ಗಿರೀಶ ಕಾರ್ನಾಡರ ‘ತುಘಲಕ್’

ಗಿರೀಶ್ ಕಾರ್ನಾಡ್ ನಡೆದು ಬಂದ ದಾರಿ

ಗಿರೀಶ ಕಾರ್ನಾಡ್‌ರು 1938 ಮೇ19 ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ. ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. 

ಪ್ರಾಥಮಿಕ ಶಿಕ್ಷಣವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಡೆದ ಕಾರ್ನಾಡ್ ಅವರ ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಮುಗಿಸಿದ್ದರು. ನಂತರ ಹೆಚ್ಚಿನ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿ ವೇತನ ಪಡೆದು ಆಕ್ಸ್‌ಫರ್ಡ್‌ಗೆ ತೆರಳಿದರು. ಅಲ್ಲದೆ, ‘ಆಕ್ಸ್‌ಫರ್ಡ್‌ ಡಿಬೇಟ್ ಕ್ಲಬ್’ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷ್ಯಾ ಖಂಡದ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

ವಿದ್ಯಾರ್ಥಿಯಾಗಿದ್ದಾಗಲೇ ಭಾರೀ ಪ್ರತಿಭಾವಂತರಾಗಿದ್ದಅವರು ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರುತಿಸಿಕೊಂಡು ಯುವಕರಾಗಿದ್ದಾಗಲೇ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೆ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.

ಆಕ್ಸ್‌ಫರ್ಡ್‌ನಿಂದ ಭಾರತಕ್ಕೆ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಗೆ ಸೇರಿದರು. ಆದರೆ, ನಂತರ ಆ ಹುದ್ದೆಯನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ಆರಂಭಿಸಿದರು. ನಂತರ ಅವರು ಬರೆದ ನಾಟಕವೆಲ್ಲಾ ಕನ್ನಡ ಸಾಹಿತ್ಯಲೋಕದಲ್ಲಿ ಹೊಸದೊಂದು ಇತಿಹಾಸಕ್ಕೆ ನಾಂದಿ ಹಾಡಿದ್ದು ಸುಳ್ಳಲ್ಲ.

ಮಾ ನಿಷಾಧದಿಂದ ರಾಕ್ಷಸ ತಂಗಡಿವರೆಗೆ

ಗಿರೀಶ್ ಕಾರ್ನಾಡ್ ಬರೆದ ಮೊದಲ ನಾಟಕ ಮಾ ನಿಷಾಧ. ಇದು 1959ರಲ್ಲಿ ಅವರು ಬರೆದ ಮೊದಲ ಏಕಾಂಕ ನಾಟಕ. ಈ ನಾಟಕದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಕಾರ್ನಾಡ್​ 1961 ರಲ್ಲಿ ಬಿಡುಗಡೆ ಮಾಡಿದ ತನ್ನ ಎರಡನೇ ನಾಟಕ ‘ಯಯಾತಿ’ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಮಾಡಿದ್ದರು. ಕೇವಲ ತಮ್ಮ ಎರಡನೇ ನಾಟಕದ ಮೂಲಕವೇ ಕನ್ನಡದ ಪ್ರಮುಖ ಸಾಹಿತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಎಂದರೆ ಸುಮ್ಮನೇ ಮಾತಲ್ಲ. ಆಗ ಅವರ ವಯಸ್ಸಿನ್ನೂ ಕೇವಲ 23.

ಪೌರಾಣಿಕ ಹಾಗೂ ಐತಿಹಾಸಿಕ ಕಥಾಹಂದರವನ್ನೇ ಮತ್ತೆ ಮುರಿದು ಕಟ್ಟುವ ಕಾರ್ನಾಡ್​ ಅವರಿಗೆ ದೊಡ್ಡ ಹೆಸರು ಹಾಗೂ ಯಶಸ್ಸನ್ನು ತಂದುಕೊಟ್ಟ ನಾಟಕ ಯಯಾತಿ. “ಪುರುವಿನ ತಂದೆಯಾದ ಯಯಾತಿಗೆ ಸಾಯುವವರೆಗೆ ಯೌವ್ವನನ್ನು ಕಾಪಿಟ್ಟುಕೊಳ್ಳುವ ಹಂಬಲ. ಹೀಗಾಗಿ ತಂದೆಯ ಆಸೆಗಾಗಿ ಯುವರಾಜ ಪುರು ತನ್ನ ಯೌವ್ವನವನ್ನೇ ತಂದೆ ಯಯಾತಿಗೆ ಧಾರೆ ಎರೆಯುತ್ತಾನೆ” ಇದು ನಾಟಕದ ಒಂದೆಳೆ ಕಥಾಹಂದರ. ಈ ಪೌರಾಣಿಕ ಕಥೆಯನ್ನು ಪ್ರಸ್ತುತ ವಾಸ್ತವತೆಗೆ ಹೊಂದುವಂತೆ ವಿಮರ್ಶಾತ್ಮಕವಾಗಿ ನಾಟಕ ರೂಪದಲ್ಲಿ ಕಟ್ಟಿಕೊಟ್ಟ ಅವರ ಜಾಣ್ಮೆಗೆ ಇಡೀ ಸಾಹಿತ್ಯಲೋಕ ತಲೆದೂಗಿತ್ತು. ಅಲ್ಲದೆ ಈ ನಾಟಕವನ್ನು ಶಾಲಾ-ಕಾಲೇಜು ಪಠ್ಯಗಳಲ್ಲೂ ಸೇರಿಸಲಾಗಿತ್ತು.

ಆ ನಂತರ ತುಘಲಕ್ (1964), ಹಯವದನ (1972), ಅಂಜುಮಲ್ಲಿಗೆ (1977), ಹಿಟ್ಟಿನ ಹುಂಜ ಅಥವಾ ಬಲಿ (1980), ನಾಗಮಂಡಲ (1990), ತಲೆದಂಡ (1990) ಅಗ್ನಿ ಮತ್ತು ಮಳೆ (1995) ಟಿಪ್ಪುವಿನ ಕನಸುಗಳು (1997), ಒಡಕಲು ಬಿಂಬ (2005), ಮದುವೆ ಆಲ್ಬಮ್, ಫ್ಲಾವರ್ಸ್ (2012), ಬೆಂದ ಕಾಳು ಆನ್​ ಟೋಸ್ಟ್​ (2012) ಹಾಗೂ ಅವರು ಬರೆದ ಕೊನೆಯ ನಾಟಕ ರಾಕ್ಷಸ ತಂಗಡಿ (2018) ಹೀಗೆ ಸಾಲು ಸಾಲು ನಾಟಕಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅವರು ಅಪರೂಪದ ಸೇವೆ ಸಲ್ಲಿಸಿದ್ದಾರೆ.

ಈ ನಾಟಕಗಳ ಪೈಕಿ ‘ತಲೆದಂಡ’ ರಾಜ ಬಿಜ್ಜಳ ಹಾಗೂ ಬಸವಣ್ಣನ ಕಾಲದ ಐತಿಹಾಸಿಕ ಕಥೆಯನ್ನು ಹೊಂದಿದ ನಾಟಕ. ಈ ನಾಟಕ ರಂಗ ಪ್ರಯೋಗದಲ್ಲಿ ಈವರೆಗೆ ಸಾವಿರಾರು ಪ್ರದರ್ಶನ ಕಾಣುವ ಮೂಲಕ ಇತಿಹಾಸ ನಿರ್ಮಿಸಿದೆ. ಅವರ ‘ನಾಗಮಂಡಲ’ ಎಂಬ ನಾಟಕ ಚಿತ್ರರೂಪ ಪಡೆದು ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ನಟ ಪ್ರಕಾಶ್​ ರೈ ಗೆ ಸಿನಿಮಾ ಲೋಕದಲ್ಲಿ ದೊಡ್ಡ ಬ್ರೇಕ್ ನೀಡಿದ ಚಿತ್ರ ನಾಗಮಂಡಲ. ಈ ಚಿತ್ರವನ್ನು ಟಿ.ಎಸ್​. ನಾಗಾಭರಣ ನಿರ್ದೇಶಿಸಿದ್ದರು.

2018ರಲ್ಲಿ ಬಿಡುಗಡೆಯಾದ ‘ರಾಕ್ಷಸ ತಂಗಡಿ’ ಅವರ ಕೊನೆಯ ನಾಟಕ. ಈ ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯದ ಅಳಿವಿನ ಹಿನ್ನೆಲೆಯ ಮೇಲೆ ಅವರು ಬೆಳೆಕು ಚೆಲ್ಲಿದ್ದರು. ಈ ನಾಟಕದಲ್ಲಿ ಅಳಿಯ ರಾಮರಾಯನ ಬಗ್ಗೆ ನಮಗೆ ತಿಳಿಯದ ಅನೇಕ ಐತಿಹಾಸಿಕ ವಿಚಾರಗಳನ್ನು ಅವರು ತಿಳಿಸಿಕೊಟ್ಟಿದ್ದರು. ಅಲ್ಲದೆ ವಿಜಯನಗರ ಸಾಮ್ರಾಜ್ಯದ ಕೊನೆಯ ಯುದ್ಧ ರಕ್ಕಸ ತಂಗಡಿ ಕುರಿತ ಅನೇಕ ವಿವರಗಳನ್ನು ಇಲ್ಲಿ ಮನೋಜ್ಞವಾಗಿ ವಿವರಿಸಿದ್ದರು. 2011ರಲ್ಲಿ ಬರೆದ ‘ಆಡಾಡುತಾ ಆಯುಷ್ಯ’ ಅವರ ಆತ್ಮಕಥೆ.

ಚಿತ್ರರಂಗದಲ್ಲೂ ಒಂದು ಕೈ ನೋಡಿ ಯಶಸ್ಸು ಕಂಡಿದ್ದ ಕಾರ್ನಾಡ್

ಸಾಹಿತ್ಯ ಲೋಕದಲ್ಲಿ ಮಾತ್ರವಲ್ಲ ಚಿತ್ರರಂಗದಲ್ಲೂ ಒಂದು ಕೈ ನೋಡಿದ್ದ ಕಾರ್ನಾಡ್ ಅಲ್ಲೂ ಯಶಸ್ವಿಯಾಗಿದ್ದರು. ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಕನ್ನಡಕ್ಕೆ ಮೊದಲ ಸ್ವರ್ಣ ಕಮಲ ತಂದು ಕೊಟ್ಟ ಸಂಸ್ಕಾರ ಚಿತ್ರದಲ್ಲಿ ಅವರು ಪ್ರಾಣೇಶಾರ್ಯನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು.

ಕಾರ್ನಾಡ್ ಅವರ ಆಪ್ತ ಗೆಳೆಯ ಮತ್ತೋರ್ವ ಜ್ಞಾನಪೀಠ ಪುರಸ್ಕೃತ ಕವಿ ಯು.ಆರ್. ಅನಂತಮೂರ್ತಿ ಬರೆದ ‘ಸಂಸ್ಕಾರ’ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲೊಂದು. ನವ್ಯ ಸಾಹಿತ್ಯ ಪ್ರಕಾರಕ್ಕೆ ಹೊಸ ದಿಕ್ಕು ತೋರಿಸಿದ ಕಾದಂಬರಿ ಎಂದು ಇದನ್ನು ಗುರುತಿಸಲಾಗಿದೆ. ಈ ಕಾದಂಬರಿಯನ್ನು ಚಿತ್ರವನ್ನಾಗಿಸಲು ಮನಸ್ಸು ಮಾಡಿದಾಗ ಈ ಕಾದಂಬರಿಯ ಕಥಾನಾಯಕನ ಪಾತ್ರವಾದ ಪ್ರಾಣೇಶಾಚಾರ್ಯ ಎಂಬ ಪಾತ್ರವನ್ನು ಮಾಡಿದ್ದ ಕಾರ್ನಾಡ್ ಬರವಣಿಗೆಯಲ್ಲದೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು. ನಂತರ ತಮಿಳು, ತೆಲುಗು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ನಂತರ ಕುವೆಂಪು ಬರೆದ ಶ್ರೇಷ್ಠ ಕಾದಂಬರಿಯಾದ ಕಾನೂರು ಹೆಗ್ಗಡತಿ, ಭೈರಪ್ಪನವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ ಎಂಬ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಒಂದಾನೊಂದು ಕಾಲದಲ್ಲಿ ಎಂಬ ಚಿತ್ರ ವಿಶ್ವದ ಶ್ರೇಷ್ಟ ನಿರ್ದೇಶಕ ಅಕಿರಾ ಕುರಸೋವಾ ಅವರ ಶೈಲಿಯ ‘ರೋಷಾಮನ್’ ಎಂಬ ಚಿತ್ರದ ಕನ್ನಡ ಪ್ರಯೋಗ ಈ ಚಿತ್ರದಲ್ಲಿ ಕನ್ನಡದ ಮತ್ತೊಬ್ಬ ಖ್ಯಾತ ನಟ, ನಿರ್ದೇಶಕ ರಂಗಕರ್ಮಿ ಶಂಕರ್​ನಾಗ್ ನಟಿಸಿದ್ದರು.

ಉತ್ಸವ, ಗೋಧೂಳಿ ಎಂಬ ಎರಡು ಹಿಂದು ಚಿತ್ರಗಳನ್ನೂ ಅವರು ನಿರ್ದೇಶಿಸಿದ್ದಾರೆ. ಇದಲ್ಲದೆ ಕನಕ ಪುರಂದರ, ದ.ರಾ. ಬೇಂದ್ರೆ, ಸೂಫಿ ಪಂಥ ಎಂಬ ಸಾಕ್ಷ್ಯ ಚಿತ್ರಗಳನ್ನು, ಚೆಲುವಿ ಎಂಬ ಕಿರುಚಿತ್ರವನ್ನೂ ಅವರು ನಿರ್ದೇಶಿಸಿದ್ದಾರೆ. 2007ರಲ್ಲಿ ತೆರೆಕಂಡ ಆ ದಿನಗಳು ಎಂಬ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನೂ ಅವರು ಬರೆದಿದ್ದರು.

ಸಾಹಿತ್ಯ ಸಿನಿಮಾ ಲೋಕವಲ್ಲದೇ ಸಾಮಾಜಿಕವಾಗಿಯೂ ಗಿರೀಶ್ ಕಾರ್ನಾಡ್​ ಅನೇಕ ಹೋರಾಟಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ತಮ್ಮ ಗೆಳೆಯ ಯು.ಆರ್. ಅನಂತಮೂರ್ತಿ ಜೊತೆಗೂಡಿ ಸಮಾಜದಲ್ಲಿನ ಅಸಹಿಷ್ಣುತೆ ವಿರುದ್ಧ ಹೋರಾಡಿದ್ದರು. ಇದು ಅವರಿಗೆ ಅಭಿಮಾನಿಗಳ ಜೊತೆಗೆ ಸಮಾನ ಸಂಖ್ಯೆಯ ವಿರೋಧಿಗಳನ್ನು ಸಂಪಾದಿಸಿಕೊಟ್ಟಿತ್ತು. ಅವರ ವಿರುದ್ಧ ಕಟು ಟೀಕೆಗಳು ಎದುರಾದವು. ಆದರೂ, ಯಾವುದಕ್ಕೂ ಜಗ್ಗದೆ ಬಗ್ಗದೆ ಅವರು ಅವರು ತಮ್ಮ ನಿಲುವಿಗೆ ಕೊನೆವರೆಗೂ ಅಂಟಿಕೊಂಡಿದ್ದರು.

ಮಾಯಸಂದ್ರ ಕೃಷ್ಣಪ್ರಸಾದ್‍

ಬೆಂಗಳೂರಿನ ಬೆನಕ ತಂಡದಿಂದ ಕಲಾವಿದರಾಗಿ ಹೊರಹೊಮ್ಮಿದ ಇವರು ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ನಟರಾಗಿ ಹೆಸರು ಮಾಡಿದವರು. ಜೊತೆಗೆ ರಾಜ್ಯಮಟ್ಟದ ಚರ್ಚಾಪಟು. ಬೆಂಗಳೂರಿನ ಬಾಲಭವನದಲ್ಲಿ ಮಕ್ಕಳಿಗಾಗಿ ರಂಗತರಬೇತಿ ನೀಡಿ ಹೆಸರು ಮಾಡಿದ್ದ ಕೃಷ್ಣಪ್ರಸಾದರ ಪ್ರತಿಭೆಯನ್ನು ಗುರುತಿಸಿ ದೇಶದ ಹೆಸರಾಂತ ರೆಪರ್ಟರಿ ರಂಗಾಯಣಕ್ಕೆ ಕರೆತಂದವರು ರಂಗಭೀಷ್ಮ ಶ್ರೀ ಬಿ.ವಿ. ಕಾರಂತರು.  ರಂಗಾಯಣದಲ್ಲಿ ಕಲಾವಿದರಾಗಿ 28 ವರ್ಷ ಸೇವೆ ಸಲ್ಲಿಸಿರುತ್ತಾರೆ.  ರಂಗಾಯಣಕ್ಕಾಗಿ `ಪ್ರತಿಶೋಧ’ ನಾಟಕವನ್ನು ರಚಿಸಿದ್ದಾರೆ. ಸಿ.ಬಸವಲಿಂಗಯ್ಯ ಅವರು ನಿರ್ದೇಶಿಸಿದ 9 ಗಂಟೆಗಳ ಮಹಾರಂಗಪ್ರಯೋಗ, ರಾಷ್ಟ್ರಕವಿ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ರಂಗರೂಪಕ್ಕೆ ತಂದವರಲ್ಲಿ ಇವರೂ ಒಬ್ಬರು. 

ಹೆಸರಾಂತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಜೊತೆ ಕೆಲಸ ಮಾಡಿದ್ದಾರೆ. ಕಿರುತೆರೆಯ ಹಲವಾರು ಧಾರಾವಾಹಿಗಳಿಗೆ ಕತೆ, ಸಂಭಾಷಣೆ ಬರೆದಿದ್ದಾರೆ.  ಮೈಸೂರಿನ ಹವ್ಯಾಸಿ ರಂಗ ತಂಡಗಳಿಗಾಗಿ `ಕಳೆದು ಹೋದವರು’, ಅರಳೀಕಟ್ಟೆ, ಗಡಿಯಂಕ ಕುಡಿಮುದ್ದ, ಕರ್ಣಾಂತರಂಗ, ಹಾವು-ಏಣಿ ಆಟ ನಾಟಕಗಳನ್ನು ನಿರ್ದೇಶಿಸಿದ್ದಾರೆ.  `ರಂಗವಲ್ಲಿ’ ತಂಡಕ್ಕಾಗಿ ಬಹು ಯಶಸ್ವಿ `ತಟ್ಟೆ ಇಡ್ಲಿ ರಾದ್ಧಾಂತ’ ನಾಟಕವನ್ನು  ರಚಿಸಿ ನಿರ್ದೇಶಿದ್ದು, ಅದು ಹಲವಾರು ಪ್ರದರ್ಶನಗಳನ್ನು ಕಂಡಿದೆ.  ಪ್ರಸ್ತುತ ರಂಗವಲ್ಲಿ ತಂಡಕ್ಕಾಗಿ ಗಿರೀಶ ಕಾರ್ನಾಡರ `ತುಘಲಕ್‍’ ನಾಟಕವನ್ನು ನಿರ್ದೇಶಿಸಿದ್ದಾರೆ.

ರಂಗವಲ್ಲಿ

ರಂಗವಲ್ಲಿ ಸದಾ ಹೊಸತನಕ್ಕೆ ಹಂಬಲಿಸುವ, ಪ್ರಯೋಗಗಳಿಗೆ ತೆರೆದುಕೊಳ್ಳುವ ಯುವ ಮನಸ್ಸುಗಳ ತಂಡ. 2005ರಲ್ಲಿ ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ ಅವರ ನಿರ್ದೇಶನದಲ್ಲಿ ತಂಡದ ಸದಸ್ಯ ಬಿ.ಪಿ.ಅರುಣ್ ರಂಗರೂಪಕ್ಕೆ ಅಳವಡಿಸಿದ, ಎ.ಕೆ.ರಾಮಾನುಜನ್ ಅವರ ‘ಅಣ್ಣಯ್ಯನ ಮಾನವಶಾಸ್ತ್ರ’ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಮೃಗ’ ಸಣ್ಣಕಥೆಗಳನ್ನು ಆಧರಿಸಿದ ನಾಟಕಗಳ ಮೂಲಕ ‘ರಂಗವಲ್ಲಿ’ ರಂಗಭೂಮಿಗೆ ಪಾದಾರ್ಪಣೆ.

ರಂಗಾಯಣದ ಪ್ರಶಾಂತ್ ಹಿರೇಮಠ್, ನಂದಿನಿ ಕೆ.ಆರ್., ಕೃಷ್ಣಕುಮಾರ್ ನಾರ್ಣಕಜೆ ಹಾಗೂ ಹೆಸರಾಂತ ವಿನ್ಯಾಸಕಾರರಾದ ಹೆಚ್.ಕೆ.ದ್ವಾರಕಾನಾಥ್, ಕೆ.ಜೆ.ಸಚ್ಚಿದಾನಂದ ಅವರ ಮಾರ್ಗದರ್ಶನ ಹಾಗೂ ಸಹಕಾರದಿಂದ ಇದು ರೂಪುಗೊಂಡಿದೆ.

ಕನ್ನಡ ಸಾಹಿತ್ಯದ ಮುಖ್ಯ ನಾಟಕಗಳು, ಸಣ್ಣಕತೆ, ಕಾದಂಬರಿ, ಅನುವಾದ ಕೃತಿಗಳನ್ನು ರಂಗಕ್ಕೆ ಅಳವಡಿಸುವ ದೃಷ್ಟಿಯಿಂದ ರಂಗವಲ್ಲಿ  ತಂಡ ಕೆಲಸ ಮಾಡುತ್ತಿದೆ. ನಾಡಿನ ಹೆಸರಾಂತ ರಂಗ ನಿರ್ದೇಶಕರಾದ ಪ್ರಸನ್ನ, ಪ್ರಶಾಂತ್ ಹಿರೇಮಠ, ಸಿ.ಬಸವಲಿಂಗಯ್ಯ, ಪ್ರಭುಸ್ವಾಮಿ ಮಳಿಮಠ, ಜೀವನ್‌ಕುಮಾರ್ ಬಿ.ಹೆಗ್ಗೋಡು, ಎಂ.ಸಿ.ಕೃಷ್ಣಪ್ರಸಾದ್ ಮತ್ತು ಹೆಚ್.ಕೆ.ದ್ವಾರಕಾನಾಥ್ ನಮ್ಮ ತಂಡಕ್ಕೆ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ರಂಗವಲ್ಲಿಗೆ ಈಗ 17ರ ಪ್ರಾಯ. ವರ್ಷಕ್ಕೊಂದು ಹೊಸ ನಾಟಕದ ಆಶಯದಂತೆ ಕಳೆದ 17ವರ್ಷಗಳಲ್ಲಿ 16 ನಾಟಕಗಳು ಹಾಗೂ ಅಸಂಖ್ಯ ಮರುಪ್ರದರ್ಶನಗಳನ್ನು ನಿರಂತರವಾಗಿ ನೀಡುತ್ತ ಬಂದಿದೆ. ಎ.ಕೆ.ರಾಮಾನುಜನ್ ಅವರ ಅಣ್ಣಯ್ಯನ ಮಾನವಶಾಸ್ತ್ರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಮೃಗ, ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಸ್ಟಿಯೆನ್‌ಬೆಕ್‌ನ ಆಫ್ ಮೈಸ್ ಅಂಡ್ ಮೆನ್ ಆಧಾರಿತ ಇಂವ ಇಲೀನಾ ಮನುಷ್ಯನಾ, ಪಿ.ಲಂಕೇಶರ ಪೊಲೀಸರಿದ್ದಾರೆ ಎಚ್ಚರಿಕೆ, ಆರ್ಯ ಆಚಾರ್ಯ ಅವರ ಅನೀಶ್-ಶೀಲ ಎಸ್.ಎನ್.ಕಿತ್ತೂರರ ಮಧ್ಯರಾತ್ರಿಯ ತಿಗಣೆಗಳು, ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ಈ ಊರಿನಲ್ಲಿ ಕಳ್ಳರೇ ಇಲ್ಲ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಡಾ.ಚಂದ್ರಶೇಖರ ಕಂಬಾರರ ಜೀಕೆ ಮಾಸ್ತರರ ಪ್ರಣಯ ಪ್ರಸಂಗ, ಕೆ.ವಿ.ಅಕ್ಷರ ಅವರ ಸಂಸಾರದಲ್ಲಿ ಸನಿದಪ, ಮಾಯಸಂದ್ರ ಕೃಷ್ಣಪ್ರಸಾದ್ ಅವರ ತಟ್ಟೆ ಇಡ್ಲಿ ರಾದ್ಧಾಂತ, ಜಯಂತ್ ಕಾಯ್ಕಿಣಿ ಕತೆ ಆಧಾರಿತ ಮಿಥುನ್ ನಂಬರ್ ಟೂ, ಮಹಾತ್ಮ ಗಾಂಧೀಜೀಯವರ ಹಿಂದ್ ಸ್ವರಾಜ್ ಕೃತಿ ಆಧಾರಿತ ಸ್ವರಾಜ್ಯದಾಟ ಹಾಗೂ ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ಪಾರ್ಶ್ವಸಂಗೀತ, ಫ್ರೆಡರಿಕ್‍ ನಾಟ್‍ನ ಬ್ಲೈಂಡ್ ಶಾಟ್ ಹಾಗೂ ಯುವ ರಂಗಾಸಕ್ತರಿಗಾಗಿ ಆಯೋಜಿಸಿದ್ದ ‘ಭೂಮಿಕಾ’ ಶಿಬಿರಾರ್ಥಿಗಳು ಅಭಿನಯಿಸಿದ, ವಿಲಿಯಂ ಷೇಕ್ಸ್‍ಪಿಯರನ ಎ ಮಿಡ್‍ ಸಮ್ಮರ್‍ ನೈಟ್ಸ್‍ ಡ್ರೀಮ್‍ ನಾಟಕಗಳು ಈವರೆಗೆ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ.  2022ರ ಸಾಲಿನಲ್ಲಿ ರಂಗಾಯಣದ ಹಿರಿಯ ಕಲಾವಿದರಾದ ಮಾಯಸಂದ್ರ ಕೃಷ್ಣಪ್ರಸಾದ್‍ ಅವರ ನಿರ್ದೇಶನದಲ್ಲಿ ಗಿರೀಶ ಕಾರ್ನಾಡರ ತುಘಲಕ್‍ ನಾಟಕ ಪ್ರದರ್ಶನಗೊಳ್ಳಲಿದೆ. 

ರಂಗದ ಮೇಲೆ
ಮಂಜುನಾಥಶಾಸ್ತ್ರೀ, ರವಿಪ್ರಸಾದ್, ಮುರಳಿ ಗುಂಡಣ್ಣ, ರಶ್ಮಿ ನಾರಾಯಣ್, ಹರಿಪ್ರಸಾದ್, ರಾಘವೇಂದ್ರ ಬೂದನೂರು, ಮಂಜು ವಿ. ನರಸಾಪುರ, ವಿಜಯ್, ಪ್ರಣವ ಸ್ವರೂಪ್, ರಘು, ಶಿವಮೂರ್ತಿ, ಮಂಜು ಆರ್., ಗುರುರಾಜ್, ಭಾರ್ಗವಿ, ಆದರ್ಶ, ನವೀನ್, ಪ್ರಜ್ವಲ್, ರಕ್ಷಿತ್, ಹೊಯ್ಸಳ ಎನ್, ಧನುಷ್, ಗೌತಮ್, ಸಂಜಯ್,

ನೇಪಥ್ಯದಲ್ಲಿ
ಬೆಳಕು – ಕೃಷ್ಣಕುಮಾರ್ ನಾರ್ಣಕಜೆ, ವಸ್ತçವಿನ್ಯಾಸ – ಬಿ.ಎಂ. ರಾಮಚಂದ್ರ, ಸಂಗೀತ – ಉದಿತ್ ಹರಿತಸ್, ರಂಗಸಜ್ಜಿಕೆ ಮತ್ತು ಪರಿಕರ – ಮಂಜು ಕಾಚಕ್ಕಿ, ಸಹ ನಿರ್ದೇಶನ – ಹರಿಪ್ರಸಾದ್ ಕಶ್ಯಪ್, ನಿರ್ವಹಣೆ – ಮಂಜುನಾಥಶಾಸ್ತ್ರೀ.

‍ಲೇಖಕರು Admin

June 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: