ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕೊಡು ನಿನ್ನ ಶಕ್ತಿಯ ನನ್ನೆದೆಗೂ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

25

ಎಲ್ಲಿಂದ ಎಲ್ಲಿಗೆ ಪಯಣ? ಅತ್ತೆ ಮಾವರನ್ನು ಭೇಟಿಯಾಗಿ ಬಂದ ಮೇಲೆ ನನ್ನನ್ನು ಯಾವ ಯಾವ ಸಂಗತಿಗಳು ಕಾಡತೊಡಗಿದೆ? ಯಾವ ಮಹತ್ಸಾಧನೆಗಾಗಿ ನಾನಿಲ್ಲಿಗೆ ಬಂದೆ? ಅಪರೂಪದ ನನ್ನ ಕನಸುಗಳು ಎಲ್ಲಿ ಗಾಳಿಗೆ ಹಾರಿ ಹೋಯಿತು? ನನ್ನದು ಮಾತ್ರವಲ್ಲ ಸಹಾರದ್ದು, ಒಟ್ಟು ಹೋರಾಟದ್ದು. ಅವಸಾನದ ಎದೆಯಲ್ಲಿ ಅವಿತು ಕುಳಿತ ಕಾಲನ ಯಾವ ಆಟ ನಮ್ಮನ್ನೆಲ್ಲಾ ಹೀಗೆ ಆಡಿಸಿತು? ಆ ದಿನಗಳು ಹೇಗಿದ್ದವು ಎಲ್ಲಿಂದೆಲ್ಲಿಗೆ ಬಂದೆವು? ಯಾರನ್ನ ಕೇಳಲಿ ಯಾರಿಗೆ ಹೇಳಲಿ? ಅಪ್ಪಟ ಹೋರಾಟದ ಕಾವನ್ನು ಮೈಗೇರಿಸಿಕೊಂಡ ಸತೀಶನನ್ನು ಯಾವ ರಾಜಕೀಯ ಶಕ್ತಿಗಳು ತಾಕಲಿಲ್ಲ, ಯಾವ ಲಾಲಸೆಗಳೂ ಆವರಿಸಲಿಲ್ಲ. ಅಧಿಕಾರದಮಲು ಕೀರ್ತಿಯ ಆಮಿಷಗಳು ಯಾವುವೂ ಅಮರಿಕೊಳ್ಳಲಿಲ್ಲ. ಅವನು ಅಪ್ಪಟ ಅಪರಂಜಿ ಅನ್ನಿಸಿದ್ದು ಅದಕ್ಕಾಗೇ. ಸತೀಶನ ಸಾವು ಹೋರಾಟದ ಕಾವನ್ನು ಜಾಸ್ತಿ ಮಾಡಿತು ನಿಜ, ಆದರೆ ಎಲ್ಲಿ ಬಿರುಕು ಶುರುವಾಯಿತು? ಯಾಕೆ ಶುರುವಾಯಿತು? ಎಲ್ಲವೂ ಆಗುವುದು ಹೆಣ್ಣಿಂದಲೇ ಎನ್ನುತ್ತಾರೆ. ಇಲ್ಲೂ ಕೂಡಾ ಅದೇ ಆಯಿತಾ? ಸಹಾ ತುಂಬಾ ಬಯಾಸ್ಡ್ ಆಗಿರದಿದ್ದರೆ… ಖಚಿತವಾದ ಉತ್ತರ ನನ್ನ ಹತ್ತಿರವೂ ಇಲ್ಲ. ಆದರೆ ಎಲ್ಲದಕ್ಕೂ ಕಾರಣ ಬೇಕಿತ್ತು. ಒಂದು ಸಣ್ಣ ಘಟನೆ ಎಲ್ಲಕ್ಕೂ ಕಾರಣ ಆಗಿಬಿಟ್ಟಿತೇನೋ ಎನ್ನುವ ಅನುಮಾನ ಈಗಲೂ ನನ್ನಲ್ಲಿ ಇದೆ.  

ಸಹಾರಿಗೆ ಹತ್ತಿರ ಆದೆಂತೆಲ್ಲಾ ಗೊತ್ತಾಗಿದ್ದು ಸತೀಶನಿಗಿದ್ದ ಧೈರ್ಯ, ಪ್ರಾಮಾಣಿಕತೆ ಅವರಿಗೆ ಇಲ್ಲ ಎನ್ನುವುದು. ಅವರು ಮೊದಲಿಂದಲೂ ಹಾಗೇ ಇದ್ದಿರಬೇಕು. ಸತೀಶ ಯಾವತ್ತೂ ಅವರ ಈ ಮುಖವನ್ನು ಹೇಳಲೂ ಇಲ್ಲ. ಬಹುಶಃ ಅಂಥಾ ಅನುಭವ ಅವನಿಗೆ ಆಗಿರಲಿಕ್ಕೂ ಇಲ್ಲ. ಅಂಥಾ ಸೂಚನೆ ನನಗೆ ಸಿಕ್ಕಿದ್ದಿದ್ದರೆ ಇವರನ್ನು ಅನುಸರಿಸಿ ನಾನು ಬರುತ್ತಲೂ ಇರಲಿಲ್ಲ. ಅವರಿವರ ಮಾತುಗಳಲ್ಲಿ, ʻಇನ್ನೊಬ್ಬರ ಮಕ್ಕಳನ್ನು ಜೈಲಿಗೆ ಕಳಿಸಿ ತಮಾಷಿ ನೋಡ್ತಾರೆʼ ಎಂದು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ. ಸಹಾಗೆ ತನಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳುವ ಗುಣ ಇತ್ತು ಎಂದೇ ಅಂದುಕೊಳ್ಳುತ್ತೇನೆ.      

ಸಹಾ ಹಣದ ವಿಷಯದಲ್ಲಿ ರಾಜಿ ಆಗಿದ್ದರು. ಅಧಿಕಾರದ ಲಾಲಸೆಯಲ್ಲಿ ರಾಜಿಯಾಗಿದ್ದರು. ತನಗೆ ಬೇಕಾದವರ ವಿಷಯಕ್ಕೆ ರಾಜಿಯಾಗಿದ್ದರು. ಎಷ್ಟೋ ಸಲ ಅವರನ್ನು ಕೇಳಿದ್ದೇನೆ, ʻಅಂಥಾ ಹೋರಾಟದಿಂದ ಬಂದ ನಿಮಗೆ ಏನಾಯಿತು? ಯಾವ ಲಾಲಸೆ ನಿಮ್ಮನ್ನು ಹೀಗೆ ಒಳಗೇ ಕರೆಪ್ಟ್ ಮಾಡ್ತಾ ಇದೆʼ ಎಂದು. ಆಗೆಲ್ಲಾ ಅವರು ಜಾಣತನವನ್ನು ಪ್ರದರ್ಶಿಸುವ ಹಾಗೆ ಮಾತೇ ಆಡುತ್ತಿರಲಿಲ್ಲ. ಒಮ್ಮೊಮ್ಮೆ ವಿಷಾದದಿಂದ, ಒಮ್ಮೊಮ್ಮೆ ಕ್ರೋಧದಿಂದ, ʻನೀವು ನಾನು ಬಯಸಿದ ಸಹಾ ಅಲ್ಲ, ನನ್ನ ಸತೀಶನ ಪಕ್ಕಕ್ಕೂ ನಿಲ್ಲಲಾರರುʼ ಎಂದು ಕೊಂಡಿದ್ದೇನೆ. ಹಿಂದೆ ಸಂಘಟನೆ ನಡೆಸಬೇಕಾದ ಜವಾಬ್ದಾರಿ ಅದಕ್ಕೆ ಬೇಕೇಬೇಕಾಗುವ ಹಣ ಎಲ್ಲವನ್ನೂ ಅರೇಂಜ್ ಮಾಡಲೇಬೇಕಾಗಿತ್ತು. ಅದನ್ನವರು ಹೆಗಲ ಮೇಲೆ ಹೊತ್ತು ನಡೆಸಲೇಬೇಕಿತ್ತು. ಅಂದು ಏನೂ ಇಲ್ಲದಿದ್ದಾಗ ಎಲ್ಲರೂ ಸೇರಿ ಕೆಲಸ ಮಾಡುತ್ತಲೇ ಇದ್ದೆವಲ್ಲವಾ? ಅವತ್ತೇಕೆ ಈ  ಪ್ರಶ್ನೆ ಬರಲಿಲ್ಲ. ದಿನ ಕಳೆದ ಹಾಗೆ ಎಲ್ಲವೂ ಡೈಲ್ಯೂಟ್ ಆಗಿಬಿಡುತ್ತಾ? ಮನಸ್ಸಿನ ಆಳದಲ್ಲಿ ಅವಿತಿದ್ದ ಆಸೆಗಳಿಗೆ ದಾರಿ ತೆರೆದುಕೊಳ್ಳುವಂತೆ ನೋಡಿಕೊಳ್ಳುತ್ತೇವಾ? ಕೇಳಿದರೆ ಸಹಾ ಕಾಲದ ಗತಿಯಲ್ಲಿ ಪರಿವರ್ತನೆ ಸಹಜ ಕ್ರಿಯೆ ಎಂದಿದ್ದರು. ಬದಲಾಗುವುದು ಎಂದರೆ ತನ್ನದಲ್ಲದ ಸಿದ್ಧಾಂತವನ್ನು ಹೊಂದಿರುವ ಜನರನ್ನು ಒಪ್ಪುವುದು ಎಂದೇ ಎಂದಿದ್ದೆ. ನನ್ನ ಕಠಿಣವಾದ ಮಾತುಗಳು ಅವರನ್ನು ತಾಕಿಯೇ ಇರುತ್ತದೆ. ನಾವು ಒಪ್ಪದ ಮೂಲಭೂತವಾದಿಯಾಗಿದ್ದ ನಟಿಯೊಬ್ಬಳನ್ನು ಅವರು ಪರಮಾಪ್ತೆಯನ್ನಾಗಿಸಿಕೊಂಡಿದ್ದು. ಲಲಿತಕ್ಕ ಆಗಲೂ ಹೋಗಿ ಗಲಾಟೆ ಮಾಡಿದ್ದರಂತೆ. ಇಬ್ಬರೂ ರಸ್ತೆಯಲ್ಲಿ ನಿಂತು ಜಗಳ ಮಾಡುತ್ತಿದ್ದರೆ ಸಹಾ ತನಗೂ ಅದಕ್ಕೂ ಸಂಬಂಧವಿಲ್ಲ ಎನ್ನುವ ಹಾಗೆ ಮನೆಯಲ್ಲೇ ಇದ್ದುಬಿಟ್ಟಿದ್ದರಂತೆ. ನಂತರವೂ ಅವರಿಗೆ ಆಕೆಯ ಮೇಲೆ ಒಂಥರಾ ಕ್ರಷ್ ಇದ್ದೇ ಇತ್ತು ಅನ್ನಿಸುತ್ತೆ. ಸಮಯ ಬಂದಾಗಲೆಲ್ಲಾ ಆಕೆಯ ಬಗ್ಗೆ ಮಾತಾಡುತ್ತಿದ್ದರು; ಹಾಗೆ ಮಾತಾಡುವಾಗ ಅವರ ಮುಖದಲ್ಲಿ ಒಂದು ಸುಖ ತೇಲುತ್ತಿತ್ತು. ಭಿನ್ನವಾಗಿರುವವರನ್ನು ತಾತ್ವಿಕವಾಗಿ ವಿರೋಧಿಸೋಣ ಆದರೆ ವ್ಯಕ್ತಿಗತವಾಗಿ ಅಲ್ಲ ಎನ್ನುವ ಅವರ ಮಾತನ್ನು ತೆಗೆದುಹಾಕಲಾರೆ; ಆದರೆ ಅವರ ನಿಲುವನ್ನು ಒಪ್ಪಲಾರೆ. ಆದರೆ ಎಷ್ಟೋ ಸಲ ಸತೀಶನ ಧೈರ್ಯ ಇವರಿಗಿದ್ದಿದ್ದರೆ ಎನ್ನುವುದು ಕಾಡದೆ ಇರಲಾರದು.   

ಒಮ್ಮೆ ನಾನೂ ಸಹಾ ಮುಂಬೈಗೆ ಸಭೆಯೊಂದಕ್ಕೆ ಹೋಗಿದ್ದೆವು. ನನಗೋ ಆ ಮಹಾನಗರಿಯನ್ನು ಮೊದಲ ಬಾರಿಗೆ ನೋಡುತ್ತಾ ಇದ್ದೀನಿ ಎನ್ನುವ ರೋಮಾಂಚನ. ಸಹಾ ನನ್ನ ಅಲ್ಲಿ ಬೀಚ್‌ಗೆ ಕರಕೊಂಡು ಹೋಗುವುದಾಗಿ ಪ್ರಾಮೀಸ್ ಮಾಡಿದ್ದರು. ನಾನು ಬರೀ ಸಿನಿಮಾಗಳಲ್ಲಿ ಮಾತ್ರ ಬೀಚ್ ನೋಡಿದ್ದೆ. ಸಮುದ್ರದ ದಡದಲ್ಲಿ ನಡೆದಾಡುವ ಹೆಜ್ಜೆಗುರುತುಗಳನ್ನು ಯಾರು ಎಷ್ಟೇ ಪ್ರಯತ್ನಪಟ್ಟರೂ ಉಳಿಸಲಾರರು. ಆ ದೈತ್ಯ ಶಕ್ತಿಯ ಎದುರು ಕೂತು ನಿನ್ನ ಶಕ್ತಿಯನ್ನು ನನ್ನ ಹೃದಯಕ್ಕೂ ಕೊಡು. ನಾನೂ ನಿನ್ನ ಹಾಗೆ ಆಗುತ್ತೇನೆ ಎಂದು ಕೇಳಿಕೊಳ್ಳಬೇಕು ಎನ್ನುವ ಆಸೆ. ಸಹಾ ಇದೆಂಥಾ ಆಸೆ ಎಂದಿದ್ದರು. ನನಗೆ ಮಾತ್ರ ಜೀವನದ ಪರಮಾರ್ಥವೇನೋ ಅನ್ನಿಸಿಬಿಟ್ಟಿತ್ತು.

ಬಾಂಬೆಯಲ್ಲಿ ಹೊಟೇಲ್ ಒಂದರಲ್ಲಿ ಉಳಿದುಕೊಂಡಿದ್ದೆವು. ಅದು ದೇಶವ್ಯಾಪಿ ನಡೆಯುತ್ತಿರುವ ರೈತ ಮತ್ತು ಭೂ ಹೋರಾಟದ ಬಗ್ಗೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡು ಸರಕಾರಕ್ಕೆ ಒತ್ತಾಯ ಮಾಡಲಿಕ್ಕೆ ನಡೆಸುತ್ತಿದ್ದ ಸಭೆಯಾಗಿತ್ತು. ದೇಶದ ಬೇರೆ ಬೇರೆ ಕಡೆಗಳಿಂದ ಹೋರಾಟಗಾರ ನಾಯಕರು ಅಲ್ಲಿಗೆ ಬಂದಿದ್ದರು. ಅವರಿಗೆ ನಾನು ನನ್ನ ಹೆಂಡತಿ ಬರ್ತಾ ಇದ್ದೀವಿ ಎಂದು ಸಹಾ ಹೇಳಿದ್ದರು. ಎಲ್ಲಿ ಹೋದರೂ ಮಿಸೆಸ್ ಸಹದೇವ ಎಂದೇ ಪರಿಚಯಿಸುತ್ತಿದ್ದರು. ನನ್ನ ಹೆಸರನ್ನು ಹೇಳುತ್ತಿರಲಿಲ್ಲ. ಆ ವಿಷಯದಲ್ಲಿ ತುಂಬಾ ಕೇರ್‌ಫುಲ್‌ ಆಗಿದ್ರು. ಗೊತ್ತಿರುವವರಿಗೆ ನನ್ನ ಬಗ್ಗೆ ಕೇಳಿದ್ರೆ ನನ್ನ ಜೊತೆ ಕೆಲಸ ಮಾಡ್ತಾರೆ ಎಂದಷ್ಟೇ ಹೇಳುತ್ತಿದ್ದರು. ಮೊದಮೊದಲು ನನಗೆ ಈ ವಿಷಯದಲ್ಲಿ ಹಿಂಸೆ ಆಗುತ್ತಿತ್ತು. ʻನನ್ನ ಹೆಸರನ್ನು ನೀವು ಹೇಳಲ್ಲ ಅಂದರೆ ನಿಮ್ಮ ಸಹಚರ್ಯದ ಅರ್ಥ ಏನು? ನೀವು ಸೇಫ್ ಆಗಲಿಕ್ಕೆ ಮಾತ್ರ ಎಲ್ಲ ಸಂಬಂಧದ ಹಂಗಿಗೆ ತರುತ್ತೀರಾ. ಇಲ್ಲದಿದ್ದರೆ ಸಂಬಂಧದ ಹಂಗೇ ಬೇಡ ಎನ್ನುತ್ತೀರಾ? ಸಮಾಜಕ್ಕೆ ಉತ್ತರ ಕೊಡಬೇಕಾದಾಗೆಲ್ಲಾ ಬಚ್ಚಿಡುತ್ತೀರ. ಹಾಗಾದರೆ ನಿಮ್ಮ ಧೈರ್ಯ ಏನು? ನನ್ನ ಏನಂತ ಕರಕೊಂಡು ಬಂದ್ದೀರಿ?ʼ ಎನ್ನುವುದೇ ಆಗಿರುತ್ತಿತ್ತು. ಈ ವಿಷಯಕ್ಕೆ ಮಾತಾಡಿದಾಗಲೆಲ್ಲಾ ಸಹಾ ಪ್ರೇಮದ ದಿವ್ಯತ್ವದ ಬಗ್ಗೆ ಮಾತಾಡುತ್ತಿದ್ದರು, ವ್ಯಾಖ್ಯಾನರಹಿತ ಸಂಬಂಧದ ಅಪರೂಪದ ಸ್ಥಿತಿಯ ಬಗ್ಗೆ ವಿವರಿಸುತ್ತಿದ್ದರು. ʻಈ ಜನಕ್ಕೆ ಹೇಳಿ ಪ್ರಯೋಜನವಿಲ್ಲ, ಅವರನ್ನು ಒಪ್ಪಿಸಲು ನಮಗೆ ಆಗಲ್ಲ ಎಂದಾಗ ನಂಬುವ ಹಾಗೆಯಾದರೂ ನಡಕೊಳ್ಳಬೇಕುʼ ಎನ್ನುವುದನ್ನು ಒತ್ತಿ ಒತ್ತಿ ಹೇಳಿದ್ದರು. ಒಮ್ಮೆ ನಾನು ಈ ವಿಷಯಕ್ಕೆ ಜಗಳ ಮಾಡಿಕೊಂಡು, ʻಎಲ್ಲರಿಗೂ ನಾನು ನಿಮ್ಮ ಹೆಂಡತಿ ಅಲ್ಲ ಅನ್ನುವುದನ್ನು ಹೇಳಿಬಿಡುತ್ತೇನೆʼ ಎಂದಿದ್ದೆ. ಸಹಾ ಕೊಟ್ಟ ಉತ್ತರ ಮಾತ್ರ ನನಗೆ ದಂಗುಬಡಿಸುವ ಹಾಗೆ ಮಾಡಿತ್ತು. ʻಹೇಳು ನೀನು ಏನು ಹೇಳಲು ಬೇಕಾದರೂ ಸ್ವತಂತ್ರಳು. ಆದರೆ ನಾನು ಮಾತ್ರ ಉತ್ತರ ಕೊಡೊಲ್ಲ, ಮೌನಿಯಾಗುತ್ತೇನೆ. ನಾನು ನನಗೆ ಒಲ್ಲದ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಸುಮ್ಮನುಳಿಯುತ್ತೇನೆ. ಆಗ ಸಮಾಜ ಕೇಳುವ ಪ್ರಶ್ನೆಗಳಿಗೆ ನೀನೇ ಉತ್ತರ ಕೊಡಬೇಕು. ಆಗಿದ್ದು ಆಗಿಹೋಗಿದೆ. ಎಲ್ಲದಕ್ಕೂ ಸಂಬಂಧದ ಮುದ್ರೆ ಬೇಕು ಎನ್ನುವ ಹಟ ನಿನಗೆ ಯಾಕೆ? ನಿನ್ನ ಜೊತೆಯಲ್ಲಿರುವಾಗ ಎಂದಾದರೂ ನಾನು ಪ್ರೀತಿಯ ತೀವ್ರತೆಯನ್ನು ಕಳಕೊಂಡಿದ್ದೇನೆಯೇ ಇಲ್ಲವಲ್ಲ. ಮತ್ತೆ ಸಂಬಂಧ ಎಂದರೆ ಏನು?ʼ ಎಂದು ನನ್ನನ್ನೇ ಮರುಪ್ರಶ್ನಿಸಿದ್ದರು. ಸಮಾಧಾನ ಮಾಡುವ ನೆಪದಲ್ಲಿ ನನ್ನ ನಿಯಂತ್ರಿಸುತ್ತಿದ್ದುದು ಆ ಕ್ಷಣಕ್ಕೆ ನನಗೆ ಗೊತ್ತಾಗದೇ ಹೋಗಿತ್ತು. ನನಗೂ ಅವರ ಹೆಂಡತಿಯೆಂದು ಪರಿಚಯಿಸಿಕೊಳ್ಳುವ ಇರಾದೆ ಇರಲಿಲ್ಲ. ಹಾಗಾದರೆ ನನಗೆ ನನ್ನೊಳಗೆ ಒಂದು ದೊಡ್ಡ ಗೊಂದಲ ಇದೆಯಲ್ಲವೆ ಅನ್ನಿಸಿದ್ದು ಅವತ್ತೇ. ಕಾಲ ಎಲ್ಲವನ್ನೂ ಅಭ್ಯಾಸ ಮಾಡಿಸುತ್ತದೆ. ಎಂಥಾ ಸಭ್ಯಳಾದ ಹೆಣ್ಣೂ ಅಭ್ಯಾಸವಾದ ನಾಕು ದಿನಗಳ ನಂತರ ಬರುತ್ತೀಯಾ? ಎಂದು ಗಿರಾಕಿಯನ್ನು ಕರೆಯುತ್ತಾಳಲ್ಲ ಹಾಗೇ. ಈಗ ನನಗೆ ಯಾವ ಸಂಕೋಚವೂ ಆಗುವುದಿಲ್ಲ. ಸಹಾ ಜೊತೆ ಎಲ್ಲೇ ಹೋದರೂ ಈಗ ಭಯವಿಲ್ಲದೆ ಬಾಗಿಲು ಹಾಕಿಕೊಳ್ಳುತ್ತೇನೆ. ಆದರೂ ನಾನು ಏನು ಎನ್ನುವ ಪ್ರಶ್ನೆ ಬಂದಾಗ ಮಾತ್ರ ಒಳಗೇ ಬಿಕ್ಕುತ್ತೇನೆ. ನನಗೆ ಗೊತ್ತು ಆ ಬಿಕ್ಕಿಗೆ ಅರ್ಥ ಇಲ್ಲ ಎಂದು.

ಅವತ್ತು ಹಾಗೇ ರೈಲು ತಡವಾಗಿ ನಾವು ಬಾಂಬೆ ತಲುಪುವಾಗ ಕಾರ್ಯಕ್ರಮ ಆರಂಭವಾಗಲಿಕ್ಕೆ ಅರ್ಧ ಗಂಟೆಯಷ್ಟೇ ಬಾಕಿಯಿತ್ತು. ಹೋಟೆಲಿನ ರಿಸೆಪ್ಷನ್‌ ಕೌಂಟರ್‌ನಲ್ಲಿ ಸಹಿ ಹಾಕಿದರು. ಲಿಫ್ಟ್‌ನ ಒಳಗೆ ನಮ್ಮ ಬ್ಯಾಗುಗಳನ್ನು ತಂದಿಟ್ಟ ರೂಂಬಾಯ್ ರೂಮನ್ನು ತೋರಿಸಿ ನಮ್ಮ ಸಾಮಾನುಗಳನ್ನು ಇಡಲಿಕ್ಕೆ ನಮ್ಮ ಜೊತೆಗೆ ತಾನೂ ಬಂದ. ಇದ್ದಕ್ಕಿದ್ದ ಹಾಗೇ ಲಿಫ್ಟ್ ನಿಂತು ಬಿಟ್ಟಿತು. ಅಷ್ಟರವರೆಗೂ ಅರಾಮಾಗೇ ಇದ್ದ ಸಹಾ ಸ್ವಲ್ಪ ತಡ ಆದರೂ ಪರವಾಗಿಲ್ಲ ಒಳ್ಳೇ ಸ್ನಾನ ಮಾಡಬೇಕು, ತಿಂಡಿ ತಿಂದೇ ಸಭೆಗೆ ಹೋಗೋಣ ಎಂದೆಲ್ಲಾ ಹೇಳುತ್ತಿದ್ದವರು, ಲಿಫ್ಟ್ ನಿಂತ ಕೆಲವೇ ಕ್ಷಣದಲ್ಲಿ ವಿಚಿತ್ರವಾಗಿ ಆಡತೊಡಗಿದರು. ʻಸಾರ್ ಗಾಬರಿ ಬೇಡ ಬೆಳಗಿನಿಂದ ಕರೆಂಟ್ ಸಮಸ್ಯೆ ಇದೆʼ ಎಂದು ಮಾತಾಡುತ್ತಿದ್ದ ರೂಂಬಾಯ್ ಮೇಲೆ ಕೂಗಾಡತೊಡಗಿದರು. ಮತ್ತೆ ಲಿಫ್ಟ್ ಸ್ಟಾರ್ಟ್‌ ಆಯ್ತು. ನಿಟ್ಟುಸಿರಿಟ್ಟ ಸಹಾ ಸ್ವಲ್ಪ ಗರಂ ಆಗೇ ಹುಡುಗನನ್ನು ಎಷ್ಟನೇ ಫ್ಲೋರ್ ಎಂದೆಲ್ಲಾ ಕೇಳತೊಡಗಿದರು. ಅವನು ಏಳನೆಯ ಮಹಡಿ ಎಂದು ಹೇಳುವಾಗಲೇ, ʻಕೆಳಗೇ ಯಾವ ರೂಮೂ ಇಲ್ಲವಾ? ಅಷ್ಟು ಮೇಲೆ ಯಾಕೆ ಕೊಟ್ಟಿದ್ದು?ʼ ಎಂದು ಬೈಯ್ಯತೊಡಗಿದರು. ʻಸಾರ್ ನನಗೇನು ಗೊತ್ತು ನಿಮಗೆ ಯಾವ ರೂಂಗೆ ಕರಕೊಂಡು ಹೋಗು ಅಂತ ಹೇಳುತ್ತಾರೋ ಅಲ್ಲಿಗೆ ನಿಮ್ಮನ್ನು ಬಿಡುವುದು ಮಾತ್ರ ನನ್ನ ಕೆಲಸʼ ಎಂದ. ಅಷ್ಟರಲ್ಲಿ ಮತ್ತೊಮ್ಮೆ ಲಿಫ್ಟ್ ನಿಂತುಬಿಟ್ಟಿತು. ಸಹಾ ಇದ್ದಕ್ಕಿದ್ದ ಹಾಗೆ ಕೂಗಾಡತೊಡಗಿದರು. ನಾನು ಸ್ವಲ್ಪ ಸಮಾಧಾನವಾಗಿರುವಂತೆ ಅವರನ್ನು ಕೇಳಿಕೊಳ್ಳತೊಡಗಿದೆ. ಅವರು ನನ್ನ ಮಾತು ಮಾತ್ರವಲ್ಲ ಅಲ್ಲಿ ಇನ್ನು ಯಾರೇ ಇದ್ದಿದ್ದರೂ ಯಾರ ಮಾತನ್ನೂ ಕೇಳಿಸಿಕೊಳ್ಳಲು ಸಿದ್ಧವಿರಲಿಲ್ಲ. ನನ್ನ ನೂಕುತ್ತಾ, ʻಏನ್ ಮಾತಾಡ್ತೀಯ? ಎಲ್ಲಿಯ ಸಮಾಧಾನ? ಹೊತ್ತಿ ಉರಿಯುತ್ತಿರುವಾಗ ಸಮಾಧಾನ ಅಂತಾ ಇದ್ದೀಯಲ್ಲಾ? ನೀನು ಮನುಷ್ಯಳಾ? ಹೀಗೆ ಉದಾಸೀನ ಮಾಡೇ ನಿನ್ನ ಗಂಡ ಸತ್ತಿದ್ದು. ನಮ್ಮ ಮೇಲೆ ಹದ್ದಿನ ಕಣ್ಣೊಂದು ಇದ್ದೇ ಇರುತ್ತದೆ…ʼ ಎಂದು ನನ್ನ ಮೇಲೆ ಹಲ್ಲು ಹಲ್ಲು ಕಡಿದು, ʻಯಾರಿದ್ದೀರಿ ಹೆಲ್ಪ್ ಹೆಲ್ಪ್ʼ ಎಂದು ಜೋರಾಗಿ ಲಿಫ್ಟ್‌ನ ಬಾಗಿಲನ್ನು ತಟ್ಟತೊಡಗಿದರು. ಸಹಾರನ್ನು ಹಾಗೆ ಎಂದೂ ನೋಡದ ನಾನು ದಂಗಾಗಿ ಹೋಗಿದ್ದೆ. ಮೇಲಾಗಿ ಸತೀಶನ ಎಚ್ಚರದ ಬಗ್ಗೆ ಮಾತಾಡಿದ್ರಲ್ಲ ಅದು ಇನ್ನೊಂದು ಆಘಾತವಾಗಿತ್ತು. ʻಏನೂ ಆಗಲ್ಲ ಕರೆಂಟ್ ಹೋಗಿದೆʼ ಎಂದು ಹುಡುಗ ಹೇಳಿದರೂ ಕೇಳದೆ ಅವನ ಮೇಲೆ ಕೈ ಮಾಡಿಬಿಟ್ಟರು. ಕರುಣೆ ಪ್ರೀತಿಯ ಬಗ್ಗೆ ಮಾತಾಡುವವರು ಇವರೇನಾ? ನಾನು ದಂಗಾಗಿದ್ದೆ. ಒಳಗೆ ನಡೆಯುತ್ತಿದ್ದ ಗಲಾಟೆಗೆ ಹೆದರಿದ ಹೋಟೆಲ್‌ನವರು ಮೇಲಿನ ಫ್ಲೋರಿಗೆ ಹತ್ತಿರವಿದ್ದರಿಂದ ಬಾಗಿಲನ್ನು ತೆಗೆದು ನಮ್ಮನ್ನು ಹೊರಗೆ ಕರೆದುಕೊಂಡಿದ್ದರು. ಅಲ್ಲಿಗೂ ಸಹಾರ ಕೋಪ, ಆವೇಶ ಎರಡೂ ಕಡಿಮೆ ಆಗಿರಲಿಲ್ಲ. ಹೋಟೆಲಿನವರ ಮೇಲೆ ಯದ್ವಾತದ್ವಾ ಬೈದರು. ʻಸಾರ್ ಕರೆಂಟ್ ಹೋದರೆ ನಾವೇನು ಮಾಡಬೇಕು ಪ್ಲೀಸ್ ಅರ್ಥ ಮಾಡಿಕೊಳ್ಳಿʼ ಎಂದು ಬೇಡಿಕೊಂಡರು. ʻಕರೆಂಟ್ ಹೋದರೆ ಆಲ್ಟರ್‌ನೇಟ್‌ ಆಗಿ ಏನನ್ನಾದರೂ ಅರೇಂಜ್ ಮಾಡಿಕೊಳ್ಳಬೇಕು. ಸಬೂಬು ಹೇಳುವುದು ಖಂಡಿತಾ ಸರಿಯಲ್ಲ. ನನ್ನ ಜೊತೆ ಹೀಗೆ ನಡೆದುಕೊಳ್ಳುತ್ತಿರುವುದಕ್ಕೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆʼ ಎಂದರು. ಹೋಟೆಲಿನವರು ವಿಧಿಯಿಲ್ಲದೆ, ʻಹಾಕಿ ಸಾರ್ʼ ಎಂದು ಹೇಳಬೇಕಾಯಿತು. ʻಹಾ ಕೇಸ್ ಹಾಕಿ ಎನ್ನುತ್ತೀರಲ್ಲಾʼ ಎಂದು ಅದಕ್ಕೂ ಗಲಾಟೆ ಮಾಡಿದರು. ಅಷ್ಟರಲ್ಲಿ ಮತ್ತೆ ಕರೆಂಟು ಬಂತಾದರೂ ಸಹಾ ಮತ್ತೆ ಲಿಫ್ಟ್ ಹತ್ತಲಿಲ್ಲ. ಮೆಟ್ಟಿಲುಗಳನ್ನು ಹತ್ತಿಯೇ ನಮ್ಮ ರೂಂ ತಲುಪಿದ್ದೆವು.

ರೂಂಗೆ ಬಂದ ಮೇಲೂ ಸಹಾ ಆವೇಶದಲ್ಲಿದ್ದರು. ಸಂಕಟವಾಯಿತು, ಅವರನ್ನು ನನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮಾಡಿದೆ. ಎಷ್ಟೋ ಹೊತ್ತಿನ ಮೇಲೆ ಸಮಾಧಾನ ಮಾಡಿಕೊಂಡರು. ʻಅಂಥಾದ್ದೇನಾಯಿತು? ಕರೆಂಟು ಹೋಯಿತು ಅಷ್ಟೇ ತಾನೆ? ನೀವು ಆಡಿದ್ದು ನೋಡಿ ನನಗೆ ನಿಜಕ್ಕೂ ಗಾಬರಿಯಾಯಿತುʼ ಎಂದಿದ್ದೆ. ಸಹಾರ ಮುಖದಲ್ಲಿ ಆತಂಕ, ಭಯ ಒಡೆದು ಕಾಣುತ್ತಿತ್ತು. ʻಇಲ್ಲ ಚೇತು ನನ್ನ ಯಾರೋ ಫಾಲೋ ಮಾಡುತ್ತಾರೆ, ನನ್ನ ಪ್ರತಿಕ್ಷಣ ಆತಂಕಕ್ಕೆ ಈಡು ಮಾಡುತ್ತಾರೆ, ನನ್ನ ಮುಗಿಸಲು ನೋಡುತ್ತಾ ಇದ್ದಾರೆ ಅನ್ನಿಸುತ್ತೆ. ನನ್ನ ಕಣ್ಣೆದುರು ಹೇಗೆಲ್ಲಾ ಜನ ಸತ್ತರು ಎನ್ನುವುದನ್ನು ನೆನೆಸಿಕೊಂಡರೆ ನಾನೂ ಒಂದು ದಿನ ಹೀಗೆ ಸಾಯುವವನಾ ಎಂಬ ಭಯ ಆವರಿಸುತ್ತದೆʼ ಎಂದೆಲ್ಲಾ ಹೇಳಿದ್ದರು. ನಾನು ಒಂದು ಕ್ಷಣ ದಂಗಾಗಿದ್ದೆ. ʻಇಲ್ಲ ಇಲ್ಲ ಅಂಥಾದ್ದೇನೂ ಆಗಿರಲಿಕ್ಕಿಲ್ಲ ಇವತ್ತಿನಾ ಘಟನೆಯೆಲ್ಲಾ ಸಹಜವಾಗಿ ಆಗಿದೆ ಅಂದುಕೊಳ್ಳುತ್ತೇನೆ ಸಹಾ ಮೊದಲು ನೀವು ಸಮಾಧಾನಮಾಡಿಕೊಳ್ಳಿʼ ಎಂದೆ. ʻಇಲ್ಲ ಚೇತು ನಿನಗೆ ಗೊತ್ತಿಲ್ಲ. ನಿರ್ಭೀತನಾಗಿ ಬದುಕಲು ನಾನು ಪ್ರತಿಕ್ಷಣ ಹೋರಾಡುತ್ತಾ ಇದ್ದೀನಿ. ಕಣ್ಣಿಗೆ ಕಾಣದ ಯಾರೋ ಒಬ್ಬ ಶತ್ರು ನನಗಾಗಿ ಹೊಂಚು ಹಾಕುತ್ತಾನೇ ಇದಾನೆ. ಅದಕ್ಕಾಗಿ ಪ್ರತಿಕ್ಷಣ ನನ್ನ ಎಚ್ಚರಿಕೆಯಲ್ಲಿ ನಾನಿರುತ್ತೇನೆʼ ಎಂದಿದ್ದರು. ಯಾರಿಗೂ ಗೊತ್ತಿರದ ಸತ್ಯವೊಂದು ನನ್ನ ಎದುರು ಹೀಗೆ ಅನಾವರಣ ಆಗಿದ್ದು ಮಾತ್ರ ನನಗೆ ಜೀರ್ಣ ಮಾಡಿಕೊಳ್ಳಲಿಕ್ಕೆ ಆಗಲಿಲ್ಲ. ʻಸಹಾ ಇದೆಂಥಾ ಕಾಂಪ್ಲೆಕ್ಸ್‌ನಲ್ಲಿ ಬದುಕುತ್ತಾ ಇದ್ದೀರಾ? ಯಾರ ಹತ್ತಿರವೂ ಹೇಳಿಕೊಳ್ಳದೆ ಕಷ್ಟಪಡುತ್ತಾ ಇದ್ದೀರಲ್ಲಾ?ʼ ಎಂದೆ ಅನುಕಂಪದಿಂದ. ಸಹಾ ಅದರ ಬಗ್ಗೆ ಮಾತಾಡಲಿಲ್ಲ. ನನ್ನೆದುರಿಗೂ ತಾನು ನಿರ್ಬಲ ಎಂದು ತೋರಿಸಿಕೊಳ್ಳುವುದು ಅವರಿಗೆ ಬೇಡಾಗಿತ್ತು. ಆದರೆ ಸಂದರ್ಭ ತೋರಿಸಿಬಿಟ್ಟಿತ್ತು. ಈ ಮನುಷ್ಯ ಇಂಥಾ ದೊಡ್ಡ ಅನುಮಾನವನ್ನು ಪ್ರತಿಕ್ಷಣವೂ ಹೊತ್ತೇ ಹೊರಗೆ ನಿರ್ಭೀತನಾಗಿ ಬದುಕುತ್ತಿರುವುದಾದರೂ ಹೇಗೆ ಎಂದು ಗಾಬರಿಗೊಂಡಿದ್ದೆ. ನಿರ್ಭಯನಾಗಿದ್ದ ಸತೀಶನ ಚಿತ್ರ ಕಣ್ಣ ಮುಂದೆ ಅಯಾಚಿತವಾಗಿ ಸುಳಿದುಬಿಟ್ಟಿತ್ತು. 

ಆಶ್ಚರ್ಯ ಎಂದರೆ ಸ್ವಲ್ಪ ಹೊತ್ತಿನಲ್ಲೇ ಕಾರ್ಯಕ್ರಮಕ್ಕೆ ಕಾರ್ ರೆಡಿ ಇದೆ. ನೀವು ಹೊರಡಬಹುದು ಎಂದು ಸೂಚನೆ ಬಂದಾಗ ಯಾರೂ ನಮ್ಮನ್ನು ಕಾಯಬಾರದು ಎಂದು ದಡಬಡ ರೆಡಿಯಾದರು. ಲಿಫ್ಟ್ ಹತ್ತಲಿಲ್ಲ ಬದಲಿಗೆ ನಡೆದೇ ಕೆಳಗೆ ಬಂದರು, ಸಭೆಯಲ್ಲೂ ಅದ್ಭುತವಾಗಿ ಮಾತಾಡಿದರು. ಸ್ವಲ್ಪ ಹೊತ್ತಿನ ಕೆಳಗಿನ ಘಟನೆ ಯಾವುದೂ ನಡೆದೇ ಇಲ್ಲ ಎನ್ನುವ ಹಾಗೆ ವರ್ತಿಸಿದರು. ಆದರೆ ಮತ್ತೆ ಆ ಹೊಟೇಲಿಗೆ ಹೋಗಲಿಲ್ಲ. ಸ್ನೇಹಿತರಲ್ಲಿ ಆ ಹೊಟೇಲ್ ನನಗೆ ಇಷ್ಟ ಆಗಲಿಲ್ಲ ಎಂದರು. ಏನು ಎಂದು ವಿಚಾರಿಸಿದ ಸ್ನೇಹಿತರಿಗೆ ʻಆಟಿಟ್ಯೂಡ್ ಪ್ರಾಬ್ಲಂʼ ಎಂದಿದ್ದರು. ಹೊರಗೊಂದು ಒಳಗೊಂದು ಜೀವನ ನಡೆಸುವುದು ಹೇಗೆ ಸಾಧ್ಯ ಎನ್ನುವುದು ನನಗೆ ಯಕ್ಷ ಪ್ರಶ್ನೆಯಾಗಿ ಕಾಡಿತ್ತು.

ಬೇರೊಂದು ಹೋಟೇಲು ಅಲ್ಲಿಯ ವ್ಯವಸ್ಥೆ ಯಾವುದೂ ತೊಂದರೆ ಇಲ್ಲ ಎನ್ನಿಸಿದ ಮೇಲೆ ಸಹಾ ನಿರಾಳ ಆಗಿದ್ದು. ಬೀಚು ಮಾರ್ಕೆಟ್ಟು ಹೀಗೆ ಎಲ್ಲ ಕಡೆ ಸುತ್ತಿದೆವು. ಅವರಿಗಿಷ್ಟವಾದ ಮೀನು, ಧಗೆ ತಡೆಯಲಾಗದೆ ಐಸ್ಕ್ರೀಂ ತಿಂದೆವು. ಬೀಚಿಗೂ ಹೋದೆವು. ಸಹಾ ಗೆಲುವಾಗಿದ್ದರು, ನಾನು ದಟ್ಟವಾದ ವಿಷಾದದಲ್ಲಿದ್ದೆ.          

ಅವರನ್ನು ಬಲ್ಲ ವಿಷ್ಣು, ʻಚೈತನ್ಯಾ ಒಂದೊಂದಕ್ಕೆ ಒಂದೊಂದು ಕಾರಣ ಇದೆ ಅಂದುಕೊಳ್ಳುವುದು ನಮ್ಮ ಮೂರ್ಖತನವೇನೋ ಗೊತ್ತಿಲ್ಲ. ಅವನು ಹಾಗೆ ಇರಲೂ ಬಹುದಾಲ್ಲವಾ? ಕಾರಣಗಳು ನಮ್ಮ ನಿಜವನ್ನು ಮರೆಮಾಡುವ ಸಾಧನಗಳು ಆಗಿದ್ದಿರಬಹುದು. ನನಗೆ ಅವನ ಬಗ್ಗೆ ಎಲ್ಲಾ ಗೊತ್ತಿದೆ ಎಂದು ನೀನು ನನ್ನ ಕೇಳುತ್ತೀ. ಅವನು ನಾನಲ್ಲ ಅವನ ಒಳಹೊಕ್ಕು ನೋಡುವ ಶಕ್ತಿ ನನಗಿಲ್ಲʼ ಎಂದಿದ್ದರು. ನಿಜ ಅವರ ವರ್ತನೆಗೆ ಅದೊಂದೇ ಕಾರಣ ಅನ್ನಿಸಿರಲಿಲ್ಲ. ಆದರೆ ಸತೀಶನ ಬಗ್ಗೆ ಆಡಿದ ಆ ಒಂದು ಮಾತು ಮತ್ತೆ ನನ್ನ ಗಾಢವಾಗಿ ತಟ್ಟಿದ್ದು ಮಾತ್ರ ಇನ್ನು ಯಾವತ್ತೋ!

ಇದೆಲ್ಲ ಆದ ಮೇಲೆ ಒಂದು ದಿನ ಸಹಾರ ಮನೆಗೆ ಹೋಗಿ ಲಲಿತಕ್ಕನ ಕೈಗಳನ್ನು ಹಿಡಿದು ಅತ್ತು ಬಿಟ್ಟಿದ್ದೆ. ʻಅರೆ ಏನಾಯ್ತು ಯಾಕೆ ಅಳುತ್ತಾ ಇದ್ದೀಯಾ? ನಿನ್ನ ಮೇಲೆ ಈಗ ನನಗೆ ಸಿಟ್ಟು ಕಡಿಮೆ ಆಗಿದೆʼ ಎಂದೆಲ್ಲಾ ಅಕ್ಕ ನನ್ನ ಸಮಾಧಾನ ಮಾಡಿದ್ದರು. ನಾನು ಕಾರಣ ಹೇಳಲಿಲ್ಲ. ಯಾಕೆಂದು ಅವರೂ ಕೇಳಲಿಲ್ಲ. ನನ್ನ ಕಣ್ಣೊರೆಸಿ, ʻಬೇರೆ ಯಾರೇ ಬಂದಿದ್ದರೂ ನನ್ನ ಗಂಡನನ್ನು ನನ್ನಿಂದ ಪೂರ್ತಿ  ಕಸಿದುಕೊಳ್ಳುತ್ತಿದ್ದರು. ನಿನಗೆ ಆ ಶಕ್ತಿ ಇತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ಏನೋ ನಂಬಿ ಬಂದಿರುವ ನಿನಗೆ ಅನ್ಯಾಯ ಆಗದಿದ್ದರೆ ಅಷ್ಟೇ ಸಾಕುʼ ಎಂದಿದ್ದರು. ಆ ಮಾತುಗಳನ್ನ ಕೇಳಿ ಕಳಕೊಂಡ ಏನೋ ನನಗೆ ಸಿಕ್ಕ ಸಂತೋಷ ಆಗಿತ್ತು. ನಮ್ಮಿಬ್ಬರ ಮಧ್ಯೆ ನಡೆದದ್ದು ಇಷ್ಟೇ ಆದರೂ, ಅವತ್ತಿನಿಂದ ನಮ್ಮಿಬ್ಬರ ನಡುವೆ ಸಣ್ಣದಾಗಿ ಪ್ರೀತಿಯ ಎಳೆಯೊಂದು ಬೆಸುಗೆಯಾಗಿತ್ತು. ಸಹಾ ಮಾತ್ರ ನನ್ನ ಹೆಂಡತಿ ನಿನ್ನ ಕಡೆಗೆ ಅತ್ಯಂತ ಕರುಣೆಯಿಂದ ನಡಕೊಂಡಳು ಎಂದಿದ್ದರು. ಆದರೆ ಅವರ ಇಬ್ಬಂದಿತನವನ್ನು ಸಹಿಸಿಕೊಳ್ಳಲಾಗದೆ ಹೋದದ್ದು ಆ ಒಂದು ಘಟನೆಯಲ್ಲೇ. ಆಗ ತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಆ ಕವಿ ಮಹದೇವಯ್ಯನ ಜೊತೆ ಸಹಾ ಅಂದು ಹಾಗೆ ಇಬ್ಬಂದಿತನದಲ್ಲಿ ನಡೆದುಕೊಳ್ಳದೇ ಇದ್ದಿದ್ದರೆ, ಅವನ ಹೆಂಡತಿಗೆ ಕೋಪ ಬಾರದೆ ಹೋಗಿದ್ದಿದ್ದರೆ… ನಮ್ಮ ಸಂಘಟನೆ ಹೋರಾಟ ಎಲ್ಲವೂ ಬಲಹೀನವಾಗುವತ್ತಾ ಹೋಗುತ್ತಿರಲಿಲ್ಲವಾ? ಎನ್ನುವ ಪ್ರಶ್ನೆಯನ್ನು ಈಗಲೂ ಕೇಳಿಕೊಳ್ಳುತ್ತೇನೆ.

‍ಲೇಖಕರು avadhi

August 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: