ವಿಶಿಷ್ಟ ಮದುವೆಯೊಂದರ ಐವತ್ತರ ನೆನಪು…

ಗೋ.ರಾ. ಶ್ರೀನಿವಾಸ/ ಪ್ರಕಾಶ ಅಬ್ಬೂರು

ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಗಳು ಇಲ್ಲ, ಭಗವಂತನಾನಂದ ರೂಪುಗೊಂಡಿಹುದಿಲ್ಲಿ……

ಇದು ಕವಿ ‌ಕುವೆಂಪು ಅವರ ಕವನವೊಂದರ ಸಾಲುಗಳು.

ಅದು ಈ ಕವನವನ್ನು ನೆನಪಿಸುವ ಸಮಾರಂಭ. ಸಮಾರಂಭದಲ್ಲಿ ಬ್ಯಾನರ್ ಗಳು ಇರಲಿಲ್ಲ, ಅತಿಥಿಗಳಿಗೆ ಪುಷ್ಪಗುಚ್ಚ ಇಲ್ಲ, ವೇದಿಕೆಗೆ ಚಂದ ಚಂದದ ಕುರ್ಚಿಗಳು ಇಲ್ಲ , ಜಾನಪದ ಲೋಕದ ಸಹಜ ಸುಂದರ ವಾತಾವರಣವೇ ಅಲಂಕಾರ, ಬಯಲು ರಂಗಮಂದಿರದಲ್ಲಿ ನಡೆದ ಸರಳ ಸಮಾರಂಭ. 50 ವರ್ಷಗಳ ಹಿಂದೆ ಬಯಲು ಸೀಮೆಯಲ್ಲಿ ಸಂಚಲನ ಮೂಡಿಸಿದ ಸರಳ ಮದುವೆಯೊಂದರ ನೆನಪಿನ ಕಾರ್ಯಕ್ರಮ ಅದಾಗಿತ್ತು. ಅಂದಿನ ಮದುವೆಯಂತೆಯೇ ಅದರ ನೆನಪು ‌ಕೂಡ ಸರಳಾತಿಸರಳ. ಒಂದೇ ವ್ಯತ್ಯಾಸ ಅಂದು ಮದುವೆಯಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ ಎಂದು ಕರಪತ್ರದಲ್ಲಿಯೇ ತಿಳಿಸಲಾಗಿತ್ತು.ಇಂದು ಸಿರಿಧಾನ್ಯಗಳ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ವೇದಿಕೆಯಲ್ಲಿದ್ದುದು ನಾಲ್ಕು ಪ್ಲಾಸ್ಟಿಕ್ ಕುರ್ಚಿಗಳು . ಎರಡರಲ್ಲಿ ಸಮಾರಂಭದ ಕೇಂದ್ರ ಬಿಂದು ಕೆಂಪಮ್ಮ ಅಬ್ಬೂರು ಹಾಗೂ ಕಾಳೇಗೌಡ ನಾಗವಾರ ಆಸೀನರಾಗಿದ್ದರೆ ಆಹ್ವಾನಿತ ಅತಿಥಿಗಳು ಸಭಿಕರ ನಡುವಿನಿಂದಲೇ ಎದ್ದು ಬಂತು ಮಾತನಾಡಿ, ಮಾತಿನ ನಂತರ ತಮ್ಮ ಜಾಗಗಳಿಗೆ ಹಿಂದಿರುಗುತ್ತಿದ್ದರು.

ಮಾತೂ ಅಷ್ಟೆ, ಸರಳ ಮದುವೆಗಳ ಆಶಯ, ಇಂದಿನ ಯುವಕರು ಅಂತಹ ಆದರ್ಶದಿಂದ ವಿಮುಖರಾಗಿ ವಿಜೃಂಭಣೆಗೆ ಜೋತುಬೀಳುತ್ತಿರುವ ಪರಿ ಪ್ರಸ್ತಾಪವಾಯಿತು.

ಗಾಂಧಿ , ಪೆರಿಯಾರ್, ಅಂಬೇಡ್ಕರ್, ಲೋಹಿಯಾ, ಕುವೆಂಪು, ಟಾಲ್ಸ್ಟಾಯ್ ಹೀಗೆ ಹಲವರ ಮಾತುಗಳು ಉಲ್ಲೇಖವಾದವು. ಸರಳ ಮದುವೆ, ಅಂತರ್ಜಾತಿ, ಅಂತರ್ಧರ್ಮೀಯ ಮದುವೆ ಆದವರ ಅನುಭವ ಕಥನ ಮೂಡಿಬಂದವು.

ಮಾತುಗಳು

ಗಂಡು- ಹೆಣ್ಣು ಸಮಾನರು: ಅಗ್ರಹಾರ ಕೃಷ್ಣಮೂರ್ತಿ

ಮದುವೆ ತೀರಾ ವೈಯಕ್ತಿಕ , ಖಾಸಗಿ ವಿಷಯ. ಇದನ್ನು ಒಂದು ಚಳವಳಿಯ ಭಾಗವಾಗಿ ನೋಡಬೇಕೆ ಎಂಬ ಪ್ರಶ್ನೆ ಎತ್ತಿದ ಅಗ್ರಹಾರ ಕೃಷ್ಣಮೂರ್ತಿ
ಹೆಣ್ಣು ಗಂಡು ಇಬ್ಬರು ಸಮಾನರು, ಯಾರೂ ಯಾರ ಆಜ್ಙಾನುವರ್ತಿಯೂ ಆಗಬೇಕಿಲ್ಲ. ಇದೇ ಸರಳ ಮದುವೆಗಳ ಆಶಯ ಎಂದರು.

ಮಹಾತ್ಮ ಗಾಂಧೀಜಿಯವರೂ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರಲ್ಲದೆ,ಮುಂದಿನ ಪೀಳಿಗೆಯೂ ಸಹ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕೆಂಬ ಆಶಯ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ತಾವು ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲಾರದೆ,ಮನೆಯವರು ನೋಡಿದ ಹುಡುಗಿಯನ್ನು ಸರಳ ಮದುವೆ ಆಗಲು ಹೊರಟು ಕೊನೆಗೆ ದೇವಸ್ಥಾನದಲ್ಲಿ ಮದುವೆ ಆಗಬೇಕಾಗಿ ಬಂದ‌ ಸಂದರ್ಭವನ್ನು ಅವರು ಸ್ಮರಿಸಿಕೊಂಡರು.

ಮದುವೆಗೆಂದೇ ಎಕಾನಮಿ ಸೃಷ್ಟಿ : ರಾಜೇಂದ್ರ ಪ್ರಸಾದ್

ಮದುವೆಗೆಂದೇ ಎಕಾನಮಿ ಸೃಷ್ಟಿಯಾಗುತ್ತಿದೆ. ಹಸಿರು ಬಣ್ಣದಲ್ಲಿ ಬರುತ್ತಿದ್ದ ಸರಳ ವಿವಾಹದ ಆಹ್ವಾನ ಪತ್ರಿಕೆಗಳು ಬಹುತೇಕ ಕಡಿಮೆಯಾಗಿವೆ. ಬೇರೆಯವರನ್ನು ನೋಡಿ ವೈದಿಕ ಮದುವೆಯಾಗುವವರೇ ಹೆಚ್ಚಾಗಿದ್ದಾರೆ. ಸರಳ ವಿವಾಹ ಮಾಡಿಕೊಂಡರೆ ನಮ್ಮ ಸ್ಟೇಟಸ್ ಕಡಿಮೆಯಾಗುತ್ತದೆ ಎಂಬ ಭಾವನೆ ಹೆಚ್ಚಾಗುತ್ತಿದೆ. ವಿಲಾಸಿ ಜೀವನಕ್ಕೆ ಹಲವರು ತೆರೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಕೆಲವರು ವಚನ ಮಾಂಗಲ್ಯ, ಸಂವಿಧಾನಾತ್ಮಕ ಮದುವೆ ಹಾಗೂ ಸಾಮೂಹಿಕ ಮದುವೆ ಎಂದು ಬದಲಾಯಿಸಿ ಕೊಂಡಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ಅಭಿಪ್ರಾಯ ಪಟ್ಟರು.

ಕಾಲ ನಿರ್ಗುಣ : ಅನುಸೂಯಮ್ಮ

ಕಾಲ ನಿರ್ಗುಣವಾಗಿರುವುದರಿಂದ ಯಾವುದೇ ರೀತಿಯ ಕೆಟ್ಟ ಕಾಲ, ಒಳ್ಳೆಯ ಕಾಲ ಎಂಬುದಿಲ್ಲ. ನಾವು ಮಾನಸಿಕವಾಗಿ ಸಿದ್ದವಾಗಿರಬೇಕು ಅಷ್ಟೇ. ನಾವಿಬ್ಬರು ಸಮಾನರು ಎಂಬ ಆಶಯವಿರಬೇಕು ಆಡಂಬರದ ಮದುವೆಯಿಂದ ದೂರವಿರಬೇಕು, ವರದಕ್ಷಿಣೆ ಪಿಡುಗಿನಿಂದ ಹೊರಬರಬೇಕು. ಮೂಢನಂಬಿಕೆ ಮತ್ತು ಪೌರೋಹಿತಶಾಹಿಯನ್ನು ದೂರವಿಡಬೇಕು. ಲಿಂಗ ತಾರತಮ್ಯ ಹೊಡೆದೋಡಿಸಬೇಕು. ಅಂತರ್ಜಾತಿ ವಿವಾಹಕ್ಕೆ ಒತ್ತು ನೀಡಿದರೆ ಮಾತ್ರ ಸರ್ವರೂ ಸಮಾನರಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ರೈತಸಂಘ ಮುನ್ನುಡಿ ಬರೆದಿತ್ತು ಎಂದರು.

ಮಹನೀಯರೇ ಮಾರ್ಗದರ್ಶಿಗಳು : ಜಗದೀಶ್ ಕೊಪ್ಪ

ಕುವೆಂಪು, ಲೋಹಿಯಾ, ಲಂಕೇಶ್, ಬೆಸಗರಹಳ್ಳಿ ರಾಮಣ್ಣ, ಕೇಶವಮೂರ್ತಿ ಸೇರಿದಂತೆ ಹಲವಾರು ಮಂದಿಯಿಂದ ನಾವು ಪ್ರಭಾವಿತರಾಗಿದ್ದೆವು. ಅಂದಿನ ಕಾಲಕ್ಕೆ ಮರ್ಯಾದಾ ಹತ್ಯೆ ಹೆಚ್ಚಾಗಿದ್ದವು. ನನ್ನ ಕುಟುಂಬದಲ್ಲೂ ಸಹ ಮರ್ಯಾದಾ ಹತ್ಯೆ ಆಗಿತ್ತು. ಇಂದಿಗೂ ನಾನು ಯಾವುದೇ ದೊಡ್ಡ ಕಲ್ಯಾಣ ಮಂಟಪದಲ್ಲಿ ಆಗುವ ಮದುವೆಗೆ ಹೋಗುವುದಿಲ್ಲಾ. ನನ್ನ ಸರಳ ವಿವಾಹವನ್ನು ವಿರೋಧಿಸಿದ ಅನೇಕರು ನಂತರ ಒಪ್ಪಿ ತಮ್ಮ ಕುಟುಂಬದ ಅನೇಕ ಮದುವೆಗಳನ್ನು ಸರಳವಾಗಿ ನೆರವೇರಿಸಿದ್ದಾರೆ. ಆಯ್ಕೆ ಮಾಡಿಕೊಳ್ಳುವ ಸಂಗಾತಿ ಮತ್ತು ಬದುಕು ಉತ್ತಮವಾಗಿದ್ದರೆ ಅವರ ಬದುಕು ಸರಳ ಸುಂದರವಾಗಿರುತ್ತದೆ.

ಬಹುತೇಕ ವಿಚಾರವಾದಿಗಳು ಕಳ್ಳರು : ಮಂಗಳಾ ಅಪ್ಪಾಜಿಗೌಡ

ಬಹುತೇಕ ವಿಚಾರವಾದಿಗಳು, ಮೌಢ್ಯ ವಿರೋಧಿಗಳಾಗಿದ್ದರೂ ಆಂತರ್ಯದಲ್ಲಿ ಕಳ್ಳರು, ಆಷಾಢಭೂತಿಗಳು. ಹೇಳುವುದೊಂದು ಮಾಡುವುದೊಂದು, ವೇದಿಕೆ ಮೇಲೆ ಮಾತನಾಡುವವರು ಮನೆಯಲ್ಲಿ ಬೇಡವೆನ್ನುವರು. ಇಂತಹವರಿಂದಲೆ ವೈಚಾರಿಕತೆ ಎಂಬುದು ಢಾಳಾಗಿದೆ ಎಂದು ಮಂಗಳಾ ಅಪ್ಪಾಜಿಗೌಡ ಕೆಲವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದರು.

ನಾನು ಹರಿಜನ, ಅಪ್ಪಾಜಿಗೌಡ ಮಂಡ್ಯದ ಗೌಡರು ಮದುವೆಗೆ ಎಷ್ಟು ವಿರೋಧ ಇತ್ತೆಂದರೆ ಜಾತಿಯಿಂದಲೇ ಬಹಿಷ್ಕಾರ ಹಾಕುವಷ್ಟು ವಿರೋಧವಿತ್ತು. ದೀಪಾವಳಿ ಅಮಾವಾಸ್ಯೆ ಯಂದು ಡಾ ಸಂಜೀವಯ್ಯರವರ ಮನೆಯಲ್ಲಿ ಸರಳವಾಗಿ ಮದುವೆ ಮಾಡಿಕೊಂಡೆವು. ಮದುವೆಯಾದ ನಂತರ ಜಾತಿ ವಿಷಯ ಕಟ್ಟಿಕೊಂಡು ಬಾಡಿಗೆ ಮನೆಯನ್ನು ಹುಡುಕಲು ಅಸಾಧ್ಯವಾಗಿತ್ತು. ನನ್ನ ಮಗಳ ಮದುವೆಗೂ ಅಪ್ಪ ಅಮ್ಮನ ಜಾತಿ ಅಡ್ಡ ಬಂದಿದ್ದು, ರೈತನಾಯಕಿ ಹಾಗೂ ವಿಚಾರವಂತರೆನಿಸಿಕೊಂಡ ಹಲವರು ಖಳನಾಯಕರಂತೆ ನಡೆದುಕೊಂಡಿದ್ದು ನನ್ನ ಮಗಳ ಮದುವೆ ವಿಷಯದಲ್ಲಿ ವೇದ್ಯವಾಯಿತು.

ಪ್ರೀತಿ ಮತ್ತು ಸತ್ಯ ಇರಬೇಕು : ಕೇಶವರೆಡ್ಡಿ ಹಂದ್ರಾಳ

ಸರಳ ವಿವಾಹಗಳಲ್ಲಿ ಪ್ರೀತಿ ಮತ್ತು ಸತ್ಯ ಇರಬೇಕು. ಸಂಪ್ರದಾಯ ಮದುವೆಗಳಲ್ಲಿ ಆಡಂಬರದ ಹಾಗೂ ಶ್ರೀಮಂತ ಜನರಿಗೆ ಒಂದು ರೀತಿ, ಬಡಬಗ್ಗರಿಗೆ ಒಂದು ರೀತಿಯಲ್ಲಿ ನೋಡುವ ಮನಸ್ಥಿತಿ ಇದೆ. ಪ್ರೀತಿಸಿ ಮದುವೆಯಾದವರೇ ಹೆಚ್ಚು ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಅಂತರ್ಜಾತಿ ವಿವಾಹಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಒಗ್ಗೂಡಿಸುವ ಮೂಲಕ ಜಾತಿ ಸಂಕೋಲೆಯಿಂದ ಹೊರಬರಬೇಕು.

ಆಷಾಢ ಭೂತಿ ಮನಸ್ಥಿತಿಯವರಿದ್ದಾರೆ : ಮಂಜುನಾಥ ಅದ್ದೆ

ವಿಚಾರವಂತರಲ್ಲೂ ಸಹ ಆಷಾಢ ಭೂತಿ ಮನಸ್ಥಿತಿಯ ಮಂದಿ ಹೆಚ್ಚಾಗಿದ್ದಾರೆ. ವೈದಿಕ ಮನಸ್ಥಿತಿಯಿಂದ ಹೊರಬರಲಾಗದೆ ತಿಣುಕಾಡುತ್ತಿದ್ದಾರೆ. ವೈದಿಕರು ಅಂದು ಅನಕ್ಷರಸ್ಥರನ್ನು ಬದಲಾಯಿಸಿದ್ದರು. ಇಂದು ವಿದ್ಯಾವಂತರಲ್ಲೂ ಸಹ ಅದೇ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿದ್ದಾರೆ. ಇಂತಹ ಹೀನ ಮನಸ್ಥಿತಿ ಉಳ್ಳವರಿಂದ ವಿಚಾರವಂತರೆನಿಸಿಕೊಂಡವರು ದೂರವಿರಬೇಕು.

ವಿಚಾರ ಮಂಥನವಾಗಬೇಕು ಸಾದಿಕ್ ಪಾಷಾ ನಾನು ವಿದ್ಯಾವಂತನಾಗಿದ್ದೇ ತಪ್ಪು ಎನಿಸುವಂತಾಗಿಬಿಟ್ಟಿತ್ತು. ನಾನು ನನ್ನ ಕುಟುಂಬ ಸಲಹಲು ಹಲವಾರು ಕಟ್ಟುಪಾಡುಗಳನ್ನು ಮೀರಿ ಬರಬೇಕಾಗಿತ್ತು. ಇಂತಹ ಸಂದರ್ಭಗಳಲ್ಲಿ ನನಗೆ ಡಾ ಕಾಳೇಗೌಡ ನಾಗವಾರ ರವರು ಸ್ಪೂರ್ತಿಯಾಗಿದ್ದರು.

ಆರ್ಥಿಕತೆ ಕುಗ್ಗಿಸಿಬಿಡುತ್ತದೆ : ರೇಣುಕಾರಾಧ್ಯ

ಅಂತರ್ಜಾತಿ ಅದರಲ್ಲೂ ಪ್ರೇಮ ವಿವಾಹ ಆಗುವಂತಹವರು ಆರ್ಥಿಕವಾಗಿ ವೈಯುಕ್ತಿಕವಾಗಿ ಸದೃಢವಾಗಿರಬೇಕು. ಬೇರೆಯವರ ಹಂಗಿನಲ್ಲೂ ಬದುಕಲು ಆಗದು. ಇಂದು ಬಹುತೇಕ ಅಂತರ್ಜಾತಿ ವಿವಾಹಗಳು ಮುರಿದು ಬಿದ್ದಿರುವುದು ಆರ್ಥಿಕ ಪರಿಸ್ಥಿತಿಯಿಂದಲೇ ಎನ್ನುವುದು ಸತ್ಯ.

ಕಾಳೇಗೌಡರ ಮದುವೆ ಒಂದು ಮಹಾಕಾವ್ಯ : ಅಗ್ನಿ ಶ್ರೀಧರ್

ಕಾಳೇಗೌಡ ನಾಗವಾರ ರವರು ನನ್ನ ನೆಂಟರು, ಅವರು ಒಬ್ಬ ಕಥೆಗಾರ ಎಂಬುದು ಗೊತ್ತಾಗಿದ್ದೆ ನಾನು ಹತ್ತನೆ ತರಗತಿಯಲ್ಲಿದ್ದಾಗ. ಅವರ ಕಥೆ ಓದಿ ಬೆಳೆದವನು ನಾನು. ಅವರ ಮದುವೆ ಸರಳವಿವಾಹ ಅಲ್ಲಾ ಮೂಢನಂಬಿಕೆಯ ವಿರುದ್ಧದ ಸಮ್ಮೇಳನವೂ ಆಗಿತ್ತು. ಅವರ ಮದುವೆ ವೈಯುಕ್ತಿಕ ನೆಲೆಗಟ್ಟಿಗೆ ಸೀಮಿತಗೊಳಿಸದೆ ಹಲವಾರು ಮಂದಿಗೆ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡಿತು. ಈ ಹಿಂದೆಯೂ ಸಹ ಹಲವಾರು ಸಾಹಿತಿಗಳು, ಸಮಾಜವಾದಿ ನಾಯಕರು ಅಂತರ್ಜಾತಿ ಮತ್ತು ಸರಳ ವಿವಾಹ ಆಗಿದ್ದರೂ ಸಹ ಅವು ಜನರಿಗೆ ತಲುಪಿರಲಿಲ್ಲ. ಇವರ ಮದುವೆ ಸಾರ್ವಜನಿಕರಿಗೆ ತೆರೆದುಕೊಂಡಿತ್ತು. ಅವರ ಮದುವೆ ಒಂದು ಮಾಹಾಕಾವ್ಯ ಆಗಿತ್ತು.

ಕಾಳೇಗೌಡ ನಾಗವಾರ :

ನನ್ನ ಸರಳ ಹಾಗೂ ಮೌಢ್ಯ ವಿರೋಧಿ ಮದುವೆಗೆ ನನ್ನ ತಂದೆಯೇ ಬರಲಿಲ್ಲಾ, ಆದರೆ ಹತ್ತಾರು ಸಾವಿರ ಮಂದಿ ಸೇರಿದ್ದರು. ಸರಳ ವಿವಾಹ ಮತ್ತು ಮೌಢ್ಯ ವಿರೋಧಿ ಮದುವೆ ಎಂದರೇನು ! ಹೇಗೆ ಮಾಡುತ್ತಾರೆ ಎಂದು ತಿಳಿಯಲು ಬಂದವರು ಅನೇಕರಿದ್ದರು ಎಂದು ಡಾ. ಕಾಳೇಗೌಡ ನಾಗವಾರ ರವರು ತಮ್ಮ ಮದುವೆಯ ನೆನಪು ಮಾಡಿಕೊಂಡರು.

ವೈಭವೋಪೇತ ಮದುವೆಗಳಿಗೆ ಮಾಡುವ ಖರ್ಚುಗಳು ಕುಟುಂಬಕ್ಕೆ ಹೊರೆಯಾಗುತ್ತದೆ. ಯಾರೋ ಹಣವಂತರು ದುಬಾರಿ ಮದುವೆಗಳನ್ನು ಮಾಡಿದರು ಎಂಬ ಕಾರಣಕ್ಕೆ ಮಧ್ಯಮ ವರ್ಗದವರು, ಬಡವರು ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ವಿವಾಹ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಕೇವಲ ಸರಳ ವಿವಾಹವಾಗುವುದು ಮಾತ್ರವಲ್ಲ, ಅಂತರ್ಜಾತಿ ವಿವಾಹವಾಗುವುದೂ ಇಂದಿನ ಪರಿಸ್ಥಿತಿಗೆ ಅತಿ ಮುಖ್ಯವಾಗಿದೆ. ಬಸವಣ್ಣನವರು ಅಂದೇ ಇಂತಹದ್ದೊಂದು ವಿವಾಹ ನೆರವೇರಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ, ಅದರಂತೆ ಅಂತರ್ಜಾತಿ ವಿವಾಹಗಳಾದರೆ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನನ್ನ ಮೇಲೆ ಬುದ್ದ, ಬಸವಣ್ಣ, ಅಂಬೇಡ್ಕರ್, ಕುವೆಂಪು, ಲೋಹಿಯಾ, ಶಿವರಾಮಕಾರಂತ, ಅಕ್ಕಮಹಾದೇವಿ, ನಂಜುಂಡಸ್ವಾಮಿ ಮತ್ತಿತರರ ಚಿಂತನೆಗಳು ತುಂಬಾ ಪ್ರಭಾವ ಬೀರಿದವು. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ. ಲೋಹಿಯಾ ಅವರ ಚಿಂತನೆಗಳು ಈಗಿನ ಪರಿಸ್ಥಿತಿಗೆ ಅವಶ್ಯಕವಾಗಿವೆ ಎಂದು ತಿಳಿಸಿದರು.

ಅಬ್ಬೂರು ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ ಕಾಳೇಗೌಡ- ಕೆಂಪಮ್ಮ ಮದುವೆಯ ಸಂದರ್ಭ ಸ್ಮರಿಸಿದರು.

ಸ್ವಾಮಿಆನಂದ್ ದಂಪತಿಗಳ ನೇತೃತ್ವದಲ್ಲಿ ಕೆಂಪಮ್ಮ-ಕಾಳೇಗೌಡ ರ ಸಂವಾದ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾಹಿತಿಗಳು, ಪತ್ರಕರ್ತರು, ನಿವೃತ್ತ ಅಧಿಕಾರಿಗಳು, ರೈತಮುಖಂಡರು, ಅವರ ಹಳೆಯ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಬಂಧುಗಳು ಆಗಮಿಸಿ ದಂಪತಿಗಳಿಗೆ ಶುಭಕೋರಿದರು.

‍ಲೇಖಕರು Admin

June 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: