರಡಿಕೊಂಡಿರುವ ಪರಿ  ಅಚ್ಚರಿಯ ಸಂಗತಿ.   ಗಾಂಧಿ ತೀರಿಕೊಂಡ ಮೇಲೆ  ಅವರು  ಕಾಡಿದ ಬಗೆ ಇನ್ನೊಂದು ಬಗೆಯದು. ಅಲ್ಲಿ ಒಂದು ಪಾಪಪ್ರಜ್ಞೆ ಇದೆ, ಒಂದು ಆರ್ತತೆ ಇದೆ, ಆಳವಾದ ವಿಷಾದವೂ ಇದೆ.   ನೈತಿಕ ಲಂಗರಾಗಿ ಮತ್ತು ಕೈಮರವಾಗಿ ಗಾಂಧಿ  ಕಾಡಿರುವುದು ವಿಸ್ಮಯ ತರುತ್ತದೆ. ಬಹುತೇಕ ಸಂವೇದನಾಶೀಲರು ಗಾಂಧಿಯ ನೈತಿಕ ಹುಡುಕಾಟ, ಆಳವಾದ ಸಂಕಟ, ನೋವುಗಳ ಸುತ್ತ ಭ್ರಮಣ ನಡೆಸಿದ್ದಾರೆ.  ಈ ಕತೆಗಳಲ್ಲಿ ಈ ಹುಡುಕಾಟದ ಕೆಲವು ಮಜಲುಗಳನ್ನು ಕಾಣಬಹುದು. ಗಾಂಧಿಯ ಕಾಡುವ ನೆನಪು ಮತ್ತು ಅದು ಉಳಿಸಿಹೋದ ಪ್ರಜ್ಞೆಯೇ ಥೀಮ್‌ ಆಗಿರುವ ಈ ಕತೆಗಳಲ್ಲಿ ಮೂರು ಸ್ಪಷ್ಠ ಆಯಾಮಗಳಿವೆ.

ಗಾಂಧಿಯ ಆಶ್ರಮದಲ್ಲಿ ಜರುಗುವ ಗಾಂಧಿಯೇ ಕೇಂದ್ರಪಾತ್ರವಾದ ಅನುಸಂಧಾನವನ್ನು ಬಿಡಿಸಿಡುವ ಹವಣಿಕೆಯ ಕತೆಗಳು (ನಂತರ ಒಂದು ರಾತ್ರಿ ಮತ್ತು  ನೀರೂ  ಬೆಂಕಿಯೂ). ಗಾಂಧಿಯ ಅನುಯಾಯಿಗಳೊಂದಿಗೆ ನಡೆಸುವ ಆತ್ಮಾನುಸಂಧಾನದ ಮೂಲಕ ಹೆಣೆಯಲಾದ ಕತೆಗಳು (ಗಾಂಧಿಯೊಂದಿಗೆ ಮಾತಾಡುವೆ;  ಆಲದ ಮರದಲ್ಲಿ ಒಂದು ಹಕ್ಕಿ;  ಮತ್ತು ಉಪವಾಸ ಸತ್ಯಾಗ್ರಹ).  ಮೂರನೆಯದು ಸ್ವಪ್ನೋಪಮ ವಿವರಗಳಿಂದ ಕೂಡಿದ  ಸರ್‌ರಿಯಲ್‌ ಆದ ಕಾಣ್ಕೆಯ ಕತೆಗಳು (ಮುದುಕನ ಬರವು).

ನಂತರ ಒಂದು ರಾತ್ರಿ  ಕತೆ  ದೇಶವಿಭಜನೆಯ  ವಿಷಾದದ ದಿನಗಳಲ್ಲಿ ಗಾಂಧಿಯ ನಿರೀಕ್ಷೆಯನ್ನು ವಾಸ್ತವ ನೆಲೆಯಲ್ಲಿ ಮುಂದಿಡುತ್ತಾ ನಿಧಾನಕ್ಕೆ ಅವಾಸ್ತವದ ಲಹರಿಯ ವಿವರಗಳಿಗೆ ಹೊರಳಿಕೊಂಡರೆ, ಮುದುಕನ ಬರವು  ಕತೆ ಭೀಭತ್ಸ ಲೋಕವೊಂದರೊಂದಿಗೆ ಮುಖಾಮುಖಿಯಾಗುವ ಫ್ಯಾಂಟಸಿಯೊಂದರ ಮೂಲಕ  ಗಾಂಧಿಯೋತ್ತರ ಕಾಲದ ಭವಿಷ್ಯವನ್ನು ತೆರೆದಿಡುತ್ತದೆ. ಸುನಿಲ್‌ ಕೃಷ್ಣನ್‌ ಅವರ ಆರೋಹಣ ಕತೆ ಗಾಂಧಿಯ ಆಯ್ಕೆಯನ್ನು ಪೌರಾಣಿಕ ಸಾಮ್ಯದೊಂದಿಗೆ ಮುಂದಿಡುತ್ತದೆ. ಸ್ವರ್ಗವನ್ನು ತಿರಸ್ಕರಿಸಿ ನರಕವನ್ನೇ ಆಯ್ಕೆಮಾಡುವ  ಗಾಂಧಿಗೆ ಅಲ್ಲೆಲ್ಲಾ ತನ್ನ ಪ್ರತಿರೂಪಗಳೇ ಕಾಣಿಸುತ್ತವೆ.

 ಇಲ್ಲಿನ ಇತರ ಕತೆಗಳಲ್ಲೂ ಗಾಂಧಿಯ ಪ್ರತಿರೂಪಗಳು ಬರುತ್ತವೆ. ಇದು ಕುತೂಹಲಕಾರಿ. ಗಾಂಧಿ ಬಯಸಿದ, ಅನ್ವೇಶಿಸಿದ ಆಯಾಮಗಳಲ್ಲೆಲ್ಲಾ ಗಾಂಧಿಯನ್ನೇ ಕಾಣುವ  ಒಂದು ತಾಂತ್ರಿಕ ಕೌಶಲ್ಯ ಈ ಕತೆಗಳಲ್ಲಿದೆ. ಇದೇ ಜಾಡಿನಲ್ಲಿರುವ  ಗಾಂಧಿಯೊಂದಿಗೆ ಮಾತಾಡುವೆ  ಮತ್ತು  ಆಲದ ಮರದಲ್ಲಿ ಒಂದು ಹಕ್ಕಿ ಕತೆಗಳು  ಕಥಾವಸ್ತುವಿನ ಸ್ವರೂಪ ಮತ್ತು ಶೈಲಿಯಲ್ಲಿ ಕೊಂಚ ಭಿನ್ನ. ಗಾಂಧಿ ಅನುಯಾಯಿಯ ಮಕ್ಕಳು ತಮ್ಮ ತಾಯಿ/ತಂದೆ ಪ್ರಭಾವಕ್ಕೊಳಗಾದ ಶಕ್ತಿಯನ್ನು  ಮರುಭೇಟಿಮಾಡುವ, ಆ ಮೂಲಕ ಗಾಂಧಿಯನ್ನು ಮುಖಾಮುಖಿಯಾಗುವ ಪರಿಯನ್ನು ಅನಾವರಣಮಾಡುತ್ತವೆ. ʼಉಪವಾಸ ಸತ್ಯಾಗ್ರಹʼ ಕತೆಯೂ ಇಂಥಾ ಗಾಂಧಿ ಅನುಯಾಯಿಯ ಕುಟುಂಬದ ವೈರುಧ್ಯವನ್ನು ಮುಂದಿಟ್ಟು ಅದರೊಳಗೇ  ಮಹಿಳೆಯರ ಮೂಲಕ ಗಾಂಧಿಯನ್ನು ಮತ್ತೆ ಸೃಷ್ಟಿಸುವ  ಮೆಲು ನಾಟಕೀಯ ವಿವರಗಳನ್ನು ಮುಂದಿಡುತ್ತದೆ.

ಈ ಕತೆ ಮುಗಿಯುವ ಬಗೆ ಚೆಕಾವನ ಕತೆಗಳ ರೀತಿಯನ್ನು ನೆನಪಿಸುವಂತಿದೆ. ಸೂಚಿಗಳೂ ಬಲು ಸೂಕ್ಷ್ಮ.  ನಾಲ್ಕನೆಯ ಗುಂಡು ಗಾಂಧಿ ಹತ್ಯೆಯ ಪ್ರಕರಣದ ಮರು ತನಿಖೆಯ ನೆಪದಲ್ಲಿ  ಆ ಗಳಿಗೆಗಳ ವಿವರಗಳನ್ನು ವಿಶಿಷ್ಟ  ಚಿತ್ರಗಳ ಮೂಲಕ  ಮುಂದಿಡಲು ನೋಡುತ್ತದೆ.  ಇವೆಲ್ಲಾ ಕತೆಗಳ ನಡುವೆ ಭಿನ್ನವಾಗಿರುವ  ಕಲೈ ಸೆಲ್ವಿ ಅವರ ಕತೆ ಬಾಪೂ ಮತ್ತು ಕಸ್ತೂರ್‌ ಬಾ ನಡುವಿನ ಸಂವಾದದ ಮೂಲಕ ಅವರ ಸಂಬಂಧವನ್ನೂ ಗಾಂಧಿಯ ಕನಸು, ವಿಷಾದವನ್ನೂ ಕಟ್ಟಿಕೊಡುತ್ತದೆ.  ಇಲ್ಲಿನ ಕತೆಗಳ ಪೈಕಿ, ಅಶೋಕ ಮಿತ್ರನ್‌ ಅವರ  ಗಾಂಧಿ ಆಧುನಿಕ ಬೌದ್ಧಿಕತೆಯ ತಾಕಲಾಟವನ್ನು ಮುಂದಿಡುವ ಕತೆ. ಸೈದ್ಧಾಂತಿಕ ಬಿರುಕುಗಳ ಬಗ್ಗೆ ಶಠ ಸಿದ್ಧಾಂತದ ಹಠಮಾರಿತನದಲ್ಲಿ ಕಳೆದು ಹೋಗುವ ಸೂಕ್ಷ್ಮಗಳ ಬಗ್ಗೆ ನಿರೂಪಕ  ಹೇಳುತ್ತಾ ಹೋಗುತ್ತಾನೆ.

 ಇವಿಷ್ಟು ಕತೆಗಳನ್ನು ಹಿಡಿಯಲು ನೋಡುವ ಯತ್ನ.  ಆದರೆ ಇದಕ್ಕಿಂತ ಮುಖ್ಯವಾಗುವುದು ಈ ಕತೆಗಳನ್ನು ಯಾಕೆ ಹೀಗೆ ಕಟ್ಟಿದರು ಎಂಬ ಪ್ರಶ್ನೆ.
 ಕನ್ನಡದ ಕವಿಗಳು ಸತತವಾಗಿ,  ಗಾಂಧಿ ಮರೆಯಾದ ಬಳಿಕ ಗಾಂಧಿಯ ಗೈರು ಹಾಜರಿಯನ್ನೇ ಒಂದು ನೈತಿಕ ಮಾನದಂಡವಾಗಿ ವರ್ತಮಾನವನ್ನು ವ್ಯಾಖ್ಯಾನಿಸುವ ಕವನಗಳನ್ನು ಬರೆದಿದ್ದಾರೆ.     ಆದರೆ  ಗಾಂಧಿಯ  ಆಯಾಮಗಳು ಟ್ರಿಗರ್‌ ಮಾಡಿದ ಕತೆಗಳು ಕಡಿಮೆ ಎಂದು  ನನಗನ್ನಿಸುತ್ತದೆ. ನನ್ನ ಸೀಮಿತ ಓದಿನ ಮಿತಿಯ ಅಭಿಪ್ರಾಯ ಎಂದು ಇದನ್ನು ಬಗೆಯಬಹುದು.

ಗಾಂಧಿಯ ಕೊನೆಯ ದಿನಗಳೆಂದರೆ ಮಾನವ ಸಂಬಂಧಗಳನ್ನು ನಾಶಮಾಡುವ ಭೀಭತ್ಸ ಹವಣಿಕೆಗಳ ತಾಂಡವ ನೃತ್ಯವೇ ಸರಿ. ಗಾಂಧಿ ಅದನ್ನು ಎದುರಿಸಿದ ಬಗೆ, ಅವರು ಅನುಭವಿಸಿದ ತಲ್ಲಣ, ಅವರು ಮುಖಾಮುಖಿಯಾದ ಮಾನವನ ಆಳದ ಕೇಡು ಇವೆಲ್ಲಾ  ಆಯಾ ಕಾಲಘಟ್ಟದಲ್ಲಿ   ಸಂವೇದನೆಯನ್ನು ಕೆಣಕುವ ರೂಪಕಗಳಾಗಿ ಬಿಟ್ಟಿವೆ.  ಗಾಂಧಿ ಒಡನಾಡಿದ, ಅವರು ಅನುಸಂಧಾನ ನಡೆಸಿದ ಸಮಾಜ, ಸಮದಾಯಗಳು ಇಷ್ಟಿಷ್ಟೇ ಕೊಳೆತ ರೀತಿ ಆಯಾ ಕಾಲಘಟ್ಟದಲ್ಲಿ ಜನರನ್ನು ಕಾಡಿದೆ. ೬೦ರ ದಶಕದಲ್ಲಿ  ನೈತಿಕ ಜಾರುವಿಕೆ, ೭೦ರ ದಶಕದಲ್ಲಿ ಪ್ರಭುತ್ವದ ದರ್ಪ,  ಕಳೆದೆರಡು ದಶಕಗಳಲ್ಲಿ ಕೋಮು ದ್ವೇಶ – ಹೀಗೆ.

ಗಾಂಧಿಯ ಅಂತಿಮ ಘಟ್ಟದ ಬದುಕು ಮತ್ತು ಅವರ ಅನುಯಾಯಿಗಳ ಬದುಕು ಯಾಕೆ ಇಲ್ಲಿನ ಕತೆಗಳ ಕೇಂದ್ರ ವಸ್ತುವಾಗಿವೆ  ಎಂಬುದನ್ನು ಮೇಲಿನ ವಿವರಣೆಯ ಹಿನ್ನೆಲೆಯಲ್ಲಿ ನೋಡಬೇಕು.  ಪೋಸ್ಟ್-ಗಾಂಧಿ ಸ್ಪಂದನ ಎಂಬುದನ್ನು ನಾವೇನಾದರೂ ಒಂದು ಪ್ರಮೇಯವಾಗಿ ಕಟ್ಟಿದರೆ ಈ ಕತೆಗಳ ಧ್ಯಾನದ ತಾತ್ವಿಕ ಎಳೆಯನ್ನು ಹಿಡಿಯಬಹುದು.

 ಇಲ್ಲಿ ಗಾಂಧಿಗೆ ಎದುರಾಗಿ ದೇಶ ಕಂಡ ದುರಂತ, ಹಿಂಸೆ, ಹಳವಂಡದ ಮೆಲುಕುಗಳಿವೆ. ಗಾಂಧಿಯನ್ನು ಅಪ್ರಸ್ತುತಗೊಳಿಸಲು ನೋಡಿದ ಮನೋ ಭೂಮಿಕೆಯ ಚಿತ್ರಗಳಿವೆ.  ಅಯ್ಯಂಕಾಳೀ ಅವರಂಥಾ ತಾತ್ವಿಕ ಎದುರಾಳಿಗಳು ಮುಖಾಮುಖಿಯಾಗುವ ವಿವರಗಳಿವೆ.  ಗಾಂಧೀ ಇವರನ್ನೆಲ್ಲಾ ಕಾಡಿದ ಬಗೆ ಒಂದಾದರೆ ಇವರನ್ನು ಗಾಂಧೀ ಕಾಡಿದ ಬಗೆಯೇ ನಮ್ಮನ್ನು ಕಾಡುತ್ತದೆ.

 ಬಹುತೇಕ ಕತೆಗಳಲ್ಲಿ ಬಾಪೂ ಬದುಕಿನ ದಟ್ಟ ವಿವರಗಳಿವೆ. ಈ ವಿವರಗಳ ಕುಸುರಿಯ ತಂತ್ರವೂ ಕುತೂಹಲಕಾರಿ. ಗಾಂಧಿಯ ಬಗ್ಗೆ ಈ ಕತೆಗಾರರು ನಡೆಸಿದ ಅಧ್ಯಯನದ ಕುರುಹು ಇದು. ಈ ನಿಜ ಎನ್ನಿಸುವ ಈ ತಂತ್ರವೇ   ಗಾಂಧಿ ಕುರಿತ ಈ ಧ್ಯಾನವನ್ನು ಇರಿವ ಮುಳ್ಳಿನ ರೀತಿಯಲ್ಲಿ ನಮ್ಮನ್ನು ಬಾಧಿಸುವಂತೆ ಮಾಡುತ್ತದೆ.

 ಒಬ್ಬ ಸೃಜನಶೀಲ ಲೇಖಕರನ್ನು ಗಾಂಧೀ ಕಾಡುವ ಬಗೆ ಮುಖ್ಯವೇ. ಆದರೆ ಅದಕ್ಕಿಂತ ಮುಖ್ಯವಾಗಬೇಕಾದದ್ದು ಸೃಜನಶೀಲ ಲೇಖಕರು ತಮ್ಮ ಧ್ಯಾನವಾಗಿ ಆರಿಸುವ ವಿಷಯ. ಇದರ ಮೂಲಕವೇ ಅವರು ಹೊಸ ಕಾಣ್ಕೆಯನ್ನು ಓದುಗ ವಲಯಕ್ಕೆ ತಲುಪಿಸುತ್ತಾ, ಅವರೊಳಗೆ ಈ ಕ್ರೈಸಿಸ್‌ ಮರುಹುಟ್ಟು ಪಡೆಯುವಂತೆ ಮಾಡುತ್ತಾರೆ. ಕತೆಯೊಂದು ಅದರ  ಕಥಾ ಸಾರಾಂಶದಿಂದ ಒಳ್ಳೆಯ ಕತೆಯಾಗುವುದಿಲ್ಲ.  ಕಥನ ಶೈಲಿ, ತಾಂತ್ರಿಕ ಸೂಕ್ಷ್ಮಗಳು; ಅದು ಸಾದರಪಡಿಸುವ ಕಾಣ್ಕೆಯ ಮೂಲಕವಷ್ಟೇ ಕತೆಯೊಂದು ಅಸಾಧಾರಣವನ್ನಿಸುವುದು. ಈ ಕತೆಗಳು ಈ ದೃಷ್ಟಿಯಿಂದಲೂ ಪ್ರಭಾವಿಯಾಗಿವೆ. ಒಂದೆರಡು ಕತೆಗಳ ಕೆಲವು ಭಾಗ ಬಿಟ್ಟರೆ ವಿವರಗಳಲ್ಲಿ ಲೋಲುಪತೆ ಇಲ್ಲ. ನಿರೂಪಣೆಯಲ್ಲಿ ಒಂದು ದುರಂತ ವಿಷಾದವನ್ನು ಕಟ್ಟಿಕೊಡುವ ಮಂದ್ರ ಧಾಟಿ ಇದೆ.   ಆದ್ದರಿಂದಲೇ  ಈ ಕತೆಗಳು ಇದು ಗಾಂಧಿಯ ಶಕ್ತಿಯೂ ಹೌದು ಎನ್ನಿಸುವಾಗಲೇ, ಇದು ಕತೆಗಾರನ ಶಕ್ತಿಯೂ ಹೌದು ಎಂಬುದನ್ನು ಮನಗಾಣಿಸುತ್ತವೆ.

 ಸಾಹಿತ್ಯದ ಸೋಜಿಗ ಇದು.

ಇಂಥಾ ಅಪರೂಪದ ಕಾಡುವ ಕತೆಗಳನ್ನು ಕನ್ನಡಕ್ಕೆ ನೀಡಿದ ನಲ್ಲತಂಬಿಯವರ ಶ್ರಮ- ಆಯ್ಕೆ ಮತ್ತು ಅನುವಾದಕ್ಕೆ ಕನ್ನಡ ಕೃತಜ್ಞವಾಗಿರಬೇಕು.

‍ಲೇಖಕರು Admin

June 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: